ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿ ಮೆಚ್ಚಿದ ಪೂರ್ಣಿಮಾ ಸುರೇಶ್ ಅವರ ‘ಮಧ್ಯಮಾವತಿ’

ಪೂರ್ಣಿಮಾ ಸುರೇಶ್ ಅವರ ಹೊಸ ಕವಿತಾ ಸಂಕಲನ ‘ಮಧ್ಯಮಾವತಿ’ ಈ ಭಾನುವಾರ – ೧೩ ರಂದು ಬೆಳಗ್ಗೆ ೧೦ ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ವಿಕಾಸ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಖ್ಯಾತ ಲೇಖಕಿ ವೈದೇಹಿ ಬರೆದಿರುವ ಮುನ್ನುಡಿ ಇಲ್ಲಿದೆ.

ವೈದೇಹಿ

ಗದ್ಯ ಪದ್ಯಗಳೆರಡರಲ್ಲಿಯೂ ಬರೆವ ಆಸಕ್ತಿಯ ಲೇಖಕಿ ಪೂರ್ಣಿಮಾ ಸುರೇಶ್ ಪ್ರಸ್ತುತ ಈ ಪದ್ಯ ಸಂಗ್ರಹದಲ್ಲಿ ತನ್ನ ‘ಸಾಧನೆಯು ಸಫಲತೆ ಕಡೆಗೆ’ ಸಾಗುವ ದಾರಿಯನ್ನು ಕಂಡುಕೊಳ್ಳುತಿದ್ದಾಳೆ. ಇಲ್ಲಿರುವುದು ಅಂತರಂಗದಲ್ಲಿನ ತರಂಗಗಳು. ಈ ತರಂಗಗಳಲ್ಲಿ ಈಸಾಡುವ ರಾಶಿ ಮೀನುಗಳಲ್ಲಿ ಕವಿ ಪೂರ್ಣಿಮಾ ತನ್ನ ಗಾಳಕ್ಕೆ ಸಿಲುಕಿದಷ್ಟನ್ನು ಹಿಡಿದು ಇಲ್ಲಿ ಕಲೆ ಹಾಕಿರುವಳು. ಏನೆಂದರೆ ಇವು ದಡಕ್ಕೆ ಬಂದೂ ಮರಣಿಸದ ಜೀವನದಿಯ ಮತ್ಸ್ಯ ವಿಶೇಷಗಳು. ಎಂತಲೇ ಇಲ್ಲಿ ಹೊಸರೂಪ ರೂಪಕಗಳಲ್ಲಿ ಕಣ್ಮಿಂಚುತ್ತಿರುವವು.

ಇದಕ್ಕೆ ಕೆಲ ಉದಾಹರಣೆಗಳು ಇಲ್ಲಿಯೇ ಸಿಗುತ್ತವೆ. ಉದಾ: ‘ಒಳಕೋಣೆಗೆ ನೊಣ ನುಗ್ಗಿದೆ’ ಎಂಬ ಕವನ ನೋಡಿ. ನೊಣ ಎಂಬ ಶಬ್ದವೇ ಹೀಕರಿಕೆ ಬರಿಸುವಂಥದು. ಅಂಥಲ್ಲಿ ಕವನದ ಉದ್ದಕ್ಕೂ ಅತಿಕ್ರಮಿಸಿಕೊಂಡು ಒಳ ಬಂದಿರುವ ಒಂದು ಯಃಕಶ್ಚಿತ್ ನೊಣ, ಅದರ ನಡೆನುಡಿ ಅಧಿಕಪ್ರಸಂಗ ಇತ್ಯಾದಿಗಳ ಕುರಿತು ದೂರುಧ್ವನಿಯಲ್ಲಿ ಸಿಡಿಗುಡುತ್ತಾ ಅದರ ಮರೆಯಲ್ಲಿ ಕವಿ ಯಾವ ಅಥವಾ ಯಾರ ಕುರಿತೋ ತನ್ನಾಳದಲ್ಲಿ ನೆಲೆಯೂರಿಕೊಂಡಿರುವ ಹೇವರಿಕೆಗಳನ್ನು ಹೆಕ್ಕಿ ಒಂದೊಂದನ್ನೇ ಹೊರಹಾಕುತ್ತಾಳೆ.

ಹೀಗೆ ಅವುಗಳಿಂದ ಬಿಡುಗಡೆ ಬಯಸುತ್ತಾಳೆ. ಕವನ ಬಿಡುಗಡೆಯ ಮಾರ್ಗವಾಗಿ ಸಂಭವಿಸುವುದು ಇಂಥಲ್ಲಿಯೇ. ಹೇಳಬೇಕು ಆದರೆ ಹೇಳಲಾರೆ ಎನ್ನುವಂಥ ಅನೇಕವು ಕೊನೆಗೂ ಹೇಳದೆ ಇರಲಾರೆ ಎಂಬಲ್ಲಿಗೆ ಬಂದು ತಲುಪಿದಾಗ ಕವಿಯಿಂದ ತಪ್ಪಿಸಿಕೊಳ್ಳಲಾರದೆ ಶಬ್ದಚಿಮಟಿಗೆ ಸಿಲುಕಿ ತಂತಾನೇ ಹೊರಬೀಳುವ ಜಾದೂ ಮಾರ್ಗವಿದು. ಇಂಥವು ಈ ಸಂಕಲನದ ಉದ್ದಕ್ಕೂ ಅನೇಕವಿವೆ.

‘ಅನೂಹ್ಯ ವಿಸ್ಮಯ’ ಕವಿತೆಯಲ್ಲಿಯೂ ಇಂಥದೊಂದು ಗೂಢ ಮಾರ್ಗವಿದೆ.
ಏನದು ಅನೂಹ್ಯ? ಇದ್ದರೂ ಸತ್ತಂತೆಯೇ? ನಿಜವಾದ ಸಾವೆ? ಸ್ವತಃ ಸಾವನ್ನು ನಾವೇ ನೋಡುತ್ತಿರುವುದೇ? ನಿಗಿನಿಗಿಯಾಗಿ ಬದುಕಬೇಕಾದ ಎಲ್ಲ ಇದ್ದೂ ಸತ್ತಂತೆ ಬದುಕುವ ಕುವಿಸ್ಮಯವೇ ? ಊಹನೆಗೆ ಮೀರಿದ ಹಲವಿರುವವಲ್ಲ. ಗೋಚರವಾಗಬೇಕಾದರೆ ಇರುವುದನು ಮರೆತು ಇಲ್ಲದಿರುವೆಡೆಗೆ ಕಣ್ತೆರೆಯಬೇಕು. ಇಲ್ಲದಿರುವೆಡೆ ಇರುವ ಇರುವುದನು ಊಹಿಸುವ ವಿಸ್ಮಯಕ್ಕೆ ತೆರೆದುಕೊಳ್ಳಬೇಕು.
ಕವಿ-
ನೀವೂ ಈ ಅನೂಹ್ಯ ವಿಸ್ಮಯಕ್ಕೆ
ತೆರೆದುಕೊಳ್ಳುವಿರಾದರೆ
ಈ ಬಾಗಿಲು ಮುಚ್ಚಿ,
ಆ ಬಾಗಿಲು ತೆರೆದು ಬಿಡಿ
ಎನ್ನುತ್ತಾಳೆ.

ಬಾಗಿಲು, ದೇವರು, ದೇವಸ್ಥಾನ, ಪೂಜೆ ಇತ್ಯಾದಿ ಪೂರ್ಣಿಮಾ ಅವರ ನೆಚ್ಚಿನ ಕವಿತಾವಸ್ತುಗಳು ಎಂಬುದು ಈ ಸಂಕಲನದಲ್ಲಿ ಎದ್ದು ಕಾಣುತ್ತ್ತಿದೆ. ಮಾದರಿಯಾಗಿ ‘ಒಂದು ದೀರ್ಘಮೌನದ ನಡುವೆ’ ಪದ್ಯ ಕೊರೊನಾಕ್ಕೆ ಪ್ರತಿಕ್ರಿಯೆಯೂ ಇರಬಹುದು. ಹಾಗೆಂದರೆ ಹಾಗೆ, ಅಲ್ಲ ಎಂದರೆ ಹಾಗೇನೂ ಅಲ್ಲವೂ. ಆದರೆ ಕವನ ಮುಂದರಿದಂತೆ ಹೊರಟ ಗುರಿಯಿಂದ ಆಚೆಗೆ ನೆಗೆದು, ದೇವರ ಜೊತೆ ಸಂಭಾಷಣೆಗೆ ಮತ್ತು ನಿವೇದನೆಗೆ ಜಾರಿಕೊಳ್ಳುವ ರೀತಿ ಆಕರ್ಷಕವಾಗಿದೆ.

ಪ್ರಾರ್ಥನೆಯ ಹಸೆ ಬರೆವೆ, ಜೀವದಂಡೆಯನು ಮುಡಿಸುವೆ
ಭಾವ ತೋರಣ ತೊಡಿಸುವೆ, ಪ್ರಾಣ ದೀಪವ ಹಚ್ಚಿಡುವೆ
ಕಣ್ಣ ಹನಿಗಳ ಎರಕ ಹೊಯ್ಯವೆ, ನಾಲಗೆ ತೋರು
ನನ್ನ ಹೆಸರನು ಬರೆದು ಬಿಡುವೆ
ಇದೀಗ ಆತ್ಮ ಪ್ರತಿಷ್ಠಾಪನೆ
ಹೊರಬಾಗಿಲು ಮುಚ್ಚಿರಲಿ, ಒಳಬಾಗಿಲು ತೆರೆದಿರಲಿ
ದೇವರೇ, ದಾಸಿ ಪಾದದ ಬಳಿ
ನಿನ್ನ ಪಾದದಾಣೆಗೂ ಇವಳು ನಿನ್ನವಳು
ಹೀಗೆ ಅಂತ್ಯದಲ್ಲಿ ಪದ್ಯವು ಸಮರ್ಪಣಾ ಭಾವಕ್ಕೆ ಬಂದು ಅಲ್ಲಿಗೇ ಗಕ್ಕಂತ ನಿಲ್ಲುತ್ತದೆ. ಅಂತೂ ಅದು ಅನುದ್ದೇಶಪೂರ್ವಕ ಬಂದು ತಲುಪಿದ್ದು ಮತ್ತೆ ಒಳಬಾಗಿಲನು ತೆರೆವ ಆಶಯದ ಬಳಿ. ಒಳಬಾಗಿಲೊಳಗೆ ಇರಬಹುದಾದ ಇಷ್ಟದೇವರ ಬಳಿ…ತನ್ನ ಸಂಪೂರ್ಣ ಸಮರ್ಪಣೆಯಲ್ಲಿ! ‘ಪಾತ್ರ ಪರಿಚಯ’ ಕವನದಲ್ಲಿನ
ಜಗವಿದು ಮಾಯೆ ಎನ್ನುವಿಯಾ?
ಈ ಸೆಳೆತ
ಅರಿವಿಗೆ ಸಿಲುಕದ
ಅಧ್ಯಾತ್ಮ
ಎನ್ನುವ ಸಶಕ್ತ ಹೆಣ್ದನಿಯಲ್ಲಿ. ಮನೋಮುದ್ರೆಯೊತ್ತಿದಂತೆ ಪಾತ್ರಪರಿಚಯವನ್ನು ವಿಶಿಷ್ಟ ಬಗೆಯಲ್ಲಿ ಮಾಡಿ ಮುಗಿಸುವಲ್ಲಿ.
ಯಾರೋ ಅಡಗಿರುವಂತೆ,
ಇಲ್ಲ ಹಾಗೇ ಹೊರಹೋದಂತೆ
ಅವರು ಹೊರಹೋದರೇ
ಒಳಗೇ ಇರುವರೇ
ಮತ್ತೆ ಬಾಗಿಲನ್ನೇನು ಮಾಡಲಿ? –(ಗೀಳು)
ಎಂದಂತೆ ಬಾಗಿಲೆಂಬುದೇ ಒಂದು ದೊಡ್ಡ ಚಿಂತೆ. ಅದು ಇದ್ದರೂ ಇಲ್ಲದಿದ್ದರೂ? ತಡೆಯುವುದೂ ಅದುವೇ, ತೆರೆದು ತೋರುವುದೂ ಅದುವೇ. ಎಚ್ಚರಗೊಳಿಸುವುದೂ, ನಿಶ್ಚಿಂತೆ ಹೊದಿಸುವುದೂ ಬಾಗಿಲೇ. ತನ್ನ ತೆರೆದುಕೊಳ್ಳುವಿಕೆ ಮತ್ತು ಮುಚ್ಚುವಿಕೆಯಿಂದಲೇ. ಒಳಗೆ ಬಂದವುಗಳು ಬಂದ ಹಾಗೆಯೇ ಇರಬೇಕೆಂಬ ನಿಯಮ ಇದೆಯೇ? ಬಂದ ಮೇಲೆ ಅವುಗಳ ವಿಧಿವಿಧಾನಗಳು ಸ್ವತಂತ್ರವಾಗಿ ಬಿಡುವುದೂ ಇದೆ ತಾನೆ? ಬಾಗಿಲುಗಳೇ ಇಲ್ಲದಿದ್ದರೆ, ಯಾರೂ ಅಡಗುವಂತಿಲ್ಲ, ಹೊರಹೋಗುವಂತೆಯೂ ಇಲ್ಲ, ಒಳ ಬರುವಂತೆಯೂ ಇಲ್ಲ. ಆದರೆ ಇದ್ದೇ ಇರುವ ಬಾಗಿಲನ್ನು ಏನು ಮಾಡಲಿ? ಎನ್ನುವುದು ಒಗಟೋ ವ್ಯಂಗ್ಯವೋ! ಕವಿ ಹೇಳುವುದು ಓದುಗರ ಮನಬಾಗಿಲೊಳಗೆ ಬರುವ ಬಗೆಯಾದರೂ ಏನು? ಹಾಗೆ ಬಂದವುಗಳು ಕವಿ ಕಲ್ಪನೆಗಳನ್ನು ದಾಟಿ ಅಲ್ಲಲ್ಲಿಯೇ ತಳೆಯುವ ತರಾವರಿ ಲಹರಿಗಳಾದರೂ ಆಕೃತಿಗಳಾದರೂ ಏನು!
ಕಳ್ಳಬೆಕ್ಕು, ಋತು, ಮುಕ್ತಿಯ ಹಂಬಲ, ತೊಗಲು ಹರಿದ ಚಪ್ಪಲಿ, ನಿರೀಕ್ಷೆ ಮುಂತಾಗಿ ಇನ್ನೂ ಬಗೆದಂತೆ ಒದಗಿ ಬರುವ ಹಲ ಬಗೆಯ ಕವನಗಳು ಈ ಸಂಕಲನದಲ್ಲಿವೆ.

ಪ್ರೀತಿ ಪ್ರೇಮ, ಯುಗಾಂತರದಿಂದಲೂ ಕೇಳಿ ಬರುತ್ತಿರುವ ಹೆಣ್ಣಿನ ಮರ್ಮಾಂತಿಕ ಯಾತನೆ ಇತ್ಯಾದಿಗಳೂ ಇವೆ. ಸಂವೇದನೆಯಲ್ಲಿ ಹಳತು ಹೊಸತು ಅಂತ ಇದೆಯೇ? ಹಳತು ಹೊಸತುಗಳೆಲ್ಲ ಇರುವುದು ಅವನ್ನು ವ್ಯಕ್ತಪಡಿಸುವ ಶಬ್ಧ ಸಮುಚ್ಚಯದ ಗಂಢಾಂತರಗಳಲ್ಲಷ್ಟೆ? ಅಕ್ಷರಗಳ ಹೊಸಜೋಡಣೆಯಲ್ಲಿ ಇಲ್ಲಿನ ಕೆಲ ಕವನಗಳು ಈಗಷ್ಟೇ ತೇದಿದ ಗಂಧಘಮವನ್ನು ಹೊಂದಿರುವುದು ಈ ಕವಿ ಇನ್ನಷ್ಟು ಬೆಳೆಯುವವಳು ಎಂಬುದರ ಗಾಳಿಯೊಸಗೆಯಾಗಿದೆ.

ಹತ್ತು ವರ್ಷಗಳ ಕೆಳಗೆ ನಾನು ಕಂಡ ಲೇಖಕಿ ಪೂರ್ಣಿಮಾ ಸುರೇಶ ಬೇರೆಯೇ. ಇವತ್ತಿನ ಈ ಕವಿ ಬೇರೆಯೇ. ಈ ಅವಧಿಯಲ್ಲಿ ಪ್ರೌಢವಾಗಿ ಮತ್ತು ಕಾವ್ಯಮೇವದ ನೆಚ್ಚಣಿಕೆಯಲ್ಲಿ ಪೂರ್ಣಿಮಾ ತನ್ನ ಸಾಧನೆಯ ದಾರಿ ಸವೆಸಿದ್ದಾಳೆ. ಅದಕ್ಕೇ ಅನಿಸುವುದು, ಇವು ಸಫಲತೆಯ ಕಡೆಗೆ ಹೊರಟಿರುವ ಪದ ಪರಿಕ್ರಮಗಳು ಎಂದು.

ಕವಿ ಹಾಗೂ ಕಾವ್ಯದ ಕುರಿತು ಬುಡಬೇರನ್ನೆಲ್ಲ ಬಲ್ಲ ವಿದ್ವಾಂಸರಾದ ನಮ್ಮ ತಿರುಮಲೇಶರ ಸಿರಿನುಡಿ ಇದ್ದ ಮೇಲೆ ಇನ್ನು ಬೇರೆ ಮಾತು ಯಾಕೆ ಮತ್ತು ಏನಿದೆ?- ಎಂದು ಎಷ್ಟು ಹೇಳಿದರೂ ಕಿವಿಯ ಮೇಲೇ ಹಾಕಿಕೊಳ್ಳದೆ ಪೂರ್ಣಿಮಾ ನನಗನಿಸಿದ್ದನ್ನು ಹೇಳಲೇ ಬೇಕೆಂದು ಮಗುವಿನಂತೆ ಹಟ ಹಿಡಿದಿದ್ದಾಳೆ. ಅವಳ ಪ್ರೀತಿ ವಿಶ್ವಾಸ ದೊಡ್ಡದು. ಅವಳ ಕಾವ್ಯಪಥ ಎಲ್ಲಿಯೂ ನಿಲ್ಲದೆ ನವನವೀನ ಕಾಣ್ಕೆಯಲ್ಲಿ ಸ-ರಾಗವಾಗಿ ಸಾಗುತ್ತಲೇ ಇರಲೆಂದು ಎಲ್ಲ ಭರವಸೆಯಿಂದ ಕೂಡಿ ಹಾರೈಸುವೆ.

‍ಲೇಖಕರು Admin

11 February, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading