ಹನಿಯ ಹಣಿಸಲೆಂದು ಮುಗಿಲು ಮುರಿದು ಬಿದ್ದಿತ್ತು ನೋಡಾ!
ವಿ ಶಂಕರ್ ಪಾಟೀಲ್
ಅಂಕ: ಒಂದು
2009ರ ಮಾರ್ಚ್, ಬೆಂಗಳೂರು
ಅಂದಿನ ನೈಟ್ಶಿಫ್ಟನ್ನು ಮುಗಿಸಿಕೊಂಡು ಕ್ಯಾಬಿನಲ್ಲಿ ರೂಮು ತಲುಪಿದ ಸಂದೇಶನು ಫುಲ್ಬಾಟಲ್ ವಿಸ್ಕಿಯೊಂದನ್ನು ಹೀರಿ ಕಳೆದ ವೀಕೆಂಡಿನಲ್ಲಿ ಖರೀದಿಸಿ ತಂದಿದ್ದ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಚಲನಚಿತ್ರಗಳ ಫೋರಿನ್ವನ್ ಡಿವಿಡಿಯನ್ನು ಹಾಕಿಕೊಂಡು ಟಿವಿಯನ್ನು ವೀಕ್ಷಿಸತೊಡಗಿದಾಗ ಆತನ ಬೆನ್ನು ಹಿಂಬದಿಯ ಗೋಡೆಗೆ ವಿಶ್ರಾಂತಿಗೊಡ್ಡಿಕೊಳ್ಳತೊಡಗಿತ್ತು.
ಚಲನಚಿತ್ರ ಆರಂಭವಾಯಿತು.
ಹೊಟ್ಟೆಯ ತುಂಬ ವಿಸ್ಕಿಯನ್ನು ಹೀರಿ ತಲೆಯ ತುಂಬ ಸಿಗರೇಟನ್ನು ಎಳೆದು ರೂಮಿನಿಂದ ಹೊರನಡೆದು ಹಾಗೇ ಬೆತ್ತಲಲ್ಲೇ ಓಡುತ್ತಾ ಸಮುದ್ರಕ್ಕೆ ಹಾರಿ ಸತ್ತುಬಿಡುವುದು.
ಶವರ್ಬಾಥ್ನ್ನು ಮಾಡಿ ಲುಂಗಿಯನ್ನುಟ್ಟು ಮಠವೊಂದನ್ನು ಸೇರಿ ವೈರಾಗ್ಯ ದೀಕ್ಷೆ ಪಡೆದು ಸರ್ವಧರ್ಮಗಳ ಜಾಡುಗಳನ್ನು ಜಗ್ಗಾಡಿ ಆಧ್ಯಾತ್ಮ ಸುಧೆಯನ್ನೆಲ್ಲಾ ಹೀರಿ ಲೋಕಕಲ್ಯಾಣಕ್ಕಾಗಿ ತನ್ನತನವನ್ನು ಸಮರ್ಪಿಸಿಬಿಡುವುದು.
ಸಂದೇಶನಿಗೆ ಭ್ರಾಂತಿಗಳಿಂದ ಎಚ್ಚರವಾಯಿತು.
ಚಲನಚಿತ್ರ ಓಡುತ್ತಿತ್ತು.
ಸಂದೇಶನಿಗೆ ಲಘು ಉಪಹಾರದ ಅಗತ್ಯವಿದೆಯೆನ್ನಿಸಿತು.
ಟಿವಿಯನ್ನು ಪೌಸ್ನಲ್ಲೇ ಇಟ್ಟು ಬಾಗಿಲ ಕೀ ಹಾಕಿದವನೇ ಬೆಳಗಿಗೆ ಬೇಗನೇ ತೆಗೆಯುತ್ತಿದ್ದ ಟಿಫನ್ ಸೆಂಟರಿನತ್ತ ದಾಪುಗಾಲಿಡತೊಡಗಿದ. ಲೈಟರಿನ ಕಿಡಿಗಳಿಂದ ಸಿಗರೇಟೊಂದನ್ನು ಹೊತ್ತಿಸಿಕೊಂಡು ಹೊಗೆಯನ್ನು ಗಾಳಿಯಲ್ಲಿ ಸುರುಳಿಸುರುಳಿಯಾಗಿ ಬಿಡುತ್ತಾ ನಡೆಯತೊಡಗಿದ.
ಕೆಳಗೆ ತ್ರೀಪೋರ್ಥ್; ಮೇಲೆ ಟೀಶರ್ಟ್ – ಸಧ್ಯದ ಆತನ ಉಡುಗೆಯಾಗಿತ್ತು!
ಟಿಫನ್ ಸೆಂಟರ್ ತಲುಪುವಷ್ಟರಲ್ಲಿ ಸಂದೇಶನಿಗೆ ಒಂದು ಆಘಾತ ಕಾದಿತ್ತು! ತಾನು ಟಿಫನ್ ತೆಗೆದುಕೊಳ್ಳುವ ಟಿಫನ್ ಸೆಂಟರಿನ ಮುಂದೆ ತಾನು ಪ್ರೀತಿಸುವ ಹುಡುಗಿ ಪುಷ್ಪಾ ತನ್ನ ಸಹ ಗೆಳತಿಯರೊಂದಿಗೆ ಅದೇ ಟಿಫನ್ ಸೆಂಟರಿನ ಮುಂದೆ ನಿಂತಿದ್ದಳು. ಸಂದೇಶ ಅವಳ ಕಣ್ಣು ತಪ್ಪಿಸಲೆಂದು ಒಂದಿಷ್ಟು ಹೊತ್ತು ಅಲ್ಲೇ ಹತ್ತಿರದಲ್ಲಿದ್ದ ಕಾಯಿನ್ ಬೂತಿನೊಳಗೆ ಹೊಕ್ಕ.
ಅವಳ ತೋಳನ್ನು ಆಲಂಗಿಸಿ ಜೋರಾಗಿ ಒಂದೇ ಕ್ಷಣಕ್ಕೆ ಬಿಕ್ಕಿಬಿಕ್ಕಿ ಅತ್ತುಬಿಡಬೇಕೆನ್ನಿಸಿತು ಸಂದೇಶನಿಗೆ. ‘ಇಂತಹ’ ಒಬ್ಬ ದೇವದಾಸನೂ ಇದ್ದಾನೆಂದು ಅವಳಿಗೆ ಮನವರಿಕೆ ಮಾಡಿಸಿಬಿಡಬೇಕೆನ್ನಿಸಿತು ಆತನಿಗೆ. ‘ಜಿಡ್ಡುಗಟ್ಟಿರುವ, ಕಲ್ಲು ಕಲ್ಲಾಗಿರುವ ತನ್ನಂತರಂಗದ ಯಾವ ಕೋನೆಯನ್ನೇ ಬಗೆದು ನೋಡು- ಇಲ್ಲಿ ತುಂಬಿಕೊಂಡಿರುವುದು ಬರಿ ನೀನು ಮತ್ತು ನಿನ್ನದೇ ಭಾವಚಿತ್ರ! ಭಾರವಾದ ಹೆಜ್ಜೆಗಳನ್ನು ಹೊತ್ತು ತಿರುಗುವ, ವೇದನೆಗಳಿಂದಾವೃತವಾದ, ಸುರೆಪಾನಮತ್ತನಾದ, ತನ್ನ ದಿನಚರಿಯ ಸ್ಥಿತ್ಯಂತರಗಳಿಗೆ ಕೊರಗಿಹೋಗಿರುವ ತನ್ನ ಹೃದಯಕ್ಕೀಗ ಕೊನೆಯ ಔಷಧಿಯೆಂದರೆ ಅದು ಬರೀ ಪುಷ್ಪಾ ಮಾತ್ರ ಮತ್ತು ಅವಳಷ್ಟೇ ಇದ್ದಿರಬೇಕು!’ ಎಂದು ಹಲಬುವ ಸಂದೇಶನ ಮುಂದೆಯೇ ಅವನ ಹುಡುಗಿಯಿದ್ದಾಳೆ; ಅವಳು ಎದುರಿಗಿದ್ದರೆ ಆತನಲ್ಲಿ ಮಾತುಗಳು ಬರುವುದಿಲ್ಲ. ಬರಿಯ ಮೌನ, ಲಜ್ಜೆ ಮತ್ತು ಪೆದ್ದುಗಳಷ್ಟೇ ಸೃಷ್ಟಿಗೊಂಡುಬಿಡುತ್ತವೆ. ‘ಅವಳಲ್ಲಿ ಅದಾವ ಶಕ್ತಿಯಿಟ್ಟಿದ್ದಾನೋ ದೇವರು! ಅವನೇ ಬಲ್ಲ! ಪ್ರೇಮಿಗಳ ಹೃದಯದಲ್ಲಿ ದೇವರು ನೆಲೆಸುವುದೆಂದರೆ ಏನು?’ ಅರ್ಥವಾಗದ ಒಗಟುಗಳಿಗೆ ವಿಚಿತ್ರ ಜಿಡ್ಡುಗಳಿರುತ್ತವೆ. ಆ ಒಗಟನ್ನು ಒಡೆದುಬಿಟ್ಟರೆ ಬದುಕಿನ ಮುಂದೆ ಬರೀ ಶೂನ್ಯವೊಂದೇ ನಿಂತುಬಿಡುತ್ತದೆಂಬ ಭಯವೂ ಕೂಡ; ಸ್ವತಃ ಸಂದೇಶನಲ್ಲಿ!

ಪುಷ್ಪಾ ಮುಂದಿದ್ದರೆ ಮಾತೇ ಮಾತು! ಆಕೆ ದೂರ ಹೋದರೆ ನೋವು! ಒಂಟಿಯಾದರೆ ವೇದನೆ! ಒಟ್ಟಿನಲ್ಲಿ ಪ್ರೇಮ ಒಂದು ವಿಚಿತ್ರ ಒಗಟು! ‘ಪ್ರೇಮಮತ್ತನಾಗಿ, ಸುರೆಪಾನಮತ್ತನಾಗಿ, ಒಂಟಿಯಾಗಿ, ಖಿನ್ನನಾಗಿ, ಕಲ್ಲುಕಲ್ಲಾಗಿ, ಸಿಗ್ಗುಸಿಗ್ಗಾಗಿ, ಬದ್ಧತೆಹೀನನಾಗಿ, ತನಗೆ ತಾನೇ ಬೇಸರವಾಗಿ, ಬೋರಾಗಿ, ಬಂಡೆಗಲ್ಲಾಗಿ ಬದುಕುತ್ತಿರುವ- ಹಳ್ಳಿ ನೆನಪಾಗುತ್ತಿದೆ, ಪಾದ ಭಾರವಾಗುತ್ತಿದೆ! ಕಂತೆ ಕಂತೆ ನೋಟುಗಳ ಸಂಬಳ! ಸುಖವೆಂದರೆ ಏನು? ದುಃಖವೆಂದರೆ ಏನು? ಬರಿಯ ಒಂದು ಮಾನಸಿಕ ಸ್ಥಿತಿ ಮತ್ತು ಸ್ಥಿತಿಯಷ್ಟೇ! ಅದೊಂದು ಅಗೋಚರ ದೀಪ್ತಿ! ಅದೊಂದು ಶ್ರೇಷ್ಟವಾದ ಪರಿಕಲ್ಪನೆ! ಪರಿ ಪರಿ ಕಲ್ಪನೆ! ಅವಳನ್ನು ಪ್ರೀತಿಸುವುದು ನಿಜ! ಆದರೆ ಕೊರಗುತ್ತಿರುವುದು ಏತಕ್ಕೆ? ಮನಸ್ಸು ಜಿಡ್ಡುಗಟ್ಟುತ್ತಿರುವುದು ಏತಕ್ಕೆ?’ ಸಂದೇಶನ ಮನಸ್ಸಿನಲ್ಲಿ ವಿಚಿತ್ರ ಗೊಂದಲಗಳು; ಬದುಕಿನ ಎಲ್ಲ ದ್ವಂದ್ವಗಳನ್ನು ಹತ್ತು ಹಲವಾರು ಭಾಗಗಳನ್ನಾಗಿ ಮಾಡಿ ನಾಲ್ಕೂ ದಿಕ್ಕಿಗೆ ಎಸೆದುಬಿಡಬೇಕೆನ್ನಿಸಿತು- ಆತನಿಗೆ! ಸಿನಿಮೀಯ ಬದುಕೆಂದರೆ ಇದೇ ಏನೋ ಎಂಬ ಸಂಶಯ ಬೇರೆ!
ಕಾಯಿನ್ಬೂತಿನಲ್ಲಿ ಉಸಿರುಗಟ್ಟಿದಂತೆನಿಸಿತು ಸಂದೇಶನಿಗೆ. ಹೊರಗೆ ದೃಷ್ಟಿಯನ್ನು ಹರಿಸಿದ. ಪುಷ್ಪಾ ಅಲ್ಲಿರಲಿಲ್ಲ. ಅದಾಗಲೇ ಅವಳು ತಿಂಡಿಯನ್ನು ತೆಗೆದುಕೊಂಡು ಹೊರಟುಹೋಗಿದ್ದಳು.
ತಿಂಡಿಯ ಪೊಟ್ಟಣವನ್ನು ಮುಂದಿಟ್ಟು ಕುಳಿತುಕೊಂಡ ಸಂದೇಶನ ಮನಸ್ಸಿನಲ್ಲಿ ಮತ್ತದೇ ವಿಚಿತ್ರ ಗೊಂದಲಗಳು ತಕತಕನೆಂದು ಕುಣಿಯತೊಡಗಿದ್ದವು.
ಗೋಡೆಗೊರಗಿದ!
ರಿಮೋಟು ಒತ್ತಿದ!
ಮತ್ತೆ ಚಲನಚಿತ್ರ ಆರಂಭವಾಯಿತು.
ಅಂಕ: ಎರಡು
2007ರ ಮಾರ್ಚ್ , ಚೆನ್ನೈ
ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮೇಲೆ ಎಂಟು ತಿಂಗಳ ತರಬೇತಿಗೆಂದು ಸಂದೇಶ ಚೆನ್ನೈಯನ್ನು ತಲುಪಿದ್ದ.
ಉರಿಯುವ ಧಗೆ. ಜಿಗಿಜಿಗಿ ಗದ್ದಲ. ನಿಲ್ಲಲೂ ಜಾಗವಿಲ್ಲದ ಬಸ್ಸುಗಳು. ಬಸ್ಸುಗಳಲ್ಲೂ ಮರಳಿನ ಹೆಜ್ಜೆಗಳು. ಎತ್ತ ನೋಡಿದರೂ ಕಪ್ಪು ಕಪ್ಪು ಹುಡುಗಿಯರು. ಗುಂಡು ಗುಂಡಾದ, ಕಪ್ಪು ಕಪ್ಪಾದ ಅವರ ಮುಖ, ಮೊಲೆ ಮತ್ತು ನಿತಂಬಗಳು. ಜಗತ್ತಿನ ಅತ್ಯಂತ ದೊಡ್ಡ ರೂಪಕವೆಂಬುದಿದ್ದರೆ ಅದು ಹೆಣ್ಣೇ ಇರಬೇಕು! ಬೆಳಗಿಗೇ ಇನ್ನರ್ವೀಯರ್ಗಳೂ ತೇವ! ಬರೋ ಎಂದು ಸಮುದ್ರದಿಂದ ಬೀಸಿಬರುವ ಸುಡುಗಾಳಿ. ಸುತ್ತಿಸುಳಿವ ಜನರ ಮುಖಗಳಲ್ಲಿ ರೇಜಿಗೆ, ಹಾಡುಹಗಲೇ ರೋಡ್ಶೋ ಕೊಡುವ ಹಗಲು ಸೂಳೆಯರು, ಗಗನವನ್ನೇ ಚುಂಬಿಸಲೆಂದು ಕೈಚಾಚಿ ನಿಂತಿರುವ ಕಟ್ಟಡಗಳು, ಸೋಪು, ಶಾಂಪೂಗಳನ್ನು ಕೈಯಲ್ಲಿ ಹಿಡಿದುಕೊಂಡು ನಕಲೀ ನಗು ನಗುವ ಹೀರೋಯಿನ್ಗಳು, ಓಪನ್ ಗ್ರೌಂಡಿನಲ್ಲೇ ಕುಳಿತು ಕುಡಿಯುವ ಲೋಕಲ್ ಬ್ರಾಂದಿಗಳು, ಏಸಿ ಹೊಟೇಲುಗಳು ಬಾರುಗಳಿಗೆ ಐವತ್ತು ರೂಪಾಯಿ ಎಕ್ಸ್ಟ್ರಾ ಚಾರ್ಜುಗಳೆಂಬ ಬೋರ್ಡುಗಳು, ರೊಂಯ್ಯೋ ರೊಂಯ್ಯೋ ಎಂದು ತೇಲಿ ಬರುವ ಅಲೆಗಳು ಮತ್ತು ಬೋಟುಗಳು, ಮೇಲೆ ತಿಳಿತಿಳಿಯಾದ ನೀಲೀ ಆಕಾಶ, ಓಡುವ, ಸುಡುವ, ಸುತ್ತಿ ಸುಡುವ ಸೂರ್ಯ! ಮೈಯೆಲ್ಲಾ ಧಗೆ, ಧಗೆ!
ತನ್ನ ಅರೆಬರೇ ಇಂಗ್ಲೀಷಿನಲ್ಲಿ ಗೊತ್ತುಗುರಿಯಿಲ್ಲದ ನಾಡಿನೊಳಗೆ ಹೊಸಬರೊಂದಿಗೆ ವ್ಯವಹರಿಸುವುದು ಮತ್ತು ಸ್ನೇಹಕ್ಕಿಳಿಯುವುದು ಸಂದೇಶನಿಗೆ ಮೊದಲ ಸವಾಲಾಗಿತ್ತು. ಅಂತೆಯೇ ಅವರೂ ಹೊರರಾಜ್ಯಗಳಿಂದ ಬಂದವರಾಗಿದ್ದರಿಂದ ಸಂದೇಶನಲ್ಲಿ ಒಂದಿಷ್ಟು ಉಮೇದು ಹುಟ್ಟಿ ಎಲ್ಲರನ್ನು ಪರಿಚಯ ಮಾಡಿಕೊಂಡ. ಬದುಕು ಮನುಷ್ಯನಿಗೆ ಎಂಥ ಸನ್ನಿವೇಷಗಳನ್ನಾದರೂ ಎದುರು ತಂದು ನಿಲ್ಲಿಸಬಹುದು ಎಂದುಕೊಂಡು ಕಾಲವನ್ನು ಜರಿದ. ಚೆನ್ನೈ ತನಗೆ ಒಗ್ಗುತ್ತಿದೆಯೋ ಇಲ್ಲವೋ ಎಂಬುದು ಸಂದೇಶನಿಗೆ ತರಬೇತಿ ಮುಗಿಯುವವರೆಗೂ ಒಂದು ಪ್ರಶ್ನೆಯಾಗಿಯೇ ಉಳಿಯಿತು. ಚೆನ್ನೈಗೆ ತಾನು ಹೊಂದಿಕೊಂಡಿದ್ದೇನೆ ಮತ್ತು ಹೊಂದಿಕೊಳ್ಳಬಲ್ಲೆ ಎಂದು ಒಂದರೆಗಳಿಗೆ ಅನ್ನಿಸಿದರೆ ಮತ್ತೊಂದರೆಗಳಿಗೆಗೆ ಚೆನ್ನೈಗೆ ತಾನು ಹೊಂದಿಕೊಂಡಿಲ್ಲ ಮತ್ತು ಹೊಂದಿಕೊಳ್ಳಲಾರೆ ಎಂದು ಅವನಿಗೆ ಎನ್ನಿಸುತ್ತಿತ್ತು. ಶಾಪಿಂಗು, ಕುಡಿತ, ಹುಡುಗಿಯರೊಂದಿಗೆ ಸುತ್ತುವುದು, ವಾರಕ್ಕೊಂದು ಡಿಜೆ -ಅದೂ ಆಫೀಸಿನ ಫ್ಲೋರಿನಲ್ಲೇ- ಸಂದೇಶನಿಗೆ ಇವೆಲ್ಲಾ ಗೊತ್ತೇ ಇರದ, ಇಲ್ಲವೆ ಅನುಭವಕ್ಕೆ ಬಾರದೇ ಇರದ ಸಂಗತಿಗಳಾಗಿದ್ದವು- ಬರೀ ಊಹೆ ಮತ್ತು ಕಲ್ಪನೆಗಳಲ್ಲಿ ಅವನು ಕಂಡದ್ದು! ತನ್ನ ಕುಗ್ರಾಮದಿಂದ ಕಾಲೇಜಿಗೆ ಹೋಗುವಾಗ ದೂರದ ಪಟ್ಟಣದವರೆಗೆ ಹದಿನಾಲ್ಕು ಕಿಲೋಮೀಟರ್ ಸೈಕಲ್ ಮೇಲೆ ಕ್ರಮಿಸಿ ಇಪ್ಪತ್ತು ರೂಪಾಯಿಯ ಟಿಕೆಟ್ ಪಡೆದು ಓಪನಿಂಗ್ ಶೋ ಮೂವೀ ನೋಡಿದ್ದೇ- ಅವನ ಅತೀ ನಗರ ನಾಗರೀಕತೆಯಾಗಿತ್ತು! ಚೆನ್ನೈಗೆ ಬಂದದ್ದು ತಾನು ಬೇರೆ ನಾಗರಿಕತೆಯೊಂದನ್ನು ಹೊಕ್ಕಂತೆನ್ನಿಸಿತು ಆತನಿಗೆ. ಅಂತೂ ತನಗೆ ಚೆನ್ನೈ ಈ ನಗರ ಸಂಸ್ಕೃತಿ ಮತ್ತು ಫಾರಿನ್ ಸಂಸ್ಕೃತಿಯನ್ನು ಕಲಿಸಿಕೊಟ್ಟಿತಲ್ಲಾ ಅಟ್ಲೀಸ್ಟ್ ಎಂದು ತನ್ನಷ್ಟಕ್ಕೆ ತಾನೇ ಬೀಗಿದ.
ವೀಕೆಂಡಿಗೆ ಶಾಪಿಂಗು, ಸಿನೇಮಾ, ಕುಡಿತ, ಮೋಜು, ಮಸ್ತಿ, ಹುಡುಗಿಯರೊಂದಿಗೆ ಸುತ್ತಾಟ- ಬಹುಶಃ ತಾನು ಕೆಲಸ ಗಿಟ್ಟಿಸಿದ್ದು ಇದೇ ಬದುಕನ್ನು ಬದುಕಲೆಂದೇನೋ ಎಂದು ಸಂದೇಶನಿಗೆ ಅನ್ನಿಸತೊಡಗಿತ್ತು. ಇನ್ನೂರೋ ಮುನ್ನೂರೋ ರೂಪಾಯಿಗಳ ಬಟ್ಟೆ ಖರೀದಿಸುತ್ತಿದ್ದ ಸಂದೇಶ ಇದೀಗ ಸಾವಿರಾರು ರೂಪಾಯಿಗಳ ಜೀನ್ಸು ಮತ್ತು ಟೀಶರ್ಟು ಖರೀದಿಸಿ ತೊಟ್ಟುಕೊಳ್ಳತೊಡಗಿದ್ದ. ಊರಿಗೆ ಇಂತಿಷ್ಟು ಹಣ ಕಳಿಸಿದರೆ ತೀರಿತು! ಉಳಿದಿದ್ದು ತುಫಾನು ಬಯಕೆಗಳಿಗೆ!!

ರಸ್ತೇ ಬದಿಯ ಅಂದಚಂದದ ಸೂಳೆಯೊಬ್ಬಳನ್ನು ಹುಕ್ಕಪ್ ಮಾಡಿತಂದು ಅವಳೊಟ್ಟಿಗೆ ಮಲಗೆದ್ದುಬಿಡಬೇಕೆಂಬ ಆತನ ಬಯಕೆ ಟ್ರೇನಿಂಗು ಮುಗಿಯುವವರೆಗೂ ಈಡೇರಲಿಲ್ಲ ಅಥವಾ ಆ ಧೈರ್ಯ ಆತನಲ್ಲಿ ಮೂಡಲಿಲ್ಲ ಕೂಡ! ಊಟದ ವಿಚಾರಕ್ಕೆ ಬಂದರೆ ಯಾವ ಪ್ರಕಾರದ ಬದ್ಧತೆಯೂ ಆತನಿಗಿರಲಿಲ್ಲ. ಇನ್ನು ಕೆಲಸದ ವಿಚಾರಕ್ಕೆ ಬಂದರೆ- ತಲೆಯಿರುವವರಾದರೋ ಏಳೆಂಟು ಗಂಟೆಗಳಲ್ಲಿ ಮಾಡಬಹುದಾದ ಕೆಲಸವನ್ನು ಕೇವಲ ನಾಲ್ಕಾರು ಗಂಟೆಗಳಲ್ಲಿ ಮುಗಿಸಿ ಆರಾಂ ಕುರ್ಚಿಯ ಮೇಲೊರಗಿ ತಮ್ಮನ್ನು ಏಸಿಗೆ ಒಡ್ಡಿಕೊಂಡುಬಿಡಬಹುದಾಗಿತ್ತು. ತಲೆಯಿಲ್ಲದವರಾದರೋ ಅರ್ಧರ್ಧ ಗಂಟೆಗಳಿಗೊಮ್ಮೆ ತಲೆ ಕೆರೆದುಕೊಳ್ಳುತ್ತಾ ತಮ್ಮ ಸಹ ಕ್ಲೈಂಟ್ಗಳನ್ನು ಅಲ್ಲೇ ಬಿಟ್ಟು ಸ್ಮೋಕಿಂಗ್ ಝೋನಿನಲ್ಲಿ ಸಿಗರೇಟೆಳೆದುಕೊಂಡು ವಿಶ್ರಮಿಸುತ್ತಿದ್ದರು. ಸಂದೇಶನಿಗೆ ಕೆಲಸದ ವಿಚಾರದಲ್ಲಿ ಮಾತ್ರ ಇಂಥ ತೊಂದರೆಗಳಾಗಲಿಲ್ಲ. ಬೇರೆ ಲೋಕವೊಂದು ಆತನನ್ನು ಆವರಿಸಿಕೊಳ್ಳಲಿಕ್ಕೆ ತನ್ನ ಬುದ್ಧಿಶಕ್ತಿಯೇ ಕಾರಣವೇನೋ ಎಂಬ ಗುಮಾನಿ ಆತನಲ್ಲಿತ್ತು. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಸಂದೇಶನ ಚಿತ್ತಚಾಂಚಲ್ಯ ಮಾತ್ರ ಬೇರೆಯದೇ ಆದ ಲೋಕವನ್ನು ಪ್ರವೇಶಿಸಿಬಿಟ್ಟಿತ್ತು. ಆ ಲೋಕಕ್ಕೆ ಆತನಲ್ಲಿ ಯಾವ ಹೆಸರೂ ಇರಲಿಲ್ಲ; ಬರೀ ಗುಮಾನಿಗಳಿದ್ದವು. ಯಾವುದು ಸರಿ, ಯಾವುದು ತಪ್ಪು, ಏನು ಮಾಡುತ್ತಿದ್ದೇನೆ, ಏನು ಮಾಡಬಾರದು- ಹೀಗೆ ಅವ್ಯಕ್ತ ಗೊಂದಲಗಳ ಮತ್ತು ದ್ವಂದ್ವಗಳ ಸಾಂಗತ್ಯದಲ್ಲಿ ತರಬೇತಿಯನ್ನು ಸಾಗಹಾಕಿದ.
ಅಂಕ: ಮೂರು
2006ರ ಮೇ, ಒಂದು ಕುಗ್ರಾಮ
ಅಪ್ಪಾ, ಈ ರಾತ್ರಿ ಗದ್ದೆಗೆ ನೀರು ಹಾಯಿಸಬೇಕೆಂದರೆ ನನ್ನದೊಂದು ಬೇಡಿಕೆ ನಿನ್ನ ಮುಂದೆ?
ಏನು ಮಗಾ?
ಕಳೆದ ನಾಲ್ಕು ವರ್ಷಗಳಿಂದ ನಾನು ಬರೀ ಒಂದೇ ಒಂದು ಶಟರ್ು ತೊಡುತ್ತಿದ್ದೇನೆ; ಈ ಪಾಡ್ಯಕ್ಕಾದರೂ ನನಗೊಂದು ಶಟರ್ು ಕೊಡಿಸುತ್ತೀಯಾ?
ಅಯ್ಯೋ ಚಿನ್ನ, ಕೊಡಿಸೇ ಕೊಡಿಸುತ್ತೇನೆ. ನೀನು ಇಷ್ಟು ವರ್ಷ ಬಾಯಿಬಿಟ್ಟು ಒಂದು ದಿನವಾದರೂ ಕೆಳಲಿಲ್ಲವಲ್ಲ. ಬಟ್ಟೆ ಕೊಡಿಸುತ್ತೇನೆ ಬಟ್ಟೆ ಕೊಡಿಸುತ್ತೇನೆ ಎಂದು ನಾನು ಸಾವಿರ ಸಲವಾದರೂ ನಿನಗೆ ಕೇಳಿದ್ದೇನೆ. ಬೇಡ, ನನಗೆ ಓದಲು ಪುಸ್ತಕಗಳು ಬೇಕು ಎಂದು ಕದ್ದು ಪುಸ್ತಕಗಳನ್ನು ಕೊಳ್ಳುತ್ತಿದ್ದೆಯಲ್ಲ; ಬಟ್ಟೆ ತೆಗೆದುಕೋ ಎಂದು ನಾನು ನಿನಗೆ ಎಷ್ಟು ಸಾರಿ ಹಣ ಕೊಟ್ಟಿಲ್ಲ.
ಅಪ್ಪಾ, ನನಗೆ ಎಷ್ಟು ದುಡ್ಡು ಕೊಟ್ಟರೂ ನಾನು ಖರೀದಿಸುವುದು ಪುಸ್ತಕಗಳನ್ನೇ; ಈಗಲೂ ನಾನು ಕೇಳುತ್ತಿರುವುದು ಹೊಸ ಪುಸ್ತಕವೊಂದನ್ನು ಖರೀದಿಸಲಿಕ್ಕೇ! ಐಎಎಸ್ ತೆಗೆದುಕೊಳ್ಳುತ್ತಿದ್ದೇನೆ ಅಪ್ಪಾ; ಐಎಎಸ್
ಐಎಎಸ್ ಅಂದ್ರೆ ಏನು ಮಗಾ?
ಕಲೆಕ್ಟರ್ ಅಪ್ಪಾ… ಕಲೆಕ್ಟರ್… ನಾಳೆ ಪರೀಕ್ಷೆಯಿದೆ. ಅಪ್ಪಾ, ಬೇಗ ಬ್ಯಾಟ್ರೀ ಕೊಡು, ಗದ್ದೆಗೆ ಹೋಗಿಬರುತ್ತೇನೆ. ಸೊಂಟನೋವು ನಿನಗೆ! ನೀನಿನ್ನು ಸಾವರಿಸಿಕೋ. ಅಮ್ಮನಿಗೆ ಬೇಗ ಮಲಗಲಿಕ್ಕೆ ಹೇಳು! ಅದೊಂದು ಮೂಳ ಹೆಣ್ಣು! ಬರೀ ಕೌಂದಿಗಳನ್ನು ಹೊಲಿಯುವುದೇ ಆಯಿತು ಆ ಮೂಳೆಗೆ; ಹೊಲಿದು ಹೊಲಿದು ಊರವರಿಗೆ ಕಾವು ಕೊಡುತ್ತದೆ ಅವಳ ಕೌಂದಿ. ಅವಳಿಗೆ ಯಾರೂ ದುಡ್ಡು ಕೊಟ್ಟಿದ್ದೇ ನಾನು ನೋಡಿಲ್ಲ
ಅಯ್ಯೋ ಹುಚ್ಚಾ; ಅವಳು ಕೌಂದಿಗಳನ್ನಷ್ಟೇ ಹೊಲಿಯುತ್ತಾಳೆ. ಅವಳ ಒಂದೊಂದು ಎಳೆಗಳಲ್ಲೂ ಒಂದೊಂದು ಪ್ರತಿಮೆಗಳಿವೆ, ರೂಪಕಗಳಿವೆ, ಒಡಪುಗಳಿವೆ; ನೋಡು! ಅವಳದೇ ಒಂದು ಬಿಡಿ ಬಿಡಿ ಎಳೆ; ನಾನು ಮತ್ತು ನೀನು!
ಅಪ್ಪಾ ನಿನ್ನ ಪುರಾಣವನ್ನು ಬಿಚ್ಚಬೇಡ. ನಾಟಕಗಳಿಗೆ ಹಿಮ್ಮೇಳ ಹಾಕುತ್ತೀಯಾ ಗೊತ್ತು! ಅಮ್ಮ ನಿನಗೆ ಏನೇನೆಲ್ಲಾ ಕಲಿಸಿಬಿಟ್ಟಿದ್ದಾಳೆ! ಸೋಜಿಗ! ಸೋಜಿಗ ನೀವಿಬ್ಬರೂ! ನಿಜಕ್ಕೂ ನಾನು ಧನ್ಯ
ಸರೀ; ಅಪ್ಪಾ, ಈ ವರ್ಷ ಪದವೀ ಪರೀಕ್ಷೆ ಮುಗಿಯುತ್ತವೆ. ರಜೆಯಲ್ಲಿ ಯಾವುದೋ ಒಂದು ಕಂಪನಿಯವರು ಕ್ಯಾಂಪಸ್ ಇಂಟರ್ವ್ಯೂಗೆಂದು ಬರಲಿದ್ದಾರೆ. ಅದೇ ತಯಾರಿಯಲ್ಲಿದ್ದೇನೆ. ಅದಕ್ಕೇ ಈ ಪುಸ್ತಕ; ಅದೇ ಬಟ್ಟೆ; ಹಣದ ಬೇಡಿಕೆ; ಏನಂತಿ?
ಆಗಲಿ ಮಗಾ ಓದು, ಓದುತ್ತಾ ಹೋಗು, ಆ ರಂಗನ ಕೃಪೆ ನಿನ್ನ ಮೇಲಿರಲಿ
ಸಂದೇಶನಿಗೆ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಆತನ ಅಪ್ಪ ಅಮ್ಮ ಕುಣಿದಾಡಿದ್ದರು. ಅಪ್ಪ ಪಾಂಡುರಂಗನ ಭಜನೆಯಲ್ಲಿ; ಅಮ್ಮ ರುಕ್ಮಿಣಿಯ ಆರಾಧನೆಯಲ್ಲಿ; ಇಡೀ ರಾತ್ರಿ ಜಾಗರಣೆ ಮಾಡಿದ್ದರು- ಬಾರಯ್ಯಾ… ರಂಗಾ ಬಾರಯ್ಯ… ಕೃಷ್ಣಾ ಬಾರಯ್ಯಾ… ಸ್ವಾಮಿ ಬಾರಯ್ಯಾ.. ಎಂದು ರಾತ್ರಿಯಿಡೀ ಜಾಗರಣೆ ಮಾಡಿದ್ದರು.
ಅಂಕ: ನಾಲ್ಕು
2011ರ ಸೆಪ್ಟೆಂಬರ್, ಬೆಂಗಳೂರು
ಹೇ ದೇವರೇ! ನನ್ನ ಪಾದಗಳನ್ನು ಅದೇಕೆ ಇಷ್ಟು ಜಡವಾಗಿಸಿಬಿಟ್ಟಿದ್ದೀಯಾ? ನನ್ನ ಎದೆಯನ್ನು ಅದೇಕೆ ಇಷ್ಟು ಕಠೋರವಾಗಿಸಿಬಿಟ್ಟಿದ್ದೀಯಾ? ನಾನು ಉಸಿರಾಡುವ ಉಸಿರನ್ನೇಕೆ ಇಷ್ಟು ನಿರ್ಜೀವವಾಗಿಸಿಬಿಟ್ಟಿದ್ದೀಯಾ? ನಾನು ಇಡುವ ಹೆಜ್ಜೆಗಳು ನನಗೆ ಪಾಪದ ಹೆಜ್ಜೆಗಳಾಗಿಬಿಟ್ಟಿವೆ. ಎದುರು ಬರುವ ಯಾವ ಉಸಿರಿನಲ್ಲೂ ಸಜೀವತೆ ಕಾಣಿಸುತ್ತಿಲ್ಲ? ಮಾತನಾಡುವ ಯಾವ ಮಾತಿನಲ್ಲೂ ಅರ್ಥಗಳು ಸಿಗುತ್ತಿಲ್ಲ? ಎದುರು ಸಿಗುವ ಯಾವ ಹೆಣ್ಣಿನಲ್ಲೂ ಸೌಂದರ್ಯತೆ ಕಾಣಿಸುತ್ತಿಲ್ಲ? ಜಡಗೊಂಡಿರುವ ನನ್ನ ಮನಸ್ಸಿಗೆ ಸೋನೆಯನ್ನೇಕೆ ಸುರಿಯಬಾರದು? ನೀನು? ಹೇ ಪಾಪಿಯೇ! ಅದಾವ ಮಂಕು ಲೇಪಿಸಿಬಿಟ್ಟೆ ಈ ಬದುಕಿಗೆ. ನೀನಿಲ್ಲದೆ ಇನ್ನಾರು ನನಗೆ ಈ ಲೋಕದೊಳಗೆ? ನ್ಯಾಯ ಅನ್ಯಾಯಗಳನ್ನು ಸರಿಯಾಗಿ ತೂಗಿ ನೋಡುತ್ತೀಯಂತೆ? ಎಲ್ಲಿ ಹೋದವು ನಿನ್ನ ತೂಕದ ಸಾಮಗ್ರಿಗಳು? -ಸಂದೇಶ ದೇವರಲ್ಲಿ ಮೊರೆಯಿಡುತ್ತಿದ್ದಾನೆ.
ಸಂದೇಶನಿಗೆ ಈಗ ಬೆಂಗಳೂರು ಮಾಯದ ಲೋಕದಂತೆ, ಅಪರಿಚಿತ ಲೋಕದಂತೆ, ಕ್ರತ್ರಿಮ ಉಸಿರಾಟದಂತೆ, ಮತಿಗೆಟ್ಟ ಭ್ರಾಂತಿಯಂತೆ, ನಿರ್ಲಜ್ಜ ಪಾಪದಂತೆ, ಕ್ರೂರ ಜಂತುವಿನಂತೆ, ನೊಂದ ತಾಯಿಯಂತೆ, ಬೆಂದ ಭಾವದಂತೆ ಕಾಡಿಸುತ್ತಿದೆ; ಪೀಡಿಸುತ್ತಿದೆ. ಯಾರ ಜೊತೆಗೆ ಮಾತನಾಡಿದರೂ ಪಾಪದಂತೆ, ಯಾರ ಜೊತೆ ವ್ಯವಹರಿಸಿದರೂ ಸೋಲಿನಂತೆ- ಸುಡು ಬಿಸಿಲಿನ ಒಂದು ತೊಟ್ಟು ನೀರು ಸಿಗದ ಮಹಾ ಮರುಭೂಮಿ ಬೆಂಗಳೂರು! ಪುಷ್ಪ ತನ್ನ ಸ್ವಪ್ನಗಳಿಂದ ಹೋಗುತ್ತಿಲ್ಲ. ಬೆಂಬಿಡದ ಭಾವವಾಗಿಬಿಟ್ಟಿದ್ದಾಳೆ. ಹಳ್ಳಿಯ ನೆನಪುಗಳು, ಕಾಲೇಜು ದಿನಗಳು ಸಂದೇಶನ ಭಾವಪ್ರಪಂಚಕ್ಕೆ ಇಲ್ಲಸಲ್ಲದ ದ್ವಂದ್ವಗಳನ್ನು ಹಡೆಯುತ್ತಿವೆ. ತಾನು ಪ್ರೀತಿಸಿದ್ದು ಯಾವುದೋ ಒಂದು ಅಗೋಚರವಾದ ಭಾವವನ್ನು; ಭಾವಪರಿಧಿಯನ್ನು. ಅವಳು ತನ್ನ ಮನಸ್ಸನ್ನು ಎಲ್ಲಿಯಾದರೂ ಯಾವ ಘಳಿಗೆಯಲ್ಲಾದರೂ ದುರ್ಬಲವಾಗಿಸಿಬಿಡಬಲ್ಲಳು. ಅವಳನ್ನು ನಿಯಂತ್ರಿಸುವುದೆಂದರೆ ಸೋಲುಗಳ ಸೆರೆಮನೆಗೆ ತನ್ನನ್ನು ತಾನೇ ನೂಕಿಕೊಂಡಂತೆ!
ಸಂದೇಶ ಕುಡಿದುಕೊಂಡು ದಾರಿಯನ್ನು ಹಾರಿಕೊಂಡು ದಾಪುಗಾಲು ಚೆಲ್ಲುತ್ತಾ ರೂಮಿನೆಡೆಗೆ ಹೋಗುತ್ತಿದ್ದಾನೆ. ತಾನು ನಡೆದುಹೋಗುತ್ತಿರುವುದು ರೂಮಿಗೋ ಇಲ್ಲಾ ಸ್ಮಶಾನಕ್ಕೋ, ತಾನು ವಾಸಿಸುತ್ತಿರುವುದು ಭೂಮಿಯ ಮೇಲೋ ಇಲ್ಲಾ ನರಕದ ಮೇಲೋ, ತನ್ನ ಮನಸಿನ ಹೊಯ್ದಾಟ ವಾಸ್ತವದ್ದೋ ಇಲ್ಲಾ ಭ್ರಾಂತಿಯದ್ದೋ, ಕನಸಿನದ್ದೋ, ತನ್ನ ಇರವು ಸತ್ಯವೋ, ಅಸತ್ಯವೋ, ತನ್ನ ಶೋಧಿಸಿಕೊಳ್ಳುವುದು ಒಳ್ಳೆಯದೋ, ಕ್ರೂರತನವೋ- ತಾನು ವಾಸಮಾಡುವ ರೂಮು ಸ್ಮಶಾನ- ತಾನು ಕೆಲಸ ಮಡುವ ಆಫೀಸು ಸ್ಮಶಾನ- ತಾನು ವಾಸವಾಗಿರುವ ಬೆಂಗಳೂರು ಸ್ಮಶಾನ- ಊರು ಬಿಟ್ಟು ಊರು ತಿರುಗಿದರೂ ಎಲ್ಲ ಊರುಗಳೂ ಸ್ಮಶಾನ- ತಾನೊಂದು ಹೆಣ- ಸದಾ ಉಸಿರೆಳೆದುಕೊಳ್ಳುತ್ತಲೇ ಇರುವ ಹೆಣ- ಆ ಹೆಣದ ಉಸಿರೂ ಅದೆಷ್ಟು ಕಠೋರ, ಸತ್ಯ. ಪ್ರೀತಿಯಲ್ಲಿ ಸೋಲು- ಬದುಕಿನಲ್ಲಿ ಸೋಲು- ಎಲ್ಲದರಲ್ಲೂ ಸೋಲು- ಎಲ್ಲಾ ಸೋಲುಗಳ ನಂತರ ಒಂದು ಸಣ್ಣ ಗೆಲುವಿದ್ದೀತೇ? ಕಾಲನಿಗಿಂತ ದೊಡ್ಡ ಪ್ರಶ್ನಪತ್ರಿಗೆ ಯಾವುದಿದೆ ಈ ಭೂಮಿಯ ಮೇಲೆ? ಕಳೆದ ಎರಡು ವರ್ಷಗಳಿಂದ ತಾನು ಆತ್ಮಹೀನನಾಗಿ ಬದುಕುತ್ತಿರುವ- ತನ್ನ ಒಳಗೊಬ್ಬ ಮಹಾ ಕ್ರೂರ ರಾಕ್ಷಸ, ಒಬ್ಬ ಸವರ್ಾಂತಯರ್ಾಮಿ ದೇವರು- ಇಬ್ಬರೂ ನೆಲೆಸಿದ್ದಾರೆ; ಈ ಈರ್ವರ ಸಮರಕ್ಕೆ ಅದೆಂತಹ ಶಕ್ತಿ, ಕಾಠಿಣ್ಯತೆ ಮತ್ತು ಕಲ್ಲುತನ. ತನ್ನನ್ನು ಇಬ್ಬರೂ ಸೂತ್ರದ ಬೊಂಬೆಯಾಗಿಸಿಬಿಟ್ಟಿದ್ದಾರೆ. ಕ್ರೂರಿ ಗೆದ್ದರೆ ಪಿಪಾಸು, ದೇವರು ಗೆದ್ದರೆ ಅನುಭಾವ. ಈ ಇಬ್ಬರೂ ಗೆದ್ದುಬಿಡಲಿ! ತಾನು ಇವರೀರ್ವರ ಅಭಯಹಸ್ತಗಳಲ್ಲಿ ಉಳಿದುಬಿಡಬಲ್ಲೆ. ತನಗೆ ಇಬ್ಬರೂ ಬೇಕು! ಇಲ್ಲವೆಂದರೆ ತನ್ನ ಅಸ್ತಿತ್ವಕ್ಕೆ ಬೆಲೆಯೆಲ್ಲಿದೆ? ದೇವರೂ ಒಬ್ಬ ಮಹಾ ಪಿಪಾಸು! ಹುಟ್ಟಿ ಸಾಯಿಸುವ; ಸತ್ತು ಬದುಕಿಸುವ; ಬದುಕಿಸಿ ಬದುಕಿಸಿ ಸಾಯಿಸುವ! ದೇವರೇ! ಮನುಷ್ಯನ ಹುಟ್ಟು ಸೃಷ್ಟಿಸಲು ಅದೆಷ್ಟು ಬೇಜವಾಬ್ದಾರಿ ಮತ್ತವನ ಸಾವು ಸೃಷ್ಟಿಸಲು ಅದೆಷ್ಟು ಮುನ್ನೆಚ್ಚರಿಕೆಗಳು ನಿನಗೆ! ಬದುಕಿಸುತ್ತೀ; ಸಾಯಿಸುತ್ತೀ ಮತ್ತೂ ಬದುಕಿಸುತ್ತೀ! ನೀನೆಷ್ಟು ಪಾಪಿ! ಪುಣ್ಯವಂತ!!
ಸಂದೇಶ ತನ್ನನ್ನು ತಾನೇ ಪ್ರಶ್ನೆಯಾಗಿಸಿಕೊಳ್ಳುತ್ತಿದ್ದಾನೆ!
ಉತ್ತರ!?…
ಅಂಕ: ಐದು
2007ರ ನವೆಂಬರ್, ಬೆಂಗಳೂರು
ಚೆನ್ನೈ ತರಬೇತಿಯನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದಿದ್ದೇ ತಾನೊಂದು ಅನ್ಯ ಗ್ರಹದಿಂದ ಬಂದಿಳಿದ ಹೊಸ ಮನುಷ್ಯನಂತೇನೋ ಸಂದೇಶನಿಗೆ ಅನ್ನಿಸತೊಡಗಿತ್ತು. ಬೆಂಗಳೂರು ಸಹ ಆತನಿಗೆ ಹೊಸ ಊರೇ ಆಗಿತ್ತು. ಹಿಂದೆಂದೂ ಆತ ಬೆಂಗಳೂರಿನಲ್ಲಿ ವಾಸವಾಗಿರಲಿಲ್ಲವಾದ್ದರಿಂದ ಅದೂ ಆತನಿಗೆ ಹೊಸ ನಗರವೇ ಆಯಿತು. ಬೆಂಗಳೂರಿನಲ್ಲೊಂದು ಹೊಸ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಆತನ ಯೋಜನೆಗೆ ನಿರ್ದಿಷ್ಟಪಡಿಸಿದ ಯಾವ ಆಯಾಮಗಳೂ ಇರಲಿಲ್ಲ. ಆಫೀಸಿನಲ್ಲಿ ಎಲ್ಲರೊಟ್ಟಿಗೆ ಚನ್ನಾಗಿ ಬೆರೆಯಬೇಕೆಂಬ ಆತನ ಬಯಕೆಯೇನೋ ತಾತ್ಕಾಲಿಕ ಈಡೇರಿತು. ಆದರೆ ಆತನ ಒಂಟಿತನ ಮಾತ್ರ ಆತನನ್ನು ಯಕ್ಕಶ್ಚಿತ್ ಹುಳುವಿನ ಬದುಕನ್ನು ಬದುಕಿಸಿಬಿಟ್ಟಿತು. ರೂಮಿಗೆ ಬಂದರೆ ಬೇಜಾರು, ಬೇಜಾರು ಮತ್ತು ಮತ್ತೂ ಬೇಜಾರು!
ಫ್ಲೋರಿನಲ್ಲಿ ಪುಷ್ಪಾಳನ್ನು ಮೊದಲ ಬಾರಿಗೆ ಭೆಟ್ಟಿಯಾದಾಗ ಆತನಿಗೆ ಅವಳು ತುಂಬಾ ಆಕರ್ಷಕವಾಗಿ ಕಂಡಿದ್ದಳು. ಅವಳೊಂದಿಗೆ ಮಾತು, ಹರಟೆ, ಲಲ್ಲೆ ಇತ್ಯಾದಿಗಳೆಲ್ಲ ಆತನಿಗೆ ಸ್ವರ್ಗಸುಖವನ್ನು ನೀಡಿದ್ದವು! ತಾನು ಪ್ರೀತಿಸುವ ವಿಚಾರವನ್ನು ಮಾತ್ರ ಅವಳಿಗೆ ಹೇಳಿಕೊಳ್ಳುವ ಧೈರ್ಯವಾಗಿರಲಿಲ್ಲ. ಅವಳು ಮುಂದಿದ್ದರೆ ತಾಸುಗಟ್ಟಲೇ ಮಾತನಾಡುವವನು; ಅವಳು ಹೋದ ಅರೆಘಳಿಗೆಗೆ ದೀರ್ಘಮೌನಿಯಾಗಿಬಿಡುತ್ತಿದ್ದ. ಅವಳಲ್ಲಿ ತನ್ನ ನಿಜ ಪ್ರೀತಿಯನ್ನು ಹೇಳಿಕೊಳ್ಳಲಾಗದ ಆತನ ಅಸಹಾಯಕತೆಗೆ ಆತ ಖುದ್ದು ತನ್ನನ್ನೇ ಜರಿದುಕೊಳ್ಳುತ್ತಿದ್ದ! ಅವಳನ್ನು ಅತಿಯಾಗಿ ಪ್ರೀತಿಸಿದ; ಮತ್ತವನಿಗೆ ಆ ಪ್ರೀತಿಯೇ ಒಂದು ರಮ್ಯ ಅದ್ಭುತ ಸಂತಸವನ್ನು ನೀಡತೊಡಗಿತ್ತು. ಅವಳಲ್ಲಿ ತನ್ನ ಪ್ರೇಮವನ್ನು ನಿವೇದಿಸಿಕೊಳ್ಳುವುದೇ ಒಂದು ಪರಮ ತಪ್ಪಿನಂತೆ, ಲಜ್ಜೆಯಂತೆ ಅನ್ನಿಸಿ ಆತನನ್ನು ಕಾಡತೊಡಗಿತ್ತು. ಅವಳಿಂದ ದೂರವಿದ್ದು ಅವಳನ್ನು ಪ್ರೀತಿಸುವುದೇ ಬಹುಶಃ ಆತನಿಗೆ ಹಿತವನ್ನುಂಟುಮಾಡತೊಡಗಿತ್ತು! ಬೆನ್ನ ಬೆನ್ನಲ್ಲೇ ಕೊರಗನ್ನೂ! ಅವಳೂ ತನ್ನಂತೆ ಯೋಚಿಸುತ್ತಿರಬಹುದೇನು? ತನ್ನಂತೆ ಪ್ರೀತಿಸುತ್ತಿರಬಹುದೇನು? ಎಂದು ತನ್ನ ಭಾವಪ್ರಪಂಚವನ್ನು ಪ್ರಶ್ನಿಸಿಕೊಳ್ಳತೊಡಗಿದ್ದ; ಆ ಪ್ರಶ್ನಿಸಿಕೊಳ್ಳುವಿಕೆ ಆತನಲ್ಲಿ ಒಂದು ಪ್ರಕಾರದ ನೆಮ್ಮದಿಯನ್ನು, ಭ್ರಮೆಯನ್ನು, ಕನಸುಗಳನ್ನು, ಕನವರಿಕೆಗಳನ್ನು, ಬೇಗುದಿಗಳನ್ನು ಹುಟ್ಟುಹಾಕತೊಡಗಿತ್ತು. ಕುಡಿದು, ಸೇದಿ, ಅವಳ ನೆನಪುಗಳನ್ನಷ್ಟೇ ಹೊದ್ದು ಮಲಗುವುದೇ ಆತನ ಪರಮ ಸುಖವಾಗಿತ್ತು. ಪ್ರೀತಿಯನ್ನು ಹೇಳದೇ, ಪ್ರೀತಿಯನ್ನು ಉಸಿರಾಡಿ, ಪ್ರೀತಿಯಲ್ಲಿ ಮೋಸಹೋಗದೆಯೂ, ಹತ್ತಿರವಾಗದೆಯೂ, ದೂರವಾಗದೆಯೂ ತನ್ನೊಳಗೇ ಒಬ್ಬ ಹೊಸ ದುರಂತ ದೇವದಾಸನನ್ನು ಸೃಷ್ಟಿಸಿಕೊಂಡವನಂತೆ; ಬೇಗುದಿ, ಕನವರಿಕೆ, ಹತಾಶೆ, ನೋವು, ಕಣ್ಣೀರು- ಎಲ್ಲವನ್ನೂ ಚೆಲ್ಲತೊಡಗಿದ. ಒಂದರ್ಥದಲ್ಲಿ ಆತ ಆಕೆಯನ್ನು ಜಯಿಸಿದಂತೆ, ಆಕೆಯಿಂದ ವಿಯೋಗಗೊಂಡಂತೆ ಬದುಕತೊಡಗಿದ ಮತ್ತಾ ಬದುಕಿಗೆ ಅವನದೇ ಆದ ಒಂದು ಅರ್ಥವಿತ್ತು. ಆ ಅರ್ಥಕ್ಕೆ ಆತ ಸುಖಿಯಾಗಿದ್ದ, ದುಃಖಿಯಾಗಿದ್ದ, ದುರಂತ ನಾಯಕನೂ ಆಗಿದ್ದ!
ಅಂಕ: ಆರು
2012ರ ಜೂನ್, ಬೆಂಗಳೂರು
ಸಂದೇಶನಿಗೆ ಭೂತವೂ ಅಂಟಿಕೊಂಡಿಲ್ಲ ಮಾನಸಿಕ ಹುಣ್ಣೂ ಹುಟ್ಟಿಕೊಂಡಿಲ್ಲ ಎಂದು ಪೂತರ್ಿ ಖಾತ್ರಿ ಮಾಡಿಕೊಂಡ ಮೇಲೆ ಅವನ ತಂದೆ ತಾಯಿಗಳು ಅವನಿಗೆ ಒಂದು ಹುಡುಗಿಯನ್ನು ನೋಡಿ ಅವನಿಗೆ ಮದುವೆಯನ್ನು ಮಾಡಿ ಅವನೊಟ್ಟಿಗೆ ಬೆಂಗಳೂರಿನಲ್ಲೇ ನೆಲೆನಿಂತರು. ಸಂದೇಶನ ಬದುಕಿಗೊಂದು ಹೊಸ ತಿರುವು! ಅವನಿಗೊಂದು ಮಾನಸಿಕ, ದೈಹಿಕ ಭದ್ರತೆ ಮತ್ತು ಅಂತಃಶಕ್ತಿಯಾಗಿ ಅವನ ಹೆಂಡತಿ, ಅವನ ತಂದೆ-ತಾಯಿಗಳು ಅವನ ಜೊತೆಯಲ್ಲಿಯೇ ಉಳಿದರು.
ಈ ಎಲ್ಲ ಬದಲಾವಣೆಗಳಿಂದಾಗಿ ಸಂದೇಶನಿಗೆ ತಾನು ಕಟಕಟೆಯಲ್ಲಿ ನಿಂತು ಬದುಕುತ್ತಿದ್ದೇನೇನೋ ಎಂದು ಅನ್ನಿಸತೊಡಗಿತ್ತಾದರೂ; ಸ್ವತಂತ್ರ, ಸ್ವಚ್ಛಂದ ಬದುಕಿಗೆ, ನೆಮ್ಮದಿಯ ನಾಳೆಗೆ, ಪಾಳಿಬಿದ್ದ ನಿನ್ನೆಗೆ, ಕುಟುಂಬ ಒದಗಿಸಿಟ್ಟ ಅದೇ ಕಟಕಟೆ; ಆತನಲ್ಲಿ ನಿಜ, ಸ್ವತಂತ್ರ, ಸುಂದರ, ಮನಸ್ಸು ರೂಪಿಸುವ ದೇವಾಲಯವಾಗಲು; ಆತನ ಆಫೀಸು ಕೆಲಸಗಳೂ, ಅಲ್ಲಿನ ಜನರ ಸಾಂಗತ್ಯಗಳೂ ಭಿನ್ನ ಭಿನ್ನ ಹೊಸ ಅರ್ಥಗಳನ್ನು ಪಡೆದುಕೊಳ್ಳತೊಡಗಿದ್ದವು.






ಕಥೆ ಸೊಗಸಾಗಿದೆ,ವಿಧ ವಿಧ ಅನುಭವಗಳನ್ನು ನೀಡಿತು ,ಒಬ್ಬ ಸಹಜ ಮನುಷ್ಯನ ಮನದ ತೊಳಲಾಟ,ಏರಿಳಿತಗಳು,ಸಹಜ ಬದುಕಿನ ಬದಲಾವಣೆ ,ಮನಸಲಿ ಉದ್ಭವಿಸುವ ಬಯಕೆ,ಅವುಗಳನ್ನು ತನಿಸಿಕೊಳ್ಳಲಾಗದ ಹೆದರಿಕೆ ಹೀಗೆ ಎಲ್ಲವುಗಳನ್ನು ಒಡಲಲ್ಲಿ ತುಂಬಿಕೊಂಡು ರೋಪಗೊಂಡಿದೆ,ಗೆಳೆಯ ರವಿ ಶಂಕರ ಪಾಟೀಲರ ಈ ಕಥೆ.
Super story