– ಪಿ ಎಸ್ ಕೃಷ್ಣಮೂರ್ತಿ
ಇದ. ಕಾಪಿ ಇಲ್ಲಿ ಮಡಗಿದ್ದೆ. ಮತ್ತೆ. ಆ ಮರ ಕಡಿವ ಅಬ್ದುಲ್ಲ ಮತ್ತೆ ಫೋನ್ ಮಾಡಿದ್ದಾನೆ. ರಂಜನ ಹೇಳ್ತಾ ಇದ್ದ ಬೆಳಗ್ಗೆ. ಬೆಳಗ್ಗಿನ ತೋಟದ ಸುತ್ತಾಟ ಮುಗಿಸಿ ಚಾವಡಿಗೆ ಬಂದು ಕುಳಿತ ವೆಂಕಪ್ಪಜ್ಜನ ಮುಂದೆ ಕಾಫಿ ಇರಿಸುತ್ತಾ ಹೇಳಿದರು ಸಾವಿತ್ರ್ಗಿ. ವೆಂಕಪ್ಪಜ್ಜ ಏನೂ ಮಾತಾಡದೆ ಮೌನವಾಗಿ ಕಾಫಿ ಗ್ಲಾಸು ಕೈಯಲ್ಲಿ ಹಿಡಿದು ಚಿಂತಾಧೀನರಾಗಿ ಕುಳಿತರು.
ಆನು ನಿಂಗಳತ್ರೆ ಕೇಳಿ ಮುಂದುವರೆಸಲಕ್ಕು ಹೇಳಿದ್ದೆ. ಏನು ಮಾಡಬೇಕು ಕೇಳ್ತಾ ಇದ್ದ ಕೆಲಸಕ್ಕೆ ಹೋಗುವ ಮೊದಲು. ಅಬ್ದುಲ್ಲ ಒಂದು ಲಕ್ಷಕ್ಕೆ ತಕ್ಕೊಳ್ತಾನಂತೆ ಸಾವಿತ್ರಿ ಅಲ್ಲೇ ಒಳಕೋಣೆಯಲ್ಲಿ ಟಿ.ವಿ ಹಾಕುತ್ತಾ ಮತ್ತೆ ಹೇಳಿದರು. ನಿಧಾನವಾಗಿ ಕಾಫಿ ಹೀರುತ್ತಿದ್ದ ವೆಂಕಪ್ಪಜ್ಜ ಅದಕ್ಕೂ ಮಾತಾಡಲಿಲ್ಲ. ಇದು ಮೂರನೇ ಸಲ ಸಾವಿತ್ರಿ ವೆಂಕಪ್ಪಜ್ಜನಿಗೆ ಹೇಳ್ತಾ ಮಾರುವುದಕ್ಕೇ ಮಗನ ಈ ವರಾತ ಎಂದು ವೆಂಕಪ್ಪಜ್ಜನಿಗೆ ಗೊತ್ತು. ಅಲ್ಲಿ ರಬ್ಬರ್ ಗಿಡ ನಡಿಸ್ತಾನಂತೆ. ಈಗ ರಬ್ಬರಿಗೆ ಒಳ್ಳೆ ರೇಟು ಉಂಟಲ್ಲ .? ನೂರು ಗಿಡ ನೆಡಿಸಿದ್ರೆ ಆರು-ಏಳು ವರ್ಷ ಕಳೆಯುವಾಗ ಹಾಲು ಸಿಗಲು ಆರಂಭವಾಗುತ್ತೆ ಎಂದು ರಂಜನನ ಲೆಕ್ಕಾಚಾರ . ರಬ್ಬರಿಗೆ ಕೆಲಸವೂ ಕಡಿಮೆಯಂತೆ . ಅಡಿಕೆಯಷ್ಟು ಕಿರಿಕಿರಿ ಇಲ್ಲ. ಒಂದು ಕಿಲೋ ಅಡಿಕೆ ಮಾರುವ ಮೊದಲು ಎಷ್ಟು ಕೆಲಸ? ಮರಕ್ಕೆ ಮದ್ದು ಸಿಂಪಡಿಸುವುದು, ಕೊಯ್ಯುವುದು, ಒಣಗಿಸುವುದು, ಮಳೆ ಬಂದಾಗ ಎಲ್ಲ ಬಾಚಿ ಒಳಗಿದುವುದು, ಬಿಸಿಲು ಬಂದಾಗ ಮತ್ತೆ ಹೊರಗೆ ಹಾಕುವುದು, ಹೊರಗಿನ ಸಿಪ್ಪೆ ತೆಗೆಯುವುದು . ವರ್ಷ ಪೂತಿ ಕೆಲಸ . ಈಗಂತೂ ಕೆಲಸದವರ ಮಜೂರಿ ದಿನಕ್ಕೆ ಮುನ್ನೂರು ದಾಟಿದೆ . ಕೊಟ್ಟರೂ ಜನ ಸಿಗುವುದು ಕಷ್ಟ.

ಇಷ್ಟೆಲ್ಲಾ ಇದ್ದರೂ ಮರ ಕಡಿದು ಮಾರುವುದಕ್ಕೆ ವೆಂಕಪ್ಪಜ್ಜನಿಗೆ ಒಂದು ಚೂರು ಇಷ್ಟ ಇಲ್ಲ. ಸಾವಿತ್ರಿಯ ಪ್ರಶ್ನೆಗೆ ಉತ್ತರ ಕೊಡದೆ ಇದ್ದ.ಗ್ಲಾಸು ಇಲ್ಲಿ ಮಡಗಿದ್ದೆ. ಎಂದಷ್ಟೇ ಹೇಳಿ ಮತ್ತೆ ಅಂಗಳಕ್ಕೆ ಇಳಿದವರು ಒಂದು ಕ್ಷಣ ಕತ್ತೆತ್ತಿ ಮನೆಯ ಹಿಂದಿನ ಗುಡ್ಡದ ಕಡೆಗೆ ದೃಷ್ಟಿ ಹಾಯಿಸಿದರು. ಗುಡ್ಡೆ ಇದ್ದದ್ದು ಮುಕ್ಕಾಲು ಎಕರೆ ಅಷ್ಟೇ. ಮನೆಯ ಹಿಂದಿನ ಬದಿ ಮಣ್ಣಿನ ಮಾರ್ಗ, ನಂತರ ಇಳಿಜಾರದ ಗುಡ್ಡೆ. ಮನೆಯ ಎದುರು ಒಂದೆಕರೆ ಅಡಿಕೆ ತೋಟ. ರಂಜನನಿಗೆ ಅನುದಾನಿತ ಶಾಲೆಯಲ್ಲಿ ಟೀಚರ್ ಕೆಲಸ ಸಿಕ್ಕಿದ ಕಾರಣ ಬಚವಾಯ್ತು. ಇಲ್ಲದಿದ್ದರೆ ಬರೀ ಅಡಿಕೆಯಲ್ಲಿ ಎಂತ ಆಗ್ತದೆ.?
ವೆಂಕಪ್ಪಜ್ಜನ ಗುಡ್ಡೆಗೆ ತಾಗಿಕೊಂಡಿರುವುದೇ ಹತ್ತಿರದ ಮನೆಯ ರಾಮಣ್ಣನ ಮನೆಯ ಗುಡ್ಡ. ಅಲ್ಲಿಯ ಮರಗಳನ್ನೆಲ್ಲಾ ಮಾರಿ ಎರಡು ವರ್ಷ ಹತ್ತಿರಕ್ಕೆ ಬಂದಿರಬೇಕು. ಬರೀ ಬೋಳು ಬೋಳು. ಅಲ್ಲಲ್ಲಿ ಕೆಲವು ಕಮ್ಯುನಿಸ್ಟ್ ಗಿಡಗಳು, ಉಪ್ಪಳಿಕನ ಗಿಡಗಳು ಈಗಷ್ಟೇ ತಲೆ ಎತ್ತಿ ನಿಂತಿವೆ. ವೆಂಕಪ್ಪಜ್ಜನ ಗುಡ್ಡ ಮಾತ್ರ ಹಸಿರಲ್ಲಿ ನಳನಳಿಸುತ್ತಿದೆ. ಎಷ್ಟೆಲ್ಲಾ ಜಾತಿಯ ಮರಗಳು.? ಗೇರು ಬೀಜ, ರೆಂಜೆ, ಅತ್ತಿ, ಮಾವು, ಒಂದೆರಡು ಗಂಧದ ಮರ ಕೂಡ ಇದ್ದ ಹಾಗೆ ನೆನಪು. ಎಲ್ಲವೂ ವೆಂಕಪ್ಪಜ್ಜ ಸಣ್ಣ ಪ್ರಾಯದಲ್ಲಿ ನೆಟ್ಟು ಬೆಳೆಸಿದ್ದು. ಇಷ್ಟು ವರ್ಷದಲ್ಲಿ ಎಲ್ಲವೂ ಉದ್ದುದ್ದ ಬೆಳೆದು ನಿಂತಿವೆ. ಸುತ್ತಲೂ ಹಸಿರು.. ಇದನ್ನು ಕಡಿದು ಮಾರಲಿಕ್ಕದರೂ ಹೇಗೆ ಮನಸ್ಸು ಬಂತು ಅವನಿಗೆ.? ವೆಂಕಪ್ಪಜ್ಜ ದೀರ್ಘ ನಿಶ್ವಾಸದಿಂದ ಎರಡು ಹೆಜ್ಜೆ ಮುಂದೆ ಹೋದವರೇ ಸಂತೋಷದಿಂದ ಕೂಗು ಹಾಕಿದರು. ಏ ಒಪ್ಪಕ್ಕ. ಏನು ವಇಶೇಷ.? ಅಷ್ಟರಲ್ಲೇ ಒಪ್ಪಕ್ಕ ನಗುಮುಖದಿಂದ ಅಂಗಳ ದಆಟಿ ಬರ ಬರ ಬಂದರು. ಏನು ಅತ್ತಿಗೆ.? ಕುತ್ಕೊಳ್ಳಿ. ಆಸರಿಂಗೆ ತತ್ತೆ. ಒಳಮನೆಯಿಂದ ಟಿ.ವಿ.ಆಫ್ ಮಾಡಿ ಬಂದ ಸಾವಿತ್ರಿ ಹೇಳಿದರು. ಈಗ ಬರೀ ನೀರು ಸಾಕು. ಎಂದು ಒಪ್ಪಕ್ಕ ಕೈ ಕಾಲು ತೊಳೆದು ಬಂದರು. ವೆಂಕಪ್ಪಜ್ಜನ ಒಬ್ಬರೇ ತಂಗಿ, ಸರಸ್ವತಿ, ಆದರೆ ಎಲ್ಲರ ಬಾಯಲ್ಲಿ ಒಪ್ಪಕ್ಕ ಆಗಿದ್ದರು. ನಾನು ಒಂದು ಸಲ ಇಲ್ಲಿ ದೇವಸ್ಥಾನಕ್ಕೆ ಬಂದ್ದು. ಎಂದು ಒಪ್ಪಕ್ಕ ಆರಾಮವಾಗಿ ಮಾತಿಗೆ ಕೂತರು. ಕಾತರ್ಿಕಂಗೆ ಎಲ್ಲಿಯಾರು ಕೂಸು ಸಿಕ್ಕಿತ್ತೋ.? ವೆಂಕಪ್ಪಜ್ಜ ಕೇಳಿದರು. ಎಲ್ಲಿ ಸಿಗ್ತದೇ.? ಒಪ್ಪಕ್ಕ ಅಸಹನೆ, ಕೋಪ, ನಿರಾಸೆ ಎಲ್ ಬೆರೆತ ಸ್ವರದಲ್ಲಿ ಹೇಳಿದರು. ಒಪ್ಪಕ್ಕನ ಒಬ್ಬನೇ ಮಗ ಕಾತರ್ಿಕನಿಗೆ ಮದುವೆಗೆ ಹುಡುಗಿ ನೋಡುವುದು ಒಂದು ವರ್ಷದ ಮೇಲೆ ಆಗಿತ್ತು. ಇನ್ನೂ ಸಿಗ್ಲಿಲ್ಲ. ಈಗ ಬೇಗ ಸಿಕ್ಕುತ್ತಿಲ್ಲೆ. ಬೆಂಗ್ಲೂರಿನಲ್ಲಿದ್ದಾನೆ, ಒಳ್ಳೆ ಕೆಲಸ ಅಂದ್ರೂ ಅಷ್ಟು ಬೇಗ ಜಾತಕದಲ್ಲಿ ಸೇರಬೇಕಲ್ಲಾ. ಈಗ ನಮ್ಮದಲ್ಲಿ ಕೂಸುಗೊ ಎಲ್ಲದ್ದವು.? ಇರುವವರೂ ಅಷ್ಟು ಬೇಗ ಎಲ್ಲಿ ಒಪ್ತಾರೆ.? ನೋಡುವ.ಯೋಗ ಇದ್ದ ಹಾಗೆ ಆಗ್ತದೆ. ಒಪ್ಪಕ್ಕ ನಿಟ್ಟುಸಿರು ಬಿಟ್ಟರು. ಮತ್ತೆ ನಮ್ಮ ನೆರೆಯ ಮೂತರ್ಿ ಗೊತ್ತುಂಟಲ್ಲಾ.? ಅವನ ಮಗ ಭಾಸ್ಕರ. ಮೊನ್ನೆ ಮದುವೆ ಆಯಿತಷ್ಟೇ. ಬಂಟರ ಹುಡುಗಿ. ಮತ್ತೆಂತ ಮಾಡ್ಲಿಕ್ಕೆ ಆಗ್ತೆ.? ಅವನು ಅಡಿಕೆ ತೋಟ ನೋಡಿಕೊಳ್ಳುವುದಲ್ಲಾ.? ವರ್ಷ ನಲುವತ್ತು ಕಳೆದ್ರೂ ಸಿಗದಿದ್ದರೆ ಮತ್ತೆಂತ ಮಾಡುವುದು.? ಆದರೂ ಹುಡುಗಿ ಒಳ್ಳೆ ಗುಣದವಳು. ಒಪ್ಪಕ್ಕ ಹೇಳಿದರು. ಈಗಿನ ಕೃಷಿಕರು, ಅಡಿಗೆ ಕೆಲಸಕ್ಕೆ ಹೋಗುವವರು, ಪೌರೋಹಿತ್ಯದವರು, ಇವರಿಗೆಲ್ಲಾ ಕೂಸು ಸಿಗುವುದು ಕಷ್ಟ. ಅವರೆಲ್ಲ ಆಧುನಿಕ ಅಸ್ಪೃಶ್ಯರ ಹಾಗೆ ಅಲ್ವ.? ವೆಂಕಪ್ಪಜ್ಜ ವ್ಯಥೆಯಿಂದ ಹೇಳಿದರು.
ನಾನು ರೋಡಿನಿಂದ ಈಚೆ ತಿರುಗುವಾಗ ಎದುರಿನಿಂದ ಒಂದು ಬೈಕು ಹೋಗುದು ನೋಡಿದೆ. ಬೈಕಿನವವನ್ನು ನೋಡಿದರೆ ಈ ಕಡೆಯವರ ಹಾಗೆ ಕಾಣುದಿಲ್ಲ. ಓ. ರಾಮಣ್ಣನ ಜಾಗ ತಗೊಂಡವರಾ.? ಸಾವಿತ್ರಿ ತಂದ ಕಾಫಿ, ಉಂಡ್ಳಕಾಳು ಸವಿಯುತ್ತಾ ಕೇಳಿದರು ಒಪ್ಪಕ್ಕ. ಹೌದು. ಅವರು ತೆಂಕ್ಲಾಗಿಯಾಣ ಕ್ರಿಶ್ತಿಯಾನ್ ಅಲ್ವಾ.? ಈಗ ಈ ಕಡೆಗೂ ಬಂದಿದ್ದಾರೆ. ಸಾವಿತ್ರಿ ಹೇಳಿದರು. ನೆರೆಯ ರಾಮಣ್ಣ ಜಾಗೆ ಮಾರಿ ಬೆಂಗಳೂರಿನ ಮಗನ ಮನೆಗೆ ಹೋಗಿ ಎರಡು ವರ್ಷ ಕಳೆದಿತ್ತು. ಆದರೂ ಈಗಲೂ ರಾಮಣ್ಣನ ಜಾಗೆ ಎಂಬ ಪ್ರಯೋಗ ಮಾತ್ರ ಹೋಗಿಲ್ಲ. ತಗೊಂಡವರು ಕಣ್ಣನ್ನೂರಿನ ಕಡೆಯ ಕ್ರಿಶ್ತಿಯನ್ನರು, ಈಗ ಅಡಿಕೆ ತೋಟಕ್ಕೆ ದೊಡ್ಡ ಡಿಮಾಂಡ್ ಏನೂ ಇಲ್ಲ.
ವೆಂಕಪ್ಪ ನೀನು ಪುಣ್ಯ ಮಾಡಿದ್ದೆ. ರಂಜನ ಇಲ್ಲೇ ಇದ್ದದ್ದು ಎಷ್ಟು ಒಳ್ಳೆದಾಯ್ತು.? ಈ ಪ್ರಾಯಲ್ಲಿ ಬೆಂಗಳೂರಿಗೆ ಹೋಗಿ ಎಂತ ಮಾಡ್ಲೆ.? ಇಲ್ಲಿ ಆದ್ರೆ ತೋಟಕ್ಕೆ ಒಂದು ಸುತ್ತು ಹಾಕಿ, ಸಂಜೆ ಪೇಟೆಗೆ ಹೋಗಿ ಬಂದರೆ ಎಷ್ಟು ಸಮಾಧಾನ ಆಗ್ತದೆ.? ಹೊರಡುವ ಮುಂಚಿನ ದಿನ ರಾಮಣ್ಣ ಹೇಳಿದ ಮಾತು ವೆಂಕಪ್ಪಜ್ಜನ ಕಿವಿಯಲ್ಲಿ ಈಗಲೂ ಗುಯಿಗುಟ್ಟುತ್ತಿದೆ. ರಾಮಣ್ಣ ಮಾತ್ರ ಅಲ್ಲ, ಇನ್ನೂ ಕೆಲವರು ನೆರೆಕರೆಯವರು ಜಾಗ ಮಾರಿ ಬೆಂಗಳೂರು, ಮಂಗಳೂರು ಎಂದೆಲ್ಲ ಹೋಗಿಯಾಗಿದೆ. ಜಾಗ ಕ್ರಯಕ್ಕೆ ತೆಗೆದುಕೊಂಡವರಲ್ಲಿ ಹೆಚ್ಚಿನವರು ಕಣ್ಣನ್ನೂರಿನ, ಪಯ್ಯನ್ನೂರಿನ ಕಡೆಯ ಕ್ರಿಶ್ತಿಯನ್ನರು, ಪೇಟೆಯಲ್ಲಿ ಈಗ ಅವರ ಇಗಜರ್ಿ ಕೂಡ ದೊಡ್ಡದಾಗಿತ್ತು. ಅದೂ ಇದೂ ಮಾತಾಡಿ ಒಪ್ಪಕ್ಕ ಸಂಜೆ ಹೊರಟರು.
ಅಪ್ಪಾ. ಎಂತ ಮಾಡೆಕು.? ಮರ ಒಟ್ಟು ಕೊಡ್ತಲ್ಲದೋ.? ಬೀಜದ ಮರದಲ್ಲೆಲ್ಲ ಈಗ ಬೀಜ ಆಗುವುದೂ ಇಲ್ಲ. ಒಟ್ಟು ಒಂದು ಲಕ್ಷ ಸಿಕ್ಕುಗು. ರಂಜನ ರಾತ್ರಿ ಊಟ ಮಾಡುವಾಗ ಮತ್ತೆ ಹೇಳಿದ. ರಬ್ಬರ್ ಎಲ್ಲ ನಮಗೆ ಕಷ್ಟ ಅಲ್ವ.? ಅದನ್ನು ನೋಡ್ಲಿಕ್ಕೆ ಒಬ್ಬ ಜನ ಬೇಕು. ನಮಗೆ ಅದರ ವಿಷಯ ಸೀರೆ ಗೊತ್ತೂ ಇಲ್ಲ. ವೆಂಕಪ್ಪಜ್ಜ ಮತ್ತೂ ಏನೂ ಹೇಳಲು ಹೊರಟರು. ನಮ್ಮಿಂದ ಆಗದೆ ಏನೂ.? ಮನಸ್ಸು ಮಾಡಿದ್ರೆ ಎಲ್ಲಾ ಆಗ್ತದೆ. ಇನ್ನು ಬೇರೆ ಯೋಚನೆ ಮಾಡ್ಲೆ ಎಂತ ಇಲ್ಲೆ. ರಂಜನ ಖಡಾಖಡಿ ಹೇಳಿದ. ವೆಂಕಪ್ಪಜ್ಜ ಮಾತಿಲ್ಲದೆ ಕುಳಿತರು. ತನ್ನ ಅಧಿಕಾರ ಮುಗಿದು ಹೋಗಿದೆ, ದೇಹ ಮುದಿಯಾಗಿದೆ, ಇನ್ನು ಒಂದು ಘಟನೆ ಮಾತ್ರ ಬಾಕಿ, ಆತು.ಹಾಗಾದ್ರೆ ಹಾಗೆ. ವೆಂಕಪ್ಪಜ್ಜ ಊಟ ಮುಗಿಸಿ ಸೋತ ನಡಿಗೆಯಲ್ಲಿ ಎದ್ದು ಹೋದರು.
ಮರುದಿನವೇ ಅಬ್ದುಲ್ಲ ಬಂದ, ಜೊತೆಗೆ ನಾಲ್ಕು ಜನರು ಕೂಡ ಇದ್ದರು. ಮರ ಸಿಗಿಯಲು ಯಂತ್ರ. ಆದರೂ ಎಲ್ಲ ಮರ ಕಡಿಯಬೇಕಾದ್ರೆ ಎರಡು ಮೂರು ದಿನವಾದರೂ ಬೇಕಿತ್ತು. ವೆಂಕಪ್ಪಜ್ಜ ಹಗಲಿಡೀ ಅಂಗಳಕ್ಕೆ ಇಳಿಯಲೇ ಇಲ್ಲ. ಒಂದೊಂದು ಮರವೂ ಮುರಿದು ಬೀಳುವ ಸದ್ದು ಸಣ್ಣದಾಗಿ ಜಗಲಿಗೆ ಬಡಿಯುತ್ತಿತ್ತು. ನಡು ನಡುವೆ ಲಾರಿ ಬಂದ ದಿಮ್ಮಿಗಳನ್ನು ತುಂಬಿಸಿ ಹೋಗುವ ಸದ್ದು. ಪ್ರತಿ ಮರ ಧರೆಗುರುಳಿದಾಗಲೂ ವೆಂಕಪ್ಪಜ್ಜನ ಮನಸಲ್ಲಿ ಸಂಕಟ. ಸಂಜೆ ಹೊತ್ತಿಗೆ ಮನಸ್ಸು ತಾಳಲಾರದೆ ಅಂಗಳಕ್ಕೆ ಇಳಿದವರು ಗುಡ್ಡೆ ಕಡೆಗೆ ನೋಡಿದರು. ಮೊದಲ ದಿನದ ಕೆಲಸ ಮುಗಿಸಿ ಅಬ್ದುಲ್ಲ ಹೋಗಿಯಾಗಿತ್ತು. ಗುಡ್ಡದ ಹೆಚ್ಚು ಕಡಿಮೆ ಅಧರ್ಾಂಶ ಬೋಳಾಗಿತ್ತು. ಮತ್ತೆ ಕೆಲವು ರೆಂಬೆ ಕೊಂಬೆ ಇಲ್ಲದೆ ಬೆತ್ತಲಾಗಿ ನಿಂತಿದ್ದವು, ನಾಳೆಯ ಕ್ಷಣಗಣನೆಯೊಂದಿಗೆ. ಅಬ್ದುಲ್ಲ ಸಣ್ಣ ಸಣ್ಣ ಗಿಡಗಳನ್ನೂ ಬಿಟ್ಟಿರಲಿಲ್ಲ. ವೆಂಕಪ್ಪಜ್ಜ ನೋಡಲಾರದೆ ಒಳ ಬಂದರು. ರಾತ್ರಿ ನಿದ್ದೆಯಿಲ್ಲದೆ ಹೊರಳಾಡಿದರು. ಕಣ್ಣ ತುಂಬಾ ಹಳೆಯ ನೆನಪು, ಎಲ್ಲಿಂದೆಲ್ಲಿಂದಲೋ ಗಿಡ ತಂದು ನೆಟ್ಟಿದ್ದು, ನೀರು ಹಾಕಿದ್ದು, ಗೇರು ಮರದಲ್ಲಿ ಮೊದಲು ಫಸಲು ಬಂದಾಗ ಮನ ತುಂಬಿದು, ಮಾವಿನ ಮರದ ಮಿಡಿ ಉಪ್ಪಿನಕಾಯಿ ಹಾಕಿದ್ದು. ಎಲ್ಲ ಅರೆಮಂಪರಲ್ಲಿ ತೇಲಿ ಬಂದ ನೆನಪು. ಯಾರೋ ಅಳುವ ಸದ್ದು ಕೇಳಿ ಬಂದ ನೆನಪು.
ಅಮ್ಮಾ. ಕೂ ಕೂ ಪಕ್ಷಿಯ ಸ್ವರ ಕೇಳುದೇ ಇಲ್ಲ. ಎಲ್ಲಿ ಹೋಯ್ತು. ? ಮರುದಿನ ಶಾಲೆಗೆ ಹೊರಡುವ ಗಡಿಬಿಡಿಯಲ್ಲಿದ್ದ ಶಶಾಂಕ ಅಂಗಳಕ್ಕೆ ಇಳಿಯುತ್ತಾ ಹೇಳಿದ. ಹೌದಲ್ಲ.? ಅಲ್ಲೇ ಜಗಲಿಯಲ್ಲಿ ಕೂತಿದ್ದ ವೆಂಕಪ್ಪಜ್ಜನೂ ಅಂದು ಕೊಂಡರು. ದಿನಾ ಬೆಳಗ್ಗೆ, ಬಹುಶ: ಕೋಗಿಲೆ ಇರಬೇಕು, ರಾಗವಾಗಿ ಸದ್ದು ಮಾಡುತ್ತಿತ್ತು. ಶಾಲೆಗೆ ಹೊರಡುವಾಗ ಶಶಾಂಕ ಅದರ ರೀತಿಯಲ್ಲೇ ಕೂ ಕೂ ಸದ್ದು ಮಾಡುತ್ತಿದ್ದ. ಕೋಗಿಲೆ ಮಾತ್ರ ಅಲ್ಲ, ಅದೆಷ್ಟು ಹಕ್ಕಿಗಳ ಗದ್ದಲ ಕೇಳುತ್ತಿತ್ತು.? ಮರಕುಟಿಗ, ಗಿಳಿ, ಕುಪ್ಪು, ಬಜಕ್ಕರೆ ಹಕ್ಕಿ. ಅಮ್ಮಾ . ಕೂ ಕೂ ಪಕ್ಷಿಯ ಮನೆ ಇದ್ದ ಮರ ಕಡಿದು ಬಿಟ್ರಲ್ಲಾ. ಅದು ಈಗ ಕಾಣುವುದೇ ಇಲ್ಲ. ಶಶಾಂಕ ಅಂಗಳದಿಂದ ಬಂದವನೇ ಸಪ್ಪೆ ಮುಖದಲ್ಲಿ ಹೇಳಿದ. ಅಪ್ಪಾ. ಯಾಕೆ ಮರ ಕಡಿದದ್ದು? ಶಶಾಂಕ ಅಳು ದನಿಯಲ್ಲಿ ಕೇಳಿದ. ನೀನು ಬೇಗ ಬೈಕು ಹತ್ತು. ಶಾಲೆಗೆ ಹೊತ್ತಾಯ್ತು. ರಂಜನ ಉತ್ತರ ಹೇಳದೆ ಮಗನನ್ನು ಗದರಿಸಿದ. ವೆಂಕಪ್ಪಜ್ಜ ಕುಳಿತಲ್ಲೇ ವಿಷನ್ರಾದರು. ಹೌದಲ್ಲ.? ಪಾಪ ಎಲ್ಲಿ ಹೋಗಿರ್ತದೆ.? ಅದರ ಗೂಡಲ್ಲಿ ಎರಡು ಸಣ್ಣ ಮರಿಗಳೂ ಇದ್ದವಂತೆ. ಮೊನ್ನೆ ಶಶಾಂಕ ಹೇಳ್ತಾ ಇದ್ದ.
ಅದ್ಬುಲ್ಲ ಎರಡನೇ ದಿನವೂ ಬಂದ. ಮತ್ತದೇ ಸದ್ದು. ಮರ ಬೀಳುವ, ಲಾರಿಯಲ್ಲಿ ತುಂಬಿಸಿ ಹೋಗುವ ಸದು, ವೆಂಕಪ್ಪಜ್ಜ ಮುಂದಿನ ಎರಡು ದಿನವೂ ಅಂಗಳಕ್ಕೆ ಇಳಿಯಲೇ ಇಲ್ಲ. ಅಂತೂ ಮೂರು ದಿನಕ್ಕೆ ಮುಗಿದಿತ್ತು. ಎಲ್ಲ ಮರ ಕಡಿದು ಸಾಗಿಸಿ ಆಗಿತ್ತು.
ಎಷ್ಟು ದಿನಾ ಅಂತ ವೆಂಕಪ್ಪಜ್ಜ ಒಳಗೆ ಕುಳಿತುಕೊಳ್ತಾರೆ.? ವೆಂಕಪ್ಪಜ್ಜ ಮರುದಿನವೇ ಎಂದಿನಂತೆ ಅಂಗಳಕ್ಕೆ ಇಳಿದರು. ಅಂಗಳದಲ್ಲಿ ತೋಟದ ಕಡೆ ಹೆಜ್ಜೆ ಹಾಕುವಾಗ ಕತ್ತು ತಿರುಗಿಸಿ ಗುಡ್ಡದ ಅವಸ್ಥೆ ನೋಡಬೇಕೆಂದುಕೊಂಡರೂ ಅದು ಹೇಗೂ ತಡೆದುಕೊಂಡರು, ಅಡಿಕೆ ತೋಟದಲ್ಲಿ ಈಗ ಖಾಯಂ ಕೆಲಸದವರೂ ಯಾರೂ ಇಲ್ಲ. ಸ್ವಲ್ಪ ಹೊತ್ತು ಹಾಗೇ ತಿರುಗಾಡಿ ಬಂದವರಿಗೆ ಅಂಗಳ ತಲುಪುತ್ತಲೇ ಎದುರಿಗೇ ಕಂಡಿತ್ತು, ಬೋಳಾದ ಗುಡ್ಡೆ. ಬರೀ ಮರಗಳ ಬೇರು ಮಾತ್ರ ಉಳಿದಿದೆ. ಬಹುಶ ಅದನ್ನೂ ಕೀಳಬೇಕಾಗಿ ಬರಬಹುದೋ ಏನೂ.? ಇಲ್ಲದಿದ್ದರೆ ರಬ್ಬರ್ ಗಿಡಕ್ಕೆ ಜಾಗ ಎಲ್ಲಿ.? ಗುಡ್ಡೆಯಿಡೀ ಬಟಾ ಬಯಲು. ಸುಡುವ ಬಿಸಿಲು. ನೀರವ ಮೌನ. ಇನ್ನು ನೋಡಲಾರದೆ ಅದು ಹೇಗೋ ನಡೆದು ಬಂದು ಚಾವಡಿಯಲ್ಲಿ ಕುಸಿದರು. ಮೂಗಿಗೆ ಒಂದು ತರದ ಹಸಿ ವಾಸನೆ. ಸಣ್ಣದಾಗಿ ಅಳುವ ಸದ್ದು.
ರಾತ್ರಿಯಿಡೀ ಅರೆಮಂಪರಲ್ಲಿ ಹೊರಳಾಡುತ್ತಿದ್ದವರಿಗೆ ಹೇಗೋ ನಿದ್ದೆ ಹತ್ತಿತ್ತು. ನಿದ್ದೆಯಲ್ಲಿ ಯಾರೋ ಮತ್ತೆ ಅಳುವ ಸದ್ದು. ವೆಂಕಪ್ಪಜ್ಜ ಎದ್ದು ಕುಳಿತರು. ಬಹುಶ ಶಶಾಂಕ ಅಳ್ತಾ ಇದ್ದನೋ ಏನೋ. ಸಾವಿತ್ರಿ ಇದಾ. ಸಾವಿತ್ರಿಯನ್ನು ಅಲುಗಿಸಿದರು. ಏನಾಯ್ತು.? ಸಾವಿತ್ರಿ ಅರೆ ಮಂಪರಲ್ಲಿ ಕೇಳಿದರು. ಶಶಾಂಕ ಯಾಕೆ ಅಳುವುದು. ಹೊಟ್ಟೆನೋವೋ ಏನೋ.? ವೆಂಕಪ್ಪಜ್ಜನ ಪ್ರಶ್ನೆಗೆ ಎದ್ದು ಕುಳಿತ ಸಾವಿತ್ರಿ ಹೊರಗೆ ಕಿವಿಯಾನಿಸಿದರು. ಎಲ್ಲಿ.ಎನಗೆ ಕೇಳ್ತಿಲ್ಲೇ, . ನೀವು ಮಲಗಿ. ಏನು ಮಾಡ್ಲಿಕ್ಕೆ.? ಮರ ಕಡಿಸಲಿಕೆ ನನಗೂ ಇಷ್ಟ ಇಲ್ಲ. ಅವನು ಅಷ್ಟು ಹೇಳುವಾಗ ಎಂತ ಮಾಡ್ಲಿಕೆ.? ಸಾವಿತ್ರಿ ಅದೇನೋ ಪಿರಿ ಪಿರಿ ಮಾತಾಡಿ ಮತ್ತೆ ಆಕಳಿಸಿ ಮಲಗಿದರು. ಶಶಾಂಕ ಅಲ್ಲದೆ ಮತ್ತೆ ಯಾರ ಸ್ವರ.? ಈಗಲೂ ಸಣ್ಣದಾಗಿ ಕೇಳ್ತಾ ಇದೆಯಲ್ಲ.? ವೆಂಕಪ್ಪಜ್ಜ ಮತ್ತೇನೂ ಹೇಳದೆ ಮಲಗಿದರು. ಅದೆಷ್ಟೋ ಹೊತ್ತಿಗೆ ಮಂಪರು ಹತ್ತಿತು. ನಿದ್ರೆಯಲ್ಲೋ ಅದೇನೂ ಕನಸು. ಬೋಳು ಗುಡ್ಡೆಯಲ್ಲಿ ಮತ್ತೆ ಹಸಿರು ತುಂಬಿದಂತೆ. ಹಕ್ಕಿ ಮತ್ತೆ ಹಾಡಿದಂತೆ. ಮನಸ್ಸು ತಂಪಾದಂತೆ.
ಮರುದಿನ ತೋಟದಲ್ಲಿ ನಡೆಯುವಾಗಲೂ ಅದೇ ಹಸಿ ವಾಸನೆ. ಯಾರೋ ಅಳುವ ಸದ್ದು. ಊಟ ಮುಗಿಸಿ ಚಾವಡಿಯಲ್ಲಿ ಮಲಗಿದಾಗಲೂ ಅದೇ ಸದ್ದು. ಬಹುಶ ತನಗೆ ಮಾತ್ರ ಕೇಳುವುದೋ ಏನೋ. ಪ್ರಾಯ ಎಪ್ಪತ್ತೈದು ಕಳೆಯಿತಲ್ಲ. ತನಗೆ ಮಾತ್ರ ಅನ್ನಿಸುವದೋ ಏನೂ. ವೆಂಕಪ್ಪಜ್ಜ ಮತ್ತೆ ಯಾರ ಹತ್ತಿರವೂ ಹೇಳಲು ಹೋಗಲೇ ಇಲ್ಲ.
ಅದನೋ. ಈಚೆಗೆ ಏನೋ ನಿಶ್ಯಕ್ತಿ, ಆಯಾಸ, ವೆಂಕಪ್ಪಜ್ಜ ಈಗ ತೋಟಕ್ಕೆ ಹೋಗುವುದನ್ನೂ ಕಡಿಮೆ ಮಾಡಿದ್ದಾರೆ. ಹಸಿ ವಾಸನೆ, ಅಳುವ ಸದ್ದು ಕೇಳಿ ಬರುವುದು ನಡೆದೇ ಇದೆ. ಇವತ್ತು ರಾತ್ರಿ ಮಲಗಿದಾಗಲೂ ಹಾಗೆ. ಕಣ್ಣಿಗೆ ನಿದ್ದೆ ಹತ್ತುತ್ತಿದ್ದಂತೆಯೇ ಮತ್ತೆ ಅಳು. ಈಗ ಮತ್ತೂ ದೊಡ್ಡದಾಗಿ ಕೇಳಿ ಬರುತ್ತಾ ಇದೆ. ದೀನವಾದ ಮನ ಕರಗುವ ಅಳು, ಇಷ್ಟು ದಿನ ಸಹಿಸಿಕೊಂಡಿದ್ದ ವೆಂಕಪ್ಪಜ್ಜ ಇನ್ನು ತಡೆಯಲಾರದೆ ಮೆತ್ತಗೆ ಕೋಣೆಯ ಬಾಗಿಲು ತೆರೆದು ಹೊರ ಬಂದರು. ಇದು ಎಲ್ಲಿಂದ ಕೇಳಿ ಬರ್ತದೆ. ? ಎಷ್ಟು ದಿನ ಆಯ್ತು.? ಪತ್ತೆ ಹಚ್ಚಲೇ ಬೇಕು. ನಿಧಾನವಾಗಿ ಚಾವಡಿ ಬಾಗಿಲು ತೆರೆದು ಸದ್ದು ಮಾಡದೆ ಅಂಗಳಕ್ಕೆ ಇಳಿದರು. ಅಂಗಳದಲ್ಲೆಲ್ಲ ಬೆಳದಿಂಗಳು ಹರಡಿ ನಿಂತಿದೆ. ಹುಣ್ಣಿಮೆ ಬಹುಶ ನಾಳೆಯೂ ನಾಡಿದ್ದೋ ಇರಬೇಕು. ಆದರೆ ಯಾಕೆ ಒಂದು ರೀತಿಯ ಉರಿ.? ನಿಧಾನವಾಗಿ ಅಂಗಳ ದಾಟಿ ಮುಂದೆ ಬಂದು ಕಿವಿಗೊಟ್ಟಾಗ ಗೊತ್ತಾಯ್ತು. ಒಹ್. ಇದು ಮನೆಯ ಹಿಂದಿನ ಗುಡ್ಡದಿಂದಲೇ. ಯಾರು ಈ ಹೊತ್ತಿಗೆ. ಒಂದೊಂದು ಸಲ ನಾಲ್ಕು ಮನೆಯ ಆಚೆಯ ನಾರಾಯಣ ನಾಯ್ಕ ಕುಡಿದ ಮತ್ತಿನಲ್ಲಿ ಗುಡ್ಡದ ಮಾರ್ಗದಲ್ಲಿ ಬೀಳುವುದುಂಟು. ಅವನೋ ಏನೋ.?
ವೆಂಕಪ್ಪಜ್ಜ ಅಲ್ಲೇ ಅಂಗಳದಲ್ಲಿದ್ದ ಉದ್ದದ ಕೋಲು ಊರಿ ನಿಧಾನಕ್ಕೆ ನಡೆದು ಮಣ್ಣಿನ ಮಾರ್ಗಕ್ಕೆ ಗುಡ್ಡದ ಬದಿಗೆ ಬಂದರು. ಹೌದು.ಇಲ್ಲೆಲ್ಲೋ ಹತ್ತಿರದಲ್ಲೆ. ಈಗ ಅಳು ಮತ್ತೂ ಹತ್ತಿರದಿಂದ ಕೇಳಿ ಬತರ್ಿದೆ. ಆದರೆ ಕಣ್ಣು ಕಿರಿದು ಮಾಡಿ ನೋಡಿದರೆ ಯಾರೂ ಇಲ್ಲ. ವೆಂಕಪ್ಪಜ್ಜ ಏದುಸಿರು ಬಿಡುತ್ತ ಕೋಲು ಊರಿಕೊಂಡು ಮುಂದೆ ಬಂದರು. ಮರ ಕಡಿದ ಜನರು ಅಲ್ಲಲ್ಲಿ ಮಣ್ಣು ಸರಿಸಿ ಇಳಿಯಲು ಮೆಟ್ಟಲಿನ ಹಾಗೆ ದಾರಿ ಮಾಡಿದ್ದರು. ಮೇಲೆ ಬರುತ್ತಿದಂತೆಯೇ. ಅಲ್ಲಿ ಯಾರೋ ಕೂತ ಹಾಗೆ. ಯಾರು ಈ ಹೊತ್ತಿನಲ್ಲಿ.? ಆಕೃತಿ ಅಸ್ಪಷ್ಟ. ನಾರಾಯಣನ ಹಾಗೆ ಕಾಣುದಿಲ್ಲ. ವೆಂಕಪ್ಪಜ್ಜ ಹೆದರಿಕೆ ಆಶ್ಚರ್ಯದಿಂದ ಮತ್ತೆ ಮೇಲೆ ನಡೆದು ಬಂದರು. ಓ.! ಯಾರೋ ಹೆಂಗಸು ಅಳುತ್ತಿದ್ದಾಳೆ. ವೆಂಕಪ್ಪಜ್ಜ ಹತ್ತಿರ ಹೋಗಿ ನೋಡಿದರು. ಆ ಹೆಂಗಸು ಕುಕ್ಕುರುಗಾಲಲ್ಲಿ ಕೂತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಎಲ್ಲ ಕಳೆದುಕೊಂಡವರ ದೀನ ರೋದನ. ಹೆಂಗಸಿನ ಚರ್ಮ ಅಲ್ಲಲ್ಲಿ ಕಿತ್ತು ಬಂದಿದೆ. ಕೈ ಬೆರಳಲ್ಲಿ ಒಸರುವ ರಕ್ತ. ಅದೇ ಹಸಿ ವಾಸನೆ. ಆದರೂ ಈ ಹೆಂಗಸು ಮೊದಲು ತುಂಬಾ ಚಂದ ಇದ್ದಿರಬೇಕು. ಆದರೆ ಈಗ ಅರ್ಧ ಸೌಂದರ್ಯ ಮಾಸಿದ ಹಾಗಿದೆ.
ಯಾರು.ಏನಾಯ್ತು.? ಯಾಕೆ ಅಳುವುದು.? ಗುಡ್ಡ ಏರಿ ಬಂದ ಆಯಾಸದಲ್ಲಿ ಏದುಸಿರು ಬಿಡುತ್ತ ಕೇಳಿದರು ವೆಂಕಪ್ಪಜ್ಜ. ಹೆಂಗಸಿನಿಂದ ಉತ್ತರ ಬರಲೇ ಇಲ್ಲ. ಮತ್ತೆ ಅಳು. ಏ ನಿನ್ನನ್ನೇ ಕೇಳುದು. ಇಲ್ಲಿ ಕೂತು ಏನು ಮಾಡ್ತಾ ಇದ್ದೀಯ.? ಅಳುದು ಯಾಕೇಂತ.? ವೆಂಕಪ್ಪಜ್ಜ ಮತ್ತೆ ದನಿ ಎತ್ತರಿಸಿ ಕೇಳಿದರು. ಹೆಂಗಸು ಉತ್ತರಿಸದೆ ತಲೆ ಎತ್ತಿ ತೀಕ್ಷ್ಣ ನೋಟ ಬೀರಿದಳು. ಆ ನೋಟದಲ್ಲಿ ಬೆಂಕಿಯಿತ್ತು.ನೋವಿತ್ತು.ತಿರಸ್ಕಾರವಿತ್ತು.ವೆಂಕಪ್ಪಜ್ಜ ಸ್ವಲ್ಪ ಹೆದರಿ ಹಿಂದೆಸರಿದರು. ಆ ಹೆಂಗಸು ಮತ್ತೆ ಅಳು ಮುಂದುವರಿಸಿದಳು. ವೆಂಕಪ್ಪಜ್ಜನಿಗೆ ಪಕ್ಕನೆ ಪರಿಸರ ಬೋಧ ಬಂತು. ಈ ರಾತ್ರಿ ಇಷ್ಟು ಹೊತ್ತಿನಲ್ಲಿ ಬಂದದ್ದೆ ತಪ್ಪಾಯ್ತು. ರಂಜನನಿಗಾದರೂ ಹೇಳಬೇಕಿತ್ತು. ಇನ್ನು ಬೇಗ ಮನೆಗೆ ಮುಟ್ಟಿದರೆ ಸಾಕು. ವೆಂಕಪ್ಪಜ್ಜ ನಡುಗುವ ಕಾಲಲ್ಲಿ ಇಳಿಯಲು ಹೆಜ್ಜೆ ಊರಿದರು. ಜೊತೆಗೆ ಅಸಾಧ್ಯ ಧಗೆ, ಬಾಯಾರಿಕೆ, ಕೆಳಗೆ ಹೆಜ್ಜೆ ಊರಿದವರ ಕಾಲು ಮರಳಲ್ಲಿ ಹೂತು ಹೋಯಿತು. ಅರೆ.? ಇಲ್ಲಿ ಎಲ್ಲಿಂದ ಹೊಯ್ಗೆ ಬಂದು ತುಂಬಿದೆ.? ಇನ್ನೊಂದು ಹೆಜ್ಜೆಯಿಟ್ಟರೆ ಅಲ್ಲೂ ಮರಳು. ಕಣ್ಣು ಕಿರಿದು ಮಾಡಿ ನೋಡಿದರೆ ಸುತ್ತಲೂ ಬರೀ ಮರಳು. ಅರೆ.! ಈಗ ಅಳು, ಹಸಿ ವಾಸನೆ ಎರಡೂ ನಿಂತು ಬಿಟ್ಟಿತಲ್ಲಾ.? ತಿರುಗಿ ನೋಡಿದರೆ ಹೆಂಗಸು ಕಾಣಲೇ ಇಲ್ಲ! ಮನೆಯಿದ್ದ ಜಾಗದಲ್ಲೂ ಮರಳು. ನೋಟ ತಲುಪಿದಲ್ಲೆಲ್ಲಾ ಬರೀ ಮರಳು. ಸುತ್ತಲೂ ಮರುಭೂಮಿಯ ಪ್ರತೀತಿ. ಅಸಾಧ್ಯ ಸೆಕೆ. ವೆಂಕಪ್ಪಜ್ಜ ಸರ್ವ ಶಕ್ತಿಯನ್ನೂ ಬಳಸಿ ಮುಂದೆ ಕಾಲೆಳೆದುಕೊಂಡು ಹೊರಟರು. ಮನೆ ತಲುಪಬೇಕು. ಬೇಗ.ಅದೆಷ್ಟು ಬೇಗ. ವೆಂಕಪ್ಪಜ್ಜನ ಮರುಳಲ್ಲಿ ಕಾಲೂರಿ ನಡೆಯುತ್ತಲೇ ಇದ್ದರು.
ಸೂಚನೆ: ಅಲ್ಲಲ್ಲಿ ಕಾಸರಗೋಡು ಕಡೆಯ ಹವ್ಯಕರ ಕನ್ನಡ ಬಳಸಲಾಗಿದೆ.





0 Comments