ಶಂಕರ್ ನಾಗ್ ಮತ್ತು ರಂಗ ಶಂಕರಗಳೆಂಬ ದಣಿವರಿಯದ ಚೈತನ್ಯಗಳು
ಸೂರಿ
ಶಂಕರ್ ಬಗ್ಗೆ ಬರೆಯಲು ಕೂತರೆ ಹಲವಾರು ನೆನಪುಗಳು ಮೆರವಣಿಗೆ ಹಚ್ಚುತ್ತವೆ. ಬೆಂಗಳೂರಿನ ನನ್ನ ಜೀವನದ ಬಹುಪಾಲು ಸಮಯವನ್ನು ಆತನ ಜೊತಗೆ ಕಳೆದದ್ದು ಕಾರಣವಿರಬೇಕು. ಅಥವಾ ದಿನನಿತ್ಯದ ಸುದ್ದಿಗಳ ವಿನಿಮಯ ಮಾಡಿಕೊಳ್ಳುತ್ತಿದ್ದೆವಲ್ಲಾ ಅದೂ ಕಾರಣವಿರಬಹುದು. ಇಬ್ಬರಿಗೂ ಓದಿನ ಹವ್ಯಾಸವಿತ್ತಲ್ಲ, ಓದಿದ್ದನ್ನು ವಿನಿಮಯ ಮಾಡಿಕೊಳ್ಳಬೇಕಿತ್ತಲ್ಲ ಅದೂ ಕಾರಣವಿರಬಹುದು. ಎಷ್ಟೋ ಸಾರಿ ವಿಂಬಲ್ಡನ್ನೋ ಕ್ರಿಕೆಟ್ಟನ್ನೋ ವರ್ಲ್ಡ್ ಕಪ್ ಫುಟ್ಬಾಲನ್ನೋ ಜೊತೆಯಲ್ಲಿ ಕೂತು ನೋಡುತ್ತಿದ್ದೆವಲ್ಲಾ ಅದೂ ಕಾರಣವಿರಬಹುದು. ರಾತ್ರೋ ರಾತ್ರಿ ನಾನೂ ಅರುಂಧತಿ ಕೂತು ಮರಾಠಿ ನಾಟಕಗಳನ್ನೋ, ಇಂಗ್ಲಿಷ್ ನಾಟಕಗಳನ್ನೋ ಅನುವಾದಿಸುವಾಗ ತಾನೂ ಬಂದು ಕೂತು ರಾತ್ರಿಗಳನ್ನು ಬೆಳಗು ಮಾಡಿಸುತ್ತಿದ್ದರಲ್ಲಾ ಅದೂ ಕಾರಣವಿರಬಹುದು. ಕಾನೂರು ಹೆಗ್ಗಡತಿ, ಕಿರಗೂರಿನ ಗಯ್ಯಾಳಿಗಳು ಮುಂತಾದ ಕಾದಂಬರಿಗಳನ್ನು ನಾನು ಓದುತ್ತಾ ಆತ ಕೇಳುತ್ತಾ ದಿನಗಳನ್ನು ಕಳೆಯುವುದಿತ್ತಲ್ಲಾ ಅದೂ ಕಾರಣವಿರಬಹುದು. ನಾನು ದೆಹಲಿಯ ನಾಟಕ ಶಾಲೆಯಿಂದ ಬಂದವನು ಅನ್ನುವುದಂತೂ ಖಂಡಿತವಾದ ಕಾರಣ. ಸುಮಾರು ನಾಟಕಗಳ ಕನಸು ಹೊತ್ತಿದ್ದೆವು. ಸಾಲು ಸಾಲಾಗಿ ನಾಟಕಗಳನ್ನು ನಿದರ್ೆಶಿಸುತ್ತಾ, ಬರೆಸುತ್ತಾ ಹೋದರು. ಅಂಜುಮಲ್ಲಿಗೆ, ಬ್ಯಾರಿಸ್ಟರ್, ಕಣ್ಣಾ ಮುಚ್ಚಾಲೆ, ಸಂಧ್ಯಾಛಾಯ, ನೋಡಿ ಸ್ವಾಮಿ ನಾವಿರೋದು ಹೀಗೆ, ಆಟ ಬೊಂಬಾಟ್…ಎಲ್ಲಕ್ಕೂ ಪುಟವಿಟ್ಟಂತೆ ನಾಗಮಂಡಲ. ಜೊತೆ ಜೊತೆಯಲ್ಲೇ ಗೆಳೆಯರ ಗುಂಪನ್ನು ಕಟ್ಟುತ್ತಾ ಹೋದರು. ಕನ್ನಡ ರಂಗ ಭೂಮಿಯಲ್ಲಿ ಶಂಕರ್ ಗೆಳೆತನವಿಲ್ಲದ ಹೆಸರಿರಲಿಲ್ಲ ಅನ್ನುವುದು ನಿಜ.

ಕನಸುಗಳು ಮತ್ತು ಶಂಕರ್ ನಾಗ್ ಜೀವನದ ಎರಡು ಮುಖಗಳು. ಕನಸುಗಳಿಲ್ಲದೇ ಶಂಕರ್ ನಾಗ್ ಇಲ್ಲ, ಶಂಕರ್ ನಾಗ್ ಇಲ್ಲದೇ ಕನಸುಗಳಿಗೆ ಅರ್ಥವಿಲ್ಲ. ಒಂದು ಕನಸು ಕಾಣಬೇಕು. ಅದು ಕೈಗೂಡತ್ತೋ ಇಲ್ಲವೋ ಮುಖ್ಯವಲ್ಲ. ಆ ಕನಸು ಕಣ್ಣಿನಿಂದ ಆರುವ ಮೊದಲೇ ಇನ್ನೊಂದು ಕನಸು ಕಾಣುವುದು. ಯಯಾತಿ ಓದಿದಾಗ ಶಂಕರ್ಗೆ ಬಹಳ ಇಷ್ಟವಾದದ್ದು ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಲ್ಲೆ, ಕನಸುಗಳಿಲ್ಲದ ಹಾದಿಯಲ್ಲಿ ಹೇಗೆ ನಡೆಯಲಿ ನಾನು’ ಅನ್ನುವ ಸಾಲು. ಕನಸು ಕಾಣುವುದು ತಪ್ಪಲ್ಲ, ಖಂಡಿತಾ ತಪ್ಪಲ್ಲ. ಆದರೆ ಕನಸು ಕಂಡು ಸುಮ್ಮನೆ ಕೂಡಬಾರದು. ಆ ಕನಸುಗಳನ್ನು ನನಸಾಗಿಸುವ ಪ್ರಯತ್ನಗಳನ್ನು ಮಾಡುವುದನ್ನು ನಿಲ್ಲಿಸಬಾರದು. ನೋಡಿ ಸ್ವಾಮಿಯಲ್ಲಿ ಒಂದು ಸಂಭಾಷಣೆಯಿದೆ. ‘ಪಕ್ಕದಲ್ಲಿ ಒಂದು ಕಲ್ಲಿನ ರಾಶಿ ಹಾಕ್ಕೊಂಡು ಒಂದು ಮಾವಿನ ಮರಕ್ಕೆ ಕಲ್ಲು ಹೊಡೀತಾಯಿರೋದು. ಅಪ್ಪೀತಪ್ಪೀ ಒಂದು ಕಾಯಿ ಬಿತ್ತೋ ಖುಷಿ ಪಟ್ಕೊಳ್ಳೋದು. ಅಯ್ಯೋ ಹುಟ್ದಾಗಿಂದಾ ಕಲ್ಲು ಹೊಡೀತಾನೆಯಿದಾನೆ ಒಂದಾದ್ರೂ ಪೀಚುಕಾಯಿ ಬಿದ್ದಿಲ್ಲ ಅಂತ ಯಾರಾದ್ರೂ ಹೇಳಿದ್ರೆ, ಕಾಯಿ ಹೊಡೆಯೋಕೆ ಅಲ್ಲ ನಾನು ಕಲ್ಲು ಬಿಸಾಕಿದ್ದು. ಬಿಸಾಕಿದಾಗ ಸುಯ್ಯಂತ ಶಬ್ದ ಬರತ್ತಲ್ಲಾ ಅದನ್ನ ಕೇಳಕ್ಕೆ ಕಲ್ಲು ಬಿಸಾಕಿದ್ದು, ಹಂ! ಅಂತ ಹೇಳಿ ಇನ್ನೊಂದು ಸಾರಿ ಖುಷಿ ಪಡೋದು.’
1982ರ ಸುಮಾರು. ಆಟಬೊಂಬಾಟ್ ನಾಟಕದ ತಾಲೀಮು ನಡೆಸಿದ್ದೆವು. ನಾನು ಆಗಷ್ಟೇ ಸಂಕೇತ್ ತಂಡ ಸೇರಿದ್ದೆ. ರಾತ್ರಿ ಎಂಟರ ಮೇಲೆ ಸೆಂಟ್ರಲ್ ಕಾಲೇಜಿನ ಡಿಪಾರ್ಟ್ಮೆಂಟ್ ಆಫ್ ಡಾನ್ಸ್ ಆ್ಯಂಡ್ ಡ್ರಾಮಾದ ಆವರಣದಲ್ಲಿದ್ದ ಒಂದು ಬಸ್ ಶೆಡ್ಡಿನಲ್ಲಿ ತಾಲೀಮು ನಡೆಯುತ್ತಿತ್ತು. ಶ್ರೀನಿವಾಸಪ್ರಭುವನ್ನು ಬಿಟ್ಟರೆ ನನಗೆಲ್ಲಾ ಹೊಸಬರೇ. ನಾಟಕಕ್ಕೆ ನಾನು ಬೆಳಕು ಮಾಡಬೇಕಿತ್ತು. ಹಾಗಾಗಿ ನನಗೆ ಅಷ್ಟು ಕೆಲಸವಿರಲಿಲ್ಲ. ಮದುವೆಯೂ ಆಗಿರಲಿಲ್ಲ ಹಾಗಾಗಿ ರಾತ್ರಿಗಳನ್ನು ನಾಟಕದ ಹೆಸರಿನಲ್ಲಿ ಸವೆಸಲು ಯಾವುದೇ ಅಳುಕಿರಲಿಲ್ಲ. ನನಗಾಗ ಆಚ್ಚರಿ ಅನಿಸಿದ್ದು ಈ ಶಂಕರ್ ನಾಗ್ ಎಂಬ ದಣಿವಿರದ ಚೈತನ್ಯ. ಬಿಡಿಸಿ ಹೇಳುತ್ತೇನೆ. ಆ ದಿನಗಳಲ್ಲಿ ಶಂಕರ್ಗೆ ಮದ್ರಾಸಿನಲ್ಲಿ ಶೂಟಿಂಗ್ ಇತ್ತು. ಬೆಳಿಗ್ಗೆ ಬೆಂಗಳೂರಿನಿಂದ ಮದ್ರಾಸಿಗೆ ವಿಮಾನದಲ್ಲಿ ಪ್ರಯಾಣ. ಅಲ್ಲಿ ಶೂಟಿಂಗ್. ಮತ್ತೆ ಸಂಜೆ ಮದ್ರಾಸಿನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ. ಏರ್ಪೋರ್ಟ್ನಿಂದ ನೇರವಾಗಿ ಈ ಶೆಡ್ಡಿಗೆ. ಎಂಟರಿಂದ ಹತ್ತೋ ಹನ್ನೊಂದರವರೆಗೋ ತಾಲೀಮು. ಮತ್ತೆ ಗೆಳೆಯರನ್ನು ಗುಡ್ಡೆ ಹಾಕಿಕೊಂಡು ಫಾಮರ್ಿಗೆ ಪ್ರಯಾಣ. ಬೆಳಿಗ್ಗೆ ಮೂರು ನಾಲ್ಕರ ತನಕ ಹರಟೆ, ಗುಂಡು ಇತ್ಯಾದಿ. ಮತ್ತೆ ಆರು ಗಂಟೆಗೆ ಆತ ಎದ್ದು ಮದ್ರಾಸಿಗೆ ಹೋದ ಮೇಲೆ ನಾವು ನಂನಮ್ಮ ಮನೆಗಳಿಗೆ. ಸಾಯಂಕಾಲ ಏಳಕ್ಕೆ ಶೆಡ್ಡಿಗೆ ಹೋಗಿ ಮತ್ತೆ ತಾಲೀಮು. ಎಂಟಕ್ಕೆಲ್ಲಾ ಶಂಕರ್ ಆಗಮನ. ಸುಮಾರು ಒಂದು ಹದಿನೈದು ದಿನ ಹೀಗೆ ತಾಲೀಮು ಮಾಡಿದ ನೆನಪು. ಅದಕ್ಕೇ ನಾನಂದಿದ್ದು ಅದೊಂದು ದಣಿವರಿಯದ ಚೈತನ್ಯ ಅಂತ. ಇನ್ನೊಂದು ಮಗ್ಗುಲಿನಿಂದ ಇದನ್ನು ನೋಡುವುದಾದರೆ ಇದು ನಾಟಕದ ಅಂದರೆ ಶಂಕರ್ಗಿದ್ದ ಹುಚ್ಚು. ಸಿನೆಮಾದಲ್ಲಿ ಎಷ್ಟೇ ಕೆಲಸವಿದ್ದರೂ, ಬಿಡುವಿಲ್ಲದೇ ಹೋದರೂ ನಾಟಕಕ್ಕೆ ಇಲ್ಲಾ ಅನ್ನುತ್ತಿರಲಿಲ್ಲ. ಸಿನೆಮಾ ಶೂಟಿಂಗ್ಗೆ ಆರೋಗ್ಯ ಸರಿಯಿಲ್ಲದೇ ಹೋದರೂ, ನಾಟಕಕ್ಕೆ ಆರೋಗ್ಯ ಸರಿಯಿಲ್ಲದ ದಿನ ನಾನು ಕಂಡಿಲ್ಲ. ಶಂಕರ್ಗೆ ನಾಟಕ, ನಾಟಕದ ತಾಲೀಮು ಅನ್ನುವುದು ಒಂದು ಸಂಭ್ರಮ. ಎಲ್ಲಾ ಜೊತೆಗಿರಬೇಕು. ತಾಲೀಮಿನ ಸಮಯದಲ್ಲೂ, ತಾಲೀಮಿನ ನಂತರವೂ. ಹಾಗಾಗಿ ಸಂಕೇತ್ ಅಂದರೆ ನಾಟಕದ ತಂಡ ಅನ್ನುವುದಕ್ಕಿಂತಾ ನಮಗೆಲ್ಲಾ, ನನ್ನ ಮಟ್ಟಿಗಂತೂ, ಅದೊಂದು ಮನೆಯೆಂಬಂತೆ ಆಗಿತ್ತು.
ಶಂಕರ್ ಗೆಳೆತನವೆಂದರೇ ಹಾಗೆ. ಪ್ರೀತಿಯ ಬಿಗಿಯಪ್ಪುಗೆ. ಆತನ ಪ್ರೀತಿಯಿಂದ ಹೇಗೆ ಹೊರಬರಲು ಸಾಧ್ಯವಿಲ್ಲವೋ ಆತನ ಅಪ್ಪುಗೆಯಿಂದಲೂ ಬಿಡಿಸಿಕೊಳ್ಳುವುದು ಅಸಾಧ್ಯವಾಗಿತ್ತು. ಶಂಕರ್ ಮಾತಿನಲ್ಲಿ, ನಡವಳಿಕೆಯಲ್ಲಿ ಕಪಟದ ಸುಳಿವೂ ಇರಲಿಲ್ಲ. ಆತನಿಗೆ ಸಿಟ್ಟು ಬಂದರೆ ಜಗತ್ತಿಗೇ ಗೊತ್ತಾಗಿಬಿಡುತ್ತಿತ್ತು. ಆತನಿಗೆ ನೋವಾದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಅರುಂಧತಿಗೆ ಬಿಟ್ಟು. ನಕ್ಕು ಜೀವನವನ್ನು ಸಹ್ಯ ಮಾಡಿಕೊಳ್ಳುವುದು ಹೇಗೆ ಅನ್ನುವುದನ್ನು ಶಂಕರ್ನಿಂದ ಕಲಿಯಬೇಕಿತ್ತು ನಾವುಗಳು. (ಕಲಿಯಲಿಲ್ಲ, ನಮ್ಮ ದುರಾದೃಷ್ಟ!) ಆತ ಇದ್ದ ಕಡೆ ಗೆಳೆಯರಿರಬೇಕು. ಗೆಳೆಯರನ್ನು ಸೇರಿಸಲು, ಸಂಜೆಗಳನ್ನು ಸುಂದರವಾಗಿ ಕಳೆಯಲು ಆತನಿಗೆ ಕಾರಣಗಳು ಬೇಕಿರಲಿಲ್ಲ. ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚಿನಲ್ಲಿ ಇಂಡಿಯಾ ಫಸ್ಟ್ ಇನ್ನಿಂಗ್ಸ್ನಲ್ಲಿ ಲೀಡ್ ಪಡೆದರೆ ಸಾಕು ಸಂಜೆ ಪಾರ್ಟಿ. ಸಿನೆಮಾ ಸ್ಟಾರಿನ ಯಾವ ಹಮ್ಮೂ, ಅಹಂಕಾರಗಳು ಇರಲಿಲ್ಲ.
ನಾಗಮಂಡಲ ನಾಟಕದ ತಾಲೀಮಿಗೆ ಮುಂಚೆ ನಡೆದ ಒಂದು ಚಿಕ್ಕ ಘಟನೆ. ನಾನೂ ಶಂಕರ್ ನಾಗಮಂಡಲದ ಹಾಡುಗಳು ಹೇಗಿರಬೇಕು ಎಂದು ಹುಡುಕುತ್ತಿದ್ದೆವು (ಆಗಿನ್ನೂ ಅಶ್ವತ್ಥ್ ಪ್ರವೇಶವಾಗಿರಲಿಲ್ಲ). ನಂಗೆ ಆಪ್ತರಾಗಿದ್ದ ಶ್ರೀ ಮುದೇನೂರ ಸಂಗಣ್ಣನವರಿಗೆ ಫೋನ್ ಮಾಡಿ ಕೇಳಿಕೊಂಡೆ, ನಾವು ಬಂದರೆ ನಿಮ್ಮಲ್ಲಿಯ ಹಾಡುಗಳನ್ನು ಕೇಳಬಹುದೇ ಅಂತ. ಶಂಕರ್ ಬರುತ್ತಾರೆ ಅಂತ ಹೇಳಿರಲಿಲ್ಲ. ಬನ್ನಿ ಅಂತ ಒಪ್ಪಿಗೆ ದೊರೆತ ಮೇಲೆ ನಾನೂ ಶಂಕರ್ ಚಿಗಟೇರಿಗೆ ಹೊರಟೆವು, ಶಂಕರ್ ಮ್ಯಾಟಡಾರಿನಲ್ಲಿ. ದಾರಿಯುದ್ದಕ್ಕೂ ನಾನು ನಾಗಮಂಡಲ ಓದಬೇಕು, ಆತ ಅದನ್ನು ಬರೆದುಕೊಳ್ಳಬೇಕು. ಜಗಳೂರು ದಾಟಿದ್ದೆವು. ಸಂಜೆಯಾಗುತ್ತಲಿತ್ತು. ಇಬ್ಬರಿಗೂ ಸುಸ್ತಾಗಿತ್ತು. ಇಬ್ಬರಿಗೂ ಒಂದು ಕಪ್ಪು ಚಹ ಬೇಕೂ ಅನಿಸುತ್ತಿತ್ತು. ಸದ್ಯದಲ್ಲೇ ಯಾವುದೇ ಊರು ಅಥವಾ ಹೋಟೆಲು ಬರುವ ಸೂಚನೆಯಿರಲಿಲ್ಲ. ಕೊಂಚ ದೂರ ಹೋದ ಮೇಲೆ ಒಂದು ನಾಕು ಮನೆಗಳಿರುವ ಒಂದು ಕೊಂಪೆ ಕಂಡಿತು. ಡ್ರೈವರ್ರಿಗೆ ಮ್ಯಾಟಡಾರ್ ನಿಲ್ಲಿಸಲು ಹೇಳಿ, ಶಂಕರ್ ಇಳಿದು ಆ ನಾಕು ಮನೆಗಳಲ್ಲಿ ಒಂದು ಮನೆಯ ಬಾಗಿಲು ತಟ್ಟಿದರು. (ನೆನಪಿರಲಿ, ಇದು ನಡೆದದ್ದು ಶಂಕರ್ ಹೀರೋ ಆಗಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗ) ಒಂದು ವಯಸ್ಸಾದ ಹೆಂಗಸು ಬಾಗಿಲು ತೆರೆದು ಏನು ಬೇಕು ಅನ್ನುವಂತೆ ನೋಡಿದರು. ಅಮ್ಮಾ ಭಾಳಾ ದೂರದಿಂದ ಬಂದಿದೀವಿ, ಒಂದು ಲೋಟ ಚಹಾ ಮಾಡಿಕೊಟ್ಟರೆ ಸಾಕು. ಮಾಡಿ ಕೊಡ್ತೀರಾ ಅಂತ ಕೇಳಿದರು. ಆಕೆಗೆ ಶಂಕರ್ ಗುರುತು ಹತ್ತಿರಲಿಲ್ಲ. ಆದರೂ ಆಕೆ ಬಾಗಿಲು ಪೂರ್ತಿ ತೆಗೆದು ಇಬ್ಬರನ್ನೂ ಒಳಗೆ ಕರೆದರು. ಒಂದು ನಾಕಡಿ ಎಂಟಡಿಯ ಒಂದು ಪುಟ್ಟ ವೆರಾಂಡದಲ್ಲಿದ್ದ ಒಂದು ಬೆಂಚಿನ ಮೇಲೆ ಕೂತೆವು, ಚಹಾಗೆ ಕಾಯುತ್ತಾ. ಒಬ್ಬ ಹುಡುಗ ಸುಮಾರು ಹತ್ತು ವರ್ಷವಿರಬೇಕು, ಒಂದು ಗಾಡಿಯನ್ನು ಓಡಿಸಿಕೊಂಡು, ಬಾಯಲ್ಲಿ ಡರ್ ಅಂತ ಶಬ್ದ ಮಾಡುತ್ತಾ, ಕೈಯ್ಯಲ್ಲಿ ಸ್ಟೀಯರ್ ರಿಂಗನ್ನು ಗಾಳಿಯಲ್ಲಿ ತಿರುವುತ್ತಾ ಮನೆಯೊಳಗಿಂದ ಬಂದ. ನಾವಿಬ್ಬರೂ ಕೂತಿದ್ದನ್ನು ನೋಡಿ ಒಂದರೆ ಕ್ಷಣ ನಿಂತು ನಮ್ಮನ್ನೇ ನೋಡಿ ಗಾಡಿಯನ್ನು ರಿವರ್ಸ್ ಮಾಡಿಕೊಂಡು ಮನೆಯೊಳಗೆ ಹೋದ. ಮುಂದಿನ ಐದು ನಿಮಿಷ ಏನೂ ಆಗಲಿಲ್ಲ. ಆಮೇಲೆ ಒಂದು ತಟ್ಟೆಯಲ್ಲಿ ಚಹಾ ಲೋಟಗಳನ್ನು, ಒಂದೆರಡು ಬೆಲ್ಲದ ಚೂರುಗಳನ್ನು ಇಟ್ಟುಕೊಂಡು, ಇಡೀ ಮನೆಯೇ ನಮ್ಮ ಮುಂದೆ ಹಾಜರಾಯಿತು. ಯೇನರ ಸ್ಪೀಟು ಮಾಡಕಂದ್ರೆ ಆಗಲಿಲ್ಲ ನೋಡಪ, ಒಂಚೂರು ಇದುನ್ನೇ ತಗ ಅಂತ ಆ ಮನೆಯ ಹಿರಿಯ ಕೇಳಿಕೊಂಡರು. ಶಂಕರ್ ಯಾವುದೇ ಸಂಕೋಚವಿಲ್ಲದೇ ಆ ಬೆಲ್ಲದ ಚೂರುಗಳಲ್ಲಿ ಒಂದೆರಡನ್ನು ಬಾಯಿಗೆ ಹಾಕಿಕೊಂಡು ಅದರ ಮೇಲೆ ಚಹಾ ಕುಡಿದು ಹೊರ ಬಂದರೆ, ಅಷ್ಟು ಹೊತ್ತಿಗಾಗಲೇ ಅಲ್ಲಿದ್ದ ಆರೆಂಟು ಮನೆಗಳಿಗೂ ಶಂಕರ್ ನಾಗ್ ಬಂದಿದ್ದ ಸುದ್ದಿ ತಲುಪಿ ಒಂದು ಸಣ್ಣ ಗುಂಪೇ ಮನೆಯ ಮುಂದೆ ನೆರೆದಿತ್ತು. ಆ ಮಸುಕು ಬೆಳಕಲ್ಲಿ ಶಂಕರ್ನನ್ನು ಕಣ್ತುಂಬಾ ನೋಡಿದರು. ಮಾತನಾಡಿದರು. ಶಂಕರ್ ಬೇಸರ ಮಾಡಿಕೊಳ್ಳದೇ ಸುಮಾರು ಅರ್ಧ ತಾಸು ಮಾತನಾಡಿದ ಮೇಲೆಯೇ ಅಲ್ಲಿಂದ ಹೊರಟಿದ್ದು. ಇದು ಶಂಕರ್ನ ಪ್ರೀತಿ. ಜನರನ್ನು ಆತ ಕಾಣುತ್ತಿದ್ದ ರೀತಿ.
ನಾಗಮಂಡಲ ನಾಟಕದ ತಾಲೀಮಿನ ಹೊತ್ತಿಗೆ ಶಂಕರ್ ಕನಸುಗಳು ಹೆಚ್ಚಿದವು. ಒಂದೆಡೆ ಕನ್ನಡ ಚಿತ್ರರಂಗದ ಸಂಗೀತದ ಧ್ವನಿ ಮುದ್ರಣ ಕರ್ನಾಟಕದಲ್ಲೇ ಆಗಬೇಕು ಎನ್ನುವ ಹಠದಿಂದ ಕಟ್ಟಿದ ಸಂಕೇತ್ ಎಲೆಕ್ಟ್ರಾನಿಕ್ಸ್. ಇನ್ನೊಂದು ಕಡೆ ಎವಿಜಿ ಕಂಪೆನಿಯ ಸಹಯೋಗದಲ್ಲಿ ಸುಲಭ ಮನೆ ಕಟ್ಟುವ ಯೋಜನೆ. ಬೆಂಗಳೂರಿಗೆ ಮೆಟ್ರೋ ಹಳಿ ಹಾಸುವ ಯೋಜನೆ. ನಂದಿ ಬೆಟ್ಟಕ್ಕೆ ಹಗ್ಗದೇಣಿ ಕಟ್ಟುವ ಹುಮ್ಮಸ್ಸು. ಡಚ್ ಕಂಪನಿಯ ಸಹಯೋಗದಲ್ಲಿ ಒಂದು ಅಂತರರಾಷ್ಟ್ರೀಯ ಸಿನೆಮಾ. ಈ ಮಧ್ಯೆ ಇಡೀ ಭಾರತ ಎದ್ದು ಕೂತು ನೋಡುವಂತೆ ಮಾಡಿದ ಮಾಲ್ಗುಡಿ ಡೇಸ್ ಧಾರಾವಾಹಿ. ಸಿನೆಮಾದಲ್ಲಿ ನಟನೆ. ಅಣ್ಣ ಅನಂತ್ ನಾಗ್ ಜೊತೆಗೆ ಸಿನೆಮಾ ನಿರ್ಮಾಣ ಮತ್ತು ನಿರ್ದೇಶನ. ಕೊನೆಯಲ್ಲಿ ಕಂಟ್ರಿ ಕ್ಲಬ್ನ ಬಿಡುವಿಲ್ಲದ ದುಡಿತ. ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಲದೇ ಹೋದವು. ಏನೇ ಆದರೂ ಎಷ್ಟೇ ಬಿಡುವಿಲ್ಲದೇ ದುಡಿದರೂ ಮೂರು ವಿಷಯಗಳನ್ನು ಮಾತ್ರ ಶಂಕರ್ ಕಡೆಗಣಿಸಲಿಲ್ಲ. ಮನೆ, ಹೆಂಡತಿ, ಮಗಳು ಒಂದು ಬದಿ. ಗೆಳೆಯರು ಅವರೊಂದಿಗಿನ ರಾತ್ರಿಗಳು ಮತ್ತೊಂದು ಬದಿ. ಸಂಜೆಯ ಮೂರು ನಾಲ್ಕು ತಾಸು ನಾಟಕದ ತಾಲೀಮು, ಪ್ರದರ್ಶನ ಇನ್ನೊಂದು ಬದಿ. ಕೆಲವು ಕನಸುಗಳು ಕೈಗೆಟುಕಿದವು. ಕೆಲವು ಕನಸುಗಳು ರಾಜಕೀಯದ ಸುಳಿಯಲ್ಲಿ ಬತ್ತಿ ಹೋದವು. ಇನ್ನೂ ಕೆಲವು ಸರ್ಕಾರದ ನಿರ್ಲಕ್ಷದಿಂದ ಹಾಳೆಗಳನ್ನು ಬಿಟ್ಟು ಏಳಲೇ ಇಲ್ಲ. ಬೆರಳ ತುದಿ ಮುಟ್ಟಿ ಅಲ್ಲೇ ಜಾರಿ ಹೋದವು. ಆದರೂ ಕನಸುಗಳು ಮೊಳಕೆಯೊಡೆಯುವುದು ಬಿಡಲಿಲ್ಲ.

ಪ್ರತಿ ಸಾರಿ ಬೆಂಗಳೂರಲ್ಲಿ ಎಲ್ಲೇ ನಾಟಕವಾಡಿದರೂ, ನಾಟಕದ ನಂತರ ಶಂಕರ್ ಹೇಳುತ್ತಿದ್ದುದು ಒಂದೇ ಮಾತು. ಒಂದು ರಂಗಮಂದಿರ ಕಟ್ಟಿಸಬೇಕು. ಹವ್ಯಾಸಿಗಳಿಗೆ ಹುಮ್ಮಸ್ಸು ಕೊಡಬೇಕು. ಮರಾಠೀ ರಂಗಭೂಮಿಯಂತೆ ವ್ಯವಸಾಯೀ ರಂಗಭೂಮಿಯಿಂದ ಬದುಕುತ್ತಿಲ್ಲ ಕನ್ನಡ ರಂಗಭೂಮಿ. ಕನ್ನಡ ರಂಗಭೂಮಿಯ ಆಸ್ತಿಯೆಂದರೆ ಹವ್ಯಾಸಿ ನಾಟಕಗಳು. ಆದರೆ ಹವ್ಯಾಸಿ ತಂಡಗಳಿಗೆ ನಾಟಕವಾಡಲು ರಂಗ ಮಂದಿರಗಳೇ ಇಲ್ಲ. ಈ ಹವ್ಯಾಸಿ ನಾಟಕಗಳಿಗೆ ಒಂದು ರಂಗಮಂದಿರ ಕಟ್ಟಬೇಕು ಎನ್ನುವ ಶಂಕರ್ ಆಸೆ ಕೈಗೂಡಲೇ ಇಲ್ಲ. ಅದಕ್ಕಾಗಿ ಆತ ಭೇಟಿಯಾದ ಜನರ, ಮೊರೆ ಹೊಕ್ಕ ಸಂಸ್ಥೆಗಳ ಲೆಕ್ಕವೇ ಇಲ್ಲ. ಆತನನ್ನು ಬಾಚಿ ತಬ್ಬಿಕೊಳ್ಳುವ ಬದಲು ಆತನ ಉತ್ಸಾಹ ನೋಡಿ ಗಾಬರಿಯಾಗಿ ಕೈಬಿಟ್ಟವರೇ ಹೆಚ್ಚು. ತಾನು ಕಟ್ಟಿದ ಹಲವು ಕನಸುಗಳ ನಡುವೆ ನಮ್ಮನ್ನು ಬಿಟ್ಟು ಇದ್ದಕ್ಕಿದ್ದಂತೇ ಶಂಕರ್ ಕಣ್ಮರೆಯಾದರು.
ಈ ದಣಿಯವಿರಯದ ಚೈತನ್ಯವನ್ನು ಕಂಡು ಗಿರೀಶ್ ಕಾರ್ನಾಡ್ ಒಮ್ಮೆ ಹೇಳಿದ್ದರು, ‘ಅಡಿಗರು `ಏನಾದರೂ ಮಾಡುತಿಹು ತಮ್ಮ` ಪದ್ಯ ಬರೆದಿರೋದು ನಿನಗಂತಾನೇ.’
—
ಅವರ ಎಲ್ಲಾ ಕನಸುಗಳಿಗೆ ಮೈ ಕೊಡುವುದು ನಮ್ಮಿಂದ ಸಾಧ್ಯವಾಗದ ಮಾತು ಅನ್ನುವುದು ನಮಗೆಲ್ಲಾ ಗೊತ್ತಿತ್ತು. ಆತ ಮೈಗೂಡಿಸಿದಷ್ಟನ್ನೂ ಉಳಿಸಿಕೊಳ್ಳುವ ಯತ್ನ ನಮ್ಮದಾಗಬೇಕು. ಆದರೆ ರಂಗಭೂಮಿಯ ನಾವು ಆತನ ರಂಗಮಂದಿರದ ಕನಸನ್ನಾದರೂ ನಿಜಗೊಳಿಸಬೇಕಲ್ಲವೇ. ಆ ಒಂದು ಕನಸನ್ನು ಮುಂದಿಟ್ಟುಕೊಂಡು 1992ರಿಂದ ಒಂದು ತಪಸ್ಸನ್ನು ಶುರುಮಾಡಿದ್ದು ಅರುಂಧತಿ, ನಮಗೆಲ್ಲಾ ಅರು. ಶಂಕರ್ನಲ್ಲಿ ನಾವು ಕಂಡದ್ದು ಹಲವು ಕನಸುಗಳಿಗೆ ಕೈ ಚಾಚಿ ಅವೆಲ್ಲವನ್ನೂ ಬಾಚಿ ತಬ್ಬುವ ಹಂಬಲದ ವ್ಯಕ್ತಿಯನ್ನು. ಆದರೆ ಅರುಗೆ ಇದ್ದದ್ದು ಒಂದೇ ಕನಸು. ಶಂಕರನ ಹೆಸರಿನಲ್ಲಿ ಒಂದು
ರಂಗಮಂದಿರ ಕಟ್ಟಬೇಕು. ಹವ್ಯಾಸೀ ತಂಡಗಳ ಪ್ರಯೋಗಗಳಿಗೆ ಒಂದು ವೇದಿಕೆ ಒದಗಿಸಬೇಕು. ಕಟ್ಟಿದ ರಂಗಮಂದಿರ ತನ್ನದಾಗಬಾರದು. ಅದು ಬೆಂಗಳೂರಿನ, ಭಾರತದ ನಾಟಕ ತಂಡಗಳ ಸ್ವತ್ತಾಗಬೇಕು. ಎಲ್ಲರೂ ಅದನ್ನು ತಮ್ಮದೆಂದು ಭಾವಿಸಬೇಕು. ಹೊಸ ಹೊಸ ಪ್ರಯೋಗಗಳಿಗೆ ಇಂಬು ಕೊಡುವ, ಅಂತರರಾಷ್ಟ್ರೀಯ ಮಟ್ಟದ, ಭಾರತದಲ್ಲೇ ಅತ್ಯುನ್ನತ ರಂಗಮಂದಿರವಾಗಬೇಕು – ಇದು ಆಕೆಯ ಕನಸು. ಈ ಕನಸಿನ ಬೆನ್ನು ಹತ್ತಿ, ಅದನ್ನು ಪೂರೈಸಲು ಆಕೆ ಬೇಡದ ವ್ಯಕ್ತಿಗಳಿಲ್ಲ, ಸೆರಗೊಡ್ಡದ ಸಂಸ್ಥೆಗಳಿಲ್ಲ. 2004ರಲ್ಲಿ ಮೊದಲ ಪ್ರದರ್ಶನಕ್ಕೆ ತಯಾರಾದ ರಂಗಮಂದಿರವೇ ರಂಗ ಶಂಕರ. ರಂಗ ಶಂಕರ ನಿಜಕ್ಕೂ ಸಾರ್ವಜನಿಕರ ಸೊತ್ತು. ನಾಟಕ ತಂಡಗಳ ಸೊತ್ತು. ರಂಗ ಶಂಕರದ ಅಣು ಅಣುವೂ ದೇಣಿಗೆಯಿಂದ ಬಂದಿದ್ದು. ಅಲ್ಲಿ ಬಳಸಲಾದ ಕಬ್ಬಿಣ, ಸಿಮೆಂಟು, ಹಚ್ಚಿದ ಬಣ್ಣ, ರಂಗಭೂಮಿಗೆ ಹೊದಿಸಿದ ಮರದ ಹಾಳೆಗಳು, ಕುಚರ್ಿಗಳು…ಎಲ್ಲ, ಎಲ್ಲ. ಜನ ಪ್ರೀತಿಯಿಂದ ಉಡುಗೊರೆಯಾಗಿ ನೀಡಿದ್ದು. ಉಡುಗೊರೆ ನೀಡಿದ ಪ್ರತಿಯೊಬ್ಬರಿಗೂ ಅರು ಕಂಡ ಕನಸಿನ ಬಗ್ಗೆ ಅಪೂರ್ವವಾದ ನಂಬಿಕೆಯಿತ್ತು. ಇಲ್ಲವಾದಲ್ಲಿ ಅಷ್ಟು ದೊಡ್ಡ ಮಂದಿರವನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ, ರಂಗ ಶಂಕರದ ಗೆಳೆಯರ ಬಳಗ ಇಷ್ಟು ದೊಡ್ಡದಾಗುತ್ತಿರಲಿಲ್ಲ.
—
ಈ ಅಕ್ಟೋಬರ್ 27ಕ್ಕೆ ರಂಗ ಶಂಕರಕ್ಕೆ ಹತ್ತು ವರ್ಷಗಳು ತುಂಬಲಿವೆ. ಸುಮಾರು 3900 ಪ್ರದರ್ಶನಗಳನ್ನು ರಂಗ ಶಂಕರ ಕಂಡಿದೆ. ಸುಮಾರು 8 ಲಕ್ಷ ಪ್ರೇಕ್ಷಕರು ರಂಗ ಶಂಕರದ ಹೆಬ್ಬಾಗಿಲ ಮೂಲಕ ಹಾದು ಹೋಗಿದ್ದಾರೆ. 35ಕ್ಕೂ ಮಿಗಿಲಾದ ಭಾಷೆಗಳ ನಾಟಕಗಳು ಇಲ್ಲಿ ಕಂಡಿವೆ. ಅನೇಕ ಅಂತರರಾಷ್ಟ್ರೀಯ ನಾಟಕ ಕಂಪನಿಗಳು ಇಲ್ಲಿ ಪ್ರಯೋಗ ನಡೆಸಿದ್ದಾರೆ. ಪ್ರಯೋಗ ನಡೆಸಲು ಹಾತೊರೆಯುತ್ತಿವೆ. ರಂಗ ಶಂಕರದ ಸಾಧನೆಯೇನೆಂದರೆ, ಈ ಹತ್ತು ವರ್ಷಗಳಲ್ಲಿ ವಾರದ ಸೋಮವಾರ ಮತ್ತು ಕೆಲವು ಅನಿವಾರ್ಯ ದಿನಗಳನ್ನು ಬಿಟ್ಟಲ್ಲಿ ಪ್ರಯೋಗವಿಲ್ಲದ ದಿನಗಳನ್ನು ರಂಗ ಶಂಕರ ಕಂಡಿಲ್ಲ. ಹೊಸ ಹೊಸ ಪ್ರಯೋಗಗಳಿಗೆ ಕೈ ಚಾಚಿ ಕರೆದಿದೆ. ಕರೆಯುತ್ತಲೇ ಇದೆ. ನಾಟಕ ಸಂಪ್ರದಾಯದ ಎಲ್ಲೆಗಳನ್ನು ಮೀರಿ ಜಿಗಿಯಲು ರಂಗ ಶಂಕರ ಸಿದ್ಧವಾಗಿದೆ. ಹೊಸ ಸವಾಲುಗಳಿಗೆ ಎದೆಯೊಡ್ಡಿ ನಿಂತಿದೆ. ಹಾಗಾಗಿ ಅದು ರಂಗಾಸಕ್ತರ, ಬೆಂಗಳೂರಿನ ಪ್ರೇಕ್ಷಕರ ಕಣ್ಮಣಿ.
ನಾಳೆ ನಾವಿಲ್ಲದೇ ಹೋದರೆ ರಂಗ ಶಂಕರದ ಗತಿಯೇನು ಅನ್ನುವ ಯೋಚನೆ ನಮಗಿಲ್ಲ. ಬೆಂಗಳೂರು ಅದನ್ನು ಕಾಪಾಡತ್ತೆ ಅನ್ನುವ ಅಚಲ ನಂಬಿಕೆ ಅರುಂಧತಿಯದು. ಇನ್ನೂ ನೂರು ವರ್ಷ ರಂಗ ಶಂಕರ ಬದುಕಿರಬಲ್ಲದು. ಅದಕ್ಕೆ ದಣಿವೆಂಬುದೇ ಇಲ್ಲ, ಥೇಟ್ ಶಂಕರ್ ನಂತೆ.






nice tribute to Shankar Nag. and thanks to all of you and Ranga Shakara we can see great plays in Bangalore. I rmembe my college days when most of the places for plays were College auditoriums.
excellent article! feels so proud of Shankara
ಶಂಕರನಾಗ್ ಅವರಿಗೆ ಸಲ್ಲಿಸಿದ ಅರ್ಥಪೂರ್ಣ ನುಡಿನಮನವಿದು.
-ಅನಿಲ
Feels so proud of shankara
It is impossible to read this article completely without tears in the eyes..
ಮತ್ತೆ ಮತ್ತೆ ಕಾಡುವ ಶಂಕರನಾಗ್ ಅವರನ್ನು ಮತ್ತಷ್ಟು ಕಾಡುವಂತೆ ಮಾಡುವ ಬರಹ ಕೊಟ್ಟಿದ್ದಕ್ಕೆ ಧನ್ಯವಾದ.
ಶಂಕರನಾಗ್ ರಂತೆ ಬರಹವೂ ತುಂಬಾ ಇಷ್ಟವಾಯಿತು.