ವಿಶ್ವವಿದ್ಯಾಲಯಗಳು ಮತ್ತು ಗುಣಗೌರವ – ಎಸ್ ಬಿ ಜೋಗುರ

ಡಾ ಎಸ್ ಬಿ ಜೋಗುರ

ಸಾಂಸ್ಕೃತಿಕ ಮತ್ತು ಸಾಮಾಜಿಕ ರಚನೆಯ ಮುಖ್ಯ ಭಾಗ ಎನ್ನುವಂತಿರುವ ವಿಶ್ವವಿದ್ಯಾಲಯಗಳೆಂಬ ಸಂಸ್ಥೆಗಳು ಎದುರಿಸುತ್ತಿರುವ ಅನೇಕ ಬಗೆಯ ಸಂದಿಗ್ಧಗಳನ್ನು ನೋಡಿದಾಗ ತೀರಾ ತುರ್ತಾಗಿ ವಿಶ್ವವಿದ್ಯಾಲಯಗಳಿಗೆ ಅತ್ಯಂತ ತಾರ್ಕಿಕವಾದ ಆಲೋಚಕರು ಮತ್ತು ಸೂಕ್ತ ಪರಿಹಾರವನ್ನು ಕೊಡಬಲ್ಲ ಸಮರ್ಥ ಪ್ರತಿಭಾವಂತ ಆಡಳಿತಗಾರರ ಅಗತ್ಯತೆಯಿದೆ ಎನಿಸುತ್ತದೆ. ಕಳೆದ ಒಂದು ಶತಮಾನದಲ್ಲಿ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳು ಜಾಗತಿಕ ಸಂಪರ್ಕದ ಮೂಲಕವೇ ತೀವ್ರ ಸ್ವರೂಪದ ಸ್ಥಿತ್ಯಂತರಗಳನ್ನು ಅನುಭವಿಸಬೇಕಾಯಿತು. ಕಾಮನ್ವೆಲ್ತ್ ವಿಶ್ವವಿದ್ಯಾಲಯಗಳ ಸಂಘಟನೆಯೊಂದು ಕಿಂಗ್ಸಟನ್ ಜಮೈಕಾ ದಲ್ಲಿ ನಡೆದ ಸಮ್ಮೇಳನದಲ್ಲಿ ವಿಶ್ವವಿದ್ಯಾನಿಲಯಗಳ ವೈಫಲ್ಯಗಳ ಬಗ್ಗೆ ಚರ್ಚಿಸಿ, ರಾಜಕೀಯ ಸಂದಿಗ್ದಗಳನ್ನು ಚರ್ಚಿಸಲು ಕನಿಷ್ಟ ಒಂದು ವಾರವಾದರೂ ಬೇಕು, ವಿಶ್ವವಿದ್ಯಾಲಯಗಳ ಆಗುಹೋಗುಗಳ ಬಗೆಗಿನ ಚರ್ಚೆಯ ಮಟ್ಟಿಗೆ ಒಂದು ದಿನವೇ ದೀರ್ಘದ ಅವಧಿ ಎನ್ನುವಂತಾಗಿರುವ ವಾತಾವರಣದ ಬಗ್ಗೆ ಬೇಸರ ವ್ಯಕ್ತಪಡಿಸಿತು. ಜಗತ್ತಿನ ಬಹುತೇಕ ವಿಶ್ವವಿದ್ಯಾಲಯಗಳು ಒಂದು ಬಗೆಯ ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿರುವಂತಿದೆ. ಇದರಲ್ಲಿ ಅತಿ ಮುಖ್ಯವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಒತ್ತಡಗಳ ಜೊತೆಯಲ್ಲಿ ರಾಜಕೀಯ ಒತ್ತಡಗಳೂ ಸೇರಿವೆ. ಒಂದು ಆರೋಗ್ಯಪೂರ್ಣವಾದ ಅಕಾಡೆಮಿಕ್ ಪರಿಸರ ನಿರ್ಮಾಣವಾಗಬೇಕಾದರೆ, ಈ ಬಗೆಯ ಒತ್ತಡಗಳು ಇರಬಾರದು ಇದ್ದರೂ ತೀರಾ ನಗಣ್ಯ ಎನ್ನುವಂತಿರಬೇಕು. ಈ ಬಗೆಯ ಒತ್ತಡಗಳೇ ನಿರ್ಣಾಯಕ ಎನ್ನುವಂತಾದಾಗ ಅಲ್ಲಿಯ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಮಾತನಾಡದಿರುವುದೇ ಒಳಿತು. ಒಂದು ವಿಶ್ವವಿದ್ಯಾಲಯದ ಪರಿಸರವನ್ನು ಜಾತಿ, ಧರ್ಮ, ಸ್ವಜನಪಕ್ಷಪಾತಗಳೇ ನಿರ್ಣಯಿಸುವಂತಾದಾಗ ಅಲ್ಲಿ ತಪ್ಪಿಯೂ ಗುಣಕ್ಕೆ ಬೆಲೆಯಿರುವದಿಲ್ಲ. ಅಂಥಾ ವಿಶ್ವವಿದ್ಯಾಲಯಗಳನ್ನು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಕಪ್ಪು ಪಟ್ಟಿಯಲ್ಲಿಟ್ಟು ಅದಕ್ಕೆ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ತುರ್ತಾಗಿ ಸೆನ್ಸಾರ್ ಮಾಡುವಂತಾಗಬೇಕು.

ಕಾಮನವೆಲ್ತ್ ವಿಶ್ವವಿದ್ಯಾನಿಲಯಗಳ ಒಕ್ಕೂಟದಲ್ಲಿ ಸುಮಾರು 500 ರಷ್ಟು ಜಾಗತಿಕ ಮಟ್ಟದ ಸದಸ್ಯತ್ವವಿದೆ. ಅವರ ಪ್ರಕಾರ ವಿಶ್ವವಿದ್ಯಾಲಯದ ಗುಣಮಟ್ಟವನ್ನು ಕೇವಲ ಅಂಕಿ ಅಂಶಗಳ ಮೂಲಕ ಅಧ್ಯಯನ ಮಾಡಿ ಶ್ರೇಷ್ಟ ಕನಿಷ್ಟ ಎಂದು ಗುರುತಿಸದೇ ಆಯಾ ಪ್ರಾದೇಶಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಕುರಿತು ಕೂಡಾ ಗಮನಹರಿಸಬೇಕು. ಮಾನವೀಯ ಚಟುವಟಿಕೆಗಳ ನೆಲೆಯಾದ ವಿಶ್ವವಿದ್ಯಾನಿಲಯದಂತಹ ಒಂದು ಅತ್ಯಂತ ಸಂಕೀರ್ಣವಾದ ಸಂಸ್ಥೆಯನ್ನು ವಿಭಿನ್ನ ನೆಲೆಯಲ್ಲಿ ಮಾಪನ ಮಾಡುವ ಅವಶ್ಯಕತೆಯನ್ನು ಕಿಂಗ್ಸ್ಟ್ನ್ ಸಮ್ಮೇಳನದಲ್ಲಿ ಪ್ರತಿಪಾದಿಸಲಾಯಿತು. ನಾರ್ಮನ್ ಜರಕಾಫ ಎನ್ನುವ ಚಿಂತಕ ಹೇಳುವ ಹಾಗೆ ‘ಕಳೆದ ಐದು ದಶಕಗಳಲ್ಲಿ ಎಲ್ಲ ವಲಯಗಳಲ್ಲಿ ನಾಯಕತ್ವದಲ್ಲಾದ ವೈಫಲ್ಯಕ್ಕೆ ಸ್ಪರ್ಧೆ ಕಾರಣವಾಗಿರದೇ ನೈತಿಕತೆಯಲ್ಲಿಯ ವಿಫಲತೆಯೇ ಕಾರಣವಾಗಿದೆ’ ಎಂದಿರುವರು. ಸದ್ಯದ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳ ಪರಿಸರವನ್ನು ನೈತಿಕತೆಯ ಹಿನ್ನೆಲೆಯಲ್ಲಿ ಅರಿಯುವ ಅಗತ್ಯವಿದೆ. ಜಗತ್ತಿನ ಬೇರೆ ಬೇರೆ ವಿಶ್ವವಿದ್ಯಾಲಯಗಳು ಭಿನ್ನ ಭಿನ್ನ ಕಾರಣಗಳಿಗಾಗಿ ನೈತಿಕ ಅಧ:ಪತನಕ್ಕೆ ಸಿಲುಕಿರಬಹುದು. ನಮ್ಮ ರಾಜ್ಯದಲ್ಲಂತೂ ವಿಶ್ವವಿದ್ಯಾಲಯಗಳು ಈ ವಿಷಯವಾಗಿ ನಾ ಮುಂದು ತಾ ಮುಂದು ಎಂದು ಸ್ಪರ್ಧೆಗಿಳಿದಿವೆ. ನಾನು ಇಂಥಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಮುಜುಗರ ಪಡುವಂಥಾ ಸ್ಥಿತಿಯನ್ನು ನಿರ್ಮಾಣ ಮಾಡಿದ ಮನಸುಗಳಿಗೆ ಏನನ್ನಬೇಕು..?
ಸಮಕಾಲೀನ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಗುಣಮಟ್ಟದ ಬಗ್ಗೆ ಮಾತನಾಡದೇ ಅವುಗಳ ನೈತಿಕ ಮಟ್ಟ ವನ್ನು ಕುರಿತು ಮಾತನಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿಶ್ವವಿದ್ಯಾಲಯವೊಂದು ವಸ್ತುಗಳನ್ನು ಉತ್ಪಾದಿಸುವ ಯಾವುದೋ ಒಂದು ಉದ್ದಿಮೆಗಿಂತಾ ಇನ್ನಾವುದೇ ರೀತಿಯಲ್ಲಿ ಭಿನ್ನವಾಗಿಲ್ಲ ಎನ್ನುವಂತೆ ಕೆಲಸ ಮಾಡಿದಾಗ ಅದರ ನೈತಿಕ ಮಟ್ಟದ ಅಳತೆಗೋಲಾವುದು..? ಯಾವುದೇ ಒಂದು ವಿಶ್ವವಿದ್ಯಾಲಯ ಕೇವಲ ಶ್ರೇಣಿಗಾಗಿ ಹರಸಾಹಸ ಪಡದೇ ತನ್ನ ನಡತೆಯ ಮೂಲಕ ಸಂಘಟನಾತ್ಮಕ ಮೌಲ್ಯಗಳನ್ನು ಪ್ರತಿಪಾದಿಸುವಂತಾಗಬೇಕು. ಅರ್ಹತಾ ಪತ್ರಕ್ಕಿಂತಲೂ ಅರ್ಹತೆ ಮುಖ್ಯವಾಗಾಬೇಕು. ವಿಶ್ವವಿದ್ಯಾಲಯಗಳ ಶ್ರೇಣೀಕರಣದಲ್ಲಿ ಅರ್ಹತಾ ಪತ್ರ ಮತ್ತು ಇತರೇ ಬೌತಿಕ ಮಾನದಂಡಗಳೇ ಮುಖ್ಯವಾಗುತ್ತಿವೆ. ಉದ್ಯೋಗದ ಮಾರುಕಟ್ಟೆಯನ್ನು ಗಮನಿಸಿ ಕೋರ್ಸುಗಳನ್ನು ಹುಟ್ಟುಹಾಕುವ ಮತ್ತು ಪದವಿಗಳನ್ನು ನೀಡುವಲ್ಲಿ ಒಂದು ಬಗೆಯ ತೀವ್ರ ಆರ್ಥಿಕ ಸ್ಪರ್ಧೆಯಿದೆ. ಒಂದು ಶೈಕ್ಷಣಿಕ ಸಂಸ್ಥೆಯ ಸಾಂಸ್ಕೃತಿಕ ಬಡತನದ ಅರಿವಾಗದ ಮಟ್ಟಿಗೆ ಆರ್ಥಿಕ ಸ್ಪರ್ಧೆಯಲ್ಲಿ ಜಟಾಪಟಿಯಿದೆ.
ಯಾವುದೇ ಒಂದು ವಿಶ್ವವಿದ್ಯಾಲಯದ ಗುಣಗೌರವ ಹೆಚ್ಚಿಸುವ ಪ್ರಮುಖ ಸಂಗತಿಗಳೆಂದರೆ ಅಲ್ಲಿಯ ಪ್ರಜ್ಞಾವಂತ ಮಾನವ ಸಂಪನ್ಮೂಲ ಎನಿಸಿಕೊಳ್ಳುವ ಅಧ್ಯಾಪಕರು. ಆದರೆ ನಮ್ಮಲ್ಲಿ ನಡೆಯುವ ನೇಮಕಾತಿಗಳಲ್ಲಿಯ ಮ್ಯಾಚ್ ಫಿಕ್ಸಿಂಗ್ ನೋಡಿದರೆ ಅಲ್ಲಿ ಆರಂಭವಾಗಿರುವ ನೈತಿಕ ಅಧ:ಪತನದ ಬಗ್ಗೆ ಊಹಿಸಲಿಕ್ಕೂ ಸಾಧ್ಯವಿಲ್ಲ. ವಿಶ್ವವಿದ್ಯಾಲಯವೊಂದು ಬೃಹತ್ ಕಟ್ಟಡ ಹೊಂದಿರುವುದು, ಸುಂದರವಾದ ಗಾರ್ಡನ್ ಇರುವುದು, ಜಗಮಗಿಸುವ ಲೈಟುಗಳು, ಹವಾ ನಿಯಂತ್ರಿತ ಕೊಠಡಿಗಳು ಇರುವದಕ್ಕಿಂತಲೂ ಅತಿ ಮುಖ್ಯವಾಗಿ ಪ್ರತಿಭಾವಂತ, ಸಮರ್ಥ ಅಧ್ಯಯನಶೀಲ, ಅನ್ವೇಷಣಾ ಗುಣದ ಪ್ರಾಧ್ಯಾಪಕರಿರಬೇಕು. ಹೀಗಾಗದೇ ಬರೀ ವಾಮಮಾರ್ಗಗಳೇ ನೇಮಕಾತಿಯಲ್ಲಿ ಮುಖ್ಯವಾಗಿ, ಅಸಮರ್ಥರು ವಿಶ್ವವಿದ್ಯಾಲಯದ ಪರಿಸರದಲ್ಲಿ ಪ್ರವೇಶ ಪಡೆಯುವಂತಾದ ದಿನದಿಂದಲೇ ಆ ವಿಶ್ವವಿದ್ಯಾಲಯದ ಅಧ:ಪತನ ಆರಂಭವಾಯಿತೆಂದರ್ಥ. ಅನೇಕ ಮುಂದುವರೆದ ರಾಷ್ಟ್ರಗಳು ಪ್ರತಿಭಾವಂತ ಅಧ್ಯಾಪಕರನ್ನು ಸೆಳೆಯಲು ಅನೇಕ ಬಗೆಯ ಅವಕಾಶಗಳನ್ನು ಇಡುತ್ತವೆ. ಬೇರೆ ರಾಷ್ಟ್ರದ ಪ್ರತಿಭೆಗಳು ತಮ್ಮಲ್ಲಿ ಬರುವ ಹಾಗೆ ಅವಕಾಶಗಳನ್ನು ಒದಗಿಸುತ್ತವೆ. ನಮ್ಮಲ್ಲಿ ಆ ಬಗೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿಭಾವಂತರನ್ನು ಸೆಳೆಯುವ ಪ್ರಾಮಾಣಿಕ ಯತ್ನ ಮಾಡಿರುವದು ತೀರಾ ಕಡಿಮೆ. ವಿಶ್ವ ಬ್ಯಾಂಕನ್ನೊಳಗೊಂಡು ಇತರೆ ಅಂತರರಾಷ್ಟ್ರೀಯ ಸಂಘಟನೆಗಳು ಶಿಷ್ಯವೇತನವನ್ನು ನೀಡುವ ಮೂಲಕ ಪ್ರತಿಭಾವಂತರನ್ನು ಸೆಳೆಯುವ ಯತ್ನ ಮಾಡಲಾಗುತ್ತದೆ. ಮತ್ತೆ ಕೆಲವು ವಿಶ್ವವಿದ್ಯಾಲಯಗಳು ಸಂಶೋಧನೆಯಲ್ಲಿ ಸುಧಾರಣೆಯನ್ನು ತರುವ ನಿಟ್ಟಿನಲ್ಲಿ ಸಂಶೋಧಕರಿಗೆ ಪಾಲುದಾರಿಕೆಯನ್ನು ಒದಗಿಸುತ್ತವೆ. ಹೀಗೆ ಮಾಡಿದಾಗಲೂ ಪ್ರತಿಭಾವಂತರ ಸಾಮಾಜಿಕ ಸಂಚಲನೆಯ ಪ್ರಮಾಣ ಮಾತ್ರ ಹೆಚ್ಚಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಕಡೆಗೆ ಇದೆ. ಒಂದು ಅಂಕಿ ಅಂಶದ ಪ್ರಕಾರ ವಿಶ್ವದ ಎಂಟು ಜನ ಪ್ರತಿಭಾವಂತ ವಿಜ್ಞಾನಿಗಳ ಪೈಕಿ ಒಬ್ಬಾತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಸಂಬಂಧಿಸಿದವನು.
ಆದರೆ ಸುಮಾರು 80 ಪ್ರತಿಶತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ವಿಜ್ಞಾನಿಗಳು ಅಭಿವೃದ್ಧಿ ಹೊಂದಿದ ಅಮೇರಿಕಾದಂತಹ ರಾಷ್ಟ್ರಗಳಿಗೆ ವಲಸೆ ಹೊಗುತ್ತಾರೆ. 2010 ರಲ್ಲಿ ಓಹಿಯೋ ವಿಶ್ವವಿದ್ಯಾಲಯದ ಬ್ರುಸ್ ವಿನಬಗರ್್ ಮಾಡಲಾದ ಅಧ್ಯಯನದಂತೆ ಕೆನಡಾ, ಆಸ್ಟ್ರೇಲಿಯಾ, ಸ್ವಿಸ್ ಮುಂತಾದ ರಾಷ್ಟ್ರಗಳು ಅಮೇರಿಕೆಗಿಂತ ಹೆಚ್ಚಿನ ವಿದೇಶಿ ಪ್ರತಿಭಾವಂತರಿಗೆ ಮಣೆ ಹಾಕಿರುವದಿದೆ. ಸ್ವಿಜಲ್ಯರ್ಾಂಡ್ ಅತಿ ಹೆಚ್ಚು ಸುಮಾರು 57 ಪ್ರತಿಶತದಷ್ಟು ವಿದೇಶಿ ಪ್ರತಿಭೆಗಳನ್ನು ತನ್ನೆಡೆಗೆ ಸೆಳೆದಿರುವದಿದೆ. ಭಾರತ ಹೀಗೆ ವಿದೇಶಿ ಪ್ರತಿಭೆಗಳನ್ನು ಸೆಳೆಯುವಲ್ಲಿ ಇಟಲಿ..ಜಪಾನ್ ನಂತರದ ಸ್ಥಾನವನ್ನು ಪಡೆದಿರುವದಿದೆ. ಹಾಗೆಯೇ ಪಿ.ಎಚ್ಡಿ ಪದವಿ ಪಡೆದ ಅಸಂಖ್ಯಾತರನ್ನು ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳು ಬರ ಮಾಡಿಕೊಳ್ಳುತ್ತವೆ ಆದರೆ ನಮ್ಮಲ್ಲಿ ಮಾತ್ರ ಒಬ್ಬ ವ್ಯಕ್ತಿ ಪಿ.ಎಚ್ಡಿ. ಮುಗಿಸಿ ದಶಕವೇ ಕಳೆದಿದ್ದರೂ ಇನ್ನೂ ನಿರುದ್ಯೋಗಿಯಾಗಿಯೇ ಇರುತ್ತಾನೆ. ವಿಶ್ವದ ಬೇರೆ ಬೇರೆ ವಿಶ್ವವಿದ್ಯಾಲಯಗಳು ಈಗೀಗ ನೇಮಕಾತಿಯ ವಿಷಯದಲ್ಲಿ ಕ್ಯಾಂಬ್ರಿಜ್ ಮತ್ತು ಆಕ್ಸ್ಫಡರ್್ ವಿಶ್ವವಿದ್ಯಾಲಯಗಳನ್ನು ಅನುಕರಿಸುತ್ತಿವೆ. ನಮ್ಮಲ್ಲಿ ಸಾವಿರಾರು ವಿಶ್ವವಿದ್ಯಾಲಯಗಳಿದ್ದರೂ ಪ್ರತಿಭೆಯನ್ನು ಸರಿಯಾಗಿ ಗುರುತಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾದಂತೆ ಕಾಣುವದಿಲ್ಲ. ನಾವು ವಿದೇಶಿ ಶಿಕ್ಷಣ ಸಂಸ್ಥೆಗಳನ್ನು ಕೇವಲ ಭೌತಿಕವಾಗಿ ಅನುಕರಿಸುತ್ತೇವೆ ಪರಿಣಾಮವಾಗಿ ನಾವು ಆಂತರಿಕ ಗುಣಮಟ್ಟದ ವಿಷಯದಲ್ಲಿ ತುಂಬಾ ತುಂಬಾ ದೂರ. ಹಾಗಾಗಿಯೇ ವಿಶ್ವದ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮ್ಮ ದೇಶದ ಒಂದೇ ಒಂದು ವಿಶ್ವವಿದ್ಯಾಲಯ ಇಲ್ಲದಿರುವುದು ಆ ವಲಯದಲ್ಲಿ ಕೆಲಸ ಮಾಡುವ ಎಲ್ಲರ ಆತ್ಮಾವಲೋಕನಕ್ಕೆ ಕಾರಣವಾಗಬೇಕು. ಜಾಗತೀಕರಣದ ಓಟದಲ್ಲಿ ಹಿಂದೆ ಬಿದ್ದರೂ ಪರವಾಗಿಲ್ಲ ನಾವೂ ಇದ್ದೇವೆ ಎನ್ನುವ ಮಟ್ಟಿಗಾದರೂ ಇರಬೇಡವೇ..? ನ್ಯಾಕ್ ಟೀಮ್ ಭೇಟಿ ಕೊಡುವದಿದೆ ಎನ್ನುವಾಗ ಕಸಗೂಡಿಸುವ, ಜಮಖಾನೆ ಹಾಸುವ, ಡಾಕ್ಯುಮೆಂಟ್ ರೆಡಿ ಮಾಡುವ ಕಟಿಬಿಟಿಯನ್ನು ನಿರಂತರವಾಗಿ ಯಾವ ತಂಡದ ಭೇಟಿ ಇಲ್ಲದಿರುವಾಗಲೂ ಮಾಡುವ ದಿನಗಳನ್ನು ನಿರೀಕ್ಷಿಸುವ ಅಗತ್ಯವಿದೆ.
 

‍ಲೇಖಕರು G

November 27, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: