ವೈ ಕೆ ಸಂಧ್ಯಾಶರ್ಮ
ಇತ್ತೀಚೆಗೆ ಬೆಂಗಳೂರಿನ ‘ರಂಗಶಂಕರ’ದಲ್ಲಿ ಪ್ರದರ್ಶನ ಕಂಡ ಲೇಖಕಿ-ಕವಯತ್ರಿ ವೈದೇಹಿಯವರ 18 ಕವನಗಳು ಹಾಗೂ 1 ಲೇಖನಾಧಾರಿತ ‘ವ್ಯಾನಿಟಿ ಬ್ಯಾಗ್’ ಒಂದು ವಿನೂತನ ಪ್ರಯೋಗ. ಬಹುಶಃ ಕೆ.ಎಸ್.ನ.ಕವಿತೆಗಳ ಮಾಲೆಯಿಂದ ರೂಪಿತಗೊಂಡ ‘ಮೈಸೂರು ಮಲ್ಲಿಗೆ’ ಚಲನಚಿತ್ರ ಇದಕ್ಕೆ ಸ್ಪೂರ್ತಿಯಾಗಿದ್ದಿರಬಹುದು. ಇದೊಂದು ಹೊಸ ಬಗೆಯ ಸಂವೇದನೆ ಹುಟ್ಟಿಸಿದ ಪ್ರಯತ್ನ. ನದಿ ಮೂಲ,ಋಷಿ ಮೂಲ ಮತ್ತು ಸ್ತ್ರೀ ಮೂಲ ಹುಡುಕಬಾರದು ಎಂಬುದರ ಧ್ವನಿಯಾಗಿ ಇಲ್ಲಿ ‘ವ್ಯಾನಿಟಿ ಬ್ಯಾಗ್’ ಹೆಣ್ಣಿನ ಅಂತರಂಗದ ಅನಂತಲೋಕ ಅನಾವರಣಗೊಳಿಸುವ ಅಧ್ಯಾಯ. ಕವಯಿತ್ರಿ ಇಲ್ಲಿ ‘ವ್ಯಾನಿಟಿ ಬ್ಯಾಗ್’ ಅನ್ನು ಧ್ವನಿಪೂರ್ಣ ಪ್ರತಿಮೆಯಾಗಿ ಬಳಸಿರುವುದು ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಡೀ ನಾಟಕದ ಹೂರಣ ‘ವ್ಯಾನಿಟಿ ಬ್ಯಾಗ್’ ನೊಳಗೆ ಗೂಢವಾಗಿ ಅಡಗಿದೆ. ‘ನೋಡಬಾರದು ಚೀಲದೊಳಗನು’ ಎಂಬ ಪಲ್ಲವಿಯ ಗೀತೆ ನಾಟಕದುದ್ದಕ್ಕೂ ಅನುರಣಿಸುತ್ತ, ಯಾರೂ ಇಣುಕಿ ನೋಡಲಾಗದ ಅನೂಹ್ಯ, ಅಗಮ್ಯ ಹಿರಿಗಡಲು ಅವಳ ಹೃದಯದೊಳಗು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಹೆಣ್ಣಿನ ನಿಗೂಢ ಮನದಾಳದ ಭಾವನೆಗಳನ್ನು ಪಾತಾಳಗರಡಿ ಹಾಕಿ ಹೆಕ್ಕಿ ಹೆಕ್ಕಿ ತೆಗೆದಂತೆ ಕವನಗಳಿಗೆ ಸೂಕ್ತ ರಂಗರೂಪವಿತ್ತು, ಸಮರ್ಥವಾಗಿ ನಿರ್ದೇಶನ ಮಾಡಿರುವ ಎನ್. ಮಂಗಳಾ ಅವರ ಶ್ರಮ ಸಾರ್ಥಕವಾಗಿದೆ. ನೋಡುಗರನ್ನು ಸಂತೃಪ್ತಪಡಿಸುವ ನಿಟ್ಟಿನಲ್ಲಿ ಅವರು ಗೆದ್ದಿದ್ದಾರೆ.
ಹೆಣ್ಣಿನೆದೆಯ ಪಿಸು ಮಾತುಗಳು, ಕನಸು-ಕನವರಿಕೆಗಳು,ನಿಟ್ಟುಸಿರುಗಳನ್ನು ಸೂಕ್ಷ್ಮ ನೆಲೆಯಲ್ಲಿ ಅಭಿವ್ಯಕ್ತಿಸುವ ಜಾಣ್ಮೆ ಗೋಚರಿಸುತ್ತದೆ. ವಿವಿಧ ಪ್ರಸಂಗಗಳ ಮೂಲಕ ಅವಳ ಸುಪ್ತ ಅಂತರಂಗದ ವಿಶ್ವರೂಪ ದರ್ಶನವನ್ನು ಪ್ರೇಕ್ಷಕರ ಅನುಭವ ತೆಕ್ಕೆಗೆ ನೀಡುತ್ತಾರೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ-ಸಾಧನೆಯೆಂದರೆ ಅತಿಶಯೋಕ್ತಿಯಲ್ಲ. ‘ತೇದಷ್ಟೂ ಸವೆಯದ ನೆನಪ’ನ್ನು ಬಿಚ್ಚಿಡುತ್ತ ಹೋಗುವ ವೃದ್ಧ ತಾಯಿ(ಕಲ್ಪನಾ ನಾಗಾನಾಥ್)ಯ ಅನುಭವ ಮೂಸೆಯಿಂದರಳಿದ ಸಹಜಾಭಿನಯ ನೋಡುಗನಿಗೆ ಸವೆಯದ ನೆನಪಾಗಿ ಉಳಿಯುತ್ತದೆ.ರಂಗದ ಮೇಲೆ ಸಾಂಕೇತಿಕವಾಗಿ ನಿರ್ಮಿಸಲಾದ ದೊಡ್ಡ ವ್ಯಾನಿಟಿ ಬ್ಯಾಗಿನೊಳಗಿಂದ ಹೊರ ಬರುವ ಹುಡುಗಿಯರದು ಒಂದೊಂದು ಬಗೆಯ ಕಥೆ-ವ್ಯಥೆ…ಯಾರ ಅಳವಿಗೂ ಸಿಗದ ಅನೂಹ್ಯ ಸಂಗತಿಗಳು. ನೆನಪಿನ ಸಂದೂಕ ಬಿಚ್ಚಿ ಕೂರುವ ತಾಯಿ, ಮಕ್ಕಳಿಗೆ ಒಡವೆಗಳನ್ನು ಹಂಚುವ ನೆಪದಲ್ಲಿ ತನ್ನ ಪಳೆಯುಳಿಕೆಯ ನೆನಪಿನ ಬುತ್ತಿಯನ್ನು ಹಂಚುತ್ತಾಳೆ. ಅಮ್ಮನ ಪ್ರೀತ್ಯಾದರಗಳನ್ನು ಮನಸಾರೆ ಅಪ್ಪಿಕೊಳ್ಳುವ ರೂಪಕವಾಗಿ ಬರುವ, ಆಕೆಯ ಸೀರೆಯನ್ನು ಮೈ ತುಂಬ ಸುತ್ತಿಕೊಂಡು ಅವಳ ಮಮತೆಯ ಮಡಿಲಿನ ಸುಖ ಅನುಭವಿಸುವ ದೃಶ್ಯ ಮನನೀಯ.
‘ಅಮ್ಮ’ ಅವರ ಕಣ್ಣೊಳಗಿನ ಪಸೆಯಾಗುತ್ತಾಳೆ. ಹೆಣ್ಣಿನ ಮನದ ವಿವಿಧ ಚಿತ್ತಾರಗಳನ್ನು ಬಿತ್ತರಿಸುವ ಅನೇಕ ಪ್ರಸಂಗಗಳು ಇಲ್ಲಿ ದೃಶ್ಯರೂಪ ಪಡೆಯುತ್ತವೆ. ಸೂರ್ಯನಿಗಾಗಿ ಹಂಬಲಿಸುವ ಹುಡುಗಿಯರ ತುಯ್ತ, ಅಪೂರ್ವ ರಾಜಕುಮಾರಿಯ ಸ್ವಯಂವರದ ಅಣಕು-ಮಾರ್ಮಿಕ ವ್ಯಂಗ್ಯ, ಅಡುಗೆ ಮನೆ ಹುಡುಗಿಯ ಭಗ್ನ ಕನಸುಗಳು-ನೈರಾಶ್ಯ , ನವಿರಾದ ಹಾಸ್ಯ ಚಿಮ್ಮಿಸುವ ಮದುವೆ,ಗಂಡ-ಹೆಂಡತಿಯರ ನಾಟಕೀಯ ಪ್ರಸಂಗ, ಅರ್ಥಗರ್ಭಿತ ಅಮ್ಮನ ಪ್ರೀತಿಯ ಜೋಗುಳ,ಲಾಲಿ ಹಾಡಿನ ಸವಿ-ದಟ್ಟ ಅನುಭವಗಳ ಬಂಧುರದಲ್ಲಿ ನಾಟಕ ಮುಗಿತಾಯಕ್ಕೆ ಬಂದುದೇ ಅರಿವಾಗುವುದಿಲ್ಲ. ಅಂಥ ಕುತೂಹಲಭರಿತ ನಾಟಕದ ಸಂಚಾರ ‘ಸಂಚಾರೀ ಥಿಯೇಟರಿ’ನ ಕಲಾವಿದರು ಅಭಿನಯಿಸಿದ ಈ ನಾಟಕ. ರಂಗದ ಮೇಲೆ ಸಾಂಕೇತಿಕವಾಗಿ ಬೃಹದಾಕಾರವಾಗಿ ನಿರ್ಮಿಸಲಾಗಿದ್ದ ‘ವ್ಯಾನಿಟಿ ಬ್ಯಾಗ್’ ನೊಳಗೆ ಇಣುಕಿನೋಡಬಾರದ, ನೋಡಿದರೂ ಗ್ರಹಿಸಲಾರದ ಅಮೂರ್ತ, ಸಂಕೀರ್ಣ ಭಾವ ಬಂಧುರಗಳು, ಇಂಪಾದ ಕಂಠಗಳಿಂದ ಹೊರಹೊಮ್ಮುವ ಹಾಡುಗಳು ಪಾಡಾಗಿ ಹರಿಯುವ ತಲ್ಲಣಗಳು,ಕಿವಿಯೊಳಗೆ ಗೂಡು ಕಟ್ಟುವ ಇನಿದನಿಗಳು. ಗಾಢ ಅನುಭವ ಕಟ್ಟಿಕೊಡುವ ಕಲಾವಿದರ ಉತ್ತಮ ಅಭಿನಯ, ಸಂಗೀತ,ರಂಗಸಜ್ಜಿಕೆ ನಾಟಕವನ್ನು ಗೆಲ್ಲಿಸಿದೆ.







0 Comments