ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಮಣ್ಣ ಹೇಳಿದ ಗೋಪಾಲಗೌಡರ ಕತೆಗಳು


ಚಿತ್ರಗಳು: ನಭಾ ಒಕ್ಕುಂದ ಮತ್ತು ಸಂದೀಪ್ 
ನನಗೆ ಗೋಪಾಲಗೌಡರು ಮೊದಲು ಪರಿಚಯವಾಗಿದ್ದು ನಾನು ಆರನೇ ಕ್ಲಾಸಿನಲ್ಲಿದ್ದಾಗ. ನನ್ನ ಆರನೇ ಕ್ಲಾಸಿನ ಕನ್ನಡ ಪಠ್ಯಪುಸ್ತಕದ ಐದನೇ ಪಾಠದ ಹೆಸರು “ಶಾಂತವೇರಿ ಗೋಪಾಲಗೌಡರು. ಬರೀ ಪ್ರಬುದ್ಧತೆಯ ನೀತಿಕಥನಗಳೇ ಒಂದೆರೆಡು ಪದ್ಯಗಳು ತುಂಬಿಹೋಗಿದ್ದ ಕನ್ನಡ ಪುಸ್ತಕದಲ್ಲಿ ಗೋಪಾಲಗೌಡರು ಹೇಗೋ ನುಸುಳಿಬಿಟ್ಟಿದ್ದರು. ಸಂಜೆಯ ಇಳಿಮೋಡದಂತ ಸಣ್ಣಗಿನ ಕಪ್ಪುಮುಖ,  ಹೊಳೆಯುವ ಕಣ್ಣುಗಳು. ಚೊಕ್ಕವಾದ ಕ್ರಾಪು. ಗೋಪಾಲಗೌಡರು ನಿಜಕ್ಕೂ ತೊಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ, ಪುಸ್ತದಲ್ಲಿ ಮಾತ್ರ ಅಂದಗಾಣುವಂತ ಒಂದು ಕಪ್ಪುಕೋಟನ್ನು ತೊಟ್ಟಿದ್ದರು. ಅದೂ ಅವರಿಗೆ ಒಪ್ಪುತ್ತಿತ್ತು.
ಪುಸ್ತಕದ ಹಾಳೆಯಲ್ಲಿದ್ದ ಗೋಪಾಲಗೌಡರು ಹಾಗೇ ಉಳಿದುಹೋಗಿದ್ದಾರೆ. ಈಗಲೂ ನನಗೆ ಗೋಪಾಲಗೌಡರು ಎಂದ ತಕ್ಷಣವೇ ಥಟ್ಟೆಂದು ಹೊಳೆದುಬಿಡುವ ಚಿತ್ರವದು.
ಇದು ಶಾಂತವೇರಿ ಗೋಪಾಲಗೌಡರೊಂದಿಗಿನ ನನ್ನ ಮೊದಲ ಭೇಟಿ. ಇದಾದ ನಂತರ ಗೋಪಾಲಗೌಡರ ಕುರಿತು ಮೈಸೂರಿನ ನಿರಂತರದಲ್ಲಿ ಸಾಕಷ್ಟು ಕೇಳಿದ್ದೇನೆ. ಒಂದಿಷ್ಟು ಓದುವ ಪ್ರಯತ್ನಗಳು ನಡೆದಂತೆ ಮೈಸೂರಿನಲ್ಲಿ ರಂಗಕರ್ಮಿಗಳು, ಎಪ್ಪತ್ತರ ದಶಕದಲ್ಲಿ ರಾಜಕೀಯವನ್ನು ಹತ್ತಿರದಿಂದ ಕಂಡವರು ಗೋಪಾಲಗೌಡರ ಕುರಿತು ಹೇಳಿದ ಮಾತುಗಳನ್ನು ಕೇಳಿದ್ದೇನೆ. ಆ ಎಲ್ಲರೂ ಗೋಪಾಲಗೌಡರ ಕುರಿತು ಮಾತನಾಡುತ್ತಾ ಏನನ್ನೋ ವಿವವರಿಸುವಾಗಲೂ ನನ್ನ ಪುಸ್ತಕದಲ್ಲಿದ್ದ ಗೋಪಾಲಗೌಡರು ಮರುಜೀವ ತಳೆದು ಚಲಿಸುತ್ತಿದ್ದಂತೆ ಕಂಡುಬಿಡುತ್ತಿತ್ತು. ಆ ಎಲ್ಲಾ ಮಾತುಗಳ ಬಳಿಕ ಗೋಪಾಲಗೌಡರ ಕುರಿತು ಬದುಕಿನ ನಿತ್ಯ ಪಾಠದಂತಹ ಮಾತುಗಳನ್ನು ನನಗೆ ಇತ್ತೀಚೆಗೆ ಹೇಳಿದ್ದು ಕಡಿದಾಳು ಶಾಮಣ್ಣ.
***
ಶಿವಮೊಗ್ಗದ ಭಗವತಿಕೆರೆಯ ತೋಟದಲ್ಲಿದ್ದೆ. ಎಷ್ಟೋ ಹೊತ್ತಿನ ನಂತರ ಸಣ್ಣ ಕೋಲುಹಿಡಿದು ಅದು ಏನನ್ನೋ ಕೆದಕುವಂತೆ ಕಡಿದಾಳು ಶಾಮಣ್ಣ ನಡೆದುಬಂದರು. ಅವರು ತೊಟ್ಟಿದ್ದ ಖಾದಿಅಂಗಿ ಹೀಗೆ ಅಚಾನಕ್ಕಾಗಿ ಹುಡುಕಿ ಬಂದವರಿಂದ ತಪ್ಪಿಸಿಕೊಳ್ಳಲು ಮಾಡಿಟ್ಟುಕೊಂಡಿದ್ದ ಸಭ್ಯ ದೇಸಿ ಬೋನಿನಂತೆ ಕಾಣುತ್ತಿತ್ತು. ಚಿತ್ತಾರತುಂಬಿದ ವೃತ್ತಕಾರದ ಟೋಪಿ, ಹೆಗಲಿಗೆ ಹಸಿರು ಬಣ್ಣದ ಶಾಲು ಇಳಿಸಿಕೊಂಡು ನಡೆದು ನಿಧಾನವಾಗಿ ಬಂದರು. ಅವರು ಹತ್ತಿರವಾದಷ್ಟೂ ಸಣ್ಣ ಹಿಮದ ರಾಶಿಯಂತಹ ಅವರ ಬಿಳಿಯ ಗಡ್ಡ ಫಳಫಳನೆ ಇನ್ನಷ್ಟು ಹೊಳೆಯಲಾರಂಭಿಸಿತು.
***
ಹೊರಗೆ ಸಣ್ಣದಾಗಿ ಮಳೆಯಾಗುತ್ತಿತ್ತು. ಚಳಿಗೆ ಮೈ ನಡುಗಿಸುತ್ತಿದ್ದೆ.‌ ಈ ನಡುವೆ ನಮ್ಮಿಬ್ಬರ ಮಾತುಗಳು ತಾವಾಗೇ ಮೊದಲಾದವು. ಕಾಡುತೊರೆಯ ಜಾಡು ಶಾಮಣ್ಣ ಎಲ್ಲವನ್ನೂ ಆಲಿಸುತ್ತ, ಒಂದಿಷ್ಟು ಮಾತನಾಡುತ್ತಾ ಎದುರು ಕುಳಿತಿದ್ದರು. ಮಾತುಗಳು ಹದವಾದ ಸ್ಥಿತಿಯನ್ನು ತಲುಪುತ್ತಿದೆ ಎನಿಸಿದ ಕೂಡಲೇ ಶಾಮಣ್ಣ,  ನಿಮಗೆ ಗೋಪಾಲಗೌಡರು ಎಂದ ತಕ್ಷಣ ಏನು ನೆನಪಾಗುತ್ತದೆ ಎಂದು ಕೇಳಿದೆ. ‌ಅಲ್ಲಿಯವರೆಗೂ ಪುಂಡ ಮಗುವಿನ ರೀತಿ ಒಂದರ ಹಿಂದೆ ಮತ್ತೊಂದು ಎನ್ನುವಂತೆ ಮಾತನಾಡುತ್ತಲೇ ಇದ್ದ ಶಾಮಣ್ಣ ಒಂದು ಕ್ಷಣ ತಡೆದು, ಒಂದಿಷ್ಟು ಧ್ಯಾನಿಸಿ, ಒಳಗೇ ಬಡಿದಾಡಿದವರಂತೆ ಮಾಡಿ ಕಡೆಗೆ ಸಾವರಿಸಿಕೊಂಡು, ಗೌಡರು ಎಂದ ತಕ್ಷಣ ನೆನಪಾಗುವುದು ನಾನು ಹಾಕಿದೀನಿ ಅಲ್ವಾ ಈ ಜುಬ್ಬಾ, ಖಾದಿಯದು. ಇದು ಎಂದರು.
ಆಮೇಲೆ? ಎಂದು ಮಾತು ಮುಂದುವರೆಸಿದೆ.
ಅಮೇಲೆ ಗೋಪಾಲಗೌಡರು ತೊಡುತ್ತಿದ್ದರಲ್ಲ ಅವರ ಖಾದಿ ಜುಬ್ಬಾ ಮತ್ತು ಅವರ ಪಂಚೆ ಎಂದರು. ಮತ್ತೆನೋ ಕೇಳಬೇಕು ಎನ್ನುವಷ್ಟರಲ್ಲಿ ಶಾಮಣ್ಣ ತತ್ ಕ್ಷಣವೇ ನಿನಗೆ ಗೋಪಾಲಗೌಡರ ಜುಬ್ಬಾ ಪಂಚೆಯ
ಕತೆ ಗೊತ್ತಾ ಎಂದರು.‌
ಇಲ್ಲ.
ಗೋಪಾಲಗೌಡರು. . .  ಎಂದು ಶಾಮಣ್ಣ ಹೇಳುತ್ತಾ ಹೋದರು. ನಾನು ಕಣ್ಣಗಲಿಸಿ ಕದಲದೇ ಶಾಮಣ್ಣನ್ನ ಮಾತುಗಳನ್ನು ಕಿವಿಯಿಂದ ಎದೆಗಿಳಿಸಿಕೊಳ್ಳಲು ತಯಾರಾದೆ.
***

ಗೋಪಾಲಗೌಡರು ಎಳೆಯ ಹುಡುಗ ಗೋಪಾಲನಾಗಿದ್ದಾಗಲೇ
ಚಳುವಳಿಯನ್ನು ಆಯೋಜಿಸಿ ಅದು ಯಶಸ್ಸು ಕಾಣುತ್ತಿದೆ ಎಂದ ತಕ್ಷಣವೇ ಭೂಗತರಾಗಿ ಬಿಡುತ್ತಿದ್ದರು. ಅವರು ಇದರ ಯಶಸ್ಸಿನ‌ ಹಿಂದೆ ನಾನು ಇದ್ದೇನೆ ಅಥವಾ ನನ್ನಿಂದಾಗಿ ಇದು ಯಶಸ್ವಿಯಾಗಿ ನಡೆಯಿತು ಎನ್ನುವ ಕಿರೀಟವನ್ನ ತೊಡುತ್ತಿರಲಿಲ್ಲ. ಅವರಿಗೆ ಉದ್ದೇಶವಷ್ಟೇ ಮುಖ್ಯವಾಗಿತ್ತು. ಸಿದ್ದಾಂತವೇ ಸರ್ವವೂ ಆಗಿತ್ತು. ಅವರು ಸೋಶಿಯಲಿಸ್ಟ್. ಅದೇ ಸಮಾಜವಾದಿ.
ನಾನು ಮಧ್ಯ ವಯಸ್ಕನಾಗುವ ಸಮಯಕ್ಕೆ ಗೋಪಾಲಗೌಡರು ರಾಜಕೀಯವಾಗಿ ಪ್ರಭಾವಿಯಾಗುತ್ತಿದ್ದರು. ಅದೊಂದು ದಿನ ಅಚಾನಕ್ಕಾಗಿ ತೀರ್ಥಹಳ್ಳಿಯ ಟಿ.ಬಿಯಲ್ಲಿ ಮೊದಲು ಗೋಪಾಲಗೌಡರನ್ನು ಭೇಟಿಯಾದೆ.‌ ಗೋಪಾಲಗೌಡರ ಕುರಿತು ಸಾಕಷ್ಟ
ಕೇಳಿದ್ದೆ. ನಮ್ಮ ಮನೆಗಳಲ್ಲಿ ಗೌಡರ ಮಾತುಗಳು ಆಗಾಗ ಬರುತ್ತಿದ್ದವು.
ಆ ಎಲ್ಲವನ್ನೂ ಕೇಳಿದ ನನಗೆ ಗೋಪಾಲಗೌಡರ ಕುರಿತ ಒಂದು ಕಲ್ಪನೆ ಇತ್ತು. ಆದರೆ ಮೊದಲ ಸಾರಿ ತೀರ್ಥಹಳ್ಳಿಯ ಟಿ.ಬಿಯಲ್ಲಿ ನೋಡಿದಾಗ
ನನಗೆ ಗೋಪಾಲಗೌಡರ ಮಾತುಗಳು, ಅವರ ಸಿದ್ದಾಂತಗಳು ಅಥವಾ ಮತ್ತೆ ಯಾವುದೂ ಸೆಳೆಯುವ ಮೊದಲು ಅವರ ಫ್ಯಾಶನ್ ನಂತಿದ್ದ ಅವರ ಉಡುಗೆಗಳು ಆಕರ್ಷಣೆ ಎನಿಸಿದವು. ಶಿವಮೊಗ್ಗದ ಸಣ್ಣ ಹಳ್ಳಿಯ ಹುಡುಗನಾಗಿ ನಂತರ ತನ್ನ ಅದಮ್ಯ ಶಕ್ತಿಗಳಿಂದ ಬೆಳೆಯುತ್ತಿದ್ದ ಗೋಪಾಲಗೌಡರು ಮಾಮೂಲಿಯಾಗಿ ಕಚ್ಚೆ ಪಂಚೆ ತೊಡುತ್ತಿರಲಿಲ್ಲ.‌
ಫ್ಯಾಶನ್ ಎನಿಸುವ ರೀತಿಯಲ್ಲಿ ಬೆಂಗಾಲಿಯವರಂತೆ ಅದೊಂದು ಬಗೆಯಲ್ಲಿ ಪಂಚೆ ತೊಡುತ್ತಿದ್ದರು. ಅದು ನನ್ನನ್ನು ಸೆಳೆದಿತ್ತು.
ಶಿವಮೊಗ್ಗದಲ್ಲಿ ನಮ್ಮ ರೈತ ಚಳುವಳಿಗಳು ತಾರಕಕ್ಕೆ ಏರುತ್ತಿದ್ದಂತೆ ಗೋಪಾಲಗೌಡರ ಒಡನಾಟವೂ ಹೆಚ್ಚಿತು. ಸೋಶಿಯಲಿಸ್ಟ್ ಗುಣಗಳ
ಆವರಿಸಿಕೊಳ್ಳತೊಡಗಿದವು. ಆದರೆ ಗೋಪಾಲಗೌಡರ ಖಾದಿ ಅಂಗಿ ಹಾಗೂ ಬಂಗಾಲಿ ಶೈಲಿಯ ಪಂಚೆಯ ಮೇಲಿನ ಆಕರ್ಷಣೆ ಅದೇ ದಾಟಿಯಲ್ಲಿ‌ ಉಳಿದುಕೊಂಡಿತ್ತು. ಕೆಲವು ವರ್ಷಗಳ ನಂತರ ಗೋಪಾಲಗೌಡರು ತಮ್ಮ ಬಟ್ಟೆಯನ್ನು ತೀರ್ಥಹಳ್ಳಿಯಲ್ಲಿ ಸಣ್ಣ ಹೊಲಿಗೆ ಯಂತ್ರವನ್ನಿಟ್ಟುಕೊಂಡಿದ್ದ ಟೈಲರ್ ನಾರಾಯಣ ಶೆಟ್ಟರ ಬಳಿ ಹೊಲಿಸುತ್ತಾರೆ ಎಂದು ಯಾರೋ ಹೇಳುತ್ತಿರುವುದು ಕಿವಿಗೆ ಬಿತ್ತು.
ಕೂಡಲೇ ನಾನು ಕೂಡ ಥೇಟು ಗೋಪಾಲಗೌಡರ ರೀತಿಯಲ್ಲೇ ಬಟ್ಟೆಗಳನ್ನು ತೊಡಬೇಕು ಅದನ್ನು ಗೌಡರಂತೆ ತೀರ್ಥಹಳ್ಳಿಯ ನಾರಾಯಣ ಶೆಟ್ಟರ ಹತ್ತಿರವೇ ಹೊಲಿಸಬೇಕು ಎಂದು ನಿರ್ಧರಿಸಿ ಹೊಸ ಬಟ್ಟೆಗಳನ್ನು ಖರೀದಿ ಮಾಡಿದೆ. ಸೀದಾ ತೀರ್ಥಹಳ್ಳಿಯಲ್ಲಿದ್ದ ನಾರಾಯಣ ಶೆಟ್ಟರ ಅಂಗಡಿಯನ್ನ ಸಮೀಪಿಸಿದೆ. ನಾರಾಯಣ ಶೆಟ್ಟರು ಬಟ್ಟೆಗಳನ್ನು ಕತ್ತರಿಸುತ್ತಾ ಮಗ್ನವಾಗಿದ್ದರು. ಅವರ ಸುತ್ತ ನಾಲ್ಕೈದು ಜನರು ಅದಾಗಲೇ ಅಂಗಡಿಯಲ್ಲಿದ್ದರು. ಎಲ್ಲರ ಎದುರೇ ನಾನು ಠೀವಿಯಿಂದ “ನಾರಾಯಣ ಶೆಟ್ಟರೇ ನನಗೂ ಕೂಡ ಗೋಪಾಲಗೌಡರ ರೀತಿಯಲ್ಲಿ‌ ಬಟ್ಟೆಗಳನ್ನು ಹೊಲಿದುಕೊಡಿ” ಎಂದು ಕೈನಲ್ಲಿದ್ದ ಬಟ್ಟೆಗಳನ್ನು ಎದುರಿದ್ದ ಬೆಂಚಿನ ಮೇಲಿಟ್ಟೆ.
ನನ್ನನ್ನು ನೋಡಿದ ನಾರಾಯಣ ಶೆಟ್ಟರು ಒಂದು ವಿಚಿತ್ರವಾದ ನಗು ಹೊರಹಾಕಿ.‌ ಶಾಮಣ್ಣ ನೀವು ಕೂತ್ಕೋಳ್ರಿ, ನಿಮಗೆ ನಾನು ಹೊಲಿದಿ ಕೊಡ್ತೀನಿ ಎಂದು ಕೂರಿಸಿದರು. ಏನೋ ಮಾತಾಡುತ್ತ ಕಾಲ ಸರಿಸಿದರು.
ನಂತರ ಆತುರಕ್ಕೆ‌ ಬಿದ್ದವತಂತೆ ಅಲ್ಲಿದ್ದವರ ಕೆಲಸ ಮುಗಿಸಿ ಇಡೀ ಅಂಗಡಿಯಲ್ಲಿ ನಮ್ಮಿಬ್ಬರ ಹೊರತಾಗಿ ನಿಶಬ್ಧವಷ್ಟೇ ಉಳಿಯುವಂತೆ ನೋಡಿಕೊಂಡರು.
“ಶೆಟ್ಟರೇ ಗೋಪಾಲಗೌಡರು ನಿಮ್ಮ ಅಂಗಡಿಯಲ್ಲೇ ಅಲ್ವಾ, ಜುಬ್ಬಾ ಪಂಚೆ ಹೊಲಿಸೋದು. ನನಗೂ ಅದೇ ತರಾ ಜುಬ್ಬಾ ಪಂಚೆ ಬೇಕು?” ಎಂದು ನಾನು ಮತ್ತೆ ಕೇಳಿದೆ.
“ನಿಮಗೆ ಗೊತ್ತಿಲ್ಲ ಅನ್ಸತ್ತೆ ಶಾಮಣ್ಣ. ಗೌಡರು ಇವತ್ತಿನವರೆಗೂ ಅಳತೆ ನೀಡಿ ನನ್ನ ಅಂಗಡಿಯಲ್ಲಿ ಹೊಸ ಬಟ್ಟೆ ಹೊಲಿಸಿಲ್ಲ. ಅದೇ ಯಾರಾದರೂ ಕೊಡುತ್ತಾರಲ್ಲ, ರೆಡಿಮೇಡ್ ಬಟ್ಟೆಗಳು, ಆ ಬಟ್ಟೆಗಳ ಅಳತೆಯಲ್ಲಿ ಏರುಪೇರಾಗಿದ್ದರೇ ಮಾತ್ರ ಇಲ್ಲಿಗೆ ಬರುತ್ತಾರೆ. ಕೆಲವೊಮ್ಮೆ ದೊಡ್ಡ ಅಂಗಿಯನ್ನ ಸಣ್ಣದು ಮಾಡಿಕೊಡೋ ಎನ್ನುವಂತೆ ಸಣ್ಣದಾದ ಅಂಗಿಯ ಹೊಲಿಗೆ ವಿಸ್ತರಿಸಿ ದೊಡ್ಡದು ಮಾಡಿಕೊಡೋ ಎನ್ನುತ್ತಾರೆ ಅಷ್ಟೇ. ಗೋಪಾಲಗೌಡರು ಅವರೇ ಹೊಸ ಕಟ್ ಪೀಸ್ ಬಟ್ಟೆಗಳನ್ನು ತಂದು ಅವರ ಮೈ ಅಳತೆ ನೀಡಿ ಹೊಲಿಸಿಕೊಂಡ ದಿನ ನಾನು ಕೂಲಿ ಇಲ್ಲದೇ ಹೊಲಿದುಕೊಡುತ್ತೀನಿ”  ಶಾಮಣ್ಣ ಎಂದರು.
ಎದೆ ದಸಕ್ಕೆಂದಿತು. ಗೋಪಾಲಗೌಡರ ಅಂಗಿಯ ಅಂದ ನೋಡಿದ್ದ ನಾನು ಅದರ ಅಳತೆ ನೋಡಲಿಲ್ಲವಲ್ಕಾ ಎನಿಸಿತು. ನಾನು ಗೌಡರನ್ನ ಹತ್ತಿರದಿಂದ ಕಂಡಿದ್ದರು, ಅವರ ಬದುಕಿನ ಶೈಲಿಯ ಕುರಿತು ಅರ್ಥವಾಗಿರಲೇ ಇಲ್ಲ.‌ ನಾನು ನಾರಾಯಣ ಶೆಟ್ಟರ ಮಾತುಗಳನ್ನು ಕೇಳಿದ ಮೇಲೆ ಬಟ್ಟೆಗಳನ್ನು ಹೊಲಿಸದೇ ಕಡಿದಾಳಿಗೆ ಬಂದುಬಿಟ್ಟೆ.
ಅದು ನಾನು ನಿಜವಾಗಲೂ ಸಮಾಜವಾದಿಯಾದ ಘಳಿಗೆ.‌ ಸಮಾಜವಾದ ಅಂದರೆ ಏನೂ ಅನ್ನುವುದು ಸ್ಪಷ್ಟವಾಗಿತ್ತು. ಅದುವರೆಗೂ ಬಹುಶಃ ನಾನು ಅದರ ಹುಡುಕಾಟದಲ್ಲಿ‌ದ್ದೆ ಅಷ್ಟೇ.
***
ಶಾಮಣ್ಣ ಹೇಳಿ‌ ಮುಗಿಸಿದರು. ಮತ್ತೆ ಮಾತನಾಡದೇ ಒಂದಿಷ್ಟು ಹೊತ್ತು ಮೌನವಾದರು.‌ ಹಿಂದೆಯೇ ನನ್ನ ಆರನೇ ಕ್ಲಾಸಿನ ಐದನೇ ಪಾಠದ‌ ಚಿತ್ರದಲ್ಲಿ ಗೋಪಾಲಗೌಡರು ಚಂದದ ಕಪ್ಪು ಕೋಟು ತೊಟ್ಟಿದ್ದು ಸುಳ್ಳಿರಬಹುದು ಎನಿಸಿತು.
ಮತ್ತೆ ಏನು ನೆನಪಾಗತ್ತೆ ಶಾಮಣ್ಣ ನಿಮಗೆ ಗೌಡರು ಎಂದರೆ.‌ ಅವರು, ಸಾಯುವ ಕಡೆಯ ದಿನಗಳಲ್ಲಿ ತುಂಬಾ ಅಸ್ವಸ್ಥರಾಗಿದ್ದರಂತೆ. ಅದು‌ ಏನಾದರೂ ನಿಮಗೆ ನೆನಪಿದೆಯಾ?
ನೆನಪಿದೆ. ನಿನಗೆ ಆ ಕಾರಿನ ಪ್ರಸಂಗ ಗೊತ್ತಾ?
ಇಲ್ಲ, ಹೇಳಿ ಅದೇನು? ಯಾವ ಕಾರು?
ನಾನು ಕೇಳುತ್ತಿದ್ದಂತೆ ಶಾಮಣ್ಣ, ಗೋಪಾಲಗೌಡರ ಬದುಕಿನ ಮತ್ತೊಂದು ಅಧ್ಯಾಯವನ್ನು ತೆರೆದಿಡಲು ಅಣಿಯಾದರು
****
ಅದು ಗೋಪಾಲಗೌಡರು ಶಾಸಕರಾಗಿದ್ದ ಕಾಲ.‌ ಆಗಲೇ ಅದೊಂದು ದಿನ ತೀರ್ಥಹಳ್ಳಿಗೆ ಬಂದಿದ್ದರು. ಅವರ ಆರೋಗ್ಯ ಮೊದಲಿನಂತಿರಲಿಲ್ಲ. ನಿಧಾನವಾಗಿ ಹದಗೆಡುತ್ತಿತ್ತು. ಅವರಲ್ಲಿ ಮೊದಲಿನಂತೆ ವೇಗವಾಗಿರಲಿಲ್ಲ.‌ ಸಿಟ್ಟು ಕೂಡ ಇಳಿಮುಳವಾಗಿತ್ತು. ನಾನು ಗೋಪಾಲಗೌಡರನ್ನ ನಮ್ಮ‌ ಕಡಿದಾಳಿನ ಮನೆಗೆ ಊಟಕ್ಕೆ ಕರೆದೆ. ಅವರು ಒಪ್ಪಿದರು.‌ ನಂತರ ಗೆಳೆಯರೊಬ್ಬರ ಕಾರಿನಲ್ಲಿ ಕರೆದುಕೊಂಡು ಹೊರಟೆ. ಅದು ಮಾರಿಸ್ ೮ ಕಾರು. ಒಂದಿಷ್ಟೇ ದೂರವನ್ನ ಕಾರು ಕ್ರಮಿಸಿತು. ಗೋಪಾಲಗೌಡರು, “ಶಾಮಣ್ಣ ಈ ಕಾರ್ ಎಷ್ಟಾಗತ್ತೆ. ನನಗೂ ಇಂತಹದೊಂದು ಕಾರು ಬೇಕು. ಆರೋಗ್ಯ ಸರಿ ಇಲ್ಲ, ಮೊದಲಿನಂತೆ. ನಾನು ಈಗಲೂ ಒಬ್ಬರಿಗಾಗಿ ಕಾದು ಹೊರಡುವುದು ಕಷ್ಟ ಅನ್ಸತ್ತೆ” ಎಂದರು.‌ ನಾನು‌ ಉತ್ತರಿಸುವ ಮೊದಲೇ
“ಬೇಡ, ಬೇಡ.‌ ನಮಗ್ಯಾಕೆ ಕಾರು.‌ ಬೇಡ ಬಿಡು.‌ ಆರೋಗ್ಯ ಆ ಪರಿ ಏನೂ ಕೆಟ್ಟಿಲ್ಲ” ಎಂದು‌ ಸುಮ್ಮನಾದರು.‌
ಗೋಪಾಲಗೌಡರು ಏ‌ನನ್ನೂ ಹೇಳದೇ ಇದ್ದರೂ ಎಲ್ಲವೂ ಅರ್ಥವಾಗಿತ್ತು. ಅವರಿಗೆ ಅವರ ಆರೋಗ್ಯಕ್ಕಿಂತ ತಾವು ಆರಿಸಿಕೊಂಡ‌ ಸಿದ್ದಾಂತವೇ ದೊಡ್ಡದು ಎನ್ನುವ ಮನೋಭಾವ ಕಡೆಯವರೆಗೂ ಉಳಿದುಕೊಂಡಿತ್ತು. ಕಾರಿನ ಪ್ರಸಂಗದಲ್ಲೂ ಅದನ್ನೇ ಉಳಿಸಿಕೊಂಡರು.
****

ನೀನು‌ ಕೇಳಿದೆಯಲ್ಲಾ. ಶಾಮಣ್ಣ ಗೋಪಾಲಗೌಡರು ಅಂತ ತಕ್ಷಣವೇ ಏ‌ನು ನೆನಪಾಗತ್ತೆ ಅಂತ. ಇದು ನನಗೆ ಗೋಪಾಲಗೌಡರು ಎಂದ ತಕ್ಷಣ ನೆನಪಾಗೋದು.‌ ಅಷ್ಟು ವರ್ಷಗಳ ಕಾಲ‌ ಜತೆಯಾಗಿದ್ದಕ್ಕೆ ಸಾಕಷ್ಟು ವಿಚಾರಗಳು ಗೊತ್ತಿವೆ. ಹೇಳೋದಕ್ಕೆ ಸಾವಿರ ಇರಬಹುದು. ಆದರೆ ನನ್ನನ್ನು ಕದಲಿಸಿದ್ದು ಬದಲಿಸಿದ್ದು, ಈ ಎರಡು ಎಂದರು ಶಾಮಣ್ಣ.
ಮಾತಿನ ಮಧ್ಯ ಗೋಪಾಲಗೌಡರಿಗೆ ಮೊದಲಿನ ಸಿಟ್ಟು ಇರಲಿಲ್ಲ‌‌ ಎಂದು‌ ಶಾಮಣ್ಣ ಹೇಳಿದ್ದು ನನ್ನ ತಲೆಯಲ್ಲಿ‌ ಹಾಗೆ ಅಚ್ಚೊತ್ತಿದ್ದಂತೆ ಉಳಿದುಕೊಂಡಿತ್ತು. ನನ್ನ ಮಾತನ್ನು ಆ ಗೋಪಾಲಗೌಡರ ಮತ್ತೊಂದು ಆವೃತ್ತಿಗೆ ತಿರುಗಿಸುವವನಂತೆ, ಶಾಮಣ್ಣ ಗೌಡರಿಗೆ ಸಿಟ್ಟು ಆ ಪರಿ ಇತ್ತಾ?
ಅಯ್ಯೋ ಸಿಟ್ಟಲ್ಲಾ ಅದು ಮಾರಾಯ್ರ ಅದು. ಕೆಂಡ.‌ ಅವರು ನಂಜುಂಡಸ್ವಾಮಿ ಅವರ ಮೇಲೆ ಸಿಟ್ಟಾಗಿದ್ದರು ಒಮ್ಮೆ ಗೊತ್ತಾ? ಎಂದರು.
ಆದರೆ ಶಾಮಣ್ಣ ಗೋಪಾಲಗೌಡರು ಅಷ್ಟೇ ಬೇಗ ಅತ್ತು‌ ಬಿಡುತ್ತಿದ್ದರು ಕೂಡ. ಅದು ನಿಮಗೆ ಗೊತ್ತಾ ಎಂದು ಕೇಳಿದೆ.
ಈ ಬಾರಿ ಅವಕ್ಕಾಗಿ ನೋಡುವ ಸರದಿ ಶಾಮಣ್ಣನಾಗಿತ್ತು.
ಹೌದು ಶಾಮಣ್ಣ. ಗೌಡರು‌ ಸಿಟ್ಟಿನ ಮನುಷ್ಯರು ನಿಜ. ಆದರೆ ಅಷ್ಟೇ ಬೇಗ
ಅತ್ತು ಬಿಡುತ್ತಿದ್ದರು ಎಂದೆ.
ನಿನಗೆ ಹೇಗೆ ಗೊತ್ತು ಎಂದರು. ಈಗ ಶಾಮಣ್ಣನಿಗೆ ಅವರೇ ಒಡನಾಡಿದ ಗೋಪಾಲಗೌಡರ ಕುರಿತು ಹೇಳುತ್ತಾ ಹೋದೆ.
****
ಗೋಪಾಲಗೌಡರು ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಉತ್ತುಂಗದಲ್ಲಿದ್ದ ದಿನಗಳಲ್ಲಿ ಸೋಶಿಯಲಿಸ್ಟ್ ಪಾರ್ಟಿಯನ್ನು ಆರಿಸಿಕೊಂಡವರು. ಸಮಾಜವಾದ ಸಿದ್ದಾಂತದ ಕುರಿತು ಇನ್ನೂ ಜನರು ಏನನ್ನೂ ತಿಳಿಯದ ದಿನಗಳಲ್ಲಿ ಗೋಪಾಲಗೌಡರು ಅದನ್ನೇ ಧ್ಯಾನಿಸಿದವರು. ಡಾ. ಯು ಆರ್ ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕೋಣಂದೂರು ಲಿಂಗಪ್ಪ, ಶಾಮಣ್ಣ, ಸುಂದರೇಶ್ ಹೀಗೆ ಹತ್ತಾರು ಜನರನ್ನೂ ಪ್ರಭಾವಿಸಿದವರು. ರೈತ ಚಳುವಳಿಯನ್ನು ಕಟ್ಟಿದವರು.
ಹೀಗೆ ಬದುಕಿನುದ್ದಕ್ಕೂ ನಡೆದು ಬಂದ ಗೋಪಾಲಗೌಡರ ಆರೋಗ್ಯ ಬಿಗಡಾಯಿಸಿ ಆಸ್ಪತ್ರೆ ಸೇರಿದ್ದರು. ಗೌಡರ ದೇಹ ಬಿಸಿಲ ಜಳಕ್ಕೆ ಬಾಡಿದ ಹಿತ್ತಲಿನ ಹೂವಿನಂತೆ ಕೃಶವಾಗಿಹೋಗಿತ್ತು. ಕಿಲೋ ಮೀಟರ್ ಗಳಷ್ಟು ನಡೆದೇ ಹೋಗುತ್ತಿದ್ದ ಗೌಡರು ಹಾಸಿಗೆಯಿಂದ ಎದ್ದು ಕೂರುವುದಕ್ಕೂ ಆಗದ ಸ್ಥಿತಿಯನ್ನು ತಲುಪಿಬಿಟ್ಟಿದ್ದರು. ಬದುಕಿನ ದಾರಿಯ ಕಡೆಯ ತಿರುವಿನಲ್ಲಿ ನಿಂತಿದ್ದ ಗೋಪಾಲಗೌಡರನ್ನು ಮಾತನಾಡಿಸಲು ಬರುತ್ತಿದ್ದರು. ಹಾಗೆ ಬರುತ್ತಿದ್ದವರ ಪಾಲಿಗೆ ಅದು ಧೀಮಂತನೊಬ್ಬನ‌ ಕಡೆಯ ಭೇಟಿ.
ಒಮ್ಮೆ ಕವಿ ಗೋಪಾಲಕೃಷ್ಣ ಅಡಿಗರು, ಗೋಪಾಲಗೌಡರನ್ನ ಕಾಣಲು ಹೊರಟ್ಟಿದ್ದರು. ಅಡಿಗರು ಆಸ್ಪತ್ರೆಯ ವಾರ್ಡ್ ತಲುಪುವ ಮೊದಲೇ ಅಲ್ಲಿದ್ದವರೊಬ್ಬರು, ಈಗ ಅಡಿಗರು ಬರುತ್ತಾರೆ, ಅವರ ಎದುರು ನೀನು ಅಳಬಾರದು ಎಂದು ಗೋಪಾಲಗೌಡರಿಗೆ ಹೇಳಿದರು. ಉರುಳಿ
ಬಿದ್ದ ಪರ್ವತದ ಅವಶೇಷದಂತೆ ಕಾಣುತ್ತಿದ್ದ ಗೋಪಾಲಗೌಡರು ಅಳುವನ್ನು ತಡೆದಿಟ್ಟುಕೊಂಡು, ಹ್ಮ್ ಎಂದಷ್ಟೇ ಹೇಳಿ ಮೌನವಾದರು.‌ ಎಷ್ಟೋ ಹೊತ್ತಿನ ಬಳಿಕ ಆಸ್ಪತ್ರೆಯ ವಾರ್ಡಿಗೆ ಬಂದ ಗೋಪಾಲಕೃಷ್ಣ ಅಡಿಗರು, ಎಲ್ಲರಂತೆ ಸಾಮಾನ್ಯವಾಗಿ ಹೇಗಿದ್ದೀರಿ ಗೌಡ್ರೆ? ಎಂದು ಕೇಳಿದಾಗ.
ಅದುವರೆಗು ಒಂದು ಮಾತನಾಡುವುದಕ್ಕೂ ಹೆಣಗಾಡುತ್ತಿದ್ದ ಗೋಪಾಲಗೌಡರು, ಅಡಿಗರ ಮಾತಿಗೆ ಉತ್ತರ ಎಂಬಂತೆ
“ಕುಟುಕು ಕುಟಕಿನ ಸಫಲ ನಾಟ್ಯ” ಎಂದರು.
ಅದು ಗೋಪಾಲಕೃಷ್ಣ ಅಡಿಗರೇ ತಮ್ಮ ಕಾವ್ಯವೊಂದರಲ್ಲಿ ಕೃಶವಾದ ಕೋಳಿಮರಿಯನ್ನು ವರ್ಣಿಸಲು ಬಳಸಿದ್ದ ರೂಪಕ. ಆದರೆ ಅಡಿಗರ ಕಾವ್ಯದ ರೂಪಕ ನಿಜವಾಗಿಯೂ ಕಾವ್ಯಕ್ಕೆ ಅದೆಷ್ಟು ಪೂರಕವಾಗಿತ್ತೋ!
ಆದರೆ ಅದು ನಿಜವಾದ ಅರ್ಥಪಡೆದುಕೊಂಡಿದ್ದು ಸಾವಿನಂಚಿನಲ್ಲಿದ್ದ ಗೋಪಾಲಗೌಡರು ಉತ್ತರದ ಎಂಬಂತೆ ನೀಡಿದಾಗಲೇ.
ಅಡಿಗರ ಶ್ರೇಷ್ಠ ಪದ್ಯಗಳಲ್ಲಿ ಅವರ ” ಭೂಮಿಗೀತ” ಪದ್ಯವೂ ಒಂದು. ‌ಆ ಪದ್ಯದಲ್ಲಿ,
“ಢಿಕ್ಕಿ ಹೊಡೆದನು ಪಂಜರದ ಕಂಭ, ಮಾಡಕ್ಕೆ;
ಬಡಿದೆನು ರೆಕ್ಕೆ, ಕುಕ್ಕಿ ಪುಕ್ಕವ, ಕಿತ್ತು ರಾಶಿ ಹಾಕಿದೆ ತಿಂಡಿತಟ್ಟೆಯೊಳಗೆ”
ಎನ್ನುವ ಸಾಲುಗಳು ಬರುತ್ತವೆ. ಅದೊಂದು ಕೋಳಿಮರಿಯಷ್ಟೇ ಕೃಶವಾದ ಹಕ್ಕಿ ಮತ್ತು ಪಂಜರದ ಪ್ರತಿಮೆಯನ್ನು ನಿರ್ವಹಿಸುವ ಸಾಲುಗಳು. ಆ ಸಾಲುಗಳ ಕುರಿತು ಮಾತನಾಡುವಾಗ ಯು. ಆರ್ ಅನಂತಮೂರ್ತಿ ಅವರೊಂದಿಗೆ ರಾಜೀವ ತಾರಾನಾಥರು ‘It has begun to enjoy the self torture” ಎಂದಿದ್ದರಂತೆ.
ಸದಾ ಏನಾದರೂ ಮಾಡುತ್ತಾ ಓಡಾಡುತ್ತಿದ್ದ ಗೋಪಾಲಗೌಡರು ಹೀಗೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಕೃಶವಾಗಿ ಮಲಗಿ, ಮಲಗಿದ್ದ ಆಸ್ಪತ್ರೆಯ ವಾರ್ಡು ಪಂಜರದಂತೆ ಅನಿಸಿರಬಹುದುದೇ?
ಗೋಪಾಲಗೌಡರು ಅಡಿಗರ ಮಾತಿಗೆ ಉತ್ತರವಾಗಿ ಅವರದೇ ಪದ್ಯದ ಸಾಲುಗಳಿಗಳಿಂದ ಉತ್ತರಿಸಿದರು. ಅದೇ ಅಡಿಗರ ಪದ್ಯದ ಸಾಲುಗಳಿಗೆ
ರಾಜೀವ ತಾರಾನಾಥರು ನೀಡಿದ ಅರ್ಥವನ್ನು ಗೋಪಾಲಗೌಡರ ಕಡೆಯ ದಿನಗಳೊಗೂ ಅನ್ವಹಿಸಿ ನೋಡಬಹುದೇ? “ಭೂಮಿಗೀತ” ಪದ್ಯದ ಹಕ್ಕಿಯಂತೆ, ಗೋಪಾಲಗೌಡರು ಕೂಡ ಕಡೆಯಗಾಲದ ತಮ್ಮ ನೋವನ್ನು ತಾವೇ ಸುಖಿಸುತ್ತಿದ್ದರೇನೂ ಎಂದು ಅನಿಸಿದೆ ಶಾಮಣ್ಣ.
****

ಹೊರಗಿನ‌ ಸಣ್ಣ ಮಳೆಗೆ ಬೆಚ್ಚಗೆ ಕೂತು ನನ್ನ ಮಾತುಗಳನ್ನು ಕೇಳುತ್ತಿದ್ದ ಶಾಮಣ್ಣ ಇರಬಹುದು ಎಂದಷ್ಟೇ ಹೇಳಿದರು ನಂತರ ಆಶ್ಚರ್ಯದಿಂದ,
ಇದು ನಿನಗೆ ಯಾರು ಹೇಳಿದ್ದು ಎಂದರು.
ನಿಮ್ಮ ಮೇಷ್ಟ್ರು ಎಂದೆ ನಗುತ್ತಾ.
ನಮ್ಮ ಮೇಷ್ಟ್ರು! ಯಾರಾಪ್ಪು ಅದು? ನಮ್ಮ ಮೇಷ್ಟ್ರು?
ಅನಂತಮೂರ್ತಿಗಳು.
ಓ. . .ಓ. . .ನೀನು ಅನಂತಮೂರ್ತಿಯವರನ್ನೂ ನೋಡಿದೀಯಾ? ಎಂದರು ಶಾಮಣ್ಣ.
ಇಲ್ಲ ಓದಿದ್ದು. ಅವರ ಆತ್ಮಕತೆ “ಸುರಗಿ”ಯಲ್ಲಿ ಗೋಪಾಲಗೌಡರ ಬಗ್ಗೆ ಬರೆದಿದ್ದಾರೆ ಶಾಮಣ್ಣ. ಅಲ್ಲಿ ಓದಿದ್ದು ಎಂದೆ.‌
ಶಾಮಣ್ಣನಿಗೆ ಗೋಪಾಲಗೌಡರ ಅದು ಯಾವ ನೆನಪು ಉಮ್ಮಳಿಸಿ ಬಂತೋ ಗೊತ್ತಿಲ್ಲ. ಅವರ ನೆನಪಿನಲ್ಲಿ ಇದ್ದಂತೆ ಅನಿಸಿತು. ನಾನು ಮಾತು ಮುಂದುವರೆಸಲಿಲ್ಲ. ಮಾತನ್ನು ಪ್ರಸ್ತುತ ರಾಜಕೀಯದ ಕಡೆ ತಿರುಗಿಸಿದೆ. ಅವರು ಸಮಾಧಾನವಾದಂತೆ ತೋರಲಿಲ್ಲ. ತೇಜಸ್ವಿ ಮತು ಶುರು ಮಾಡಿದೆ. ಸಾಕು ಎನಿಸುವಷ್ಟು ಮಾತನಾಡಿದರು. ಕಡೆಗೆ ಮಾತನಾಡಲು
ಏನೂ ಉಳಿದಿದೆ ಎನಿಸಲಿಲ್ಲ. ಸಾಕು ಎನಿಸಿತು. ಮಾತು ಮುಗಿಸಿ ಹೊರಬಿದ್ದೆ. ಶಾಮಣ್ಣ ಬೆನ್ನು ತಟ್ಟಿ ಕಳಿಸಿಕೊಟ್ಟರು. ನಾನು ಶಿವಮೊಗ್ಗ, ಶಿರಸಿ, ಕುಮುಟಾ, ದಕ್ಷಿಣ ಕನ್ನಡ, ಚಾರ್ಮಾಡಿ ಘಟ್ಟ ಎಲ್ಲವನ್ನೂ ಅಲೆದಾಡಿ ಬೆಂಗಳೂರಿಗೆ ಬಂದೆ.‌
ಗೋಪಾಲಗೌಡರು ಉದಾಹರಣೆಯಾಗಿ ಗೋಪಾಲಕೃಷ್ಣ ಅಡಿಗರಿಗೆ ಉತ್ತರಿಸಿದ “ಭೂಮಿಗೀತ” ಕವಿತೆ ಓದುತ್ತಿದ್ದೆ. ಅದೇ ಪುಸ್ತಕದಲ್ಲಿ ಗೋಪಾಲಗೌಡರು ಕಾವ್ಯವಾಗಿ ಸಿಕ್ಕರು.
“ಶಾಂತ” ವನ್ನ ಏರಿ ಕುಳಿತಿರಬೇಕಾದ ಶಾಂತವೇರಿ ಗೋಪಾಲಗೌಡರು ಸಿಟ್ಟಾಗುತ್ತಿದ್ದದ್ದು ಏಕೆ ಎನಿಸಿತು?
***
ಸಂಕಲ್ಪ ಬಲದ ಬಾರು ಬಿಗಿದೆ ಬಿಗಿದಿರಿ, ಮೃದಂಗ
ಒಡೆದುಹೋಯಿತು. ತಾಳಗೆಟ್ಟ ಮೇಳ
ದಿಕ್ಕುಪಾಲಾಗಿ ಚೆದುರಿತು, ಸಮತ್ವ ಭ್ರಾತೃತ್ವಗಳ ಬಯಲಾಟ
ಬಟ್ಟಂಬಯಲು, ರಂಗ ಖಾಲಿ ಖಾಲಿ.
( ಶಾಂತವೇರಿಯ ಅಶಾಂತ ಸಂತ: ಗೋಪಾಲಕೃಷ್ಣ ಅಡಿಗರು)
ಅಡಿಗರು ಗೋಪಾಲಗೌಡರನ್ನ ಅವರ ಪದ್ಯದಲ್ಲಿ “ಅಶಾಂತ” ಸಂತ ಎಂದಿದ್ದು ಏಕೆ?
***
ಈ ಎಲ್ಲವನ್ನೂ ಕೇಳಿದ ಮೇಲೆ ಯಾಕೋ ಒಮ್ಮೆಯೂ ರೆಡಿಮೇಡ್ ಬಟ್ಟೆಗಳನ್ನೇ ತೊಡದ ಗೋಪಾಲಗೌಡರಿಗೆ ನನ್ನ ಆರನೇ ಕ್ಲಾಸಿನ ಪಠ್ಯಪುಸ್ತಕದಲ್ಲಿ ಚಂದದ ಕೋಟು ತೊಡಿಸಿದ್ದು ನೆನಪಾಯಿತು.

‍ಲೇಖಕರು avadhi

8 October, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading