‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು.
ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಕವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು.
ಇದಕ್ಕೆ ‘ಅವಧಿ’ ಪ್ರತಿಕ್ರಿಯೆಯನ್ನು ಆಹ್ವಾನಿಸಿತ್ತು.
ಖ್ಯಾತ ಸಾಹಿತಿ ಪ್ರತಿಭಾ ನಂದಕುಮಾರ್ ಅವರ ನೋಟ ಇಲ್ಲಿದೆ
ಚಿಂತಕ ಕು ಸ ಮಧುಸೂಧನ್ ಅವರು ಪ್ರತಿಕ್ರಿಯಿಸಿದ್ದಾರೆ- ಅದು ಇಲ್ಲಿದೆ
ಕಂಠೀರವ ಅವರ ಪ್ರತಿಕ್ರಿಯೆ ಹೀಗಿದೆ. ಅದು ಇಲ್ಲಿದೆ
ಸಂವರ್ಥ ಸಾಹಿಲ್ ಕಟ್ಟಿಕೊಟ್ಟ ನೋಟ ಇಲ್ಲಿದೆ
ಈಗ ನಾ ದಿವಾಕರ್ ಅವರು ತಮ್ಮ ಅಭಿಪ್ರಾಯವನ್ನು ಪ್ರಸ್ತುತಪಡಿಸಿದ್ದಾರೆ-
ನಾ.ದಿವಾಕರ
ಡಾ.ರಾಧಾಕೃಷ್ಣನ್ ಮತ್ತು ಅವರ ಹುಟ್ಟುಹಬ್ಬದಂದು ಆಚರಿಸಲಾಗುವ ಶಿಕ್ಷಕರ ದಿನಾಚರಣೆಯನ್ನು ಕುರಿತ ವಿವಾದ ಹೊಸತೇನಲ್ಲ. ಒಂದು ದಶಕದ ಹಿಂದೆಯೇ ಈ ಕುರಿತು ಹಲವಾರು ಅಭಿಪ್ರಾಯಗಳು ಮೂಡಿದ್ದವು. ಈಗ ಶ್ರೀಯುತ ವಡ್ಡಗೆರೆ ನಾಗರಾಜಯ್ಯ ಮತ್ತೊಮ್ಮೆ ಅದೇ ವಿಚಾರವನ್ನು ತಮ್ಮದೇ ಆದ ರೀತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ನಾಗರಾಜಯ್ಯ ಅವರ ಪ್ರತಿಪಾದನೆಯನ್ನು ತಳ್ಳಿಹಾಕದೆಯೇ ಈ ವಿಚಾರದಲ್ಲಿ ವಿಭಿನ್ನ ಆಲೋಚನೆ ಮಾಡಲೂ ಸಾಧ್ಯ ಎನಿಸುತ್ತದೆ. ಸಾಮಾನ್ಯವಾಗಿ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ನಡತೆಯಲ್ಲಿ, ವ್ಯಕ್ತಿಗತ ಜೀವನದಲ್ಲಿ ಮತ್ತು ಹೆಜ್ಜೆಗುರುತುಗಳಲ್ಲಿ ಕಂಡುಬರುವ ದೋಷಗಳು ಸಮಕಾಲೀನ ಸಂದರ್ಭದಲ್ಲಿ ಆಕ್ಷೇಪಾರ್ಹವಾಗಿಯೇ ಕಾಣುತ್ತವೆ. ಏಕೆಂದರೆ ಸಹಜವಾಗಿಯೇ ಸಮಕಾಲೀನ ಆಧುನಿಕ ಸಮಾಜ ಪ್ರಾತಃಸ್ಮರಣೀಯರನ್ನು ತನ್ನ ಸುತ್ತಲಿನ ಜೀವನದಿಂದ ಹೊರತಾಗಿಯೋ ಅಥವಾ ಉನ್ನತ ಮಟ್ಟದಲ್ಲಿರಿಸಿಯೋ ನೋಡುತ್ತದೆ.

ಗಾಂಧೀಜಿ ಹೀಗಿದ್ದರೇ ? ಎಂಬ ಪ್ರಶ್ನೆ ಅವರ ಬಗ್ಗೆ ಹೇಳಲ್ಪಡುವ ಸಣ್ಣ ಲೋಪವನ್ನು ಕುರಿತೂ ಉದ್ಭವಿಸುತ್ತದೆ. ಆದರೆ ಎಂತಹ ಪ್ರಸಿದ್ಧ ವ್ಯಕ್ತಿಯೇ ಆಗಿದ್ದರೂ ಅವರು ಮಾನವ ಸಮಾಜದಲ್ಲೇ ಬದುಕಿ ತೀರಿದವರಲ್ಲವೇ ? ಮಾನವ ಸಹಜ ಕ್ರಿಯೆಗಳಿಗೆ ಬಲಿಯಾದವರಲ್ಲವೇ ? ಏನೆಂದರೆ ಆಗಿನ ಕಾಲಘಟ್ಟದಲ್ಲಿ ಸಹಜ ಎನ್ನಬಹುದಾಗಿದ್ದ ಕೆಲವು ನಡೆ-ನುಡಿಗಳು, ಪದ್ಧತಿಗಳು ಮತ್ತು ನಿಲುವುಗಳು ಸಮಕಾಲೀನ ಸಂದರ್ಭದಲ್ಲಿ ಒಪ್ಪತಕ್ಕದ್ದಲ್ಲ ಎನಿಸಿಬಿಡುತ್ತದೆ. ಹಾಗಾಗಿ “ ಅವರು ಹೀಗೆ ಮಾಡಿದ್ದು ಸರಿಯಲ್ಲ ” ಎನ್ನುವ ವಾದ ಹೊರಹೊಮ್ಮುತ್ತದೆ.
ಡಾ.ರಾಧಾಕೃಷ್ಣನ್ ಸಹ ಇಂತಹ ಒಂದು ವಾದಕ್ಕೆ ವಸ್ತುವಾಗಿದ್ದಾರೆ. ಸೆಪ್ಟಂಬರ್ 5 ರಾಧಾಕೃಷ್ಣನ್ ಅವರ ಅಧಿಕೃತ ಹುಟ್ಟಿದ ದಿನ ಅಲ್ಲ ಎಂದು ಅವರ ಪುತ್ರ ಸರ್ವೇಪಲ್ಲಿ ಗೋಪಾಲ್ ಸಹ ಹೇಳುತ್ತಾರೆ. ಸೆಪ್ಟಂಬರ್ 20 ಅವರ ಜನ್ಮದಿನ ಎನ್ನಲಾಗಿದೆ. ಆದರೆ ಇದು ಅಷ್ಟೇನೂ ಮಹತ್ವದ್ದು ಎನಿಸುವುದಿಲ್ಲ. ಶಾಲಾ ದಾಖಲಾತಿಗೆ ನೀಡುವ ದಿನಾಂಕ ಕೆಲವೊಮ್ಮೆ ಭಿನ್ನವಾಗಿರುತ್ತದೆ. ( ಸ್ವತಃ ನನಗೂ ಹಾಗೆಯೇ ಆಗಿದೆ ಎನ್ನಿ).
ಶಿಕ್ಷಕರ ದಿನವನ್ನು ಸೆಪ್ಟಂಬರ್ 20ಕ್ಕೆ ಬದಲಾಯಿಸುವುದೂ ಕಷ್ಟವೇನಲ್ಲ. ಆದರೆ ಇಲ್ಲಿ ಕೇಳಿಬರುವ ಮುಖ್ಯ ಆರೋಪ ರಾಧಾಕೃಷ್ಣನ್ ಅವರ ವೈವಾಹಿಕ ಬದುಕು, ಅವರ ಪತ್ನಿಯರೊಡಗಿನ ಅವರ ಸಂಬಂಧಗಳು ಮತ್ತು ಅವರ ಕೆಲವು ವೈಯ್ಯಕ್ತಿಕ ನಡವಳಿಕೆಗಳು. ಒಬ್ಬ ಮಹಾನ್ ಸಾಧಕನ ವ್ಯಕ್ತಿಗತ ಜೀವನ ಸಾರ್ವಜನಿಕ ಚರ್ಚೆಯ ವಿಷಯವಾಗುವುದು ತಪ್ಪೇನಲ್ಲ. ಏಕೆಂದರೆ ನಾವು ಸಾಧಕರಲ್ಲಿ, ಮಹನೀಯರಲ್ಲಿ, ಪ್ರಾತಃಸ್ಮರಣೀಯರಲ್ಲಿ ಒಂದು ಆದರ್ಶವನ್ನು ಕಾಣಲು ಬಯಸುತ್ತೇವೆ.
ಅಷ್ಟೇಕೆ ಡಾ.ರಾಜ್ ಅವರಲ್ಲೂ ಅದನ್ನು ಕಾಣಲು ತವಕಿಸುತ್ತೇವೆ ಅಲ್ಲವೇ ? ಇದು ಸಹಜ ಎನಿಸಿದರೂ ಅಂತಹ ವ್ಯಕ್ತಿಗಳ ವ್ಯಕ್ತಿಗತ ಮತ್ತು ಕೌಟುಂಬಿಕ ಜೀವನದಲ್ಲಿನ ಆಗುಹೋಗುಗಳು ಮತ್ತು ಅಳಿದುಳಿದ ಸಂಬಂಧಗಳನ್ನು ವ್ಯಾಖ್ಯಾನಿಸುವಾಗ ಅವರ ಜೀವನದ ಅನಿವಾರ್ಯತೆಗಳನ್ನೂ ಗಮನಿಸಬೇಕಾಗುತ್ತದೆ. ಒಂದೊಮ್ಮೆ ಇಂದಿನ ನೆಲೆಯಲ್ಲಿ ನಿಂತು ನೋಡುವಾಗ ಅವರು ಮಾಡಿದ್ದು ತಪ್ಪು ಎನಿಸಿದರೂ ಅದರ ಹಿಂದಿನ ಕಾರಣಗಳನ್ನೂ ಪರಿಶೀಲಿಸಬೇಕಾಗುತ್ತದೆ. ಇದಾವುದೂ ಮಹಾನ್ ವ್ಯಕ್ತಿಗಳ ನಿರಾಕರಣೆಯ ವಸ್ತುಗಳಾಗಕೂಡದು.
ಪಾಶ್ಚಿಮಾತ್ಯ ರಾಷ್ಟ್ರಗಳು ಅಮೆರಿಕ ನೇತೃತ್ವದಲ್ಲಿ ಚೀನಾದ ಮಾವೋ ಅವರನ್ನು ನಿರಾಕರಿಸುವ ವ್ಯವಸ್ಥಿತ ಕಾರ್ಯಸೂಚಿ ಅನಾವರಣಗೊಳಿಸಿದಾಗ, ಮಾವೋ ಅವರ ಬಗ್ಗೆಯೂ ಹೀಗೆಯೇ ಆರೋಪಗಳನ್ನು ಮಾಡಲಾಗಿತ್ತು. ಅವರ ಜೀವನದಲ್ಲಿ ಬಂದು ಹೋದ ಮಹಿಳೆಯರನ್ನೇ ಪ್ರಧಾನವಾಗಿಟ್ಟುಕೊಂಡು ಮಾವೋ ಅವರ ಚಾರಿತ್ರ್ಯವಧೆ ಮಾಡುವ ಕೃತ್ಯ ಇಂದಿಗೂ ನಡೆಯುತ್ತಿದೆ.

ಏನೇ ಆದರೂ ಚೀನಾದ ಪ್ರಗತಿಗೆ ಮಾವೋ ಅವರ ಕಾಣಿಕೆಯನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತದ ಇತಿಹಾಸದಲ್ಲೂ ಇದನ್ನು ಗಾಂಧೀಜಿಯ ವಿಚಾರದಲ್ಲಿ ಕಾಣಬಹುದು. ಪರಹಮಂಸರ ವಿಚಾರದಲ್ಲಿ ಕಾಣಬಹುದು. ಇತ್ತೀಚೆಗೆ ನೆಹರೂ ಅವರನ್ನೂ ಹೀಗೆಯೇ ನಿರಾಕರಿಸಲಾಗುತ್ತಿದೆ. ಇಲ್ಲಿ ಕಾಣುವ ಸಮಾನ ಅಂಶ ಎಂದರೆ ಎಲ್ಲರ ವಿಚಾರದಲ್ಲೂ ಪ್ರಧಾನವಾಗಿ ಉಲ್ಲೇಖಿಸುವುದು ಮಹಿಳೆಯರೊಡಗಿನ ಸಂಬಂಧ ಅಥವಾ ವೈವಾಹಿಕ ಬದುಕು.
ಅಂದರೆ ಮಹಿಳೆಯೇ ಪುರುಷನ ಚಾರಿತ್ರ್ಯ ರೂಪಿಸುವ ಕೇಂದ್ರ ಬಿಂದುವಾಗಿ ಕಂಡುಬರುತ್ತಾಳೆ. ಇದು ಒಂದು ರೀತಿಯಲ್ಲಿ ಭಾರತದ ಪುರುಷ ಪ್ರಧಾನ ಮನಸ್ಥಿತಿಯ ದ್ಯೋತಕ ಎಂದರೂ ಅಡ್ಡಿಯಿಲ್ಲ.
ಇನ್ನು ಶಿಕ್ಷಕರ ದಿನಾಚರಣೆ ರಾಧಾಕೃಷ್ಣನ್ ಹೆಸರಿನಲ್ಲೇ ಏಕೆ ಆಚರಿಸುತ್ತೇವೆ ಎಂಬ ಮೌಲಿಕ ಪ್ರಶ್ನೆಯೂ ಉದ್ಭವಿಸುತ್ತದೆ. ರಾಧಾಕೃಷ್ಣನ್ ಶಿಕ್ಷಕರಿಗಾಗಿ ಏನು ಮಾಡಿದ್ದಾರೆ ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ಇದನ್ನು ನಾವು ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವುದಕ್ಕಿಂತಲೂ ಚಾರಿತ್ರಿಕ ನೆಲೆಯಲ್ಲೇ ನೋಡಬೇಕಾಗುತ್ತದೆ. ಆಧುನಿಕ ಜಗತ್ತು ಆಚರಿಸುತ್ತಿರುವ ಎಲ್ಲ ದಿನಾಚರಣೆಗಳಿಗೂ ಇತಿಹಾಸ ಕಾಲಘಟ್ಟದ ಕೆಲವು ಘಟನೆಗಳು, ಹಲವು ವ್ಯಕ್ತಿಗಳು ಕಾರಣರಾಗಿದ್ದಾರೆ.
ಈ ಆಚರಣೆಗಳನ್ನು ನಿರ್ಧರಿಸುವುದು ಒಂದು ಸಮಾಜದ ಅಥವಾ ಒಂದು ದೇಶದ ಪ್ರಬಲ ವರ್ಗಗಳನ್ನೊಳಗೊಂಡ ಆಡಳಿತ ವ್ಯವಸ್ಥೆ ಅಥವಾ ಸಮಾಜೋ ಸಾಂಸ್ಕೃಂತಿಕ ಚೌಕಟ್ಟು ಅಲ್ಲವೇ ? ಹಿಂದೆಂದೂ ಕೇಳರಿಯದ ಎಷ್ಟೋ ಜಯಂತಿಗಳು ಇತ್ತೀಚಿನ ಹಲವು ದಶಕಗಳಲ್ಲಿ ಹುಟ್ಟಿಕೊಂಡಿರುವುದನ್ನೂ ಕಂಡಿದ್ದೇವೆ. ಈ ಎಲ್ಲ ಆಚರಣೆ ಮತ್ತು ಜಯಂತಿಗಳ ಹಿಂದೆ ಪ್ರಬಲ ವರ್ಗಗಳಿರುತ್ತವೆ.
ಆಳುವ ವರ್ಗಗಳು ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ಇದೇ ಪ್ರಬಲ ಸಮುದಾಯಗಳೇ ಪ್ರಭಾವ ಬೀರುತ್ತವೆ. ಹಾಗಾಗಿಯೇ ಭಾರತದಲ್ಲಿ ಜ್ಯೋತಿಬಾ ಫುಲೆ ಶೈಕ್ಷಣಿಕ ಪಿತಾಮಹ ಎನಿಸಿಕೊಳ್ಳುವುದಿಲ್ಲ. ಭಾರತದಂತಹ ಜಾತಿಪೀಡಿತ ಸಮಾಜದಲ್ಲಿ ಇದು ಅಚ್ಚರಿಯ ವಿಚಾರವೇನಲ್ಲ ಅಲ್ಲವೇ ?
ಹಾಗೆ ನೋಡಿದರೆ ಭಾರತದಂತಹ ಒಕ್ಕೂಟ ವ್ಯವಸ್ಥೆಯ, ಬಹುಸಂಸ್ಕೃಂತಿಯ ನಾಡಿನಲ್ಲಿ ಪ್ರತಿಯೊಂದು ಪ್ರಾಂತ್ಯದಲ್ಲೂ ಇಂತಹ ಪ್ರಾತಃಸ್ಮರಣೀಯರು ಕಂಡುಬರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಕುದ್ಮಲ್ ರಂಗರಾವ್ ಇಂಥವರಲ್ಲಿ ಒಬ್ಬರು. ಅಧಿಕೃತವಾಗಿ ಗಾಂಧೀಜಿ ಸತ್ತ ದಿನವನ್ನು ಹುತಾತ್ಮ ದಿನ ಎಂದು ಆಚರಿಸುತ್ತೇವೆ. ಆದರೆ ಅವರಿಗಿಂತಲೂ ಮುಂಚೆ ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮನಾದವ ಭಗತ್ ಸಿಂಗ್ ಅಲ್ಲವೇ.

ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವಕರ ದಿನಾಚರಣೆ ಎನ್ನಲಾಗುತ್ತದೆ. ವಿವೇಕಾನಂದರಿಗಿಂತಲೂ ಮುನ್ನ ಯುವಪೀಳಿಗೆಗೆ ಮಾರ್ಗದರ್ಶನ ನೀಡಿದ ಹಲವಾರು ಮಹನೀಯರು ನಮ್ಮೊಡನಿದ್ದಾರೆ. ಇಂತಹ ನಿದರ್ಶನಗಳನ್ನು ಹೇರಳವಾಗಿ ಉದ್ಧರಿಸಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ಒಂದು ದೇಶದ ಆಡಳಿತ ವ್ಯವಸ್ಥೆಯಲ್ಲಿ ನಿರ್ಧರಿಸಲಾಗುವ ಜನ್ಮ ದಿನಾಚರಣೆ, ಜಯಂತಿ ಮತ್ತು ಪುಣ್ಯತಿಥಿಗಳು ಆ ದೇಶದ ಸಮಾಜೋ ಸಾಂಸ್ಕೃಂತಿಕ ವ್ಯವಸ್ಥೆಗೆ ದಿಕ್ಸೂಚಿಯಾಗಿ ಕಾಣುತ್ತದೆ.
ಭಾರತದಂತಹ ಜಾತಿಪೀಡಿತ ಸಮಾಜದಲ್ಲಿ ಇದು ಕೆಲವೊಮ್ಮೆ ಅಪಭ್ರಂಶಗಳನ್ನೂ ಸೃಷ್ಟಿಸುತ್ತದೆ. ಮಾರಣಾಂತಿಕ ಯುದ್ಧಪರಂಪರೆಯನ್ನು ಪೋಷಿಸುವ ಘಟನೆಯನ್ನು ಶೌರ್ಯ ದಿನ ಎಂದೂ ಆಚರಿಸುತ್ತೇವೆ. ಇಲ್ಲಿ ಶೌರ್ಯ ಎಂಬ ಪದದ ಸಂಕುಚಿತತೆಯನ್ನೂ ಕಾಣಬಹುದಲ್ಲವೇ.
ಹಾಗಾಗಿ ನಾವು ಆಚರಿಸುವ ದಿನಾಚರಣೆಗಳ ಹಿಂದಿನ ಆಶಯಗಳನ್ನಷ್ಟೇ ಗಂಭೀರವಾಗಿ ಪರಿಗಣಿಸುವುದು ಒಳಿತು ಎನಿಸುತ್ತದೆ. ಇಲ್ಲದಿದ್ದಲ್ಲಿ ಕೂದಲು ಸೀಳುವ ವಾಗ್ವಾದಗಳಲ್ಲೇ ನಮ್ಮ ಆಶಯಗಳನ್ನೂ ಮರೆಯುತ್ತೇವೆ. ಶಿಕ್ಷಕರ ದಿನಾಚರಣೆಯಂದು ರಾಧಾಕೃಷ್ಣನ್ ಅವರನ್ನು ಸ್ಮರಿಸುವುದಕ್ಕಿಂತಲೂ ಹೆಚ್ಚಾಗಿ ದುರಿತ ಕಾಲದಲ್ಲಿ ಶಿಕ್ಷಕರ ಬವಣೆ ಮತ್ತು ಅವರ ಹೊಣೆಗಾರಿಕೆಯ ಬಗ್ಗೆ ಹೆಚ್ಚು ಆಳವಾಗಿ ಚಿಂತಿಸಬೇಕಿದೆ.
ಇಲ್ಲಿ ಜ್ಯೋತಿಬಾ ಫುಲೆ, ಸಾವಿತ್ರಬಾಯಿ ಫುಲೆ, ಕುದ್ಮಲ್ ರಂಗರಾವ್, ಶಾಹು ಮಹರಾಜ್, ಪೆರಿಯಾರ್, ಅಂಬೇಡ್ಕರ್, ವೆಂಕಟಕೃಷ್ಣ ಐಯ್ಯರ್ ಹೀಗೆ ಶೋಷಿತರ ಶಿಕ್ಷಣಕ್ಕೆ ಒತ್ತು ನೀಡಿದ ಹಲವಾರು ಪ್ರಾತಃಸ್ಮರಣೀಯರನ್ನು ನೆನೆಯುವ ವ್ಯವಧಾನ ಮತ್ತು ವಿಶಾಲ ಮನೋಭಾವವೂ ನಮ್ಮಲ್ಲಿರುವುದು ಅಗತ್ಯ. ಇಲ್ಲವಾದಲ್ಲಿ ಎಲ್ಲವೂ ಆಚರಣೆಗಳಲ್ಲೇ ಮುಗಿದು ಹೋಗಿ ನಮ್ಮ ಮುನ್ನಡೆಗೇ ಅಡ್ಡಿಯಾಗುವ ಸಾಧ್ಯತೆಗಳೇ ಹೆಚ್ಚು.
ಡಾ.ರಾಧಾಕೃಷ್ಣನ್ ಅವರ ವ್ಯಕ್ತಿತ್ವ ಮತ್ತು ವಿದ್ವತ್ತಿಗೆ ಮನ್ನಣೆ ನೀಡುತ್ತಲೇ ಅವರ ಆದರ್ಶಗಳು ಹೇಗೆ ಇಂದಿನ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುತ್ತದೆ ಎಂದು ಯೋಚಿಸುವುದು ಒಳಿತು. ಅದಕ್ಕಿಂತಲೂ ಮುಖ್ಯವಾಗಿ ಮಾರುಕಟ್ಟೆಯ ಸರಕಿನಂತಾಗಿರುವ ಶಿಕ್ಷಣ ಈ ಮಹನೀಯರ ಆದರ್ಶಗಳಿಗೆ ನಿಲುಕುವುದೇ ಎಂದು ಯೋಚಿಸುವುದೂ ಮುಖ್ಯ.






0 Comments