ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಮೋಚನೆ..

ಗಿರಿಧರ್ ಖಾಸನೀಸ್

ಪ್ರೀತಿಯ ಚಿಕ್ಕಮ್ಮ. 

ಹೇಗಿದ್ದೀರಿ?  ನನ್ನ ಈ ಪತ್ರವನ್ನು ನೋಡಿ ನಿಮಗೆ ಆಶ್ಚರ್ಯವಾಗಿದೆ ನನಗೆ ಗೊತ್ತು. ಹೇಗೆ ವರ್ಷಗಳು ಉರುಳಿಹೋಗುತ್ತವೆ ನೋಡಿ. 

ನೀವು ನನ್ನ ತಂದೆಯ ಎರಡನೇ ಹೆಂಡತಿಯಾಗಿ ಬಂದಿರಿ. ನನ್ನ ಜೀವನವನ್ನು ನರಕವಾಗಿಸಿದಿರಿ. ನಿಮ್ಮ ಕಿರುಕುಳ ತಡೆಯಲಾರದೆ ನಾನು ಮನೆಯಿಂದ ಓಡಿ ಹೋದೆ. ಅದು ನಿನ್ನೆ ಮೊನ್ನೆಯ ಮಾತಲ್ಲ. ಈಗ ಅಪ್ಪನೂ ಇಲ್ಲ, ನಿಮ್ಮಲ್ಲಿ ಆಗಿನ ಯೌವ್ವನವೂ ಉಳಿದಿಲ್ಲ.

ಅಪ್ಪ ಆಫೀಸಿಗೆ ಹೋದಾಗ ಪಕ್ಕದ ಮನೆಯ ಹುಡುಗನೊಂದಿಗೆ ನಿಮ್ಮ ಸ್ನೇಹ ಹೇಗಿತ್ತು ಅಂತ ನನಗೆ ತಿಳಿದಿತ್ತು. ಏನು ಮಾಡಲೂ ತೋಚದೆ ನಾನು ನಿದ್ದೆ ಹಾಳು ಮಾಡಿಕೊಂಡ ರಾತ್ರಿಗಳು ಎಷ್ಟೋ.

ಆಯಿತು ಬಿಡಿ, ನಾನೇನೂ ನಿಮ್ಮನ್ನು ಹೆದರಿಸಲು ಈ ಪತ್ರ ಬರೀತಿಲ್ಲ. ಅಥವಾ ಪಕ್ಕದ ಮನೆ ಹುಡುಗ ಮದುವೆಯಾಗಿ ಸುಖವಾಗಿದ್ದಾನೆ ಅಂತ ಹೇಳಿ ನಿಮ್ಮ ಹೊಟ್ಟೆ ಉರಿಸಲು ನನಗಿಷ್ಟವಿಲ್ಲ. ಅಥವಾ ಎಷ್ಟೋ ವರ್ಷಗಳಿಂದ ಸುಣ್ಣ ಬಣ್ಣ ಕಾಣದ ಆ ಹೆಂಚಿನ ಮನೆಗೂ ಈಗ ಒಳ್ಳೆ ಬೆಲೆ ಬಂದಿದೆ, ಅದಕ್ಕೆ ನಾನೇ ಹಕ್ಕುದಾರ ಅಂತ ನಿಮ್ಮನ್ನು ಹೆದರಿಸಲು ಬರೀತಿಲ್ಲ. ನನ್ನ ಈ ಪತ್ರ ನನ್ನ ತಪ್ಪೊಪ್ಪಿಗೆಯಾಗಿದೆ. ಮತ್ತೇನೂ ಅಲ್ಲ.

ಮನೆಯಿಂದ ಓಡಿಹೋದಾಗ ನಿಮ್ಮ ಪ್ರಿಯತಮ ನಿಮಗೆ ಕೊಟ್ಟಿದ್ದ ಉಡುಗೊರೆಗಳನ್ನು ಅಪಹರಿಸಿದ್ದೆ. ಅವುಗಳನ್ನು ಅಡವಿಟ್ಟು ಹೊಸ ಜಗತ್ತಿಗೆ ಕಾಲಿಟ್ಟೆ. ಹೊಂದಿಕೊಳ್ಳುವುದು ಸುಲಭವಾಗಿರಲಿಲ್ಲ. ನಾನು ಮಾಡದ ಕೆಲಸಗಳಿಲ್ಲ, ಅಪರಾಧಗಳಿಲ್ಲ. ಚಳಿಯಲ್ಲಿ ನಡುಗುತ್ತಾ ಕುದುರೆ ಲಾಯದಲ್ಲಿ ಮಲಗಿದ ದಿನಗಳೆಷ್ಟೋ. ಲದ್ದಿ ವಾಸನೆ ಇನ್ನೂ ಮೂಗಿನಲ್ಲಿದೆ. ಆಮೇಲೆ ಹೆಂಡದಂಗಡಿಯ ಮಂದಬೆಳಕಲ್ಲಿ ಕೊಳಕು ಪರದೆಗಳ ಮರೆಯಲ್ಲಿ ಗ್ರಾಹಕರು ಬಿಟ್ಟುಹೋದ ಬಾಯಿಲ್ಡ್ ಎಗ್ ತಿನ್ನುವ ಅದೃಷ್ಟ … 

ಹೋಗಲಿ ಬಿಡಿ, ಈಗ ಅದೆಲ್ಲ ಒಂದು ಚರಿತ್ರೆ. ನಾನೀಗ ಚೆನ್ನಾಗಿದ್ದೇನೆ. ನನ್ನ ಕಾಲ ಮೇಲೆ ನಾನು ನಿಂತಿದ್ದೇನೆ. ಈಗ ನನ್ನ ವಿಮೋಚನೆಯ ಕಾಲ. ನಿಮ್ಮಿಂದ ನಾನು ಬಿಡುಗಡೆ ಹೊಂದಬೇಕು. ನೀವು ಎಷ್ಟು ಕಾಟ ಕೊಟ್ಟಿದ್ದರೂ ಒಳ್ಳೆ ಮೂಡಿನಲ್ಲಿದ್ದಾಗ ಕೆಲವು ದಿನಗಳಾದರೂ ಬಿಸಿ ತುಪ್ಪ ಬೆರೆಸಿ  ಕೈತುತ್ತು ಹಾಕಿ ಉಣಿಸಿದ್ದೀರಿ. ತಾಯಿಯಿಲ್ಲದೆ ಬೆಳೆದ ಮಗುವಾಗಿ ನಿಮ್ಮ ಬದುಕೇನೂ ಹೂಹಾಸಿಗೆಯಾಗಿರಲಿಲ್ಲ. ಅದರ ಮೇಲೆ ಯೌವ್ವನದ ದಿನದಲ್ಲಿ ವಯಸ್ಸಾದ ನನ್ನ ಅಪ್ಪನನ್ನು ಮದುವೆಯಾಗಿ ಎಷ್ಟು ಕಷ್ಟ ಅನುಭವಿಸಿದಿರಿ.  ನಿಮ್ಮ ಹತಾಶೆಯನ್ನು ತೋರ್ಪಡಿಸಿಕೊಳ್ಳಲು ನಾನು ಸಿಕ್ಕಿಕೊಂಡಿದ್ದು ನನ್ನ ದುರಾದೃಷ್ಟ. 

ನೀವೀಗ ಕಷ್ಟದಲ್ಲಿದ್ದೀರಿ. ನಿಮ್ಮ ಋಣ ತೀರಿಸಬೇಕು. ತಿಂಗಳು ತಿಂಗಳು ನಿಮ್ಮ ಅಕೌಂಟಿಗೆ ಹಣ ಬಂದರೆ ಆಶ್ಚರ್ಯಪಡಬೇಡಿ. 

ನಮಸ್ಕಾರ.  

ವಿ.ಸೂ: ಇನ್ನು ಮುಂದೆ ಆ ದೇವಸ್ಥಾನದ ಪೂಜಾರಿ ನಿಮ್ಮ ಜೊತೆ ಎಂದಿಗೂ ಅಸಭ್ಯವಾಗಿ ವರ್ತಿಸುವುದಿಲ್ಲ.  ತೀರ್ಥ ಪ್ರಸಾದ ಕೊಡುವಾಗ ಕೈ ಮೈ ಮುಟ್ಟುವುದಾಗಲಿ ಕೆಟ್ಟ ನೋಟ ತೋರುವುದಾಗಲಿ ಮಾಡುವುದಿಲ್ಲ. ಹೆದರಬೇಡಿ.

‍ಲೇಖಕರು Admin

30 December, 2025

1 Comment

  1. Priyadarshini Shettar

    ಕಥೆ ಬಹಳ ಸೊಗಸಾಗಿದೆ. ಇಷ್ಟವಾಯ್ತು. ಮತ್ತೊಮ್ಮೆ ಓದಬೇಕೆನಿಸುವ ಹಾಗಿದೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading