ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೇಕ್ಸ್‌ಪಿಯರ್ ಮನೆಗೂ ಬಂದ, ಮನಕ್ಕೂ ಬಂದ

ಸುರೇಶ್ ನಾಗಲಮಡಿಕೆ

ಕನ್ನಡ ರಂಗಭೂಮಿಯಲ್ಲಿ ವಿಲಿಯಂ ಶೇಕ್ಸ್‌ಪಿಯರ್‌ನ ನಾಟಕಗಳು ಹಲವು ಬಾರಿ ನಡೆದಾಡಿವೆ. ಆದರೆ ಸ್ವತ: ಶೇಕ್ಸ್‌ಪಿಯರ್‌ನ ವೈಯಕ್ತಿಕ ಬದುಕು ಮತ್ತು ಆತನದೇ ಪಾತ್ರಗಳ ಮುಖಾಮುಖಿಗಳು ಅಪರೂಪವೆಂದೇ ಹೇಳಬೇಕು. ನಟರಾಜ್ ಹುಳಿಯಾರ್ ಆತನ ಬದುಕು ಮತ್ತು ಬರಹಗಳನ್ನು ಬಳಸಿಕೊಂಡು ‘ ಶೇಕ್ಸ್‌ಪಿಯರ್‌ ಮನೆಗೆ ಬಂದ ‘ ಎಂಬ ನಾಟಕವನ್ನು ಹೆಣೆದಿದ್ದಾರೆ. ಇದನ್ನು ನಟರಾಜ್ ಹೊನ್ನವಳ್ಳಿ ನಿರ್ದೇಶಿಸಿದ್ದಾರೆ.

ಹುಳಿಯಾರರ ಶೇಕ್ಸ್‌ಪಿಯರ್‌ನನ್ನು ಕುರಿತು ವ್ಯಾಪಕವಾದ ಓದು ಇದರಲ್ಲಿ ಸಾಕಷ್ಟು ಕೆಲಸ ಮಾಡಿದೆ. ರಂಗಪಠ್ಯವನ್ನು ನಿರ್ಮಿಸಿಕೊಳ್ಳುವ ಸಂದರ್ಭದಲ್ಲಿ ಬಹುಶ: ಅವರು ಸಾಂಪ್ರದಾಯಿಕ ಕೆಲವು ನಾಟಕೀಯ ಅಂಶಗಳನ್ನು ಪಕ್ಕಕ್ಕೆ ಇಟ್ಟಿದ್ದಾರೆ. ರಂಗದ ಮೇಲೆ ಶೇಕ್ಸ್‌ಪಿಯರ್‌ನಿಗೆ ತಿಳಿಯದ ಹಲವು ಅರ್ಥ ಸಾಧ್ಯತೆಗಳನ್ನು ವಿಸ್ತರಿಸುವ ಪ್ರಯತ್ನ ಮಾಡಲಾಯಿತು. ಶೇಕ್ಸ್‌ಪಿಯರ್‌ನ ಬರಹಗಳು ಹಲವು ಓದುಗಳ ಎದುರೀಜು ಇಲ್ಲಿ ನಡೆದಿದೆ. ಲಿಯರ್, ರೋಮಿಯೋ ಜೂಲಿಯೆಟ್, ಸೀಜರ್, ಒಥೆಲೋ, ಹ್ಯಾಮ್ಲೆಟ್ ಮುಂತಾದ ಪ್ರಮುಖ ಪಾತ್ರಗಳ ಮಾನಸಿಕ ಸ್ಥಿತಿಗತಿಗಳ ಒಳ ಹೊರಗನ್ನು ಸ್ವತ: ಶೇಕ್ಸ್‌ಪಿಯರ್‌ ಅರ್ಥೈಸುವುದಕ್ಕೂ , ರಂಗದ ಮೇಲಿನ ಮೇಷ್ಟ್ರು ಮತ್ತು ಹೊಸ ಪೀಳಿಗೆಯ ಓದುಗರು ಅರ್ಥೈಸುವ ಕ್ರಮಗಳು ಎದುರುಬದುರಾಗಿವೆ. ಆದರೆ ರಂಗದಲ್ಲಿ ನಾವು ನೋಡುವುದು  ಶೇಕ್ಸ್‌ಪಿಯರ್‌ನ  ನಾಟಕಗಳಲ್ಲಿ ವ್ಯಾಪಕವಾದ ಮನುಷ್ಯನ ಮಾನಸಿಕ ಸಂಘರ್ಷಗಳೇ ವಿನ: ರಾಜಕೀಯ ಪ್ರಜ್ಞೆಯನ್ನಲ್ಲ.

ಪ್ರೇಮ ಮತ್ತು ಗುಮಾನಿಗಳ ಅಂತರ್ ಘರ್ಷಣೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಗಂಡು ಹೆಣ್ಣಿನ ದೈಹಿಕ-ಮಾನಸಿಕ ತುಮುಲಗಳಲ್ಲಿ ಎದುರಾಗುವ ಪಾತ್ರಗಳು ಮಾತನಾಡುವ ಮಾತುಗಳು ಅರ್ಥಪೂರ್ಣವಾಗಿವೆ. ನಟರಾಜ್ ಅವರು ವಿಮರ್ಶಕರೂ ಆಗಿರುವುದರಿಂದ ರಂಗದ ಮೇಲೆ ಇವುಗಳ ಅನುಸಂಧಾನ ಕ್ರಮದಲ್ಲಿ ಹದ ತಪ್ಪಿಲ್ಲ. ಶೇಕ್ಸ್‌ಪಿಯರ್‌ ನಾಟಕಗಳ ಈ ಕಾವ್ಯಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನಾವು ಮನುಷ್ಯನ ಮಾನಸಿಕ ಪಲ್ಲಟಗಳ ಯಾನವನ್ನು ಗಮನಿಸಬೇಕಾಗುತ್ತದೆ. ರಂಗದ ಮೇಲಿನ ಶೇಕ್ಸ್‌ಪಿಯರ್‌ ನಮ್ಮ ಮನಸ್ಸಿಗೆ ಪ್ರವೇಶ ಪಡೆಯುವುದು ಮನುಷ್ಯನ ಗುಮಾನಿಗಳು ಇಡೀ ಬದುಕನ್ನು ನಾಶಮಾಡುವುದರ ಕಡೆಯಲ್ಲಿ.
ಹೊಸ ಪೀಳಿಗೆಯ ಓದುಗರು ಇದನ್ನು ತಮಗೆ ತಕ್ಕ ಹಾಗೆ ಸ್ವೀಕರಿಸಿದ್ದಾರೆ. ಮನುಷ್ಯನ ಪ್ರಕ್ಷುಭ್ಥತೆಯನ್ನು ಈ ಪಾತ್ರಗಳು ಚೆನ್ನಾಗಿ ಹೊರಗೆಡವುತ್ತವೆ. ಆದ್ದರಿಂದ ಈ ನಾಟಕ ಇಡೀ ಶೇಕ್ಸ್‌ಪಿಯರ್‌ನನ್ನು ಇದುವರೆಗೆ ಅರ್ಥೈಸಿಕೊಂಡ ಹಾಗೂ ಅರ್ಥೈಸಿಕೊಳ್ಳುತ್ತಿರುವ ಕಡೆಗೆ ಚಲಿಸುವಂತೆಯೇ ಇದೆ. ಸ್ವತ: ಶೇಕ್ಸ್‌ಪಿಯರ್‌ಗೇ ದಂಗು ಬಡಿಸುವಷ್ಟು ಅರ್ಥ ಸಾಧ್ಯತೆಗಳು ವಿಶ್ವವ್ಯಾಪ್ತಿಯಾಗಿವೆ. ಈ ರಂಗಪಠ್ಯ ಅತ್ಯುತ್ತಮ ಲೇಖನವೂ ಆಗಿದೆ. ಆದರೆ ನಟರಾಜ್ ಅವರು ಶೇಕ್ಸ್‌ಪಿಯರ್‌ನಿಂದ ಮತ್ತಷ್ಟು ಸ್ವೀಕರಿಸಬಹುದಾದ್ದು ಆತನ ರಾಜಕೀಯ ಪ್ರಜ್ಞೆ. ಈತನನ್ನು ಇವತ್ತಿಗೂ ಎದುರುಗೊಳ್ಳುತ್ತಿರುವ ಮನುಷ್ಯನ ಮಾನಸಿಕತೆಯ ನೆಲೆ ಮತ್ತು ಅದಕ್ಕೆ ಪೂರಕವಾಗಿ ಬರುವ ರಾಜಕಾರಣದ ಕುತಂತ್ರಗಳು ಇದು ಮಿತಿ ಅಲ್ಲದಿದ್ದರೂ ರಂಗದ ಮೇಲೆ ಕಾಡುವಂತೆ ಮಾಡುತ್ತದೆ.

ಜೂಲಿಯನ್ ಸೀಜರ್ನಲ್ಲಿ ಬರುವ ಅಂಟೋನಿ ಬ್ರೂಟಸ್ ಇವರ ಭಾಷಣಗಳು ರಂಗದಲ್ಲಿ ಜಾಗ ಪಡೆದಿಲ್ಲ ಹಾಗು ಅವುಗಳ ಅರ್ಥ ಸಾಧ್ಯತೆಗಳು ಇಲ್ಲ. ಮ್ಯಾಕ್ಬೆಥ್ ನಾಟಕದಲ್ಲಿ ಬರುವ ಲೇಡಿ ಮ್ಯಾಕ್ಬೆಥ್ ಮತ್ತು ಮ್ಯಾಕ್ಬೆಥ್ರ ಪಾತ್ರಗಳ ಹಿನ್ನೆಲೆಯಲ್ಲಿ ರಾಜಕಾರಣದ ಒಳಸತ್ಯಗಳು ಇಲ್ಲಿ ಮಾಯವಾಗಿವೆ. ಅಂದರೆ ಒಂದು ಸಾಧ್ಯತೆಯನ್ನು ಈ ರಂಗ ಪಠ್ಯ ಮರೆತಿದೆ ಅಷ್ಟೆ. ಶೇಕ್ಸ್‌ಪಿಯರ್‌ನ ಬರಹಗಳಲ್ಲಿ ಬಹಳ ಸೂಕ್ಷ್ಮವಾಗಿ ಕಾಣುವುದು ಗುಮಾನಿ ಮತ್ತು ರಾಜಕಾರಣದ ಮುಖಾಮುಖಿ. ಇವುಗಳಿಂದ ನಡೆಯುವ ದುರಂತ. ದುರಂತವೆಂದರೆ ಈತನ ಬರಹಗಳಲ್ಲಿ ಬರುವ ಕೇವಲ ದು:ಖ, ನೋವು, ಅಳು ಎಂದು ಸ್ವೀಕರಿಸಿದರೆ ಅದು ತಪ್ಪಾಗುತ್ತದೆ. ಬದಲಾಗಿ ಇವನ ಬಹುಪಾಲು ಪಾತ್ರಗಳು ದುರಂತದ ನಂತರದಲ್ಲಿ ಬದುಕನ್ನು ಅರ್ಥಮಾಡಿಕೊಳ್ಳುವ ಕ್ರಮವನ್ನು ನೋಡಬಹುದು.

ದುರಂತವನ್ನು ರೂಪಕವಾಗಿ ನೋಡಿದಾಗ ನಮಗೆ ಲಭ್ಯವಾಗುವ ಮಾನಸಿಕ ಪರಿಕರಗಳೇ ಭಿನ್ನವಾಗಿರುತ್ತವೆ. ಹಾಗಾಗಿ ಇಲ್ಲಿ ಶೇಕ್ಸ್‌ಪಿಯರ್‌ ಓದುಗ-ನೋಡುಗ-ಬರಹಗಾರ ಈ ಮೂವರು ಮುಪ್ಪರಿಗೊಂಡಿದ್ದಾರೆ. ಇದೊಂದು ವಿಮರ್ಶಾತ್ಮಕ ನಾಟಕ. ಇದೊಂದು ಬಗೆಯ ಪ್ರಯೋಗವನ್ನಾಗಿ ಸ್ವೀಕರಿಸಬೇಕೇ ಹೊರತು ಸಾಂಪ್ರದಾಯಿಕ ರಂಗವಿಮರ್ಶೆಯ ಪರಿಕರಗಳನ್ನು ಬಳಸಿ ಈ ರಂಗಪಠ್ಯವನ್ನು ವಿಮರ್ಶಿಸ ಹೊರಟರೆ ನಮಗೆ ದಕ್ಕುವುದು ಕಡಿಮೆ.

ಇದು ಕೇವಲ ಜಗತ್ತಿನ ಬಹು ದೊಡ್ಡ ಬರಹದ ರೂಪಕದಂತೆ ಇರುವ ಶೇಕ್ಸ್‌ಪಿಯರ್‌ನನ್ನು ಅರಿಯುವ ಪ್ರಯತ್ನವಷ್ಟೇ. ನನ್ನ ಈ ಬರಹವೂ ಕೂಡ ರಂಗ ವಿಮರ್ಶೆಯ ಯಾವ ಪರಿಕರಗಳನ್ನು ಬಳಸಿಕೊಂಡಿಲ್ಲ, ಒಂದು ಅಭಿಪ್ರಾಯವಷ್ಟೆ. ರಂಗದ ಮೇಲೆ ಕಾಣಿಸಿಕೊಂಡ ಎಲ್ಲಾ ಪಾತ್ರಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿಯೇ ನಿರ್ವಹಿಸಿವೆ. ನಿರ್ದೇಶನವೂ ಸ್ಕ್ರಿಪ್ಟ್ ಗೆ  ತಕ್ಕ ಹಾಗಿದೆ. ಎಸ್ ಅರ್ ರಾಮಕೃಷ್ಣ ಅವರ ಸಂಗೀತ ಅಬ್ಬರದಿಂದ ತಪ್ಪಿಸಿಕೊಂಡಿದೆ. ಆದರೆ ಕೆಲವು ಪಾತ್ರಗಳ ಡೈಲಾಗ್ಗಳು ಸರಿಯಾಗಿ ಕೇಳಿಸದೆ ಹೋಗಿವೆ. ಇದೊಂದು ದೊಡ್ಡ ಮಿತಿ ಅಲ್ಲ ಅವರೆಲ್ಲ ಒಳ್ಳೆಯ ನಟರು.
ಮಧ್ಯೆ ಬರುವ ಶೇಕ್ಸ್‌ಪಿಯರ್‌ನ ಸ್ವಂತ ಡೈಲಾಗ್ಗಳು ಇಂಗ್ಲಿಷಿನಲ್ಲಿಯೇ ಇವೆ. ‘ಜಗವೇ ರಂಗಭೂಮಿ ನಾವದರಲ್ಲಿನ ನಟರು’ ಬಾ ಪ್ರೀತಿಯ ರಾತ್ರಿಯೆ ಎಂಬ ಹಾಡುಗಳು ಬಹುದಿನ ನಮ್ಮ ಕಿವಿಯಲ್ಲಿ ಉಳಿಯುತ್ತದೆ. ನಟರಾಜ್ ದ್ವಯರಿಗೆ ಅಭಿನಂದನೆಗಳು.
 

‍ಲೇಖಕರು avadhi

28 August, 2013

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. ಟಿ.ಎಸ್.ಗೊರವರ

    ಪ್ರಿಯ ಸುರೇಶ, ನೀವು ಶೇಕ್ಸ್ ಪಿಯರ್ ಮನೆಗೆ ಬಂದ ನಾಟಕ ಕುರಿತು ಬರೆದ ಮಾತುಗಳನ್ನು ನೋಡಿ ಆ ನಾಟಕ ನೋಡುವ ಉಮೇದಿ ಬಂತು. ಹುಳಿಯಾರ್ ಸರ್ ನಾಟಕ ಅಂದ್ರೆ ವಿಶಿಷ್ಟವಾಗಿ ಇದ್ದೇ ಇರುತ್ತೆ.

  2. manjunath netkal

    ಪ್ರೀತಿಯ ಸುರೇಶ್ ನಾಟಕದ ಬಗ್ಗೆ ನಿಮ್ಮ ಲೇಖನ ಚನ್ನಾಗಿದೆ. ಅತ್ಯಂತ ಸಂಗ್ರಹ ರೂಪದಲ್ಲಿ ಇಡೀ ನಾಟಕ ಕುರಿತಾಗಿ ಹೇಳಿದ್ದೀರಿ ನನಗೆ ಇಷ್ಟವಾಯಿತು.

  3. dr. purushothama

    Dear Suresh your article which appered in avadi is very good, it appers to be something special

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading