ಶಿಕಾರಿಯ ಅಕ್ಷರ ಚಿತ್ರ

ಒಮ್ಮೆ ಪಶ್ಚಿಮ ಘಟ್ಟಗಳ ಕಾನನಕ್ಕೆ ಬನ್ನಿ. ಜೀ ಎನ್ನುವ ಜೀರುಂಡೆ, “ಮಲೆಗಳಲ್ಲಿ ಮದುಮಗಳು”ವಿನಲ್ಲಿ ಮಿಣುಕುವ ಮಿಂಚುಹುಳು… ಇವೆಲ್ಲವನ್ನೂ ಮೀರಿಸುವಂತೆ ಹುಲಿ, ಚಿರತೆಗಳು ಕಾಣಿಸುತ್ತವೆ.
 
ಅದರಲ್ಲೂ ಸುಳ್ಯದ ಮಲೆಗಳಿಗೆ ಕಾಲಿಟ್ಟರೆ ಕಾಡುಹಂದಿ ಕೋರೆ ಮುಸುಡಿ ತೋರಿಸುತ್ತ ಹೆದರಿಸಿ, ಕಾಡೊಳಗೆ ಪರಾರಿಯಾಗುತ್ತದೆ. ಹಾಂ, ಕಾಡುಹಂದಿ ಎಂದಿರಾ? ಇಡೀ ಸುಳ್ಯಕ್ಕೆ ಸುಳ್ಯದ ಮೂಗಿನ ಹೊಳ್ಳೆಯೇ ದೊಡ್ಡದಾಗಿಬಿಟ್ಟಿದೆ. ಮನೆಯಲ್ಲಿನ ತುಪಾಕಿ ಹೆಗಲಿಗೇರಿಸಿ ಒಂದಿಷ್ಟು ಸೇಂದಿ ಜೊತೆ ಮಾಡಿಕೊಂಡು ಗಂವೆನ್ನುವ ಕತ್ತಲಲ್ಲಿ ಕರಗಿ ಹೋದರೆ, ನಾಳೆ ಮಸಾಲೆ ಅರೆಯಲು ಮುನ್ನುಡಿ ಬರೆಯಲಾಗುತ್ತದೆ ಎಂದೇ ಅರ್ಥ.   

ಬೇಟೆ ಇರಬೇಕು ಎನ್ನುತ್ತೀರಾ, ಬೇಡ ಎನ್ನುತ್ತೀರಾ? ಆ ಚರ್ಚೆಯನ್ನೆಲ್ಲ ಪಕ್ಕಕ್ಕೆ ಸರಿಸಿ, ಪುಸ್ತಕದ ಪುಟಗಳ ಮೂಲಕವೇ ಕಾಡು ಬೇಟೆಯ ಥ್ರಿಲ್ ಅನುಭವಿಸಬೇಕೆಂದರೆ ಕೆದಂಬಾಡಿ ಜತ್ತಪ್ಪ ರೈಗಳನ್ನು ನೆನಪಿಸಿಕೊಳ್ಳಿ. ಜಿಮ್ ಕಾರ್ಬೆಟ್ ಬೇಟೆಯ ಬಗ್ಗೆ ಬರೆದದ್ದು ಕನ್ನಡದ ಕೈಗೆಟುಕಿದ್ದು ಅಷ್ಟಕ್ಕಷ್ಟೆ. ಇದಕ್ಕಿಂತ ಹೆಚ್ಚಾಗಿ ತೇಜಸ್ವಿ, ನಾಯಿ ಕಿವಿಯನ್ನು ಮುಂದೆ ಬಿಟ್ಟುಕೊಂಡು ಶ್ರೀರಾಮ್, ರಾಮದಾಸ್ ಅವರೊಂದಿಗೆ ನಡೆಸುತ್ತಿದ್ದ ಹಂದಿಬೇಟೆಯೇ ಆಹಾ ಎನ್ನುವಂತಿದೆ. ಕನ್ನಡದ ಪರಿಸರದಲ್ಲಿಯೇ ನಡೆದ ಬೇಟೆಯ ಬಗ್ಗೆ ರುಚಿ ಹತ್ತಿಸಿದ್ದೇ ಈ ರೈ ಅಜ್ಜ. ಹೇಳಿ ಕೇಳಿ ಗತ್ತಿನ ಗುತ್ತುಗಳಲ್ಲಿ ಅರಳಿದ ಜತ್ತಪ್ಪ ರೈ, ಕಾಡುಗಳಲ್ಲಿ ಒಡನಾಡಿದ್ದನ್ನು ಪುಸ್ತಕಕ್ಕೆ ತಂದಿದ್ದಾರೆ.

ಬೇಟೆ ಮಾಡಿ ಮೀಸೆ ತಿರುವಿ ಪ್ರಾಣಿಯ ಮೇಲೆ ಕಾಲಿಟ್ಟು ಫೊಟೊ ಹೊಡೆಸಿಕೊಂಡು ಮನೆಗೋಡೆಗೆ ಅದರ ಮುಖವನ್ನು ಜೋತುಹಾಕಿದವರ ಸಂಖ್ಯೆ ಸಾಲು ಸಾಲಾಗಿದೆ. ಇಷ್ಟೆಲ್ಲ ಮಾಡಿಯೂ ಜೊತೆಗೆ ಪುಸ್ತಕವನ್ನೂ ಬರೆದ ಹೆಗ್ಗಳಿಕೆ ಕೆದಂಬಾಡಿಯ ಈ ಬೆಳೆಗಾರನದ್ದು. ಕೆದಂಬಾಡಿ ನಮ್ಮೊಂದಿಗಿಲ್ಲ. ಕನ್ನಡ ಸಾಹಿತ್ಯಕ್ಕೆ ಬೇಟೆಯ ಅಡುಗೆ ಬಡಿಸಿದ ಆ ಅಜ್ಜನನ್ನು ನೆನೆಯುತ್ತ, ಇದರ ಪರಿಮಳ ಇನ್ನಷ್ಟು ಬೇಕಾದರೆ ಉಪನ್ಯಾಸಕ ನರೇಂದ್ರ ರೈ ದೇರ್ಲ ನಡೆಸಿದ ಅಧ್ಯಯನದತ್ತ ಕಣ್ಣು ಹಾಯಿಸಿ. ಬೋಳಂತಕೋಡಿ ಈಶ್ವರ ಭಟ್ಟರ ಪುತ್ತೂರು ಕರ್ನಾಟಕ ಸಂಘ ಈ ಪುಸ್ತಕವನ್ನು ಪ್ರಕಟಿಸಿದೆ.          

‍ಲೇಖಕರು avadhi

June 16, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: