ವಿಲ್ಸನ್​ಗಾರ್ಡನ್​ನಲ್ಲಿ ಮರ್ಲಿನ್​ ಮನ್ರೋ ಸಿಕ್ಕಿದ್ದರೆ ಒಟ್ಟಿಗೆ ಊಟ ಮಾಡಬಹುದಿತ್ತು ಎನಿಸಿತು. .

ಸಂದೀಪ್​ ಈಶಾನ್ಯ

ಕಳೆದ ಎರಡು ದಿನಗಳಿಂದ ಅವಳು ಬಿಡದೇ ಕಾಡುತ್ತಿದ್ದಾಳೆ. ಆಕೆಯನ್ನು ನಾನು ಮೊದಲು ನೋಡಿದ್ದು ಮೈಸೂರಿನ ಭೀಮ್ಸ್​​ ಕಾಲೇಜಿನ ಹೂವಿನ ತೋಟದ ಮಗ್ಗುಲಿನ ಅಂಗಳಕ್ಕಿದ್ದ ಸಿನೆಮಾ ಹಾಲ್​ನಲ್ಲಿ. ಅವಳ ಹೆಸರಿನ ಪರಿಚಯವಿದ್ದ ನಾನು ಅವಳನ್ನ ಆ ರೀತಿಯಲ್ಲಿ ಎಂದೂ ಎದುರುಗೊಂಡಿರಲಿಲ್ಲ. ತೆರೆದ ಕಣ್ಣುಗಳಿಂದ ಎಲ್ಲರೂ ಅವಳನ್ನೇ ದಿಟ್ಟಿಸಿ ನೋಡುವಾಗ ನಾನು ಅವಳ ಸ್ನಿಗ್ದ ಸೌಂದರ್ಯಕ್ಕೆ ಪಿಳಿಪಿಳಿ ಕಣ್ಣರಳಿಸುತ್ತ ಕೂತು ಬಿಟ್ಟಿದ್ದೆ. ಬಹುಶಃ ನನಗೆ ಮೊದಲ ಧ್ಯಾನದ ಅನುಭವವಾಗಿದ್ದೂ ಆಗಲೇ. ಅದಕ್ಕೆ ಅದೊಂದು ಧ್ಯಾನಸ್ಥ ಸ್ಥಿತಿ ನನಗೆ.

ಅವಳ ಈಗಲೂ ಒಳಗೆ ಅದೇ ಧಾಟಿಯಲ್ಲಿ ಉಳಿದುಬಿಟ್ಟಿದ್ದಾಳೆ. ಪುಟಾಣಿ ಮಕ್ಕಳು ಚಿಟ್ಟೆಯೊಂದು ಎರಡೇ ಬೆರಳಿನಲ್ಲಿ ಹಿಡಿದಿಟ್ಟುಕೊಂಡ ಚಿಟ್ಟೆಯ ರೆಕ್ಕೆಯ ಬಣ್ಣಗಳು ಕೈಗಂಟಿಬಿಡುವ ರೀತಿಯದು. ಆ ಚಿಟ್ಟೆಯ ರೆಕ್ಕೆಯ ಬಣ್ಣಗಳು ಈಗಲೂ ಹಾಗೇ ಉಳಿದುಹೋಗಿದೆ.

ಮೈಸೂರಿನಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದ ಕೆಲವೇ ಕೆಲವು ಸಿನೆಮಾಗಳಲ್ಲಿ ಇದೂ ಒಂದು. ಆ ವರ್ಷ ಐವತ್ತಕ್ಕೂ ಹೆಚ್ಚು ಸಿನೆಮಾಗಳನ್ನ ನೋಡಿದ್ದ ನನಗೆ ಒಳಗೆ ಇಳಿದ್ದದ್ದು ಮಾತ್ರ ಹಿಂದಿಯ “ಖಾಲಿ ಸಲ್ವಾರ್​” ಮತ್ತು ಲಾಸ್​ ಏಂಜಲೀಸ್​ನ ಈ ಶಾಪಗ್ರಸ್ಥೆಯ ಸಿನೆಮಾ. . .ಆವತ್ತು ನಾನು “ನೋರ್ಮಾ ಜೇನ್ ಮಾರ್ಟೆನ್ಸನ್​”​ ಎನ್ನುವು ನಕ್ಷತ್ರದ “ಮರ್ಲಿನ್​ ಮನ್ರೋ” ಹೆಸರಿನಲ್ಲಿ ಎದುರುಗೊಂಡೆ. ಅವಳು ಒಂದಿಷ್ಟೇ ದೂರಕ್ಕಿದ್ದ ಪರದೆಯೊಳಗೆ ಅಡಗಿಕೊಂಡವಳಂತೆ ಕಾಣುತ್ತಿದ್ದಳು.

ಮರ್ಲಿನ್​ ನನಗೆ ಈಗಲೂ ಕಾಡುವುದು ಅವಳ ಪುಟಿಯುವ ಜೀವ ಚೈತನ್ಯಕ್ಕೆ.

ಮರ್ಲಿನ್​ಗಳನ್ನ ಓರ್ವ ವಿಖ್ಯಾತ ನಟಿಯಾಗೆ ನೋಡುವ ಪ್ರಯತ್ನ ಮಾಡಿದಾಗೆಲ್ಲ, ನನಗೆ ಅಷ್ಟೇನೂ ಆಶ್ಚರ್ಯವಾಗುವುದಿಲ್ಲ. ಅದಕ್ಕೆ ಕಾರಣ ಇಷ್ಟೇ ಅವಳಷ್ಟೇ ಪ್ರಖ್ಯಾತವಾಗಿದ್ದ ಅದೆಷ್ಟೋ ಹಾಲಿವುಡ್​ನ ಸಿನೆಮಾ ನಾಯಕಿಯರಿದ್ದಾರೆ. ಅದೇ ಮರ್ಲಿನ್​ಳನ್ನ ಕೇವಲ ಓರ್ವ ಹೆಣ್ಣಾಗಿಯಷ್ಟೇ ನೋಡುವ ಪ್ರಯತ್ನ ಮಾಡಿದಾಗೆಲ್ಲವೂ ಸೋತುಬಿದ್ದಿದ್ದೇನೆ. ಅವಳು ನಡಿಗೆಯಿಂದಲೇ ಕ್ರಮಿಸಿದ ಬದುಕಿನ ಹಾದಿಯ ದೂರವನ್ನ ನಾವು ಉಸಿರು ಬಿಗಿಯಿಡಿದು ಓಡಿಯೂ ಮುಟ್ಟಲಾಗುವುದಿಲ್ಲ ಎಂದು ಚಿಂತಿತನಾಗಿದ್ದೇನೆ.

ಮರ್ಲಿನ್​ ಲಾಸ್​ ಏಂಜಲೀಸ್​ನ ಕೊಳಗೇರಿಯಂತ ಸಣ್ಣ ಬಡಾವಣೆಯಲ್ಲಿನ ಹುಡುಗಿ. ದುರುಳ ಅಪ್ಪನ ಮೇಲೆ ಸಿಟ್ಟಾಗುತ್ತಿದ್ದ ಈ ಹುಡುಗಿ ಅಮ್ಮನ ಹೆಗಲಿಗಷ್ಟೇ ಹಾತೋರೆದು ಜೋತು ಬೀಳುತ್ತಿದ್ದವಳು. ಅಪ್ಪನಿಂದ ಇನ್ನೂ ಬದುಕು ಸಾಗುವುದಿಲ್ಲ ಎಂದು ತನ್ನ ಅರಿವಿಗೆ ತಂದು ಕೊಂಡ ಎಂಟರ ಪ್ರಾಯದ ನೋರ್ಮಾ ಸೀದಾ ಲಾಸ್​ ಏಂಜಲೀಸ್​ನಲ್ಲಿದ್ದ “ಫೋಸ್ಟರ್ ಕೇರ್” ಅನಾಥಶ್ರಮದ ತೆಕ್ಕೆಗೆ ಬಿದ್ದುಬಿಡುತ್ತಾಳೆ. ತನ್ನ ಬಹುತೇಕ ಹುಡುಗಾಟಿಕೆಯ ದಿನಗಳನ್ನ ಪುರಾತನ ಪಳೆಯುಳಿಕೆಯಂತ ಕಟ್ಟಡದೊಳಗೆ ಉಸಿರುಗಟ್ಟಿಸಿಕೊಳ್ಳುತ್ತ, ಜತೆಗೆ ರೇಡಿಯೋಪ್ಲೇನ್​​ ಫ್ಯಾಕ್ಟರಿಯಲ್ಲಿ ಸವೆಯುತ್ತಲೇ ಕಳೆದುಬಿಡುತ್ತಾಳೆ.

ಒಂಧರ್ಥಕ್ಕೆ ರೇಡಿಯೋಪ್ಲೇನ್​ ಫ್ಯಾಕ್ಟರಿಯಲ್ಲಿ ಐದು ವರ್ಷ ಪೂರೈಸುವಷ್ಟರಲ್ಲಿ ಮರ್ಲಿನ್​ ಅದೊಂದು ಬಗೆಯ ಜೀವನಶೈಲಿಗೆ ಒಗ್ಗಿಹೋಗಿದ್ದವಳು. ಬೆಳಿಗ್ಗೆ ಸಣ್ಣ ತಿಂಡಿ, ಅಲ್ಲಲ್ಲಿ ಹರಿದ ಜಂಗು ತೊಡುಗೆಗಳಿಂದ ತನ್ನನ್ನು ತಾನು ಕಾಪಿಟ್ಟುಕೊಂಡ ಸೂರ್ಯ ಪಶ್ಚಿಮಕ್ಕೆ ಸರಿದಂತೆ ಇವಳೂ ಕೂಡ ಆಶ್ರಮ ಸೇರಿಬಿಡುತ್ತಿದ್ದಳು. ಈ ದಿನಚರಿಯನ್ನ ಅನುಮತಿಯನ್ನೇ ಪಡೆಯದೇ ಬದಲಿಸಿದ್ದು ಅಮೆರಿಕಾದ ಪ್ರಖ್ಯಾತ ಸ್ಟಿಲ್​ ಫೋಟೋಗ್ರಾಫರ್​ ಡೇವಿಡ್​ ಕಾನೋವರ್​. ಲಾಸ್​ ಏಂಜಲೀಸ್​ನ ಪುಂಡರಿಗೆ ಕೇವಲ ಹುಡುಗಿಯಾಗಿಯಷ್ಟೇ ಕಾಣುತ್ತಿದ್ದ ಮರ್ಲಿನ್​ ಡೇವಿಡ್​ಗೆ ಅದೊಂದು ಅಪರೂಪದ ಕಾನನದ ಹೂವಿನಂತೆ ಕಂಡುಬಿಟ್ಟಿದ್ದಳು.

ಅನಿವಾರ್ಯದಿಂದ ತೊಡುತ್ತಿದ್ದ ಚಿಂದಿ ಬಟ್ಟೆಯನ್ನ ಅಗತ್ಯಕ್ಕಾಗಿ ತೊಡಿಸಿ ಅವಳನ್ನ ಮೊದಲು ರ್ಯಾಂಪ್​ ಮೇಲೆ ನಿಲ್ಲಿಸಿದವನು ಇದೇ ಡೇವಿಡ್​​. ದಿನದ ಊಟ, ಕೆಲಸಕ್ಕಷ್ಟೇ ಬದುಕನ್ನ ಸೀಮಿತಗೊಳಿಸಿಕೊಂಡಿದ್ದ ಆ ಪುಟಾಣಿ ಕೊಳಗೇರಿಯ ಹುಡುಗಿ ಒಂದು ಅವತಾರ ತಾಳುವುದಕ್ಕೆ ಡೇವಿಡ್​ ತನ್ನ ಕ್ಯಾಮಾರದಿಂದ ಹೊರಡಿಸಿದ ಕ್ಲಿಕ್​ ಎನ್ನುವ ಸಣ್ಣ ಸದ್ದು ಸಾಕಾಗಿಹೋಗಿತ್ತು. ಅವಳ ಹದಿನಾರು ವರ್ಷ ಎಲ್ಲರೊಂದಿಗೂ ಬಾಯಿ ಹರಿದುಕೊಳ್ಳುವಂತೆ ಕಿರುಚಿಯೂ ಗಳಿಸಲಾಗದ್ದನ್ನ ಡೇವಿಡ್​ ಕ್ಯಾಮರಾದ ಸಣ್ಣ ಸದ್ದು ಸಾಧಿಸಿಬಿಟ್ಟಿತ್ತು.

ಓದು, ಅನುಭವ, ಸಹಪಾಠಿಗಳು, ಸಂಬಂಧಿಗಳು ಏನೊಂದನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳದೆಯೂ ಅದೊಂದು ಬಗೆಯ ಠೀವಿಯಿಂದ ಪ್ರತಿಷ್ಠಿತ ಹೊಟೇಲ್​ನ ರ್ಯಾಂಪ್​ ಗೇಜ್​ ಮೇಲೆ ಬಂದು ನಿಂತುಬಿಟ್ಟಿದ್ದಳು. ಭಯವಾಗಿ ಕಣ್ಣರಳಿಸಿ ಹುಡುಕಿದರೆ ಡೇವಿಡ್ ಮಾತ್ರ ಅಲ್ಲೆಲ್ಲೋ ಇವಳ ಬಗ್ಗೆ ಪ್ರಚಾರ ಮಾಡುತ್ತ ಕುತ್ತಿಗೆಗೆ ಕ್ಯಾಮಾರ ಇಳಿಬಿಟ್ಟು ಜನರ ನಡುವಲ್ಲೇ ಕಳೆದುಹೋಗಿದ್ದ. ಮೊದಲ ರ್ಯಾಂಪ್​ ವಾಕ್​ ಮಾಡಿದ ದಿನವೇ ಕೊಳಗೇರಿಯ ಹುಡುಗಿ ನೋರ್ಮಾ ಜೇನ್​ ರೂಪಾಂತರಗೊಂಡಿದ್ದು ಮರ್ಲಿನ್​ ಮನ್ರೋ ಪೋಷಾಕಿಗೆ. ಅದು ಕಂಬಳಿ ಹುಳು ಚಿಟ್ಟೆಯಾಗುವ ಬಗೆಯದು. ಕಂಬಳಿ ಹುಳುವಿನ ಬದುಕು ಭಯಹುಟ್ಟಿಸುತ್ತದೆ, ಚಿಟ್ಟೆ ಯಾವತ್ತಿಗೂ ಮೋಹಕವೇ!! ಜಗತ್ತು ಬೇಡುವುದು ಅದನ್ನೇ. .

ಮಾಡೆಲಿಂಗ್​ನಿಂದ ಸಿನೆಮಾಗೆ ಬರುವುದು ಮರ್ಲಿನ್​ ತ್ರಾಸಾಗಲಿಲ್ಲ. ಅವಳು ಒಪ್ಪಿಗೆಯ ಅಧಿಕೃತ ಮುದ್ರೆಯನ್ನು ಒತ್ತುವ ಮೊದಲೇ ಇವಳನ್ನೇ ಮುಂದಾಗಿಸಿಕೊಂಡು ಹಾಲಿವುಡ್​ನ ಅದೆಷ್ಟೋ ನಿದೇರ್ಶಕರ ಸ್ಕ್ರಿಪ್ಟ್​​ಗಳಲ್ಲಿ ಇವಳ ಹೆಸರು ಸೇರಿಹೋಗಿತ್ತು. ಅವಳಿಗೆ ಉಳಿದದ್ದು ಕೇವಲ ಆಯ್ಕೆಯ ಅವಕಾಶಗಳಷ್ಟೇ. . ಆಗಷ್ಟೇ ಟಿಸಿಲೊಡೆಯುವ ಹೂವಿಗೆ ಅನುಮತಿ ಅನುಗ್ರಹವಿಲ್ಲದೇ ಮುತ್ತಿಗೆಯಾಗುವ ಜೇನುಗಳಂತೆ ಎಲ್ಲಾ ಬಗೆಯವರೂ ಮರ್ಲಿನ್​ಳನ್ನ ಆವರಿಸಿಕೊಂಡ ಅವಧಿಯದು. ಬರವಣಿಗೆಯ ಸಾಲಿನೊಳಗೇ ಮುಳುಗಿದ್ದ ಮಾತುಗಳನ್ನ ಪರದೆಗೂ ತಂದವಳು ಮರ್ಲಿನ್​. ಹಾಲಿವುಡ್​ ಸಿನೆಮಾಗಳು ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರತಿನಿಧಿಸಲು ಮರ್ಲಿನ್​ ಇರಲೇಬೇಕು ಎನ್ನುವಂತ ಸ್ಥಿತಿಯನ್ನ ಸೃಷ್ಠಿಸಿದವಳು ಮರ್ಲಿನ್​.

ಹಾಲಿವುಡ್​ ಸೆಕ್ಸಿ ಐಕಾನ್​ ಎನಿಸಿಕೊಂಡ ಮರ್ಲಿನ್​ ಸಿನೆಮಾಗಳು ಚಿತ್ರಮಂದಿರದಲ್ಲಿ ಹೌಸ್​ಫುಲ್​ ಭೋರ್ಡ್​​ ಸಹಾಯದಿಂದಲೇ ಚಲಿಸುತ್ತಿರುವಾಗಲೇ ಮರ್ಲಿನ್​ ಮನೆಯೊಳಗೆ ಒಬ್ಬಳೆ ಉಳಿದಹೋಗಿಬಿಟ್ಟಿರುತ್ತಾಳೆ. ತನ್ನ ಹದಿನಾರನೇ ವಯಸ್ಸಿಗೆ ಡೋಹಾರ್ಟಿ ಎನ್ನುವ ಸಾಮಾನ್ಯ ನೌಕರನನ್ನ ಮದುವೆಯಾಗಿದ್ದ ಮರ್ಲಿನ್​ ಆರಂಭದ ದಿನಗಳಿಂದಲೇ ಅವನೊಂದಿಗೆ ಕೊಂಡಿಯನ್ನ ಕಳಚಿಬಿಟ್ಟುಕೊಂಡುಬಿಟ್ಟಿರುತ್ತಾಳೆ.

ಅವಳು ಅತ್ಯಂತ ಪ್ರಸಿದ್ದ, ಆದರೂ ತೀರಾ ಒಂಟಿ. ಆ ಕ್ಷಣಕ್ಕೆ ಅವಳೊಂದಿಗೆ ಘಟಿಸಬೇಕಾಗಿದ್ದ ಎಲ್ಲವೂ ಅಕ್ಷರಶಃ ವ್ಯಾವಹಾರಿಕ.
ವಿಚ್ಛೇಧನದ ನಂತರ ಮರ್ಲಿನ್​ ಲಾಸ್​ ಏಂಜಲೀಸ್​ನಿಂದ ಕ್ಯಾಲಿಫೋರ್ನಿಯಾಗೆ ವಲಸೆಗೆ ಹಾತೋರೆಯುವ ಹಕ್ಕಿಯಂತೆ ಬಂದುಬಿಡುತ್ತಾಳೆ. ಈಗ ಮರ್ಲಿನ್​ ಸಂರ್ಪೂಣವಾಗಿ ಬದಲಾವಣೆಯ ಹೊಸ್ತಿಲಿನಲ್ಲಿ ನಿಂತು ತನ್ನ ಅಗತ್ಯಕ್ಕಾಗಿ ಬಾಗಿಲು ಬಡಿಯುತ್ತ ಎದುರು ನೋಡುವುದನ್ನೇ ಪ್ರವೃತ್ತಿಯಾಗಿಸಿಕೊಂಡುಬಿಡುತ್ತಾಳೆ. ಅವಳ ಆವತ್ತಿನ ಅಗತ್ಯಗಳು ಕೇವಲ ಅವಳಿಗಷ್ಟೇ ಕೇಳುವಂತಿರುತ್ತದೆ. ಅದೊಂದು ಯಕ್ಷಣಿಯ ಒಳದನಿ.

ಈಗ ಎಲ್ಲವೂ ಬದಲಾಗಿದೆ. ಮನ್ರೋ ದಿನದ ಬಹುತೇಕ ಅವಧಿಯನ್ನು ಹಾಸಿಗೆಯ ಮೇಲೆ ಕಳೆಯುತ್ತಿದ್ದಾಳೆ. ಚಿತ್ರಿಕರಣದ ಸಮಯಕ್ಕೂ ಬರುವುದೇ ಇಲ್ಲ, ಬಹುತೇಕ ಸಮಯ ಕುಡಿದಿರುತ್ತಾಳೆ. ಮನೆಯಲ್ಲಿ ಒಂಟಿತನ ನಿವಾರಣೆಗೆ ಬಾರ್ಬಿಯುಟರೇಟಸ್​ ಡ್ರಸ್​ನ ಮೊರೆಹೋಗುವುದು ಇದ್ದೇ ಇದೆ. ಇದಷ್ಟೇ ಸಾಕಾಗಿತ್ತು ಅವಳ ಏಳಿಗೆಯನ್ನ ವೇಗದ ಬದುಕಿಗೆ ಕಾಲು ಕೊಟ್ಟು ಬೀಳಿಸಲು. ಡ್ರಗ್ಸ್​ಗೆ ಮರ್ಲಿನ್​ ಜೋತು ಬಿದ್ದಷ್ಟು ಸಿನೆಮಾಗಳಿಗೆ ಜೋತು ಬೀಳುವುದೇ ಇಲ್ಲಾ, ಸಿನೆಮಾಗಳ ಅವಕಾಶಗಳ ಕದಗಳು ನಿಧಾನವಾಗಿ ಮುಚ್ಚಿಕೊಳ್ಳುತ್ತವೆ. ಮರ್ಲಿನ್​ ಇದ್ದ ಹಣವಷ್ಟೇ ಸಾಕು ಎನ್ನುವಂತೆ ಕ್ಯಾಲಿಫೋರ್ನಿಯದಿಂದ ಹೊರಗುಳಿಯುವ ಪ್ರಯತ್ನವನ್ನೂ ಮಾಡುತ್ತಾಳೆ, ಅದರಲ್ಲೂ ಸೋಲುತ್ತಾಳೆ.

ಖಿನ್ನತೆ ಅವಳನ್ನ ನಿಧಾನವಾಗಿ ಆವರಿಸಿಕೊಂಡುಬಿಡುತ್ತದೆ. ಒಂಟಿತನ ಎನ್ನುವುದು ಸಾಧ್ಯವಾದಷ್ಟು ಅಣುಕಿಸುತ್ತದೆ. ಕ್ರಮೇಣವಾಗಿ ಸೋಲಿಸುತ್ತದೆ. ಒಪ್ಪಿಕೊಂಡ ಸಿನೆಮಾಗಳು ಪೂರ್ಣವಾಗದೇ ಹೋದಾಗ ಕೋರ್ಟ್​ ಮೆಟ್ಟಿಲ್ಲನ್ನೂ ಏರಿಬರುತ್ತಾಳೆ. ಅಲ್ಲಿಯೂ ಸೋಲು ಅವಳನ್ನ ಕಾದುಕೂತಿರುತ್ತದೆ. ಕಡೆಯ ಪ್ರಯತ್ನವಾಗಿ ನಿರ್ಮಿಸಿದ ಬ್ಲಾಕ್​ ಕಾಮಿಡಿ ಸಿನೆಮಾ “ಬಸ್ ಸ್ಟಾಪ್” “ಲೇಟ್ಸ್ ಮೇಕ್ ಲವ್” ಮತ್ತು “ದಿ ಮಿಸ್‍ಫಿಟ್ಸ್” ಸಿನೆಮಾಗಳು ಗಿಟ್ಟುವುದಿಲ್ಲ. ಅದು ಅವಳ ಅತೀ ವೇಗ ಯಶಸ್ಸಿನಂತೆಯೇ ಸೋಲಿನ ಕಡೆಗೆ ಮೆಟ್ಟಿಲಿಗೆ ತಂದು ನಿಲ್ಲಿಸಿದ ಕ್ಷಣ. . ​

ವಿಶ್ವದ ಖ್ಯಾತ ಪತ್ರಿಕೆಗಳಲ್ಲಿ ಮುಖಪುಟವಾಗುತ್ತಿದ್ದ ಮರ್ಲಿನ್​ ಕಡೆಯ ದಿನಗಳಲ್ಲಿ ಡ್ರಗ್ಸ್​ಗಷ್ಟೇ ಒಲಿದುಬಿಟ್ಟಿದ್ದಳು. 1961ರಲ್ಲಿ ಸಿನೆಮಾಗಳಿಂದ ದೂರವೇ ಉಳಿದುಹೋದ ಮರ್ಲಿನ್​ ಹೌಸ್​ ಕೀಪರ್​ ಯೂನೈಸ್​ ಮುರ್ರೆಯೊಂದಿಗೆ ಮಾತ್ರ ಮಾತನಾಡುತ್ತಿರುತ್ತಾಳೆ. ಉಳಿದಂತೆ ಅವಳಿಗೆ ಅವಳು ಮೈಗೂಡಿಸಿಕೊಂಡಿದ್ದ ಹವ್ಯಾಸಗಳು ಇದ್ದೇ ಇತ್ತು. ಹೊರಗೆ ಕಂಡಿದ್ದು ಅಸಲಿಯತ್ತಾಗಿ ಉಳಿದಿರಲೇ ಇಲ್ಲಾ, ಅವಳ ಅಂತರಾಳದಲ್ಲಿ ಉಳಿದುಹೋಗಿದ್ದ ಕವಿತೆಯಂತ ಮಾತುಗಳು ಮಾತ್ರವೇ ಮರ್ಲಿನ್​ ಮನ್ರೋದಾಗಿತ್ತು. ಅದಕ್ಕೆ ಅವಳು ಯಕ್ಷಿಣಿ. .
ಮರ್ಲಿನ್​ ಕಾಡುವುದಕ್ಕೆ ಕಾರಣಗಳಿವೆ. . .

ಯಾವತ್ತಿಗೂ ಮರ್ಲಿನ್​ ಅಪ್ರಮಾಣಿಕವಾಗಿ ಬದುಕಿದವಳಲ್ಲ. ತನ್ನ ಸೋಲುಗಳ ಕುರಿತು ಮಾತನಾಡಿದವಳಲ್ಲ. ತನ್ನ ಸಂಕಟಗಳನ್ನ ಮುಚ್ಚಿಟ್ಟುಕೊಳ್ಳುವುದಕ್ಕೆ ಯತ್ನಿಸಲಿಲ್ಲ. ಎಂಟನೇ ವಯಸ್ಸಿಗೆ ಮನೆಯಿಂದ ಹೊರಗೆ ಬಂದ ಲಾಸ್​ ಏಂಜಲೀಸ್​ನ ಕೊಳಗೇರಿಯ ಹುಡಗಿ ತನ್ನ 11ನೇ ವಯಸ್ಸಿಗೆ ಅತ್ಯಾಚಾರವನ್ನೂ ಅನುಭವಿಸಿದವಳು. 16ನೇ ವಯಸ್ಸಿಗೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಂಬಂಧವನ್ನ ಕಡಿದುಕೊಂಡವಳು. ನಂತರದಲ್ಲಿ “ಜೋ ಡಿಮಾಗಿಯೋ” ಜತೆಯ ದಾಂಪತ್ಯವನ್ನು ಉಳಿಸಿಕೊಳ್ಳಲಾರದೇ ಮತ್ತೆ ಸೋತು ಹೋದವಳು. ಮರ್ಲಿನ್​ಳ ಅಸಲಿ ಬದುಕಿನಲ್ಲಿ ಅಮೆರಿಕಾದಖ್ಯಾತ ಲೇಖಕ ಆರ್ಥರ್​ ಮಿಲ್ಲರ್​ ಕೆಲವು ದಿನಗಳ ಕಾಲ ಪತಿಯ ಪಾತ್ರ ನಿರ್ವಹಿಸಿದವನೇ. ಇನ್ನೂ ಅಮೆರಿಕಾದ ಅಧ್ಯಕ್ಷರಾಗಿದ್ದ ಜಾನ್​ ಎಫ್​ ಕೆನಡಿಯೂ ಕೂಡ ಕೆಲ ಕಾಲ ಮರ್ಲಿನ್​ ಗೆಳೆಯನಾಗಿದ್ದವನೇ.

ಮರ್ಲಿನ್​ನಿಂದ ಆವತ್ತಿನ ಹಾಲಿವುಡ್​ ನಿರ್ಮಾಪಕರು ಬಾಕ್ಸ್​ ಆಫೀಸ್​ನಲ್ಲಿ 200 ಮಿಲಿಯನ್​ ಡಾಲರ್​ನಷ್ಟು ಹಣ ಗಳಿಸಿದ್ದಾರೆ ಎನ್ನುವುದನ್ನ ಅಮೆರಿಕಾದ ಪತ್ರಿಕೆಗಳು ವರದಿ ಮಾಡಿವೆ. ಕೊಳಗೇರಿಯ ಸಣ್ಣ ಬಿಡಾರದಲ್ಲಿ ಹುಟ್ಟಿದ ಮನ್ರೋ ತನ್ನ ಪ್ರತಿಭೆಯಿಂದಲೇ ಐಷಾರಾಮಿ ಜೀವನವನ್ನೂ ಕಂಡವಳು. ಆದರೆ ಕಡೆಯ ಹಂತಗಳಲ್ಲಿ ಒಬ್ಬಳೇ ಬದುಕಿದ್ದ ಮನ್ರೋ ಉಳಿದ್ದದ್ದು ಬಾಡಿಗೆ ಮನೆಯಲ್ಲಿ.

ಆಗಷ್ಟ್​ 5 1962ರ ಒಂದು ಬೆಳಿಗ್ಗೆ ಮರ್ಲಿನ್​ ಮನ್ರೋ ಯಾರಿಗೂ ಸುಳಿವನ್ನೇ ಕೊಡದೇ ಹೊರಟುಬಿಟ್ಟಿದ್ದಳು. ಕಡೆಯದಾಗಿ ಹಾಸಿಗೆಯ ಮೇಲೆ ಬಟ್ಟಲ ತುಂಬ ಮಾತ್ರೆ ಚಲ್ಲಿಕೊಂಡಿದ್ದರೆ, ಒಂದಷ್ಟು ದೂರಕ್ಕೆ ಐನ್​ಸ್ಟಿನ್​ The gift of fantasy has meant more to me than my talent for absorbing positive knowledge. Imagination is more important than knowledge ಎಂದು ಬರೆದು ಸಹಿ ಹಾಕಿದ್ದ ಕಾಗದವಿತ್ತು. ಮತ್ತಷ್ಟು ದೂರಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್‍ಗಳು ಮುಖ ಮಾಡಿ ನಿಂತಿತ್ತು. ಇಲ್ಲಿ ಮರ್ಲಿನ್​ ಯಾರ ಹಂಗೂ ಕಡೆ ಕ್ಷಣದಲ್ಲೂ ಇಲ್ಲದೇ ಒಂಟಿಯಾಗಿಯೇ ಉಳಿದುಹೋಗಿದ್ದಳು.

ತೀರಾ ಕಾಡುವ ಮರ್ಲಿನ್​ ಸಾಯುವ ಕೆಲವೇ ದಿನಗಳ ಹಿಂದಷ್ಟೇ ಅಮೆರಿಕಾದ ಲೈಫ್​ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ ಕಡೆ ಮಾತಿದು. . .

ಮರ್ಲಿನ್​ ಮನ್ರೋ ಎಲ್ಲವನ್ನೂ ಸಂಪಾದಿಸಿದ್ದಾಳೆ, ಪ್ರೀತಿಯೊಂದನ್ನು ಹೊರತು. ನಾನು ಈಗಲೂ ಕೇಳಿಕೊಳ್ಳುವುದು ಹೊಸ ಸಿನೆಮಾಗಳ ಅವಕಾಶಗಳನ್ನಲ್ಲ. ಯಾರಾದರೂ ಮುಖ ತೀಡಿ ಒಮ್ಮೆ ಹೆಗಲಿಗೆ ಒರಗಿಸಿಕೊಂಡರೆ ಸಾಕು. ಇಲ್ಲಿ ಎಲ್ಲವೂ ಅಗ್ಗ, ಪ್ರಾಮಾಣಿಕ ಪ್ರೀತಿಯೊಂದರ ಹೊರತಾಗಿ. . .

ಈ ಕಾರಣಕ್ಕೆ ಮನ್ರೋ ಪದೇ ಪದೇ ಕಾಡುತ್ತಾಳೆ. . ಇದೆಲ್ಲವನ್ನೂ ಬರೆಯುವ ಹೊತ್ತಿಗೆ ಇವಳು ವಿಲ್ಸನ್​ಗಾರ್ಡನ್​ನಲ್ಲೇ ಈಗಲೂ ಸಿಗುವಂತಿದ್ದರೆ, ಒಟ್ಟಿಗೆ ಊಟ ಮಾಡುತ್ತಾ, ನೀನು ನೋರ್ಮಾ ಜೇನ್ ಆಗಿಯೇ ಉಳಿದುಬಿಡಬಹುದಿತ್ತು ಎಂದು ಹೇಳಬೇಕು ಎನಿಸುತ್ತದೆ.

 

‍ಲೇಖಕರು avadhi

May 3, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Shama Nandibetra

    ನೋರ್ಮಾ ಜೇನ್ ಆಗಿಯೇ ಉಳಿದುಬಿಡಬಹುದಿತ್ತು, ಹಾಗೆ ಉಳಿದಿದ್ದರೆ ಅವಳು ಮರ್ಲಿನ್ ಮನ್ರೋ ಆಗುತ್ತಿರಲಿಲ್ಲ ಮತ್ತು ಆವಾಗ ವಿಲ್ಸನ್​ಗಾರ್ಡನ್​ನಲ್ಲಿ ಸಿಕ್ಕಿದ್ದರೆ ಒಟ್ಟಿಗೆ ಊಟ ಮಾಡಬಹುದಿತ್ತು ಅನಿಸುತ್ತಿರಲಿಲ್ಲ. 🙂 😉

    Beautiful write up Eshu. Loved it.

    ಪ್ರತಿಕ್ರಿಯೆ
  2. Kiran

    A line like “ಲಾಸ್​ ಏಂಜಲೀಸ್​ನಿಂದ ಕ್ಯಾಲಿಫೋರ್ನಿಯಾಗೆ ವಲಸೆಗೆ ಹಾತೋರೆಯುವ ಹಕ್ಕಿಯಂತೆ ಬಂದುಬಿಡುತ್ತಾಳೆ.” makes the whole article a bad read, if the author doesn’t have a clue that Los Angeles is a city in California what should readers expect from him and why should anyone read this guy?
    Another line ““ಫೋಸ್ಟರ್ ಕೇರ್” ಅನಾಥಶ್ರಮದ ತೆಕ್ಕೆಗೆ ಬಿದ್ದುಬಿಡುತ್ತಾಳೆ”, “ಫೋಸ್ಟರ್ ಕೇರ್” means ಅನಾಥಶ್ರಮ, not a name for ಅನಾಥಶ್ರಮ!!!

    ಪ್ರತಿಕ್ರಿಯೆ
  3. Sandeep eshanya

    I apologise. misplacement of cities name happened while framing the sentence. And Foster Care is the name of the orphanage where she grown up. If you wanted to know more pls do read her biographies. And am thankful to your honest comment. Being a writer of that particular write up, I accept my mistakes. . . .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: