
ಜಯಶ್ರೀ ದೇಶಪಾಂಡೆ
ಎಲ್ಲಿಂದ ಸುರು ಮಾಡ್ಲಿ..
ಶೀತನಿ, ಸುಲಗಾಯಿ, ಎಳ್ಳು ಹಚ್ಚಿದ ಸೆಜ್ಜಿ ಭಕ್ಕರಿ, ಎಳಿ ಹಸರು ಸೌತೀಕಾಯಿ, ಕವಳೀಕಾಯಿ ಚಟ್ನಿಯ ಚುರ್ರನ್ನೂ ಹುಳಿಮಧುರಾ…
ಆಹ್. ಭೆಂಡಿಬೀಜದಂಥಾ ಬಿಳಿಜ್ವಾಳ ಬೀಸಿ ಮಾಡಿದ ರೇಶ್ಮೀ ಪದರು ಹೊಚ್ಚಿಕೊಂಡಂಥಾ ಫೂಟಗಲದ ಬಿಳಿಭಕ್ರಿ, ಹೊಟ್ಟೀಸೀಳಿಸಿಗೊಂಡು ಮೆಂತೆ ಇಂಗುಪ್ಪು ಒತ್ತಿಸಿಕೊಂಡ ಬ್ಯಾಡಗೀ ಮೆಣಸಿನಕಾಯಿ ಎಣ್ಣೀಯೊಳಗ ತೇಲಾಡಿ ಕರಿಸಿಕೊಂಡು ಕೆನಿ ಮಸರಿನ ಅವಲಕ್ಕೀ ಮ್ಯಾಲೆ ನಕ್ಕಂಥಾ ಅಮೃತರುಚಿಗಳ ಸಾಮ್ಯ
ನನ್ನನ್ನು ನಿಮ್ಮ ಬರವಣಿಗೆಯ ಹಾಡ್೯ಕೋರ್ ಫ್ಯಾನ್ ಮಾಡಿಬಿಟ್ಟಿತ್ತು ಅನ್ನೂದನ್ನು ನಾನು ಅವೊತ್ತೇ ನಿಮಗೆ ಫೋನಿನಲ್ಲಿ ಹೇಳಿದ್ದೆ..
ನಿಮ್ಮ ಧಾರವಾಡದ ಹಾಲಿನ ಬನಿಗೂ ನಮ್ಮ ವಿಜಾಪುರ/ ಕೊಲ್ಲಾರದ ಗಡಿಗಿ ಮಸರಿಗೂ ಎಂಥಾ ಭ್ರಾತೃತ್ವ ಅಂಬೋಣ… ಅವೆರಡೂ ರುಚಿ ಇಂದಿಗೂ ನಮ್ಮೆಲ್ಲರ ನಾಲಿಗೀ ಬಿಟ್ಟು ಸರೀಲಿಕ್ಕೆ ಒಲ್ಲೆ ಅಂತಾವ! ಮತ್ತ ಮಾವಿನ ಗಿಡಕ್ಕ ಭಾಂವೀಹಗ್ಗ ಕಟ್ಟಿ ತೂಗ್ಯಾಡಿದ ಜೋಕಾಲಿಯ ತಳಪಾಯದ ಕೊಡ್ಡದ ಮ್ಯಾಲಿನ ನಮ್ಮ ಕಾಲಿನ ಜೀಕಿನ ರಭಸ ಇನ್ನೂ ಅದೇ ಹಾಡಾ ಹಾಡತಾವ.. “ಪಂಚಮಿ ಹಬ್ಬಾ ಉಳದಾವ ದಿನ ನಾsssಕ… ಅಣ್ಣಾ ಬರಲಿಲ್ಲ ಯಾಕೋ ಕರಿಲಾsssಕ…” ಅಂತ. ಯಾಕಂದ್ರ ಈ ನಮ್ಮ ಬಯಲುಸೀಮೀ ಮಂದಿಯ ಅಂತ:ಕರಣದ ಜೇನುತುಪ್ಪ ಅದರೊಳಗ ಕಲಿಸಿಕೊಂಡು ಬಿಟ್ಟದ…
ಹಾಂ..ನಿಮ್ಮ “ನಾಸು” ನಮ್ಮಿಬ್ಬರಿಗೂ ಒಂದು ಕೊಂಡಿ ಜೋಡಿಸಿಬಿಟ್ಟನಲ್ಲಾ…
ಅತ್ತಿಮಬ್ಬೆ ಪ್ರತಿಷ್ಠಾನ ನಿಮ್ಮ ನಾಸು ಕಾದಂಬರಿಯ ಗಾಢಕ್ಕೆ ಮನಸ್ಸು ಸೋತು ಅದರ ವಿಮರ್ಶಾಪ್ರಬಂಧ ಸ್ಪರ್ಧಾ ಏರ್ಪಡಿಸಿದ್ದರಲ್ಲ.. ಮತ್ತು ನಾ ಅದಕ್ಕೆ ಪ್ರಬಂಧ ಬರದು ಮೊದಲ ಬಹುಮಾನ ಗಳಿಸಿದೆನಲ್ಲ..! ಆಗ ನೀವು ಫೋನು ಮಾಡಿದ್ರಿ ನನಗ ಯಾವುದೋ ದೇಶದಿಂದ, ನಿಮ್ಮ ಖುಶಿ ಜಾಹೀರು ಮಾಡಿದಿರಿ. ನಿಮ್ಮ ನಗು ಇನ್ನೂ ನನ್ನ ಕಿವಿಯೊಳಗ ರಿಂಗಣಿಸೇದ… ನಾ ಹಿಗ್ಗಿಬಿಟ್ಟೆ! ಖರೆ.. ನಾ ಬರದ ಆ ಪ್ರಬಂಧದ ಕಾಪಿ ಕಳಿಸಲಿಕ್ಕೆ ಹೇಳಿದಿರಿ.
‘ನಾಸು’ ನನ್ನ ಹೃದಯವನ್ನು ಎಷ್ಟು ಚೂಪಾಗಿ ಕೊರೆದು ಒಳಹೊಕ್ಕಿದ್ದ ಅಂತ ನಾನು ನಿಮಗೆ ಹೇಳಿದ್ದೆ. ಯಾಕಂದರ ‘ನಾಸು’ ನಂಥ ಒಬ್ಬಿಬ್ಬರು ಅವತಾರಗಳನ್ನು ನಾನು ವಿಜಾಪುರದಲ್ಲಿ ಕಂಡಿದ್ದು ಕಣ್ಮನಸಿನ ಅಳದೊಳಗಿತ್ತು…ಸುನಂದಕ್ಕಾ ನಾಸೂನಂಥವರು ಇನ್ನ ಬ್ಯಾಡೇ ಬ್ಯಾಡ.
ಇರಲಿ, ಕನ್ನಡ ಸಾಹಿತ್ಯಕ್ಕ ಅಭೂತಪೂರ್ವ ನಮೂನಿಯೊಳಗ ನಮ್ಮ ಗಂಡು ಮೆಟ್ಟಿನ ನೆಲದ ರುಚಿಯನ್ನು “ಕಜ್ಜಾಯ” ದೊಳಗ ಉಣಬಡಿಸಿ. “ಮೃದ್ಗಂಧ” “ಝವಾದಿ” ಮತ್ತಿನ್ನೂ ಹಲವು ಅಕ್ಷರರತ್ನಭಂಡಾರ ಸೃಷ್ಟಿ ಮಾಡಿ ಕನ್ನಡಿಗರ ಕೈಗೆ ಇಟ್ಟು ನೀವೀಗ ‘ಅಲ್ಲಿರುವ ಶಾಶ್ವತ ಮನೀಗೆ’ ಹೋಗೀರಿ.. ನಾವೆಲ್ಲಾ ನಿಮ್ಮ ಪುಸ್ತಕಗಳೊಳಗ ನಿಮ್ಮದೇ ಛಾಯಾ ಕಾಣ್ತೀವಿ…
ನಾವಿಬ್ಬರೂ ಪ್ರತ್ಯಕ್ಷವಾಗಿ ಭೇಟಿಯಾಗದಿದ್ದರೇನಾಯಿತು.ನನ್ನೊಳಗ ನಿಮ್ಮ ಅಕ್ಷರಸ್ಮೃತಿ ಘಟ್ಟಿಮುಟ್ ಕೂತುಬಿಟ್ಟದ.
ಹೋಗಿ ಬಾ ಸುನಂದಕ್ಕಾ.. ಚಿರಶಾಂತಿ ನಿಮ್ಮ ಆತ್ಮಕ್ಕ..ಇಗೋ ನನ್ನದೆರಡು ಕಣ್ಣೀರಿನ ನಮನ!






ಉತ್ತಮ ನಡೆ… ಸಾಹಿತ್ಯದ ಕಡೆ…..