ಡಾ ಆನಂದ್ ಋಗ್ವೇದಿ
‘ನಾನು ಗೆದ್ದೇ ಗೆಲ್ಲುವೆ’ ಎಂಬ ಕವನ ಸಂಕಲನದ ಮೂಲಕ ಅಪಾರ ಆತ್ಮ ವಿಶ್ವಾಸದ ಕವಯತ್ರಿಯಾಗಿ ಪರಿಚಿತರಾದ ಶ್ರೀದೇವಿ ಕೆರೆಮನೆಯವರಲ್ಲಿ ಒಂದು ಸುಸಂಪನ್ನ ಮನಸ್ಥಿತಿ, ಭಾವಲಹರಿ ಮತ್ತು ಮಾತುಗಾರಿಕೆ ಅಡಗಿಕೊಂಡಿವೆ. ಈ ವಾಚಾಳಿತನ; ಮೌನದ ಮೊಗ್ಗೊಡೆಸಿ ಗಂಧ ಪಸರಿಸುವ ಕಾವ್ಯ ಕ್ರಿಯೆಗಿಂತ, ಮಾತಿನ ಅರಳು ಸಿಡಿಸಿ ಮತಾಪ ಬೆಳಕ ಮೂಡಿಸುವ ಪರಿಯದ್ದು. ಶ್ರೀದೇವಿ ಕಾವ್ಯಾತ್ಮಕ ಗದ್ಯವನ್ನು ಬಳಸಿಕೊಂಡು ಬರೆದ ಪ್ರೇಮದ ಪಲಕುಗಳು ‘ಪ್ರೀತಿ ಎಂದರೆ ಇದೇನಾ?’ ಎಂದು ವಿಸ್ಮಿತ ಭಾವದಲ್ಲಿ ಪ್ರಕಟವಾಗಿದ್ದವು. ಪ್ರೀತಿ ಎಂಬ ನವಿರುತನದ ನವಿಲುಗರಿಯನ್ನು ಅದರೆಲ್ಲಾ ಬಣ್ಣ ಬೆಡಗುಗಳ ಮೂಲಕ ವರ್ಣಿಸುವ, ತನ್ನ ಅನುಭವದೊಳಗೇ ಅನುಭೂತಿ ಮೂಡುವ ಪರಿಯನ್ನು ವಿಸ್ಮಿತರಾಗಿ ನೋಡುವ – ಕಿಶೋರಿಯೊಬ್ಬಳ ಕನಸು, ಕನವರಿಕೆ, ಮಾರ್ದವತೆ, ಭಾವಾದ್ರ್ರತೆ, ಭಾವಸಂಪನ್ನತೆ, ಭಾವ ಪ್ರಾಪ್ತತೆಯನ್ನು ಕುಸುರಿಗೊಳಿಸಿದ ಶ್ರೀದೇವಿ ಕೆರೆಮನೆಯವರ ಆ ಅಂಕಣ ಬರಹ ಬಹು ಆಪ್ತ. ಅದು ಅವರ ಭಾವ ಲೋಕದ ಪ್ರಾಪ್ತ. ಅಂತಹ ಭಾವ ಸಂಪನ್ನ ಮನಸ್ಸೊಂದು ಪ್ರಚಲಿತಕ್ಕೆ ತೆರೆದುಕೊಂಡು ತನಗೆ ಮನವರಿಕೆಯಾದ, ಮನೋವ್ಯಾಕುಲತೆಯ ಹಲವು ಸಂಗತಿಗಳನ್ನು ಒಂದು ನಿಯಮಿತ ಕಾಲಗತಿಯಲ್ಲಿ, ಪತ್ರಿಕೆಯ ಅವಕಾಶ ಮತ್ತು ಪದಮಿತಿಯಲ್ಲಿ ಹಿಡಿದು ಅರಳಿಸಿದ ಅರಳೆಯಂತಹ ಲಹರಿಗಳು ‘ಇತಿ-ಶ್ರೀ’ ಎಂಬ ಅಂಕಿತದೊಂದಿಗೆ ಬರೆಯಲ್ಪಟ್ಟಿವೆ.

ಈ ಅಂಕಣ ಬರಹ ಪ್ರಕಾರವೇ ವಿಶಿಷ್ಠವಾದುದು. ಅದು ನಿಯತಕಾಲಿಕಗಳ ನಿಯಮಿತ ಆವರ್ತನದಲ್ಲಿ, ಕ್ಲುಪ್ತಸಮಯದಲ್ಲಿ ಬರೆಯಲೇ ಬೇಕಾದ ಅನಿವಾರ್ಯತೆಯಲ್ಲಿ ಒಡಮೂಡುವ ಭಾವಸ್ಪುರಣ. ಬರಹಗಾರನಾದವ ತನ್ನ ಆಂತರಿಕ ಸ್ಪೂತರ್ಿಗಾಗಿ, ಭಾವ ಪ್ರಾಪ್ತಿಗಾಗಿ ಧ್ಯಾನಿಸುತ್ತಾ, ಕೂಡಲೇ ಎಲ್ಲವನ್ನೂ ನಿರುಕಿಸುತ್ತಾ, ಆ ಕ್ಷಣದ ಎಲ್ಲಾ ವಿದ್ಯಮಾನಗಳಿಗೆ ಸ್ಪಂದಿಸುತ್ತಾ, ತನ್ನ ಆಂತರಿಕ ಮತ್ತು ಪ್ರಾಪಂಚಿಕ ಸಂಗತಿಗಳನ್ನು ಮಥಿಸಿ ಮಾತಾಗಿಸುವ ಒಂದು ಅವಧಾನ. ಈ ಅವಧಾನದಲ್ಲಿ ಧ್ಯಾನವೂ ಇದೆ, ಗಮನವೂ. ಹಾಗೆಂದೇ ಪ್ರಸಿದ್ಧ ಲೇಖಕರ ಅಂಕಣ ಬರಹ ಅವರ ಸಮಕಾಲೀನ ಸಂದರ್ಭದ ಪುನರ್ ನಿರ್ಮಾಣವೂ, ಕಾಲಗತಿಯಲ್ಲಿ ಹಿಡಿದಿಟ್ಟ ಕಾಲ ಬಿಂದುವೂ ಹೌದು. ಅಷ್ಟೇ ಅಲ್ಲ ಸಮಕಾಲೀನ ಸಂಗತಿಗಳನ್ನು ಸಾರ್ವತ್ರಿಕಗೊಳಿಸಿದ ಕಾರ್ಯಕಾರಣವೂ ಆಗಿ ಸಾಹಿತ್ಯ ಸಮೃದತ್ಧೆಯಲ್ಲಿ ತನ್ನದೊಂದು ವಿಶೇಷ ಸ್ಥಾನವನ್ನೇ ಪಡೆದಿದೆ.
ಸೃಜನಶೀಲ ಲೇಖಕರು ಅಂಕಣ ಬರೆಯುವುದು ಸುಲಭವಲ್ಲ. ಪತ್ರಕರ್ತರಂತೆ ಅವರು ಎಲ್ಲಾ ಸಂಗತಿಗಳನ್ನು ನಿದರ್ಿಷ್ಟ ಅಂತರದಲ್ಲಿ ನಿಂತು ನೋಡಿ ನಿರುಕಿಸಿ ನಿಲರ್ಿಪ್ತವಾಗಿ ವರದಿ ಮಾಡಲಾರರು. ಪ್ರತಿ ಸಂಗತಿ ಅವರಿಗೆ ಸೃಜನಶೀಲ ಆಯಾಮ ಪಡೆವ ಪ್ರತಿ ಪದಾರ್ಥದಂತೆ ಭಾಸವಾಗುತ್ತದೆ. ಅಂಕಣದಲ್ಲಿ ಬರೆಯಲ್ಪಡುವ ಆ ಸಂಗತಿಗಳ ನಿರ್ವಹಣೆ ಕೆಲವೊಮ್ಮೆ ಕಥನಾತ್ಮಕವಾಗಿದ್ದರೆ, ಬಹಳಷ್ಟು ಬಾರಿ ಅದು ಕಾವ್ಯಾತ್ಮಕವಾಗಿರುತ್ತದೆ. ಉದಾಹರಣೆಗೆ ಕತೆಗಾರ ಶ್ರೀ ಜಯಂತ್ ಕಾಯ್ಕಿಣಿಯವರ ಜನಪ್ರಿಯ ಅಂಕಣ ‘ಬೊಗಸೆಯಲ್ಲಿ ಮಳೆ’ಯ ಬರಹಗಳಲ್ಲಿ ಹಲವು ಕತೆಗಳೇ ಹ್ರಸ್ವಗೊಳಿಸಿ ದಾಖಲಿಸಿದಂತೆ ಭಾಸವಾಗಿತ್ತಲ್ಲವೆ!
ಸಾಹಿತ್ಯ ವಲಯದಲ್ಲಿ ವಿಶಿಷ್ಠ ಸ್ತ್ರೀ ಸಂವೇದನೆಗಳನ್ನು ದಾಖಲಿಸುತ್ತಿರುವ ಬಹುದೊಡ್ಡ ಲೇಖಕಿಯರ ಪಡೆಯೇ ಇದೆ ಈ ಹೊತ್ತು. ಅವರ ಆಲೋಚನಾ ಕ್ರಮದ ವಿಭಿನ್ನತೆಯಿಂದ ಬೇರೊಂದು ಪ್ರಭೆಯನ್ನೇ ಹೊಮ್ಮಿಸಿದೆ ಈ ಸಮೂಹ. ಸೃಜನಶೀಲ ಲೇಖಕಿಯರಲ್ಲಿ ಅಂಕಣ ಬರಹಕ್ಕೆ ತೊಡಗಿಸಿಕೊಂಡವರು ಕೊಂಚ ಕಡಿಮೆ ಎಂದೇ ಹೇಳಬಹುದು. ಆದರೂ ಸಮಕಾಲೀನ ಲೇಖಕಿಯರಲ್ಲಿ ರೂಪ ಹಾಸನ, ಸುನಂದಾ ಪ್ರಕಾಶ ಕಡಮೆ, ದೀಪಾ ಹಿರೇಗುತ್ತಿ, ಡಾ. ಹೆಚ್. ಎಸ್. ಅನುಪಮಾ.. . . .ಹೀಗೆ ಹಲವರು ತಮ್ಮ ಅಂಕಣ ಬರಹಗಳ ಮೂಲಕವೂ ಸ್ತ್ರೀ ಲೋಕದ ವಿಶಿಷ್ಟತೆಯನ್ನು ವಿಸ್ತೃತವಾಗಿ ಶ್ರುತಗೊಳಿಸಿದ್ದಾರೆ.
ಸ್ತ್ರೀಯರ ಜೈವಿಕ ವಿಭಿನ್ನತೆಯಂತೆಯೇ ಅವರ ಮಾನಸ ವಿಶೇಷತೆ ಸದಾ ಕೌತುಕ. ಅವರು ಆಲೋಚಿಸುವ ಕ್ರಮದಲ್ಲಿ ‘ಸ್ತ್ರೀತ’್ವವನ್ನು ಹಲವು ಆಯಾಮಗಳಲ್ಲಿ ಪರಿಶೋಧಿಸಬಹುದು. ಅನಿಯಮಿತ ಕಾಲಘಟ್ಟದಲ್ಲಿ ಅವರು ಆಲೋಚಿಸುವ, ಪರಿಭಾವಿಸುವ, ಪ್ರತಿಪಾದಿಸುವ ಸಂವೇದನೆಗಳು ಈಗಾಗಲೇ ಸೃಜನಶೀಲ ಸಂದರ್ಭಗಳಲ್ಲಿ ದಾಖಲಾಗಿವೆ. ಆದರೆ, ನಿಯತಕಾಲಿಕೆಗಳಂತಹ ಆವರ್ತನದಲ್ಲಿ ಬರೆಯಬೇಕಾದ ಅಂಕಣ ಬರಹಗಳ ಆಂತರಿಕ ತುಡಿತ, ತಾದ್ಯಾತ್ಮಗಳನ್ನು ಅವುಗಳಿಂದ ಪ್ರತ್ಯೇಕಿಸಿ ಪರಿಗ್ರಹಿಸಬೇಕಾಗಿದೆ. ಜೈವಿಕ ಅನನ್ಯತೆಯಾಗಿ ಜೈವಿಕ ಗಡಿಯಾರವನ್ನು ಹೊತ್ತವರು ಅವರು. ಒಂದು ಋತು ಬಂಧದಲ್ಲಿ ನಡೆಯುವ ಈ ಗಡಿಯಾರ ತನ್ನ ಕಾಲಿಕ ಆವರ್ತನದಲ್ಲಿ ಒಡಮೂಡಿಸುವ ಸ್ತ್ರೀ ಸಮಯದ ಹಲವು ಆಯಾಮಗಳು, ಪರಿಛಾಯೆಗಳು ‘ಕವಿಸಮಯ’ಕ್ಕಿಂತ ಭಿನ್ನವಾದವುಗಳು. ಅವನ್ನು ‘ಸ್ತ್ರೀ ಸಮಯ’ ಎಂದೇ ಕರೆಯಬಹುದು. ಒಂದು ಆವರ್ತನದಲ್ಲಿರುವ ಈ ಸ್ತ್ರೀತ್ವದ- ಸಂಭ್ರಮ, ಸಂಕಷ್ಟ, ಸಂತೃಪ್ತತೆ, ಪ್ರಖರ ವೈಚಾರಿಕತೆ, ಭಾವುಕತೆ, ಭಾವ ಸಂಪನ್ನತೆ, ಖಿನ್ನತೆ, ಸಂಭ್ರಾಂತತೆಯ ಎಲ್ಲಾ ನೆಲೆಗಳನ್ನು ಮುಟ್ಟುತ್ತಾ ಸಂಚರಿಸುವ ಈ ಜಂಗಮತ್ವವನ್ನು – ‘ಚಂಚಲತೆ’ ಎಂದು ತೀರಾ ಸಾಧಾರಣವಾಗಿ ಪರಿಗಣಿಸಲಾಗದು. ಆ ಚಲನಶೀಲತೆಯೇ ಸ್ತ್ರೀತ್ವದ ಆಲೋಚನಾ ಕ್ರಮವನ್ನು ವಿನ್ಯಾಸಗೊಳಿಸಿದೆ, ವಿಶೇಷಗೊಳಿಸಿದೆ.
ಅಂತಹುದೇ ಚಲನಶೀಲತೆ ಶ್ರೀದೇವಿ ಕೆರೆಮನೆಯವರ ಬರಹಗಳಲ್ಲಿ ಅಡಗಿದೆ. ಒಂದು ಆವರ್ತನದಲ್ಲಿ, ನಿಯತಕಾಲಿಕ ಘಟ್ಟದಲ್ಲಿ ಬರೆದ ಈ ಎಲ್ಲಾ ಬರಹಗಳಲ್ಲಿ ಸಹಜವಾಗಿ ಪ್ರಖರ ವೈಚಾರಿಕತೆ, ಭಾವುಕತೆ, ಖಿನ್ನತೆ, ವಿಶ್ಲೇಷಿಸುವ ವಿಶೇಷತೆ, ಸಮುದಾಯದೆಡೆಗೆ ಗಮನಿಸುವ ಪ್ರಾಪಂಚಿಕತೆ, ಆಂತರಿಕ ಲೋಕದೊಳಗೆ ಪ್ರವೇಶಿಸುವ ಪ್ರಾಧಾನ್ಯತೆ ಎಲ್ಲವೂ ಇಲ್ಲಿ ಬಿಡಿಬಿಡಿ ಬರಹಗಳಲ್ಲಿ ಅಡಕವಾಗಿವೆ. ಅದು ನಿಮ್ಮ ಬರಹಗಳಿಗೆ ವಸ್ತು ವಿಶೇಷಗಳನ್ನು ನಿಕ್ಕಿಗೊಳಿಸಿದೆ, ಮನೋ ಕುಲುಮೆಯಲ್ಲಿ ಬೆಂದು ನಿಕಷಗೊಂಡಿದೆ.
ಈ ಎಲ್ಲಾ ಬರಹಗಳಲ್ಲಿ ಇರುವ ಲೇಖಕಿ ; ಓರ್ವ ಸಾಮಾಜಿಕ ಕಾರ್ಯಕತರ್ೆ, ಮನೋ ವಿಜ್ಞಾನಿ, ಮಮತೆಯ ತಾಯಿ, ಮಾರ್ದವತೆಯ ಮೂರ್ತರೂಪ, ಮನದನ್ನೆ, ಮಡದಿ, ಪಕ್ಕದ ಮನೆಯ ಹುಡುಗಿ ಅಷ್ಟೇ ಅಲ್ಲ ಆಕೆ ಶಿಕ್ಷಕಿ, ಪ್ರಶಿಕ್ಷಕಿ. ಈ ಎಲ್ಲಾ ವ್ಯಕ್ತಿತ್ವದ ಪರಿಛಾಯೆಗಳೇ ಪ್ರತಿ ಬರಹದ ಒಳಗನ್ನು ಮತ್ತು ಹೊರಗನ್ನು ನಿರ್ಧರಿಸಿವೆ!
‘ಗಂಡ’ ಎನ್ನುವ ಸ್ಥಾನ ಪ್ರಮೋಷನ್ನೇ? ‘ಹೆಂಡತಿ’ ಪಾತ್ರ ಡಿಮೋಷನ್ನೇ!?ಎಂದು ಚಚರ್ಿಸುವ ನಿಮ್ಮ ಮನಸ್ಸು ಮನೋ ನೆಲೆಗಳ ಕಾಂಪ್ಲೆಕ್ಸ್ಗಳನ್ನು ಮನೋ ವಿಜ್ಞಾನದ ನೆಲೆಯಲ್ಲಿ ವಿಶ್ಲೇಷಿಸುತ್ತದೆ. ನೇರ ನುಡಿಯ ನೇರವಂತಿಕೆಯ ವ್ಯಕ್ತಿತ್ವವನ್ನೂ ಈ ನೆಲೆಯಲ್ಲೇ ವಿಷದಪಡಿಸಲಾಗಿದೆ. ಸ್ವಚ್ಛಂದ ಬಾಲ್ಯ ಪ್ರತಿ ಮಗುವಿನ ಹಕ್ಕಾಗಲಿ ಎನ್ನುವಾಗ ಮಕ್ಕಳ ಮನೋಲೋಕ ಅರಿತ ತಾಯ್ತನದ ಶಿಕ್ಷಕಿಯಾಗುತ್ತೀರಿ ನೀವು. ಸಾವಿನ ಮನೆಯ ಮುಂದೇ ಚಾಪೆ ಹಾಸಿ ಕೂತೇ ಬದುಕಿನ ಬಗ್ಗೆ, ಜೀವನೋತ್ಸಾಹದ ಬಗ್ಗೆ ಮಾತನಾಡುವ ರ್ಯಾಂಡಿ ಪಾಶ್ರ ‘ಲಾಸ್ಟ್ ಲೆಕ್ಚರ್’ ಕೃತಿಯ ಮೂಲಕ ನಿಮ್ಮ ಜೀವನೋತ್ಸಾಹವನ್ನು ಪರಿಚಯಿಸುತ್ತಲೇ, ‘ಮನುವ್ಯಾಧಿ’ಯ ಸಮಾಜ ಹೆಣ್ಣನ್ನು ನೋಡುವ ನಿಕೃಷ್ಟತೆಯನ್ನು ವಿಶ್ಲೇಷಿಸುತ್ತಾ ಪರಿತಪಿಸುತ್ತೀರಿ. ಮಹಿಳೆಯರಿಗೆ 33% ಮೀಸಲಾತಿ ನೀಡುವಲ್ಲಿ ಪ್ರಭುತ್ವದ ಮನಸ್ಸಿನ ಮೀನ-ಮೇಷಗಳನ್ನು ಪ್ರಶ್ನಿಸುವ ನಿಮ್ಮ ಮನಸ್ಸಿಗೆ ‘ಮಾತೆಂಬುದು ಜ್ಯೋತಿಲರ್ಿಂಗ’ ಎಂಬುದು ನಂಬುಗೆ. ಪತ್ರಕರ್ತ ರವೀಂದ್ರ ಭಟ್ಟ ಐನಕೈಯವರ ‘ಮೂರನೆಯ ಕಿವಿ’ ಕೃತಿ ಕುರಿತು ಬರೆದ ಲೇಖನ ಮನಕಲಕುವಂತಿದೆ. ಹುಟ್ಟಿನಿಂದಲೇ ಕಿವಿ ಕೇಳದ ಮಗುವಿಗೆ ಅದರ ತಾಯಿ ತನ್ನ ವೈಯುಕ್ತಿಕ ಬದುಕಿನ ಎಲ್ಲಾ ರಸ ನಿಮಿಷಗಳನ್ನು, ಪಾತ್ರಗಳನ್ನು ಬದಿಗಿರಿಸಿ ಕೇವಲ ತನ್ನ ವಿಕಲಾಂಗ ಮಗುವಿಗೆ ಮಾತನ್ನು ಕಲಿಸುವ ಪರಿ ನಿಜ್ಕಕೂ ಅನನ್ಯ. ಶೀಷರ್ಿಕೆಯಲ್ಲೇ ಹೇಳುವಂತೆ ‘ಅವಳು ಅಮ್ಮ ಎಂದರೆ ಅಮ್ಮ ಮಾತ್ರ. . .’
ಈ ಅಂಕಣ ಬರಹಗಳಲ್ಲಿ ಏನೇನೆಲ್ಲಾ ಚರ್ಚಿಸಲಾಗಿದೆ!
ಕರ್ನಾಟಕಕ್ಕೂ ಕಾಲಿಟ್ಟ ಅನಿಷ್ಠ ಪದ್ಧತಿ ‘ಮರ್ಯಾದಾ ಹತ್ಯೆ’, ಹೈಪರ್ ಆಕ್ಟಿವ್ ಮಗುವಿನ ಪಾಲನೆ ಕುರಿತಾದ ‘ತೊತ್ತೊ ಚಾನ್’ ಪುಸ್ತಕ, ಉತ್ತರ ಕನ್ನಡ ನೆಲದ ನಡವಳಿಕೆಯಾದ ‘ಅವಾರಿ ಹಬ್ಬ’, ಅಷ್ಟೇ ಅಲ್ಲ. . .ಮತ್ಸ್ಯ ಕ್ಷಾಮ, ವಿದ್ಯುತ್ ಸ್ಥಾವರ ಸ್ಥಾಪನೆಯ ಉಪಟಳದ ಬಗ್ಗೆ. . . .
ಓರ್ವ ಲೇಖಕಿಯಾಗಿ ಶ್ರೀದೇವಿ ಕೆರೆಮನೆಯವರು ಪರಿಭಾವಿಸುವ ಪಪ್ಪಿ ಲವ್, ಮಹಿಳೆ ಮೇಲಿನ ದೌರ್ಜನ್ಯಕ್ಕೆ ಕಾರಣವೇ ಬೇಕಿಲ್ಲ ಎಂಬ ವಾಸ್ತವದ ಖೇದ, ಸ್ತ್ರೀ ಏಕೆ ತಮ್ಮಿಷ್ಟದ ಉಡುಗೆ ತೊಡಬಾರದು!? ಎಂಬ ಜಿಜ್ಞಾಸೆ, ದೂರದರ್ಶನ ಚಾನಲ್ಗಳ ಅತಿಯಾದ ವಾಚಾಳಿತನ ಮತ್ತು ಅಸೂಕ್ಷ್ಮತೆಯಿಂದಾಗಿ ಬದಲಾಗುತ್ತಿರುವ ಖಾಸಗಿ ಬದುಕಿನ ಬಗ್ಗೆ ಸಖೇದಾಶ್ಚರ್ಯ, ಶೋಷಣೆಯ ಹೊಸ ಹೊಸ ಆಯಾಮಗಳ ಕುರಿತು ಕಳವಳ. . . . ನಿಜ, ಈ ಎಲ್ಲಾ ಬರಹಗಳು ಅವರ ಈ ಮುಂಚಿನ ಪದ್ಯದ ಆಶಯಗಳಿಗಿಂತ, ಗದ್ಯದ ರೀತಿಗಿಂತ ಭಿನ್ನವಾಗಿವೆ. ಹಲವು ಸಂಗತಿಗಳನ್ನು ಒಟ್ಟಿಗೇ ನೋಡುವ ದೃಷ್ಟಿಯಲ್ಲಿ ವಿಚಕ್ಷಣೆ ವಿಶೇಷವಾಗಿ ಕಾಣಿಸುತ್ತದೆ.
ಪ್ರತಿ ಅಂಕಣಕ್ಕೂ ತನ್ನದೇ ಆದ ಬದ್ಧತೆ ಇರುತ್ತದೆ, ಅದಕ್ಕೆ ತಕ್ಕನಾದ ಸಿದ್ಧತೆಯೂ ಕೂಡಾ. ಕಲ್ಪಿತ ಸಂವಾದಕರನ್ನು ಎದುರಿಗೆ ಕೂರಿಸಿಕೊಂಡಂತೆ ಬರೆಯುವ ಎಲ್ಲಾ ಅಂಕಣಕಾರರಿಗೆ ಸಂವಹನ ಮುಖ್ಯ. ಅಂಕಣವು ಅಷ್ಟೇ ಗಂಭೀರವಾಗಿ ಸಂವಾದಿಸುವ ಒಂದು ಅವಕಾಶ ಕೂಡಾ. ಕಾಲದ ಮಿತಿಯಲ್ಲಿ, ನಿಯತಕಾಲಿಕೆಗಳ ತಾತ್ಕಾಲಿಕತೆಯಲ್ಲಿ ಪ್ರಕಟವಾಗುವ ಈ ಅಂಕಣ ಬರಹಗಳಲ್ಲಿ ಸಾರ್ವಕಾಲಿಕತೆ ಅಗತ್ಯ ಬೇಕು. ಆಗಲೇ ಒಂದು ತಲೆಮಾರಿನ ಧ್ವನಿಯಾಗಿ, ಒಂದು ಸಮಯದ ಮುಖವಾಣಿಯಾಗಿ, ಒಂದು ಕಾಲಘಟ್ಟದ ಚಿಂತನಾ ಕ್ರಮದ ಅಧಿಕೃತ ದಾಖಲೆಗಳಾಗಿ ಅಂಕಣ ಬರಹಗಳು ಒಡಮೂಡಲು ಸಾಧ್ಯ. ಆಗ ಮಾತ್ರವೇ ಇಂತಹ ಬರಹಗಳು ಕಾಲದ ಮೂಸೆಯಲ್ಲಿ ನಿಕಷಕ್ಕೆ ಒಡ್ಡಿಕೊಂಡೂ ಸಾರ್ವಕಾಲಿಕತೆಯ ಮಾನ್ಯತೆ ಪಡೆಯಲು ಸಾಧ್ಯ ಅಲ್ಲವೇ?
ಶ್ರೀದೇವಿ ಕೆರೆಮನೆಯವರ ಬರಹಗಳ ವ್ಯಾಪ್ತಿ, ಹರಹು, ಭಾಷೆಯ ಸರಳತೆ ಸುಭಗತೆ ಎಲ್ಲಾ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಎಂದೇ ಸ್ತ್ರೀ ಸಂಕುಲದ ಹಲವು ಪಲಕುಗಳ ಈ ಸಂಕಲನಕ್ಕೆ ಸ್ವಾಗತ.






odabekennisuttide.lekaki shreedeviyavarigoo,uttama pusthaka parichayisida rugvediyavarigoo abhinandanegalu-smitha
Proud of you shreedevi.
thank u anand
nice
best of luck..sridevi avare..