-ಕೆ ಮಹಾಂತೇಶ್
ದಾವಣಗೆರೆಯ ಸಂಘರ್ಷದ ಮನಸ್ಸುಗಳಿಗೆ
ಶಾಂತಿ ಮುಲಾಮು ಹಚ್ಚಿದ್ದ ಕಲಾವಿದ
ರಾಜು ತಾಳಿಕೋಟೆ..!
ರಾಮನೂ ನೀನೇ,
ರಹೀಮನೂ ನೀನೇ,
ನಿನಗೇತಕೋ ಸ್ವಂತದಾ ಮನೆ??
ನಿನ್ನ ಮನೆ ಎಂಬ ಮಜೀದ್ ಒಡೆದರೂ ನೀನು ಸಾಯಲಿಲ್ಲ.
ಪುನಃ ಮಂದಿರ ಕಟ್ಟಿಸಿದರೂ
ನಿನಗೆ ಮರುಹುಟ್ಟು ಇಲ್ಲ.
ಯಾಕಂದ್ರೆ ನೀನು ಆದಿ, ಅಂತ್ಯ..
ಹೋಗ್ಲಿ ಬಿಡ ಅವನೌನ.
ದೊಡ್ಡಪ್ಪನ ಮನಿ ವಿಷ್ಯ ಗಿಡ್ಡಪ್ಪಗ ಯಾಕ್ ಬೇಕ್ರಿಪಾ.
ನಾವ್ ದುಡಕೊಂಡ್ ತಿನ್ನೋ ಮಂದಿ..
ಇಂಥಹ ಹತ್ತು ಹಲವು ಅರ್ಥಪೂರ್ಣ ಮೊನಚು ಹಾಗೂ ವ್ಯಂಗ್ಯಭರಿತ ಡೈಲಾಗ್ ಗಳ ಮೂಲಕ ಸಮಾಜದ ಸಮಸ್ಯೆಗಳನ್ನು ವಿಡಂಬನೆ ಮಾಡುತ್ತಾ ಒಂದು ಕಾಲದಲ್ಲಿ ಕೋಮು ಸಂಘರ್ಷದಿಂದ ನಲುಗಿದ್ದ ನನ್ನ ದಾವಣಗೆರೆ ಜನರಮನಸ್ಸುಗಳಿಗೆ ಶಾಂತಿಯ ಮುಲಾಮು ಹಚ್ಚಿದ್ದವರು ಇಂದು ಇದ್ದಕ್ಕಿದ್ದಂತೆ ಆಗಲಿದ ಕಲಾವಿದ ರಾಜು ತಾಳಿಕೋಟೆಯವರು.
ಅದು 1996-97 ನೇ ಇಸ್ವೀ ನಾನು ಆಗಸ್ಟೇ ದಾವಣಗೆರೆ ಯಲ್ಲಿ ವಕೀಲನಾಗಿ ಸೀನಿಯರ್ ನಾಗಕುಮಾರಸ್ವಾಮಿ ಬಳಿ ಪ್ರಾಕ್ಟೀಸ್ ಶುರುಮಾಡಿದ್ದೆ. ನಮ್ಮ ಸಿನೀಯರ್ ದಾವಣಗೆರೆಯಲ್ಲಿ ಒಂದುಕಾಲದಲ್ಲಿ ಕ್ರಿಮಿನಲ್ ಕೇಸ್ ನಲ್ಲೇ ಹೆಸರು ಮಾಡಿದ್ದ ಕಾಯಿಸ್ವಾಮಿ ವಕೀಲ ಅವರ ಶಿಷ್ಯರಾಗಿದ್ದವರು ಮತ್ತು ಅವರು ಕೂಡ ಆಗಲೇ ಹಲವು ಪ್ರಮುಖ ಕ್ರಿಮಿನಲ್ ಪ್ರಕರಣಗಳಲ್ಲಿ ಗೆಲುವು ಪ್ರಸಿದ್ದಿ ಪಡೆದಿದ್ದರು.
ಒಂದು ದಿನ ಬೆಳೆಗ್ಗೆ ರಾಮ್ ಅಂಡ್ ಕೋ ಸರ್ಕಲ್ ಬಳಿ ಇದ್ದ ನಮ್ಮ ಸೀನಿಯರ್ ಆಫೀಸ್ ಬಳಿ ಕೂದಲು ಕೆದರಿದ್ದ ಸ್ನಾನಮಾಡಿ ಬಹುಶಃ ಎರಡುಮೂರು ದಿನಗಳಾಗಿದ್ದವು ಎಂದು ಮೇಲ್ನೋಟಕ್ಕೆ ಕಾಣುತ್ತಿದ್ದ ಇನ್ನೂಮುಖದ ಮೇಲೆ ಮೀಸೆ ಮೂಡದ ಹದಿಹರೆಯದ ನಾಲ್ಕಾರು ಹುಡುಗ್ರು ಭಯ ಹಾಗೂ ಆತಂಕದ ಮುಖಗಳನೊತ್ತು ನಮ್ಮ ವಕೀಲರ ಕಚೇರಿಗೆ ಬಂದಿದ್ರು. ಅವರೆನ್ನೆಲ್ಲ ಲೇ ಬರ್ರೋ ಇಲ್ಲಿ ಸೈನ್ ಹಾಕಿ ಅಂತಾ ಒಳಗೆ ಕರೆದು ಇನ್ನೊಬ್ಬ ವಕೀಲ ನಾಗರಾಜ್ ಅವರಿಗೆ ರೀ ಆ ಹುಡುಗ್ರುದ್ದು ವಕಾಲತ್ತಗೆ ಸಹಿ ಹಾಕಿಸ್ಕೊರ್ರೀ ಅಂತಾಹೇಳಿ ಲೇ ನೀವೆಲ್ಲ ನಾಲ್ಕೈದು ದಿನ ಎಲ್ಲೂ ಕಾಣಿಸ್ಕೊಬಾರದು ಗೊತ್ತಾಯ್ತೋ ಎಲ್ಲಾದ್ರೂ ನಿಮ್ಮಸಂಬಂಧಿಕ್ರು ಇರೋ ಕಡೆ ಹೋಗಿ ಬಚ್ಚಿಟ್ಕೋಳ್ರೀ…..ಎಂದು ನಮ್ಮ ಸೀನಿಯರ್ ಹೇಳಿದ್ದಕ್ಕೆ ಆ ಹುಡುಗ್ರು..ಹೇಗೋ ಎಂತಾನೋ ಅಂತಾ ಟೆನ್ಸ್ ನಲ್ಲಿ ಆಯ್ತು ಸಾ ಎಂದು ತಲೆ ಆಡಿಸಿದ್ರು. ಈ ಸಂಭಾಷಣೆ ನಡೆಯುವಾಗ ಅಲ್ಲೇ ಇದ್ದ ನಂಗೇ ಆಶ್ಚರ್ಯವಾಯ್ತು. ಯಾಕಂದ್ರೇ ಅವರೆಲ್ಲ ನಾನು ರೂಂ ಮಾಡಿ ವಾಸವಾಗಿದ್ದ ದಾವಣಗೆರೆ ಕೆ.ಟಿ.ಜೆ ನಗರ ದ 10-12 ನೇ ಕ್ರಾಸ್ಗಳಲ್ಲಿ ನಾನು ದಿನ ನಿತ್ಯ ನೋಡುತ್ತಿದ್ದ ಹುಡುಗರಾಗಿದ್ರು. ಆಮೇಲೆ ಗೊತ್ತಾದ ಅಸಲಿ ಸಂಗತಿ ಏನಂದ್ರೇ ಇದೇ ಹುಡುಗ್ರೂ ಮೂರು ದಿನಗಳ ಹಿಂದೆ ಕಲಾವಿದ ರಾಜು ತಾಳಿಕೋಟೆಯ ಮೇಲೆ ಬೀರು ಹಾಗೂ ಸೋಡಾ ಬಾಟಲಿಗಳಿಂದ ನಾಟಕ ನಡೆಯುವಾಗ್ಲೇ ತಲೆ ಹೊಡೆದು ತಪ್ಪಿಸಿಕೊಂಡವರು ಎಂದು.!
ದಾವಣಗೆರೆಯ ಅರುಣಾ ಟಾಕೀಸ್ ಎದುರುಗಡೆ ಇದ್ದ ಹೊಳೆ ಹೊನ್ನೂರು ತೋಟದ ಬಯಲಲ್ಲಿ ಶ್ರೀ ಹುಚ್ಚೇಶ್ವರ ನಾಟಕ ಕಂಪನಿಯ ನಾಟಕ ತಂಡದ ಕಲಾವಿದರಾಗಿದ್ದ ರಾಜು ತಾಳಿಕೋಟೆ ನಟಿಸಿದ ಕುಡುಕು ಪಾತ್ರದಿಂದಾಗಿಯೇ ಆ ನಾಟಕ ತುಂಬಾ ಯಶಸ್ವಿ ಪ್ರದರ್ಶನ ಕಾಣುತ್ತಿತ್ತು 1989 ರ ರಾಮನ ಇಟ್ಟಿಗೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕೋಮು ಸಂಘರ್ಷ ಹಾಗೂ ಪೊಲಿಸ್ ಗೋಲಿಬಾರ್ ನಿಂದ 17 ಅಮಾಯಕರು ಜೀವ ಕಳೆದುಕೊಂಡ ಮೇಲೂ ಆಗಾಗ ಎರಡುಮೂರುಬಾರಿ ಕೋಮು ಸಂಘರ್ಷದಿಂದ ನಲುಗುತ್ತಲೇ ಇದ್ದ ಮಧ್ಯ ಕರ್ನಾಟಕದ ಈ ನನ್ನ ನಗರ. 1994 ಬಳಿಕ ರಾಜ್ಯದಲ್ಲಿ ಜನತಾದಳ ಅಧಿಕಾರಕ್ಕೆ ಬರುವ ಹೊತ್ತಿಗೆ ಕೋಮು ಸಂಘರ್ಘದ ಕುಲುಮೆಯಿಂದ ಆಗಷ್ಟೇ ಹೊರ ಬರುತ್ತಾ ಮತ್ತೆ ಹಿಂದಿನ ಸ್ಥಿತಿಯತ್ತ ಮುಖಮಾಡಿತ್ತು. ಅಂತಹ ಸಂದರ್ಭದಲ್ಲಿ ಶಾಂತಿ ಸೌಹಾರ್ಧತೆ ಎಷ್ಟು ಮುಖ್ಯ ಮತ್ತು ಕೆಲವರು ಬಡವರ ಮಕ್ಕಳನ್ನು ಗಲಭೆಗೆ ನೂಕಿ ಹೇಗೆ ತಮ್ಮ ರಾಜಕೀಯಬೇಳೆ ಬೇಸಿಕೊಳ್ಳುತ್ತಿದ್ದಾರೆ ಎನ್ನುವ ಸಂಗತಿಯನ್ನು ಅತ್ಯಂತ ವ್ಯಂಗ್ಯವಾಗಿ ತಮ್ಮ ಮೊನಚು ಮಾತುಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತಾ ಕೋಮುವಾದಿಗಳ ಬಣ್ಣವನ್ನು ಬಯಲುಗೊಳಿಸುವ ಕೆಲಸವನ್ನು ಕುಡುಕನ ಪಾತ್ರದ ಮೂಲಕ ರಾಜು ತಾಳಿಕೋಟೆ ಮಾಡುತ್ತಿದ್ದರು. ಎರಡು ಮೂರು ಬಾರಿಕೋಮು ಸಂಘರ್ಷದಿಂದ ನಲುಗಿದ್ದ ದಾವಣಗೆರೆ ಜನರಿಗೆ ಸಹಜವಾಗಿ ರಾಜು ತಾಳಿಕೋಟೆಯ ಆಮಾತುಗಳು ಸಾಂತ್ವಾನದ ಮುಲಾಮುಗಳಾಗಿದ್ದವು ಎಂದರೆ ತಪ್ಪಲ್ಲ. ಹೀಗಾಗಿ ಕುಟುಂಬಗಳ ಸಹಿತ ಜನರು ನಾಟಕದತ್ತ ಮುಖಮಾಡಿದ್ದರು ಮತ್ತು ಈ ಕಾರಣದಿಂದಾಗಿಯೇ ರಾಜು ತಾಳಿಕೋಟೆ ಅವರು ದಾವಣಗೆರೆ ಜನರ ಮನೆಮನದಲ್ಲಿ ಚಿರಪರಿಚಿತರಾದರು.
ಆದರೆ ಅವರು ಈಮಾತುಗಳು ಜನರಿಗೆ ಇಷ್ಟವಾಗಿದ್ದೇನೋ ಸರಿ ಕೋಮುವಾದಿ_ಶಕ್ತಿಗಳಿಗೆ ಅದರ ನಾಯಕರಿಗೆ ಇಷ್ಟವಾಗಬೇಕಲ್ಲ? ಹೀಗಾಗಿ ಅಮಾಯಕ ಸಣ್ಣಪ್ರಾಯದ ಹುಡುಗರಿಗೆ ಕುಡಿಸಿ ಕೈಯಲ್ಲಿ ಒಂದಿಷ್ಟು ಹಣ ಇಟ್ಟು ನಾಟಕ ನಡೆಯುವ ಸ್ಟೇಜ್ ಗೆ ನುಗ್ಗಿಸಿ ಕಿಕ್ಕಿರಿದು ತುಂಬಿದ ನಾಟಕ ಟೆಂಟ್‌ನೊಳಗೆ ಈ ಹುಡುಗರು ರಾಜು ತಾಳಿಕೋಟೆಯನ್ನು ಕೇಂದ್ರೀಕರಿಸಿಯೇ ದಾಳಿ ನಡೆಸಿದ್ದರು. ಇದರಿಂದಾಗಿ ಮಾರಣಾಂತಿಕ ದಾಳಿಗೊಳಗಾದ ರಾಜು ತಾಳಿಕೋಟೆ ಹಲವು ದಿನಗಳ ಕಾಲ ದಾವಣಗೆರೆ ಆಸ್ಪತ್ರೆಯಲ್ಲಿ ಕಾಲಕಳೆಯಬೇಕಾಯಿತು.
ಇಂತಹ ರಾಜುತಾಳಿಕೋಟೆ ಎನ್ನುವ ಅಪ್ಪಟ ಉತ್ತರ ಕರ್ನಾಟಕದ ಕಲಾವಿದ ಈಗ ಇದ್ದಕ್ಕಿದ್ದಂತೆ ನಮ್ಮಿಂದ ದೂರವಾಗಿದ್ದು ಅತ್ಯಂತ ನೋವು ಹಾಗೂ ದುಃಖದ ಸಂಗತಿ. ರಾಜು ತಾಳಿಕೋಟೆಯವರೆ ನಿಮಗಿದೋ ನಮ್ಮಯ ನಮನಗಳು.






0 Comments