ಕಥೆಗಾರ ಕಳೆದುಹೋಗಿದ್ದಾನೆ..ಎಂದು ಅಂದುಕೊಳ್ಳುತ್ತಿರುವಾಗಲೇ ವೆಂಕಟ್ರಮಣ ಗೌಡರು ತಮ್ಮ ಹೊಸ ಕಥೆಯೊಂದಿಗೆ ನಮ್ಮೆದುರು ನಿಂತಿದ್ದಾರೆ.
ಮಾಧ್ಯಮವೆಂಬ ಬೀಸು ಗಿರಣಿಯಲ್ಲಿ ಸಿಕ್ಕಿ ಹಾಕಿಕೊಂಡವರ ಎದೆಯೊಳಗೆ ಬರೀ ಟಿ ಆರ್ ಪಿ ತಲ್ಲಣಗಳು ಮಾತ್ರ ಉಳಿಯುತ್ತವೆ. ನಾವು ಹಾಗೆಂದುಕೊಂಡಿರುವಾಗಲೇ ಅದನ್ನು ಸುಳ್ಳು ಮಾಡುವವರಂತೆ ಗೌಡರು ಬರೆದ ಕಥೆ ಇಲ್ಲಿದೆ
ಈ ಕಥೆಗೆ ನಿಮ್ಮ ಓದಿನ ಪ್ರೀತಿ ಇರಲಿ.

ವೆಂಕಟ್ರಮಣ ಗೌಡ
ಹರಿ ಮಾದನಗೇರಿಯವನು.
ಮಾದನಗೇರಿ ಅಂದೊಡನೆ, ಒಂದು ಬಗೆಯ ಮಾರ್ದವತೆಯಲ್ಲಿ ಕರಗಲು ಕಾರಣವಾಗುವ ಬಹಳಷ್ಟು ಸಂಗತಿಗಳು ಕಾಣುತ್ತವೆ. ಅಂಕೋಲ, ಕುಮಟಾ, ಗೋಕರ್ಣಗಳನ್ನೆಲ್ಲ ಎಂಥದೋ ಅನುಬಂಧದಲ್ಲಿ ಬೆಸೆದುಬಿಡುತ್ತದೆ ಮಾದನಗೇರಿ. ನ್ಯಾಷನಲ್ ಹೈವೇಯಲ್ಲಿ ಓಡಾಡುವ ಯಾರೂ, ಯಾವ ಲಾರಿಯೂ ಇದರ ಹಂಗಿನಲ್ಲೇ ಮುಂದೆ ಹೋಗಬೇಕು. ಅಸನೀರಿಗೆ ಡೆಪ್ಯೂಟ್ ಆಗಿರೋ ಲೇಡಿ ಡಾಕ್ಟರ್ ಕೂಡ ಇಲ್ಲಿಂದಲೇ ಊರಿಗೆ ಬರಬೇಕು. ನಾಟಕದಲ್ಲಿ ಸೌಭಾಗ್ಯ ತಂದ ಸೊಸೆಯಾಗಿ, ಚಿನ್ನದಂಥ ಅತ್ತಿಗೆಯಾಗಿ, ಬೆಂಕಿಯಲ್ಲಿ ಅರಳಿದ ಹೂವಾಗಿ, ಚೆಂದೊಳ್ಳಿ ಚೆಲುವೆಯಾಗಿ ಇಡೀ ಸ್ಟೇಜಿನ ಮೇಲೆ ತುಳುಕುತ್ತ ನಡೆಯುವ ಮತ್ತು ನಾಟಕದ ರಾತ್ರಿಯ ನಿದ್ದೆ ಮಾತ್ರವಲ್ಲದೆ ಊರಿನ ಹೊಂತಗಾರ ಹುಡುಗರ ಇನ್ನೂ ಕೆಲ ರಾತ್ರಿಗಳ ನಿದ್ದೆಗೂ ಸಂಚಕಾರ ತರುವ ನಟೀಮಣಿಯೂ ಇಲ್ಲೇ ಎಲ್ಲಿಂದಲೋ ಬರುವವಳು. ಮುಂದೆ ಆ ನಟೀಮಣಿಗೂ ನಾಟಕದ ಮಾಸ್ತರರ ತಮ್ಮನಿಗೂ ಮಧ್ಯೆ ಪ್ರೇಮ ಅಂಕುರಿಸಿ, ಹಲವು ಬಗೆಯ ತಕರಾರುಗಳು, ಮನಸ್ತಾಪಗಳು ನಾಟಕದ ಬಣ್ಣದಷ್ಟೇ ಕಲಸಿಹೋಗಿ, ಕಡೆಗೆ ಹೇಗೋ ಮದುವೆಯೂ ನಡೆದಾಗ, ದಿಬ್ಬಣ ಮಾದನಗೇರಿಯ ಎಂಥದೋ ಹಿತ ಕೊಡುವಂಥ ಸಮೀಪದಲ್ಲಿ ಸಡಗರಪಟ್ಟಿತ್ತು. ಎಷ್ಟೆಷ್ಟೋ ಆಸ್ತಿ ಇದೆಯೆನ್ನುವ, ಆದರೆ ಯಾವುದನ್ನೂ ನಿಖರವಾಗಿ ಹೇಳಲಾರದ ಅಥವಾ ಕೆಲವರು ಪಿಸುಗುಟ್ಟೋ ಹಾಗೆ ಹೇಳಿಕೊಳ್ಳುವುದಕ್ಕೆ ಏನೂ ಇರದ ಗೋವೆ ಸಾವ್ಕಾರ ಕೂಡ ಮಾದನಗೇರಿ ಬಗ್ಗೆ ಮಾತನಾಡದೇ ಇರುವುದಿಲ್ಲ. ಎಲ್ಲರಿಂದಲೂ ಹರಾಮಿ ಹೆಣ್ಣು ಅನ್ನಿಸಿಕೊಂಡ ರಾಮಿ ಗಂಡನನ್ನು ಬಿಟ್ಟು ಇನ್ನಾವುದೋ ಹುಡುಗನ ಜೊತೆ ಓಡಿಹೋದ ದಿನ, ಅವಳು ಮಾದನಗೇರಿಯಿಂದ ಎಲ್ಲಿಗೋ ಹೋದಳಂತೆ ಎಂಬ ಸುದ್ದಿ ಊರಿಗೆ ವಾಪಸ್ ಬಂದು ಬಡಿದಿತ್ತು. ಅದಾಗಿ ಹತ್ತು ವರ್ಷಗಳ ನಂತರವೂ, ಅವಳನ್ನು ಅಲ್ಲೇ ನೋಡಿದ ಹಾಗಾಯ್ತು ಅಂತ ಆಗಾಗ ಹೇಳುವವರಿದ್ದಾರೆ. ಊರಲ್ಲಿ ಯಾರೇ ನಾಪತ್ತೆಯಾದರೂ ಮಾದನಗೇರಿಯಿಂದಲೇ ಹುಡುಕಾಟ ನಡೆಸೋದು, ಬಹುಶಃ ರಾಮಿ ಪ್ರಕರಣದ ನಂತರವೇ ರೂಢಿಗೆ ಬಂದಿರಬೇಕು. ಹೊಸ ಹುಡುಗಿಯರಂತೂ ಮಾದನಗೇರಿ ಬಗ್ಗೆ ಅದೇಕೋ ಬಲು ಮೋಹವುಳ್ಳವರು. ಅದಕ್ಕಾಗಿಯೇ ಹೆಣ್ಣುಮಕ್ಕಳಿರೋ ಮನೆಗಳೊಳಗೆ ಒಂದೊಂದು ಸಲ ಇದ್ದಕ್ಕಿದ್ದಂತೆ ದುಗುಡ ಧುಮುಗುಡೋದೂ ಇದೆ.
ಹೀಗೆ ಹೀಗೆ ಹೀಗೆ ಮಾದನಗೇರಿಯ ನೆನಪುಗಳು ಅದು ಉಸಿರಾಡುವ ಸದ್ದುಗಳಷ್ಟೇ ನಿರಂತರ. ಅಸನೀರಿನವರಾದ ನಮ್ಮ ಪಾಲಿಗೆಲ್ಲ ಕಿವಿಯಲ್ಲಿ ಗಾಳಿ ಹೊಕ್ಕ ಕರು ಹುಚ್ಚೆದ್ದು ಕುಣಿವಂಥ ಖುಷಿಗೆ ಹೆಬ್ಬಾಗಿಲು ತೆರೆಯುತ್ತಿದ್ದದ್ದು ಮಾದನಗೇರಿ. ಭಾಷೆ ಬರದಿದ್ದರೂ ರಜನೀಕಾಂತನ ಸಿನಿಮಾ ನೋಡಬೇಕೆಂಬ ಆಸೆಗೆ ತಳ ಕೊಡುತ್ತಿದ್ದದ್ದು ಮಾದನಗೇರಿ. ಬೇಸಿಗೆ ರಜೆ ಬಂತೆಂದರೆ ಮತ್ತೆ ಮತ್ತೆ ಮನದ ಮೂಲೆಯಲ್ಲಿ ಬಂದು ಕಾಡುತ್ತಿದ್ದದ್ದು ಮಾದನಗೇರಿ. ಗಣೇಶ ಚವತಿಯ ಟೈಮಲ್ಲಿ ಯಾರ ಮನೆಯ ಗಣೇಶ ಪ್ರಸಾದ ಚೆನ್ನಾಗಿತ್ತು ಎಂದು ರುಚಿ ನೋಡುತ್ತ ಕಮೆಂಟು ಮಾಡುತ್ತ ನಡೆಯುತ್ತಿದ್ದದ್ದು ಇದೇ ಮಾದನಗೇರಿ ಎಂಬ ಮಾಯಾವಿಯಂಥ ಊರಿನ ತಿರುವುಗಳು ಮತ್ತು ಓಣಿಗಳಲ್ಲೇ. ಆಸುಪಾಸಿನ ಒಕ್ಕಲ ಪೈಕಿ ಹೆಂಗಸರಿಗೆ ತರಕಾರಿ ಮಾರುವ ಕಟ್ಟೆ, ಮೀನುಬುಟ್ಟಿಯ ಕನ್ನಮ್ಮನ ವ್ಯಾಪಾರದ ಪೇಟೆ, ಗಾಳಿಪಟ ಹಾರಿಸುವ ಕನಸಿನ ಮಕ್ಕಳಿಗೆ ಬೆರಗು ತೆರೆವ ಬಯಲು, ಮನೆಬಿಟ್ಟು ಓಡಿಹೋಗಲು ಪ್ಲಾನು ಮಾಡುವ ಹುಡುಗರಿಗೆ ಮುಂದಿನ ಜೀವನದ ದಾರಿ ತೋರಿಸುತ್ತಿದ್ದ ಕಿಂಡಿ ಎಲ್ಲವೂ ಎಲ್ಲವೂ ಇದೇ ಮಾದನಗೇರಿ.
ಮಾದನಗೇರಿ ಕ್ರಾಸ್, ಮೀನುಸಾರಿನಷ್ಟೇ ಖಮ್ಮಗೆ ಅನ್ನಿಸುತ್ತಿದ್ದದ್ದು ತಾಜಾ ಮೀನು ಅಲ್ಲೇ ಸಿಗೋದು ಅನ್ನೋ ಕಾರಣಕ್ಕೆ. ಬೇಲೆ ಬಿಟ್ಟರೆ ಅಷ್ಟೇ ತಾಜಾ ಮೀನುಗಳು – ಬುಟ್ಟಿಯಲ್ಲಿನ್ನೂ, ಸಣ್ಣ ಸಮುದ್ರವೇ ಏನೊ ಎಂಬಂತೆ ಜಿಗಿದಾಡುತ್ತಲೇ ಇರುತ್ತಿದ್ದ ಮೀನುಗಳು ಮಾದನಗೇರಿ ಕ್ರಾಸಿನಲ್ಲಿ ಕೂರುತ್ತಿದ್ದ ಕನ್ನಮ್ಮನ ಬಳಿ ಸಿಗುತ್ತಿದ್ದವು. ಕನ್ನಮ್ಮನ ಹತ್ತಿರ ಮೀನು ತಗೊಳ್ಳೋದು ಸಾಧ್ಯವಾದರೇನೇ ಅದು ಸುದಿನ. ಅವಳ ಬಳಿ ಮೀನಿಲ್ಲವಾಗಿಬಿಟ್ಟ ದಿನ ಇಡೀ ಒಂದು ಯುಗಕ್ಕಾಗುವಷ್ಟು ನಿರಾಸೆ ಮತ್ತು ಎಂಥದೋ ರಕ್ಕಸ ಹಸಿವು ಬಾಧಿಸೋದು.
ಯಾವಾಗಲೂ ಸುಡುಬಿಸಿಲ ಸಂತೆಯಾಗಿರುತ್ತಿತ್ತು ಮಾದನಗೇರಿ ಕ್ರಾಸ್. ಆದರೂ ಅದೆಂಥದೋ ಸುಖದ ಅಲೆಯಿರುತ್ತಿತ್ತು ಅಲ್ಲಿ. ಅಷ್ಟೊಂದು ಜನರ ದಟ್ಟಣೆಯಲ್ಲಿ ನಿಂತರೆ, ಮನೆಯವರಾರಿಗೂ ಗೊತ್ತಾಗದ ಹಾಗೆ ಒಂದು ಸಿಗರೇಟು ಹಚ್ಚಿ ಪ್ರಯೋಗಾರ್ಥ ಪರೀಕ್ಷೆಗಾಗಿ ದಮ್ಮೆಳೆಯುವಷ್ಟು ಆಹ್ಲಾದಕರ ಖಾಸಗಿತನ ದಕ್ಕಿಬಿಡುತ್ತಿತ್ತು. ಒಂದು ಥರದ ನಿಶ್ಚಿಂತ ಸ್ಥಿತಿಯಲ್ಲಿ, ಒಂದು ಅಬಾಧಿತ ಏಕಾಗ್ರತೆಯಲ್ಲಿ, ಅಳಿಲಿನ ಲವಲವಿಕೆಯಂಥದೇನೋ ಒಂದು ಮಾನಸಿಕ ನೇವರಿಕೆಯಲ್ಲಿ ತನ್ನಷ್ಟಕ್ಕೆ ತಾನೇ ವಿಶಿಷ್ಟವಾದ ಪ್ರಪಂಚದ ಸೀಮೆ ಅಲ್ಲಿ ಜಾರಿಗೆ ಬರುತ್ತಿತ್ತು. ಒಂದು ಹುಚ್ಚು ಉಮೇದನ್ನು, ಒಂದು ಅನನ್ಯವೆನ್ನಿಸುವಂಥ ಸಮಾಧಾನವನ್ನು, ಒಂದು ಥರದ ಧ್ಯಾನಸ್ಥ ಸ್ಥಿತಿಯನ್ನು ತಂದು ಕೂಡಿಸಿಬಿಡುತ್ತಿತ್ತು ಮಾದನಗೇರಿ ಕ್ರಾಸ್.
ಸುಡುವ ಸೂರ್ಯನನ್ನು ಚೆಲ್ಲಾಡುತ್ತ ತೀರಕ್ಕೆ ಅಲೆಗಳನ್ನು ನಿರಂತರ ಕಳಿಸುತ್ತ ನಿರುಮ್ಮಳವಾಗಿರುವ ಕಡಲಿಗೂ, ಸೂರ್ಯನನ್ನೇ ನುಂಗುತ್ತಿರುವಂಥ ಪ್ರಖರತೆಯಲ್ಲಿ ಚೆಲ್ಲಿಕೊಳ್ಳುತ್ತಿದ್ದ ಮಾದನಗೇರಿ ಕ್ರಾಸಿಗೂ ಹೇಳುವಂಥ ಭಿನ್ನತೆಯೇನೂ ಇರುತ್ತಿರಲಿಲ್ಲ. ಅಲ್ಲಿ ಮೀನ ಬೇಟೆಗಿಳಿದ ದೋಣಿಗಳು ಅಲೆಗಳ ಮೇಲೆ ತುಯ್ದಾಡುತ್ತಿದ್ದರೆ, ಇಲ್ಲಿ ಮಾದನಗೇರಿ ಕ್ರಾಸಿನಲ್ಲಿ ಹೂ ಮಾರುವ ಹೆಂಗಸರು, ಕೆಂಪು ಕೆಂಪು ಕಲ್ಲುಸಕ್ಕರೆಯನ್ನೇ ಒಳಗೆ ಅಡಗಿಸಿಕೊಂಡಿದೆಯೆನ್ನಿಸುವಂತೆ ಹೊಳಪಿರುತ್ತಿದ್ದ ಕಲ್ಲಂಗಡಿ ಹಣ್ಣುಗಳನ್ನು ಹಿಡಿದು ನಿಂತಿರುತ್ತಿದ್ದ ಹುಡುಗರು ಇರುತ್ತಿದ್ದರು. ಬರಹೋಗುವ ಲಾರಿಗಳಿಗೆಲ್ಲ ಅವರು ಕೈಯೆತ್ತಿ ಎತ್ತಿ ಹೂದಂಡೆಯನ್ನೂ ಕಲ್ಲಂಗಡಿ ಹಣ್ಣನ್ನೂ ತೋರಿಸುವರು. ಅಪರೂಪಕ್ಕೆಲ್ಲೋ ವ್ಯಾಪಾರವಾದರೆ ಆಗುವುದು; ಇಲ್ಲದಿದ್ದರೆ ಇಲ್ಲ. ಆದರೆ ಅವರಾರೂ ದಣಿಯುತ್ತಿರಲಿಲ್ಲ. ಅವರ ಕೈಗಳು ಸೋಲುತ್ತಿರಲಿಲ್ಲ. ಅಲ್ಲೊಂದು ನಿರೀಕ್ಷೆಯ ಪರಿಮಳವಿರುತ್ತಿತ್ತು. ಅದು ಎಂಥ ಝಳದಲ್ಲೂ ಎಂಥದೇ ತಳಮಳದಲ್ಲೂ ಆರದಂಥ ಗಂಧ.
ಮಾದನಗೇರಿ ಕ್ರಾಸಿನ ಅಂಥ ಬಿಸಿಲಲ್ಲೂ ಒಂದು ನೆರಳು ಹುಡುಕಿ ಗಿಣಿಶಾಸ್ತ್ರದವ ಕೂತಿರುತ್ತಿದ್ದ. ತಲೆಗೆ ಕೆಂಪು ರುಮಾಲು ಸುತ್ತಿಕೊಂಡು ತನ್ನ ಗಿಣಿಯೊಂದಿಗೆ ಏನೇನೋ ಮಾತನಾಡುತ್ತ, ಅರ್ಥವಾಗದ ಚಿತ್ರಭಾಷೆಯಲ್ಲಿರುತ್ತಿದ್ದ, ಭವಿಷ್ಯತ್ತಿನ ಎಂಥದೋ ನಿಗೂಢ ವಾಕ್ಕುಗಳನ್ನು ಅಡಗಿಸಿಕೊಂಡಿರುತ್ತಿದ್ದ ಎಲೆಗಳಲ್ಲಿ ಬದುಕಿನ ನಾಳೆಯ ಎಳೆಗಳನ್ನು ಹುಡುಕಿಕೊಡುತ್ತಿದ್ದ. ಯಾವುದೇ ಪವಾಡಪುರುಷನಿಗೂ ಕಮ್ಮಿಯೆನ್ನಿಸುತ್ತಿರಲಿಲ್ಲ ಆ ಗಿಣಿಶಾಸ್ತ್ರದವನು. ಮಾದನಗೇರಿ ಕ್ರಾಸಿನ ಆ ಬಿಸಿಲೇ ಅವನಿಗೊಂದು ಸಂತ ಕಳೆಯನ್ನು ಲೇಪಿಸಿಬಿಟ್ಟಿರುತ್ತಿತ್ತು. ಹೆಚ್ಚಿನವರ ದಾರಿಗಳು ಅವನ ಗಿಣಿಯೆದುರು ಕೂತು ಆಲಿಸದ ಹೊರತು ನಿಕ್ಕಿಯಾಗುತ್ತಿರಲಿಲ್ಲ.
ನೆನೆಯುತ್ತ ಹೋದಂತೆ ಅರೆ, ಎಷ್ಟು ಕಾಲವಾಯಿತು ಮಾದನಗೇರಿ ಕ್ರಾಸಿನಲ್ಲಿ ಇಳಿದು ಆ ಬಿಸಿಲ ಸಂತೆಯಲ್ಲಿ ಕಳೆದುಹೋಗದೆ ಅಂತನ್ನಿಸುತ್ತದೆ. ಮಾದನಗೇರಿ ಕ್ರಾಸ್ ಅದೇ ಬಿಸಿಲ ಝಳದೊಂದಿಗೆ, ಅದೇ ಕನ್ನಮ್ಮನ ಬುಟ್ಟಿಯ ತಾಜಾ ಮೀನಿನ ಉಲ್ಲಾಸದೊಂದಿಗೆ, ಯಾರೂ ಹಿಡಿದು ನಿಲ್ಲಿಸಲಾರದ ಅದೇ ವೇಗದೊಂದಿಗೆ ಹಾಹಾಗೇ ಇದೆಯೆನ್ನಿಸಿ ಹಿಗ್ಗಾಗುತ್ತದೆ.
ಮಾದನಗೇರಿ ಕ್ರಾಸಿನ ಆ ಅಷ್ಟೂ ಸಮ್ಮೋಹಕ ಗುಣದ ಸದ್ದನ್ನು ಮತ್ತೆ ಮತ್ತೆ ನನ್ನಂಥ ಬಹಳಷ್ಟು ಮಿತ್ರರ ಪಾಲಿಗೆ ತರುತ್ತಿದ್ದೋನು, ಅಲ್ಲಿ ಹೂ ಮಾರುತ್ತಿದ್ದವರ ಬೆರಳುಗಳ ಮಧ್ಯದ ಕನಕಾಂಬರ ದಂಡೆಯ ಅತ್ಯಂತ ಅಂತರಂಗವನ್ನು ನಮಗೆಲ್ಲ ಕಾಣಿಸಬಲ್ಲವನಾಗಿದ್ದವನು, ಗಿಣಿಶಾಸ್ತ್ರದವನ ಭಾಷೆಯಲ್ಲಿ ತೊದಲಿಲ್ಲದಂತೆ ಮಾತಾಡಿ ನಮ್ಮೊಳಗೆ ಥ್ರಿಲ್ಲು ಹುಟ್ಟಿಸುತ್ತಿದ್ದವನು, ಮೀನಿನ ಕನ್ನಮ್ಮನ ನಡುರಾತ್ರಿಯ ನಿಗೂಢಗಳ ಬಗ್ಗೆ ಅರೇಬಿಯನ್ ನೈಟ್ಸ್ ಥರದ ಕಥೆಗಳಿಂದ ಅಸಾಧಾರಣವಾಗಿ ರಂಜಿಸುತ್ತಲೇ ಕನ್ನಮ್ಮನಂಥ ಹೆಣ್ಣೊಬ್ಬಳ ಸಂಕಟಗಳ ಬಗ್ಗೆ ಪೋಲಿಗಳ ಕಣ್ಣಲ್ಲೂ ಕಣ್ಣೀರು ಕದಲುವ ಹಾಗೆ ಮಾಡುತ್ತಿದ್ದೋನು, ತಾಕತ್ತು ಅಂಬೂದು ಎಲ್ರಲ್ಲೂ ಇರ್ತದೆ; ಹತ್ತಾಟ ಗೆದ್ದು ಕೊಕ್ಕೊಕ್ಕೋಕ್ಕೊ ಅಂತ ಕೂಗ್ತಾ ಮೆರೆಯೂ ಕತ್ತಿ ಹುಂಜನನ್ನೂ ಒಂದೇ ಪೆಟ್ಟಿಗೆ ದೊಬಕ್ಕಂತ ಕೆಡಗೂ ಹುಂಜವೂ ಅದ್ಯಾವ್ದೋ ಗೂಡಿಂದ ಬಂದ್ಬಿಡ್ತದೆ ಅಂತೆಲ್ಲ ನಮ್ಮಂಥೋರ ಲೆವೆಲ್ಲಿಗೆ ಎತ್ತರದ್ದು ಅನ್ನೋವಂಥ ಸ್ಟೈಲಲ್ಲಿ ಸ್ಟೇಟ್ಮೆಂಟು ಒಗೆದು, ಅದನ್ನು ಕೇಳಿಸಿಕೊಂಡವರಿಂದ `ಅಬ್ಬಾ, ಕೇಳ್ರೊ ಕಳ್ಳಬೋಳೀಮಗನ ವೇದಾಂತವಾ` ಎಂಬ ಅಪರಿಮಿತ ಶ್ಲಾಘನೆಗೆ ಪಾತ್ರನಾಗುತ್ತಿದ್ದೋನು ಹರಿ.
ಹರಿ ಮಾದನಗೇರಿಯವನು ಮಾತ್ರವಲ್ಲ; ಬದಲಾಗಿ ಮಾದನಗೇರಿಯ ಅಣುಕ್ಷಣವೂ ಅವನೇ ಆಗಿದ್ದ. ಅವನೊಳಗೊಂದು ಬಿಸಿಲ ಝಳವಿತ್ತು. ಅವನದೇ ವಯಸ್ಸಿನ ಹುಡುಗರಾಗಿದ್ದ ನಮ್ಮೆಲ್ಲರನ್ನೂ ಮೀರಿಸಬಲ್ಲ ನಿಲುವಿನ ಮುಗ್ಧತೆಯಲ್ಲೇ ಅವನ ಓಟವನ್ನು ನಿಕ್ಕಿಗೊಳಿಸಬಲ್ಲ ನೈರುತ್ಯ ಮಾರುತವಿತ್ತು. ಯಾವಾಗಲೂ ಬೀಡಿಯೆಲೆಯನ್ನು ಕತ್ತರಿಸುವ ಕಲೆಗಾರಿಕೆ ಬಗ್ಗೆ ಹೇಳುತ್ತಿದ್ದ ಅವನ ಮಾತು ಕೇಳಿಯೇ ನಾವೆಲ್ಲ ದಮ್ಮೆಳೆಯುವುದರಲ್ಲಿ ಅರ್ಜುನ ಸಾಮರ್ಥ್ಯ ಪಡೆದಿರುವಂಥ ಸಂದರ್ಭದಲ್ಲಿ ಅವನು ಮಾತ್ರ ಪುಕ್ಕಲನಂತೆ ದಮ್ಮೆಂದರೆ ದೂರ ಓಡುತ್ತ ನಮ್ಮೆಲ್ಲರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ. ಸ್ಕೂಲು ಮುಗಿದರೆ ಸಾಕು, ಮನೆಗೆ ವಾಪಸಾಗುತ್ತಲೇ ಅವನಿಗೆ ತರಕಾರಿಯನ್ನೊ, ಬೆಟ್ಟದ ವಿಚಿತ್ರ ಥರದ ಹಣ್ಣುಗಳನ್ನೊ, ಕನಕಾಂಬರ ದಂಡೆಯನ್ನೊ ಮಾರುತ್ತ ಹೈವೇಯಲ್ಲಿ ನಿಲ್ಲಬೇಕಾದ ಕೆಲಸ ಕಾದಿರೋದು. ಅದಕ್ಕಾಗಿ ಓಡುವ. ನಾವೆಲ್ಲ ಶಾಲೆಯಿಂದ ಮನೆಗೆ ಮರಳುವ ದಾರಿಯುದ್ದಕ್ಕೂ ಕಂಡ ಕಂಡ ಓತಿಕ್ಯಾತ ಊಸರವಳ್ಳಿಯನ್ನೆಲ್ಲ ಕಲ್ಲೆತ್ತಿ ಬೀಸಾಕಿ ಗೋಳು ಹೊಯ್ದುಕೊಳ್ಳುತ್ತ ಬರುತ್ತಿದ್ದರೆ, ಅವನು ಮಾತ್ರ ಅಷ್ಟೊತ್ತಿಗಾಗಲೇ ಸ್ಲೇಟು ಪುಸ್ತಕದ ಚೀಲವನ್ನು ಮನೆಯಂಗಳದಲ್ಲೊ, ಕೋಳಿಗೂಡಿನ ಮೇಲೊ ಎಸೆದು ಕೆಂಪು ರಂಗು ಕಾರುವ ಅಂಗಿಯೊಂದನ್ನು ಸಿಕ್ಕಿಸಿಕೊಂಡು ಹೈವೇಯಲ್ಲಿ ಕೈಯೆತ್ತಿ ನಿಂತುಬಿಟ್ಟಿರುತ್ತಿದ್ದ. ಅವನ ಧಾವಂತಗಳಿದ್ದುವಲ್ಲ, ಅವು ಅವನ ಜರೂರು ಕೂಡ ಆಗಿದ್ದವು. ಹೈವೇಯಲ್ಲಿ ವ್ಯಾಪಾರಕ್ಕೆ ನಿಂತಾಗ, ಇಂತಿಂಥಾದ್ದನ್ನು ಇಷ್ಟಕ್ಕೆ ಕೊಡಬೇಕು ಎಂದು ಮನೆಯಲ್ಲಿ ದೊಡ್ಡವರು ಕೊಟ್ಟ ಗೈಡೆನ್ಸು ನಿರುಪಯುಕ್ತವಾಗುತ್ತಿದೆಯೆನ್ನಿಸೋ ಕ್ಷಣಗಳಲ್ಲಿ ಅದರ ಬಗ್ಗೆ ತಾನೇ ತೀರ್ಮಾನ ತೆಗೆದುಕೊಂಡುಬಿಡುವುದು ಗೊತ್ತಿದ್ದ ಅವನು, ಶಾಲೆಯ ಪಾಠಗಳಿಗೆ ಉತ್ತರ ಬರೆಯುವಲ್ಲಿ ಸೋತರೂ ಯಾವತ್ತೂ ಜೋಲುಮೋರೆ ಹಾಕಿಕೊಂಡಿದ್ದಿರಲಿಲ್ಲ.
ಒಂದು ಸಲ ಹರಿ, ಬಹುಶಃ ದುಸ್ವಪ್ನದಲ್ಲೂ ಹತ್ತಿರ ಸುಳಿದಿರದಂಥ ಕೆಟ್ಟ ಘಳಿಗೆಯೊಂದರ ಸುಳಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟಿದ್ದ. ಅದೇ ವೇಳೆ, ಅದು ಹರಿಯ ಬಗ್ಗೆ ಊರಿಗೆ ಊರೇ ಎದೆಯುಬ್ಬಿಸಿಕೊಂಡು ಅಭಿಮಾನ ತೋರುವುದಕ್ಕೆ ಕಾರಣವಾದ ಪವಾಡದಂಥ ಘಟನೆಯೂ ಆಗಿಬಿಟ್ಟಿತ್ತು. ಮಾದನಗೇರಿಯ ಜೀವವೇ ತಲ್ಲಣಗೊಳ್ಳುವಂತೆ ಧುತ್ತೆಂದಿತ್ತು ಆ ಪ್ರಸಂಗ. ಬಂಡಿಹಬ್ಬದ ಜಾತ್ರೆಯ ಟೈಮು ಅದು. ಇದ್ದಕ್ಕಿದ್ದಂತೆ ಬಂಡಿಹಬ್ಬದ ಉಮೇದು ಕಳಚಿಬಿದ್ದಿತ್ತು. ಜಾತ್ರೆಯ ಸಂದಣಿಯಲ್ಲಿ ಯಾರೋ ನಾಲ್ಕು ಜನ ಹರಿಯನ್ನು ಹಿಡಿದುಕೊಂಡು ಮನಸ್ಸಿಗೆ ಬಂದಂತೆ ಬಾರಿಸತೊಡಗಿದ್ದರು. ನಮ್ಮ ಹುಡುಗಿಯ ಸೆರಗು ಎಳೀತಿಯಾ ಬೋಸಡಿಮಗ್ನೆ ಎನ್ನುತ್ತ ಮುಖ ನೋಡದೆ ಒದೆಯುತ್ತಿದ್ದರು. ರಕ್ತ ಸೋರುವ ಹಾಗೆ ಅವರಷ್ಟೂ ಜನ ಸೇರಿ ಹೊಡೆಯುತ್ತಿದ್ದರೆ, ಹರಿ ಒಬ್ಬನೇ ಒಬ್ಬನಾಗಿಹೋಗಿದ್ದ. ಯಾವಾಗ ಅದು ಬಂಡಿಹಬ್ಬದ ರಶ್ಶನ್ನೂ ಮೈಮರೆವನ್ನೂ ಸೀಳಿ ಬಯಲಿಗೆ ಬಂತೊ ಜನರೆಲ್ಲ ಓಡೋಡಿ ಬಂದಿದ್ದರು. ಅದಕ್ಕಿಂತ ಮಿಗಿಲಾಗಿ ಅವಳು, ಪರವೂರಿನ ಆ ಅಪರಿಚಿತ ಸುಂದರಿ ಎದ್ದೆನೊ ಬಿದ್ದೆನೊ ಎಂದುಕೊಂಡವಳಂತೆ ಬಂದು, ಊರ ಜನರಿಗಿಂತ ಮುಂದಾಗಿ ಆ ರಕ್ಕಸರ ಕೈಯಿಂದ ಹರಿಯನ್ನು ಬಿಡಿಸಿಕೊಂಡಿದ್ದಳು. ಅಚ್ಚರಿಯೆಂದರೆ, ಹರಿಯನ್ನು ಹೊಡೆಯುತ್ತಿದ್ದ ಆ ರಕ್ಕಸರು ನಮ್ಮ ಹುಡುಗಿ ಎಂದು ಯಾವಳ ಬಗ್ಗೆ ಹೇಳಿದ್ದರೊ ಅದೇ ಹುಡುಗಿಯಾಗಿದ್ದಳು ಅವಳು. ನೀವೆಲ್ಲಾ ಮನುಷ್ಯರಾ ಎಂದು, ಹೊಡೆಯುತ್ತಿದ್ದವರ ಮೇಲೆ ಕಿರುಚಾಡುತ್ತ ಹರಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಲ್ಲೇ ಅರಳೀಕಟ್ಟೆಯ ಮೇಲೆ ಅವನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಸಂತೈಸತೊಡಗಿದಳು ಲಂಗದಾವಣಿಯ ಆ ಹುಡುಗಿ. ಹಬ್ಬದಾಟದಲ್ಲಿ ಗೆಲ್ಲೋ ತಾಕತ್ತು ಯೋಗ್ಯತೆ ನಿಮಗಿಲ್ಲದಿದ್ದರೆ, ಗೆದ್ದೋನ ಮ್ಯಾಲೆ ಸುಳ್ಳೇ ಅಪವಾದ ಹೊರೆಸಿ ಗೆಲ್ಲೋ ಕುತಂತ್ರ ಮಾಡಬೇಡಿ ಎಂದು ಆ ನೀಚರ ಸಂಚನ್ನು ಬಯಲು ಮಾಡಿಬಿಟ್ಟಿದ್ದಳು. ಯಾವಳ ಸೆರಗು ಎಳೆದ ಅಂತ ನೆವ ತೆಗೆದು ಹರಿಯನ್ನು ಅವರು ಹೊಡೆದರೋ ಅದೇ ಹುಡುಗಿಯೇ ತನ್ನದೇ ಸೆರಗಿನಿಂದ ಗಾಳಿಬೀಸುತ್ತ, ತನ್ನ ಸೆರಗಿನಿಂದಲೇ ಅವನ ಮುಖದಲ್ಲೊಡೆದುಕೊಂಡಿದ್ದ ನೆತ್ತರು ಒರೆಸುತ್ತ ಹರಿಯನ್ನು ಆರೈಸತೊಡಗಿದ್ದಳು. ಅವಳ ಆ ಪರಿಯ ಎದುರು, ಅವಳ ಊರಿನ ಆ ಗಂಡಸರೇ ನರಸತ್ತವರಂತೆ ಗೋಣು ಬಗ್ಗಿಸಿ ನಿಂತುಬಿಟ್ಟರು.
ಉಕ್ಕುವ ಪ್ರಾಯದಲ್ಲಿ ತುಂಬಿ ತುಳುಕುತ್ತಿದ್ದ ಆ ಹುಡುಗಿ, ಪ್ರೀತಿ ತುಂಬಿದ ನಿಸ್ಸಂಕೋಚದಿಂದ ಹಾಗೆ ಹರಿಯನ್ನು ತನ್ನ ತೋಳುಗಳೊಳಗೆ ಆದರಿಸುತ್ತಿದ್ದರೆ, ನೋಡುತ್ತ ನಿಂತ ಹುಡುಗರಿಗೆ ನಿಂತಲ್ಲಿ ನಿಲ್ಲಲಾರದಂಥ ತಳಮಳ. ಅವಳ ಯಾವ ಯಾವ ಭಾಗಗಳು ಹರಿಯನ್ನು ಸ್ಪರ್ಶಿಸಿದವು ಎಂಬ, ಸತ್ಯ ಮತ್ತು ಕಲ್ಪನೆಗಳೆರಡೂ ಬೆರೆತ ಕುತೂಹಲದಲ್ಲಿ ಅವತರಿಸಿದ ಉದ್ವೇಗ. ದಾವಣಿಯ ಮಿತಿಯನ್ನು ದಾಟಿ ಇಣುಕುವ ಅವಳ ತುಂಬಿದೆದೆ ಮತ್ತು ಮಿಂಚಿನಂಥ ಉನ್ಮಾದ ಚೆಲ್ಲುವ ಅವಳ ಕಿಬ್ಬೊಟ್ಟೆಯ ಸಮೀಪದಲ್ಲಿ, ಅವಳ ತೊಡೆಗಳ ಮೃದುತ್ವದಲ್ಲಿ ಹರಿಗೆ ಸಂದಾಯವಾದ ಸೌಭಾಗ್ಯದ ಬಗ್ಗೆ ಕಲ್ಪಿಸಿಕೊಳ್ಳುತ್ತ ಕಲ್ಪಿಸಿಕೊಳ್ಳುತ್ತ ವಿಚಿತ್ರ ವಿರಹದಲ್ಲಿ ಬಿದ್ದರು. ಹೆಸರೂ ಕೂಡ ಗೊತ್ತಿಲ್ಲದ ಹುಡುಗಿಯೊಬ್ಬಳು ರೋಚಕವಾಗಿ ಆವರಿಸಿಕೊಳ್ಳುತ್ತ ಶಾಶ್ವತವಾಗಿ ಎದೆಯೊಳಗೆ ಕೂತುಬಿಡಬಲ್ಲಳು ಎಂಬ ಅಸಾಧಾರಣ ಸತ್ಯ ಮಾದನಗೇರಿಯ ಅದೆಷ್ಟೋ ಪೋಕರಿಗಳಿಗೆ ಆ ಕ್ಷಣದಲ್ಲೆ ಅರ್ಥವಾಗಿತ್ತು. ಅವರೆಲ್ಲರ ಹೊಟ್ಟೆಯೊಳಗೆ ಬೆಂಕಿ ಬಿದ್ದಿತ್ತು.
ಹರಿ ಮಾತ್ರ ನಿಜವಾಗಿಯೂ ಅಗ್ನಿಯನ್ನು ಹೊಕ್ಕು ಜೀವಂತವಾಗಿ ಹೊರಬಂದವನಂತೆ ಪರಿಶುದ್ಧನಾಗಿಬಿಟ್ಟಿದ್ದ, ಆ ಹುಡುಗಿಯ ಆತಿಥ್ಯದಲ್ಲಿ. ಬಂಡಿಹಬ್ಬದ ಬಯಲೊಳಗೆ ಅರಳಿಕಟ್ಟೆಯ ಸಾಕ್ಷಿಯಲ್ಲಿ ಬೆರಗೊಂದು ಹಾಗೆ ಜರುಗಿತ್ತು.
ಏಳನೇ ಕ್ಲಾಸಿನಲ್ಲಿರೋವಾಗ ಮೊದಲ ನಾಲ್ಕೈದು ತಿಂಗಳು ಶಾಲೆಗೆ ಬಂದದ್ದಷ್ಟೇ ಕೊನೆ. ಹರಿ ಮತ್ತೆ ಶಾಲೆಯತ್ತ ಮುಖ ಹಾಕಲಿಲ್ಲ. ಆದರೆ, ಮಾದನಗೇರಿಗೆ ಬರುವ ಫಾರಿನ್ನಿನವರನ್ನು ನೋಡಿಯೊ ಏನೊ, ಅವರ ಹಾಗೆಯೇ ಇಂಗ್ಲೀಷು ಮಾತಾಡಬೇಕು ಎಂಬ ಉಮೇದಿಗೆ ಸಿಕ್ಕಿದ್ದ ಹರಿ ಮಾತ್ರ ನಮಗೆ ಮರೆತುಹೋಗಲಿಲ್ಲ. ಬರೋ ಎರಡು ಮೂರು ಇಂಗ್ಲೀಷ್ ಪದಗಳನ್ನೇ ಅವನು ಗಂಟಲೊಳಗೇ ತಿರುಗಿಸುತ್ತ ವಿಚಿತ್ರ ದನಿಯಲ್ಲಿ ಮಾತಾಡುತ್ತ, ತಾನು ಫಾರಿನ್ನಿನವರ ಹಾಗೆಯೇ ಮಾತಾಡುತ್ತಿದ್ದೇನೆ ಅನ್ನೋದನ್ನು ಮತ್ತೆ ಮತ್ತೆ ನಮ್ಮೆಲ್ಲರ ಗಮನಕ್ಕೆ ತರೋ ಪ್ರಯತ್ನ ಮಾಡುತ್ತ ಶಾಲೆಯೊಳಗೆ ಹಿಂಬದಿ ಬೆಂಚಿನಲ್ಲಿ ಕೂತು ಹರಿ ಮಾಡುತ್ತಿದ್ದ ತರಲೆಗಳನ್ನು ಆತ ಶಾಲೆ ಬಿಟ್ಟ ಬಳಿಕ ನಾವೆಲ್ಲ ಎಷ್ಟೊಂದು ಮಿಸ್ ಮಾಡಿಕೊಂಡೆವು ಎಂಬುದನ್ನ ಶಬ್ದಗಳಲ್ಲಿ ಹೇಳುವುದು ಸಾಧ್ಯವಿಲ್ಲ. ಮೊದಲ ದಿನ ಆತ ಶಾಲೆಗೆ ಬರದಿದ್ದಾಗ, ವಾರದಲ್ಲೆರಡು ದಿನವಾದರೂ ಆತ ಶಾಲೆ ತಪ್ಪಿಸೋದು ಮಾಮೂಲೇ ಅನ್ನೋ ಕಾರಣದಿಂದ ನಾವ್ಯಾರೂ ಅದನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ವಾರ ಕಳೆಯಿತು. ಹರಿ ಬರಲಿಲ್ಲ. ತಿಂಗಳೇ ಆಗಿಹೋಯ್ತು. ಹರಿಯ ಪತ್ತೆಯಿರಲಿಲ್ಲ. ಏನೋ ಮಾರಾಯ ಎಂದು ಅವನನ್ನೇ ಕೇಳಿನೋಡುವಾ ಎಂದು ಮನೆಯವರೆಗೂ ಹೋಗಿಬಂದರೂ ಹರಿ ಸಿಗಲಿಲ್ಲ. ಅವನು ಯಲ್ಲಾಪುರಕ್ಕೆ ಹೋಗಿದ್ದಾನೆ ಎಂದಿದ್ದರು ಮನೆಮಂದಿ. ಯಾಕೆ ಅಂತ ಕೇಳುವ ಧೈರ್ಯ ಮಾಡಿದ್ದಕ್ಕೆ ಸಿಕ್ಕ ಉತ್ತರ, ಅವನಿನ್ನು ಶಾಲೆಗೆ ಬರೋದಿಲ್ಲ ಅನ್ನೋದಾಗಿತ್ತು. ಅಲ್ಲಿಗೆ ಹರಿ ನಮ್ಮ ಪಾಲಿಗೆ ಏನನ್ನೋ ಇಲ್ಲವಾಗಿಸಿ, ಬಿಸಿಲು ಕುಡಿಯುತ್ತ ಹೆಬ್ಬಾವಿನಂತೆ ಮಲಗಿರೋ ಮಾದನಗೇರಿಯ ಹೈವೇನಲ್ಲಿ ದೂರ ದೂರ ನಡೆದುಹೋದಂತೆ ಅನ್ನಿಸಿ ತೀವ್ರ ವಿಷಾದದಲ್ಲಿ ಮುಳುಗಿಹೋಗಿದ್ದೆವು.
ಆದರೆ ನಮ್ಮೆಲ್ಲರ ದಾರಿಗಳು ಆಮೇಲೆ ಎಷ್ಟು ಬೇಗ ಬೇರೆಬೇರೆಯಾಗಿಬಿಟ್ಟವೆಂದರೆ, ಹರಿಯನ್ನು ಮತ್ತೆ ಯಾವತ್ತಾದರೂ ಕಾಣುವ ಅವಕಾಶವನ್ನು ಕೂಡ ನಾವು ಪೂರ್ತಿಯಾಗಿಯೇ ತಪ್ಪಿಸಿಕೊಂಡೆವು. ಹೈಸ್ಕೂಲು, ಕಾಲೇಜು, ಯೂನಿವರ್ಸಿಟಿಗಳು, ಅಲ್ಲಿನ ಸುಂದರ ಹುಡುಗಿಯರು, ಪರೀಕ್ಷೆಗಳು, ಮಾರ್ಕುಗಳು, ಅಫೇರುಗಳು, ಸುತ್ತಾಟಗಳು, ಕಾಂಡೋಮುಗಳು, ಜಾಬುಗಳು, ಸಂಬಳದ ಮುಖವನ್ನಾಧರಿಸಿ ನಿಕ್ಕಿಯಾಗುವ ಅಂತಸ್ತುಗಳು, ಪ್ರೇಮ ವಿವಾಹಗಳು, ವರದಕ್ಷಿಣೆಯ ಅದ್ಭುತ ಲೆಕ್ಕಾಚಾರಗಳು, ಬಂಗಲೆಗಳು ಮತ್ತು ರಿಯಲ್ ಕನಸುಗಳು…. ಹೀಗೆ ಒಬ್ಬೊಬ್ಬರದೂ ವಿಭಿನ್ನ ಜಗತ್ತಾಗಿ ಒಡೆದುಕೊಂಡು ಹರಿ ಇರಲಿ, ಮಾದನಗೇರಿಯೂ ಲೆಕ್ಕಕ್ಕಿಲ್ಲದೆ ಹೋಯಿತು.
ಇಂಥ ಎಡೆಬಿಡದ ವ್ಯವಹಾರಗಳ ನಡುವೆಯೂ, ಸಂಕೀರ್ಣತೆಯ ನಡುವೆಯೂ, ಸ್ವಹಿತಾಸಕ್ತಿಗಳ ನಡುವೆಯೂ ಅಲ್ಲೊಬ್ಬ ಇಲ್ಲೊಬ್ಬ ಮಾದನಗೇರಿಯ ಮುಂದೆ ನಿಂತು ಖುಷಿಯಿಂದ ಕೂಗುತ್ತ, ಅದರ ಮರುದನಿಗೆ ಕಿವಿತೆರೆದುಕೊಂಡು ಕಾಯುವ ಅದ್ಭುತ ಕೂಡ ನಡೆದೇ ಇತ್ತು. ಅಂಥವರು ಸಿಟಿಯಲ್ಲೇ ಹುಟ್ಟಿ ಬೆಳೆದಿದ್ದ ತಮ್ಮ ಹೆಂಡತಿಯರಿಗೆ ಮಾದನಗೇರಿಯ ಖಮ್ಮಗಿನ ಗಾಳಿಯ ಭಾಸವುಣಿಸಲು ಪ್ರಯತ್ನಿಸುತ್ತ, ತಮ್ಮ ಮಕ್ಕಳನ್ನು ಅಲ್ಲಿನ ಬಂಡಿಹಬ್ಬದ ಗೌಜಿಗೆ ಬಿಟ್ಟುನೋಡುತ್ತ ಸುಖಪಡುವರು. ಆದರೆ, ಅಂಥ ಸುಖವೂ ಅವರ ಸಂಸಾರಕ್ಕೆ ಮಾತ್ರ ಸೀಮಿತವಾಗಿಬಿಟ್ಟು, ಹರಿಯನ್ನು ಕೇಳುವ ವ್ಯವಧಾನ ಅವರಲ್ಲಿ ಇರುತ್ತಲೇ ಇರಲಿಲ್ಲ. ಮಾದನಗೇರಿ ಅವರಿಗೊಂದು ಮೋಜಿನ ಪರ್ಯಾಯ ಮಾತ್ರವಾಯಿತೇ ಹೊರತು, ಮಾನಸಿಕವಾಗಿ ಅದರ ಹಂಗಿನಿಂದ ದೂರವಾಗಿಬಿಟ್ಟಿದ್ದರು.
ಹೀಗೆ ಒಂದಿಡೀ ಜಗತ್ತು ಮಾದನಗೇರಿಗೆ ಬೆನ್ನು ಹಾಕಿ ಬಿರುಸಾಗಿ ಸಾಗಿದ್ದರೆ, ಅಲ್ಲಿ ಮಾದನಗೇರಿಯ ಅದೇ ಕ್ರಾಸಿನಲ್ಲಿ ಲಯ ತಪ್ಪದೆ ನಿರಂತರ ಕುಣಿಯುತ್ತಿರುವಂತೆ ಕಾಣುವ ಬಿಸಿಲ ಝಳದಲ್ಲೂ ಹರಿಯ ಚಹರೆಗಳು ಅದೃಶ್ಯವಾಗಿದ್ದವು. ಮುಖ್ಯವಾಗಿ ಮಾದನಗೇರಿಗೆ ಇನ್ನಷ್ಟು ಮಾಯಾವಿತನ ಅಡರಿಕೊಂಡಿತ್ತು. ಅಲ್ಲಿ ಅನರ್ವಚನೀಯವೆನ್ನಿಸುವಂಥ ತವಕಗಳು ಹಾಜರಾಗಿದ್ದವು. ಅತಿಮಾನುಷವೆನ್ನಿಸುವಂಥ ಕಳೆ ಏರಿಕೊಂಡಿತ್ತು. ಅದಕ್ಕೊಂದು ಚಕ್ರವ್ಯೂಹ ಸ್ವರೂಪ ಅನಾಯಾಸವಾಗಿ ಬಂದುಬಿಟ್ಟಿತ್ತು. ಇದೆಲ್ಲದರ ಮಧ್ಯೆಯೂ ಗಿಣಿಗೆ ಭವಿಷ್ಯದ ಕಾರ್ಡು ತೆಗೆಯುವ ಕೆಲಸ ಇದ್ದೇ ಇತ್ತು. ಗಿಣಿಶಾಸ್ತ್ರದವನ ವಂಶಸ್ಥರ ಜೊತೆ ಕಾಂಪಿಟೇಷನ್ನಿಗೆ ಕಂಪ್ಯೂಟರ್ ಜಾತಕ ಚತುರರು ನಿಂತಿದ್ದರು. ಕನ್ನಮ್ಮನಂಥವರು ಮಾತ್ರ ಕಾಣೆಯಾಗಿ ಹೋಗಿದ್ದರು. ಹರಿಯೂ ಮರಳಿ ಸಂಭವಿಸುವ ಸ್ಥಿತಿಯಿರಲಿಲ್ಲ. ಆದರೆ ಹರಿ ಮಾದನಗೇರಿಯಲ್ಲೇ ಇದ್ದ.
ಒಂದಿನ ನಂಗೊಂದು ಫೋನ್ ಕಾಲ್ ಬಂತು. ಅತ್ತ ಕಡೆಯಿಂದ ಮಾತಾಡುತ್ತಿದ್ದೋನು ನಂದಕಿಶೋರ. ಮಾದನಗೇರಿಯ ನೀರು ಕುಡಿದೇ ಬೆಳೆದ ನಂದಕಿಶೋರ ಸೆವೆಂಥ್ ಕ್ಲಾಸಿನವರೆಗೂ ನಮ್ಮೊಂದಿಗೆ ಓದಿದೋನು. ಆ ವಯಸ್ಸಲ್ಲೇ ಇತರ ಹುಡುಗರಿಂದ ಒಂದು ನಿಶ್ಚಿತ ದೂರವನ್ನು ಕಾಯ್ದುಕೊಳ್ಳಲು ಕಲಿತಿದ್ದವನು. ಯಾರೊಂದಿಗೂ ಹೆಚ್ಚು ಸೇರದೆ, ಸ್ಕೂಲಲ್ಲಿ ನೂರಕ್ಕೆ ನೂರು ಎತ್ತುತ್ತಿದ್ದೋನು. ಬೇರೆಯವರ ಸುಖ ದುಃಖದಲ್ಲಿ ಅನಾಸಕ್ತನಾದರೂ, ತನ್ನ ಪ್ರತಿ ಹಂತದ ಯಶಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತಾಗಬೇಕು ಎಂಬ ಉದ್ದೇಶವಿಟ್ಟುಕೊಂಡಿದ್ದವನು. ಅದೇ ಕಾರಣದಿಂದಲೇ ಏನೊ, ಎಷ್ಟೋ ಗೆಳೆಯರು ಸಂಪರ್ಕವೇ ಇಲ್ಲದಂತಾಗಿ ಹೋಗಿದ್ದಾಗಲೂ ಇವನು ಮಾತ್ರ ಬಹುತೇಕ ಎಲ್ಲರ ಜೊತೆಯೂ, ಅದರಲ್ಲೂ ಅಂಕೋಲಾ, ಕುಮಟಾ, ಗೋಕರ್ಣದ ಕ್ಲಾಸ್ಮೇಟುಗಳ ಜೊತೆಯಂತೂ ನಿರಂತರ ಕಾಂಟ್ಯಾಕ್ಟಿನಲ್ಲಿದ್ದ. ಆದರೂ, ತನ್ನ ಕೆಲಸವಾಗಬೇಕಿರುವ ಜರೂರು ಇದ್ದರೆ ಮಾತ್ರವೇ ಬರುತ್ತಿತ್ತು ಅವನ ಕಡೆಯಿಂದ ಫೋನು. ಹೀಗಾಗಿ, ನಂದಕೀಶೋರ ಫೋನು ಮಾಡಿದಾಗ ನನಗೆ ಮೊದಲು ಅಚ್ಚರಿಯಾಗಲಿಲ್ಲ. ಬದಲಾಗಿ, ಇವನ ಪುರಾಣ ಕೇಳಿಸಿಕೊಳ್ಳಬೇಕಲ್ಲ ಅನ್ನಿಸಿತು. ಅವನು ಮಾತಾಡುತ್ತಿದ್ದ. ಅಮೆರಿಕಾದಲ್ಲಿ ಹೋಗಿ ಕೂತುಬಿಟ್ಟಿದ್ದವನು, `ಸಿಕ್ಕಾಪಟ್ಟೆ ದೊಡ್ಡ ಪ್ರಾಜೆಕ್ಟ್ ಒಂದು ನನ್ನ ಕೈಯಲ್ಲಿದೆ ಮಾರಾಯ. ಹೆಂಡತಿಯನ್ನು ಮಾತಾಡಿಸೋಕ್ಕೂ ಪುರುಸೊತ್ತಿಲ್ಲದ ಹಾಗಾಗಿಬಿಟ್ಟಿದೆ` ಎಂದೆಲ್ಲ ಪ್ರಲಾಪಿಸಿದ. ನಾನು ನಡುವೆ ಬೇರೆ ಏನಾದರೂ ಲೋಕಾಭಿರಾಮ ಇರಲಿ ಅಂತಾ, `ಎಷ್ಟು ಮಕ್ಕಳೊ?` ಕೇಳಿದೆ. `ಒಬ್ಬ ಮಗ. ಈಗ ಮತ್ತೆ ಹೆಂಡತಿ ಪ್ರೆಗ್ನೆಂಟು` ಅಂದ. ಇದನ್ನು ಹೇಳುವಾಗ ಮಾತ್ರವೇ ಅವನ ದನಿಯಲ್ಲಿ ಅತ್ಯಂತ ಸಹಜತೆ ಇದೆಯೆನ್ನಿಸಿತು. ಹೆಂಡತಿ ಜೊತೆ ಮಾತಾಡೋಕ್ಕೆ ಪುರುಸೊತ್ತಿಲ್ಲದಿದ್ದರೂ ಸದ್ಯ ಇದಕ್ಕಾದರೂ ಪುರುಸೊತ್ತಿದೆಯಲ್ಲ ಎಂದುಕೊಂಡೆ ಮನಸ್ಸಲ್ಲೇ.
ನಾನು ನಿಜವಾಗಿಯೂ ಅಚ್ಚರಿಪಡೋ ಹಾಗಾದದ್ದು ಅವನು ಹರಿಯ ಬಗ್ಗೆ ಕೇಳಿದಾಗ. ಹರಿ ಅಂದರೇ ಆಗುತ್ತಿರಲಿಲ್ಲ ನಂದಕಿಶೋರನಿಗೆ. ಪಿರ್ಕಿ ಬೋಳಿಮಗ ಎಂದು ಹೆಜ್ಜೆಹೆಜ್ಜೆಗೂ ಬೈದುಕೊಳ್ಳುತ್ತಿದ್ದ. ಅಂಥವನು ಈಗ ಹರಿಯ ಬಗ್ಗೆ ಕೇಳುತ್ತಿದ್ದಾನೆ ಅನ್ನೋದು ತೀರಾ ತೆಗೆದುಹಾಕಿಬಿಡುವಂಥ ಸಂಗತಿಯೇನೂ ಆಗಿರಲಿಲ್ಲ. ನಂದಕಿಶೋರನ ಮುಂದಿನ ಮಾತುಗಳು ನಾನು ಇನ್ನೂ ಆಶ್ಚರ್ಯಪಡಲು ಕಾರಣವಾದವು: `ನಿಂಗೆ ನೆನಪಿಲ್ವೇನೊ? ಆ ಹರಿ ಒಂದು ಥರದ ಎಲೆ ತಂದು ತುತ್ತೂರಿ ಥರ ಊದ್ತಾ ಇದ್ದ. ನೀವೆಲ್ಲ ಅದ್ರ ಸಲುವಾಗಿ ಅವ್ನಿಗೆ ದುಂಬಾಲು ಬೀಳ್ತಿದ್ರಲ್ಲೊ. ಆ ಎಲೆಗೆ ಅವನು ಅದೇನೋ ಹಚ್ಚಿ ಅದರಿಂದ ವಿಚಿತ್ರ ಕಲರ್ ಬರಿಸ್ತಿದ್ದ ಗೊತ್ತಿಲ್ವಾ? ಅದ್ರ ಬಗ್ಗೆ ನಂಗೆ ತಿಳ್ಕೋಬೇಕಾಗಿದೆ. ಅದರ ರಹಸ್ಯ ಗೊತ್ತಾಗಿಬಿಟ್ಟರೆ ನನ್ನ ಸ್ಟಡಿಗೆ ಸಿಕ್ಕಾಪಟ್ಟೆ ಇಂಪಾರ್ಟೆನ್ಸ್ ಬಂದುಬಿಡುತ್ತೆ` ಅಂದ.
ನಂದಕಿಶೋರ ಫೋನ್ ಮಾಡಿದ್ದರ ಹಿಂದಿನ ಮರ್ಮ ನನಗೆ ಈಗ ಸಂಪೂರ್ಣವಾಗಿ ಅರ್ಥವಾಗಿತ್ತು. ಅಮೆರಿಕದಲ್ಲಿ ಕೂತವನಿಗೆ ಈಗ ಪಿರ್ಕಿ ಹರಿ ಬೇಕಾಗಿಬಿಟ್ಟನಲ್ಲ ಅನ್ನಿಸಿ, ಅದೂ ಅವನಿಗೆ ಹರಿಯ ಅಗತ್ಯ ಬಿದ್ದಿರುವುದರ ಕಾರಣವನ್ನು ನೆನೆದು ಖೇದವಾಯಿತು. ಹರಿ ಹೇಗಿದ್ದಾನೆ ಎಂದು ಕೇಳುವಷ್ಟೂ ಕಳಕಳಿ ಇಲ್ಲದವನಿಗೆ ಅವನಿಂದ ಆಗಬಹುದಾದ ಲಾಭದ ಮೇಲೆ ಮಾತ್ರವೇ ಕಣ್ಣಿರುವುದನ್ನು ಗಮನಿಸಿ ಮತ್ತಷ್ಟು ಸಂಕಟವಾಯಿತು. `ಅವನು ಮಾದನಗೇರಿಯಲ್ಲೇ ಇದ್ದಾನೊ ಅಥವಾ ಅಲ್ಲೇ ಯಲ್ಲಾಪುರದಲ್ಲೇ ಯಾವಳನ್ನಾದರೂ ಕಟ್ಟಿಕೊಂಡು ನಮ್ಮನ್ನೆಲ್ಲ ಮರೆತುಬಿಟ್ಟಿದ್ದಾನೊ ಸ್ವಲ್ಪ ತಿಳಕೊಂಡು ಹೇಳೊ ಮಾರಾಯ` ಎಂದದ್ದಕ್ಕೆ ನನಗೆ ತಕ್ಷಣವೇ ಉತ್ತರಿಸಬೇಕು ಅಂತನ್ನಿಸಲಿಲ್ಲ. ಆದರೂ, ಅವನಿಗೆ ಯಾವತ್ತೂ ಬೇಡವಾಗಿದ್ದ ಹರಿಯಿಂದ ಈಗ ಮತ್ತೊಂದು ದೊಡ್ಡ ಸಕ್ಸಸ್ಸು ಸೀಗೋ ಹಾಗಿದ್ದರೆ ಅದನ್ನು ನಾನ್ಯಾಕೆ ತಪ್ಪಿಸಲಿ ಎನ್ನಿಸಿ, `ಮಾದನಗೇರಿಯಲ್ಲೇ ಇದ್ದಾನೆ ಹರಿ. ನೀನು ಬಂದುಹೋಗು ಒಂದ್ಸಲ` ಎಂದು ಫೋನಿಟ್ಟುಬಿಟ್ಟೆ.
ಎಷ್ಟು ಹೊತ್ತಾದರೂ ಅವನ ಮಾತುಗಳು ಮನಸ್ಸೊಳಗೆ ಉಂಟುಮಾಡಿದ ಕೆಸರನ್ನು ನಿವಾರಿಸಿಕೊಳ್ಳೋಕ್ಕೆ ಆಗಲೇ ಇಲ್ಲ.
ಹರಿ ತುಂಬಾ ಅಂದರೆ ತುಂಬಾ ಕಾಡತೊಡಗಿದ. ಕೆಸರಿನ ಎದುರು ಎದೆಗೆಡುವ ನನ್ನಂಥವನಿಗೂ ಕೆಸರಿನ ಮಧ್ಯೆಯೂ ಬದುಕಿನ ಸೆಲೆ ಹುಡುಕಬಲ್ಲ ಹರಿಗೂ ಇರುವ ಹಳ್ಳ ಮತ್ತು ಸಮುದ್ರದಂಥ ಅಂತರ ಯಾವತ್ತಿಗೂ ಸಮಾನಾಂತರ ಕಾಯ್ದುಕೊಂಡೇ ಚರಿತ್ರೆಯನ್ನು ಕೊಂಡೊಯ್ಯುತ್ತದೆನ್ನಿಸಿತು. ಅವನು ನಮ್ಮನ್ನೆಲ್ಲ ಪ್ರೀತಿಸುವ ಹಾಗೆ ನಾವು ಅವನನ್ನು ಪ್ರೀತಿಸಲಾರೆವು ಅನ್ನಿಸಿತು. ನಾವು ಕೆಲವು ಗೆಳೆಯರು ಸೇರಿ ಮಾದನಗೇರಿಯ ಪುಟ್ಟ ಸ್ಕೂಲಿಗೆ ದೊಡ್ಡದೊಂದು ಕಟ್ಟಡ ಕಟ್ಟಿಸೋಕ್ಕೆ ತಯಾರಾದಾಗ, ಅದು ಹೇಗೆ ಅವನಿಗೆ ಸುದ್ದಿ ಸಿಕ್ಕಿತ್ತೊ, ಯಲ್ಲಾಪುರದಲ್ಲಿದ್ದವನು ಓಡಿಬಂದವನಂತೆ ಬಂದಿದ್ದ. ಈ ಶಾಲೆಯ ಋಣ ನನಗೂ ಇದೆ ಮಾರಾಯ್ರಾ, ನನ್ನದೂ ಒಂದು ಸಣ್ಣ ಪಾಲು ತಗೊಳ್ಳಿ ಎಂದು ಸಂಕೋಚಪಡುತ್ತಲೇ ಸ್ವಲ್ಪ ದುಡ್ಡು ಕೊಟ್ಟಿದ್ದ. ನಾವೇ ದೊಡ್ಡವರು ಎಂದುಕೊಂಡಿದ್ದವರು, ಹರಿಯ ಚೈತನ್ಯದ ಮುಂದೆ ಪುತು ಪುತು ಪತಂಗಗಳ ಹಾಗೆನ್ನಿಸಿಬಿಟ್ಟಿತ್ತು ಆ ಘಳಿಗೆ. ಸಣ್ಣವನಿರುವಾಗಲೇ ಅನಿವಾರ್ಯತೆಯ ಬೆನ್ನು ಹತ್ತಿ ಯಲ್ಲಾಪುರಕ್ಕೆ ಹೋದವನು, ಅಲ್ಲಿ ಸಿಕ್ಕ ಬದುಕು, ಕೆಲಸದ ನೆಪ, ಹವ್ಯಕರ ಹೆಣ್ಣಿನ ಸುಖ ಎಲ್ಲವನ್ನೂ ಮೀರಿಯೂ ಮಾದನಗೇರಿಯ ಸೆಳೆತದಲ್ಲೇ ಇದ್ದ. ದುಡಿಯಲಾರದಷ್ಟು ಸೋತುಹೋಗಿ ಮತ್ತೆ ಮಾದನಗೇರಿಗೆ ಬಂದು ತನ್ನ ಅದೇ ಹಳೆಯ ಗೂಡು ಸೇರಿಕೊಳ್ಳುವಾಗ, ಅವನ ಮೈಯಲ್ಲಿ ಬಲವಿಲ್ಲದಿದ್ದರೂ, ಅವನ ಪ್ರಾಣವೇ ಆಗಿ ಕಾಯಲು ಅವಳಿದ್ದಳು. ಬಯಸಿ ಬಯಸಿ ಅವನ ಬದುಕಿಗೆ ಬಂದಿದ್ದ ಹವ್ಯಕರ ಹೆಣ್ಣು. ವರ್ಷಗಳಿಂದ ನಿರ್ಮಾನುಷವಾಗಿಬಿಟ್ಟಿದ್ದ ಹರಿಯ ಹಟ್ಟಿಗೆ ಅವಳು ಜೀವ ತಂದಿದ್ದಳು. ಮಕ್ಕಳಿಲ್ಲವೆಂಬ ಕೊರಗು ಅಡಗಿಸಿಟ್ಟುಕೊಂಡೇ, ಗಂಡನನ್ನು ಮಗುವಂತೆ ನೋಡಿಕೊಂಡಿದ್ದಳು. ದುರಂತವೆಂದರೆ, ಯಾರ ಕನಿಕರವನ್ನೂ ಕೇಳದ ಅವಳ ಪಾಲಿಗೆ ಬದುಕು ಕೂಡ ಕನಿಕರ ತೋರದೇ ಹೋಯಿತು. ಯಲ್ಲಾಪುರದ ಆ ಧರಿತ್ರಿಯಂಥ ಹೆಣ್ಣು ಮಾದನಗೇರಿಯಲ್ಲಿ ಮಣ್ಣಾಗಿಹೋದಳು. ಅಲ್ಲಿಗೆ ಹರಿಯ ಪ್ರಾಣವೇ ಕಣ್ಣುಮುಚ್ಚಿದಂತಾಗಿತ್ತು. ಹರಿ ನಿಜವಾಗಿಯೂ ಅನಾಥನಾಗಿಬಿಟ್ಟ. ನಾವ್ಯಾರೂ ಸಂತೈಸಲಿಕ್ಕಾಗದಂಥ ತಬ್ಬಲಿತನದ ಚಿಪ್ಪೊಳಗೆ ಸೇರಿಹೋದ.
ನಾನೊಮ್ಮೆ ಅವನನ್ನು ನೋಡಲು ಹೋಗಿದ್ದೆ. ನಡುಮಧ್ಯಾಹ್ನವಾಗಿತ್ತು. ಪಕ್ಕದ ಮನೆಯ ಪುಟ್ಟ ಹುಡುಗಿಯೊಬ್ಬಳು ಅವನಿಗೆ ಗಂಜಿ ಕುಡಿಸುತ್ತಿದ್ದಳು. ಜೊತೆಗೆ ಖಮ್ಮಗಿನ ಮೀನು. ನನ್ನನ್ನು ಕಂಡು, ನೀವು ಹರಿ ತಾತನ ಫ್ರೆಂಡಾ? ಎಂದು ಕೇಳಿದಳು. ಹೂಂ ಪುಟ್ಟ, ಏನಮ್ಮಾ ನಿನ್ನ ಹೆಸರು? ಕೇಳಿದೆ. ಮೇರಿ ಎಂದಳು. ಹರಿ ತಾತ ಸರೂ ಅಂತಾ ಕರೀತಾರೆ, ಕ್ಯೂಟಾಗಿದೆಯಲ್ವಾ? ಎಂದಳು. ಮಿಂಚೊಂದು ಸಂಚರಿಸಿದ ಹಾಗಾಯಿತು. ಸರೂ ಅವನ ಹೆಂಡತಿಯ ಹೆಸರಾಗಿತ್ತು. ಹರಿಯ ಪಾಲಿಗೆ ಸರೂ ಇನ್ನೂ ಇದ್ದಾಳಲ್ಲ ಅಷ್ಟು ಸಾಕು ಎನ್ನಿಸಿತು. ಸಂಜೆಯವರೆಗೂ ಅವನೊಡನಿದ್ದು ಬಂದೆ. ಅವನ ಪೇಲವ ಕಣ್ಣುಗಳಲ್ಲಿನ ನಿರ್ಲಿಪ್ತತೆ ನನ್ನನ್ನು ಸದಾ ಕಾಡುವ ಸಂಗತಿಯಾಗಿ ಉಳಿದುಕೊಂಡುಬಿಟ್ಟಿತ್ತು.
ತುಂಬ ದಿವಸಗಳೇ ಆಗಿಹೋದವಲ್ಲ; ಹರಿಯನ್ನು ಮತ್ತೊಮ್ಮೆ ಮಾತಾಡಿಸಿಕೊಂಡು ಬರೋಣ ಎಂದುಕೊಂಡೆ. ಅವನಿಗಿಷ್ಟವಾದ ಒಣಮೀನಿನ ಚಟ್ನಿ ರೆಡಿ ಮಾಡಿಸಿಕೊಂಡು ಹೋಗಬೇಕು ಎಂದುಕೊಳ್ಳುವಾಗ, ಅರೆ ನಾನು ಅವನ ದಿನಗಳು ಮುಗಿದವು ಅನ್ನೋ ಥರದಲ್ಲಿ ಯೋಚಿಸುತ್ತಿದ್ದೇನಾ ಅನ್ನಿಸಿ ತಳಮಳವಾಯಿತು. ಅವನನ್ನು ನೋಡಲು ಹೋಗುವ ಧಾವಂತ ಮಾಡುತ್ತಿರೋದರಲ್ಲಿ ಸಹಜತೆಗಿಂತ ಹೆಚ್ಚಾಗಿ ಎಂಥದೋ ಆತಂಕದ ಸುಳಿಗೆ ಸಿಕ್ಕವನ ಪರಿಯಿದೆ ಎಂಬ ಭಾವನೆಯೇ ಕಾಡಿತು. ಹರಿ ಯಾರನ್ನೂ ನಿರೀಕ್ಷಿಸೋದಿಲ್ಲ ಮತ್ತು ಯಾರ ಹಂಗಿನಲ್ಲೂ ಇಲ್ಲ ಎಂದೆಲ್ಲ ನನಗೆ ನಾನೇ ಸಮಾಧಾನ ಹೇಳಿಕೊಳ್ಳತೊಡಗಿದೆ. ಆದರೂ…. ಎಂದು ತಪ್ಪಿತಸ್ಥನ ಹಾಗೆ ಮತ್ತೆಂಥದೋ ಯೋಚನೆಗೆ ಬಿದ್ದೆ. ಬಗೆಹರಿಸಿಕೊಳ್ಳಲಾರದ ಗೊಂದಲದಲ್ಲಿ ಸುಮ್ಮನೆ ನಿಟ್ಟುಸಿರು ಬಿಟ್ಟು ಕಣ್ಣು ಮುಚ್ಚಿದೆ. ಮುಚ್ಚಿದರೆ,
ಅಲ್ಲಿ, ಹೊಂಡದ ಗದ್ದೆಯ ಕೆಸರಿನಲ್ಲಿ ಮೀನಿನ ಜಬ್ಬು ಹಿಡಿಯುವ ಖುಷಿಯಲ್ಲಿ ತಲ್ಲೀನನಾಗಿದ್ದ ಹರಿ. ಗದ್ದೆಯ ಹಾಳಿಯ ಮೇಲೆ ನಿಂತು, ಅವನು ಒಂದೊಂದು ಮೀನಿನ ಮರಿಯನ್ನು ಹಿಡಿದು ತೋರಿಸುವಾಗಲೂ ಹೋ…. ಎಂದು ಕೇಕೆ ಹಾಕುತ್ತ ಅವನಿಗೆ ಉಮೇದು ತುಂಬುತ್ತಿದ್ದ ಪುಟ್ಟ ಸರೂ, ಮೇರಿ.






ಸುಂದರವಾಗಿ ಎಲ್ಲೂ ಅತಿಶಯೋಕ್ಥಿ ಇಲ್ಲದ ಕಥೆ. ತುಂಬಾ ಇಷ್ತವಾಯಿತು.
ನನ್ನ ಹಳ್ಳಿಯ ನೆನಪು ತುಂಬಾ ಕಾಡಲಾಂಭಿಸಿತು.
ನಂಗಿಷ್ಟವಾಯಿತು…ಕಥೆ ಮತ್ತು ಅದರ ನಿರೂಪಣೆ…
ಹರಿಯಂತಹ ಎಷ್ಟೋ ಜೀವಗಳು ತಮ್ಮದಲ್ಲದ ತಪ್ಪಿಗಾಗಿ ತಮ್ಮ ಜೀವನವನ್ನೆ ಅರ್ಪಿಸಿರುವದು ಕಾಣುತ್ತೇವೆ. ಆದರೆ ಅಲ್ಲಿ ಸ್ವಾಭಿಮಾನವನ್ನು ಕಾಯ್ದುಕೊಂಡಿರುವದು ನೋಡಿ. ಮಾದನಗೇರಿಯಲ್ಲಿ ನನ್ನ ಸ್ನೇಹಿತೆಯೊಬ್ಬಳು ಇದ್ದಳು . ಅವಳ ಬಾಯಲ್ಲಿ ದಿನಕ್ಕೆ ೧೦ ಬಾರಿಯಾದರೂ ಈ ಊರಿನ ಉದ್ಗಾರ ಇರುತಿತ್ತು . ಅದು ಯಾಕೆ ಅಂಬೋದು ಈಗ ತಿಳಿಯಿತು .ಒಳ್ಳೆಯ ಕಥೆ.
ಪ್ರತಿಯೊಂದನ್ನು ಹಣದ ಲೆಕ್ಕಾಚಾರದಲ್ಲಿ ತೂಗುಹಾಕುವ ಈ ಗಳಿಗೆಯಲ್ಲಿ…..ಆ ಬಾಲ್ಯದ ನೆನೆಪು ಕಾಡುತ್ತಿರುತ್ತದೆ ಹಾಗಾಗ……ನನ್ನ ಸ್ಕೂಲಿನ ಗೆಳೆಯರು ನನಗೆ ಪೆನ್ನು, ಪುಸ್ತಕ, ಮಧ್ಯಾಹ್ನ ೂಟವನ್ನು ಕೊಡಿಸುವಾಗ ಅವರ ಮುಖದಲ್ಲಿ ಕಾಣುತ್ತಿದ್ದ ಮುಗ್ದ ನಗುವನ್ನು ನಾನು ಎಂದಿಗೂ ಮರೆಯಲಾರೆ.ಈ ಕಥೆಯನ್ನು ಓದುವಾಗ ಮತ್ತೊಮ್ಮೆ ನನ್ನ ಚಿಕ್ಕವಯಸ್ಸಿನ, ಚಿಕ್ಕ, ಚಿಕ್ಕ, ಸ್ನೇಹಿತರ ಮುಗ್ದ ಮುಖಗಳು ಕಣ್ಮಂದೆ ಬಂದು ಕಣ್ಣೀರಾದರು…..ಕಥೆ ಚೆನ್ನಾಗಿದೆ.
First time i am reading mr. Venkatramana Gowda’s article and I am marvelled by his kannada and his style. Reminds me of the great writers and artists north karnataka coast line has enriched our literature .. Yashwanth chiththala, Gangadhara chiththala, Gowrish and jayanth kaikini, and to this long list venkatramana Gowda..