ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವರಾತ್ರಿಗೆ ನ್ಯಾನೋ ಕಥೆಗಳು

ರಾಘವೇಂದ್ರ ಈ ಹೊರಬೈಲು
ಜಾಗರಣೆ
ಮನೆ ಮುಂದೆ ರಾತ್ರಿಯೆಲ್ಲ ಆಕ್ರೆಸ್ಟ್ರಾ ಹಾಡಿಸಿದ ಅವರು, ‘ಅಮ್ಮ ಲೂಸಾ, ಅಪ್ಪ ಲೂಸಾ’, ‘ಹೊಡಿ ಮಗ, ಹೊಡಿ ಮಗ ಬಿಡಬೇಡ ಅವನ್ನ’ ಹಾಡುಗಳನ್ನು ಕೇಳಿ ಶಿವರಾತ್ರಿ ಹಬ್ಬದ ಜಾಗರಣೆ ಮುಗಿಸಿ ಪಾವನರಾದರು.
ಉಪವಾಸ
ಹಬ್ಬದ ಪ್ರಯುಕ್ತ ಊಟ ಮಾಡದೆ, ಉಪವಾಸವಿರಬೇಕೆಂದ ಅವರು ಬೆಳಗ್ಗೆ ಸ್ವಲ್ಪ ಕಾಫಿ ಜೊತೆಗೊಂದಿಷ್ಟು ಬಿಸ್ಕತ್ತುಗಳನ್ನು ತಿಂದು, ಒಂಬತ್ತು ಗಂಟೆಗೆ ಅವಲಕ್ಕಿಯನ್ನು ತಿಂದು, ಹನ್ನೆರಡು ಗಂಟೆಗೆ ಬಾಳೆಹಣ್ಣನ್ನು ಸೇವಿಸಿ, ಊಟ ಮಾಡುವಂತಿಲ್ಲವೆಂದು ಮಧ್ಯಾಹ್ನ ಉಪ್ಪಿಟ್ಟು ಸ್ವೀಕರಿಸಿ, ಸಂಜೆ ಸ್ವಲ್ಪ ಟೀ ಕುಡಿದು, ರಾತ್ರಿ ಕೇವಲ ಫಲಾಹಾರ ಸೇವಿಸಿ ಹಬ್ಬದ ಉಪವಾಸ ವ್ರತವನ್ನು ಮುಗಿಸಿದರು.
ಭಕ್ತಿ
ತಾನು ಯಾವತ್ತೂ ಹಸಿವೆಯೆಂದು ಕೇಳದಿದ್ದರೂ, ತನಗೆ ಬೇಡದಿದ್ದರೂ ತರತರದ ಭಕ್ಷ್ಯಗಳನ್ನು ಗುಡಿಗೆ ತಂದು ಎಡೆ ಇಡುವವರು, ಗುಡಿಯ ಪಕ್ಕದಲ್ಲಿ ಹಸಿವೆಯಿಂದ ನರಳುತ್ತಿರುವವನ್ನು ಕಣ್ಣೆತ್ತಿಯೂ ನೋಡದಿದ್ದನ್ನು ಕಂಡು ಕೆರಳಿದ ಶಿವನು ಕೊಟ್ಟ ಶಾಪಕ್ಕೆ ಅವರೇ ಇಂದು ಬೀದಿಬೀದಿಯಲ್ಲಿ ಹಸಿವೆಯಿಂದ ಬೇಡುತ್ತಿದ್ದಾರೆ.
ಶಿವ
ಭಾಷಣ ಬಿಗಿಯುತ್ತಾ, ಗುಡಿ-ಗೋಪುರ ಕಟ್ಟಿಸುತ್ತಾ, ದಿನವೂ ದೇವರ ಜಪ ಮಾಡುತ್ತಾ ಕುಳಿತವರನ್ನು ಕಡೆಗಣ್ಣಿನಿಂದಲೂ ನೋಡದೆ, ಬಡವರಿಗಾಗಿ, ಅಸಹಾಯಕರಿಗಾಗಿ ಮರುಗುತ್ತಾ, ಸಹಾಯ ಹಸ್ತ ನೀಡಿ, ಶಾಲೆ-ಶೌಚಾಲಯಗಳನ್ನು ಕಟ್ಟಿಸಲು ನೆರವಾಗಿ, ತನ್ನ ಕಾಯಕವನ್ನು ಬಿಡದೆ ಮಾಡುತ್ತಿರುವ ಯೋಗಿಯೊಳಗೆ ಶಿವನು ಐಕ್ಯನಾದ.
ದೇವರು
ಭೂಮಿಯ ಮೇಲಿನ ಜನರ ಜೊತೆ ಒಂದಿಷ್ಟು ದಿನವಿದ್ದು, ತೆರಳೋಣವೆಂದು ಬಂದ ದೇವರ ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸದ್ಗುಣವೆಂಬ ಮಾತು ಕೇಳಿದ ಜನ ರೊಚ್ಚಿಗೆದ್ದು, ಹುಚ್ಚನನ್ನಟ್ಟುವಂತೆ ಬಡಿದಟ್ಟಿದ್ದರಿಂದ ಹೆದರಿ ಓಡಿದವನು ಆಮೇಲೆ ಅದೆಷ್ಟೇ ಬೇಡಿದರೂ ನಾ ಮತ್ತೊಮ್ಮೆ ಬರಲೊಲ್ಲೆನೆಂದು ಪಟ್ಟು ಹಿಡಿದಿದ್ದಾನೆ.
ದೇವರೆಲ್ಲಿ?
ದೇವರು ತನಗೆ, ತನ್ನವರಿಗೆಲ್ಲ ಸುಖ-ಸಂತೋಷ ಕೊಡುತ್ತಾನೆಂದು, ಅವನು ದೂರ ದೂರದ ತೀರ್ಥಕ್ಷೇತ್ರಗಳಿಗೆ ಹೋಗಿ, ದರ್ಶನ ಪಡೆದು ಬರುವುದರೊಳಗೆ ಊರಲ್ಲಿದ್ದ ಅವನ ತಾಯಿ ಖಾಯಿಲೆಯಾಗಿ ಸತ್ತೇ ಹೋಗಿದ್ದಳು.

‍ಲೇಖಕರು avadhi

21 February, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading