ಕರ್ನಾಟಕ ಪ್ರಕಾಶಕರ ಸಂಘವು ಪ್ರತಿ ವರ್ಷದಂತೆ ನೀಡುವ ಶ್ರೀ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಸಾಗರದ ವೈ. ಎ. ದಂತಿ (ರವೀಂದ್ರ ಪುಸ್ತಕಾಲಯ) ಆಯ್ಕೆ ಮಾಡಲಾಗಿದ್ದು ಹಾಗೆಯೇ ನಂಜನಗೂಡು ತಿರುಮಲಾಂಬ ಪ್ರಶಸ್ತಿಗೆ ಶ್ರೀಮತಿ ವಿಶಾಲಾಕ್ಷೀ ಶರ್ಮ (ಭೂಮಿ ಬುಕ್ಸ್) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ ೧೫೦೦೦.೦೦ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ದಿನಾಂಕ ೨೩.೪.೨೦೨೩ರ (ವಿಶ್ವ ಪುಸ್ತಕ ದಿನ) ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಶ್ರೀ ವೈ. ಎ. ದಂತಿ : ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರಾದ ವೈ. ಎ. ದಂತಿ ಅವರು ೧೯೫೮ರಲ್ಲಿ ಸಾಗರದ ಕಾರ್ಗಲ್ಗೆ ಬಂದು, ೧೯೬೫ರಲ್ಲಿ ಸಾಗರದಲ್ಲಿ ‘ರವೀಂದ್ರ ಪುಸ್ತಕಾಲಯ’ವನ್ನು ಆರಂಭಿಸಿದರು. ಸದಬಿರುಚಿಯ ಪುಸ್ತಕ ಪ್ರಕಟಣೆ, ವಿತರಣೆ, ಮಾರಾಟ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಕನ್ನಡದ ಸಾಂಸ್ಕೃತಿಕ ಚಹರೆಗಳನ್ನು ವಿಸ್ತರಿಸಿದರು. ಶಿವರಾಮ ಕಾರಂತ, ಎಂ. ಕೆ. ಇಂದಿರಾ, ಹೊಸ್ತೋಟ ಮಂಜುನಾಥ ಭಾಗವತ, ಹಾ.ಮಾ. ನಾಯಕ, ನಾ. ಡಿಸೋಜ, ವೀಣಾ ಬನ್ನಂಜೆ ಮುಂತಾದ ಅನೇಕ ಹಿರಿ ಕಿರಿಯ ಲೇಖಕರ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ ರವೀಂದ್ರ ಪುಸ್ತಕಾಲಯದ್ದು. ಇವರ ಸೇವೆಯನ್ನು ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. ಈಗ ಕರ್ನಾಟಕ ಪ್ರಕಾಶಕರ ಸಂಘವು ೨೦೨೩ನೆಯ ಸಾಲಿನ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ಯನ್ನು ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ ೧೫,೦೦೦.೦೦ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಶ್ರೀಮತಿ ವಿಶಾಲಾಕ್ಷೀ ಶರ್ಮ : ಹುಟ್ಟಿದ್ದು ೨೬..೧೦.೧೯೫೩ ಉತ್ತರ ಕನ್ನಡ ಜಿಲ್ಲೆಯ ಬಕ್ಕೆಮನೆಯಲ್ಲಿ. ಎಸ್‌ಎಸ್‌ಎಲ್ಸಿವರೆವಿಗೆ ವಿದ್ಯಾಭ್ಯಾಸ. ಓದು. ಕಾವ್ಯರಚನೆ, ಕೃಷಿ. ಅಡುಗೆ. ಹೊಲಿಗೆ ಮುಂತಾದವುಗಳಲ್ಲಿ ಆಸಕ್ತರಾದ ಇವರು. ಭೂಮಿ ಬುಕ್ಸ್ ಎಂಬ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ವಿಜ್ಞಾನ, ಸಮಾಜಶಾಸ್ತ್ರ, ಕೃಷಿ, ಅಭಿವೃದ್ಧಿ ಮೀಮಾಂಸೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ೪೦ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪ್ರತಿಯೊಂದು ಪುಸ್ತಕ ಪ್ರಕಟವಾದಾಗಲೂ ಒಂದೊದು ಮರ ನೆಟ್ಟು ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಕ್ರಿಯಾಶೀಲವಾಗಿ ಪಾಲಿಸುತ್ತಾ ಬಂದಿರುವ ವಿಶಿಷ್ಟ ಪ್ರಕಾಶನ ಸಂಸ್ಥೆ ಇದಾಗಿದೆ. ನಾಗೇಶ್ ಹೆಗಡೆ, ಕೊಳ್ಳೆಗಾಲ ಶರ್ಮ, ಅನಿತಾ ಪೈಲೂರ್, ಮಲ್ಲಿಕಾರ್ಜುನ ಹೊಸಪಾಳ್ಯ, ಆನಂದತೀರ್ಥ ಪ್ಯಾಟಿ, ಗುರುರಾಜ್ ದಾವಣೆಗೆರೆ, ಅಖಿಲೇಷ್ ಚಿಪ್ಪಳಿ, ಶರಣ ಬಸವೇಶವರ ಅಂಗಡಿ ಮುಂತಾದವರ ಕೃತಿಗಳನ್ನು ಪ್ರಕಟಿಸಿದ್ದಾರೆ. ಈಗ ಕರ್ನಾಟಕ ಪ್ರಕಾಶಕರ ಸಂಘವು ೨೦೨೩ನೆಯ ಸಾಲಿನ ನಂಜನಗೂಡು ತಿರುಮಲಾಂಬ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ ೧೫,೦೦೦.೦೦ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ದಯಮಾಡಿ ಈ ಪತ್ರಿಕಾ ಪ್ರಕಟಣೆಯನ್ನು ತಮ್ಮ ಮಾಧ್ಯಮದಲ್ಲಿ ರಾಜ್ಯಮಟ್ಟದ ಸುದ್ದಿಯಾಗಿ ಪ್ರಕಟಿಸಿ ಪುಸ್ತಕೋದ್ಯಮವನ್ನು ಪ್ರೋತ್ಸಾಹಿಸಲು ಈ ಮೂಲಕ ಕೋರುತ್ತೇವೆ.
ಸೃಷ್ಟಿ ನಾಗೇಶ್ (ಜಂಟಿ ಕಾರ್ಯದರ್ಶಿ, ಕರ್ನಾಟಕ ಪ್ರಕಾಶಕರ ಸಂಘ.)






0 Comments