ಶಿವಕುಮಾರ ಮಾವಲಿ ಅವರ ಅಂಕಣ ‘ಮಾವಲಿ ಮಿರ್ಚಿ’ಯಲ್ಲಿ ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ಕುರಿತು ಪ್ರಸ್ತಾಪವಾಗಿತ್ತು.
ಅದಕ್ಕೆ ಬಂದ ಪ್ರತಿಕ್ರಿಯೆ ಹಾಗೂ ಶಿವಕುಮಾರ ಮಾವಲಿ ಅವರ ಉತ್ತರ ಇಲ್ಲಿದೆ.
ಚರ್ಚೆಯಲ್ಲಿ ನೀವೂ ಪಾಲ್ಗೊಳ್ಳಿ.
ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಕಳಿಸಿ
ಒಂದು ವಿಷಯದ ಬಗ್ಗೆ ಬರೆಯಬೇಕಾದಾಗ ಲೇಖಕನಿಗಿರದ ಸ್ವಾತಂತ್ರ್ಯ, ರಿಲಾಕ್ಸೇಷನ್ ಅದನ್ನು ಓದುವವನಿಗಿರುತ್ತದೆ.
ಈ ಲೇಖನ ಓದಿದ ಮೇಲೆ ನನಗನ್ನಿಸಿದ ಒಂದೆರಡು ಮಾತು, ‘ಶಿವಪೂಜೆಯಲ್ಲಿ ಕರಡಿಗೆ ಬಿಟ್ಟಹಾಗೆ’ ಎಂಬ ಗಾದೆ ನೆನಪಾಗುವುದು ಮತ್ತು ಗಣಿತದ ಸಮಸ್ಯೆಯನ್ನು ಬಿಡಿಸಲು ಅರ್ಥಶಾಸ್ತ್ರದ ನಿಯಮಗಳನ್ನು ಉಪಯೋಗಿಸಿದಂತೆ ಅನಿಸುವುದು.
ವಿಷದವಾಗಿ ಚರ್ಚಿಸದೆ ಸೂಕ್ಷ್ಮ, ಸರಳವಾಗಿ ಹೇಳುವುದಾದರೆ, ‘ಶಬರಿಮಲೆಗೆ ಒಂದು ವಯೋಮಾನದ ಹೆಂಗಸರು ಹೋಗಬಾರದು’ ಎಂಬ ನಿಯಮಕ್ಕೂ, ‘ಸ್ತ್ರೀಯರ ಹಕ್ಕು’, ‘ಪುರುಷರ ದಬ್ಬಾಳಿಕೆಗೆ ಪ್ರತೀಕ’, ‘ಜಾಗತಿಕವಾಗಿ, ನೈಸರ್ಗಿಕವಾಗಿ ಹೆಣ್ಣಿಗೂ ಗಂಡಿನಷ್ಟೇ ಸ್ವಾತಂತ್ರ್ಯವಿರಬೇಕು’ ….ಇತ್ಯಾದಿ ಇತ್ಯಾದಿ ಮಾತುಗಳಿಗೂ ಸಂಬಂಧವೇನಿದೆ ?
ಫ್ರೇಂ ಆಫ್ ರೆಫರೆನ್ಸ್ – ನೋಡುವ ನೆಲೆಗಟ್ಟೇ ಸರಿಯಿಲ್ಲ. ‘ನ ಸ್ತ್ರೀ ಸ್ವಾತಂತ್ರ್ಯಮರ್ಹತೀ’ ಅನ್ನುವ ಸಂದರ್ಭಕ್ಕೂ, ‘ಯತ್ರ ನಾರ್ಯಸ್ತು….’ ಎಂಬ ತತ್ವಕ್ಕೂ ವಿರೋಧಾಭಾಸವಿದೆ ಎಂದು ಅಂದುಕೊಳ್ಳುವುದೇಕೆ ? ಸಣ್ಣ ಉದಾಹರಣೆ ಕೊಡುವುದಾದರೆ, ಜ್ವರ ಬಂದಾಗ ಡಾಕ್ಟರು ನಮಗೆ ‘ಮಸಾಲೆ ಪದಾರ್ಥ ತಿನ್ನಬೇಡಿ’ ಎನ್ನುತ್ತಾರೆ. ಹಾಗೆಂದರೆ ಜೀವನವಿಡೀ ಆ ಮಾತನ್ನು ಪಾಲಿಸಬೇಕೆಂದು ಅರ್ಥ ಅಲ್ಲ ಅಲ್ಲವೇ ? ಯಾವ ಸಂದರ್ಭದಲ್ಲಿ ಯಾವ ಮಾತು ಅನ್ವಯಿಸಬೇಕೆಂಬುದೇ ಜಾಣತನ.
ಶಬರಿಮಲೆಯ ವಿಷಯವು ಶ್ರದ್ಧೆ, ನಂಬಿಕೆ, ಆಧ್ಯಾತ್ಮಕ್ಕೆ ಸಂಬಂಧಪಟ್ಟಿದ್ದು. ಆ ವಯಸ್ಸಿನ ಹೆಂಗಸರು ಗುಡಿಯೊಳಗೆ ಕಾಲಿಡಬಾರದೆಂಬುದು ಆ ನಿರ್ದಿಷ್ಟ ಗುಡಿಯ ಪುರಾಣ, ಇತಿಹಾಸ, ಪರಂಪರೆಯ ಆಧಾರದ ಮೇಲೆ ನಡೆದುಕೊಂಡು ಬಂದಿರುವ ಆಚಾರ. ಇದರಲ್ಲಿ ಹಕ್ಕನ್ನು ಹತ್ತಿಕ್ಕುವ ಧಾರ್ಷ್ಟ್ಯತೆ , ತಿರಸ್ಕಾರ, ಪುರುಷಾಹಂಕಾರದ ಮಾತೆಲ್ಲಿದೆ ? ನಂಬಿಕೆಗೆ ಸಂಬಂಧಪಟ್ಟ ಒಂದು ಆಚಾರವಷ್ಟೇ.
ಇನ್ನು ಅದನ್ನು ಸ್ತ್ರೀಯರ ಹಕ್ಕು ಎಂದು ಪ್ರತಿಪಾದಿಸುವವರು, ಆ ಗುಡಿಯಲ್ಲಿ ಪ್ರವೇಶಿಸಿ ನಮ್ಮ ಸಮಾನತ್ವ, ಹಕ್ಕುಗಳನ್ನು ತೋರ್ಪಡಿಸಿಕೊಳ್ಳುತ್ತೇವೆಂಬ ಉದ್ದೇಶವಿರುವವರೇ ಹೊರತು ಭಕ್ತಿ ಶ್ರದ್ಧೆಗಳಿಂದ ತಿರುಪತಿಗೋ, ಶಿರಡಿಗೋ ಹೋಗಿ ಪೂಜೆ ಮಾಡುವವರಲ್ಲ.
ಸುಪ್ರೀಂ ಕೋರ್ಟು ಎಪ್ಪತ್ತು ವರ್ಷದ ಹಿಂದೆ ಬರೆದ ನಮ್ಮ ಸಂವಿಧಾನದ ಚೌಕಟ್ಟಿನಲ್ಲಿ, ಚಾಲ್ತಿಯಲ್ಲಿರುವ ಕಾನೂನಿನನ್ವಯ, ‘ಹಕ್ಕು’ ಎಂಬ ವಿಷಯದಲ್ಲಿ ತೀರ್ಪು ಕೊಟ್ಟಿರಬಹುದು. ಆದರೆ ಆಧ್ಯಾತ್ಮ, ಶ್ರದ್ಧೆ, ನಂಬಿಕೆಗಳಂಥ ಮಾನಸಿಕ ವಿಷಯದಲ್ಲಿ, ಭೌತಿಕ ವಿಷಯಕ್ಕೆ (ಭೌತಿಕವಾಗಿ ಗುಡಿಯೊಳಗೆ ಹೋಗುವುದು) ಸಂಬಂಧಪಟ್ಟಂಥ ತೀರ್ಪು ನೀಡಿರುವುದು ಅರ್ಥಶಾಸ್ತ್ರಜ್ಞನು ಗಣಿತದ ಸಮಸ್ಯೆಗೆ ಉತ್ತರ ಹೇಳಿದಂತಿದೆ.
ಇನ್ನು ಲೇಖನದ ವಿಷಯಕ್ಕೆ ಬಂದರೆ, ಶಬರಿಮಲೆಯ ವಿಷಯದ ಚರ್ಚೆಯು ಶಿವಪೂಜೆ ಮಾಡುವಾಗ ಕರಡಿಗೆ ಬಿಟ್ಟು ಪೂಜೆ ಮಾಡಿದಂತಿದೆ. ಶಬರಿಮಲೆಯಲ್ಲಿ ಸ್ತ್ರೀಯರ ನಿಷೇಧ ಏಕೆ ? ಅದರ ಹಿಂದಿರುವ ಕಾರಣ ಹಕ್ಕಿನ ನಿರಾಕರಣೆ, ಅಸಮಾನತೆ, ಅಹಂಕಾರಗಳೋ ಅಥವಾ ಪುರಾಣ, ಭಕ್ತಿ, ಶ್ರದ್ಧೆ, ನಂಬಿಕೆಗಳೋ ಎಂಬ ವಿಷಯಗಳ ಪ್ರಸ್ತಾವನೆಯಿಲ್ಲ. ವಿಷಯದ ಮೂಲ ಕಾರಣವನ್ನು ಪರಿಗಣಿಸದೇ ಇತರೆ ಸಾನುಕೂಲ ಘಟನೆಗಳ ಸಹಕಾರದಿಂದ ವಿಷಯವನ್ನು ಪ್ರತಿಪಾದಿಸಲು ಪ್ರಯತ್ನಿಸುವುದು ಪ್ರಾಮಾಣಿಕ ಧೋರಣೆಯೆನಿಸದು.
ಮುಟ್ಟು, ಸ್ವಾಮಿಗಳ ಬಗ್ಗೆ ಬರೆದಿರುವುದು ವೈಜ್ಞಾನಿಕವಾಗಿ, ನಿಜವಾಗಿ ಸರಿಯಾಗಿದೆ. ತಥಾಕಥಿತ ಸ್ವಾಮಿಗಳ ಬಗ್ಗೆ ಬರೆದಿರುವುದು ಇನ್ನೂ ಸಾಲದು. ಧರ್ಮದ ಮುಖವಾಡ ಹಾಕಿಕೊಂಡು ಅವರ ಸ್ಥಾನಕ್ಕೆ ಕಳಂಕ ತರುತ್ತಿರುವ ಎಲ್ಲಾ ಧರ್ಮದ ಧಾರ್ಮಿಕ ಮುಖಂಡರನ್ನು ಬಹಿಷ್ಕರಿಸಬೇಕು.
ಆಹಾರ ನಿದ್ರಾ ಭಯ ಮೈಥುನಂ ಚ
ಸಮಾನಮೇತತ್ ಪಶುಭಿರ್ನರಾಣಾಂ
ಧರ್ಮೋಹಿ ತೇಷಾಂ ಅಧಿಕೋ ವಿಶೇಷಃ
ಧರ್ಮೇಣ ಹೀನಃ ಪಶುಭಿಃ ಸಮಾನಃ
ಇದನ್ನು ಮನುಷ್ಯರೆಲ್ಲರೂ ಅರಿತು ಪಾಲಿಸಬೇಕು. ಧಾರ್ಮಿಕ ಗುರುಗಳು ತುಸು ಹೆಚ್ಚು.
ಸುಂದರ್ರಾಜ್
ಭದ್ರಾವತಿ

ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತಾ ಅದರೊಂದಿಗೆ ಈ ಸ್ಪಷ್ಟನೆ ನೀಡುತ್ತೇನೆ.
ಶಬರಿಮಲೆಗೆ ಸಂಬಂಧಪಟ್ಟಂತೆ ಆ ಥರದ ಒಂದು ನಿಷೇಧವೆಂಬುದು ಜಾರಿಗೆ ಬರುವುದರ ಹಿಂದಿನ ಆಲೋಚನೆಯನ್ನು ತಾವು ಪರಿಗಣಿಸಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ.
ಮುಟ್ಟಾಗುವವರು ದೇವಾಲಯಕ್ಕೆ ಬರಬಾರದು ಎಂಬುದನ್ನು ಭಕ್ತರ ನಂಬಿಕೆ ಎಂದು ಕರೆದು ಬಿಟ್ಟುಬಿಡುವುದಾದರೆ ಅಂಥ ಅನೇಕ ಅಸಹ್ಯಗಳನ್ನು ನಾವೇ ಪ್ರೋತ್ಸಾಹಿಸಿದಂತೆ. ಮತ್ತು ಇದು ನೇರವಾಗಿ ಧಾರ್ಮಿಕ ಹಕ್ಕಿನ ಉಲ್ಲಂಘನೆಯೇ.
ಇನ್ನೂ ಸರಳವಾಗಿ ಹೇಳೋದಾದರೆ Prostitute ಎಂಬ ಪದವನ್ನು ಕೀಳಾಗಿ ನೋಡುವಾಗ ಹೆಣ್ಣೊಬ್ಬಳೇ ಅದನ್ನು ಮಾಡಲಾರಳು ಅದರಲ್ಲಿ ಗಂಡೂ ಭಾಗಿಯಾಗಿರುತ್ತಾನೆ . ಆದರೆ ಸಮಾಜ ನೋಡುವ ದೃಷ್ಟಿಯೇ ಬೇರೆ. ಹಾಗೆಯೇ ಇದೂ ಕೂಡ.
ಯಾವುದೋ ಕಾಲದಲ್ಲಿ ಮುಟ್ಟಾದ ಹೆಂಗಸರನ್ನು ಇದರಿಂದ ಹೊರಗಿಟ್ಟ ಆಲೋಚನೆಯೇ ಇಂದು ಅವರ ಹಕ್ಕನ್ನು ಕಸಿದುಕೊಂಡಿದೆ. ಕೋರ್ಟ್ ಗೆ ಹೋದವರು ಭಕ್ತರೆಲ್ಲ ಎಂಬ ನಿಮ್ಮ ಅಭಿಪ್ರಾವೂ ಏಕಮುಖವಾದದ್ದೆ. ಜಯಮಾಲ , ತಾರಾ ಅಂಥವರ ಭಕ್ತಿಯೇನು ಕೃತಕದ್ದಲ್ಲ. ಕಾರಣ ಯಾವುದೇ ಇರಲಿ ಅದು ಮಾನವೀಯವೋ ಅಲ್ಲವೋ ಎಂಬುದಷ್ಟೇ ಮುಖ್ಯ.
ಇನ್ನು ಎರಡು ಶ್ಲೋಕಗಳಿಗೆ ಸಂಬಂಧಿಸಿದಂತೆ ಅವು ಮತ್ತೊಮ್ಮೆ ಸಮಾಜದ ಮನಸ್ಥಿತಿಯನ್ನೇ ಪ್ರತಿಬಿಂಬಿಸುತ್ತವಷ್ಟೆ. ಅದರಲ್ಲಿ ಯಾವುದನ್ನು ತೆಗೆದುಕೊಳ್ಳುತ್ತೇವೆ ಎಂಬುದು ವೈಯಕ್ತಿಕವಾದುದು.
ಪುರಾಣ, ಶ್ರದ್ಧೆ, ಭಕ್ತಿಯ ಹೆಸರಲ್ಲಿ ನಡೆಯುವ ಅಸಮಾನತೆ, ಅನ್ಯಾಯಗಳನ್ನು ಒಪ್ಪಿಕೊಳ್ಳುವುದು ಎಷ್ಟು ಸರಿ? ಅದನ್ನು ಸ್ವತಃ ದೇವರೂ ಕೂಡ ಒಪ್ಪಲಾರ ಎಂದು ಭಾವಿಸುತ್ತೇನೆ .
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.
ಮರೆತಿದ್ದೆ ಸಮಾಜಕ್ಕೆ ಸರ್ವತೋಮುಖ ಅಭಿವೃದ್ಧಿಗೆ ಬೇರೆ ಬೇರೆ ಶಾಸ್ತ್ರಗಳನ್ನು ಸಂಯೋಜಿಸಿ ಉತ್ತರ ಹುಡುಕಬೇಕಾಗುತ್ತದೆ .
ಉದಾಹರಣೆಗೆ ಬಡತನವನ್ನು ಕೇವಲ ಆರ್ಥಿಕ ಸಮಸ್ಯೆಯೆಂದು ಪರಿಗಣಿಸಿದ ಯೋಜನಾ ಆಯೋಗ ಒಮ್ಮೆ ವರದಿ ಕೊಟ್ಟಿತ್ತು ; ನಗರಗಳಲ್ಲಿ ೩೨ ರೂಪಾಯಿ, ಹಳ್ಳಿಗಳಲ್ಲಿ ೨೧ ( ಸರಿಯಾಗಿ ನೆನಪಿಲ್ಲ . ಆಸುಪಾಸು ) ರೂಪಾಯಿ ಖರ್ಚು ಮಾಡಬಲ್ಲವರಾದರೆ ಅವರು BPL ಗೆ ಒಳಪಡುವುದಿಲ್ಲ . ಅವರೆಲ್ಲ ಬಡತನರೇಖೆಯ ಮೇಲೆ ಬರುತ್ತಾರೆ . ಇದು ಬಡತನದ ಸಾಮಾಜಿಕ ಮುಖವನ್ನು ಪರಿಗಣಿಸದಿದ್ದಾಗ ಆದದ್ದು. ಹಾಗಾಗಿ ಈ ಸಂಯೋಜನೆ ಅವಶ್ಯಕವಾಗಿದೆ ಎಂದು ನಾನು ಬಯಸುತ್ತೇನೆ .






Salute logic embedded in Shivakumar Mavali’s answer.
A solution to any problem is more effective when looked from all angles instead of restricting it to one filed.
ಧಾರ್ಮಿಕ ಭಾವನೆ ಇರಬಹುದು , ಲೌಕಿಕ ಭಾವನೆ ಇರಬಹುದು . ಭಾವನೆ ಯ ಅಭಿವ್ಯಕ್ತಿಗೆ ಲಿಂಗಭೇದ ಇರಬಾರದು. ಧಾರ್ಮಿಕ ನಂಬಿಕೆಯಲ್ಲಿ ಪುರುಷ ಪಕ್ಷಪಾತ ಮಾಡಿದರೆ ಅದೂ ಒಂದು ರೀತಿಯ ಸ್ತ್ರೀ ಶೋಷಣೆಯೇ .