ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೀರಣ್ಣ ಮಡಿವಾಳರ ಪ್ರಶ್ನೆ ಕೇಳುತ್ತಿದ್ದಾರೆ..

ಅರ್ಪಣೆ ಮತ್ತು ಅಭಿಮಾನದ ಪ್ರಶ್ನೆ

-ವೀರಣ್ಣ ಮಡಿವಾಳರ

ಈ ಕಾಲ ಮಾಧ್ಯಮಗಳ ಕಾಲ, ಈ ಕಾಲದ ಚಿಂತನೆ ಮಾಧ್ಯಮವೇ ರೂಪಿಸುತ್ತಿರುವ ಚಿಂತನೆ. ಬಹುಕೋಟಿ ಜನರಿರುವ ನಮ್ಮ ನಾಡಿನ ಆತ್ಮದ ಒಟ್ಟು ಚಿತ್ರಣವನ್ನು ಬೆರಳೆಣಿಕೆಯ ಕೆಲವು ಮಿತ್ರರು ತಮಗೆ ಬೇಕಾದಂತೆ ಕಟ್ಟುತ್ತಿದ್ದಾರೆ. ಈ ರೀತಿಯ ಚಿತ್ರವೇ ಪರಿಪೂರ್ಣ ಎಂಬಂತೆ ಸಮಷ್ಠಿ ಪ್ರಭಾವ ಮೂಡಿಸುತ್ತಿದ್ದಾರೆ. ಇದು ವರ್ತಮಾನದ ದುರಂತ ಮಾತ್ರವಲ್ಲ ಭೋಗದ ವಾರಸುದಾರರ ವಿಜೃಂಭಣೆಯ ವಿಷಮ ಸ್ಥಿತಿ. ತಮ್ಮದೇ ನಿರ್ಧಾರಿತ ಮೌಲ್ಯಗಳನ್ನಾಧರಿಸಿ ಶ್ರೇಷ್ಠ ಮತ್ತು ಕನಿಷ್ಟವೆಂಬ ವ್ಯಸನವನ್ನು ಹುಟ್ಟು ಹಾಕುತ್ತಾ ಕಾಲದ ವಾಸ್ತವ ತಲ್ಲಣಗಳಾಚೆ ಆರೋಗ್ಯಕರ ದೃಷ್ಟಿಕೊನವನ್ನು ಹಾದಿತಪ್ಪಿಸುವ ಹುನ್ನಾರ ಈ ಮಿತ್ರರ ಅಭಿವ್ಯಕ್ತಿಯ ಹಿಂದಿದೆ ಎಂಬುದು ತಿಳಿಯಲಾರದ್ದೇನಲ್ಲ.

ಎಲ್ಲವನ್ನೂ ರಂಜನೀಯಗೊಳಿಸುತ್ತ ಪರಂಪರೆ ಪಿಡುಗುಗಳಿಗೆ ಹೊಸದೊಂದು ರೂಪಕೊಟ್ಟು ಬಹುಜನರಿಗೆ ಇಷ್ಟವಾಗುವ ಧಾಟಿಯಲ್ಲಿ ಹೇಳುವ, ಹಿಂದೆಂದಿಗೂ ಇಲ್ಲದಂತಿರುವ ಕೌಶಲಗಳನ್ನು ತಾವೇ ಸೃಜಿಸಿದ ಸೃಷ್ಟಿಕರ್ತರೆಂದು ಬೀಗುತ್ತಾ, ಆ ಕೌಶಲಗಳನ್ನು ತಮ್ಮ ತಮ್ಮದೇ ಪಟಾಲಂಗೆ ಧಾರೆ ಎರೆಯುತ್ತಾ ಒಂದಿಲ್ಲವಾದರೆ ಇನ್ನೊಂದು ಅದು ಇಲ್ಲವಾದರೆ ತಮ್ಮದೇ ಒಂದು ಸಂಸ್ಥಾಪನೆ ಮಾಡಿಕೊಳ್ಳುತ್ತಾ ನಡೆಯುತ್ತಿರುವ ರೀತಿಯನ್ನು ಮುಗುಮ್ಮಾಗಿ ಗಮನಿಸುತ್ತಿರುವ ಶ್ರೀಸಾಮಾನ್ಯನಿಗೆ ಬಾಯಿ ಇಲ್ಲವೆನ್ನಲಾಗುತ್ತಿದೆ. ಈ ಶ್ರೀಸಾಮಾನ್ಯನ ಯಾವುದೇ ಪ್ರತಿರೋಧಕ್ಕೂ ಮೌಲ್ಯವಿಲ್ಲ ಅಥವಾ ಮೌಲ್ಯವನ್ನು ಸಾಬೀತು ಪಡಿಸುವ ಅವಕಾಶವಿಲ್ಲ.

ತಾನು ಎನ್ನುವುದನ್ನು ಉತ್ಪ್ರೇಕ್ಷೆಯ ಆತ್ಯಂತಿಕ ಸ್ಥಿತಿಯಲ್ಲಿ ಕಲ್ಪಿಸಿಕೊಂಡು ಅದನ್ನು ಸಾಧಿಸುವ ಹೀನತೆಗೆ ಯಾವ ದಾರಿಯಾದರೂ ಸರಿ ಎನ್ನುವ ಮನಸ್ಥಿತಿಯೇ ಏನು ಬರೆದರೂ ನಡೆದೀತು ಎನ್ನುವ ಅಹಮ್ಮಿಕೆಯನ್ನು ಕೆಲವರಲ್ಲಿ ಹುಟ್ಟಿಸಿದೆ. ಈ ಕೆಲವರು ಕರ್ನಾಟಕದ ಪ್ರಸಕ್ತ ವರ್ತಮಾನಕ್ಕೆ ಮಾಡಿರುವ ಆಘಾತ ತುಂಬಾ ಪರಿಣಾಮಕಾರಿಯಾದುದೆ. ಯಾವುದೇ ಇದ್ದರೂ ಅದನ್ನು ತಮ್ಮ ಸ್ವ ಕೇಂದ್ರಿತ ನೆಲೆಯಲ್ಲಿ ವಿಶ್ಲೇಶಿಸಿ ಅಂತಿಮ ತೀರ್ಪು ಎಂಬಂತೆ ವರ್ತಿಸುವ ಇಂಥವರಿಗೆ ನಾಡಿನ ಸಮಸ್ಥ ಜನರ ಬದುಕನ್ನು ಕಟ್ಟಿದವರು ನಾರಾಯಣಮೂರ್ತಿ, ದೇಶವನ್ನು ಸಮೃದ್ಧಗೊಳಿಸಿದವರು ಟಾಟಾ, ಬಿರ್ಲಾ, ಮಿತ್ತಲ್, ಅಂಬಾನಿಯಾದರೆ ಆಶ್ಚರ್ಯವಿಲ್ಲ. ಶ್ರೇಷ್ಠತೆಯ ವಾಸಿಯಾಗದ ವ್ಯಸನವನ್ನು ತಮ್ಮಲ್ಲಿ ಹುಟ್ಟಿಸಿಕೊಂಡು, ಈ ಕಾಯಿಲೆಯನ್ನು ಅಮಾಯಕರಿಗೂ ಅಂಟಿಸಿ ವಿಕೃತ ಭೋಗದ ಸುಖ ಅನುಭವಿಸುತ್ತಿರುವ ಈ ಹೊತ್ತಿನ ಇಂಥ ಮನಸ್ಥಿತಿಗಳಿಗೆ ಮಾತ್ರ ಸಾಹಿತ್ಯ ಒಂದು ವರ್ಗ, ಸಾಹಿತಿ ಒಂದು ಹುದ್ದೆ. ಸಮಷ್ಠಿ ಬದುಕಿನ ತಿರುಳಾದ ಹಳ್ಳಿಯ ಹಳ್ಳಿಗನಿಗೂ ಮಾತಿನ ಒಂದು ಧಾಟಿ ಗೊತ್ತು, ತನ್ನ ಆಂತರ್ಯವನ್ನು ಮತ್ತೊಬ್ಬರ ಅಂತರಾಳಕ್ಕೆ ಮುಟ್ಟಿಸುವ ದಾರಿ ಗೊತ್ತು. ಅದು ಎಂದೂ ಉಡಾಫೆಯದಾಗಿರಲಾರದು. ತಾನೆ ಎನ್ನುವ ಅಹಮ್ಮಿಕೆಯಿಂದ ಕೂಡಿರಲಾರದು. ಸ್ವರತಿಯುಳ್ಳ ಮನಸ್ಸಿಗೆ ಮಾತ್ರ ಸಾಹಿತಿ ಎನ್ನುವುದು ಒಂದು ಅಧಿಕಾರವಾಗಿ ಸೀಮಾತೀತ ಕಲ್ಪನೆಯಾಗಿ ಕಾಣುತ್ತದೆ. ಹಾಗೆ ನಿರ್ಣಯಿಸಿದ ಕಾರಣದಿಂದಲೇ ಓಬೆರಾಯ ಎನ್ನುವ ಪದವಾಗಲಿ ನಾಲ್ಕು ಕವಿತೆ ಆರು ಕಥೆ ಎರಡು ಪ್ರಭಂಧ ಎನ್ನುವ ಅಂಕಿ ಅಂಶವಾಗಲಿ ಮಾನದಂಡವಾಗುತ್ತದೆ. ಈ ರೀತಿಯ ಅಭಿಪ್ರಾಯದ ಹಿಂದಿರುವುದು ಅದೆಂಥ ತಿರಸ್ಕಾರದ ಹಮ್ಮು ಎಂಬುದನ್ನು ಮರೆಮಾಚಲಾಗದು. ನಿಜವಾಗಿಯೂ ಸಾಹಿತ್ಯ ಎನ್ನುವುದು ಒಂದು ವರ್ಗವೆ ? ಸಾಹಿತಿ ಎನ್ನುವುದು ಒಂದು ಹುದ್ದೆಯೇ ? ಈ ರೀತಿಯ ಪರಿಕಲ್ಪನೆಯನ್ನು ವರ್ತಮಾನದ ಒಟ್ಟು ಬದುಕಿನಲ್ಲಿಟ್ಟು ನೋಡಲು ಸಾಧ್ಯವೆ ? ಕಾಲ ಸಂದರ್ಭದ ನಿರ್ಣಾಯಕ ಪಾತ್ರವನ್ನು ವಹಿಸಿದ ಮಹನೀಯರನ್ನ ಸಾಹಿತಿ ಎಂದು ಮಾತ್ರ ಪರಿಗಣಿಸಲು ಸಾಧ್ಯವೇ ? ಅವರೊಳಗಿನ ಶ್ರೀಸಾಮಾನ್ಯತೆಯನ್ನ ನೀರಾಕರಿಸಲಾದಿತೇ ? ಹಾಗಾದರೆ ಈ ಪರಿಕಲ್ಪನೆಯಲ್ಲಿಯೇ ಮಾತನಾಡುವವರ ಕುರಿತು ಅವರ ಚರ್ವಿತ ಚರ್ವಣಗಳ ಜಾಲಾಡಿಸಿ ನೋಡುವ ಶ್ರಮವೇ ಬೇಕಿಲ್ಲ ಎನಿಸುತ್ತದೆ. ಯಾವುದೇ ಮನುಷ್ಯನ ಅಭಿವ್ಯಕ್ತಿಗೆ ಆಯಾ ಕಾಲಘಟ್ಟದ ಮೌಲ್ಯ, ಆ ಮನುಷ್ಯನ ಇರುವಿನ ಆಚೆಗೂ ಅವನು ಕಟ್ಟಿಕೊಟ್ಟ ಅಭಿವ್ಯಕ್ತಿಗೆ ದಕ್ಕುವ ಸಾಥ್ರ್ಯಕ್ಯವನ್ನು ಮನಗಾನಲು ಬಾರದವರು ಮಾತ್ರ ಇಂಥದೊಂದು ಉಡಾಫೆಯನ್ನು ಹಂಚಿಕೊಳ್ಳುತ್ತಾರೆ. ಮೂಲತಃ ಯಾವುದೇ ಬರಹದ ಸೃಷ್ಟಿಯ ಮೂಲ ಮನುಷ್ಯ ಸಹಜತೆ. ಈ ಮನುಷ್ಯ ಸಹಜತೆಯ ಅರಿವಿಲ್ಲದವ ಕಾಲದ ಪ್ರವಾಹದಲ್ಲಿ ಉಳಿಯಬಲ್ಲಂಥಹುದನ್ನಾವುದೂ ಕೊಡಲಾರ, ತಾನೂ ಉಳಿಯಲಾರ.

ಕನ್ನಡ ಬದುಕು ಕೇವಲ ಉದ್ಯೋಗದ ಮೂಲವಲ್ಲ. ಇನ್ನೂ ಮುಂದುವರೆದು ಹೇಳುವುದಾದರೆ ಸಾಪ್ಟವೇರ್ ಉದ್ಯೋಗದ ಮೂಲವಲ್ಲ. ಸಾವಿರ ಜನರನ್ನು ತನ್ನ ನೂರಾರು ಎಕರೆ ಜಮೀನಿನಲ್ಲಿ ತಿಂಗಳಿಗೆ ಇಂತಿಷ್ಟು ಕೂಲಿ ಮಾತಾಡಿ ಜೀವನಪೂತರ್ಿ ದುಡಿಸಿಕೊಳ್ಳುವ, ಆ ದುಡಿಯುವವರ ದುಡಿಮೆಯಲ್ಲಿ ಎತ್ತರೆತ್ತರ ಏರುವ ಜಮೀನುದಾರ ತನ್ನ ಸಂಪತ್ತಿನ ಸಮೃದ್ಧಿಗೆ ಉದ್ಯೋಗ ಕೊಟ್ಟಿರುತ್ತಾನೆಯೇ ಹೊರತು ತನಗಾಗಿ ದುಡಿಯುವವರ ಬದುಕನ್ನು ಸಲಹುವುದಕ್ಕಾಗಿ ಅಲ್ಲ. ಪ್ರಪಂಚದಾದ್ಯಂತ ಹಂಚಿ ಹೋಗಿರುವ ಅದೆಷ್ಟು ಸಾಪ್ಟವೇರ ಜನರಿಗೆ, ಬೇರೆ ಬೇರೆ ಉದ್ಯೋಗದಲ್ಲಿರುವವರಿಗೆ ಎಷ್ಟು ದೇಶದ ಎಷ್ಟು ಉದ್ಯಮಿಗಳು ಉದ್ಯೋಗ ನೀಡಿದ್ದಾರೆ. ಹಾಗಾದರೆ ಅವರೆಲ್ಲರಿಗೂ ಕನ್ನಡಿಗರ ಬದುಕನ್ನು ಕಟ್ಟಿಕೊಟ್ಟವರೆಂಬ ಗುಣವಿಶೇಷಣ ಬಳಸಬಹುದಾದರೆ ನಮ್ಮ ಕನ್ನಡದ ಆಸ್ಮಿತೆಯ ದ್ಯೋತಕವಾದ ಪ್ರತಿಯೋಂದು ಚಟುವಟಿಕೆಗೂ ಕ್ರೀಯೆಗೂ ಅವರ ಅಮೃತ ಹಸ್ತವನ್ನೆ ಬಳಸೊಣವೇ ? ಕೇವಲ ಸಾಪ್ಟವೇರ ಮಾತ್ರವಲ್ಲ ಹೊಟ್ಟೆ ಹೊರೆಯುವಿಕೆಯೇ ಪ್ರಧಾನವಾಗಿರುವ ಸ್ವ ಕೇಂದ್ರಿತ ಸಂಪತ್ತನ್ನು ವೃದ್ಧಿಸುವುದೇ ಗುರಿಯಾಗಿರುವ ಅಲ್ಲದೇ ಈ ಕಾಲದಲ್ಲಿ ಡಾಮಿನಂಟಾಗಿ ಉಳಿಯಬಹುದಾದ ಅವಕಾಶವನ್ನು ಒದಗಿಸಿರುವ ಉದ್ಯೋಗಿಗಳ ಉದ್ಯೋಗದಾತರಿಗೆ ಕರ್ನಾಟಕದ ಅಲ್ಲೇ ಕುಂತಿರುವ ಎಲ್ಲರೂ ಎದ್ದು ಬಂದು ಆ ಮಹಾವ್ಯಕ್ತಿಗಳು ಬರಲಿಲ್ಲವಾದರೆ ಅವರಿಗೆ ಅಂಗಲಾಚಿ ಬೇಡಿಕೊಂಡು ಅವರಿಗೆ ಜೈಘೋಷ ಹಾಕುತ್ತಾ ಮೆರವಣಿಗೆ ಮೂಲಕ ಕರೆತರೋಣವೆ ?

ಅರ್ಪಣೆ ಮತ್ತು ಅಭಿಮಾನವನ್ನು ಕೆಲವು ಜನ ಪರಂಪರೆಯಿಂದ ವರ್ತಮಾನದಿಂದ ಅರ್ಥಮಾಡಿಕೊಳ್ಳಲೆ ಇಲ್ಲ. ಹಾಗೆನ್ನುವದಕ್ಕಿಂತ ಅವುಗಳ ಗೊಡವೆಯೇ ಬೇಡದವರಿಗೆ ಏನು ಹೇಳುವುದು. ಬದುಕನ್ನು ನಾಡು ನುಡಿಗಾಗಿ ಅಪರ್ಿಸಿಕೊಳ್ಳುವುದನ್ನು ಬಿಟ್ಟು ಕನ್ನಡದ ಮಾಹಾನ್ ಚೇತನಗಳೆಲ್ಲರೂ ಒಂದೊಂದು ಇನ್ಪೊಸಿಸ್ ಕಟ್ಟಿ ಲಕ್ಷಾಂತರ ಕೋಟಿ ಸಂಪಾದಿಸಿ ಸಾವಿರಾರು ಜನರನ್ನು ಉದ್ಯೋಗಿಗಳಾನ್ನಾಗಿ ಮಾಡಿಕೊಂಡು ನೂರಾರು ಕೋಟಿ ತೆರಿಗೆ ವಂಚಿಸಿ ಕನ್ನಡ ಭಾಷೆಯ ಅಸ್ತಿತ್ವಕ್ಕೋಂದು ಸಾಪ್ಟವೇರ ಅಭಿವೃದ್ಧಿ ಮಾಡದೇ ಹೋದರೂ ಪರವಾಗಿಲ್ಲ ಭೋಗ ಜಗತ್ತಿನ ವಾರಸುದಾರರಾಗಿ ಬೀಗ ಬೇಕಿತ್ತೇ ? ಓಬೆರಾಯನ ಕಾಲದ ಸಾಹಿತಿಗಳೆಂದರೆ ಯಾರು ? ಸಿದ್ದಲಿಂಗ ಪಟ್ಟಣಶೆಟ್ಟಿ, ಜಿಎಸ್.ಎಸ್., ಜಿ. ವೆಂಕಟಸುಬ್ಬಯ್ಯ, ಜಂಬಣ್ಣ ಅಮರಚಿಂತ, ಅಲ್ಲಮಪ್ರಭು ಬೆಟ್ಟದೂರ ಅಥವಾ ಚಂದ್ರಕಾಂತ ಕುಸನೂರರೇ ? ಅಥವಾ ಜೋಗಿಯವರೆ ಹೇಳಿಕೊಂಡಿರುವ ನಾ. ಮೊಗಸಾಲೆಯವರೆ ? ಹಾಗಾದರೇ ತಾವು ಯಾವ ಕಾಲದವರು ಮತ್ತು ತಮ್ಮ ಸಾಹಿತ್ಯ ಎಷ್ಟು ಲೇಟೆಸ್ಟ್  ಎನ್ನುವುದನ್ನು ಕೇಳಲು ನಾವು ಯಾರು ಅಲ್ಲವೇ ?

ಖಂಡಿತವಾಗಿಯೂ ಇಂದು ನಡೆಯುತ್ತಿರುವ ನಡೆಸುತ್ತಿರುವ ಎಲ್ಲ ಚರ್ಚೆಗಳೂ ಒಂದು ಆತ್ಮಾಭಿಮಾನದ ಕಾರ್ಯಕ್ರಮವನ್ನ ಭಾಷೆಕೇಂದ್ರಿತವೋ ಪ್ರತಿಷ್ಠೆಯ ಪ್ರಶ್ನೆಯಾಗಿಯೋ ಪರಿಗಣಿಸಿರುವ ಕಾರಣದಿಂದಾಗಿಯೇ ಹೀಗೆಲ್ಲವೂ ನಡೆಯುತ್ತಿದೆ. ಅರ್ಪಣೆಗೆ ಅರ್ಥವಿಲ್ಲ ಅಭಿಮಾನಕ್ಕೆ ಮಾರ್ಯಾದೆ ಇಲ್ಲ ಕನ್ನಡಿಗನ ಬದುಕನ್ನು ಕೇಂದ್ರವಾಗಿಟ್ಟುಕೊಂಡು ಆ ಬದುಕಿನ ಸಂಕಷ್ಟಗಳನ್ನು ಕೇಂದ್ರವಾಗಿಟ್ಟುಕೊಂಡು ಆ ಸಂಕಷ್ಟದ ರೂಕ್ಷತೆಯ ದೂರ ಮಾಡುವಿಕೆಯನ್ನಿಟ್ಟುಕೊಂಡು, ಕೊಡುಕೊಳ್ಳುವ, ಚಚರ್ಿಸುವ ಕ್ರಿಯೆಗಿಳಿಯುವ ಯಾವುದೂ ಸಹ ಇದನ್ನು ಆಯೋಜಿಸಿರುವ ವ್ಯವಸ್ಥೆಗೂ ಬೇಕಿಲ್ಲ, ಇದನ್ನು ಪ್ರತಿಷ್ಟೆಯ ಸಂಭ್ರಮಕೂಟವಾಗಿ ಭಾವಿಸಿ ಇದರ ಅರ್ಥವಂತಿಕೆಯನ್ನು ಪ್ರಶ್ನಿಸುವವರನ್ನಷ್ಟೇ ಅಲ್ಲದೆ ಇಡೀ ಅಭಿವ್ಯಕ್ತಿಯ ಪರಂಪರೆ ಮತ್ತು ವರ್ತಮಾನವನ್ನು ಅಲ್ಲಗಳೆಯುವ, ಉಡಾಫೆಯಿಂದ ನೋಡುವವರಿಂದ ಏನನ್ನು ನಿರೀಕ್ಷಿಸಲಾದೀತು ?

ವಿಶ್ವ ಕನ್ನಡ ಪ್ರತಿಷ್ಠೆಗೆ ಜೈ

ನಾರಾಯಣಮೂರ್ತಿ ಜೊತೆ ನಮ್ಮ ಕೈ

ಎನ್ನೋಣವೇ ? ಸಕ್ಕರೆ ನಾಡಿನ ಬೆಲ್ಲ ಬೆಳೆಯುವ ಮನುಷ್ಯ ಕೈಗೆ ಬಂದ ತುತ್ತು ಬಾಯಿಗೆ ಬರಲಾರದ್ದಕ್ಕೆ ಬಳಲುತ್ತಿದ್ದಾನೆ, ಅದೆಲ್ಲ ಯಾರಿಗೆ ಬೇಕು ಬಿಡಿ.

‍ಲೇಖಕರು G

7 March, 2011

6 Comments

  1. Dr. Indira hegde

    ತಮ್ಮವರಿಂದಲೇ ವಂಚನೆಗೆ ಒಳಗಾಗಿ ಇದ್ದೆಲ್ಲ ಭೂಮಿಕಳೆದುಕೊಂಡು ನಾಲ್ಕೈದು ಮಕ್ಕಳನ್ನು,ಮತ್ತು ತನ್ನನ್ನು ನಂಬಿದವರನ್ನು ಸಾಕುವುದು ಹೇಗೆ ಎಂದು ರೈತನೊಬ್ಬ ದಿಕ್ಕು ತೋಚದೆ ನಿಂತಾಗ “ಗೇಣಿಗಾದರೂ ಭೂಮಿ ಪಡೆಯೋಣ. ಆದರೆ ಯಾರಲ್ಲಿ ಕೇಳುವುದು ಭೂಮಿಯನ್ನ ” ಎಂದು ಕಂಗಾಲಾಗಿದ್ದಾಗ ರೈತನನ್ನು ಕರೆದು ಭೂಮಿ ಕೊಟ್ಟ ‘ಮಹಾನುಭಾವರ’ ಬಗ್ಗೆ ನನ್ನಜ್ಜಿ ಹೇಳುತ್ತಿದ್ದರು. ಆದರೆ ಅಂತಹ ಜಮೀನ್ದಾರರ ಜಮೀನ್ದಾರಿಕೆಯನ್ನು ಕಿತ್ತು ಬಿಸಾಕಿದ ನಮ್ಮ ಜನ ಈಗ ಬಂಡವಾಳ ಶಾಹಿಗಳಿಗೆ ಮಣೆ ಹಾಕುವುದು ಆಶ್ಚರ್ಯಕರವಾದುದು. ಇದನ್ನೂ ಸಾಂಸ್ಕೃತಿಕ ಪಲ್ಲಟದ ಹೊಸ ರೂಪ ಎನ್ನೋಣವೆ?

  2. Hanmantha Haligeri

    ಜೈ ಅನ್ನದಿದ್ದರೆ ವಿಧಿ ಇಲ್ಲದಂತಾಗಿದೆ ಮಿತ್ರರೇ

  3. ಕುಮಾರ ರೈತ

    ದ್ವಂದ್ವ ಮತ್ತು ಸಂದಿಗ್ದತೆ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇಂಗ್ಲೀಷ್ ಭಾಷೆ ಕಾರಣವೊಂದರಿಂದಲೇ ಗ್ರಾಮೀಣ ಪ್ರದೇಶದ ಕೋಟ್ಯಾಂತರ ವಿದ್ಯಾರ್ಥಿಗಳು ನಲುಗಿದ್ದಾರೆ; ನಲುಗುತ್ತಿದ್ದಾರೆ. ಇಂಥ ಸ್ಥಿತಿಯೊಳಗೆ ಮಾಧ್ಯಮ ಯಾವುದಿರಬೇಕು ಎಂಬುದಕ್ಕೆ ನಮ್ಮ ಗಮನವೇಲ್ಲ ಕೇಂದ್ರಿಕೃತವಾಗಿದೆ. ಒಂದು ಭಾಷೆ ಕಾರಣದಿಂದಲೇ ಗ್ರಾಮೀಣ ಮತ್ತು ನಗರದ ಬಡವ, ಕೆಳ ಮಧ್ಯಮವರ್ಗದ ವಿದ್ಯಾರ್ಥಿಗಳು ಬಳಲುವುದಕ್ಕೆ ಕಾರಣವಾಗುವಂಥ ವಾತಾವರಣ ಸೃಷ್ಟಿಯಾಗಿದೆ. ಇದನ್ನು ನಿರಾಕರಣೆ-ನಿವಾರಣೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಸಮರ್ಪಕ ಭಾಷಾನೀತಿ ರೂಪಿಸಿ; ಜಾರಿಗೆ ತರಲಾಗದದಂಥ ಸರಕಾರ ವಿಶ್ವಕನ್ನಡ ಸಮ್ಮೇಳನ ಮಾಡಲು ಹೊರಡುವುದೇ ದ್ವಂದ್ವ ಹಾಗೂ ಅಭಾಸ.

    ಕನ್ನಡ ಮಾಧ್ಯಮದ ಶಾಲೆಯಲ್ಲಿಯೇ ಇಂಗ್ಲೀಷನ್ನು ಸಮರ್ಥವಾಗಿ ಕಲಿಸುವುದಾದರೆ ಯಾರು ಯಾಕಾಗಿ ಇಂಗ್ಲೀಷೇ ಭಾಷಾ ಮಾಧ್ಯಮವಾಗಲಿ ಎಂದು ಕೇಳಿಯಾರು…? ತನ್ನ ನೆಲದಲ್ಲಿಯೇ ಕನ್ನಡಕ್ಕೊಂದು ವರ್ತಮಾನದ-ಭವಿಷ್ಯತ್ತಿನ ಸುಭದ್ರ ನೆಲೆಗಟ್ಟು ನಿರ್ಮಾಣವಾಗದ ಪರಿಸ್ಥಿತಿಯಲ್ಲಿ ವಿಶ್ವಕನ್ನಡ ಸಮ್ಮೇಳನ ಬೇಕಿತ್ತೆ ಎಂಬುದೇ ಮೊದಲ ಪ್ರಶ್ನೆಯಾಗಬೇಕು; ನಂತರವಷ್ಟೇ ಇಂಥ ಸಮ್ಮೇಳನವನ್ನು ಯಾರು ಉದ್ಘಾಟನೆ ಮಾಡಬೇಕು ಎಂಬ ಪ್ರಶ್ನೆ ಪ್ರಸ್ತುತ

  4. ಸಂದೀಪ್ ಕಾಮತ್

    ಇಂಗ್ಲೀಷ್ ನಲ್ಲಿ ೧೦೧ ಸೀರೀಸ್ ಪುಸ್ತಕಗಳು ಬರ್ತಾ ಇರುತ್ತೆ. ಅದೇ ರೀತಿ “ನಾರಾಯಣ ಮೂರ್ತಿಗಳು ಕನ್ನಡ ಸಮ್ಮೇಳನ ಉದ್ಘಾಟಿಸದೇ ಇರೋದಕ್ಕೆ ನೂರೊಂದು ಕಾರಣಗಳು ” ಅನ್ನೋ ಪುಸ್ತಕ ಬರಿಯಬಹುದು. ಅದೇ ರೀತಿ ಉದ್ಘಾಟಿಸಲೂ ನೂರೊಂದು ಕಾರಣಗಳು ಸಿಗುತ್ವೆ ಬಿಡಿ.

    ನಾರಾಯಣ ಮೂರ್ತಿಗಳು ಕನ್ನಡ ಸಮ್ಮೇಳನ ಯಾಕೆ ಉದ್ಘಾಟಿಸ ಬಾರದು ಅನ್ನೋದಕ್ಕೆ ಕಾರಣ ಹುಡುಕಲು ಹೋಗಿ – ಅವರಿಗೆ ಕನ್ನಡ ವಿರೋಧಿ ಅನ್ನೋ ಪಟ್ಟ ಕಟ್ಟೋದು ಎಷ್ಟು ಸರಿ? ಅವರು ಕನ್ನಡಕ್ಕೆ ಏನೂ ನೀಡದೆ ಇರಬಹುದು ಆದರೆ ಸಾರಾಸಗಟಾಗಿ ವಿರೋಧಿ ಪಟ್ಟ ಕಟ್ಟೋದು ಸರಿ ಯೆ ?

    ಹಿಂದೊಮ್ಮೆಅವರು ಹಾರ್ವರ್ಡ್ ಯೂನಿವರ್ಸಿಟಿಗೆ ೫.೨ ಮಿಲಿಯನ್ ಡಾಲರ್ ದೇಣಿಗೆ ಕೊಟ್ಟಾಗ ನನಗೂ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು . ಅವರಿಗೇನು ಭಾರತದ ಯೂನಿವರ್ಸಿಟಿಗಳು ಕಾಣಿಸಿಲ್ವಾ ಅಂತ. ಆದರೆ ಒಂದು ಸಂದರ್ಶನದಲ್ಲಿ ಈ ಬಗ್ಗೆ ಅವರನ್ನು ಕೇಳಿದಾಗ ’ ನಾವು ಭಾರತದ ಯೂನಿವರ್ಸಿಟಿಗಳಿಗೆ ಕೊಟ್ಟ ಹಣಕ್ಕೆ ಹೋಲಿಸಿದರೆ ಈ ಹಣ ತೀರಾ ಕಮ್ಮಿ ’ ಅಂದಿದ್ದರು! ನೋಡಿ ನನಗೆ ಈ ವಿಷಯ ಗೊತ್ತೇ ಇರಲಿಲ್ಲ ! ಒಂದು ವೇಳೆ ಆ ಸಂದರ್ಶನ ನೋಡಿರದೇ ಇದ್ದರೆ …………. ?????

    ನಾನು ನಾರಾಯಣ ಮೂರ್ತಿಗಳಿಗೆ ’ಭಾರತ ವಿರೋಧಿ ’ ಪಟ್ಟ ಕಟ್ಟುತ್ತಾ ಇದ್ನೇನೋ ? !

    “ಇಂಗ್ಲೀಷ್ ಭಾಷೆ ಕಾರಣವೊಂದರಿಂದಲೇ ಗ್ರಾಮೀಣ ಪ್ರದೇಶದ ಕೋಟ್ಯಾಂತರ ವಿದ್ಯಾರ್ಥಿಗಳು ನಲುಗಿದ್ದಾರೆ; ನಲುಗುತ್ತಿದ್ದಾರೆ ” ಆದರೆ ಇದಕ್ಕೆ ಕಾರಣ ಇದು ಇಂಗ್ಲೀಶ್ ಗೊತ್ತಿರದೇ ಇರೋದಲ್ಲವೇ? ಯಾವುದೇ ಕಂಪೆನಿ ತಗೊಳ್ಳಿ ಉದಾಹರಣೆಗೆ ಅಲ್ಲಿ ದೇಶದಾದ್ಯಂತ ಜನ ಬಂದಿರ್ತಾರೆ . ಇವರೆಲ್ಲರೂ ಮಾತಾಡಬಲ್ಲ ಒಂದೇ ಒಂದು ಭಾಷೆ ಇಂಗ್ಲೀಶ್ ! ಇಂಗ್ಲೀಷ್ ಬೇಡ ಹಿಂದಿ ಸಾಕು ಅನ್ನೋ ಪರಿಸ್ಥಿತಿಯಲ್ಲಿ ನಾವಿಲ್ಲ! ನನ್ನದೂ ಬೇಡ ನಿನ್ನದೂ ಬೇಡ ಮೂರನೇ ಭಾಷೆ ಇಂಗ್ಲೀಷ್ ಓಕೆ ಅನ್ನೋದು ಎಲ್ಲರ ಮನಸ್ಸಿಗೂ ಬರುತ್ತೆ ಅಲ್ಲವೇ?

    ಚಿಟ್ಟೆಯೊಂದು ಮೊಟ್ಟೆಯೊಡೆದು ಹೊರ ಬರುವ ಹಾಗೆ ಪ್ರತೀ ವಿದ್ಯಾರ್ಥಿಯೂ ಮಾತೃ ಭಾಷೆಯನ್ನು ಬಿಟ್ಟು ಇಂಗ್ಲೀಷ್ ನಲ್ಲಿ ಪಾಠ ಕಲಿಯುವ ಸಂದರ್ಭ ಬಂದೇ ಬರುತ್ತೆ. ೧೦ ನೆ ತನಕ ಕನ್ನಡದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿಗೆ IIT ಮದ್ರಾಸ್ ನಲ್ಲಿ ಸಿಟ್ಟು ಸಿಕ್ಕರೇ ಏನ್ ಗತಿ . ಅವನಿಗೆ ಅಲ್ಲಿ ಇಂಗ್ಲೀಷ್ ತಾನೇ ಬೇಕು. ಅಥವಾ ಅವನೂ ಅಲ್ಲಿನ ಜನರ ಹಾಗೆ ತಮಿಳಿನಲ್ಲಿ ಕಲಿಯಬೇಕೇ ? ಇಂಥದ್ದೊಂದು ಪ್ರಾಕ್ಟಿಕಲ್ ದೃಷ್ಟಿಯಿಂದ ಹೇಳಿದ ಮಾತನ್ನು ಯಾಕೆ ಕನ್ನಡ ವಿರೋಧಿ ಅಂದುಕೋ ಬೇಕು ?

    ಕನ್ನಡಕ್ಕೆ ಅವರು ಸಾಫ್ಟ್ವೇರ್ ಯಾಕೆ ನೀಡಬೇಕು ? ಅವರದ್ದು ಸಾಫ್ಟ್ವೇರ್ ಕಂಪನಿ ಆಗಿದ್ದಕ್ಕೆ? ಹಾಗಿದ್ದರೆ ವಿಜಯ್ ಮಲ್ಯರನ್ನು ಉದ್ಘಾಟನೆ ಗೆ ಕರೆದರೆ ಅವರು ಎಲ್ಲರಿಗೂ ಬಿಯರ್ ಉಚಿತ ನೀಡಬೇಕೇ? ಅಥ್ವಾ ಕಿಂಗ್ ಫಿಶರ್ ನಲ್ಲಿ ಉಚಿತ ಪ್ರಯಾಣಿಸಲು ಅವಕಾಶ ನೀಡಬೇಕೇ? ಸದಾನಂದ ಮಯ್ಯರನ್ನು ಕರೆದರೆ ಅವರು ಮಸಾಲೆ ದೋಸೆ ನೀಡಬೇಕೆ ? ಹೋಗಲಿ ಬಿಡಿ ಯಾವುದಾದರೂ ಸಾಹಿತಿಯನ್ನೇ ಕರೆದರೆ ಅವರು ಅವರ ಪುಸ್ತಕವನ್ನು ಉಚಿತವಾಗಿ ನೀಡುತ್ತಾರಾ?

    ನಮ್ಮಲ್ಲೇ ಒಬ್ಬ ವಿಶ್ವ ವಿಖ್ಯಾತ ಕನ್ನಡಿಗನ ಬಗ್ಗೆ ಈ ರೀತಿ ತಾತ್ಸಾರ ಇದ್ದಲ್ಲಿ ಏನು ಗತಿ? ಇದು MES ಪುಂಡರ ಕಾಟಕ್ಕಿಂತಲೂ ಆತಂಕಕಾರಿಯಲ್ಲವೇ ?

  5. kumvee

    varthamanada pratibhavata yuvakavi veeranna madivala barediruvudu mutti nodikolluvantide. innadaroo bhasheyannu vivechanarahita balake nillali, bhashe mattu baraha krushiavalabhitara paravagirali.

  6. hajaresab nadaf

    ಈರಣ್ಣರ ವಿಚಾರಗಳು ಸ್ವಾಗತಾರ್ಹ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading