ಶತಮಾನದ ಅಂಚಿನಲ್ಲಿ ಕಯ್ಯಾರರು

ಮಹೇಶ್ವರಿ ಯು

ಬದುಕಿನಲ್ಲಿ ಬತ್ತದ ಶ್ರದ್ಧೆಯನ್ನೂ ಭತ್ತದ ಕೃಷಿಯ ಮೇಲಣ ಸಹಜ ಪ್ರೀತಿಯನ್ನೂ ಜೊತೆ ಜೊತೆಗೆ ನಡೆಸಿಕೊಂಡು ಹೋದ ನನ್ನ ಗುರುಗಳಾದ ಕಯ್ಯಾರರು ಎಳೆಯ ತಲೆಮಾರಿಗೆ ಒಂದು ಅಚ್ಚರಿಯೇ ಆಗಿದ್ದಾರೆ. ಜೀವನ ಶ್ರದ್ಧೆಯೆನ್ನುವುದು ಆ ತಲೆಮಾರಿನವರ ಹಿರಿಯ ಗುಣವೇ ಹೌದಾದರೂ ಕಯ್ಯಾರರನ್ನು ನೆನೆಯುವಾಗ ಆ ಗುಣವು ಅಪ್ಪಟ ಕೃಷಿಸಂಸ್ಕೃತಿಯ ಧಾತುವೆನ್ನುವುದು ಹೆಚ್ಚು ಸರಿ ಅನಿಸುತ್ತದೆ. ಕೃಷಿಯನ್ನು ನೆಚ್ಚಿದ ವ್ಯಕ್ತಿ ಆಸೆನಿರಾಸೆಗಳ ಮಧ್ಯೆ ಓಲಾಡುವಂತಾಗುವುದು ಅವನ ವಿಧಿಯೇ ಆಗಿದ್ದರೂ ಆತ ದುಡಿಮೆಯ ಮೇಲಣ ಶ್ರದ್ಧೆಯನ್ನು ಬಿಟ್ಟು ಕೊಡಲಾರ.ತನ್ನದಾದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾರ. ಕಯ್ಯಾರರ ವ್ಯಕ್ತಿತ್ವ ರೈತನ ಈ ಜೀವಗುಣದಿಂದ ರೂಪಿತವಾದುದು. ತನ್ನ ನೆಲದ ಸಮಸ್ಯೆಗಳು ಅವರನ್ನು ಎಷ್ಟು ತೀವ್ರವಾಗಿ ಕಾಡಿದರೂ ಸಮಸ್ಯೆಯಿಂದ ಪಲಾಯನ ಮಾಡುವವರೋ ಸಮಸ್ಯೆಗೇ ಶರಣಾಗುವವರೋ ಅವರಲ್ಲ. ಅವರ ಸ್ವರಭಾರ, ಪದಭಾರ, ನಡಿಗೆಯ ಧೀರಗತಿ- ಒಂದೊಂದೂ ಆ ಧೃಢತೆಯ ಮನೋಭಾವದ ಪ್ರತೀಕಗಳು. ಅವರ ಅಪಾರ ವಿದ್ಯಾಥರ್ಿಬಳಗದಲ್ಲಿ ನಾನೂ ಒಬ್ಬಳು. ಬದಿಯಡ್ಕದ ನವಜೀವನ ಪ್ರೌಢಶಾಲೆಗೆ ಕಲ್ಲಕಳೆಯದ ತಮ್ಮ ಮನೆಯಿಂದ ಉದ್ದನೆಯ ಕೈಗಳನ್ನು ಬೀಸುತ್ತಾ,ದೊಡ್ಡ ದೊಡ್ಡ ಹೆಜ್ಜೆಗಳನ್ನು ಊರುತ್ತಾ ನಡೆದು ಬರುತ್ತಿದ್ದ ಆ ದೊಡ್ಡ ಜೀವವನ್ನು ಬೆರಗುಗಣ್ಣುಗಳಿಂದ ನೋಡುತ್ತಿದ್ದ ಪುಟಾಣಿಗಳಾಗಿದ್ದೆವು ನಾವು.
ನಾನು ಕಲಿತ ಮಾನ್ಯದ ಜ್ಞಾನೋದಯಶಾಲೆಯಲ್ಲಿ ಮಕ್ಕಳಿಗಾಗಿ ನಿರ್ಮಿಸಿದ ಜಾರುಬಂಡಿಯನ್ನು ಅವರು ಉದ್ಘಾಟಿಸಿದ ಬಗೆ ನಮ್ಮೊಳಗೆ ಒಂದು ದಂತಕತೆಯಂತೆ ಚಲಾವಣೆಯಲ್ಲಿತ್ತು. ಅವರು ಜಾರುಬಂಡಿಯನ್ನೇರಿ ಜಾರಲು ತೊಡಗಿದ್ದೇ ತಡ ಅವರ ಆ ಆಜಾನುಬಾಹು ಶರೀರದ ಕಾಲುಗಳು ನೆಲವನ್ನು ಸ್ಪಶರ್ಿಸಿದ್ದವಂತೆ. ಅದೊಂದು ಅದ್ಭುತ ಸಂಗತಿಯಾಗಿ ದೊಡ್ಡವರು ಚಿಕ್ಕವರಿಗೆ, ಅವರು ಅವರಿಗಿಂತ ಕಿರಿಯರಿಗೆ ಹೇಳುತ್ತ ಬರುತ್ತಿದ್ದರು.
ಕಳೆದ ಶತಮಾನದಲ್ಲಿ ಸಂಭವಿಸಿದ ಹಲವು ಸ್ಥಿತ್ಯಂತರಗಳನ್ನು ಸಮೂಹದ ಚಿಂತಾಗತಿಯಲ್ಲಿ ನಡೆದ ಮಾಪರ್ಾಡುಗಳನ್ನೂ ಗಮನಿಸುತ್ತ ಬೆಳೆದ ಅವರಲ್ಲಿ ದೇಶಪ್ರೇಮದ ಪ್ರಜ್ಞೆ ಎಂಬುದು ಒಡಲಿನ ಕಾವಾಗಿ ಅನುರಣನಗೊಳ್ಳುತ್ತದೆ. ರಾಷ್ಟ್ರಬಂಧು ಪತ್ರಿಕೆಯಲ್ಲಿ ಜವಾಬ್ದಾರಿಯುತ ಹುದ್ದೆಯನ್ನು ನಿರ್ವಹಿಸುತ್ತಿದ್ದ ಅವರಲ್ಲಿ ಸಾಮಾಜಿಕ ಸ್ಪಂದನವು ಪತ್ರಿಕಾಧರ್ಮದ ಜೀವಧ್ವನಿಯೇ ಆಗಿತ್ತು.
ಸ್ವಾತಂತ್ರ್ಯವ್ರೃಂದಾವನದೊಳೆಸೆವ ಸಸಿತುಳಸಿಯಾಗಿ ನಾ ದೇವಪೂಜೆಯ ಬಯಸಲೊಲ್ಲೆ/ತಾಯ್ನಾಡ ತೋಟದಲಿ ಹೂಚಿಗುರು ಹೆಚ್ಚಿಸುವ ಗೊಬ್ಬರದ ಪುಡಿಯಾದರದೆ ಭಾಗ್ಯ ಬಲ್ಲೆ- ಎಂಬ ಅವರ ಕವಿತೆಯ ಸಾಲುಗಳನ್ನು ಗಮನಿಸಬಹುದು. ಅನ್ನದೇವರು ಮತ್ತು ಇತರ ಕಥೆಗಳು ಎಂಬ ಹೆಸರಿನ ಅವರ ಕಥಾಸಂಕಲನವನ್ನೂ ನೀವು ನೋಡಬಹುದು. ಜನಪರಕಾಳಜಿಯ ವಕ್ತಾರರಾಗಿ ಅವರು ಇಲ್ಲಿ ಗಮನ ಸೆಳೆಯುತ್ತಾರೆ. ಹಸಿವಿನ ಭೀಕರತೆಗೆ ಕಳ್ಳತನ ಪರಿಹಾರವಲ್ಲವಾದರೂ ಅದು ಸಂಭಾವ್ಯ ಮತ್ತು ಕೆಲವೊಮ್ಮೆ ಕ್ಷಮ್ಯವೆಂಬಂತೆ ಚಿತ್ರಿಸಿರುವ” ಅನ್ನದೇವರು” ಕತೆ ಹೀಗೆ ಕೊನೆಗೊಳ್ಳುತ್ತದೆ : ಬೋರ ಬಂಗ್ಲೆ ಮನೆಯಿಂದ ತಿನಸುಗಳನ್ನು ಹಣ್ಣುಹಂಪಲುಗಳನ್ನು ಕದ್ದು ತಂದ ಗಂಟನ್ನು ಬಿಚ್ಚುತ್ತಾನೆ. ಎಲ್ಲರ ಬಾಯಲ್ಲೂ ನೀರು! “ಕಳ್ಳತನ ಮರ್ಯಾದೆಗೆಟ್ಟ ಕೆಲಸ”ವೆಂದ ಮುದುಕ ಒಮ್ಮೆ ತನ್ನ ಹೆಂಡತಿಯ ಕಡೆಗೆ ನೋಡಿದನು. ದೊಡ್ಡ ಮಿಂಚೊಂದು ಹೊರಗಣ ಕತ್ತಲೆಯನ್ನು ಭೇದಿಸಿತು! ಎಲ್ಲರೂ ತಮ್ಮ ಬಾಯನ್ನು ತುಂಬಿಸಿಕೊಂಡಿದ್ದರು. ಆಗ ಗಂಗಮ್ಮ ಹೇಳುತ್ತಾಳೆ- “ಎಂಥ ಮರ್ಯಾದೆಗೆಟ್ಟ ಕೆಲಸ” – ಈ ಮಾತಿಗೆ ಬೋರ, ಗಂಗಮ್ಮ ಹಾಗು ಹುಡುಗ – ಮೂವರು ಗಟ್ಟಿಯಾಗಿ ನಗುತ್ತಾರೆ. ಮುದುಕ ತನ್ನ ಹೆಂಡತಿಯ ಮುಖ ನೋಡಿ ಸಿಟ್ಟಿನಿಂದ ಮಕ್ಕಳನ್ನು ಶಪಿಸುತ್ತ ಹೊಟ್ಟೆ ತುಂಬಿಸಿಕೊಂಡನು! ಹಸಿದ ಹೊಟ್ಟೆಗೆ ಅನ್ನವೇ ದೇವರು. ಅದರ ಮುಂದೆ ಯಾವ ಆದರ್ಶವೂ ನಿಲ್ಲಲಾರದು ಎಂಬ ವಾಸ್ತವವನ್ನು ಸರಳವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ಹೇಳುವ ಈ ಕತೆ ಮನಸ್ಸಿಗೆ ನಾಟುತ್ತದೆ.

ಸಂಕಲನದಲ್ಲಿ ಬಹಳ ವಿಶಿಷ್ಟವಾಗಿರುವ ಕತೆ “ಮರವೆಯಲ್ಲಿ” ಎಂಬ ಶೀರ್ಷಿಕೆಯದು. ತನ್ನ ಅದೃಷ್ಟವನ್ನು ಪರೀಕ್ಷಿಸಲು ಪಟ್ಟಣಕ್ಕೆ ಹೋಗಬಯಸಿದ ತರುಣ ಶೀನಪ್ಪ ಹಾದಿಯಲ್ಲಿ ದಣಿವಾರಿಸಲು ಮರದ ನೆರಳಲ್ಲಿ ಒರಗಿರುವಾಗ ಜನರು ಆ ಹಾದಿಯಲ್ಲಿ ಹೋಗುತ್ತಲೇ ಇರುತ್ತಾರೆ.ನಿದ್ರಾಲೋಕದಲ್ಲಿ ಮುಳುಗಿದ ಆತನನ್ನು ಹಲವು ಭಾವಗಳಿಂದ ಅಥವಾ ಯಾವ ಭಾವವೂ ಇಲ್ಲದೆ ದಾಟಿಹೋಗುವ ಜನರಲ್ಲಿ ಕುತೂಹಲದಿಂದ ಕಣ್ಣರಳಿಸಿ ನೋಡುವ ತರುಣ ಪ್ರಾಯದ ವಿಧವೆಯೂ ಇರುತ್ತಾಳೆ.ಆತ ಪಾನಮತ್ತನಾಗಿ ಮಲಗಿರುವನೆಂದೇ ಭಾವಿಸಿದ ಒಬ್ಬ ಉಪಾಧ್ಯಾಯನೂ ಇರುತ್ತಾನೆ.ಬಂಡಿ ಕೆಟ್ಟು ಹೋದ ಕಾರಣದಿಂದ ಮರದ ನೆರಳಿಗೆ ವಿಶ್ರಮಿಸಲೆಂದು ಬಂದ ಇಳಿಹರೆಯದ ದಂಪತಿಯ ಪ್ರತಿಕ್ರಿಯೆಗೂ ಆತ ಒಳಗಾಗುತ್ತಾನೆ.ಇದ್ದೊಬ್ಬ ಮಗನನ್ನು ಕಳಕೊಂಡ ಆ ತಾಯಿಗೆ ಶೀನಪ್ಪನಲ್ಲಿ ಆತನ ಹೋಲಿಕೆ ಕಾಣುತ್ತದೆ. ಅವನನ್ನು ದತ್ತಕ್ಕೆ ತೆಗೆದುಕೊಂಡರೆ ಚೆನ್ನು ಎಂದೂ ಅನಿಸುತ್ತದೆ. ಆದರೆ ಅವನನ್ನು ಎಬ್ಬಿಸಿ ಮಾತನಾಡಿಸುವ ಉತ್ಸುಕತೆ ಅವಳ ಗಂಡನಿಗೆ ಇರಲಿಲ್ಲ.ಕೆಟ್ಟುಹೋದ ಬಂಡಿ ಸಿದ್ಧವಾಗಿ ಅವರು ತೆರಳುತ್ತಾರೆ.ಮತ್ತೆ ಆ ದಾರಿಯಾಗಿ ಬಂದವರಲ್ಲಿ ಅವನ ಸುಂದರ ರೂಪವನ್ನು ನೋಡಿ ಮೋಹಿತಳಾಗುವ ಜಮೀನ್ದಾರನ ಪುತ್ರಿ,ನಿದ್ರಿಸುತ್ತಿದ್ದಶೀನಪ್ಪನ ತಲೆಯೊಡೆದು ಗಂಟು ದೋಚಲು ಯೋಜನೆ ಹಾಕುವ ಗಂಟುಕಳ್ಳರು, ಅವರು ಓಡುವುದಕ್ಕೆ ಕಾರಣವಾಗಿ ಮೃತ್ಯುಮುಖದಿಂದ ಆತನನ್ನು ತನಗರಿವಿಲ್ಲದೆಯೇ ಪಾರುಮಾಡುವ ಒಂದು ನಾಯಿ- ಇವರು ಮುಖ್ಯರಾಗುತ್ತಾರೆ.ಇಷ್ಟೆಲ್ಲ ನಡೆದೂ ಇದಾವುದರ ಪರಿವೆ ಇಲ್ಲದೆ ನಿದ್ದೆಯಿಂದ ಎಚ್ಚತ್ತ ಶೀನಪ್ಪ ಬಂಡಿಯೇರಿ ಪೇಟೆಯ ತನ್ನ ಭವಿಷ್ಯದ ಕುರಿತು ಯೋಚಿಸುತ್ತ ತೆರಳುತ್ತಾನೆ. “ಮಾನವನ ಸಾಹಸಗಳಿಗೂ ಒಂದು ಮಿತಿಯುಂಟು ಆದರೆ ಅದೃಷ್ಟದ ಆಟಕ್ಕೆ ಅಂತ್ಯವಿಲ್ಲ” – ಎಂದು ಕತೆ ಕೊನೆಗೊಳ್ಳುತ್ತದೆ. ಈ ಕತೆಯಲ್ಲಿ ಹಾಗೆ ನೋಡಿದರೆ ಏನೂ ನಡೆಯುವುದಿಲ್ಲ. ಆದರೆ ಬದುಕಿನ ಕುರಿತಾದ ಒಂದು ತಾತ್ವಿಕ ಹೊಳಹು ಇಲ್ಲಿದೆ. ಅದನ್ನು ಮಂಡಿಸಿದ ರೀತಿ ಕೂಡ ಅಪರೂಪದ್ದಾಗಿದೆ. ಕನ್ನಡ ಕಥಾ ಪ್ರಪಂಚದಲ್ಲಿ ವಿಶಿಷ್ಟವಾಗಿ ನಿಲ್ಲಬಲ್ಲ ಕತೆ ಇದು.
ಎನ್ನಪ್ಪೆ ತುಳುವಪ್ಪೆ ಎಂದು ತಮ್ಮ ತೌಳವ ಮಾತೆಯನ್ನು ನಲ್ಮೆ ಕೊಂಡಾಟಗಳಿಂದ ಬಣ್ಣಿಸಿ ಎದೆಯ ಗೂಡಲ್ಲಿ ಭದ್ರವಾಗಿ ಕಾಪಿಟ್ಟುಕೊಂಡೇ ಕನ್ನಡ ನಾಡು ನುಡಿಯ ಪುನರುತ್ಥಾನದ ದೊಡ್ಡ ಸಂಕಲ್ಪಕ್ಕೆ ತಮ್ಮನ್ನು ತೆತ್ತುಕೊಂಡ ವ್ಯಕ್ತಿತ್ವ ಅವರದು. ಹೆತ್ತವ್ವೆ ಕೊಂಕಣಿಮಾತೆಯಾದರೂ ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಎನ್ನುತ್ತ ಭಾವನಾತ್ಮಕವಾಗಿಯೂ ಕನ್ನಡವನ್ನು ಬಿಗಿದಪ್ಪಿಕೊಂಡ ಅದರ ಮುನ್ನಡೆಗಾಗಿ ಅನವರತ ಶ್ರಮಿಸುತ್ತಿದ್ದ ಗೋವಿಂದಪೈಯವರ ಮಾದರಿ ಕಯ್ಯಾರರಿಗಿತ್ತು.
ಗಾಂಧೀಜಿ ಮಂಗಳೂರಿಗೆ ಬರುತ್ತಾರೆ ಎಂಬ ಸುದ್ದಿತಿಳಿದು ಅವರ ಕೇವಲ ಒಂದು ದರ್ಶನಕ್ಕಾಗಿಯೇ ಅದೊಂದು ತೀರ್ಥಯಾತ್ರೆ ಎಂಬಂತೆ ಕಾಲ್ನಡಿಗೆಯಲ್ಲಿ ಮಂಗಳೂರಿಗೆ ತೆರಳಿದ ಕಯ್ಯಾರರು ಗಾಂಧೀದರ್ಶನ ಎಂಬ ಕವಿತೆಯನ್ನ ಬರೆಯುತ್ತಾರೆ.ಮುಂದೆ ಸ್ವಾತಂತ್ರ್ಯದ ಕನಸು ಸಾಕಾರಗೊಂಡರೂ ಅದರ ಒಡಲಿನಿಂದಲೇ ಎದ್ದ ಬೆಂಕಿ ಭುಗಿಲುಗಳೊಡನೆ ಸೆಣಸಿ ನೊಂದ ಗಾಂಧೀಜಿಯವರ ಬಗ್ಗೆ ಕಯ್ಯಾರರ ಮನ ಮಿಡಿಯುತ್ತದೆ. “ಅಮೃತಮಥನದಿ ವಿಷವನುಂಗಿದ ಮಹಾತ್ಮ”ನಾಗಿ ಗಾಂಧೀಜಿ ಅವರಿಗೆ ಗೋಚರಿಸುತ್ತಾರೆ.
ಗೋವಿಂದ ಪೈ, ಕಾರ್ನಾಡು ಸದಾಶಿವರಾಯರು, ಅತ್ತಾವರ ಬಾಲಕೃಷ್ಣಶೆಟ್ಟಿ, ಮೊದಲಾದವರ ಜೀವನಚರಿತ್ರೆಗಳನ್ನು ನೀಡಿದ ಕಯ್ಯಾರರು ಆ ಮಾದರಿಯ ಬರವಣಿಗೆಯಲ್ಲಿ ತಮ್ಮದು ಸಿದ್ಧಹಸ್ತವೆಂಬುದನ್ನು ಸಾಬೀತುಗೊಳಿಸಿದ್ದಾರೆ.ನಾಡಿನ ನವೋತ್ಥಾನವನ್ನು ಹಂಬಲಿಸಿದ ಅವರಿಗೆ ಮಹಾನ್ ಚೇತನಗಳ ಜೀವನಚಿತ್ರವನ್ನು ಕಟ್ಟಿಕೊಡುವುದು ಉತ್ಸಾಹದ ಕೆಲಸವಾಗಿ,ಮುಂದಿನ ಪೀಳಿಗೆಗೆ ಸಲ್ಲಿಸಬೇಕಾದ ಕರ್ತವ್ಯವಾಗಿ ಕಂಡಿರಬೇಕು.ಗೋವಿಂದ ಪೈಅವರ ಆರಾಧ್ಯಮೂತರ್ಿ. ಅವರ ಕುರಿತಾಗಿಯೇ ಕಯ್ಯಾರರು ಬೇರೆ ಬೇರೆ ಸಂದರ್ಭಗಳಲ್ಲಿ ಮೂರು ಕೃತಿಗಳನ್ನು ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯದ ಬಗ್ಗೆ ಅದರ ಬಹುತ್ವದ ನಡುವೆಯೂ ಮೆರೆಯುವ ಸೌಹಾರ್ದತೆಯ ಬಗ್ಗೆ ಅವರಿಗೆ ಅಪಾರ ಅಭಿಮಾನ.ಬಹುತ್ವವನ್ನು ಮನ್ನಿಸುವ ದ.ಕ ಜಿಲ್ಲೆಯಿಂದ ಬೇರ್ಪಟ್ಟ ತನ್ನ ಕಾಸರಗೋಡಿನಲ್ಲಿ ಅಧೀನಸಂಸ್ಕೃತಿಯಾಗಿ ತುಳು ಕನ್ನಡಗಳು ನಲುಗುವುದರ ಬಗ್ಗೆ ಇತಿಹಾಸ ಮತ್ತು ಪರಂಪರೆಯನ್ನು ಅರಿತ ಅವರಿಗೆ ಅಪಾರ ವ್ಯಥೆ ಇದೆ.ಶತಮಾನದ ಅಂಚಿನಲ್ಲಿರುವ ಈ ಹಿರಿಯ ಜೀವಕ್ಕೆ ನಾಡು ನುಡಿ ಋಣಿಯಾಗಿದೆ.

‍ಲೇಖಕರು G

June 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Anonymous

    ಅವಧಿಯಲ್ಲಿ ನಿಮ್ಮನ್ನು ಕಂಡು ತುಂಬ ಖುಷಿಯಾಯ್ತು ಮಹೇಶ್ವರಿ.
    ನಾಳಿನ ಸಮಾರಂಭದ ಹಿನ್ನೆಲೆಯಲ್ಲಿ ಸಕಾಲಿಕ ಲೇಖನ.
    ಮಂಗಳೂರಿಗೆ ಗಾಂಧೀಜಿಯವರನ್ನು ನೋಡಲು ಹೋದ ಕಥೆಯನ್ನು ನಾನೊಮ್ಮೆ ಅವರ ಬಾಯಿಯಿಂದಲೇ ಕೇಳಿದ್ದೆ. ಕಣ್ಣಿಗೆ ಕಟ್ಟುವಂತೆ ಹೇಳಿದ್ದರು.
    ಧನ್ಯವಾದಗಳು.
    ಅನುಪಮಾ ಪ್ರಸಾದ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: