ಶಿವರಾತ್ರಿಗೆ ನ್ಯಾನೋ ಕಥೆಗಳು

ರಾಘವೇಂದ್ರ ಈ ಹೊರಬೈಲು

ಜಾಗರಣೆ

ಮನೆ ಮುಂದೆ ರಾತ್ರಿಯೆಲ್ಲ ಆಕ್ರೆಸ್ಟ್ರಾ ಹಾಡಿಸಿದ ಅವರು, ‘ಅಮ್ಮ ಲೂಸಾ, ಅಪ್ಪ ಲೂಸಾ’, ‘ಹೊಡಿ ಮಗ, ಹೊಡಿ ಮಗ ಬಿಡಬೇಡ ಅವನ್ನ’ ಹಾಡುಗಳನ್ನು ಕೇಳಿ ಶಿವರಾತ್ರಿ ಹಬ್ಬದ ಜಾಗರಣೆ ಮುಗಿಸಿ ಪಾವನರಾದರು.

ಉಪವಾಸ

ಹಬ್ಬದ ಪ್ರಯುಕ್ತ ಊಟ ಮಾಡದೆ, ಉಪವಾಸವಿರಬೇಕೆಂದ ಅವರು ಬೆಳಗ್ಗೆ ಸ್ವಲ್ಪ ಕಾಫಿ ಜೊತೆಗೊಂದಿಷ್ಟು ಬಿಸ್ಕತ್ತುಗಳನ್ನು ತಿಂದು, ಒಂಬತ್ತು ಗಂಟೆಗೆ ಅವಲಕ್ಕಿಯನ್ನು ತಿಂದು, ಹನ್ನೆರಡು ಗಂಟೆಗೆ ಬಾಳೆಹಣ್ಣನ್ನು ಸೇವಿಸಿ, ಊಟ ಮಾಡುವಂತಿಲ್ಲವೆಂದು ಮಧ್ಯಾಹ್ನ ಉಪ್ಪಿಟ್ಟು ಸ್ವೀಕರಿಸಿ, ಸಂಜೆ ಸ್ವಲ್ಪ ಟೀ ಕುಡಿದು, ರಾತ್ರಿ ಕೇವಲ ಫಲಾಹಾರ ಸೇವಿಸಿ ಹಬ್ಬದ ಉಪವಾಸ ವ್ರತವನ್ನು ಮುಗಿಸಿದರು.

ಭಕ್ತಿ

ತಾನು ಯಾವತ್ತೂ ಹಸಿವೆಯೆಂದು ಕೇಳದಿದ್ದರೂ, ತನಗೆ ಬೇಡದಿದ್ದರೂ ತರತರದ ಭಕ್ಷ್ಯಗಳನ್ನು ಗುಡಿಗೆ ತಂದು ಎಡೆ ಇಡುವವರು, ಗುಡಿಯ ಪಕ್ಕದಲ್ಲಿ ಹಸಿವೆಯಿಂದ ನರಳುತ್ತಿರುವವನ್ನು ಕಣ್ಣೆತ್ತಿಯೂ ನೋಡದಿದ್ದನ್ನು ಕಂಡು ಕೆರಳಿದ ಶಿವನು ಕೊಟ್ಟ ಶಾಪಕ್ಕೆ ಅವರೇ ಇಂದು ಬೀದಿಬೀದಿಯಲ್ಲಿ ಹಸಿವೆಯಿಂದ ಬೇಡುತ್ತಿದ್ದಾರೆ.

ಶಿವ

ಭಾಷಣ ಬಿಗಿಯುತ್ತಾ, ಗುಡಿ-ಗೋಪುರ ಕಟ್ಟಿಸುತ್ತಾ, ದಿನವೂ ದೇವರ ಜಪ ಮಾಡುತ್ತಾ ಕುಳಿತವರನ್ನು ಕಡೆಗಣ್ಣಿನಿಂದಲೂ ನೋಡದೆ, ಬಡವರಿಗಾಗಿ, ಅಸಹಾಯಕರಿಗಾಗಿ ಮರುಗುತ್ತಾ, ಸಹಾಯ ಹಸ್ತ ನೀಡಿ, ಶಾಲೆ-ಶೌಚಾಲಯಗಳನ್ನು ಕಟ್ಟಿಸಲು ನೆರವಾಗಿ, ತನ್ನ ಕಾಯಕವನ್ನು ಬಿಡದೆ ಮಾಡುತ್ತಿರುವ ಯೋಗಿಯೊಳಗೆ ಶಿವನು ಐಕ್ಯನಾದ.

ದೇವರು

ಭೂಮಿಯ ಮೇಲಿನ ಜನರ ಜೊತೆ ಒಂದಿಷ್ಟು ದಿನವಿದ್ದು, ತೆರಳೋಣವೆಂದು ಬಂದ ದೇವರ ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸದ್ಗುಣವೆಂಬ ಮಾತು ಕೇಳಿದ ಜನ ರೊಚ್ಚಿಗೆದ್ದು, ಹುಚ್ಚನನ್ನಟ್ಟುವಂತೆ ಬಡಿದಟ್ಟಿದ್ದರಿಂದ ಹೆದರಿ ಓಡಿದವನು ಆಮೇಲೆ ಅದೆಷ್ಟೇ ಬೇಡಿದರೂ ನಾ ಮತ್ತೊಮ್ಮೆ ಬರಲೊಲ್ಲೆನೆಂದು ಪಟ್ಟು ಹಿಡಿದಿದ್ದಾನೆ.

ದೇವರೆಲ್ಲಿ?

ದೇವರು ತನಗೆ, ತನ್ನವರಿಗೆಲ್ಲ ಸುಖ-ಸಂತೋಷ ಕೊಡುತ್ತಾನೆಂದು, ಅವನು ದೂರ ದೂರದ ತೀರ್ಥಕ್ಷೇತ್ರಗಳಿಗೆ ಹೋಗಿ, ದರ್ಶನ ಪಡೆದು ಬರುವುದರೊಳಗೆ ಊರಲ್ಲಿದ್ದ ಅವನ ತಾಯಿ ಖಾಯಿಲೆಯಾಗಿ ಸತ್ತೇ ಹೋಗಿದ್ದಳು.

‍ಲೇಖಕರು avadhi

February 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Sateesh Hegde Sirsi

    ರಾಘವೆಂದ್ರರೇ ನಮಸ್ಕಾರಗಳು.

    ಶಿವರಾತ್ರಿಯ ಸಮಯದಲ್ಲಿ ಬಂದ ನಿಮ್ಮ ನ್ಯಾನೋ ಕಥೆಗಳನ್ನು ಓದಿದೆ. ಸಮಾಜದ ದೋಷಗಳನ್ನು ತೆರೆದಿಡಬೇಕೆಂದು ಹೀಗೆ ಬರೆದಿದ್ದಾಗಿ ನಿಮ್ಮ ಕಥೆಗಳಿಗೆ ಬಂದ ಪ್ರತಿಕ್ರಿಯೆಗೆ ಮರುಪ್ರತಿಕ್ರಿಯೆಯನ್ನು ಕೊಟ್ಟಿದ್ದೀರಿ. ಸಂತೋಷ. ಆದರೆ, ನನಗೆ ನಿಮ್ಮ ನ್ಯಾನೋ ಕತೆಗಳಲ್ಲಿ ಸಮಾಜದ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸುವದಕ್ಕಿಂತ ಹೆಚ್ಚಾಗಿ ಸಮಾಜದ ನಂಬಿಕೆಯನ್ನು ವ್ಯಂಗಮಾಡುವ ಧ್ವನಿಯೇ ಕಾಣುತ್ತಿದೆ. ಈ ರೀತಿಯ ವ್ಯಂಗ್ಯವು ಸಮಾಜದ ಸ್ವಾಸ್ಥ್ಯಕ್ಕೂ ವ್ಯಕ್ತಿಗತವಾಗಿ ನಮ್ಮೆಲ್ಲರಿಗೂ ಒಳಿತಲ್ಲವೆಂದು ನನ್ನ ಭಾವನೆ.

    ವ್ಯಂಗಕ್ಕೆ ಕೊನೆಮೊದಲಿಲ್ಲ. ಯಾವ ವಸ್ತುವನ್ನಾದರೂ ವ್ಯಂಗ್ಯಕ್ಕೆ ತಗಲುಹಾಕಬಹುದು.
    ಉದಾಹರಣೆಗೆ –
    “ಸಂಜೆಯಾದಂತೆ ಹೆಂಡದಂಗಡಿಗೆ ಓಡುವ ಶಿಕ್ಷಕನೊಬ್ಬನು ಕಂಠಪೂರ್ತಿ ಕುಡಿದು, ಮನೆಗೆ ನಡೆದು, ಹೆಂಡತಿಗೆ ಹೊಡೆದು ಬೆಳಗ್ಗೆ ಎದ್ದು ಶಾಲೆಗೆ ಬಂದು ಮದ್ಯಪಾನವನ್ನು ಮಾಡಬೇಡಿ ಎಂದು ಮಕ್ಕಳಿಗೆ ಬೋಧಿಸಿದ!” ಇದೂ ಒಂದು ನ್ಯಾನೋ ಕಥೆಯೇ ಅಲ್ಲವೇ? ಇದೂ ಸಹ ಸಮಾಜದಲ್ಲಿ ಪ್ರಚಲಿತದಲ್ಲಿ ಇರುವಂತದ್ದೇ ತಾನೇ? ಇದನ್ನು ನಾವು ಪ್ರಚಾರಮಾಡಬಹುದೇ? ಇಲ್ಲ ; ಮಾಡಬಾರದು. ಹಾಗಾದರೆ ನಾವು ಯಾವ ತರಹದ್ದನ್ನು ಪ್ರಚಾರ ಮಾಡಬೇಕು?
    ಅದಕ್ಕೂ ಒಂದು ಉದಾಹರಣೆಯನ್ನು ಕೊಡ್ತೀನಿ.
    “ಮನೆಯಲ್ಲಿ ತುಂಬಾ ಬಡತನವಿರುವ ಶಿಕ್ಷಕರೊಬ್ಬರು ತನ್ನ ಶಾಲೆಯ ಮಕ್ಕಳು ಹಸಿವಿನಿಂದ ಉಳಿಯಬಾರದು ಎಂಬ ಧೋರಣೆಯನ್ನು ಹೊತ್ತು ಒಂದು ಹೊತ್ತು ಉಪವಾಸವಿದ್ದು ಶಾಲಾಮಕ್ಕಳಿಗಾಗಿ ಹಿಡಿಯಕ್ಕಿಯನ್ನು ಒಟ್ಟುಹಾಕುತ್ತಿದ್ದರು.”
    ಇದು ಎಷ್ಟು ಚೆನ್ನಾಗಿದೆಯಲ್ಲವೇ? ಈ ಮೇಲಿನ ಎರಡು ಕಥೆಗಳಲ್ಲಿ ನಿಮಗೆ ಯಾವ ಶಿಕ್ಷಕರಂತೆ ಆಗಬೇಕೆನ್ನಿಸಿತು? ಖಂಡಿತವಾಗಿಯೂ ಎರಡನೆಯದೇ ನಿಮ್ಮ ಆಯ್ಕೆಯಲ್ಲವೇ? ಹಾಗೆಯೇ ನಾವೂ ಸಹ ನಮ್ಮ ಯೋಚನೆಯಲ್ಲಿ ಬರೆವಣಿಗೆಯಲ್ಲಿ ಧನಾತ್ಮಕತೆಯನ್ನೇ ಹೆಚ್ಚು ಹೆಚ್ಚು ಹೊಂದುತ್ತಾ ಅದನ್ನೇ ಹಂಚುತ್ತಾ ಸಾಗಬೇಕು.

    ನೀರು ತುಂಬಿದ ಒಂದು ಲೋಟದಲ್ಲಿ ಒಂದು ಹನಿ ನೀಲಿಬಣ್ಣವು ಬಿದ್ದಿದೆ ಎಂದುಕೊಳ್ಳಿ. ಆಗ ಲೋಟದ ಪೂರ್ತಿ ನೀರೆಲ್ಲವೂ ನೀಲಿಯೇ ಆಗುತ್ತದೆ. ಹೀಗಾದ ಸಂದರ್ಭದಲ್ಲಿ ಆ ನೀಲಿಬಣ್ಣವನ್ನು ಹೋಗಲಾಡಿಸಿ ಮತ್ತೆ ಶುದ್ಧವಾದ ನೀರನ್ನು ಕಾಣುವ ಬಗೆ ಹೇಗೆ? ಯೋಚಿಸಿ ನೋಡಿ. ನೀಲಿ ಬಣ್ಣವಿದೆ ಎಂದು ವ್ಯಂಗಮಾಡುತ್ತ ಕಾಲಕಳೆಯುವುದೇ? ಅಥವಾ ಶುದ್ಧವಾದ ನೀರನ್ನು ಅದೇ ನೀರಿಗೆ ಸೇರಿಸುತ್ತಾ ಹೋಗುವುದೋ? ಪ್ರಯೋಗಾತ್ಮಕವಾಗಿ ನೋಡಿದಾಗ ಲೋಟದಲ್ಲಿ ತುಂಬಿಕೊಂಡ ಕೊಳಕು ನೀರಿಗೆ ಶುದ್ಧನೀರನ್ನು ಸೇರಿಸುತ್ತಾ ಹೋದಂತೆ ಕೊಳಕು ಕಮ್ಮಿಯಾಗಿ ಶುದ್ಧನೀರು ಹೆಚ್ಚಾಗುತ್ತದೆಯಲ್ಲವೇ? ಹಾಗೆಯೇ ಸಮಾಜದ ಕೊಳಕನ್ನು ಮೂಢನಂಬಿಕೆಯನ್ನು ಕಡಿಮೆಮಾಡಬೇಕೆಂದರೆ ನಾವು ಸಮಾದಲ್ಲಿಯೇ ಇರುವ ಧನಾತ್ಮಕ ಅಂಶವನ್ನು ಸಮಾಜಕ್ಕೆ ತೋರಿಸಿಕೊಡಬೇಕಾಗುತ್ತದೆ. ವ್ಯಂಗವು ಎಂದಿಗೂ ಧನಾತ್ಮವಾದ ಪರಿಹಾರವಾಗುವುದೇ ಇಲ್ಲ.

    ಆನೋ ಭದ್ರಾಃ ಕೃತವೋ ಯಂತು ವಿಶ್ವತಃ (ಒಳ್ಳೆಯ ವಿಚಾರಗಳು ಜಗತ್ತಿನ ಎಲ್ಲಡೆಯಿಂದ ಬರಲಿ) ಎಂದು ಘಂಟಾಘೋಷವಾಗಿ ಹೇಳಿದ ಹಿಂದೂ ಸಮಾಜದ ವೈಶಾಲ್ಯವಿಶಿಷ್ಟತೆಯೇ ಹೀಗೆ. ಅದು ಎಲ್ಲವನ್ನೂ ಸ್ವೀಕರಿಸುತ್ತದೆ. ಮತ್ತು ಎಲ್ಲರಿಗೂ ಎಲ್ಲವನ್ನೂ ಹೇಳುವ ಮಾಡುವ ಸ್ವಾತಂತ್ರ್ಯವನ್ನು ತನ್ನ ಪರಿಮಿತಿಯಲ್ಲಿ ಕೊಟ್ಟಿರುವಂಥದ್ದೇ ಆಗಿದೆ.

    ಪ್ರಪಂಚ ಎಷ್ಟೇ ಮುನ್ನಡೆದಿದೆ ಎಂದುಕೊಂಡರೂ ತಿನ್ನುವ ಅನ್ನದಲ್ಲೂ ಕಲ್ಲು ಸಿಗುತ್ತದೆ. ದೋಷಗಳು ಸಹಜವಾದದ್ದು. ಅದನ್ನೇ ದೊಡ್ಡದಾಗಿ ವ್ಯಂಗಮಾಡುತ್ತ ಕಳೆಯುವುದರಲ್ಲಿ ಯಾವ ವಿವೇಕವೂ ಇಲ್ಲ.

    ಜಾಗರಣೆಯು ಹೇಗೆ ಪ್ರಚಲಿತಕ್ಕೆ ಬಂತು? ದೇವರು ಎನ್ನುವ ನಂಬಿಕೆಯಿಂದ ಜನರಿಗಾದ ಲಾಭಗಳೇನು? ತೀರ್ಥಕ್ಷೇತ್ರಗಳ ಭೇಟಿಯ ಹಿಂದಿನ ಉದ್ದೇಶವೇನು? ಸಂಪ್ರದಾಯಗಳ ಆಚರಣೆಗಳ ಸಂಭ್ರಮಗಳ ಸಡಗರಗಳ ಅವಶ್ಯಕತೆಯೇಕಿದೆ? ಹೀಗೆ ನಿಮಗೆ ನೀವೇ ಧನಾತ್ಮವಾದ ಅಂಶಗಳ‌ ಕುರಿತಂತೆ ಯೋಚಿಸಲು ಸಾಧ್ಯವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ಹಾಕಿಕೊಂಡು ಧನಾತ್ಮವಾದ ರೀತಿಯಲ್ಲಿ ಏಕೆ ಯೋಚಿಸಬಾರದು?

    ದೇವರನ್ನು ನಂಬಿದ್ದರಿಂದ ನನ್ನ ಬದುಕಂತೂ ಪ್ರಸನ್ನತೆಯಿಂದ ಕೂಡಿದೆ. ತೀರ್ಥಕ್ಷೇತ್ರಗಳ ಭೇಟಿಯು ವಿವಿಧ ಸ್ಥಳಗಳ ಜನರ ಬದುಕಿನ ವೈಶಿಷ್ಟ್ಯವನ್ನು ನನಗೆ ಮುಟ್ಟಿಸಿ ನನ್ನ ಬದುಕಿಗೆ ಅರಿವನ್ನು ತಂದಿದೆ. ಸಂಪ್ರದಾಯ ಸಂಭ್ರಮ ಸಡಗರ ಹಬ್ಬಗಳ ಆಚರಣೆಗಳು ನನ್ನ ಬದುಕನ್ನು ಎಲ್ಲಿಯೂ ಕಟ್ಟಿಹಾಕದೇ ನನ್ನನ್ನು ಸೃಜನಾತ್ಮವಾಗಿ ಬೆಳೆಯುವಂತೆ ಪ್ರೇರೇಪಿಸಿದೆ. ನೆಮ್ಮದಿಯ ಬದುಕನ್ನು ಕಟ್ಟಿಕೊಟ್ಟಿದೆ.

    ನನಗೂ ಹಬ್ಬಗಳು ಬಂದವು. ನಿಮಗೂ ಬಂದವು. ಇಬ್ಬರೂ ಹಬ್ಬಗಳನ್ನು ನೋಡಿದೆವು. ಆದರೆ ಧನಾತ್ಮಕತೆಯನ್ನು ನೋಡುತ್ತಾ ನೋಡುತ್ತಾ ನಾನು ಕೊನೆಯಲ್ಲಿ‌ ನೆಮ್ಮದಿಯನ್ನು ಕಂಡುಕೊಂಡೆ. ನೀವು ಋಣಾತ್ಮಕ ದೃಷ್ಟಿಯಲ್ಲೇ ನೋಡುತ್ತಾ ವ್ಯಂಗವಾಡಿ ನಿರಾಸೆಯಲ್ಲೇ ಉಳಿಯುವಂತಾಯಿತಲ್ಲವೇ?

    ಹಬ್ಬಗಳನ್ನಾಚರಿಸುತ್ತಾ ಸಂಪ್ರದಾಯಗಳನ್ನು ಅನುಸರಿಸುವುದರಲ್ಲಿ ಸಿಗುವ ಆನಂದವನ್ನು ಬಹುಶಃ ನೀವು ಅನುಭವಕ್ಕೆ ತಂದುಕೊಳ್ಳದ ಕೊರತೆಯೇ ನಿಮ್ಮಲ್ಲಿ ಈ ರೀತಿಯ ಮನಸ್ಥಿತಿಗೆ ಕಾರಣವಾಯಿತೇನೋ ಅನಿಸುತ್ತದೆ.

    ಆತ್ಮೀಯರೇ,
    ವ್ಯಂಗವನ್ನು ಎಲ್ಲದರಲ್ಲೂ ಕಾಣಬಹುದು. ಆದರೆ ಅದು ಪರಿಹಾರವಲ್ಲ. ಒಳಿತನ್ನು ಗಮನಿಸುತ್ತಾ ಧನಾತ್ಮಕವಾಗಿ ಯೋಚಿಸೋಣ. ಬದುಕು ಆನಂದವನ್ನು ಸಂಪಾದಿಸುವುದಕ್ಕಾಗಿ ಇರುವಂಥದ್ದು. ಅಂತಹ ಜೀವನದಲ್ಲಿ ನಾವುಗಳು ವ್ಯಂಗವನ್ನೇ ಅಸ್ತ್ರವನ್ನಾಗಿಸಿಕೊಂಡು ಬದುಕನ್ನು ಮುನ್ನಡೆಸುವುದು ವಿವೇಕಿಗಳಾದ ನಮ್ಮ ಆಯ್ಕೆ ಆಗಬಾರದು.

    ನೀವು ಒಳ್ಳೆಯ ಬರೆಹಗಾರರಿದ್ದೀರಿ. ತಿಳಿದವರಿದ್ದೀರಿ. ಇನ್ನು ಮುಂದಿನ ಬರೆಹಗಳಲ್ಲಿ ಜನರ ನಂಬಿಕೆಗಳಿಗೆ ಘಾಸಿಯಾಗುವಂತೆ ಬರೆಯದೇ, ಜನರನ್ನು ಸತ್‌ಚಿಂತನೆಯೆಡೆಗೆ ಒಳಿತಿನ ಕಡೆಗೆ ಯೋಚಿಸುವಂತೆ ಪ್ರೇರೇಪಿಸುವಂತೆ ಬರೆಯುವಿರೆಂದು ಭಾವಿಸುತ್ತೇನೆ.

    ನಮಸ್ಕಾರ,
    ಸಹೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: