ಶಶಿ ಕಪೂರ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ಹನುಮಂತ ಅನಂತ ಪಾಟೀಲ

ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪುರಸ್ಕೃತ ‘ಶಶಿ ಕಪೂರ’


2014 ನೇ ಸಾಲಿನ ‘ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ’ ಪ್ರಕಟಗೊಂಡಿದ್ದು ಅದು ಹಿಂದಿ ಚಲನಚಿತ್ರ ರಂಗದ ಹಿರಿಯ ನಟ ಶಶಿ ಕಪೂರಗೆ ಸಂದಿದೆ. ಈತ ಈ ಪ್ರಶಸ್ತಿ ಪಡೆದ ಕಪೂರ ಖಾನದಾನಿನ ಮೂರನೆಯ ನಟ. ಮೊದಲನೆಯ ನಟ ತಂದೆ ಪೃಥ್ವಿರಾಜ ಕಪೂರ ಆದರೆ ಇನ್ನೊಬ್ಬ ನಟ ಈತನ ಹಿರಿಯಣ್ಣ ಭಾರತೀಯ ಚಲನಚಿತ್ರ ರಂಗದ ಗ್ರೇಟ್ ಶೋ ಮ್ಯಾನ್ ರಾಜ ಕಪೂರ. ಇಂತಹ ಖ್ಯಾತ ಕುಟುಂಬದ ಹಿನ್ನೆಲೆಯಿದ್ದರೂ ಶಶಿ ಕಪೂರ ಸಾಗಿ ಬಂದ ಸಿನೆ ಲೋಕದ ಪಯಣ ಹೂವಿನ ಹಾಸಿಗೆಯಾಗಿರಲಿಲ್ಲ. ತಂದೆ ಪೃಥ್ವಿರಾಜ ಕಪೂರ ಅಷ್ಟು ದೊಡ್ಡ ರಂಗಭೂಮಿ ಮತ್ತು ಹಿಂದಿ ಚಲನಚಿತ್ರ ರಂಗದ ನಟನಾಗಿದ್ದರೂ ತನ್ನ ಮೂವರು ಮಕ್ಕಳ ಹಿಂದಿ ಚಲನಚಿತ್ರ ರಂಗ ಪ್ರವೇಶಕ್ಕೆ ಯಾವುದೆ ಸಹಾಯವನ್ನು ಆತ ಮಾಡಲಿಲ್ಲ, ಅವರೆಲ್ಲ ತಮ್ಮ ಪ್ರತಿಭೆಯ ಬಲದಿಂದಲೆ ಮೇಲಕ್ಕೆ ಬಂದವರು, ಇದು ಗಮನಿಸ ಬೇಕಾದ ಸಂಗತಿ. ಇವರಲ್ಲಿ ಶಶಿ ಕಪೂರನ ಹೆಚ್ಚುಗಾರಿಕೆಯಂದರೆ ಈತ ಆ ಕುಟುಂಬದ ಪ್ರಥಮ ಪದವೀಧರನೆಂಬುದು.
ಕಳೆದ ಶತಮಾನದ ಆರನೆ ಶತಮಾನದ ಪ್ರಾರಂಭಿಕ ದಿನಮಾನಗಳವು, ರಾಜ ಕಪೂರ ಹಿಂದಿ ಚಲನ ಚಿತ್ರರಂಗದ ಅಗ್ರಮಾನ್ಯ ನಾಯಕ ನಟರ ಪೈಕಿ ಒಬ್ಬನಾಗಿದ್ದ. ಇನ್ನಿಬ್ಬರು ಪ್ರಮುಖ ನಟರೆಂದರೆ ದಿಲೀಪ ಕುಮಾರ ಮತ್ತು ದೇವ ಆನಂದ. ಅವರಷ್ಟೆ ಸಮರ್ಥರಾದ ಭರತ ಭೂಷಣ್, ಅಶೋಕ ಕುಮಾರ, ರಾಜ ಕುಮಾರ, ರಾಜೇಂದ್ರ ಕುಮಾರ, ಪ್ರದೀಪ ಕುಮಾರ ಮುಂತಾದವರ ದಂಡೆ ಅಲ್ಲಿತ್ತು. ಅಷ್ಟೊತ್ತಿಗಾಗಲೆ ತನ್ನದೆ ಆರ್.ಕೆ.ಬ್ಯಾನರಿನ ಅಡಿ್ಯಲ್ಲಿ ‘ಆವಾರಾ’, ‘ಆಗ್’, ‘ಆಹ್’, ‘ಜಾಗ್ತೆ ರಹೋ’ ಮತ್ತು ‘ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ’ ಗಳಂತಹ ಉತ್ತಮ ಚಲನಚಿತ್ರಗಳನ್ನು ನಿರ್ಮಿಸಿ ನಟಿಸಿ ಖ್ಯಾತಿಯನ್ನು ಪಡೆದಿದ್ದ. ಇನ್ನೊಂದೆಡೆ ಈತನ ಎರಡನೆಯ ಅಣ್ಣ ಶಮ್ಮಿ ಕಪೂರ ‘ದಿಲ್ ತೇರಾ ದೀವಾನಾ’ ಮತ್ತು ಸುಬೋಧ ಮುಖರ್ಜಿ ಬ್ಯಾನರಿನ ‘ಜಂಗ್ಲಿ’ ಗಳಂತಹ ಸೂಪರ ಹಿಟ್ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಾಯಕ ನಟನೆನಿಸಿದ್ದ, ಆತನಿಗೆ ಆತನದೆ ಆದ ಅಭಿಮಾನಿ ಪ್ರೇಕ್ಷಕ ವೃಂದವಿತ್ತು. ಆದರೆ ಶಶಿ ತನ್ನ ತಂದೆಯ ಪೃಥ್ವಿ ಥಿಯೇಟರಿನಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತ ಹಿಂದಿ ಚಲನತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸುವ ಅವಕಾಶಗಳಿಗಾಗಿ ಅಲೆದಾಡುತ್ತಿದ್ದ. ಸಣ್ಣ ಪುಟ್ಟ ಬ್ಯಾನರಿನ ಚಿತ್ರಗಳಲ್ಲಿ ನಟಿಸಿದ್ದರೂ ಯಶಸ್ವಿ ನಾಯಕ ನಟನ ಸ್ಥಾನ ಆತನಿಗೆ ಮರೀಚಿಕೆಯಾಗಿತ್ತು.

ಆದರೆ ಆತನನ್ನು ಒಬ್ಬ ಪ್ರತಿಭಾವಂತ ನಟನೆಂದು ಗುರಿತಿಸಿದ್ದು 1964 ರಲ್ಲಿ ತೆರೆ ಕಂಡು ಪ್ರದರ್ಶನ ಕಂಡೆಡೆಯೆಲ್ಲ ಶತ ದಿನೋತ್ಸವ, ರಜತೋತ್ಸವ ಆಚರಿಸಿ ಕೆಲವು ಮೆಟ್ರೊಪೊಲಿಟನ್ ನಗರಗಳಲ್ಲಿ ಸುವರ್ಣ ಮಹೋತ್ಸವವನ್ನಾಚರಿಸಿದ್ದ ಬಿ.ಆರ್.ಛೋಪ್ರಾ ವ್ಯಾನರಿನ ಚಿತ್ರ ‘ವಖ್ತ್’ ಎನ್ನುವ ಮಲ್ಟಿ ಸ್ಟಾರರ್ ಚಿತ್ರ. ಬಲರಾಜ್ ಸಹಾನಿ, ಅಚಲಾ ಸಚದೇವ, ರಾಜ ಕುಮಾರ, ಸುನಿಲ್ ದತ್, ಸಾಧನಾ, ಶಶಿಕಲಾ, ರೆಹಮಾನ್ ಮತ್ತು ಮದನ ಪುರಿಯವರಂತಹ ಖ್ಯಾತನಾಮ ನಟರ ದಂಡೇ ಅಲ್ಲಿತ್ತು. ಈ ಚಿತ್ರದಲ್ಲಿ ಬಲರಾಜ್ ಸಹಾನಿಯ ಕೊನೆಯ ಮಗನಾಗಿ ಶರ್ಮಿಳಾ ಟ್ಯಾಗೋರಳ ಜೋಡಿಯಾಗಿ ಎಲ್ಲರಿಗೆ ಸರಿ ಸಮನಾಗಿ ಅಭಿನಯಿಸಿ ತಾನೂ ಒಬ್ಬ ಅಭಿನಯಿಸಬಲ್ಲ ತಾಕತ್ತಿನ ನಟನೆಂಬುದನ್ನು ಸಾಬೀತು ಪಡಿಸಿದ್ದ. ಉತ್ತಮ ಕಥಾನಕ, ದೃಶ್ಯ ಸಂಯೋಜನೆ, ನಟ ನಟಿಯರ ಅಭಿನಯ, ಯಶ ಛೋಪ್ರಾ|ನ ಸಮರ್ಥ ನಿರ್ದೇಶನ ಇವೆಲ್ಲಕ್ಕೂ ಕಲಶವಿಟ್ಟಂತೆ ರವಿಯ ಮಧುರ ಮನಸೋರೆಗೊಳುವ ಸಂಗೀತ ಈ ಚಿತ್ರದ ಹೈಲೈಟ್ ಗಳಾಗಿದ್ದವು. ಈ ಎಲ್ಲ ಕಾರಣಗಳಿಂದಾಗಿ ಈ ಚಿತ್ರ ಆ ಕಾಲದ ಅತಿ ಯಶಸ್ವಿ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಆಶಾ ಭೋಸ್ಲೆ ಹಾಡಿದ ರಾಜ್ ಕುಮಾರ್ ಮತ್ತು ಶಶಿಕಲಾರ ಬಾಲ್ ಡಾನ್ಸ್ ಗೆ ಅಳವಡಿಸಿದ್ದ ‘ಆಗೇ ಭೀ ಜಾಜನೇ ನ ದೋ ಪೀಛೇ ಭೀ ಜಾನೇನ ದೋ ಯಹಿ ವಖ್ತ ಹೈ ಕರನಾ ಯಹಿ ಜಿಂದಗಿ’ ಎನ್ನುವ ಗೀತೆ ಹಿಂದಿ ಚಿತ್ರಗೀತೆಗಳ ಸಾರ್ವಕಾಲಿಕ ಮೆಚ್ಚುಗೆಯ ಗೀತೆಗಳ ಪೈಕಿ ಒಂದು. ಉಳಿದ ಹಾಡುಗಳು ಸಹ ಅಷ್ಟೆ ಮಾಧುರ್ಯಪೂರ್ಣವಾದವುಗಳು.
ಈ ಚಿತ್ರ ಛೋಪ್ರಾ ಬ್ಯಾನರಿನಲ್ಲಿ ಚಿತ್ರವಾದ ಬಗೆ ಕೂಡ ಅಷ್ಟೆ ಸ್ವಾರಸ್ಯಪೂರ್ಣವಾದುದು. ಈ ಚಿತ್ರಕಥೆಯನ್ನು ಬರದ ಚಲನಚಿತ್ರ ಸಾಹಿತಿ ಕಪೂರ್ ಖಾನದಾನ ಮನದಲ್ಲಟ್ಟುಕೊಂಡು ಬರೆದ ಕಥೆಯಾಗಿತ್ತು. ರಾಜ್ ಕಪೂರ್ ಸೇರಿದಂತೆ ಖ್ಯಾತ ನಿರ್ಮಾಪಕರು ನಿರ್ದೇಶಕರು ಅನೇಕರು ನಿರಾಕರಿಸಿದಾಗ ಇದು ಕೈಸೇರಿದ್ದು ಛೋಪ್ರಾ ಬ್ಯಾನರನ್ನು. ಪಾತ್ರಧಾರಿಗಳ ಆಯ್ಕೆಯ ಕುರಿತು ನಿರ್ಭಂಧ ವಿಧಿಸ ದಿದ್ದರೆ ತಾನು ಈ ಚಿತ್ರ ತಯಾರಿಸುವುದಾಗಿ ಬಿ.ಆರ್.ಛೋಪ್ರಾ ಒಪ್ಪಿಕೊಂಡಾಗ ಶಶಿ ಕಪೂರ ಒಬ್ಬನನ್ನು ಹೊರತು ಪಡಿಸಿ ಉಳಿದ ಪಾತ್ರಧಾರಿಗಳು ಬದಲಾದರು. ಪೃಥ್ವಿರಾಜ ಕಪೂರ ಪಾತ್ರಕ್ಕೆ ಬಲರಾಜ ಸಹಾನಿ, ರಾಜ ಕಪೂರ ಪಾತ್ರಕ್ಕೆ ರಾಜ ಕುಮಾರ, ಶಮ್ಮಿ ಕಪೂರ ಪಾತ್ರಕ್ಕೆ ಸುನಿಲ ದತ್ ಬಂದರು, ಸಹ ನಟ ನಟಿಯರಾಗಿ ರೆಹಮಾನ್, ಮದನಪುರಿ, ಸಹ ನಾಯಕಿ ಮತ್ತು ಇತರ ಪಾತ್ರಧಾರಿಗಳಾಗಿ ಸಾಧನಾ, ಶರ್ಮಿಳಾ ಟ್ಯಾಗೋರ, ಶಶಿಕಲಾ, ಅಚಲಾ ಸಚದೇವರಂತಹ ಖ್ಯಾತನಾಮರಿದ್ದರು.
ಇದರ ನಂತರ ಬಂದದ್ದು ಆತನ ನಾಯಕ ನಟನೆಯ ಚಿತ್ರ ‘ಜಬ್ ಜಬ್ ಫೂಲ್ ಖಿಲೆ’ ಚಿತ್ರ, ಇದರಲ್ಲಿ ಈತನಿಗೆ ನಾಯಕಿಯಾಗಿ ಅಂದಿನ ಖ್ಯಾತ ನಟಿ ನಂದಾ ಅಭಿನಯಿಸಿದ್ದಳು. ಇದು ಪ್ರದರ್ಶನ ಕಂಡಲ್ಲೆಲ್ಲ ಅತಿ ಯಶಸ್ವಿ ಪ್ರದರ್ಶನ ಕಂಡ ಚಿತ್ರ. ಇದೂ ಸಹ ಅಷ್ಟೆ ಸಮರ್ಥ ಚಿತ್ರಕಥೆ, ಅಭಿನಯ, ನಿರ್ದೇಶನಗಳ ಜೊತೆಗೆ ಕಾಶ್ಮೀರದ ಸುಂದರ ಹೊರಾಂಗಣದಲ್ಲಿ ಚಿತ್ರೀಕರಣ ಇವೆಲ್ಲಕ್ಕೂ ಕುಂದಣವಿಟ್ಟಂತೆ ಕಲ್ಯಾಣಜಿ ಆನಂದಜೀಯವರ ಮನ ಸೂರೆಗೊಳುವ ಸಂಗೀತಗಳಿಂದಾಗಿ ಅತಿ ಯಶಸ್ವಿ ಚಿತ್ರವಾಗಲು ಸಹಕಾರಿಯಾದವು. ಈ ಚಿತ್ರದ ‘ಪರದೇಶಿಯೋಸೆ ನಾ ಅಖಿಯಾ ಮಿಲಾನಾ’ ಮತ್ತು ‘ ಏ ಸಮಾ ಸಮಾ ಇಂತಜಾರ್ ಕಾ ‘ ಮುಂತಾದ ಗೀತೆಗಳು ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆಗಳು. ಅಲ್ಲಿಗೆ ಶಶಿ ಕಪೂರ ನಾಯಕ ನಟನಾಗಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದ. ಮುಂದೆ ಇದೇ ನಾಯಕ ನಾಯಕಿಯರ ಅಭಿನಯದಲ್ಲಿ ‘ನೀಂದ್ ಹಮಾರಿ ಖ್ವಾಬ್ ತುಮ್ಹಾರಿ’ ಎನ್ನುವ ಚಿತ್ರ ತೆರೆಗೆ ಬಂತು, ಭಿನ್ನ ಕಥಾನಕ ಮದನ್ ಮೋಹನರ ಮಧುರ ಸಂಗೀತ ಸಂಯೋಜನೆಯಿಂದಾಗಿ ತಕ್ಕ ಮಟ್ಟಿಗೆ ಯಶಸ್ವಿಯಾಯಿತು. ಮುಂದೆ ಶರ್ಮಿಳಾ ಟ್ಯಾಗೋರ ಜೊತೆಗೆ ಅಭಿನಯಿಸಿದ ‘ಆಮನೆ ಸಾಮನೆ’ ಚಿತ್ರ ಕುತೂಹಲ ಕುತೂಹಲಭರಿತ ಕಥೆ ಕಲ್ಯಾಣಜಿ ಆನಂದಜೀ ಯವರ ಮಧುರ ಸಂಗೀತ ಮೈಚಳಿ ಬಿಟ್ಟು ಸ್ಮಿಮ್ಮಿಂಗ ಸೂಟ್ ಧರಿಸಿ ಮಾಡ್ ಆಗಿ ಅಭಿನಯಿದ ಶರ್ಮಿಳಾಳ ಅಭಿನಯ ಈ ಚಿತ್ರದ ಧನಾತ್ಮಕ ಅಂಶಗಳಾಗಿದ್ದವು. ಮುಂದೆ ಸುರುವಾದದ್ದೆ ಶಶಿ ಜಮಾನಾ.
ತನ್ನ ಹಿಂದಿ ಚಿತ್ರಗಳಲ್ಲಿನ ಅಭಿನಯದ ಮಧ್ಯೆ ಶಶಿಕಪೂರ ‘ಹೌಸ್ ಹೋಲ್ಡರ್’, ‘ಬಾಂಬೆ ಟಾಕಿ’ ಮತ್ತು ‘ಸಿದ್ಧಾರ್ಥ’ ಮುಂತಾದ ಸರಿ ಸುಮಾರು ಹನ್ನೆರಡು ಹಾಲಿವುಡ್ ಮತ್ತು ಆಂಗ್ಲ ಚಿತ್ರಗಳಲ್ಲಿ ಅಭಿನಯಿಸಿದ. ಆ ಪೈಕಿ ಈ ಮೂರೂ ಆತನಿಗೆ ಹೆಸರು ತಂದುಕೊಟ್ಟ ಚಿತ್ರಗಳು. ‘ಸಿದ್ಧಾರ್ಥ’ ಚಿತ್ರ ಮರ್ಚಂಟ್ ಐವರಿ ನಿರ್ಮಾಣ ಸಂಸ್ಥೆಯ ಚಿತ್ರವಾಗಿದ್ದು ಇದರಲ್ಲಿ ಈತನ ಜೊತೆ ಈತನ ಪೃಥ್ವಿ ಥಿಯೆಟರಿನ ನಾಟಕಗಳಲ್ಲಿನ ಅಭಿನಯದ ಕಾಲದ, ವಯಸ್ಸಿನಲ್ಲಿ ಈತನಿಗಿಂತ ಕೆಲ ವರ್ಷ ಹಿರಿಯಳಾಗಿದ್ದ ಜೊತೆಗಾತಿ ಮತ್ತು ಮುಂದೆ ಹೆಂಡತಿಯಾದ ಆಂಗ್ಲೋ ಇಂಡಿಯನ್ ನಟಿ ಜೆನ್ನಿಫರ್ ಕೆಂಡಾಲ್ ಮತ್ತು ಬೆಂಗಾಲಿ ಚಿತ್ರ ನಟಿ ಅಪರ್ಣಸೇನ ಮುಂತಾದವರು ಅಭಿನಯಿಸಿದ್ದರು. ಇದು ಒಳ್ಳೆಯ ವಿಮರ್ಶೆ ಪಡೆದ ಚಿತ್ರವಾಗಿತ್ತು. ಇದರಲ್ಲಿ ನಾಯಕಿ ಅಪರ್ಣಸೇನ ಜೊತೆ ಮಾಡಿದ್ದ ಲಿಪ್ ಲಾಕ್ ಆಗಿನ ಹಾಟ್ ಸುದ್ದಿಗಳಲ್ಲಿ ಒಂದಾಗಿತ್ತು.

ಮುಂದೆ 1965 ರಲ್ಲಿ ತೆರೆ ಕಂಡ ರಾಜ್ ಕಪೂರ ನಿರ್ಮಾಣ ನಟನೆ ಮತ್ತು ನಿರ್ದೇಶನದ ರಾಜೇಂದ್ರ ಕುಮಾರ ಮತ್ತು ವೈಜಯಂತಿ ಮಾಲಾರ ಅದ್ದೂರಿ ತಾರಾಗಣದ ಲಂಡನ, ರೋಮ್ ಮತ್ತು ಪ್ಯಾರಿಸ್ ಗಳಲ್ಲಿ ಚಿತ್ರೀಕರಣಗೊಂಡ ಆತನ ಬ್ಯಾನರಿನ ಮೊದಲ ಟೆಕ್ನಿ ಕಲರ್ ಚಿತ್ರ ‘ಸಂಗಮ’ ಅತಿ ಯಶಸ್ವಿಯಾಗಿತ್ತು. ನಂತರದ ಆತನ ಬ್ಯಾನಿರಿನ ಮಹತ್ವಾಕಾಂಕ್ಷೆಯ ಅದ್ದೂರಿ ಚಿತ್ರ ‘ಮೇರಾ ನಾಮ್ ಜೋಕರ್’ ಒಳ್ಳೆಯ ಚಿತ್ರವೆಂಬ ವಿಮರ್ಶೆ ಪಡೆದರೂ ಹಣ ಗಳಿಕೆಯಲ್ಲಿ ಸೋತು ಹೋಗಿದ್ದು ರಾಜ ಕಪೂರ ಭೂಮಿಗಿಳಿದು ಹೋಗುವಂತೆ ಮಾಡಿತ್ತು. ಆದರೆ ರಾಜ ಕಪೂರ ಪಕ್ಕಾ ವ್ಯವಹಾರಸ್ತ ಎನ್ನುವುದರ ಜೊತೆಗೆ ಹೃದಯವಂತ ಕೂಡ ಆಗಿದ್ದ ಎನ್ನವುದಕ್ಕೆ ಬೆಂಗಳೂರಿನ ಮಾಂಡ್ರೆ ಪಿಕ್ಷರ್ಸ್ ನವರು ಈ ಚಿತ್ರವನ್ನು ವಿತರಣೆಗೆ ಪಡೆದು ನಷ್ಟವನ್ನನುಭವಿಸಿದಾಗ ತನ್ನ ಮುಂದಿನ ಅತಿ ಯಶಸ್ವಿ ಚಿತ್ರ ‘ಬಾಬ್ಬಿ’ಯನ್ನು ಬೇರೆ ವಿತರಕರು ಹೆಚ್ಚಿನ ಬೆಲೆಗೆ ಕೊಳ್ಳಲು ಮುಂದೆ ಬ|ಂದರೂ ಮಾಂಡ್ರೆ ಪಿಕ್ಷರ್ಸ್ ನವರಿಗೆ ತನ್ನ ವಿತರಿಸಿದ್ದು ಆತನ ಹೃದಯವಂತಿಗೆ ಸಾಕ್ಷಿಯಾಗಿತ್ತು ಎನ್ನುವ ಸುದ್ದಿ ಓದಿದ ನೆನಪು. ಮುಂದೆ ಆರ್.ಕೆ.ಬ್ಯಾನರಿನ ತಯಾರಿಕೆ ‘ಸತ್ಯಂ ಶಿವಂ ಸುಂದರಂ’ ಚಿತ್ರದಲ್ಲಿ ಝಿನತ್ ಅಮಾನ್ ಜೊತೆ ನಟಿಸಿದ.
ಆ ವೇಳೆಗೆ ಗಂಗಾ ಔರ್ ಜಮುನಾ’ ಮತ್ತು ‘ರಾಮ್ ಔರ್ ಶಾಮ್’ ಚಿತ್ರಗಳ ನಂತರ ದಿಲೀಪ ಕುಮಾರ್, ‘ಗೈಡ್’ ಮತ್ತು ‘ಜುವೆಲ್ ಥೀಫ್’ ನಂತರ ದೇವ ಆನಂದ್, ‘ಆರಝೂ’ ಮತ್ತು ‘ಸೂರಜ್’ ನಂತರ ರಾಜೇಂದ್ರ ಕುಮಾರ್, ‘ವಖ್ತ್’, ‘ಕಾಜಲ್’, ‘ನೀಲ್ ಕಮಲ್’ ಮತ್ತು ‘ಹಮ್ ರಾಝ್’ ಚಿತ್ರಗಳ ನಂತರ ರಾಜ ಕುಮಾರ್, ‘ಉಪಕಾರ್, ‘ಪೂರಬ್ ಔರ್ ಫಶ್ಚಿಮ್’ ಮತ್ತು ‘ಶೋರ್’ಗಳ ನಂತರ ಮನೋಜ ಕುಮಾರ ಸೂಪರ್ ಹಿಟ್ ಚಿತ್ರಗಳನ್ನು ನೀಡಲಾಗಲಿಲ್ಲ. ಇವರ ಏರುತ್ತಿದ್ದ ವಯಸ್ಸು ಬದಲಾದ ಪ್ರೇಕ್ಷಕ ವೃಂದ ಹೊಸ ನಟರ ನಿರೀಕ್ಷೆಯಲ್ಲಿದ್ದರು. ಈ ಎಲ್ಲ |ಖ್ಯಾತ ನಾಮ ನಾಯಕ ನಟರ ಸುವರ್ಣ ದಿನಗಳು ಮುಗಿದಿದ್ದವು. ಹೊಸಬರ ಆಗಮನದ ನಿರೀಕ್ಷೆಯಲ್ಲಿ ಹಿಂದಿ ಚಿತ್ರರಂಗವಿತ್ತು.
ಯುವ ನಟರಾದ ‘ದಸ್ ಲಾಖ್’ ಮತ್ತು ‘ಏಕ್ ಫೂಲ್ ದೋ ಮಾಲಿ’ ಖ್ಯಾತಿಯ ಸಂಜಯ (ಮುಂದೆ ಸಂಜಯ್ ಖಾನ್), ‘ರಾಝ್’, ‘ಬಹಾರೋಕೆ ಸಪನೆ’, ‘ಆಖರಿ ಖತ್’, ‘ಕಟಿ ಪತಂಗ’, ‘ನಮಕ್ ಹರಾಮ್’, ‘ಆರಾಧನಾ’ ಮತ್ತು ‘ಆನಂದ’ ಚಿತ್ರಗಳ ಖ್ಯಾತಿಯ ರಾಜೇಶ್ ಖನ್ನಾ, ‘ಸಾವನ್ ಬಾಧೋ’ ಖ್ಯಾತಿಯ ನವೀನ ನಿಶ್ಚಲ್, ‘ಪರದೇ ಕೆ ಪೀಛೇ’ ಖ್ಯಾತಿಯ ವಿನೋದ ಮೆಹ್ರಾ (ಇದರಲ್ಲಿ ನಾಯಕಿಯಾಗಿ ಕನ್ನಡದ ಭಾರತಿ ನಟಿಸಿದ್ದಳು), ‘ಬಾಂಬೆ ಟು ಗೋವಾ’ ಚಿತ್ರದ ಖ್ಯಾತಿಯ ಅಮಿತಾಬ್ ಬಚ್ಚನ್’ ‘ಅಲಿಬಾಬಾ ಚಾಲೀಸ್ ಚೋರ್’, ‘ಸಂಘರ್ಷ’ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತನ್ನ ಬದುಕು ಕಟ್ಟಿ ಕೊಳ್ಳು ಬಂದಿದ್ದ ಸಂಜೀವ ಕುಮಾರ್ ಮತ್ತು ಆಗ ತಾನೆ ಆಗಮಿಸಿದ್ದ ರಾಕೇಶ್ ರೋಶನ್ ಇವರ ಜೊತೆಗೆ ಇವರಷ್ಟು ಹೊಸಬರೂ ಅಲ್ಲದ ರಾಜ್, ದಿಲೀಪ್ ಮತ್ತು ದೇವರಷ್ಟು ಹಳಬರೂ ಅಲ್ಲದ ಶಮ್ಮಿ ಕಪೂರ, ಬಿಶ್ವಜೀತ, ಜಾಯ್ ಮುಖರ್ಜಿ ಮತ್ತು ದರ್ಮೇಂದ್ರ ಮುಂತಾದವರ ಸ್ಪರ್ದೆ ಶಶಿ ಕಪೂರ ಜೊತೆಗಿತ್ತು. ಈ ಕಾಲಘಟ್ಟದಲ್ಲಿ ಅಂದರೆ 1970 ರ ಸುಮಾರಿಗೆ ನವ ನಟಿ ರಾಖಿ ಜೊತೆಗೆ ಈತ ‘ಶರ್ಮೀಲಿ’ ಚಿತ್ರದಲ್ಲಿ ನಟಿಸಿದ, ಆ ಚಿತ್ರ ಯಶಸ್ವಿಯಾಗಿ ಶಶಿ ಕಪೂರ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡ.
ಅಷ್ಟೊತ್ತಿಗಾಗಲೆ ‘ನಮಕ್ ಹರಾಮ್’, ‘ಆನಂದ್ ಚಿತ್ರಗಳಲ್ಲಿನ ಪೋಷಕ ಪಾತ್ರಗಳು ಹಾಗೂ ಖ್ಯಾತ ನಾಯಕ ನಟಿ ಜಯಾ ಬಾಧುರಿ ಜೊತೆಯಾಗಿ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದ ಚಿತ್ರಗಳಾದ ‘ಅಭಿಮಾನ್’ ಮತ್ತು ‘ಜಂಝೀರ್’ ಚಿತ್ರಗಳ ಯಶಸ್ಸಿನಿಂದಾಗಿ ಅಮಿತಾಬ್ ಪ್ರಬುದ್ಧಮಾನಕ್ಕೆ ಬರುತ್ತಿದ್ದ. ಇವುಗಳಲ್ಲದೆ ‘ಶೋಲೆ’ ಮತ್ತು ‘ದೀವಾರ್’ ಚಿತ್ರಗಳಲ್ಲಿನ ಆ್ಯಂಗ್ರಿ ಯಂಗ್ ಮ್ಯಾನ್ ಇಮೇಜಿನೊಂದಿಗೆ ಅಮಿತಾಬ್ ಸೂಪರ ಸ್ಟಾರ್ ಪಟ್ಟಕ್ಕೆ ಏರಿದ. ಶಶಿ ಕಪೂರ ‘ದೀವಾರ’ ಚಿತ್ರದಲ್ಲಿ ಅಮಿತಾಬ್ ಜೊತೆ ಆತನ ಅಣ್ಣನಾಗಿ ಪೋಲಿಸ್ ಇನಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ. ಆಗ ಮಲ್ಟಿ ಸ್ಟಾರ್ ಯುಗ ಆರಂಭವಾಗಿತ್ತು, ಸರಿ ಸುಮಾರು ಒಂದು ದಶಕದ ಕಾಲ ಅಮಿತಾಬ್ ಮುಂತಾದವರ ಜೊತೆ ಸಹ ನಾಯಕ ನಟನಾಗಿ ಅಭಿನಯಿಸಿ ಯಶಸ್ಸು ಕಂಡ.
ಮುಂದೆ ಕಾಲ ಸರಿದಂತೆ ಎಂಭತ್ತರ ದಶಕದಲ್ಲಿ ತನ್ನ ಸ್ವಂತ ಬ್ಯಾನರಿನಲ್ಲಿ ‘ಕಲ್ ಯುಗ್’, ‘ವಿಜೇತಾ’, ‘ಜುನೂನ್’ ಮತ್ತು ‘ಉತ್ಸವ’ ಮುಂತಾದ ಕೆಲವು ಆಫ್ ಬೀಟ್ ಚಿತ್ರಗಳನ್ನು ನಿರ್ಮಿಸಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ. ಕಲ್ ಯುಗ್ ಚಿತ್ರವನ್ನು ಖ್ಯಾತ ನಿರ್ದೇಶಕ ಶಾಮ್ ಬೆನಗಲ್ ನಿರ್ದೇಶಿಸಿದರೆ, ಕಾಳಿದಾಸನ ‘ಮೃಚ್ಛ ಕಟಿಕಾ’ ನಾಟಕದ ಆಧಾರಿತ ‘ಉತ್ಸವ’ ಚಿತ್ರವನ್ನು ಗಿರೀಶ್ ಕಾರ್ನಾಡ ನಿರ್ದೇಶಿಸಿದರು. ಈ ಚಿತ್ರದಲ್ಲಿ ಶಕಾರನಾಗಿ ಶಶಿ ಕಪೂರ ಅಭಿನಯಿಸಿದ್ದರೆ ಜೊತೆಗೆ ಕನ್ನಡದ ಖ್ಯಾತ ನಟ ಶಂಕರನಾಗ್, ನೀನಾ ಗುಪ್ತಾ, ರೇಖಾ ಮುಂತಾಧ ಖ್ಯಾತ ನಾಮ ನಟ ನಟಿಯರು ಅಭಿನಯಸಿದ್ದರು. ಸಿಪಾಯಿ ದಂಗೆಯ ಕಾಲದ ಘಟನೆಯಾಧರಿಸಿ ಶಾಮ ಬೆನಗಲ್ ನಿರ್ದೇಶನದ ಚಿತ್ರ ‘ಜುನೂನ್’ನಲ್ಲಿ ಶಶಿಯ ಜೊತೆಗೆ ಶಬಾನಾ ಆಜ್ಮಿ, ಜೆನ್ನಿಫರ್ ಕೆಂಡಾಲ್, ನಸೀರುದ್ದೀನ ಶಹಾ ಮತ್ತು ಟಾಮ್ ಅಲ್ಟರ್ ಮುಂತಾದವರು ನಟಿಸಿದ್ದರು. ‘ವಿಜೇತಾ’ ಚಿತ್ರದಲ್ಲಿ ತನ್ನ ಮಗ ಕುಣಾಲ್ ಕಪೂರನನ್ನು ನಾಯಕ ನಟನಾಗಿ ಪರಿಚಯಿಸಿದ ಆತ ಉತ್ತಮವಾಗಿ ಅಭಿನಯಿಸಿದ್ದರೂ ಹಿಂದಿ ಚಿತ್ರರಂಗದಲ್ಲಿ ನೆಲೆ ಕಂಡು ಕೊಳ್ಳಲಾಗಲಿಲ್ಲ. ಆತನ ನಿರ್ಮಾಣದ ಚಿತ್ರಗಳಲ್ಲಿ ಕೆಲವು ಯಶಸ್ಸು ಪಟೆದರೆ ಕೆಲವು ಯಶಸ್ಸು ಪಡೆಯಲಿಲ್ಲ. ಕೊನೆಗೆ ಆತನ ಚಿತ್ರರಂಗದ ಬದುಕಿನ ಯಶಸ್ವಿನ ಹಿಂದೆ ನಿಂತು ಕೆಲಸ ಮಾಡಿದ್ದ ಆತನ ಮೆಚ್ಚಿನ ಮಡದಿ ಜೆನ್ನಿಫರ್ ಕೆಂಡಾಲ್ ಕಾಲಯಿಲೆಯಿಂದಾಗಿ ಮೃತಪಟ್ಟಾಗ ಆತ ಭೂಮಿಗಿಳಿದು ಹೋದ. ಏರುತ್ತಿದ್ದ ವಯಸ್ಸು ಪಶ್ಚಿಮದಂಚಿಗೆ ಸಾಗಿದ್ದ ಚಲನ ಚಿತ್ರಗಳ ಅಭಿನಯದ ನಂಟು ಆತನನ್ನು ಮಧ್ಯ ವ್ಸಸನಿಯಾಗುವಂಗತೆ ಮಾಡಿತು.
ತನ್ನ ಚಲನಚಿತ್ರ ರಂಗದ ಬದುಕಿನುದ್ದಕ್ಕೂ ಸಾಗಿದ ಸುಮಾರು 77 ವರ್ಷ ವಯಸ್ಸಿನ ಈ ಶಶಿ ಕಪೂರ ತನ್ನ ನಾಲ್ಕನೆಯ ವರ್ಷ ದಿಂದಲೆ ಬಾಲ ನಟನಾಗಿ ಹಿಂದಿ ಚಲನಚಿತ್ರ ರಂಗ ಪ್ರವೇಶಿಸಿ, ನಾಯಕ ನಟನಾಗಿ ಬದುಕು ಪ್ರಾರಂಭಿಸಿ ಇಂಗ್ಲೀಷಿನ ಹನ್ನೆರಡು ಚಿತ್ರಗಳು ಸೇರಿದಂತೆ ಒಟ್ಟು 160 ಚಿತ್ರಗಳಲ್ಲಿ ಅಭಿನಯಿಸಿದ ಈ ಸಭ್ಯ ನಟನಿಗೆ ಭಾರತ ಸರ್ಕಾರ 2011 ರಲ್ಲಿ ಪದ್ಮ ಭೂಷಣ ಕೊಡ ಮಾಡಿತ್ತು. ಆತನ ಜೀವ ಮಾನದ ಸಾಧನೆಯನ್ನು ಪರಿಗಣಿಸಿ 2014 ರ ‘ದಾದಾ ಸಾಹೇಬ ಪ್ರಶಸ್ತಿ’ಯನ್ನು ಆತನಿಗೆ ಸಂದಿರುವುದು ಸಂತಸದ ವಿಷಯ. ತನ್ನ ವೃತ್ತಿ ಬದುಕನ್ನು ಗಂಭೀರವಾಗಿ ಪರಿಗಣಿಸಿ ಯಶಸ್ಸು ಪಡೆದು, ಗ್ಲ್ಯಾಮರ್ ಲೋಕದಲ್ಲಿದ್ದರೂ ಯಾವುದೇ ಗಾಸಿಪ್ ಗಳಿಗೆ ಬಲಿಯಾಗದೆ ನಟ ನಿರ್ಮಾಪಕನಾಗಿ ಯಶಸ್ಸು ಗಳಿಸಿದ ಸಭ್ಯ ನಟ ಶಶಿಕಪೂರಗೆ ಶುಭವಾಗಲಿ.
 

‍ಲೇಖಕರು G

March 25, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಹನುಮಂತ ಪಾಟೀಲ ಜಿ. ಶಶಿಕಪೂರ ಲೇಖನದೊಂದಿಗೆ ಸಮಕಾಲೀನ ಬಾಲಿವುಡ್ ದರ್ಶನ ತುಂಬ ಚನ್ನಾಗಿ ಮೂಡಿದೆ. ಶಶಿಕಪೂರ ಜಂಟಲ್ ಮನ್ ನಟ. ಸ್ನೇಹಜೀವಿ. ಪೃಥ್ವಿ ಥೇಟರ್ ನಲ್ಲಿ ಈಗಲೂ ಪ್ರೇಕ್ಷಕರ ಮಧ್ಯ ನೋಡಲು ಸಿಗುತ್ತಾರೆ ಅಥವಾ ಇತ್ತೀಚಿನ ವರೆಗೂ ಸಿಗುತ್ತಿದ್ದರು ಎಂಬುದನ್ನು ಕೇಳಿದ್ದೇನೆ. ವಂದನೆಗಳು.

    ಪ್ರತಿಕ್ರಿಯೆ
    • Hanumanth Ananth Patil

      ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
      ಶಶಿಕಪೂರ ಆತನ ಜಮಾನಾದ ಸುಂದರ ಆಳವಾದ ಭಾವಾಭಿವ್ಯಕ್ತಿಯ ಸಾಧ್ಯತೆಗಳಿದ್ದ ನಟನಾಗಿದ್ದ ಅನೆಕರ ಜೊತೆ ಅತನ ಸೋದರರೂ ಅತನ ಸ್ಪರ್ದಿಗಳಾಗಿದ್ದರು, ಅಂತಹ ಸ್ಪರ್ದಾ ವಿಚಲಿತನಾಗದೆ ಸಂಯಮದಿಂದ ತನ್ನ ದಿನಗಳಿಗಾಗಿ ಕಾದ ಬಂದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ತನ್ನದೇ ಅದ ವಿಭಿನ್ನ ಶೈಲಿಯ ನಟನೆಯನ್ನು ರೂಢಿಸಿಕೊಂಡು ಬೆಳೆದ ತನ್ನ ಅಣ್ಣನಂತೆ ವಿಭಿನ್ನ ಶೈಲಿಯ ಚಿತ್ರಗಳನ್ನು ಮಾಡಿದ ತನ್ನನ್ನು ಬೆಳೆಸಿದ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ, ನಮ್ಮೆಲ್ಲರ ನೆನಪಿನ ಲೋಕದಿಂದ ಹಿಂದೆ ಸರಿದ ನಟನಾಗಿದ್ದ, ಫಾಲ್ಕೆ ಪ್ರಶಸ್ತಿಗೆ ಭಾಜನನಾಗುತ್ತಾನೆ ಎನ್ನುವ ಸುಳಿವು ಕೂಡ ಇರಲಿಲ್ಲ, ನಮ್ಮೆಲ್ಲರನ್ನು ಅಚ್ಚರಿಯನ್ನುಂಟು ಮಾಡಿ ಅದನ್ನು ಪಡೆದ, ಆ ಕುರಿತ ಮೆಚ್ಚುಗೆಯೆ ಈ ಲೇಖನ ಪ್ರತಿಕ್ರಿಯೆಗೆ ಧನ್ಯವಾದಗಳು.

      ಪ್ರತಿಕ್ರಿಯೆ
    • Hanumanth Ananth Patil

      ಮೇಡಂ ವಂದನೆಗಳು ಲೇಖನದ ಮೆಚ್ಚುಗೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: