‘ಛಂದ’ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶ
ಈ ಸಾಲಿನ ‘ಛಂದ’ ಪುಸ್ತಕ ಬಹುಮಾನವನ್ನು ಶಶಿ ತರೀಕೆರೆ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಶಶಿ, ಸದ್ಯಕ್ಕೆ ಬೆಂಗಳೂರಿನ ಇಸ್ರೋದಲ್ಲಿ ಟೆಕ್ನಿಷಿಯನ್ ಆಗಿ ಉದ್ಯೋಗ ಮಾಡುತ್ತಿದ್ದಾರೆ. ಕವಿತೆ, ಕತೆ, ಕಿರುಚಿತ್ರ ನಿರ್ಮಾಣ ಮತ್ತು ನಿರ್ದೇಶನ
ಇವರ ಹವ್ಯಾಸವಾಗಿದೆ.

ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 100 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಹಿರಿಯ ಕತೆಗಾರ್ತಿ ಸುಮಂಗಲಾ, ಕತೆಗಾರ ಕರ್ಕಿ ಕೃಷ್ಣಮೂರ್ತಿ ಮತ್ತು
ವಸುಧೇಂದ್ರ ಮಾಡಿದ್ದಾರೆ.
ಭಾಗವಹಿಸಿದ ಎಲ್ಲರಿಗೂ ಛಂದ ಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ 30,000 ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಅಕ್ಟೋಬರ್ 20, 2019 ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ತೀರ್ಪುಗಾರ್ತಿಯ ಟಿಪ್ಪಣಿ
ಪ್ರಿಯ ವಸುಧೇಂದ್ರ,
ಛಂದ ಪುಸ್ತಕ ಹಸ್ತಪ್ರತಿ ಪ್ರಶಸ್ತಿಗೆ ಅಂತಿಮವಾಗಿ ಶಶಿ ತರೀಕೆರೆಯವರನ್ನು ಆಯ್ಕೆ ಮಾಡಿರುವೆ.
ಶಶಿ ತಮ್ಮ ಕತೆಗಳ ಮೂಲಕ ತೆರೆದಿಟ್ಟಿರುವ ಪ್ರಪಂಚ ಕನ್ನಡದ ಸಣ್ಣಕತೆಗಳ ಓದುಗರಿಗೆ ಹೆಚ್ಚು ಬಳಕೆಯಿಲ್ಲದ್ದು.
ಕಾಮ ಕ್ರೋಧ ಲೋಭೇತ್ಯಾದಿಗಳನ್ನು ಅರಿಷಡ್ವರ್ಗ ಎನ್ನುತ್ತೇವೆ. ವಾಸ್ತವವಾಗಿ ಇವು ಅರಿಗಳಲ್ಲ. ಮಿತ್ರಷಡ್ವರ್ಗಗಳೆಂದು ನಾನು ಭಾವಿಸುವೆ.
ಆಸೆ, ನಿರಾಸೆ, ಕೋಪ, ದುಗುಡ, ಸಡಗರಗಳಿಲ್ಲದ ಬದುಕನ್ನು ಯಾಕಾದರು ಬದುಕಬೇಕು? ಆಗ ನಾವೆಲ್ಲರೂ ಜಗದ್ಗುರುಗಳೇ ಆಗಿಬಿಡುತ್ತಿದ್ದೆವು. ಜಗತ್ತು ತಾನೇ ಎಷ್ಟು ಜಗದ್ಗುರುಗಳನ್ನು ಧರಿಸಬಲ್ಲುದು. ಈ ಮಿತ್ರ ಷಡ್ವರ್ಗಗಳ ಪರಿಣಾಮವನ್ನು ಕುರಿತೇ ಜಗತ್ತಿನ ಮೇಲಿರುವ ನಾವಷ್ಟೂ ಬರಹಗಾರರು ಬರೆಯುತ್ತಿರುವುದು . ಆದರೆ ನಾವು ಬಹುತೇಕರು ಹೀಗೆ ಬರೆಯುವಾಗ ಮಧ್ಯಮವರ್ಗದ ಮನೆ ಮನಗಳೊಳಗೇ ಸುತ್ತು ಹೊಡೆಯುತ್ತೇವೆ.
ಶಶಿ ಈ ಸುತ್ತಿನಿಂದ ಆಚೆ ಬಂದಿದ್ದಾರೆ. ಅವರ ಕತೆಗಳು ಈ ಬಹುಮಾನಕ್ಕೆ ಅರ್ಹವಾಗಿವೆಯೆಂದು ನನ್ನ ಅನಿಸಿಕೆ.
ನನ್ನ ಮೇಲೆ ‘ಛಂದ’ ಇಟ್ಟಿರುವ ನಂಬುಗೆಗೆ ಆಭಾರಿ.
ವಿಶ್ವಾಸದಿಂದ,
ಲಲಿತಾ ಸಿದ್ಧಬಸವಯ್ಯ






ಛಂದ ಬಹುಮಾನ ಪಡೆದವರಿಗೆ
ಅಭಿನಂದನೆಗಳು,
ಪ್ರಕಾಶನದಾರಂಭದಿಂದಲೂ ಈ ಹೆಸರಿನ ಬಗ್ಗೆ ನನಗಿರುವ ಶ್ಲೇಷಾರ್ಥದ ಕುರಿತು ಹೇಳಿಕೊಳ್ಳಲು ಆಗಿರಲಿಲ್ಲ, ನಮ್ಮ ಕಲಬುರಗಿ ಕಡೆ ಛಂದ ಅಂದರೆ ಸುಂದರ, ಸಮರ್ಪಕ ಎಂದರ್ಥ.ಚಂದ ಎಂಬುದನ್ನು ಚ ದ ಮಹಾಪ್ರಾಣ ಛ ಎಂದುಚ್ಛರಿಸುತ್ತಾರೆ
ಆದರೆ ಛಂದ ಎಂಬುದನ್ನು ಛಂದಸ್ಸು ಪದಕ್ಕೆ ಸಂವಾದಿಯಾಗಿ ಬಳಸಿರಬಹುದು ಅಂದುಕೊಂಡಿದ್ದೇನೆ,
ಹೆಸರೇನಾದರೂ ಇರಲಿ ಈ ಯೋಜನೆ ಛಂದ ಅದರಿ ಅದಕ್ಕ ಅಭಿನಂದನೆಗಳು.
* ಡಿ.ಎಮ್. ನದಾಫ್,
ಅಫಜಲಪುರ
ಶಶಿ ತರೀಕೆರೆಯವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಕತೆಗಳನ್ನು ಓದುವ ಕುತೂಹಲ ಉಂಟಾಗಿದೆ. ಪುಸ್ತಕ ಬಿಡುಗಡೆಯಾಗುವುದನ್ನು ಕಾಯುತ್ತಿದ್ದೇನೆ.
ಅಭಿನಂದನೆಗಳು
ಒಬ್ಬರು ಮಾತ್ರ ಆಯ್ಕೆ ಆಗೋದಾ…
ನನಗೆ ಗೊತ್ತಿರುವಂತೆ ಇಲ್ಲಿಯವರೆಗೆ ವರ್ಷಕ್ಕೊಬ್ಬರಿಗೆ ಪ್ರಶಸ್ತಿ ಸಿಗುತ್ತಿದೆ.