ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವೇಕ ಶಾನಬಾಗರ 'ಕೋಳಿ ಕೇಳಿ ಮಸಾಲೆ?'

ವಿವೇಕ ಶಾನಭಾಗರ ಹೊಸ ಕಥಾಸಂಕಲನ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ.

ಅಕ್ಷರ ಪ್ರಕಾಶನ ಹೊರತರುತ್ತಿರುವ ಈ ಸಂಕಲನಕ್ಕೆ ವಿವೇಕ್ ಬರೆದ ಮಾತುಗಳು ಹಾಗೂ ಅವರೇ ಆರಿಸಿ ಕೊಟ್ಟ ಒಂದು ಕಥೆ ‘ಅವಧಿ‘ ಓದುಗರಿಗಾಗಿ ಇಲ್ಲಿದೆ-

ಒಂದೆರಡು ಮಾತು

ಪ್ರಸ್ತುತ ಸಂಕಲನದ ಕತೆಗಳು ಕಳೆದ ಏಳು ವರ್ಷಗಳ ಅವಧಿಯಲ್ಲಿ ಬರೆದವು. ಇವುಗಳನ್ನು ಬರೆದಂತೆಲ್ಲ ಪ್ರಕಟನೆಯ ಮುನ್ನವೇ ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಆತ್ಮೀಯರು ಹಲವರು. ಇವರ ವಿಮರ್ಶೆಯ ಒರೆಗಲ್ಲನ್ನು ನೆಚ್ಚಿ ನಾನು ಬರೆಯುತ್ತೇನೆ. ಈ ಕತೆಗಳು ಸಂಕಲನವಾಗಿ ಪ್ರಕಟವಾಗುತ್ತಿರುವ ಸಮಯದಲ್ಲಿ ಇವರೆಲ್ಲರನ್ನೂ ಮನಸಾರೆ ನೆನೆಯುತ್ತೇನೆ.
ಇಲ್ಲಿಯ ಕೆಲವು ಕತೆಗಳನ್ನು ಪ್ರಕಟಿಸಿದ ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳ ಸಂಪಾದಕರಿಗೆ, ಈಗ ಪುಸ್ತಕರೂಪದಲ್ಲಿ ಪ್ರಕಟಿಸುತ್ತಿರುವ ಕೆ.ವಿ. ಅಕ್ಷರ ಅವರಿಗೆ ಹಾಗೂ ವಿನ್ಯಾಸಕಾರ ಚನ್ನಕೇಶವರಿಗೆ ನಾನು ಋಣಿ. ಅಂತೆಯೇ, ಈ ಸಂಕಲನ ಹೊರಬರಲು ಹಲವು ಬಗೆಯಲ್ಲಿ ನೆರವಾದ ಸ್ವ್ಯಾನ್ ಪ್ರಿಂಟರ್ಸ್ ನ ಕೃಷ್ಣಮೂರ್ತಿಯವರಿಗೂ ನಾನು ಆಭಾರಿ.
ಇಲ್ಲಿರುವ `ಘಾಚರ್ ಘೋಚರ್’ ಎಂಬ ನೀಳ್ಗತೆಯು ಇತ್ತೀಚೆಗೆ ಬರೆದುದು ಮತ್ತು ಅದೆಲ್ಲಿಯೂ ಪ್ರಕಟವಾಗಿಲ್ಲ. ಈ ಜಗತ್ತಿನಲ್ಲಿ ಕೆಲವೇ ಜನರಿಗೆ ಮಾತ್ರ ಗೊತ್ತಿರುವ `ಘಾಚರ್ ಘೋಚರ್’ ಎಂಬ ಶಬ್ದಯುಗಳದ ಅರ್ಥವನ್ನು ತಿಳಿಯಲು ಇರುವ ಒಂದೇ ಮಾರ್ಗವೆಂದರೆ ಈ ಕತೆಯನ್ನು ಓದುವುದು!
ಗೆಳೆಯ ಎಂ.ಎಸ್. ಶ್ರೀರಾಮ್ ಮತ್ತು ಗೌರಿ ಜೊತೆಯ ನನ್ನ ಒಡನಾಟ ಬಹುಕಾಲದ್ದು. ನಮ್ಮ ನಡುವಿನ ಪ್ರೀತಿ ಮತ್ತು ಸ್ನೇಹವನ್ನು ನೆನೆಯುತ್ತ ಈ ಪುಸ್ತಕವನ್ನು ಅವರಿಗೆಆರ್ಪಿಸಿದ್ದೇನೆ.
-ವಿವೇಕ ಶಾನಭಾಗ

ಕೋಳಿ ಕೇಳಿ ಮಸಾಲೆ?

ವಿವೇಕ ಶಾನಭಾಗ

ಈ ಜಗತ್ತು ಎಷ್ಟು ಸಣ್ಣದಾಗಿದೆ ಎಂದು ವಿಮಾನ ನಿಲ್ದಾಣಗಳಲ್ಲಿ ಸಿಕ್ಕ ಜನ ಮಾತಾಡಿದರೆ ನನಗೆ ಆಶ್ಚರ್ಯವಾಗುವುದಿಲ್ಲ. ಅದು ಮಾತು ಮುಂದುವರಿಸಲು ಒಂದು ನೆವ. ನಾದಿನಿಯ ಗಂಡನ ತಮ್ಮನನ್ನು ಮದುವೆಯಾದ ಹುಡುಗಿ ಹಳೆಯ ಕ್ಲಾಸ್ಮೇಟ ಹರಿಣಿ ಎಂಬುದು ತಿಳಿದರೆ ಹುಟ್ಟುವ ಉದ್ಗಾರಗಳು ಅವೆಲ್ಲ. ಆದರೆ ಜಗತ್ತು ಸಣ್ಣದು ಅಂತ ನಿಜವಾಗಿಯೂ ಅನಿಸಿದ್ದು ನಾನು ಹಗುರವಾಗಿ ಯಾರ ಜೊತೆಗೋ ಆಡಿದ ಮಾತು ಎರಡೇ ದಿನಗಳಲ್ಲಿ ಕೋಳಿ ಎಂಬ ಹೆಸರಿನ ಹಳೆಯ ಕ್ಲಾಸ್ಮೇಟ್ ಒಬ್ಬನಿಗೆ ತಲುಪಿದಾಗ. ಅಂದು ಕ್ಲಬ್ಬಿನಲ್ಲಿ ಟೆನಿಸ್ ಆಡಿದ ನಂತರ ಕೂತು ಜ್ಯೂಸ್ ಕುಡಿಯುವಾಗ ಯಾಕೋ ಈ ಕೋಳಿಯ ನೆನಪಾಗಿ ಅದನ್ನು ಜೊತೆಯ ಸ್ನೇಹಿತರಿಗೆ ಹೇಳಿದ್ದೆ. ಆಗ ಅಲ್ಲಿ ಯಾರೆಲ್ಲ ಇದ್ದರು ಅನ್ನುವುದು ನನಗೆ ನೆನಪಿಲ್ಲ. ಆ ದಡ್ಡರಿಗೆ ಅವನ ಸರ್ನೇಮ್ ಕೋಳಿ ಅಂತ ವಿವರಿಸಲಿಕ್ಕೇ ಐದು ನಿಮಿಷ ಬೇಕಾಯಿತು. ಇವನ ಬಗ್ಗೆ ಬರೆಯಬೇಕು ಅಂದುಕೊಂಡಿದ್ದೇನೆ ಅಂತಲೂ ಹೇಳಿದೆ. ಕೋಳಿ ನನ್ನ ಕ್ಲಾಸ್ಮೇಟ್ ಆಗಿದ್ದ. ಅವನು ತಿಂಗಳಿಗೆ ಒಂದು ಹತ್ತು ರೂಪಾಯಿ ಗಳಿಸಲಿಕ್ಕೆ ಟೆನಿಸ್ ಕೋಟರ್ಿಗೆ ಹೋಗಿ ಬಾಲ್ಬಾಯ್ ಕೆಲಸ ಮಾಡುತ್ತಿದ್ದ. ಆಟಗಾರರು ಹೊಡೆದ ಚೆಂಡು ನಡುವಿನ ನೆಟ್ಗೆ ತಾಗಿ ಬಿದ್ದರೆ ಅಥವಾ ಕೋಟರ್ಿನಿಂದ ಸಿಡಿದು ಹೋದರೆ ಓಡಿ ಹೋಗಿ ಅದನ್ನು ಹೆಕ್ಕಿ ತಂದು ಕೊಡುವುದು ಅವನ ಕೆಲಸ. ಆಗ ನಾನಿದ್ದ ಆ ಸಣ್ಣ ಊರಿನಲ್ಲಿ ಒಬ್ಬ ಡಾಕ್ಟರು, ಒಬ್ಬ ಪಿಡಬ್ಲೂಡಿ ಎಂಜಿನಿಯರು, ಒಬ್ಬ ಮುನಸೀಫರು ಮತ್ತು ಒಬ್ಬ ಬ್ಯಾಂಕ್ ಮ್ಯಾನೇಜರು – ಇವರಷ್ಟೇ ಜನ ಟೆನಿಸ್ ಆಡುವವರು. ಯಾರೂ ನುರಿತ ಆಟಗಾರರಲ್ಲದಿರುವುದರಿಂದ ಕ್ಷಣಕ್ಷಣಕ್ಕೂ ಬಾಲು ಆಚೆ ಹೋಗುತ್ತಿತ್ತು. ಹಾಗಾಗಿ ಕೋಳಿಗೆ ಕಾಲುತುಂಬ ಕೆಲಸ. ಓಡಾಡಿ ಓಡಾಡಿ ಸುಸ್ತು ಹೊಡೆಯುತ್ತಿತ್ತು. ಆಟಗಾರರಿಗಿಂತ ಇವನೇ ಹೆಚ್ಚು ಓಡಾಡುತ್ತಿದ್ದ.
ಕೋಳಿ ಯಾವಾಗಲೂ ಖಾದಿ ಬಟ್ಟೆಯ ಬಿಳಿಯ ಟೊಪ್ಪಿಗೆ ಹಾಕಿಕೊಳ್ಳುತ್ತಿದ್ದ. ಹುಡುಗರು ಅವನ ಟೊಪ್ಪಿಗೆಯನ್ನು ಎಗರಿಸಿ ಅದನ್ನು ಅಲ್ಲಿಂದ ಇಲ್ಲಿ ಹಾರಾಡಿಸಿ ಅವನನ್ನು ಕ್ರೂರವಾಗಿ ಕಾಡುತ್ತಿದ್ದರು. ಎಷ್ಟೋ ಬಾರಿ, ಅದು ಎಲ್ಲ ಕಡೆ ಹಾರಾಡಿ ಮರಳಿ ಅವನ ಹತ್ತಿರ ಬರುವವರೆಗೂ ಸುಮ್ಮನೇ ನಿಂತು ನೋಡುತ್ತಿದ್ದ. ನಂತರ ಕೊಳೆಕೊಡವಿ ಧರಿಸಿಕೊಳ್ಳುತ್ತಿದ್ದ. ಅವನಿಗೆ ನನ್ನ ಹಳೆಯ ಅಂಗಿ ಚಡ್ಡಿಗಳನ್ನು ನನ್ನ ಅಮ್ಮ ಕೊಟ್ಟಿದ್ದರು. ಅವನದನ್ನು ಶಾಲೆಗೆ ಹಾಕಿಕೊಂಡು ಬಂದಾಗ ನನಗೆ ಮುಜುಗರವಾಗುತ್ತಿತ್ತು. ಉಪಯೋಗಿಸಿದ ಹಳೆಯ ಟೆನಿಸ್ ಬಾಲುಗಳನ್ನು ತಂದು ರೂಪಾಯಿಗೆ ಒಂದರಂತೆ ಅವನು ನಮಗೆ ಮಾರುತ್ತಿದ್ದ. ನಾವು ಅವುಗಳಿಂದ ಕ್ರಿಕೆಟ್ ಆಡುವಾಗ ನಮ್ಮ ಜೊತೆ ಡಾಕ್ಟರರ ಮಗ ಇದ್ದರೆ ಬೌಂಡರಿಗೆ ಹೋದ ಚೆಂಡುಗಳನ್ನು ಕೋಳಿಯೇ ತಂದು ಕೊಡಬೇಕೆಂದು ಬಯಸುತ್ತಿದ್ದ. ಒಂದು ಸಲ ಡಾಕ್ಟರರ ಮಗ ಕೋಳಿಯನ್ನು ತಂದೂರಿ ಎಂದು ಕರೆದದ್ದಕ್ಕೆ ಅವನು ಸಿಟ್ಟಾಗಿ ನೀನು ನರ್ಸಮ್ಮನಿಗೆ ಹುಟ್ಟಿದವನು ಅಂದ. ಈ ರೀತಿಯ ಬೈಗಳೇ ನಮಗೆ ಹೊಸದು. ಅದಕ್ಕೆ ಅವನು ಕೋಳಿಯನ್ನು ಸೂಳೇಮಗ ಅಂದ ಅಂತ ಕೋಳಿ ಅವನ ಕಪಾಳಕ್ಕೆ ಹೊಡೆದು ನಂತರ ಡಾಕ್ಟರು ಅವನನ್ನು ಬಾಲ್ಬಾಯ್ ಕೆಲಸದಿಂದ ತೆಗೆದು ಹಾಕಿದ್ದರು.
ಅವನು ನಾಯಿಮರಿಗಳನ್ನು ಮಾರುತ್ತಾನೆ ಅಂತ ಹೇಳುತ್ತಿದ್ದರು. ಗಬ್ಬ ನಾಯಿಯನ್ನು ಹಿಂಬಾಲಿಸಿ ಅದು ಮರಿಹಾಕಿದ ಜಾಗ ಪತ್ತೆ ಮಾಡಿ, ನಂತರ ಕಣ್ಣು ಒಡೆಯುವವರೆಗೂ ಕಾದು, ಮರಿಗಳನ್ನು ಎಗರಿಸಿ ತಂದು ಮಾರುತ್ತಾನೆ ಎಂದ ಹುಡುಗರ ಮಾತು ಕೇಳಿ ನನಗೂ ಒಂದು ಬೇಕು ಅಂತ ಹೇಳಿದ್ದಕ್ಕೆ ಒಂದು ಬೆಳಿಗ್ಗೆ ಕಂಕುಳಲ್ಲಿ ಕಂದು ಬಣ್ಣದ ಪುಟಾಣಿ ನಾಯಿಮರಿಯನ್ನು ಹಿಡಿದುಕೊಂಡು ಮನೆಗೆ ಬಂದಿದ್ದ. ನನ್ನ ಅಪ್ಪ ನನ್ನನ್ನೂ ಅವನನ್ನೂ ಒಟ್ಟಿಗೇ ಬೈದು ಕಳಿಸಿಬಿಟ್ಟಿದ್ದರು. ಶಾಲೆಯ ಕನ್ನಡ ಮಾಸ್ತರು ಏನಾದರೂ ನೆವ ಹಿಡಿದು ಕೋಳಿಯನ್ನೂ ಅವನ ಟೊಪ್ಪಿಗೆಯನ್ನೂ ಹಾಸ್ಯ ಮಾಡುತ್ತಿದ್ದರು. ಕೋಳಿಗೆ ಅಥವಾ ಮೊಟ್ಟೆಗೆ ಸಂಬಂಧಪಟ್ಟ ಯಾವ ಶಬ್ದ ಬಂದರೂ ಅವನತ್ತ ಒಂಥರಾ ನೋಡುತ್ತಿದ್ದರು ಮತ್ತು ಅವನಿಗೆ ಅದರ ಕುರಿತು ಪ್ರಶ್ನೆ ಕೇಳುತ್ತಿದ್ದರು. ಒಮ್ಮೆ `ಕೋಳಿ ಕೇಳಿ ಮಸಾಲೆ?’ ಎಂಬ ಗಾದೆಯ ಅರ್ಥ ಹೇಳಲು ಅವನನ್ನು ಕೇಳಿದ್ದರು. ಪಾಪ ಕೋಳಿ, ಎಲ್ಲರ ನಗುವಿನ ನಡುವೆಯೂ ನಮ್ರನಾಗಿ ಉತ್ತರ ಹೇಳಿದ.
ಬಾಲ್ಬಾಯ್ ಕೆಲಸ ಹೋದ ಮೇಲೆ ಅವನು ಸಿನೇಮಾ ಥೇಟರಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿ ಕಸ ಗುಡಿಸುವುದರಿಂದ ಹಿಡಿದು ಎಂದಾದರೊಮ್ಮೆ ಗೇಟ್ಕೀಪಿಂಗ್ವರೆಗೆ ಅವನಿಂದ ಎಲ್ಲ ಕೆಲಸ ಮಾಡಿಸುತ್ತಿದ್ದರು. ಒಂದೊಂದು ಸಲ ಅವನು ಟಿಕೆಟ್ ಹರಿಯಲು ನಿಂತಾಗ ಜಾಸ್ತಿ ಜನರಿಲ್ಲದಿದ್ದರೆ ಶಾಲೆಯ ಹುಡುಗರನ್ನು ಹಾಗೇ ಬಿಡುತ್ತಿದ್ದ. ಮುಂದಿನ ಬದಲಾವಣೆ ಯಾವುದೆಂಬುದು ಅವನಿಗೆ ಮೊದಲೇ ಗೊತ್ತಿರುತ್ತಿತ್ತು. ಎಲ್ಲ ಸಿನೇಮಾಗಳನ್ನೂ ಅವನು ಮೊದಲ ದಿನವೇ ರೀಲು ಬಿಡುವ ಕೋಣೆಯಿಂದಲೇ ನೋಡಿಬಿಡುತ್ತಿದ್ದ. ಈ ಚಿತ್ರಜಗತ್ತಿನ ಜೊತೆ ಅವನ ಇಂಥ ಸಂಬಂಧ ಶುರುವಾದ ನಂತರ ಅವನ ಮಾತು ಮತ್ತು ಚಹರೆಯಲ್ಲಿ ವಿಚಿತ್ರ ಬದಲಾವಣೆಯಾಗತೊಡಗಿತು. ಶಾಲೆಯ ಗ್ಯಾದರಿಂಗ್ಗೆ ಅವನು ಸಿಪಾಯಿ ರಾಮು ಸಿನೇಮಾದ ಡಾಕುವಿನ ಪಾತ್ರ ಮಾಡಿದ. ಹಿಟ್ಟಿನಿಂದ ಮಾಡಿದ ಗುಳ್ಳೆಯನ್ನು ಕೆನ್ನೆಯ ಮೇಲೆ ಅಂಟಿಸಿಕೊಂಡು ಅದಕ್ಕೆ ಕಪ್ಪು ಶಾಯಿ ಹಚ್ಚಿ ಸಿನೇಮಾದ ವಿಲನ್ನಂತೆ ಕೈಯನ್ನು ಎತ್ತಿ ಹಿಡಿದು ಅಲ್ಲಾಡಿಸುತ್ತ ತಾನೇ ತಯಾರು ಮಾಡಿದ ಭಯಂಕರವಾದ ಡೈಲಾಗ್ ಹೇಳಿದ. ಇದೆಲ್ಲದರ ನಂತರ ಅವನಿಗೆ ಹುಡುಗರು ಕೊಡುವ ಕಾಟ ಕ್ರಮೇಣ ಕಡಿಮೆಯಾಯಿತು. ಕನ್ನಡ ಮಾಸ್ತರರೂ ಅಡ್ಡಾದಿಡ್ಡಿ ಪ್ರಶ್ನೆಗಳನ್ನು ಕೇಳುವುದನ್ನು ನಿಲ್ಲಿಸಿದರು.
ಆ ಊರಿನಿಂದ ನನ್ನ ಅಪ್ಪನಿಗೆ ಟ್ರಾನ್ಸ್ಫರ್ ಆಗಿ ನಾವು ಅಲ್ಲಿಂದ ಹೊರಟು ಬಂದ ಮೇಲೆ ನನಗೆ ಮೊನ್ನೆಮೊನ್ನೆಯವರೆಗೂ ಕೋಳಿಯ ವಿಷಯವೇ ಮರೆತು ಹೋಗಿತ್ತು.
 
* * *
 
ನಾನು ಕ್ಲಬ್ಬಿನಲ್ಲಿ ಕೂತು ಕೋಳಿಯ ಬಗ್ಗೆ ಮಾತಾಡಿ ಎರಡು ದಿನಗಳಾಗಿರಲಿಲ್ಲ, ನನಗೆ ಅವನು ಪಾಕರ್ಿನ ಹೊರಗೆ ಗೇಟಿನಲ್ಲಿ ಸಿಕ್ಕ. ಅವನು ಅವನೇ ಅಂತ ಹೇಳದೇ ಇದ್ದರೆ ಗುರುತು ಸಿಗುವುದಂತೂ ಸಾಧ್ಯವೇ ಇರಲಿಲ್ಲ. ಉದ್ದ ಕೂದಲು ಹಿಂದಕ್ಕೆ ಕಟ್ಟಿದ್ದ, ನೀಟಾದ ಗಡ್ಡದ ಈ ಅಜಾನುಬಾಹು ವ್ಯಕ್ತಿ ಕೆಂಪು ಸ್ಲೀವ್ಲೆಸ್ ಟೀಶಟರ್ಿನಲ್ಲಿ ನನ್ನೆದುರು ನಿಂತಿದ್ದ. ಡೈ ಮಾಡಿಮಾಡಿ ಕೂದಲು ತುಸು ಕೆಂಚಾಗಿತ್ತು. ಅವನ ತೋಳುಗಳ ಮಾಂಸಖಂಡಗಳು ಎದ್ದು ಕಾಣುತ್ತಿದ್ದವು. ಅವನು ನನ್ನತ್ತ ಬಂದ ರೀತಿಗೆ ಭಯವೇ ಆಯಿತು. ನಾನು ಕೋಳಿ ಅಂದ. ಮೊದಲು ನನಗೆ ಏನಂತ ಗೊತ್ತಾಗಲಿಲ್ಲ. ನಿನ್ನ ಕ್ಲಾಸ್ಮೇಟ್ ಕೋಳಿ ಅಂದ. ನಾನು ನಕ್ಕೆ. ಅವನು ಮುಗುಳ್ನಕ್ಕನೋ ಇಲ್ಲವೋ ಗೊತ್ತಾಗುವ ಮೊದಲು, ಬಾ ಹೋಗೋಣ ಅಂದ. ವಾಕ್ ಬಂದಿದ್ದೆ ಎಂದು ನಾನು ಹೇಳಿದ್ದು ಅವನಿಗೆ ಕೇಳಿತೋ ಇಲ್ಲವೋ ಗೊತ್ತಾಗಲಿಲ್ಲ. ಅವನ ಮಾತು ಪಾಲಿಸದೇ ಬೇರೆ ದಾರಿಯೇ ಇಲ್ಲ ಅನ್ನುವವನ ಹಾಗೆ ಮುಂದೆಮುಂದೆ ನಡೆದು ಹೋದ. ಅವನ ಬಿಳಿಯ ವ್ಯಾನಿನಲ್ಲಿ ಕೂರಿಸಿಕೊಂಡು ಕರಕೊಂಡು ಹೋದ. ಧಾಂಡಿಗನೊಬ್ಬ ಡ್ರೈವ್ ಮಾಡುತ್ತಿದ್ದ. ಆ ವ್ಯಾನಿಗೆ ಅಚ್ಚಗಪ್ಪು ಗಾಜಿತ್ತು. ಹೊರಗಿನಿಂದ ಒಳಗೆ ಕಾಣಿಸುವ ಮಾತಿರಲಿ, ಒಳಗಿನಿಂದ ನೋಡಿದಾಗಲೂ ಹೊರಗೆ ಸಂಜೆಗತ್ತಲು ಕವಿದಂತೆ ಅನಿಸುತ್ತಿತ್ತು. ರಿಂವ್ವನೆ ಹೊರಟ ವ್ಯಾನು ಸ್ವಲ್ಪ ಹೊತ್ತಿನ ನಂತರ ಒಂದು ಮನೆಯ ಒಳಹೋಗಿ ಪೋಟರ್ಿಕೋದಲ್ಲಿ ನಿಂತಿತು. ಅಲ್ಲಿಂದ ಮನೆಯೊಳಗೆ ಕರೆದುಕೊಂಡು ಹೋಗಿ ಕೂರಿಸಿದ. ಜ್ಯೂಸು ಕುಡೀತೀಯಾ ಅಂದು ನಾನು ಉತ್ತರ ಹೇಳುವ ಮೊದಲೇ ಯಾರಿಗೋ ಕೂಗಿ ಜ್ಯೂಸು ತರಲು ಹೇಳಿದ. ಅವನಿಗೆ ನನ್ನ ಬಗ್ಗೆ ಎಲ್ಲ ಗೊತ್ತಿತ್ತು. ನಾನು ದಿನವೂ ಪಾಕರ್ಿಗೆ ವಾಕ್ ಹೋಗುವುದು, ನಾನು ಏನು ಮಾಡುತ್ತಿದ್ದೇನೆ, ಹೆಂಡತಿಯ ವಿಷಯ, ಮಕ್ಕಳ ಸ್ಕೂಲು, ಯಾವ ಕ್ಲಾಸು ಎಲ್ಲವೂ ಗೊತ್ತಿತ್ತು. ಹಾಗಾಗಿ ನನಗೆ ಮಾತಾಡಲು ಅವಕಾಶವೇ ಇರಲಿಲ್ಲ. ಅವನ ಉದ್ಧಟತನದಿಂದ ನನಗೆ ಸಿಟ್ಟೇ ಬಂತು. ಅವನ ಬಗ್ಗೆ ಕೇಳಿದರೆ ಏನೂ ಸರಿಯಾಗಿ ಹೇಳಲಿಲ್ಲ. ಏನು ಕೇಳುವುದೆಂದು ಗೊತ್ತಾಗಲೇ ಇಲ್ಲ. ಏನು ಕೇಳಿದರೂ ಹಳೆಯ ಗಾಯ ಕೆದಕಿದ ಹಾಗೆ ಅನಿಸುತ್ತಿತ್ತು. ಎಲ್ಲಿ ಕೆಲಸ ಮಾಡುತ್ತೀ ಅಂದೆ. ಸ್ವಂತ ಬಿಸನೆಸ್ ಎಂದು ಮುಗುಮ್ಮಾಗಿ ಹೇಳಿದ. ಜೋಕ್ ಮಾಡಲು ನೋಡಿದೆ. ಹಳೆಯ ಗೆಳೆಯರ ಜೊತೆ ಯಾಕೆ ತುಸು ಹಗುರಾಗಿಯೇ ವ್ಯವಹರಿಸಲು ಪ್ರಯತ್ನಿಸುತ್ತೇವೆ ಅನಿಸಿ ಗಂಭೀರವಾಗಿರಲು ನೋಡಿದೆ. ನಿಜ ಹೇಳಬೇಕೆಂದರೆ ನನಗೆ ಅವನಲ್ಲಿ ಆಸಕ್ತಿಯೇ ಹೋಗಿಬಿಟ್ಟಿತ್ತು. ಕಿರಿಕಿರಿಯಾಗತೊಡಗಿತ್ತು. ಹೋಗುತ್ತೇನೆ ಅಂದು ಎದ್ದೆ.
ಸ್ವಲ್ಪ ಇರು ಅಂತ ಕೂರಿಸಿಕೊಂಡು ನೀನು ನನ್ನ ಬಗ್ಗೆ ಬರೆಯಲು ಹೊರಟಿದ್ದೀಯಂತೆ, ನನಗೆ ಎಲ್ಲಾ ಗೊತ್ತಾಯಿತು, ಅದರಲ್ಲಿ ನನ್ನ ಹೆಸರು ಹಾಕಬೇಡ ಅಂದ. ನನಗೆ ಎಲಾ ಅನಿಸಿತು. ಮೊಟ್ಟಮೊದಲ ಬಾರಿಗೆ ಮೇಲುಗೈಯಾಗಲು ಸಿಕ್ಕ ಈ ಅವಕಾಶವನ್ನು ಹೋಗಲು ಬಿಡದೇ, ಬಿಡೋ ಅದೇನು ಅಂದೆ. ಹಾಗೆಲ್ಲ ಬಿಡಲಿಕ್ಕೆ ಆಗುವುದಿಲ್ಲ ಎಂದು ಕಠಿಣವಾಗಿ ಹೇಳಿ ಗ್ಲಾಸಿನಲ್ಲಿಯ ಜ್ಯೂಸ್ ಎತ್ತಿ ಗಟಗಟನೇ ಕುಡಿದ. ಮತ್ತು ಸಿನೇಮಾಗಳಲ್ಲಿ ಮಾಡುವ ಹಾಗೆ ಎಡಮುಂಗೈಯಿಂದ ತುಟಿಯನ್ನು ಒರೆಸಿಕೊಂಡು ಹ್ಹ ಅಂದ.
ನಾನು ಬರೆಯುವುದು ಕತೆ ಕಾದಂಬರಿ. ಅಂದರೆ ಸೃಜನಶೀಲ ಸಾಹಿತ್ಯ ಅಂತಾರಲ್ಲ ಅದು. ಅದರಲ್ಲಿ ನಿಜ ಅಂತ ಇರೋದೇ ಇಲ್ಲ. ಯಾವುದು ನಿಜ ಯಾವುದು ಕಲ್ಪನೆ ಅಂತ ಹೇಳಲಿಕ್ಕೇ ಆಗುವುದಿಲ್ಲ, ನಿಜವನ್ನೇ ಬರೆದರೂ ನಿಜ ಆಗುವುದಿಲ್ಲ ಅಂದೆ. ಅದೆಲ್ಲ ನಂಗೊತ್ತಿಲ್ಲ, ನನ್ನ ಹೆಸರು ಹಾಕಿದರೆ ನೋಡು ಅಂದು ಕಾಲ ಮೇಲೆ ಕಾಲು ಹಾಕಿ, ಕೈಗಳನ್ನು ಅಗಲಿಸಿ ಸೋಫಾದ ಎರಡೂ ಬದಿಗೆ ಹರವಿ ಹಿಂದೆ ಒರಗಿ ಕೂತ. ಅರರೇ ಅನ್ನಿಸಿ ಯಾಕೋ ಅಂದೆ. ಅದಕ್ಕೇ ಅಂದ. ನಾನು ಏನು ಬರೀಬೇಕು ಅಂತ ನಾನೇ ನಿರ್ಧರಿಸ್ತೀನಿ ಅಂದೆ. ಹ್ಹ ಅಂದು ಸಿನೇಮಾ ಸ್ಟೈಲಿನಲ್ಲಿ ಕಣ್ಣು ಕಿರಿದುಗೊಳಿಸಿ ನನ್ನತ್ತ ನೋಡಿದ. ನಿನ್ನ ಬಗ್ಗೆ ಬರೆದ್ರೂ ಅದು ನೀನು ಅಂತ ಗೊತ್ತಾಗದ ಹಾಗೆ ಇರತ್ತೆ ಅಂದೆ. ಅದೆಲ್ಲ ನಂಗೊತ್ತಿಲ್ಲ ಅಂದ. ಹೌ ಡಸ್ ಇಟ್ ಮ್ಯಾಟರ್, ಹಾಳಾಗಿ ಹೋಗಲಿ, ಇವನ ಕೈಯಿಂದ ತಪ್ಪಿಸಿಕೊಂಡ ನಂತರ ಬೇಕಾದ್ದು ಬರೀಬಹುದು ಅನಿಸಿ, ಹೂಂ ಎಂದು ಹೇಳಿ ಹೊರಟುಬಿಡುವಾ ಅಂತಲೂ ಅನಿಸಿತು. ಆದರೆ ಅವನ ಧ್ವನಿಯಲ್ಲಿ ಏನೋ ಆಜ್ಞೆ ಇದ್ದ ಹಾಗೆ ಅನಿಸಿ ನನ್ನ ಅಹಂ ಜಾಗ್ರತವಾಯಿತು. ಡೆಮಾಕ್ರಸಿ, ಸಲ್ಮಾನ್ ರಶ್ದಿ ಅಂತೆಲ್ಲ ಮಾತಾಡಲು ನೋಡಿದೆ. ಬೇಡ ಅಂದರೆ ಬೇಡ ಭೋಸಡೀಕೆ ಅಂದ. ನನಗೂ ಸಿಟ್ಟು ಬಂತು. ನೀನ್ಯಾವನೋ ಹೇಳೋದಿಕ್ಕೆ ಅಂದೆ. ಅವನು ಸಿನೇಮಾಗಳಲ್ಲಿ ಮಾಡುವ ಹಾಗೆ ಎದುರಿನ ಗ್ಲಾಸನ್ನು ಎತ್ತಿ ಬೀಸಿ ನೆಲಕ್ಕೆ ಅಪ್ಪಳಿಸಿದ. ಅದು ಫಳ್ಳೆಂದು ಒಡೆದಾಗ ನಾನು ಅಸ್ವಸ್ಥನಾದೆ. ನನ್ನ ಕೈಯಲ್ಲಿ ಸಾಯಬೇಡ ಅಂದು ಉದ್ದನೆಯ ಚಾಕು ತೆಗೆದು ಝಳಪಿಸಿದ. ಅದನ್ನೇ ಲಾಂಗು ಅಂತಾರೇನೋ. ಸಿನೇಮಾದಲ್ಲಿ ತೋರಿಸುವ ಹಾಗೆ ಅದು ಹೊಳೆಹೊಳೆಯುತ್ತಿರಲಿಲ್ಲ. ಹಾಗಾಗಿ ನಾನು ತುಸು ನಿಶ್ಚಿಂತನಾದೆ. ಅದರ ಅಲಗು ಮಾತ್ರ ಹರಿತವಾಗಿದೆ ಅನಿಸಿತು. ಉಳಿದ ಕಡೆ ಕಪ್ಪುಕೆಂಪಾಗಿ ಮಬ್ಬುಮಬ್ಬಾಗಿತ್ತು. ಏನೇ ಆದರೂ ಅವನು ಆ ಹತ್ಯಾರದಿಂದ ನನ್ನನ್ನು ಇರಿಯಲಾರ ಎಂದು ನನಗೆ ಖಾತ್ರಿಯಿತ್ತು. ನಮ್ಮ ನಡುವೆ ನಡೆದ ಯಾವ ಜಟಾಪಟಿಯೂ ಕೊಲೆಗೆ ಅರ್ಹವಾಗಿಲ್ಲ ಅಂದುಕೊಂಡೆ. ಅಥವಾ ಅಂಥ ಸಿನೇಮಾಗಳನ್ನು ನಾನು ನೋಡಿಲ್ಲದೇ ಇದ್ದರೆ? ಆಗ ನನ್ನ ಈ ನಿಶ್ಚಿಂತೆ ಅರ್ಥವಿಲ್ಲದ್ದು ಎಂದು ಮರುಕ್ಷಣವೇ ಅನಿಸಿತು.
ಅವನು ನಿಜವಾಗಿಯೂ ಕೋಳಿ ಹೌದೋ ಅಲ್ಲವೋ ಎಂಬ ಅನುಮಾನ ಬಂತು. ಆವತ್ತು ನನ್ನ ಮಾತುಗಳನ್ನು ಕೇಳಿಸಿಕೊಂಡ ಯಾರಾದರೂ ನನ್ನನ್ನು ಮುಗಿಸಲು ಇವನ ಹೆಸರು ಹೇಳಿಕೊಂಡು ಈ ರೀತಿ ಆಟ ಆಡುತ್ತಿದ್ದಾರೆಯೇ ಎಂಬ ಸಂಶಯ ಬಂದು ಯಾರು ನೀನು ಅಂದೆ. ಕೋಳಿ ಅಂದ. ಇಲ್ಲಿ ಕೋಳಿ ಕೇಳಿಯೇ ಮಸಾಲೆ ಎಂದು ಅವನು ಅಂದದ್ದು ಕೇಳಿಸಿತು ಮತ್ತು ಆ ಲಾಂಗು ನನ್ನತ್ತ ನುಗ್ಗಿ ಬಂದದ್ದು ಕಾಣಿಸಿತು.
++

‍ಲೇಖಕರು G

5 January, 2013

3 Comments

  1. shanthi k.a.

    aamele? innoo odta irabeku annistaa ide…

  2. s manjunath

    akasmattagi odide. estu saralavagi, saleesagi estu gahanavada vishaya heliddare-eradane bhagadalli fantasy balsikondu. aa fantasy element illadene helalikkagiddare innoo chennagirtittu.democracy, rushdie ee eradu padada badalu `lekhakan swatantrya’ antiddare sakittu anisutte.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading