ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವ್ಯಂಗ್ಯಚಿತ್ರಕಾರ ಎಸ್ ಎಸ್ ಆನಂದ್ ಇನ್ನಿಲ್ಲ..

-ಕೆ ಆರ್ ಸ್ವಾಮಿ


_
ತನ್ನ ದೇ ಆದ ವಿಶಿಷ್ಟ ಶೈಲಿಯಲ್ಲಿ ಉತ್ಪ್ರೇಕ್ಷಿತ ಚಿತ್ರಗಳನ್ನು ರೂಪಿಸಿ, ಅದಕ್ಕೊಂದು ಅರ್ಥಪೂರ್ಣ ಅಡಿಬರಹ ಸೇರಿಸಿ , ಅದನ್ನು ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ ವ್ಯಂಗ್ಯಚಿತ್ರಕಾರ ಸವಣೂರು ಶಿವಾನಂದ್ ಇನ್ನಿಲ್ಲ.


ಹವ್ಯಾಸೀ ವ್ಯಂಗ್ಯಚಿತ್ರಕಾರಾಗಿದ್ದರೂ ಕೂಡಾ ಸುಮಾರು ಹದಿನೆಂಟು ವರ್ಷಗಳ ಸುಧೀರ್ಘ ಕಾಲ ದಾವಣಗೆರೆ ಸ್ಥಳೀಯ ಪತ್ರಿಕೆ ‘ ಜನತಾ ವಾಣಿ ‘ ಯಲ್ಲಿ ಇವರ ದೈನಂದಿಕ ಕಾಲಂ ‘ ಮಂಡಕ್ಕಿ ಮೆಣಸಿನ ಕಾಯಿ’ ಪ್ರಕಟಗೊಳ್ಳುತ್ತಿದ್ದುದು ಇವರ ಖ್ಯಾತಿ. ಪ್ರಚಾರ ಬಯಸದ ಇವರು ಎಲೆ ಮರೆಯ ಕಾಯಿಯಂತೆ
ಇದ್ದುಬಿಟ್ಟರು.

ಇದುವರೆಗೆ ನೂರಾರು ವ್ಯಂಗ್ಯ ಚಿತ್ರಕಾರರ ಸ್ನೇಹ ಸಂಪರ್ಕದಲ್ಲಿದ್ದರೂ ಹೃದಯದ ಒಳಹೊಕ್ಕ ಕೆಲವೇ ವ್ಯಕ್ತಿಗಳಲ್ಲಿ ಇವರೊಬ್ಬರು.
ನನ್ನ ಇಂಜಿನೀಯರಿಂಗ್ ಕಾಲೇಜು ವ್ಯಾಸಂಗ ಮುಗಿದ ತಕ್ಷಣ ಕಮಕೋಡಿನ ನಮ್ಮ ಮನೆಗೆ ಸ್ವತಃ ಬಂದು ಪರಿಚಯಿಸಿಕೊಂಡ ನಂತರ ಅವರು ನಮ್ಮಿಂದ ದೂರ ಹೋಗಲೇ ಇಲ್ಲ.

ನಾನು ಶಿವಮೊಗ್ಗ ಕೆ.ಇ.ಬಿ. ಯಲ್ಲಿ ಕೆಲಸ ಮಾಡುತ್ತಿದ್ದಾಗ ಆನಂದ್ ಅವರು ಸಾಗರದಲ್ಲಿ ವ್ಯವಸಾಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.ಅದೇ ಸಮಯದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಎಸ್.ಕೆ.ನಾಡಿಗ್ ಅವರು ಭದ್ರಾವತಿಯ ಪೇಪರ್ ಮಿಲ್ಸ್ ನಲ್ಲಿ ಅಕೌಂಟ್ಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದರು.ನಮ್ಮ ಮೂವರ ಸಮಾಗಮ ಆಗಾಗ ಆಗುತ್ತಿತ್ತು. ನಮ್ಮ ಚರ್ಚೆ ಸದಾ ಕಾರ್ಟೂನ್ ಬಗ್ಗೆಯೇ ಇರುತ್ತಿತ್ತು.

ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘಟನೆಯ ಬಗ್ಗೆ ಆನಂದ್ ಅವರ ಸಹಕಾರ ಮರೆಯುವಂತೆಯೇ ಇಲ್ಲ. ನಾಡಿಗ್ ಅವರದ್ದು ಮೆದುಮಾತು.ಆನಂದ್ ಅವರದ್ದು ವ್ಯಂಗ್ಯ ಚಿತ್ರಗಳ ಬಗ್ಗೆ ಕಟು ವಿಮರ್ಶೆ ಮಾಡುವ ಖಡಕ್ ಮಾತು.ನಿಷ್ಟುರ ಸತ್ಯವಾದಿ. ಆನಂದ್ ಅವರದ್ದು ಕೇವಲ ‘ವ್ಯಂಗ್ಯ ಚಿತ್ರ ‘ ಮಾತ್ರ ಹವ್ಯಾಸವಲ್ಲ. ‘ಗಾರ್ಡನ್ ನರ್ಸರಿ ‘ ಅವರ ಇನ್ನೊಂದು ಹವ್ಯಾಸ. ಎರಡೂ ಹವ್ಯಾಸಗಳನ್ನು ಒಟ್ಟಿಗೇ ನಡೆಸುವ ಸಲುವಾಗಿ ಅವರು ವ್ಯವಸಾಯ ಅಧಿಕಾರಿ ವೃತ್ತಿಗೆ ಸ್ವಯಂ ನಿವೃತ್ತಿ ಘೋಷಿಸಿ ದಾವಣಗೆರೆಯ ಅವರು ಸ್ವಂತ ಮನೆಯ ಆವರಣದಲ್ಲಿ ‘ ಪ್ರಕೃತಿ ಹಾರ್ಟಿಕಲ್ಚರ್ ನರ್ಸರಿ’ ಸ್ಥಾಪಿಸಿ
ಜೊತೆಗೆ ವ್ಯಂಗ್ಯ ಚಿತ್ರಗಳ ಬರವಣಿಗೆಯನ್ನೂ ಮುಂದುವರೆಸಿದ್ದರು.

ಆದರೆ ವಿಧಿಯಾಟ….. ಆರೋಗ್ಯ ಭಾಗ್ಯ ಸಿಗಲಿಲ್ಲ. ಸುಮಾರು ಹತ್ತು ವರುಷಗಳ ಕಾಲ ಅನುಭವಿಸಿದರು. ಬರವಣಿಗೆಯೂ ಸಾಧ್ಯವಾಗಲಿಲ್ಲ.
ಈ ನಡುವೆ ನಾನು ಒಂದೆರಡು ಬಾರಿ ದಾವಣಗೆರೆಗೆ ಹೋಗಿ ದ್ದಾಗ ಅವರನ್ನು ಭೇಟಿಯಾಗಿ ಬಂದಿದ್ದೆ. ಮುಂದೆ ಅವರ ಕಿವಿ, ಕಣ್ಣು ಎರಡೂ ದೋಷಪೂರಿತವಾಗಿ ಸಂವಹನ ಕೂಡಾ ಸಾಧ್ಯವಾಗಲೇ ಇಲ್ಲ. ನಿನ್ನೆ ಮಧ್ಯಾಹ್ನ 2 ಗಂಟೆಗೆ ಬಾರದ ಲೋಕಕ್ಕೆ ತೆರಳಿದ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು.

ಇನ್ನು ಕೇವಲ ನೆನಪು ಮಾತ್ರ….. ಅವರ ಕುಟುಂಬಕ್ಕೆ ನೋವು ನುಂಗುವ ಶಕ್ತಿ ಬರಲಿ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ. ವ್ಯಂಗ್ಯಚಿತ್ರಕಾರ ಎಸ್. ಎಸ್. ಆನಂದ್.

‍ಲೇಖಕರು Admin

15 December, 2025

1 Comment

  1. ಎಚ್ ಆನಂದರಾಮ ಶಾಸ್ತ್ರೀ

    ಎಸ್ ಎಸ್ ಆನಂದ್ ಕುರಿತ ಕೆ ಆರ್ ಸ್ವಾಮಿ ಅವರ ಬರಹಕ್ಕೆ ಈ ಪ್ರತಿಕ್ರಿಯೆ:
    ದಾವಣಗೆರೆಯವನೇ ಆದ ನಾನು, ನನ್ನ ತಮ್ಮ ವ್ಯಂಗ್ಯ ಚಿತ್ರಕಾರ ಎಚ್‌ ಬಿ ಮಂಜುನಾಥನೊಡನೆ ಆನಂದರ ಮನೆಗೆ ಹೋಗಿ ಕುಶಲ ಮಾತಾಡಿದ ನೆನಪು ಈ ಬರಹ ಓದಿದಾಗ ಒತ್ತರಿಸಿ ಬಂತು. ನಾನು ಮೆಚ್ಚಿರುವ ಕನ್ನಡದ ಕೆಲವೇ ವ್ಯಂಗ್ಯ ಚಿತ್ರಕಾರರ ಪೈಕಿ ಆನಂದ್ ಕೂಡ ಒಬ್ಬರು.
    ಅಂದಹಾಗೆ, ಹಲವು ದಶಕಗಳ ಹಿಂದೆ ಹುಂಚದಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕವಿಗೋಷ್ಠಿಯ ಆಹ್ವಾನಿತ ಕವಿಯಾಗಿ ಹೋಗಿದ್ದ ನಾನು ಅಲ್ಲಿಗೆ ಬಂದಿದ್ದ ಕೆ ಆರ್ ಸ್ವಾಮಿ ಅವರೊಡನೆ ಮಾತನಾಡಿದ್ದು, ಅನಂತರ ಮತ್ತೊಮ್ಮೆ ನನ್ನ ತಮ್ಮನೊಡನೆ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿದ್ದು ಕೂಡ ನೆನಪಾದವು.
    ನಾಡಿಗ್ ಅವರು ದಾವಣಗೆರೆಯ ನಮ್ಮ ಫೋಟೋ ಸ್ಟುಡಿಯೋಕ್ಕೆ ಬಂದು ನಮ್ಮೊಡನೆ ಮಾತನಾಡಿದ್ದು ಕೂಡ ನೆನಪಾಯಿತು.
    ಇವರೆಲ್ಲರೂ ನನ್ನ ಮೆಚ್ಚಿನ ವ್ಯಂಗ್ಯ ಚಿತ್ರಕಾರರೇ.
    ನೆನಪುಗಳ ಬುತ್ತಿ ಬಿಡಿಸಿಕೊಟ್ಟದ್ದಕ್ಕಾಗಿ, ಕಾರ್ಟೂನ್ ಬಿಡಿಸುವ ಕೆ ಆರ್ ಸ್ವಾಮಿ ಅವರಿಗೆ ಧನ್ಯವಾದ.
    – ಎಚ್ ಆನಂದರಾಮ ಶಾಸ್ತ್ರೀ
    ಹಾಸ್ಯ ಸಾಹಿತಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading