ಪ್ರನುಷಾ ಕುಲಕರ್ಣಿ
ಪಿ.ಎಚ್.ಡಿ ಪದವಿ ಪಡೆಯುವುದು ಜ್ಞಾನಾರ್ಜನೆಗಾಗಿ ಎಂದು ಚಿಕ್ಕವಳಿದ್ದಾಗಿನಿಂದಲೂ ಅಂದುಕೊಂಡಿದ್ದೆ. ಶಿಕ್ಷಕರಾಗಿ ಕೆಲಸ ಮಾಡುವುದು ಒಂದು ಉದಾತ್ತ ವೃತ್ತಿಯಲ್ಲಿ, ಸಮಾಜ ಸೇವೆಯಲ್ಲಿ ತೊಡಗುವುದು ಎಂದು ನಂಬಿದ್ದೆ. ಶಿಕ್ಷಕರನ್ನು ದೇವರ ರೂಪಗಳೆಂದು ನಂಬಿದ್ದೆ.
ಈವಾಗ ಇದೆಲ್ಲ ನೆನಪಿಗೆ ಬಂದರೆ, ನಾನು ಎಷ್ಟು ಮೂರ್ಖಳಿದ್ದೆ ಎನ್ನಿಸುತ್ತೆ. ನಮ್ಮ ಶಿಕ್ಷಣ ವ್ಯವಸ್ಥೆ ಸಮಾಜ ಸೇವೆಯಿಂದ ವ್ಯಾಪಾರಕ್ಕೆ ಮಾರ್ಪಾಡಾಗಿ ಎಷ್ಟೋ ವರ್ಷಗಳಾದವು ಎಂಬುದನ್ನು ಮರೆತಿದ್ದೆ. ಥಟ್ಟನೆ ಕಪಾಳಕ್ಕೆ ಹೊಡೆದಂತೆ ಸತ್ಯ ಯಾವಾಗ ನನ್ನ ಮನಸ್ಸಿನ ಮೇಲೆ ಸಿಡಿದು ಬಿತ್ತೋ, ಆವಾಗ ಗೊತ್ತಾಯಿತು ಶಿಕ್ಷಣವೆಂಬ ವ್ಯಾಪಾರದಲ್ಲಿ, ಸಂಶೋಧಕರ ಸ್ಥಳ ಏನು ಎಂದು.
ನವ ಉದಾರೀಕರಣ ಮತ್ತು ನವ ಉದಾರೀಕರಣ ಮತ್ತು ಉನ್ನತ ಶಿಕ್ಷಣ: ಯಾರಿಗೋಸ್ಕರ ಸಾಮಾಜಿಕ ಸಂಶೋಧನೆ?
ಐ.ಐ.ಎಂ. ಅಹಮದಾಬಾದ್ ನಲ್ಲಿ ಪಿ.ಎಚ್.ಡಿ. ಪದವಿ ಪಡೆಯಲು ನನಗೆ ಸೀಟ್ ಸಿಕ್ಕಾಗ, ನನ್ನ ಖುಷಿ ಎಲ್ಲೇ ಇಲ್ಲದಷ್ಟು. ಇದು ಮೂರು ವರ್ಷಗಳ ಹಿಂದಿನ ಮಾತು. ಚಿಕ್ಕವಳಿದ್ದಾಗಲಿಂದಲೂ ಐ.ಐ.ಟಿ, ಐ.ಐ.ಎಂ ಗಳ ಪ್ರಶಂಸೆ ಕೇಳಿ ಬೆಳೆದ ನನಗೆ, ಐ.ಐ.ಎಂ ಗಳಲ್ಲೇ ಅತ್ತ್ಯುನ್ನತ ಎಂದೆನಿಸಿಕೊಂಡ ಅಹ್ಮದಾಬಾದಿನ ಈ ಸಂಸ್ಥೆಯಲ್ಲಿ, ಸರ್ಕಾರೀ ವಿದ್ಯಾರ್ಥಿ ವೇತನದ ಮೇಲೆ ಐದು ವರ್ಷ ವ್ಯಾಸಂಗ ಮಾಡಲು ಅವಕಾಶ ಸಿಕ್ಕಿದೆ ಎಂದರೆ, ಯಾಕೆ ತಾನೇ ಖುಷಿಯಾಗಲ್ಲ? ಆಗುತ್ತೆ. ಆದರೆ, ನವ ಉದಾರೀಕರಣದ ಛಾಯೆ, ನನ್ನ ಕಲಿಕೆಯ ಮೇಲೆ ಬಿದ್ದ ಮೇಲೆ ಮಾತ್ರವೇ, ಪ್ರಸ್ತುತದಲ್ಲಿ ‘ಶಿಕ್ಷಣ’ ಎಂದರೇನು ಎಂಬುದು ಅರಿವಾಯಿತು. ಏನಿದು ನವ ಉದಾರೀಕರಣ?

ಬಂಡವಾಳಶಾಹಿ ಸಿದ್ಧಾಂತವು ನಮ್ಮ ಜೀವನದ ಎಲ್ಲ ಅಂಶಗಳನ್ನೂ ನಿರ್ಮಾಣಿಸುತ್ತಿದೆ ಎಂಬುದು, ನವ ಉದಾರೀಕರಣದ ವಾದ. ಹೇಗೆ ಅಂತೀರಾ? ಶಿಕ್ಷಣವನ್ನು ಉದಾಹರಣೆಯಾಗಿ ತೊಗೊಳೋಣ. ಬಂಡವಾಳಶಾಹಿ ತರ್ಕದ ಪ್ರಕಾರ, ಶಿಕ್ಷಕರು ಹಾಗು ಸಂಶೋಧಕರು, ಅವರ ಜ್ಞಾನ ನಿರ್ಮಾಣದ ಶ್ರಮವನ್ನು ಶಿಕ್ಷಣ ಸಂಸ್ಥೆ/ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗು ವಿದ್ಯಾರ್ಥಿಗಳು, ಈ ಶ್ರಮವನ್ನು ದುಡ್ಡು ಕೊಟ್ಟು ಕೊಳ್ಳುತ್ತಿದ್ದಾರೆ. ಇದರಲ್ಲೇನಿದೆ ಸಮಸ್ಯೆ ಅಂತೀರಾ?
ಶಿಕ್ಷಣ ಎಂಬುದು ಸಾರ್ವಜನಿಕ ಸರಕು, ಅದು ಎಲ್ಲರಿಗೂ ಸಮಾನವಾಗಿ ದೊರಕಬೇಕು, ಹಾಗು ಶಿಕ್ಷಕರು ಸಾರ್ವಜನಿಕ ಹಿತಾಸಕ್ತಿಗಾಗಿ ಜ್ಞಾನವನ್ನು ರಚಿಸಿ ಹಂಚಬೇಕು ಎಂಬ ಮಹತ್ತರ ಮೌಲ್ಯಗಳು, ನಮ್ಮ ಸಮಾಜವನ್ನು ಆಳುತ್ತಿದ್ದವು. ನಮ್ಮ ಸಂವಿಧಾನದಲ್ಲಿಯೂ ಕೂಡ ಶಿಕ್ಷಣದ ಹಕ್ಕನ್ನು, ಮೂಲಭೂತ ಹಕ್ಕನ್ನಾಗಿ ಎಲ್ಲ ೬ರಿಂದ ೧೨ ವರ್ಷಗಳ ಮಕ್ಕಳಿಗೆ ಕಲ್ಪಿಸಿದೆ.
ಉನ್ನತ ಶಿಕ್ಷಣವನ್ನು ಭಾರತದಲ್ಲಿ ಸರ್ಕಾರ ಉಚಿತವಾಗಿ ಒದಗಿಸದೆ ಇದ್ದಲ್ಲಿ, ಶಿಕ್ಷಣ ಬಂಡವಾಳವಾಗಿ ಮಾರ್ಪಾಡಾಗಿದೆ. ಹೀಗಿದ್ದಾಗ, ‘ಪ್ರಕಟಿಸು ಅಥವಾ ನಶಿಸು’ ಎಂಬ ವಿಷಕಾರಿ ಸಾಂಸ್ಥಿಕ ಸಂಸ್ಕೃತಿಯಲ್ಲಿ ಬಳಲುತ್ತಿರುವ ಶಿಕ್ಷಕರು ಹಾಗು ಸಂಶೋಧಕರು, ಹೇಗೆ ಸಮಾಜಮುಖಿಯಾಗಿರಲು ಸಾಧ್ಯ? ಅವರೇ ಅವರವರಲ್ಲಿ ತೀವ್ರ ಸ್ಪರ್ಧೆಯಲ್ಲಿ ತೊಡಗಿರುವಾಗ, ವಿದ್ಯಾರ್ಥಿಗಳಿಗೆ ಹಾಗು ಸಮಾಜಕ್ಕೆ ಹೇಗೆ ಸಹಾಯ ಮಾಡಬಲ್ಲರು?
ಪ್ರಕಟಿಸಬೇಕೆಂದು ಅನಿವಾರ್ಯವಾಗಿ, ಸಂಶೋಧನಾ ಲೇಖನಗಳನ್ನು ಲೆಕ್ಕವಿಲ್ಲದೆ, ಸುತ್ತಿ ಬಳಸಿ ಹೇಳಿದ್ದೆ ಹೇಳಿ, ಬಡ್ತಿಗಾಗಿ ಪ್ರಕಟಿಸಿಲು ಎಲ್ಲಿಲ್ಲದ ಹಡಾವಿಡಿ ಈಗಿನ ಶಿಕ್ಷಕರಲ್ಲಿ ಹಾಗು ಸಂಶೋಧಕರಲ್ಲಿ ನೋಡಲಿಕ್ಕಿದೆ. ಪರಸ್ಪರ ಸಹಯೋಗಕ್ಕಿಂತ, ಅನಾರೋಗ್ಯಕರ ಸ್ಪರ್ಧಾತ್ಮಕ ಮನೋಭಾವವೇ ತೀವ್ರವಾಗಿದೆ. ಸಂಶೋಧಕರಿಗೆ ‘ಪೀರ್ ರಿವೀವಡ್ ಜರ್ನಲ್ಸ್’ ಗಳಲ್ಲಿ (peer reviewed journals) ಲೇಖನಗಳನ್ನು ಪ್ರಕಟಿಸದಲ್ಲಿ, ಕೆಲಸ ಸಿಗುವುದು ಅಸಾಧ್ಯ. ಈ ವಿಷಕಾರಿ ಚಕ್ರವ್ಯೂಹದಲ್ಲಿ ಸಿಲುಕಿ ಎಷ್ಟೋ ಸಂಶೋಧಕರು, ಶಿಕ್ಷಕರು, ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ‘ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ’ ಅಂದ ಹಾಗೆ, ಇದೆಲ್ಲದರ ಲಾಭ ಪಡೆಯುತ್ತಿರವುದು ‘ಎಲ್ಸೀವಿಯರ್’ (Elsevier), ‘ಸೆಜ್’ (Sage), ‘ಸ್ಪ್ರಿಂಗರ್’ (Springer), ‘ಟೈಲರ್ ಅಂಡ್ ಫ್ರಾನ್ಸಿಸ್’ (Taylor & Francis), ಎಂಬಂತಹ ದೈತ್ಯ ಪ್ರಕಾಶಕರು. ಅದು ಹೇಗೆ?
ವಿಶ್ವದ ಎಲ್ಲ ದೊಡ್ಡ ವಿಶ್ವವಿದ್ಯಾಲಯಗಳು, ಕಡ್ಡಾಯವಾಗಿ ಈ ಪ್ರಕಾಶಕರು ಪ್ರಕಟಿಸುವ ಜರ್ನಲ್ಸ್ ಗಳ ಚಂದಾದಾರರಾಗಿದ್ದರೆ. ಇದುವೇ ಈ ಕಂಪನಿಗಳ ಮುಖ್ಯ ಆದಾಯದ ಮೂಲ. ಈ ಜರ್ನಲ್ಸ್ ಗಳಲ್ಲಿ ಪ್ರಕಟಿಸಿದರೆ ಮಾತ್ರ ಅದು ‘ಅಧಿಕೃತವಾದ ಜ್ಞಾನ’ ಎಂದು ನಂಬಿದ್ದಾರೆ, ಸಂಶೋಧಕರು, ಶಿಕ್ಷಕರು, ಹಾಗು ವಿಶ್ವವಿದ್ಯಾಲಯಗಳು. ಇದರ ಸಮಸ್ಯೆ ಹೀಗಿದೆ:

ಈ ಜರ್ನಲ್ಸ್ ಗಳು ಸಾಮಾನ್ಯ ಜನರಿಗೆ ದುರ್ಗಮ. ಅವುಗಳ ದುಬಾರಿ ಬೆಲೆಯಷ್ಟೇ ಅಲ್ಲ, ಈ ಲೇಖನಗಳಲ್ಲಿ ಬಳಸಲಾಗುವ ಸಂಕೀರ್ಣವಾದ ಆಂಗ್ಲ ಭಾಷೆ ಬಹುತೇಕ ಜನರಿಗೆ ತಿಳಿಯಲ್ಲ. ಸಾರ್ವಜನಿಕರ ತೆರಿಗೆ ಹಣದಿಂದ ವಿಶ್ವವಿದ್ಯಾಲಯಗಳಿಗೆ ಬಂಡವಾಳ ನೀಡಿ, ಅವರುಗಳಿಗೇ ಕೈಗೆಟಕದ ಹಾಗೆ ಜ್ಞಾನ ನಿರ್ಮಾಣ ನಡೆಯುತ್ತಿದೆ ಅಂದರೆ, ಯಾರಿಗೋಸ್ಕರ ಈ ವಿಶ್ವವಿದ್ಯಾಲಯಗಳು? ಯಾರಿಗೋಸ್ಕರ ಈ ಸಂಶೋಧನೆಗಳು? ಹೀಗಿರುವಾಗ, ವಿಶ್ವವಿದ್ಯಾಲಯಗಳನ್ನು ಸಮಾಜಮುಖಿ ಸಂಸ್ಥೆಗಳೆನ್ನಬಹುದೇ? ಹೀಗಿರುವಾಗ ಪಿ.ಎಚ್.ಡಿ ಪದವಿಯು ಹಾಗು ಶಿಕ್ಷಕರ ವೃತ್ತಿಯು, ಕೇವಲ ಅವರ ಸ್ವಾರ್ಥ ಗುರಿಯಾಗದೆ, ಸಂಶೋಧನೆಯನ್ನು ಮತ್ತು ಶಿಕ್ಷಣವನ್ನು ಸಮಾಜಕ್ಕೆ ಉಪಯೋಗವಾಗುವಂತೆ ಬಳಸಲು ಹೇಗೆ ಸಾಧ್ಯ?
‘ಪ್ರಭಾವಕ್ಕಾಗಿ ಸಂಶೋಧನೆ’ – ಒಂದು ಸಂಭವನೀಯ ಉಪಾಯ
ಸಾಮಾಜಿಕ ವಿಜ್ಞಾನಗಳಲ್ಲಿ ಸಂಶೋಧನೆಯನ್ನು ಎರಡು ರೂಪಗಳಲ್ಲಿ ಮಾಡಬಹುದು. ಸಮಾಜದ ಯಾವ ಸಮುದಾಯದ ಬಗ್ಗೆ ಸಂಶೋಧನೆ ನಡೆಯುತ್ತಿದೆಯೋ, ಆ ಸಮುದಾಯದ ಜನರ ‘ಮೇಲೆ’ ಸಂಶೋಧನೆ ಮಾಡುವುದು, ಅಥವಾ ಅವರ ‘ಜೊತೆಗೆ’ ಸಂಶೋಧನೆ ಮಾಡುವುದು. ಇವೆರಡರ ಮಧ್ಯದ ಅಂತರ – ಸಂಶೋಧಕರು ಮತ್ತು ಜನರ ನಡುವಿನ ಅಧಿಕಾರದ ಅಸಮತೋಲನ.
ಜನರ ‘ಜೊತೆಗೆ’ ಸಂಶೋಧನೆ ಮಾಡುವುದು ಎಂದರೆ, ಸಂಶೋಧನಾ ಪ್ರಶ್ನೆಯನ್ನು ಜನರ ಜೊತೆಗೆ ರಚಿಸುವುದು, ಹಾಗು ಆ ಪ್ರಶ್ನೆಗೆ ಸಮಂಜಸ ಪರಿಹಾರವನ್ನು ಜನರ ಜೊತೆಗೆ, ಅವರಿಗೆ ನೆರವಾಗುವಂತೆ, ಅವರ ಅಗತ್ಯಗಳ ಪೂರೈಕೆಯಾಗುವಂತೆ, ಹಾಗು, ಅವರ ಜೀವನ ನಿರ್ವಹಣೆಯ ಅಧಿಕಾರವನ್ನು ಅವರೇ ಚಲಾಯಿಸುವಂತೆ ನೋಡಿಕೊಳ್ಳೋ ಸಂಶೋಧನಾ ವಿನ್ಯಾಸವನ್ನು ರಚಿಸುವುದು. ಇದುವೇ ಪ್ರಜಾಪ್ರಭುತ್ವಕ ಸಂಶೋಧನೆ.
ಇದರ ತದ್ವಿರುಧ್ಧ ಸಂಶೋಧನಾ ವಿನ್ಯಾಸ, ಜನರ ‘ಮೇಲೆ’ ಸಂಶೋಧನೆ ಮಾಡುವುದು. ಅಂದರೆ, ಜನರ ಸಂಶೋಧನೆಯಲ್ಲಿ ಭಾಗವಹಿಸುವಿಕೆ, ಕೇವಲ ‘respondents’ಗಳಾಗಿ. ಈ ವಿನ್ಯಾಸದಲ್ಲಿ, ಸಂಶೋಧಕರಿಗೆ ‘ತಜ್ಞ’ರೆಂದು (experts) ಜನರ ಮೇಲೆ, ಅವರ ಜೀವನದ ಮೇಲೆ, ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಉಂಟು.
ಇವೆರಡೂ ಸಂಶೋಧನಾ ವಿನ್ಯಾಸಗಳಲ್ಲಿ, ‘ಪ್ರಭಾವಕಾರಿ ಸಂಶೋಧನೆ’ (Research for impact) ಎಂದು ಯಾವುದಕ್ಕೆ ಹೇಳಬಹುದು? ಜನರ ‘ಜೊತೆ’ ಮಾಡುವುದಕ್ಕೋ, ಅಥವಾ ಜನರ ‘ಮೇಲೆ’ ಮಾಡುವುದಕ್ಕೋ? ನಾವು ಪ್ರಜಾಪ್ರಭುತ್ವ ಎಂದೆನಿಸಿಕೊಂಡ ಸಮಾಜವೆಂದರೆ, ಜನರ ಜೊತೆ, ಜ್ಞಾನವನ್ನು ‘ಸಹ ಸೃಷ್ಟಿ’ ಮಾಡಬೇಕು. ‘ನಾವೇ ಪಂಡಿತರು, ನಮ್ಮನ್ನು ಬಿಟ್ಟು ಬೇರೆಯವರೆಲ್ಲ ಮೂರ್ಖರು’ ಎಂಬ ಅಹಮ್ಮಿನಿಂದ ಸಂಶೋಧನೆ ಮಾಡಿದರೆ, ಶಿಕ್ಷಣದ, ಸಂಶೋಧನೆಯ ಅರ್ಥವೇ ವ್ಯರ್ಥ. ಪ್ರಭಾವಶಾಲಿ ಸಂಶೋಧನೆಯೆಂದರೆ, ಜನರ ಜೊತೆ ಜ್ಞಾನವನ್ನು ರಚಿಸುವುದು. ಪ್ರಕಟಿಸುವ ಇಲಿ ಓಟದಲ್ಲಿ ತೊಡಗಿದ ಸಂಶೋಧಕರಲ್ಲಿ, ಶಿಕ್ಷರಲ್ಲಿ ಈ ಅರಿವು ಮೂಡಿದರೆ, ನಮ್ಮ ಸಮಾಜದ ಅಭಿವೃದ್ಧಿ ಸಮಗ್ರವಾಗಿ ಆದೀತು ಎಂದು ನನ್ನ ಅನಿಸಿಕೆ.






ಬಹಳ ಪ್ರೌಢ ಬರಹ. ಇಂತಹ ಉತ್ತಮ- ಸಕಾಲಿಕ ಬರಹವನ್ನು ಬರೆದ ತಮಗೆ ಅಭಿನಂದನೆಗಳು
ನಿಮ್ಮ ಸಲಹೆ ನನಗೆ ಹಿಡಿಸಿತು ಸರ್ ನಾನು ಶೈಕ್ಷಣಿಕ ಮನೋವಿಜ್ಞಾನದಲ್ಲಿ ಸಂಶೋಧನೆ ಮಾಡಲು ನನಗೆ ತುಂಬಾ ಆಸಕ್ತಿಯಿದೆ ಕಾರಣ ನನಗೆ ಒಂದಿಷ್ಟು ಸಲಹೆ ಕೊಡುವಿರೆಂದು ತಮ್ಮಲ್ಲಿ ವಿನಂತಿ.
ಸತ್ಯದ ಅನಾವರಣ. ಅಪ್ರಿಯ ಸತ್ಯವನ್ನು ಹೇಳುವುದಕ್ಕೆ ಹಿಂಜರಿಕೆ ಎಲ್ಲಿಯೂ ಕಾಣಲಿಲ್ಲ. ಇಷ್ಟವಾಯಿತು.
ಈ ಪರಿಸ್ಥಿತಿ ತಪ್ಪಿಸಲು ಚಿಂತನೆ ನಡೆಯಬೇಕು ಮತ್ತು ಜಾರಿಯಾಗಬೇಕು.
ಈಗ impact factor ಗಳನ್ನು ಸಂಶೋಧನಾ ಪ್ರಾಜೆಕ್ಟ್ಗಳನ್ನು ನೀಡಲು ಮತ್ತು ನೇಮಕಾತಿಯಲ್ಲಿ ಬಳಸದಂತೆ ವಿದೇಶಗಳಲ್ಲಿ ಪ್ರಯತ್ನಗಳು ನೆಡೆಯುತ್ತಿವೆ. ಉದಾಹರಣೆಗೆ DORA ಇನ್ನೂ ಮುಂತಾದ ಹೊಸ ಪ್ರಯತ್ನಗಳು ನೆಡೆಯುತ್ತಿವೆ. Impact factor ನೀಡುವ Web of Science ಮತ್ತು Scopus databases ಗಳು ಅಮೆರಿಕಾ ಮತ್ತು ಯುರೋಪ್ ಕೇಂದ್ರಿತ ಸಂಶೋಧನೆ ಬರಹಗಳನ್ನು ಮತ್ತು ನಿಯತಕಾಲಿಕೆಗಳನ್ನು ಒಳಗೊಂಡಿವೆ ಎನ್ನುವ ಬಗ್ಗೆ ಬಲವಾದ ಟೀಕೆಗಳಿವೆ. ಇದಕ್ಕೆ ದಕ್ಷಿಣ ಅಮೆರಿಕಾ ರಾಷ್ಟ್ರಗಳು ತಮ್ಮದೇ ಜರ್ನಲ್ ಗಳನ್ನು ಪ್ರಕಟಿಸುತ್ತಿವೆ ಜೊತೆಗೆ ತಮ್ಮದೇ ಭಾಷೆಗಳಿಗೆ ಒತ್ತು ನೀಡುತ್ತಿವೆ.
ಇತ್ತೀಚಿಗೆ preprints ಗಳು ಉದಾಹರಣೆಗೆ medrxiv ಮತ್ತು biorxiv ಸಂಶೋಧಕರಿಗೆ ತಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು ಮುಕ್ತ ವೇದಿಕೆಗಳನ್ನು ಕಲ್ಪಿಸಿವೆ. Peer reviewed journalಗಳ ನಿಧಾನಗತಿ ಪ್ರಕಟಣೆಗೆ ಇವು ಸಡ್ಡು ಹೊಡೆದಿವೆ. ಈಗ peer reviews ಗಳಲ್ಲಿ ಅನೇಕ ಬದಲಾವಣೆಯಾಗುತ್ತಿದೆ.
ಇನ್ನೂ Elsevier, Springer, ಇನ್ನೂ ಮುಂತಾದ ಪ್ರಕಾಶಕರ ಅಧಿಕ ಲಾಭವನ್ನು ಪ್ರಶ್ನಿಸಿ ಅನೇಕ ವಿಶ್ವವಿದ್ಯಾಲಯಗಳು ಅವುಗಳ subscribeಗಳನ್ನು ನಿಲ್ಲಿಸುತ್ತಿವೆ ಜೊತೆಗೆ ಕಜಕಸ್ತಾನದ Alexandra Elbakyan ನಮ್ಮಂತಹ ದೇಶಗಳಲ್ಲಿ ಸಂಶೋದನಾ ಲೇಖನಗಳು ಸಿಗುತ್ತಿಲ್ಲ ಮತ್ತು ಬಡ ರಾಷ್ಟ್ರಗಳು ಇವುಗಳನ್ನು ತಮ್ಮ ಸಂಶೋಧಕರಿಗೆ ಒದಗಿಸಲು ಸಾಧ್ಯವಿಲ್ಲ ಎಂದು sci-hub ಎನ್ನುವ pirate ವೆಬ್ಸೈಟ್ ಪ್ರಾರಂಭಿಸಿದ್ದಾರೆ ಬಹುತೇಕ ಎಲ್ಲಾ ಪ್ರಕಾಶಕರ ಲೇಖನಗಳು ಉಚಿತವಾಗಿ ಸಿಗುವಂತೆ ಮಾಡಿದ್ದಾರೆ. ಕಾಫಿರೈಟ್ ಉಲ್ಲಂಘನೆಯ ಮೇಲೆ ಅಮೆರಿಕಾದಲ್ಲಿ ಮತ್ತು ಭಾರತದಲ್ಲಿ ಇನ್ನೂ ಅನೇಕ ದೇಶಗಳಲ್ಲಿ ಅವರ ಮೇಲೆ ದೂರುಗಳನ್ನು Elsevier ಮತ್ತು ಇನ್ನೂ ಅನೇಕ ಪ್ರಕಾಶಕರು ಹಾಕಿದ್ದಾರೆ ಅದರೆ ಅವರು ಅದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಒದೊಂದು ಮುಕ್ತ ಜ್ಞಾನದ ಕ್ರಾಂತಿಕಾರಿ ನೆಡೆ.
ತುಂಬ ಚೆನ್ನಾಗಿ ನಿರೂಪಿಸಿದೀರಿ ಮೇಡಂ
ನಿಮ್ಮ ಸಲಹೆ ನನಗೆ ಹಿಡಿಸಿತು ಸರ್ ನಾನು ಶೈಕ್ಷಣಿಕ ಮನೋವಿಜ್ಞಾನದಲ್ಲಿ ಸಂಶೋಧನೆ ಮಾಡಲು ನನಗೆ ತುಂಬಾ ಆಸಕ್ತಿಯಿದೆ ಕಾರಣ ನನಗೆ ಒಂದಿಷ್ಟು ಸಲಹೆ ಕೊಡುವಿರೆಂದು ತಮ್ಮಲ್ಲಿ ವಿನಂತಿ.