ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಶಾಮಣ್ಣನ ನೆನಪು' ಹಾಗೂ ತೇಜಸ್ವಿಯವರ ಹಾಸ್ಯ ಪ್ರಜ್ಞೆ

ಗೊರೂರು ಶಿವೇಶ್
ಪೂರ್ಣಚಂದ್ರ ತೇಜಸ್ವಿಯವರ “ತನ್ನ ಅಣ್ಣನ ನೆನಪು” ಕೃತಿಯಲ್ಲಿ ಕುವೆಂಪುರವರ ನೆನಪಿನ ಜೊತೆಗೆ ಹೆಚ್ಚು ನೆನಪಿಸಿಕೊಂಡಿರುವುದು ಅವರ ಸ್ನೇಹಿತ ಶಾಮಣ್ಣನವರನ್ನು. ಇಂಟರ್ ಮೀಡಿಯಟ್ ಓದಲು ಶಿವಮೊಗ್ಗಕ್ಕೆ ಹೋದ ತೇಜಸ್ವಿಯವರ ಸಂಪರ್ಕಕ್ಕೆ ಬಂದದ್ದು ಶಾಮಣ್ಣ, ಕೊಣಂದೂರುಲಿಂಗಪ್ಪ, ಸುಂದರೇಶ್ ಮೊದಲಾದವರು.
“ಶಿವಮೊಗ್ಗಕ್ಕೆ ಹೋಗದಿದ್ದರೆ ನಾನು ಸಾಹಿತ್ಯದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ. ಶಿವಮೊಗ್ಗದ ನೆಲ, ಗಾಳಿ, ನೀರಿನಲ್ಲಿ ಸಾಹಿತ್ಯ ಹಾಸುಹೊಕ್ಕಾಗಿದೆ ಎಂದನ್ನಿಸುತ್ತದೆ” ಎಂದು ಅವರೇ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಶಿವಮೊಗ್ಗದ ಅವರ ಅನುಭವಗಳು ಅವರ ಅನೇಕ ಕಥೆಗಳಿಗೆ ವಸ್ತುಗಳಾಗಿವೆ. ಅದರಲ್ಲೂ ‘ಮಾಯಾಮೃಗ’ ಕಥೆ ಭಾರತದ ಅತ್ಯುತ್ತಮ ಕಥೆಗಳಲ್ಲಿ ಒಂದೆಂದು ಪರಿಗಣಿತವಾಗಿ ಪ್ರಶಸ್ತಿಯನ್ನು ಪಡೆದಿದ್ದಲ್ಲದೆ ಇಂಗ್ಲೀಷ್‌ಗೂ ಅನುವಾದಗೊಂಡು ಕೆಲ ವಿಮರ್ಶಕರು ಇದು ಅವರ ಅತ್ಯುತ್ತಮ ಕಥೆಯಂತಲೂ ಕರೆದಿದ್ದಾರೆ.

ಈ ಕಥೆಯಲ್ಲಿ ನವೋದಯದ ದೇಸಿ ನಿರೂಪಿತ ಶೈಲಿಯಿಂದ ಹೊರತಾದ ನವ್ಯದ ಶೈಲಿಯ ಸಾಂಕೇತಿಕತೆ ಇಲ್ಲಿದೆ. ಇದರಲ್ಲಿ ಬರುವ ‘ಷಾ’ ಪಾತ್ರಧಾರಿ ಶಾಮಣ್ಣನವರೆ ಎಂದು ತೇಜಸ್ವಿಯವರನ್ನು ಓದಿಕೊಂಡವರಿಗೆ ಗಮನಕ್ಕೆ ಬಾರದೆ ಇರದು. ಇನ್ನೂ ತೇಜಸ್ವಿಯವರು ಶಿವಮೊಗ್ಗದ ಶಾಮಣ್ಣನವರನ್ನು ಪರಿಚಯಿಸುವುದು ಹೀಗೆ.
ಕೊಣಂದೂರು ಲಿಂಗಪ್ಪನವರ ಕ್ರಾಂತಿಕಾರಿ ಸಂಘದ ಆಸ್ಥಾನ ವಿಮರ್ಶಕರಾಗಿ ಒಬ್ಬರು ಇಂಥ ಸಾಹಿತ್ಯೇತರ ವ್ಯಕ್ತಿ ಇದ್ದರು. ಅವರು ಯಾವತ್ತೂ ಸಾಹಿತ್ಯ ರಚನೆಗಾಗಲೀ, ಅಧಿಕೃತ ಸಾಹಿತ್ಯ ವಿಮರ್ಶೆಗಾಗಲಿ ಕೈಹಾಕಿದವರೇ ಅಲ್ಲ. ಪುಸ್ತಕಗಳನ್ನು ಅವರು ಪುರಸೊತ್ತು ಸಿಕ್ಕರೆ, ಮಾಡಲು ಬೇರೇನೂ ಕೆಲಸ ಹೊಳೆಯದಿದ್ದರೆ ಮಾತ್ರ ಹೊರತೆಗೆಯುತ್ತಿದ್ದರು. ಪುಸ್ತಕದಲ್ಲಿ ಪ್ರಿಂಟಾದ ಭಾಷೆಯನ್ನು ಕಂಡರೇ ನನಗಾಗುವುದಿಲ್ಲೆಂದು ಆಗಾಗ ಅವರು ಹೇಳಿದ್ದುಂಟು.
ಅವರಿಗೆ ಕಾವ್ಯ ಕವಿತೆಗಳಿಗಿಂತ ಹೆಚ್ಚಾಗಿ ಉತ್ತರ ಕರ್ನಾಟಕದ ಪತ್ರಿಕೆಗಳಲ್ಲಿ ಗಂಡ-ಹೆಂಡತಿಯರು ಪರಸ್ಪರ ಕೊಟ್ಟುಕೊಳ್ಳುತ್ತಿದ್ದ ಸೋಡಾ ಚೀಟಿಗಳನ್ನು ಓದಿ ಆಸ್ವಾದಿಸುವುದರಲ್ಲಿ ತುಂಬಾ ಆಸಕ್ತಿ. ಶಿವಮೊಗ್ಗದ ಕಾಲೇಜಿನ ಗೆಳೆಯರೆಲ್ಲಾ ಸೇರಿ ಒಂದು ಕೈಬರಹದ ಮಾಸಪತ್ರಿಕೆ ಹೊರಡಿಸುತ್ತಿದ್ದರು. ಅದರಿಂದಾಗಿ ಅಲ್ಲಿ ಹುಟ್ಟಿಕೊಂಡಿದ್ದ ಅನೇಕ ಪುಡಿ ಕವಿಗಳೆಲ್ಲ ನಮ್ಮ ಆಸ್ಥಾನ ವಿಮರ್ಶಕನಿಗೆ ಹೆದರಿ ಗಾಬರಿ ಬೀಳುತ್ತಿದ್ದರು.
ಮೃದು ಸ್ವಭಾವದ, ಯಾರೊಡನೆಯೂ ಎಂದೂ ಜಗಳವಾಡದ, ಆದರೂ ಕವಿಗಳೆಲ್ಲ ಹೆದರಿ ಗಡಗಡ ನಡುಗುತ್ತಿದ್ದ ಈ ವಿಮರ್ಶಕ ಮಹಾಶಯನ ಹೆಸರೇ ಕಡಿದಾಳು ಶಾಮಣ್ಣ ಎಂದು. ಶಾಮಣ್ಣನವರ ಭಯೋತ್ಪಾದಕ ಚಟುವಟಿಕೆಗಳಿಗೆ ಕಾರಣ, ಅವರ ಹಾಸ್ಯ ಮತ್ತು ವಿನೋದ. ಈ ಕಾರಣದಿಂದಲೇ ಈಚೆಗೆ ಅವರನ್ನು ರೈತ ಸಂಘದಿಂದ ಎಲ್ಲರೂ ಸರ್ವಾನುಮತದಿಂದ ಉಚ್ಛಾಟನೆ ಮಾಡಿದರೆಂದು ಕೇಳಿದೆ.

ಶಾಮಣ್ಣನವರನ್ನು ಸಹಿಸಲು ಸಾಧ್ಯವಾಗದ ಎಲ್ಲ ಸಂಘಟನೆಗಳೂ ತತ್ವಾಂಧತೆ, ಭಾವಾವೇಶ ಮತ್ತು ಮೂಲಭೂತ ವಾದಕ್ಕೆ ತುತ್ತಾಗುತ್ತವೆಂದು ನಂಬಿದ್ದೇನೆ. ವ್ಯಕ್ತಿಗೇ ಆಗಲಿ, ಸಂಘಟನೆಗೇ ಆಗಲಿ ಹಾಸ್ಯಪ್ರಜ್ಞೆ ನಷ್ಟವಾಯ್ತೆಂದರೆ ಕೇವಲ ಹೊಗಳುಭಟ್ಟರ ತವರು ಮನೆಯಾಗುತ್ತದೆ. ಆಗ ಇನ್ನೂ ನವೋದಯದ ಕವಿಗಳ ಗುಂಗಿನಲ್ಲೇ ಇದ್ದ ಕಿಶೋರ ಕವಿಗಳೆಲ್ಲ ಭಾವ ತೀವ್ರತೆಯಿಂದಲೆ ಕಾವ್ಯ ಉದಿಸುತ್ತದೆ ಎಂದು ದೃಢವಾಗಿ ನಂಬಿದ್ದರು.
ಕಾಲೇಜಿನ ಹುಡುಗಿಯರನ್ನೆಲ್ಲಾ ಕನಸಿನಲ್ಲಿ ಕಾಣುತ್ತ ಕಾವ್ಯಕನ್ನಿಕೆಯನ್ನು ಕಂಡೆವೆಂದು ಕವನ ಬರೆಯುತ್ತಿದ್ದರು. ಶಾಮಣ್ಣನ ಕೈಗೆ ಅವು ಸಿಕ್ಕರೆ ಸಾಕು. ಅದು ಯಾವ ವಿದ್ಯಾರ್ಥಿನಿಯನ್ನು ಕುರಿತದ್ದೆಂದು ಪತ್ತೆ ಮಾಡಿ. ಇಲ್ಲವೇ ಆರೋಪಿಸಿ, ಇಲ್ಲವೇ ಕವನಗಳಿಗೆ ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಯಾರಾದರೂ ವಿದ್ಯಾರ್ಥಿನಿಯರಿಗೆ ಅಳವಡುವಂತೆ ಮಾಡಿ ಕವಿ ಕನಸಿನಲ್ಲಿ ಕಂಡ ಕಾವ್ಯಕನ್ನಿಕೆಯ ಗುಟ್ಟು ಬಯಲು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿ ಹೆದರಿಯೇ ಕವಿಗಳು ಶಾಮಣ್ಣನನ್ನು ಕಂಡ ಕೂಡಲೆ ಟಾಪಿಕ್ ಬದಲಾಯಿಸಿ ಬಿಡುತ್ತಿದ್ದರು.
ಕೋಣಂದೂರು ಲಿಂಗಪ್ಪ ಒಮ್ಮೊಮ್ಮೆ ಭಾವೋದ್ವೇಗದ ಭಾಷಣ ಮಾಡಿ ಜನರನ್ನು ಉದ್ರೇಕಿಸಲು ಯತ್ನಿಸುತ್ತಿದ್ದರು. ಇಡೀ ಲೋಹಿಯಾವಾದಿಗಳ ಬಳಗದಲ್ಲಿ ಆಗ ಜಾರ್ಜ್ ಫರ್ನಾಂಡಿಸ್ ಮತ್ತು ಲಿಂಗಪ್ಪ ಇಬ್ಬರನ್ನು ಬಿಟ್ಟರೆ ಮತ್ತೆ ಯಾರೂ ಆ ರೀತಿ ಭಾವೋದ್ರೇಕದ ಭಾಷಣಗಳಿಗೆ ಹೋಗುತ್ತಿರಲಿಲ್ಲ. ಇವತ್ತಿಗೂ ಈ ಇಬ್ಬರಿಗೂ ಆ ಖಾಯಿಲೆ ವಾಸಿಯಾಗಿಲ್ಲವೆಂದೇ ಹೇಳಬಹುದು. ಆದರೆ ಶಿವಮೊಗ್ಗದಲ್ಲಿ ಮಾತ್ರ ಲಿಂಗಪ್ಪ ಭಾವೋದ್ರೇಕದ ಭಾಷಣ ಮಾಡಿದರೆ ಶಾಮಣ್ಣನ ಹಾಸ್ಯಕ್ಕೆ ಸಿಕ್ಕಿಕೊಳ್ಳುತ್ತಿದ್ದರು.
ಒಮ್ಮೆ ಶಾಮಣ್ಣ ಕಾಲೇಜಿನಲ್ಲಿ ಪ್ರೈಮರಿ ಸ್ಕೂಲ್ ಹುಡುಗರು ಮೂತ್ರ ವಿಸರ್ಜನೆಗೆ ಹೋಗಲು ಅನುಮತಿ ಕೇಳುವ ರೀತಿ ಕಿರುಬೆರಳು ಎತ್ತಿ ತೋರಿಸುತ್ತ ಕಾಲೇಜಿನಲ್ಲಿ ಅಡ್ಡಾಡುತ್ತಿದ್ದರು. ನಾನು ನೋಡಿದವನು “ನಿಮಗೆ ಒಂದಕ್ಕೆ ಅವಸರ ಆಗಿದ್ದರೆ ಹೋಗಿ, ಅದ್ಯಾಕೆ ಕಾಲೇಜಿನಲ್ಲಿ ಜಾಹೀರು ಮಾಡಿಕೊಂಡು ಓಡಾಡುತ್ತಿದ್ದೀರಿ” ಎಂದು ದಬಾಯಿಸಿದೆ.
ಅದಕ್ಕೆ ಶಾಮಣ್ಣ “ಭಲೆ ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಇದು ಕನ್ನಡಕ್ಕಾಗಿ ಎತ್ತಿದ ಕಿರುಬೆರಳು” ಎಂದರು. ನನಗೆ ಅರ್ಥವಾಗಲಿಲ್ಲ, ಆದರೂ ಅವರ ಮಾತಿನಲ್ಲಿ ಏನೋ ಕಿಡಿಗೇಡಿತನ ಕಂಡುದರಿಂದ ನಾನು ಸುಮ್ಮನಾದೆ. ಸಂಜೆ ಕೋಣಂದೂರು ಲಿಂಗಪ್ಪ ಬೆರಳು ತೋರಿಸಿದವರ ಮೇಲೆಲ್ಲ ರೇಗಿ ರೇಗಿ ಬೀಳುತ್ತಿದ್ದುದನ್ನು ನೋಡಿ ಏನಂದು ಕೇಳಿದಾಗ ಶಾಮಣ್ಣವನರು ಕಿರುಬೆರಳು ತೋರಿಸಿದ್ದರ ಉದ್ದೇಶ ಅರ್ಥವಾಯ್ತು.
ಕುವೆಂಪು ಒಂದು ಲೇಖನದಲ್ಲಿ “ಕನ್ನಡಕ್ಕಾಗಿ ಒಂದು ಕಿರುಬೆರಳನ್ನಾದರೂ ಎತ್ತು. ಅದಕ್ಕೆ ಗೋವರ್ಧನಗಿರಿಯನ್ನು ಎತ್ತುವ ಬಲ ಬರುತ್ತದೆ” ಎಂದು ಹೇಳಿದ್ದನ್ನು ಉಲ್ಲೇಖಿಸಿ ಲಿಂಗಪ್ಪ ಭಾವೋದ್ವೇಗದ ಘರ್ಜನೆ ಮಾಡಿದ್ದರಂತೆ! ಶಾಮಣ್ಣ ಅದನ್ನು ಅಕ್ಷರಶಃ ಅಭಿನಯಿಸಿ ತೋರಿಸುತ್ತ ಲಿಂಗಪ್ಪನವರನ್ನು ನಗೆಪಾಟಲಿಗೀಡು ಮಾಡಿದ್ದರು.

ಎಲ್ಲಕ್ಕಿಂತ ಅನಂತಮೂರ್ತಿಯವರು ತಮ್ಮ ಕತೆಯಲ್ಲಿ ಕಾಮವನ್ನು “ಟೊಂಕದಲ್ಲಿ ಹೊತ್ತಿ ಉರಿಯುವ ದೊಂದಿ” ಎಂದು ವರ್ಣಿಸಿದ್ದನ್ನು ಕೇಳಿ “ಹಾಗಾದರೆ ಇನ್ನು ಮೇಲೆ ಮೇಷ್ಟರಿಗೆ ಸಿಗರೇಟು ಸೇದಲು ಬೆಂಕಿ ಪೆಟ್ಟಿಗೆಯ ಅಗತ್ಯವೇ ಇಲ್ಲ. ಗುಂಡಿ ಬಿಚ್ಚಿದರೆ ಸಾಕು ಸಿಗರೇಟ್ ಲೈಟರ್ ರೆಡಿ! ಎಂದು ಸಭೆಯಲ್ಲೇ ನನ್ನ ಕಿವಿಯಲ್ಲಿ ಗುಟ್ಟಾಗಿ ಹೇಳಿ ನಾನು ಮರ್ಯಾದೆ ಕಳಕೊಳ್ಳುವ ಭಯದಿಂದ ಸಭೆಯಿಂದೆದ್ದು ಹೊರಗೆ ಹೋಗಿ ನಗಬೇಕಾಯ್ತು.
ಶಾಮಣ್ಣನವರ ಪ್ರಭಾವದಿಂದ ತಮಾಷೆ, ವಿನೋದ, ಹಾಸ್ಯಗಳು ನನ್ನ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿ ಹೋದವು. ಒಂದು ಸಂಗತಿಯನ್ನು ಏಕಕಾಲದಲ್ಲಿ ಅರ್ಥಪೂರ್ಣವಾಗಿಯೂ ಅಂಗಾತವಾಗಿಯೂ ಕಾಣಬಹುದಾದ ಸಾಧ್ಯತೆಗಳು ಗೋಚರಿಸಿದವು. ಆದರೆ ಇದಕ್ಕಿಂತಲೂ ಮುಖ್ಯವಾಗಿ ನನಗೆ ಗೋಚರಿಸಿದ ಅಂಶವೆಂದರೆ ಸನ್ನಿವೇಶದ ಸಮರ್ಥನೆ ಇಲ್ಲದ ಭಾವಾವೇಶವನ್ನು ಹಾಸ್ಯಪ್ರಜ್ಞೆ ಸಮರ್ಥವಾಗಿ ತಡೆಗಟ್ಟುತ್ತದೆ ಎನ್ನುವುದು. ಹಾಗಾಗಿ ಈ ಹಾಸ್ಯಪ್ರಜ್ಞೆಯಿಂದ ನನ್ನ ಬರಹಗಳಲ್ಲಿ ಭಾವುಕತೆ ಕಡಿಮೆಯಾಗುತ್ತ ವೈಚಾರಿಕತೆ ಮುಂದಾಯ್ತು.
ಕತೆ, ಕಾದಂಬರಿಗಳ ಪಾತ್ರಗಳೆಲ್ಲ ಪರಸ್ಪರ ಹಾಸ್ಯ ಮಾಡುವುದಲ್ಲದೆ ತಮ್ಮನ್ನು ತಾವೇ ವಿಡಂಬನೆ ಮಾಡುವುದರಿಂದ ಓದುಗರ ದೃಷ್ಟಿಯಲ್ಲಿ ಹಾಸ್ಯಾಸ್ಪದವಾಗುವ ಸಂಭವ ಕಡಿಮೆಯಾಯ್ತು. ತೇಜಸ್ವಿಯವರ ಜೊತೆಯಲ್ಲಿಯೇ ಮೈಸೂರಿಗೆ ಬಂದ ನಂತರ ಸಂಗೀತಾಸಕ್ತಿಯನ್ನು ತೇಜಸ್ವಿಯವರಲ್ಲಿ ತುಂಬಿದ್ದು.
ಬಾಚಣಿಗೆಯಲ್ಲಿ ಸಂಗೀತ ನುಡಿಸುವ ‘ದಂತವಾದ್ಯ’ ಪ್ರಕರಣ, ಸಂಗೀತ ಕಲಿಯುವ ಭರದಲ್ಲಿ ಕುವೆಂಪುರವರನ್ನು ಸಿಡಿಮಿಡಿಗೊಳಿಸಿದ ಪ್ರಕರಣ.. ಹೀಗೆ ಹತ್ತು ಹಲವು ಹಾಸ್ಯಪ್ರಸಂಗಗಳ ವಿವರಣೆ ‘ಅಣ್ಣನ ನೆನಪು’ ಹಾಗೂ ಇತರೆ ಕೃತಿಗಳಲ್ಲಿ ಒಡಮೂಡಿದ್ದು, ಶಾಮಣ್ಣನವರ ವ್ಯಕ್ತಿತ್ವದ ಪ್ರಭಾವವೂ ಕೂಡಾ ತೇಜಸ್ವಿಯವರಲ್ಲಿ ಹಾಗೂ ಅವರ ಕೃತಿಯಲ್ಲಿ ಹಾಸ್ಯಪ್ರಜ್ಞೆ ಮೂಡಲು ಒಂದು ಕಾರಣ ಎಂಬುದನ್ನು ಎಲ್ಲರೂ ಒಪ್ಪಬಹುದಾದ ಸಂಗತಿ. ಹೀಗಾಗಿ ಸೆಪ್ಟಂಬರ್ ೮ ತೇಜಸ್ವಿಯವರ ಜನ್ಮದಿನದಂದು ಸಹಜವಾಗಿ ಅವರ ಜೊತೆಯಲ್ಲಿ ಶಾಮಣ್ಣನವರ ನೆನಪು ಕೂಡ ಮೂಡುತ್ತದೆ.

‍ಲೇಖಕರು avadhi

15 September, 2019

2 Comments

  1. T S SHRAVANA KUMARI

    ಒಳ್ಳೆಯ ಲೇಖನ. ತುಂಬಾ ಇಷ್ಟವಾಯಿತು.

  2. ಡಿ.ಎಮ್. ನದಾಫ್.

    ಹಾಸ್ಯ ಲೇಖಕನನ್ನು ಹಾಸ್ಯಮಯವಾಗಿ ವಿಮರ್ಶೆ ಕೂಡ ಮಾಡಬಹುದು,
    ಅಷ್ಟೇ ಮೌಲಿಕವಾಗಿ……
    ಈ ಲೇಖನ ತೋರಿಸಿತು
    ಅಭಿನಂದನೆಗಳು
    *ಡಿ.ಎಮ್ ನದಾಫ್
    ಅಫಜಲಪುರ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading