ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವ್ಯಾಸರ ನೆನಪಿನಲ್ಲಿ….

ಅನುಪಮಾ ಪ್ರಸಾದ್

ಈ ಅಪರೂಪದ ಫೋಟೋ ತೆಗೆದವರು : ಜಯಂತ ಕಾಯ್ಕಿಣಿ

ವ್ಯಾಸರ ಈ ಅಪರೂಪದ ಚಿತ್ರವನ್ನು ಅವಧಿಯಲ್ಲಿ ಪ್ರಕಟಿಸಿದಾಗ ಕತೆಗಾರ್ತಿ ಅನುಪಮಾ ಪ್ರಸಾದ್ ಇದನ್ನು ತುಂಬಾ ಇಷ್ಟ ಪಟ್ಟು, ಅವರಿಗೆ ತುಂಬಾ ಇಷ್ಟವಾದ ವ್ಯಾಸರ ಒಂದು ಕಥೆಯನ್ನು ಕಳಿಸಿದ್ದರು.  ಮೊನ್ನೆ ೨೨ರಂದು ವ್ಯಾಸರ ಹುಟ್ಟಿದ ಹಬ್ಬ ಎನ್ನುವುದನ್ನೂ ನೆನಪಿಸಿದರು.
ಅವರಿಗೆ ವಂದನೆಗಳೊಂದಿಗೆ, ಅವರು ಕಳಿಸಿದ ವ್ಯಾಸರ ಕಥೆ ನಿಮಗಾಗಿ.

ಬೆಂಕಿ

ರಾಮಚಂದ್ರಶರ್ಮ, ತಲೆ ಎತ್ತಿ ತಲೆ ಎತ್ತಿ ಎಂದರು ಒಬ್ಬರು. ಹೋಂ ಎಂದರು ಇನ್ನೊಬ್ಬರು. `ಏಯ್’ ಎಂದರು ಮತ್ತೊಬ್ಬರು. ಮೊಣಕಾಲ ಸಂಧಿಯಲ್ಲಿ ತಲೆ ತೂರಿಸಿ ಶರಣಾಗತನಾದವನಂತೆ ಕುಳಿತಿದ್ದ ಆತ ತಲೆ ಎತ್ತಿದ. ಎರಡೂ ಕಣ್ಣುಗಳೂ ತುಂಬಿ ಬಂದಿದ್ದವು. ಅದು ಅಶ್ರುವಾಗಿರಲಿಲ್ಲ. ನಿರಾಶೆಯೂ ಆಗಿರಲಿಲ್ಲ. ಅದು ಏನಾಗಿತ್ತು ಎಂದು ಊಹಿಸುತ್ತಿದ್ದ ಗುಂಪು ಅವನನ್ನು ಸುತ್ತುಗಟ್ಟಿತು. ಮತ್ತು ಆಶರೀರದ ಕ್ರಿಯೆಗಳನ್ನು; ಚಲನವಲನಗಳನ್ನು ಗಮನಿಸಲಾರಂಭಿಸಿತು. ಅವನ ಅರೆನಗ್ನ ದೇಹದಲ್ಲಿ ಅರ್ಧ ತುಂಡಾದ ಜನಿವಾರವಿತ್ತು. ಬೆಳಗಾಗುತ್ತಿತ್ತು. ಮಂಜು ಮತ್ತು ಸುರುಳಿ ಸುರುಳಿಯಾಗಿ ಮೇಲೇಳುತ್ತಿದ್ದ ಹೊಗೆ ವಾತಾವರಣದಲ್ಲಿ ತುಂಬಿತ್ತು. ಅವರೆಲ್ಲ ಗುಂಪುಗೂಡಿದ್ದ ಆಲದ ಮರದ ಎಲೆ ಎಲೆಗಳಿಂದ ಇಬ್ಬನಿ ಬಿಂದು ಬಿಂದುಗಳಾಗಿ ನೆಲಕ್ಕೆ ಬೀಳುತ್ತಿತ್ತು. ಸೂರ್ಯಬಿಂಬ ಮರಗಳೆಡೆಯಿಂದ ಪ್ರಸವಿಸಲ್ಪಡುತ್ತಿದ್ದ ಮಗುವಾಗಿ ಮಮದ ಕೆಂಪು ಬೆಳಕು ಚೆಲ್ಲಿ ಅವರೆಲ್ಲರ ನೆರಳುಗಳನ್ನು ಅವರ ಮುಂಭಾಗದಲ್ಲಿ ಚೆಲ್ಲುತ್ತಿತ್ತು. ಅವನ ಮನೆಯ ನಾಯಿ ಮುರ್ ಮುರ್ ಎನ್ನುತ್ತಾ ಗುಂಪನ್ನು ಸುತ್ತುತ್ತಾ ಇತ್ತು. ಶರ್ಮ ಬೋಳು ತಲೆಯನ್ನು ಬಲಗೈಯಿಂದ ನೇವರಿಸುತಾ ಎಡಗೈಯಿಂದ ಹಣೆಯ ಮೇಲೆ ನಾಮದ ಹಾಗೆ ಎದ್ದು ಕಾಣುತ್ತಿದ್ದ ಗಂಟು ಗಂಟಾದ ನೀಲಿ ನರವನ್ನು ತೀಡುತ್ತಾ ನೋವು ನೋವು ಎಂದು ನರಳಿದ. ತಲೆ ಎತ್ತಲು ಒತ್ತಾಯ ಮಾಡುತ್ತಿದ್ದವರು ಈ ಶಬ್ದಗಳನ್ನು ಕೇಳಿಸಿಕೊಂಡು ಒಳಗೊಳಗೇ ನಡುಗಿದರು.

ಆತ ಮತ್ತೆ ತಲೆ ಎತ್ತಿ ಆಕಾಶವನ್ನು ನೋಡಿ ಒಮ್ಮೆಲೇ ಹೇಳಲಾರಂಭಿಸಿದ :  ಒಂದು ನೂರು ವರ್ಷಗಳ ಹಿಂದೆ ನಮ್ಮ ಮನೆ ಕಟ್ಟಲ್ಪಟ್ಟಿತ್ತು. ವಿಶಾಲವಾದ ಎತ್ತರವಾದ ಮನೆ. ಆಗ ಈ ಊರಿನಲ್ಲಿ ಹಂಚಿನ ಮನೆಗಳೇ ಇರಲಿಲ್ಲ. ದುರ್ಗಾನಿಲಯ ಎಂಬ ಈ ಮನೆಯಿಂದಾಗಿ ಈ ಊರಿಗೂ ದುರ್ಗಾಪುರವೆಂಬ ಹೆಸರು ಬಂದಿತೇನೋ ಎಂದು ಈಗಲೂ ನನಗೆ ಭ್ರಮೆ ಇದೆ. ಆ ದುರ್ಗಾನಿಲಯದಲ್ಲಿ ನಾಲ್ಕು ಮಂದಿ ಸಹೋದರರಿದ್ದರು. ಅವರು ತಮ್ಮ ಸ್ವಂತ ಬುದ್ಧಿವಂತಿಕೆಯಿಂದ ಮುಂದಾಲೋಚನೆಯಿಂದ ಈ ಭೂಮಿಯ ಮೈಯನ್ನು ತಿದ್ದಿದರು ಅಷ್ಟು ಹೇಳಿ ಆತ ಗುಂಪುಗೂಡಿದ ಜನಗಳ ಮುಖವನ್ನೇ ಮಿಕಿಮಿಕಿ ನೋಡಲಾರಂಭಿಸಿದ. ಶಬ್ದಗಳನ್ನು ನುಂಗುತ್ತಿದ್ದ ಮತ್ತು ಕಾರುತ್ತಿದ್ದ ಆ ಮುಖಗಳಲ್ಲಿ ಗಾಢ ಚಿಂತನೆಯಿಂದಾಗಿ ಗೆರೆಗಳು ಮೂಡಿದ್ದವು. ನಿರ್ಯೋಚನೆಯಲ್ಲಿದ್ದ ಮುಖಗಳಲ್ಲೂ ಜೀವಿತ ನಿರ್ಮಿಸಿದ ಸಹಜಗೆರೆಗಳಿದ್ದವು. ಇವುಗಳನ್ನು ನೋಡನೋಡುತ್ತಾ ಶರ್ಮ ಭ್ರಾಂತನಾಗಿ ಹೋದ, ನಗಲು; ಅಳಲು; ಸಮಜಾಯಿಸಲು; ಶಿಕ್ಷಿಸಲು ಹೊಂಚು ಹಾಕುತ್ತಿರಬಹುದಾದ ಈ ಮುಖಗಳು ಸಂದರ್ಭಕ್ಕೆ ತಕ್ಕುದಾದ ಮುಖವಾಡಗಳನ್ನು ಧರಿಸಿಕೊಳ್ಳಲು ಯತ್ನಿಸುತ್ತಿದ್ದವು. ಅಂಗೈಯ ಮೇಲೆ ಅಂಗೈಯನ್ನು ಇಟ್ಟು ದುಷ್ಟಶಕ್ತಿಯೊಂದನ್ನು ಹೊಸಕಿ ಹಾಕುವವನಂತೆ ತೋರಿಬರುತ್ತಾ ಆದರೆ ನಿಜಕ್ಕೂ ತಣ್ಣಗಾಗುತ್ತಿರುವ ಅಂಗೈಗಳಲ್ಲಿ ರಕ್ತ ಸಂಚಾರವಾಗುವಂತೆ ಯತ್ನಿಸುತ್ತ ಶರ್ಮ ಹೇಳಿದ.
’ಈ ಬಯಲು ಚಿಕ್ಕಪುಟ್ಟ ದಿನ್ನೆಗಳ-ಕುರುಚಲು ಕಾಡು ಪೊದೆಗಳ ಸಮೂಹವಾಗಿತ್ತು. ಮೂವತ್ತು ಎಕರೆಗಳ ಈ ಭೂಭಾಗ ಮನುಷ್ಯ ದೃಷ್ಠಿಯಲ್ಲಿ ನಿರರ್ಥಕವಾಗಿತ್ತು. ನನ್ನ ಅಜ್ಜ ಇಲ್ಲಿ ಭಗೀರಥನ ಹಾಗೆ ದುಡಿದರು. ಈ ನೆಲ ಜೀವ ಪಡೆಯಿತು. ನನ್ನ ಅಜ್ಜನ ಕನಸಿನ ಕೊನೆಯಾಗಿ ನಾನಿಲ್ಲಿ ಬದುಕಿದೆ. ಮರಣದಂತಹ ಬದುಕು…’
ಇಷ್ಟು ಹೇಳಿ ಶರ್ಮ ಮಾತು ಮರೆತವನಂತೆ ಸುಮ್ಮನಾದ. ಅವನ ದೇಹ ಮೂರು ಬಾರಿ ಮಡಚಿ -ತಿರುಚಿ-ಎಸೆಯಲ್ಪಟ್ಟ ಹಾಗೆ ಕುಳಿತಿತ್ತು. ಹೃದಯವನ್ನು ಹೊರಗಿನ ಏಟುಗಳಿಂದ ರಕ್ಷಿಸಲು ಇದ್ದ ಎಲುಬು-ಮಾಂಸ-ಚರ್ಮದ ಆವರಣಗಳು, ಒಳಗಿನ ಮೂಕ ಹೊಡೆತಗಳನ್ನು ಕಂಪನಗಳಿಂದ ಹೊರಗೆ ಕಾಣಿಸುತ್ತಿತ್ತು. ಆತ ನಿಧಾನವಾಗಿ ಎದ್ದು ನಿಂತ. ಅವನ ಬೆನ್ನೆಲುಬಿನ ಬಾಗು ಸ್ಥಿರ ಸ್ಥಿತಿಯನ್ನು ಬಿಟ್ಟು ಕೊಡಲಾರದೆ ಬಾಗಿಯೇ ಇತ್ತು. ಅವನ ತುಟಿಗಳ ಮೇಲೊಂದು ಅಳುವಿನಂತಹ ನಗು ಮೂಡಿ ನಿಂತಿತ್ತು. ಅವನ ಹಣೆಯ ಮೇಲಿನ ನೀಲಿ ನರ ಮಿಡಿನಾಗರದ ಹಾಗೆ ಒಂದು ಸೂಕ್ಷ್ಮ ಚಲನೆಯನ್ನು ಮಾಡಿತು. ಆತ ನಡೆಯಲಾರಂಭಿಸಿದ. ಆ ಆಲದ ಮರದ ಆಚೆ ಒಂದು ಸಂಕೇತ ಮಾತ್ರವಾಗಿ ಹರಿಯುತ್ತಿದ್ದ ಮಧುವಾಹಿನಿ ಎಂಬ ತೊರೆಗೆ ಇಳಿದ. ಪಾಚಿಕಟ್ಟಿದ ದುಂಡು ಕಲ್ಲುಗಳ ಮೇಲೆ ನಡೆದು-ತೊರೆ ದಾಟುವ ಹಾಗೆ ನಟಿಸಿ, ಇನ್ನೊಂದು ದಡ ಸಮೀಪಿಸಿ, ಅಲ್ಲೇ ಮತ್ತೆ ಕುಸಿದು ಕುಳಿತ. ನೀರು ಶರೀರದ ಒರಟು ಚರ್ಮಕ್ಕೆ ತಾಕುತ್ತಲೇ ನಖಶಿಖಾಂತ ನಡುಗಿದ. ನೋವು ನೋವು ಎಂದು ನರಳುತ್ತಾ ದಡದ ಗುಂಪನ್ನು ನೋಡಿದ. ಗುಂಪು ನೊವು ಜೀವ ತಳೆದು ನಿಂತಂತೆ ಕಂಡು ಬಂದ ಆ ಜೀರ್ಣ ಶರೀರವನ್ನು ನೋಡಿತು. ಆ ದೇಹದ ತುಟಿಗಳ ನೋವಿನ ನಗೆಯನ್ನ ಉನೊಡಿತು. ನೋವು ಹೊರಗಿರಲಿಲ್ಲ; ಒಳಗಿತ್ತು. ಗುಂಪಿನಿಂದ ಒಂದು ಧ್ವನಿ ಪ್ರಶ್ನಿಸಿತು –
’..ಹೀಗೇಕೆ ಮಾಡಿದಿರಿ ಶರ್ಮರೇ..?ಹೆಂಡತಿ ಮಕ್ಕಲನ್ನು ಎಲ್ಲಾ ಮನೆಯೊಳಗೆ ದೂಡಿ, ಬೀಗ ಹಾಕಿ ಬೆಂಕಿ ಕೊಟ್ಟಿರಲ್ಲ..? ಬೂದಿಯಾದರು. ಬೂದಿಯಾದರು. ಒಂದು ರಾಶಿ ಬೂದಿ. ಸುಖದ ಕೊನೆಯಲ್ಲಿ ದುಃಖವಿರುತ್ತದೆ. ದುಃಖ ಮಾತ್ರವಿರುತ್ತದೆ. ಕೆಂಡದ ಕೊನೆ ಬೂದಿ. ಬೆಂಕಿಯ ಮಧ್ಯೆ ಕೆಂಡ. ನಾಶದಿಂದ ಸೃಷ್ಠಿಸಾಧ್ಯ ಮತ್ತು ಸೃಷ್ಠಿ ನಾಶದಿಂದಲೇ ಸಾಧ್ಯ..’

ಬುದ್ಧಿ ವಿಕಲ್ಪವಾದಂತೆ ಮಾತನಾಡುತ್ತಿದ್ದ ಅವನ ಮಾತುಗಳನ್ನು ಕೇಳುತ್ತಿದ್ದಂತೇ ಯಾರೋ ಪೋಲೀಸ್ ಪೋಲೀಸ್ ಅಂದರು. ನೀರಿನಲ್ಲಿ ಕುಳಿತಿದ್ದ ಶರ್ಮ ತಲೆ ಎತ್ತಿದ. ಎರಡು ಬೂಟುಗಾಲುಗಳು, ಖಾಕಿ ಉಡುಪು ಕಾಣಿಸಿತು. ಆ ಉಡುಪನ್ನು ಧರಿಸಿದ್ದ ಮುಖ ಕಾಣಿಸಲೇ ಇಲ್ಲ. ಬೂಟುಗಾಲುಗಳು ಅಲ್ಪಸ್ವಲ್ಪ ನೀರನ್ನು ತುಳಿಯುತ್ತಾ ಅವನ ಬಳಿಗೆ ಬಂದವು. ಶರ್ಮ ತಲೆ ಎತ್ತಿದ; ತಲೆ ಪಕ್ಕಕ್ಕೆ ವಾಲಿಸಿ ನಮಸ್ಕರಿಸಿದ: ಆ ನಮಸ್ಕಾರ ಒಂದು ಹೂಂಕಾರದಿಂದ ಸ್ವೀಕರಿಸಲ್ಪಟ್ಟಿತು. ಏಳೆಂಟು ಜೀವಗಳನ್ನು ಕೊಲೆ ಮಾಡಿದ ಅಪರಾಧಿ ಸ್ವಯಂ ಶಿಕ್ಷೆಗೊಳಗಾಗಿದ್ದ. ಆದಷ್ಟು ಧ್ವನಿಯನ್ನು ಮೃದುವಾಗಿಸಲು ಯತ್ನಿಸುತ್ತಾ ಇನ್ಪೆಕ್ಟರ್ ಕೇಳಿದರು.
’ನೀವೇ ಬೆಂಕಿ ಕೊಟ್ಟಿರಂತಲ್ಲ..?ನಿಮ್ಮ ಹೇಳಿಕೆ ಬೇಕಿತ್ತು. ಬನ್ನಿ ಹೊಗೋಣ..’
ಹಾಂ ಎನ್ನದೆ, ಹೂಂ ಎನ್ನದೆ ಶರ್ಮ ಎದ್ದು ಅವರನ್ನು ಹಿಂಬಾಲಿಸಿದ. ಬೆಂಕಿ ಬಿದ್ದ ಮನೆಗೆ ಮಧುವಾಹಿನಿಯಿಂದ ಅರ್ಧ ಫರ್ಲಾಂಗ್ ದೂರವಿತ್ತು. ಆ ದೂರವನ್ನು ಕ್ರಮಿಸುತ್ತಿರುವಂತೆ ಶರ್ಮ ಮನಸ್ಸಿನೊಳಗೆ ಶಬ್ದಗಳನ್ನು ಕಲೆ ಹಾಕುತ್ತಿದ್ದ. ಉರಿದು ಬೂದಿಯಾದ ಮನೆ ಸಮೀಪಿಸುತ್ತಲೇ ಎರಡೂ ಕೈಗಳಿಂದಲೂ ಮುಖ ಮುಚ್ಚಿ, ಕುಸಿದು ಕುಳಿತು; ಶರ್ಮ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಅಳು ಇನ್ನೆಂದೂ ನಿಲ್ಲುವುದೇ ಇಲ್ಲವೇನೊ ಎಂದು ಬಾವಿಸುತ್ತಿರುವಂತೆ ಅಳುತ್ತಿದ್ದವನು ತಟ್ಟನೆ ಮಾತಾಡಲಾರಂಭಿಸಿದ.
’ಪಾರ್ವತಿ ಈ ಮನೆಗೆ ಯಜಮಾನಿಯಾಗಿ, ನನ್ನ ಹೆಂಡತಿಯಾಗಿ ಬಂದ ಮೇಲೆ ಮನೆಯಲ್ಲಿದ್ದ ಜೀರ್ಣಕಾಯದ ನನ್ನ ಹಿರಿಯರೆಲ್ಲಾ ಒಂದೆರಡು ತಿಂಗಳ ಅಂತರದಲ್ಲಿ ಒಬ್ಬೊಬ್ಬರಾಗಿ ಸಾಯಲಾರಂಬಿಸಿದರು. ಕೊನೆಯದಾಗಿ ಸತ್ತ ನನ್ನ ದೊಡ್ಡಪ್ಪ ಸಾಯುತ್ತಿರುವಾಗ `ಅವಳ ಕಾಲ್ಗುಣ ಚೆನ್ನಾಗಿಲ್ಲ ರಾಮ. ಅವಳನ್ನು ಬಿಟ್ಟುಬಿಡು’ ಎಂದು ತೊದಲಿದರು. ವಂಶ ಬೆಳೆಯೋದಿಲ್ಲ ಎಂದು ನೋವಿನಿಂದ ಚೀರಿದರು. ಅಪ್ಸರೆಯ ಹಾಗಿದ್ದ ಅವಳನ್ನು ಬಿಡಲಾಗಲಿಲ್ಲ. ಅನೇಕ ನಿದ್ರೆಯಿಲ್ಲದ ರಾತ್ರಿಗಳಲ್ಲಿ ತಾವರೆ ಬಣ್ಣದ ಅವಳ ನಗ್ನ ಪಾದಗಳನ್ನೇ ನೋಡುತ್ತ ಈ ಪಾದಗಳು ಶಾಪವನ್ನು ಕೊಟ್ಟು ಬಿಡುವುದೇ ಎಂದು ಯೋಚಿಸುತ್ತಿದ್ದೆ.’
ಅಷ್ಟು ಹೇಳಿ ಆತ ಗಾಢವಾಗಿ ಯೋಚಿಸುತ್ತಿರುವವನಂತೆ ಮುಖ ಮಾಡಿದ. ನೆಲದಲ್ಲಿದ್ದ ಎರಡು ಕಲ್ಲುಗಳನ್ನು ಆಯ್ಕೆಯಿಲ್ಲದೆ ಆರಿಸಿ, ಒಂದಕ್ಕೊಂದು ಬಡಿಯಲಾರಂಭಿಸಿದ. ಉರಿದು ಬಿದ್ದ ಮನೆಯಿಂದ ಹೊಗೆ ಪಶ್ಚಾತ್ತಾಪದಂತೆ ಸುರುಳಿ ಸುರುಳಿಯಾಗಿ ಗಾಳಿಯ ಹೊಡೆತಗಳಿಗೆ ಬಾಗುತ್ತಾ ಮೇಲೇರುತ್ತಿತ್ತು. ಗುಂಪುಗೂಡಿದ್ದ ಜನ ಮನೆಯೊಳಗೆ ಉಳಿದುದನ್ನು ಲೆಕ್ಕ ಹಾಕುವ ಹವಣಿಕೆಯಲ್ಲಿತ್ತು. ಕೆಲ ಧೈರ್ಯವಂತರು ಮನೆಯೊಳಗೆ ನುಗ್ಗಿ ಶವಗಳನ್ನು ಹೊರತರಲಾರಂಭಿಸಿದರು. ಆ ದಿಕ್ಕಿಗೆ ಬೆನ್ನು ತಿರುಗಿಸಿ ಕುಳಿತುಕೊಂಡ ಶರ್ಮ ಮುಖವನ್ನು ವಿಕಾರವಾಗದಿರುವಂತೆ ಶ್ರಮಿಸುತ್ತಾ ಮತ್ತೆ ಹೇಳಲಾರಂಭಿಸಿದ.
’ಬಹಳ ಸಲ ಸಾವು ಜೀವಿತದಷ್ಟು ಸುಖವಾಗಿರುತ್ತದೆ. ನಾನು ನನ್ನ ನಂಬಿಕೊಂಡ ಜೀವಗಳಿಗೆ ಕೊನೆಯ ಮತ್ತು ಮೊದಲ ಬಾರಿಗೆ ಆ ಸುಖವನ್ನು ಕೊಟ್ಟುಬಿಟ್ಟೆ. ಒಂದೇ ಒಂದು ಮುಗುಳ್ನಗು ಕೂಡಾ ಇಲ್ಲದೆ ಅವರದನ್ನು ಸ್ವೀಕರಿಸಿದರು… ಸರ್… ನೀವು ಈ ಹೆಣಗಳನ್ನು ಮತ್ತೆ ಸುಡುತ್ತೀರಾ..?’
ಇನ್ಸ್ಪೆಕ್ಟರ್ ಶರ್ಮನ ಮುಖ ನೋಡಿದರು. ಒಂದಿಷ್ಟೂ ಪ್ರಜ್ನೆಯ ಚಿಹ್ನೆ ಇಲ್ಲದೆ ಯಂತ್ರದ ಹಾಗೆ ಮಾತನಾಡುತ್ತಿದ್ದವನ ಮುಖದಲ್ಲಿ ಗಾಬರಿ ಹುಟ್ಟಿಸುವ ಬಿಡುಗಡೆಯ ಭಾವವಿತ್ತು. ಸಣ್ಣ ಗಾಯಗಳಲ್ಲಿರೋವಷ್ಟು ನೋವು ದೊಡ್ಡ ಗಾಯಗಳಲ್ಲಿರೋಲ್ಲ. ಇಲ್ಲಿ ಕುಳಿತು ಮಾತನಾಡುತ್ತಿದ್ದವನಿಗೆ ಮಾರಣಾಂತಿಕ ಗಾಯವಾಗಿತ್ತು. ಆ ಗಾಯ ಅವನ ಪ್ರತಿಕ್ರಿಯೆಗಳನ್ನು, ದಾರುಣ ಹಿಂಸೆಯನ್ನು ಕೊಂದುಬಿಟ್ಟಿತ್ತು. ಉರಿದ ಮನೆಯಿಂದ ಹೊರಬಂದ ಕಾನ್ಸ್ಟೇಬಲ್ ಇನ್ಸ್ಪೆಕ್ಟರ್ ಬಳಿ ಬಂದು ಸೆಲ್ಯೂಟ್ ಹೊಡೆದು ಹೇಳಿದ.
’ಏಳು ಮಂದಿ ಸಾರ್ ಆರು ಮಕ್ಕಳು ಮತ್ತು ತಾಯಿ. ಸುಟ್ಟ ಗಾಯಗಳಿಲ್ಲ. ನಡುಮನೆಯ ಸೀಲಿಂಗ್ ಉರಿದಿಲ್ಲ. ಉಸಿರುಕಟ್ಟಿ ಸತ್ತಿದ್ದಾರೆ. ಹೊರಗಿನಿಂದ ಬಾಗಿಲು ಹಾಕಿತ್ತು. ತಾಯಿ ಬಾಗಿಲ ಬಳಿ ಕುಸಿದು ಬಿದ್ದಿದ್ದಳು..’
’ಎಂಟಾಗಬೇಕು ಸಾರ..ಎಂಟು. ನನಗೆ ಏಳು ಮಂದಿ ಮಕ್ಕಳು. ಎಲ್ಲಾ ಹೆಣ್ಣು ಮಕ್ಕಳೇ..ದೊಡ್ಡವಳಿಗೆ ಹದಿನಾರು ವರುಷ. ಗಂಡುಮಗು ಬೇಕು ಎಂದು ಪ್ರತಿ ಸಲ ಹೆತ್ತಾಗಲೂ ಅವಳು ಅಳುತ್ತಿದ್ದಳು. ಪ್ರತಿ ಮಗು ಹುಟ್ಟಿದ ದಿನ ಈ ಮನೆಯ ಕತ್ತಲೆ ಕೋಣೆಯಿಂದ ಕರುಳು ಕತ್ತರಿಸುವ ಅಳು ಕೇಳಿಸುತ್ತಿತ್ತು. ಆದರೆ, ನೋಡಿ, ಸಾವಿನ ದಿನ ಒಂದೇ ಒಂದು ತಟಕು ಕಣ್ಣೀರೂ ನೆಲಕ್ಕೆ ಬೀಳಲಿಲ್ಲ. ಸತ್ತ ಮೇಲೆ ಸದ್ಗತಿಗಾಗಿ ಗಂಡು ಮಗು ಬೇಡುತ್ತಿದ್ದಳು. ಈಗ ನಾನೇ ಮಗುವಾಗುತ್ತೇನೆ..ಆದರೆ ಸಾಯದೆ ಇರುವ ನನ್ನ ಇನ್ನೊಬ್ಬಳು ಮಗಳು ಎಲ್ಲ..’
ಇಷ್ಟು ಹೇಳಿ ಶರ್ಮ ಎದ್ದು ನಿಂತು, ಮನೆಯತ್ತ ತಿರುಗಿ ಸಾಲಾಗಿ ಮುಸುಕು ಹಾಕಿ ಮಲಗಿದ ಶವಗಳನ್ನು ನೋಡಿದ, ಸರಸ್ವತಿ, ಸರಳಾ, ಸಂಜೀವಿ, ಸುನಂದ, ಸುನೀತಿ, ಸಚ್ಚು, ಸುರಸಮಾ ಇವರಲ್ಲಿ ಯಾರೋ ಒಬ್ಬರು ಸಾಯಲಿಲ್ಲ..’ಸಚ್ಚೂ ಏ ಸಚ್ಚೂ’.. ಎಂದು ಭೀಕರವಾಗಿ ಕುಗಿಕೊಂಡ ಇನ್ಸ್ಪೆಕ್ಟರ್ ಸಹಾನುಭೂತಿಯಿಂದ ಅವನ ಕ್ಯ ಹಿಡಿದು ಮೆಲ್ಲ ಮೆಲ್ಲ..ಸಮಾದಾನ ತಂದುಕೊಳ್ಳಿ ಎಂದರು. ಅದಕ್ಕೆ ಶರ್ಮ ’ನನಗೇನೂ ಗಾಬರಿಯಿಲ್ಲ’ ಎನ್ನುತ್ತಾ ತಿರುಗಿ ಕುಳಿತುಕೊಂಡು ಹೇಳಲಾರಂಭಿಸಿದ;
’ಸಚ್ಚು ಚೂಟಿಯಾದ ಹುಡುಗಿ, ಅವಳಿಗೆ ಇದು ಎಂಟನೆ ವರ್ಷ. ಗಂಡುಹುಡುಗರಷ್ಟೇ ಹುಷಾರಾಗಿದ್ದಳು. ಬದುಕಿದ್ದರೆ ಅವಳು ಬದುಕಿರಬೇಕು. ನಾನು ರಾತ್ರಿ ಎದ್ದು ಬಂದಾಗ ಯಾರೊ ನನ್ನ ಹಿಂಬಾಲಿಸಿದ ಹಾಗಾಯಿತು..ಭ್ರಮೆ ಎಂದುಕೊಂಡು ಬೆಂಕಿ ಕೊಟ್ಟೆ..’
’ಯಾಕೆ ಬೆಂಕಿ ಕೊಟ್ಟಿರಿ ಹೇಳಿ..’
’ನನ್ನ ನೆಲದಲ್ಲಿ ನಾನು ದುಡಿಯುವುದನ್ನು ಬಿಟ್ಟು ಬಿಟ್ಟು ಒಕ್ಕಲುಗಳಿಗೆ ಆಸ್ತಿ ಹಂಚಿ ಆರಾಮವಾಗಿ ಮನೆಯಲ್ಲಿ ಕುಳಿತುಕೊಂಡೆ. ಕಾನೂನು ಬಂದಿತು. ಪ್ರತಿಯೊಬ್ಬನ ಬಾಗಿಲಿಗೂ ಹೋಗಿ ಒಂದು ತುಂಡು ನೆಲ ಕೊಡಿ ಎಂದು ಬೇಡಿಕೊಂಡೆ. ಒಬ್ಬನ ಬಳಿಯೂ ಕೊಡುವಂತಹಾ ಭೂಮಿ ಇರಲಿಲ್ಲ. ಪ್ರತಿಯೊಬ್ಬನ ಮನೆಯಲ್ಲೂ ನನ್ನ ಮನೆಯಲ್ಲಿರುವಂತೆ ತುಂಬಾ ಮಕ್ಕಳು; ಏನಾದರೂ ತಿನ್ನಲು ಕೊಡು ಎಂದು ಯಾವ ಕ್ಷಣದಲ್ಲಾದರು ಬೇಡಬಹುದಾದ ಮಕ್ಕಳು. ನಾನು ಬರಿಗೈಯಲ್ಲಿ ಮರಳುತ್ತಿದ್ದೆ. ಈ ವಿಶಾಲವಾದ ಮನೆ. ಈ ವಿಶಾಲವಾದ ಅಂಗಳ ಬರಿದಾಗಿ ಹೋಗಿತ್ತು.’
’ಈ ಅಂಗಳದಲ್ಲಿ ಹಿಂದೆಲ್ಲಾ ಯಕ್ಷಗಾನ ಬಯಲಾಟ ನಡೆಯುತ್ತಿತ್ತು. ಆನ ಕುಳಿತು ನೊಡುತ್ತಿತ್ತು. ಯುದ್ಧದ ಆಟ. ಚಮತ್ಕಾರದ ಆಟ. ಅತಿಮಾನವರಂತೆ ಕಾಣುವ ವೇಷಧಾರಿ ಮಾನವರು. ನಾನೂ ಒಂದು ವೇಷ ಕಟ್ಟಿದೆ. ಕೊನೆಯ ವೇಷ, ಭಸ್ಮಾಸುರನ ವೇಷ….’
ಈ ಮಾತುಗಳನ್ನಾಡಿದ ನಂತರ ಶರ್ಮ ನೀರು ಎಂದು ಕ್ಷೀಣಧ್ವನಿಯಲ್ಲಿ ಹೇಳಿದ. ಇನ್ಸ್ಪೆಕ್ಟರ್ ನೀರು ತರಿಸಿ ಕೊಟ್ಟರು. ಮುಖ,ಮೈ ಮೇಲೆ ನೀರು ಚೆಲ್ಲಿಕೊಂಡು, ಘಟಘಟನೆ ಕುಡಿದಾದ ಮೆಲೆ ಶರ್ಮ ತಲೆ ತಗ್ಗಿಸಿ ಕುಳಿತು, ನೆಲದ ಮೇಲೆ ಸತ್ತ ಕೀಟವೊಂದನ್ನು ಇರುವೆಗಳು ಹೊರುತ್ತಿದ್ದುದನ್ನು ಒಂದು ರೀತಿಯ ಅಪಹಾಸ್ಯದ ನಗುವಿನಿಂದ ನೋಡಲಾರಂಭಿಸಿದ. ಚಿಕ್ಕಪುಟ್ಟವರಲ್ಲಿ, ತಗ್ಗುಗಳಲ್ಲಿ ಜೀವಿತದ ನಿತ್ಯ ಮತ್ತು ಸತ್ಯ ಹೋರಾಟ ನಡೆಯುತ್ತಲೇ ಇತ್ತು. ಕ್ರಿಯೆಯಲ್ಲಿ ಜೀವಂತವಾಗುತ್ತಿರೋ ಇಂತ ಪ್ರಪಂಚದಲ್ಲಿ ನಿಷ್ಕ್ರಿಯನಾಗಿ ಕುಳಿತಿದ್ದ ರಾಮಚಂದ್ರಶರ್ಮ ವಿನಾಶವನ್ನು, ಕೊನೆಯನ್ನು ಬಲವಂತವಾಗಿ ಎಳೆದುತಂದಿದ್ದ. ಅವನ ಜೀವಿತಕ್ಕೆ ಜೀವಿತವೇ ಹೊರೆಯಾಗಿ ಹೋಗಿತ್ತು. ಇನ್ಸಪೆಕ್ಟರ್ ಸುಮ್ಮನಿರಲು ಸಾಧ್ಯವಾಗದೇ ಹೇಳಿ ಎಂದರು. ಶರ್ಮ ನಿಧಾನವಾಗಿ ತಲೆ ಎತ್ತಿದ. ಬೆವರುತ್ತಿರುವ ಮುಖದಲ್ಲಿ ಅನಿರೀಕ್ಷಿತವಾಗಿ ಕಣ್ಣೀರೂ ಬೆರೆತುಕೊಂಡಿತ್ತು. ಕಣ್ಣಿರು ಮತ್ತು ಬೆವರು ಇವೆರಡನ್ನೂ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗದ ಹಾಗೆ ಒಂದಾಗಿ ನೀರು ಅವನ ನರೆತ ಕೂದಲುಗಳಿರುವ ಎದೆಯ ಮೆಲೆ ತೊಟ್ಟು ತೊಟ್ಟಾಗಿ ಬೀಳುತ್ತಿತ್ತು. ಎರಡೂ ಕೈಗಲಲ್ಲೂ ಮುಖದ ನೀರನ್ನು ಒರೆಸಿ ತೆಗೆಯುತ್ತಾ ಶರ್ಮ ಮತ್ತೆ ಹೇಳಿದ.
’..ಹೀಗೆ..ಶವದ ಹಾಗೆ ಬಿಳುಚಿಕೊಳ್ಳುತ್ತಿದ್ದ ಪಾರ್ವತಿ ರಾತ್ರಿಯಾಗುತ್ತಲೇ ಹುಚ್ಚಿಯ ಹಾಗೆ ಮೈಗೆ ಬೀಳುತ್ತಿದ್ದಳು. ಒಬ್ಬ ಗಂಡುಮಗು ಇರುತ್ತಿದ್ದರೆ ದುಡಿದು ತರುತ್ತಿದ್ದ ಎಂದು ಗೋಳಿಡುತ್ತಿದ್ದಳು. ಗಂಡು ಮಗುವನ್ನು ಕೊಡಿ ಎಂದು ಬೇಡುತ್ತಿದ್ದಳು. ನಾನು ದೇವರಷ್ಟು ವಿಶಾಲವಾದ ಹೃದಯದ ದರಿದ್ರ ದಾನಿಯಾಗುತ್ತಿದ್ದೆ. ಖಾಲಿಯಾಗುತ್ತಿದ್ದೆ. ಅವಳೂ. ಬೇಡ ಪಾತಿ..,ಬೇಡ..ಪಾತೀ ಅನ್ನುತ್ತಾ ಸೃಷ್ಠಿಯ ಭೀಕರ ಸುಳಿಯಲ್ಲಿ ಲಯವಾಗುತ್ತಿದ್ದೆ. ನಿನ್ನೆ ರಾತ್ರಿ ಹಾಗೇ ಆಯಿತು. ಎಲ್ಲಾ ನಡೆದ ಮೇಲೆ ನನ್ನ ಬೆಂಕಿ ಆರಲೇ ಇಲ್ಲ. ಹಾಗೆ ಅದಕ್ಕೆ ಹೀಗೆ ಮಾಡಿದೆ. ಬದುಕಿದ್ದರ ಸಚ್ಚು ಬದುಕಿರಬೇಕು….’
ಇಷ್ಟು ಹೇಳಿ ಶರ್ಮ ಮತ್ತೆ ಮನೆಯತ್ತ ತಿರುಗಿದ. ಮುಸುಕಿನ ಶವಗಳನ್ನು ಎಣಿಸಿದ. ಸಚ್ಚೂ..ಏ ಸಚ್ಚೂ..ಎಂದು ಕರುಳು ಕೊರೆಯುವ ಭೀಕರ ಹತಾಶ ಧ್ವನಿಯಲ್ಲಿ ಮತ್ತೆ ಮತ್ತೆ ಕರೆಯಲಾರಂಭಿಸಿದ. ಉತ್ತರಿಸಲ್ಪಡದ ಕರೆಯ ದಾರುಣ ವ್ಯಥೆಯನ್ನು ಸಹಿಸಲಾರದೆ ಇನ್ಸ್ಪೆಕ್ಟರ್ ಗುಂಪಿನತ್ತ ಸರಿದು ಆ-ಈ ಸಂಭಾಷಣೆಯಲ್ಲಿ ಮಗ್ನರಾದರು. ಶರ್ಮ ಕರೆಯ ಶಕ್ತಿಯನ್ನು ಹೆಚ್ಚಿಸುತ್ತಿದ್ದಂತೆ ಧ್ವನಿ ಕುಗ್ಗಿ ಹೋಗಲಾರಂಭಿಸಿತು.

****

ಸೂರ್ಯನ ಬಿಸಿಲು ಈಗ ಹೆಚ್ಚು ಪ್ರಖರವಾಗಲಾರಂಭಿಸಿತ್ತು. ಭೂಮಿ ಈ ಘಾತವನ್ನು ಮೌನವಾಗಿ ಸಹಿಸುತ್ತಿತ್ತು. ಬಸಿಯು ಬೀಸದಂತಿದ್ದ ಗಾಳಿಯಲ್ಲಿ ಧರ್ಮ, ಮೇಧಸ್ಸು, ಮಾಂಸ ಸುಟ್ಟವಾಸನೆ ನಿದಾನವಾಗಿ ಹರಡುತ್ತಿತ್ತು. ಶರ್ಮ ಬಿಸಿಲಿನಲ್ಲಿ ತಲೆಗೆ ಕೈ ಹೊತ್ತು ನಿಂತು ಶವಗಳನ್ನು ಒಂದೊಂದಾಗಿ ಅಂಬುಲೆನ್ಸಿಗೆ ತುಂಬಿಸುತ್ತಿರುವುದನ್ನು ನೋಡುತ್ತಿದ್ದ. ಈಗ ಆತ ಸಚ್ಚುವನ್ನು ಕರೆಯುವ ಸಂಗತಿಯನ್ನೆ ಮರೆತಿದ್ದ. ಒಬ್ಬಿಬ್ಬರು ಅಧಿಕ ಪ್ರಸಂಗಿಗಳು ಅವನನ್ನು ಮಾತಾಡಿಸಲು ಯತ್ನಿಸಿ ಸೋತು ಸುಮ್ಮನಾಗಿದ್ದರು. ಏಳೆಂಟು ಮಂದಿಯ ಕೊಲೆಗೆ ಕಾರಣನಾಗಿದ್ದ ವ್ಯಕ್ತಿಗೆ ಶಿಕ್ಷೆ ಅಥವಾ ಕ್ಷಮೆ ಎರಡರಲ್ಲಿ ಯಾವುದನ್ನು ಕೊಡಬೇಕು ಎಂದು ಯೋಚಿಸಿ, ನಿರ್ಧರಿಸಲಾಗದೆ ಇನ್ಸ್ಪೆಕ್ಟರ್ ಊರಿನವರ ಅಭಿಪ್ರಾಯ ಕೇಳುತ್ತಿದ್ದರು. ಕ್ರೌರ್ಯದ ವೇಷ ಧರಿಸಿ ಬಂದ ದಯೆಯ ಮೂರ್ತಿಯಾಗಿದ್ದ ಶರ್ಮನ ಬಗ್ಗೆ ಸಹಾನುಭೂತಿಯಿದ್ದ ಊರಿನವರೆಲ್ಲಾ ಬೆಂಕಿಯನ್ನು ಆಕಸ್ಮಿಕ ಎಂದೇ ರೆಕಾಡ ಮಾಡಲು ಸೂಚಿಸಿದರು. ಆಮೇಲೆ ಇನ್ಸ್ಪೆಕ್ಟರ್ ಶರ್ಮನ ಬಳಿ ಬಂದು, ಅವನ ಭುಜದ ಮೇಲೆ ಕೈ ಇಟ್ಟು, ಹೀಗೆ ಹೇಳಿದರು:
’ನಿಮ್ಮನ್ನು ಬಂಧಿಸಬೇಕಿತ್ತು. ಆದರೆ ಕೋರ್ಟು ವಿಧಿಸುವ ಶಿಕ್ಷೆಗಿಂತಲೂ ದೊಡ್ಡ ಶಿಕ್ಷೆ ನಿಮಗೆ ಸಿಕ್ಕಿದೆ. ಶವಗಳು ಅಂತ್ಯಕ್ರಿಯೆಗೆ ಬೇಕಿದ್ದರೆ ಸಂಜೆ ಬಂದು ತಿಳಿಸಿ, ಇಲ್ಲವಾದರೆ ಮಣ್ಣುಮಾಡಲು ಏರ್ಪಾಡು ಮಾಡುತ್ತೇನೆ..’
ಶರ್ಮ ಇದಕ್ಕೆ ಉತ್ತರಿಸದೆ, ಅತ್ತಿಂದಿತ್ತ ತಲೆ ಅಲುಗಿಸಿದ. ಅಂಬುಲೆನ್ಸ್ ಮತ್ತು ಪೋಲೀಸ್ ವ್ಯಾನ್ ಹೊರಟು ಹೋದ ಮೇಲೆ ಜಾಗ ನಿಧಾನವಾಗಿ ಖಾಲಿಯಾಗಲಾರಂಭಿಸಿತು. ಅನಂತಯ್ಯನೆಂಬ ಮುದುಕರೊಬ್ಬರು ಶರ್ಮನ ಕೈ ಹಿಡಿದು ಬಾ ರಾಂಮ್ಚ. ನಮ್ಮ ಮನೆಗೆ ಹೋಗೋಣ ಎಂದರು. ಶರ್ಮ ಸಚ್ಚೂ ಎಂದು ಅತ್ಯಂತ ಕ್ಷೀಣ ಧ್ವನಿಯಲ್ಲಿ ಹೇಳಿದ. ಮತ್ತೆ ಮತ್ತೆ ಅದೇ ಧ್ವನಿಯಲ್ಲಿ ಅದೇ ಶಬ್ದವನ್ನು ಹೇಳುತ್ತಾ ಅನಂತಯ್ಯನ ಹೆಗಲ ಮೇಲೆ ತಲೆಯಿಟ್ಟು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಬದುಕಿದ್ದರೆ ಬರುತ್ತಾಳೆ ರಾಂಮ್ಚ, ಮನೆಗೆ ಹೋಗೋಣ ಎಂದರು. ಶರ್ಮ ಸಚ್ಚೂ ಎಂದು ಅತ್ಯಂತ ಕ್ಷೀಣ ಧ್ವನಿಯಲ್ಲಿ ಹೇಳಿದ. ಮತ್ತೆ ಮತ್ತೆ ಅದೇ ಶಬ್ದವನ್ನು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಬದುಕಿದ್ದರ ಬರುತ್ತಾಳೆ ರಾಮ್ಚ ಎಂದು ಅನಂತಯ್ಯ ಹೇಳುತ್ತಿರುವಂತೆ ಏಳೆಂಟು ವರ್ಷದ ಹುಡುಗಿಯೊಬ್ಬಳು ಕಾಡಿನ ಕಾಲು ದಾರಿಯಲ್ಲಿ ಓಡುತ್ತಾ ಬಂದಳು; ಬಂದು ಉರಿದ ಮನೆಯನ್ನೊಮ್ಮೆ ಶರ್ಮನನ್ನೊಮ್ಮೆ ಕಣ್ಣರಳಿಸಿ ನೋಡಿದಳು. ಹುಡುಗಿಯನ್ನು ನೊಡಿದ ಕೂಡಲೆ ಎರಡೂ ಕೈಗಳನ್ನು ಆಲಿಂಗನಕ್ಕಾಗಿ ತೆರೆದು, ’ಸಚ್ಚು ನನ್ನ ಸಚ್ಚು’ ಎಂದು ಚೀರುತ್ತ ಶರ್ಮ ಹುಡುಗಿಯ ಬಳಿಗೆ ಹೋದ. ಅವನನ್ನ ನೋಡುತ್ತಲೇ ಹುಡುಗಿ ಭೂತ ದರ್ಶನವಾದಂತೆ ಭಯದಿಂದ ವ್ಯಾನ್ ಹೋದ ದಾರಿಯತ್ತ, ತಿರುಗಿ ಕೂಡಾ ನೋಡದೆ ಓಡಲಾರಂಭಿಸಿದಳು. ಹತಾಶನಾದ ಶರ್ಮ ಏನನ್ನೋ ಹೇಳಲು ಯತ್ನಿಸಿ ತುಟಿಯಲುಗಿಸಿದ. ಆದರೆ, ಆ ಮಾತುಗಳು ಹೊರ ಬರಲೇ ಇಲ್ಲ. ಅವನ ಅಳುವಿನಲ್ಲೂ ಧ್ವನಿ ಇರಲಿಲ್ಲ.
’ಬರುತ್ತಾಳೆ ರಾಮ್ಚ. ಗಾಬರಿಯಾಗಬೇಡ. ಬೇಡ. ಅಳಬೇಡ’ ಅನ್ನುತ್ತಿರುವಂತೆ ಅನಂತಯ್ಯ ಸಶಬ್ದವಾಗಿ ಕಲ್ಲೂ ಕರಗುವಂತೆ ಅಳಲಾರಂಭಿಸಿದರು. ಕಾಡಿನಿಂದ ಓಡಿ ಬಂದ ಹುಡುಗಿ ಜನರ ಕಾಡಿನತ್ತ ಧಾವಿಸಿ ಹೋಗಿದ್ದಳು. ಶರ್ಮ ಕಲ್ಲಾಗಿ ನಿಂತಿದ್ದ. ಶಿಕ್ಷೆಗಿಮತಲೂ ಕ್ರೂರವಾಗಿದ್ದ ಕ್ಷಮೆಯ ಹೊಡೆತದಿಂದ ಶರ್ಮ ಕ್ಷಣಕಣಕ್ಕೂ ನಿಶ್ಯಕ್ತನಾಗುತ್ತಾ ಅನಂತಯ್ಯನವರ ಹೆಗಲಗೆ ಜೋತು ಬೀಳುತ್ತಿದ್ದ. ಈಗ ಮನೆಯ ಮಧ್ಯದಿಂದ ಅತ್ಯಂತ ತೆಳುವಾದ ಹೊಗೆ ಎದ್ದು ನುರ್ಮಲ ಆಕಾಶದತ್ತ ಏರುವ ನಟನೆ ಮಾಡುತ್ತಿತ್ತು.
 
 
 

‍ಲೇಖಕರು G

24 January, 2014

3 Comments

  1. ಸಾತ್ವಿಕ್

    ಕುತೂಹಲಕ್ಕೆ ಹೇಳಬೇಕೆನಿಸಿತು….ಈ ಚಿತ್ರ ತೆಗೆದವರು ಜಯಂತ್ ಕಾಯ್ಕಿಣಿ. ಮತ್ತು ಇವತ್ತು (ಜನವರಿ 24) ಜಯಂತರ ಜನ್ಮದಿನ ಕೂಡಾ.

    • G

      ಮಾಹಿತಿಗೆ ಧನ್ಯವಾದಗಳು ಸಾತ್ವಿಕ್. ’ಅವಧಿ’ ಓದುಗರ ಪರವಾಗಿ ಜಯಂತ ಕಾಯ್ಕಿಣಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು.

  2. anupama prasad

    ಅವಧಿ ಬಳಗಕ್ಕೆ ಧನ್ಯವಾದಗಳು.
    ಅನುಪಮಾ ಪ್ರಸಾದ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading