ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..

ಹಿರಿಯ ಪತ್ರಕರ್ತ, ಪರಿಸರವಾದಿ ವಿನಯ್ ಮಾಧವ್ ಅವರ ಹೊಸ ಕೃತಿ ಬಿಡುಗಡೆಯಾಗುತ್ತಿದೆ.

ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ-

ರಾಜೇಶ್ವರಿ ತೇಜಸ್ವಿ

ವಿನಯ್ ಮಾಧವ ಫೋನ್ ಮಾಡಿ, ಡೆಕ್ಕನ್ ಕ್ರಾನಿಕಲ್‌ನಲ್ಲಿ ಪತ್ರಕರ್ತನೆಂದು ಪರಿಚಯಿಸಿಕೊಂಡರು. ವರದಿಗಾರ. ಅರೆಕ್ಷಣ ನಾನು ವಿಚಲಿತಳಾದೆ. ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುವಾಗ ಆದ ಅನುಭವವನ್ನು ಆಧರಿಸಿ ಒಂದು ಪುಸ್ತಕ ಸಿದ್ಧಗೊಳಿಸಿರುವೆನು, ಇದಕ್ಕೆ ಮುನ್ನುಡಿ ಬರೆದು ಕೊಡಿರೆಂದು ಕೇಳಿಕೊಂಡರು.

‘ಊರು ಹೋಗು, ಕಾಡು ಬಾ’ ಅಂತ ಕರಿತಾ ಇರುವವಳನ್ನು ಏಕೆ ಕೇಳ್ತಿದ್ದಾರೆಂದು ತುಸು ಅಸಮಾಧಾನಗೊಂಡರೂ, ಇರ್ಲಿ, ನೋಡೋಣವೆಂದು ಒಪ್ಪಿಕೊಂಡೆ. ಓದಲಿಕ್ಕೆ ಶುರುಮಾಡಿಕೊಂಡೆ. ಇವರು ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತ, ಯಾವ್ಯಾವುದೋ ಪ್ರಭಾವದಿಂದ, ಒಂಬತ್ತನೇ ತರಗತಿಯಲ್ಲಿದ್ದಾಗ ಫಾರೆಸ್ಟ್ ಆಫೀಸರ್ ಆಗುವ ಸಣ್ಣ ಕನಸು ಕಂಡು, ಮುಂದೇನೂ ತೋಚದೆ ಗೆಳೆಯನಿಂದ ಅಡ್ರೆಸ್ ಪಡೆದು, ರೇಂಜರ್ ಚಿಣ್ಣಪ್ಪನವರ ಅಡ್ರೆಸ್‌ಗೆ ಕಾಗದ ಹಾಕುವರು. ಲೋಕಾಭಿರಾಮದ ಕನಸೆಂದುಕೊಳ್ಳುವರು. ಅವರಿಂದ ಉತ್ತರವೂ ಬರುತ್ತೆ. ಆ ಕಾಗದವನ್ನು ಜೋಪಾನ ಮಾಡುವರು. ಅದು ಅವರ ಬದುಕಲ್ಲಿ ತಿರುವಾಗುವುದೆಂದು ನಿರೀಕ್ಷಿಸಿರಲಿಲ್ಲ.

ಬಾಲ್ಯದಲ್ಲಿನ ನೆನಪಿನಿಂದ ಶುರುಮಾಡಿಕೊಳ್ಳುವರು ತಮ್ಮ ಬರವಣಿಗೆಯನ್ನು. ಶಿಕಾರಿ ಅಂದ್ರೆ ಬಲೇ ಹುಚ್ಚಂತೆ. ಅದರಲ್ಲೂ ಮೀನು, ಏಡಿ ಹಿಡಿಯುವುದು. ಇಲ್ಲಿ ತೇಜಸ್ವಿಯವರ ಬಾಲ್ಯದ ಹುಚ್ಚನ್ನು ನೆನಪಿಸಿಕೊಳ್ಳಬೇಕನಿಸುತ್ತೆ. ತೇಜಸ್ವಿ ಚಿಕ್ಕವರಾಗಿದ್ದಾಗ, ಬೆಂಗಳೂರಿನ ಕೆರೆಯ ಏರಿಯ ಮೇಲೆ ತಮ್ಮ ತಂದೆಯವರ ಜೊತೆ ಹೋಗುತ್ತಿದ್ದಾಗ, ಹಲವರು ಗಾಳವನ್ನು ಹಾಕಿ ಮೀನು ಹಿಡಿಯುತ್ತಿರುತ್ತಾರೆ.

ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದಾರೆಂದು ಗೊತ್ತಿದ್ದರೂ, ಗಾಳ ನೀರಿನ ನೀಲದೊಳಗೆ ಇಳಿದಾಗ, ಮೀನು ಹಿಡಿಯುವುದರ ಬಗ್ಗೆಯ ಆಲೋಚನೆಯೆಲ್ಲ ಅಶರೀರವಾಗಿ, ಕೆರೆಯ ನೀರು ಗೂಢವಾಗೇ, ಅಗಮ್ಯವಾಗೇ ಉಳಿಯುತ್ತಿದ್ದುದರಿಂದ ತಂದೆಯವರನ್ನು ಕೇಳಿದಾಗ ಹೇಳ್ತಾರೆ, ಗಾಳಕ್ಕೆ ಕಪ್ಪೆ ಸುರಿದಿರ್ತಾನೆ. ನೀರೊಳಗೆ ಮುಳುಗಿಕೊಂಡಾಗ ಮೀನು ಸುತ್ತುತ್ತಾ ಬರುತ್ತೆ. ಕಪ್ಪೆ ಹೇಳುತ್ತೆ ‘ಸುತ್ತಿ, ಸುತ್ತಿ ಬರುತಿಹೆ ನನಗಾಗಿ, ಮೇಲೊಬ್ಬ ಕೂತಿಹ ನಿನಗಾಗಿ,’ ಎಂದು.

ಈ ಕಾವ್ಯೋಕ್ತಿಯನ್ನು ಕೇಳಿದಾಗ ಬೇರೆ ಬೇರೆಯಾಗಿ ಮೂರ್ತಗೊಂಡಿದ್ದ ಗುಣ ಬೆಸ್ತ, ಕಪ್ಪೆ, ಮೀನುಗಳೆಲ್ಲ, ನಾದ, ಛಂದ, ಲಯ ಪ್ರಾಸಗಳ ಕಾವ್ಯದ ಗಾರುಡಿಯಲ್ಲಿ ಲಯ ಹೊಂದಿ, ಹೊಸದೊಂದು ಆಲೋಚನಾ ಸತ್ಯದ ಮುಖ ಕಂಡಿತು. ಮುಂದೆ ಎಂ.ಎ.ವರೆಗೆ ನಾನು ಓದಿದ್ದು ಕಾವ್ಯ ಸಾಹಿತ್ಯಗಳನ್ನೇ ಎನ್ನುತ್ತಾರೆ ತೇಜಸ್ವಿ.

ಗಾಳ, ಮೀನಿನ ಆಟ ವಿನಯ್‌ರವರಲ್ಲಿ ಯಾವ ಗುಪ್ತವಾದ ಬೀಜಾಂಕುರವಿಟ್ಟಿತೋ? ಅದರೊಳಗೆ ಪರ್ತಿ ಮುಳುಗಿ ಹೋಗುತ್ತಾರೆ. ಇನ್ನೊಂದೆಡೆ ಕಾಡಿನಲ್ಲಿ ಜೇನಿನ ಸದ್ದಿನ ತರಂಗಗಳಿಂದಲೇ ಯಾವ ಜೇನು, ಎಲ್ಲಿ ಕಟ್ಟಿದೆ ಎಂಬಂತಹ ಸ್ಪಷ್ಟ ಮಾಹಿತಿ ತಿಳಿದ ನಂತರ, ಜೇನಿನ ಬಗ್ಗೆ ಆಸಕ್ತಿ ಬೆಳೆದು, ವಿವರವಾದ ಮಾಹಿತಿ ದೊರಕುತ್ತೆ – ಶಿಕಾರಿಗೆ ಒಡ್ಡಿಕೊಳ್ಳಲು ಕಾಡಿನಲ್ಲಿ ಅಡ್ಡಾಡಲು. ತಮಗೇ ಗೊತ್ತಿಲ್ಲದಂತೆ ಕಾಡಿಗೆ ಸಮರ್ಪಿಸಿಕೊಂಡುಬಿಟ್ಟಿರುತ್ತಾರೆ. ಅಂತರ್ಗತವಾಗಿ ಕಾಡಿನ ಬಗೆಗಿನ ಆಸಕ್ತಿ ಕುತೂಹಲ ಕಾಡಲಿಕ್ಕೆ ಬೇರು ಬಿಟ್ಟಿರುತ್ತದೆ. ಮುಂದೆ ಪತ್ರಕರ್ತನಾಗಿ ಸೇರಿಕೊಂಡಾಗ ಉನ್ನತ ಸ್ಥಾನದಲ್ಲಿರುವವರ ಪರಿಚಾಯವಾಗುತ್ತೆ. ಇಲ್ಲಿ ತಮ್ಮ ಸ್ವಂತ ಅಭಿಪ್ರಾಯಗಳು ಮೊಳಕೆಯೊಡೆದು ವನ್ಯಜೀವಿಗಳ ಬಗೆಗೆ ಗಮನ ಹರಿಯುತ್ತದೆ.

ಎಪ್ಪತ್ತರ ದಶಕದಲ್ಲಿ ಕೇಂದ್ರದವರು ಕುದುರೆಮುಖದಲ್ಲಿ ಕಬ್ಬಿಣದ ಅದುರಿನ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟ ಮಾತು ಪ್ರಕಟವಾದಾಗ ತೇಜಸ್ವಿ ಒಂದು ಮಾತು ಹೇಳಿದರು- ‘ಇನ್ನು ನಮ್ಮ ನದಿಗಳು ಕಪ್ಪಗೆ ಹರಿಯುತ್ತವೆ’ ಎಂದು. ಅಂತೆಯೇ ಆಯಿತು. ನಮ್ಮ ಪ್ರಕೃತಿ ಸಂಪತ್ತು ನಮ್ಮ ಕಣ್ಣೆದುರೇ ಹಾಳಾಗುತ್ತಿರುವಾಗ, ಅನೇಕ ಸಮಾನ ಮನಸ್ಕರು ಸೇರಿ ಗಣಿಗಾರಿಕೆ ನಿಲ್ಲಿಸಲು ಚಳವಳಿ ಮಾಡಿ ಹೋರಾಟ ಮಾಡುತ್ತಾರೆ. ಸುದೀರ್ಘವಾದ ಹೋರಾಟ. ೨೦೦೫ಕ್ಕೆ ಅಂತ್ಯಗೊಳ್ಳುತ್ತೆ. ನದಿಗಳೂ ತಿಳಿಯಾಗಿ, ಬಿಳಿಯಾಗಿ ಹರಿಯುತ್ತವೆ.

ವಿನಯ್‌ರವರು ಹಂತ ಹಂತವಾಗಿ, ಪತ್ರಕರ್ತನಾಗಿಯೇ ಆ ಹೋರಾಟವನ್ನು ಬಿಡಿಸಿ ಬರೆದಿರುವರು. ಒಳ್ಳೆಯ ದಾಖಲೆಯಾಗಿದೆ. ನಮ್ಮ ಸುಪ್ರೀಂ ಕೋರ್ಟಿನಿಂದಾಗಿಯೇ ಗಣಿಗಾರಿಕೆ ನಿಲ್ಲಿಸಿದ್ದು ಸ್ಪಷ್ಟವಾಗಿ ತಿಳಿಯುತ್ತೆ. ಅದರಲ್ಲೂ ಒಳ ಒಪ್ಪಂದಗಳಿಗೆ ಆಸ್ಪದವೇ ಇಲ್ಲದಂತೆ ನಡೆದಿದ್ದನ್ನು ನಿಖರವಾಗಿ ವರದಿ ಮಾಡಿದವರು. ಸಂತೋಷ-ಧನ್ಯವಾದಗಳು.

ಇಲ್ಲಿಗೆ ಬನ್ನಿ –‘ಬುದ್ಧನಿಗೆ ಒಂದು ಜಾತಿ’ – ಮನುಷ್ಯ ಏಕೆ ಹೀಗಾಗುತ್ತಿರುವನು? ರಾಮನಗರದ ಬೆಟ್ಟವನ್ನು ರಕ್ಷಿತಾರಣ್ಯವೆಂದು ಘೋಷಿಸಲು ಪ್ರಸ್ತಾವನೆ ಹೋಗಿದ್ದರೂ ಸಹ, ಸಿನೆಮಾ ಶೂಟಿಂಗ್‌ಗೆಂದು ಬಳಸಿಕೊಂಡು ಹಾಳು ಮಾಡುವುದು. ತದನಂತರ, ಸಂಘಮಿತ್ರ ಫೌಂಡೇಶನ್ ಮಾಡಿಕೊಂಡು, ಆಧ್ಯಾತ್ಮಿಕ ಕೇಂದ್ರ, ಸ್ಟಡೀ ಸೆಂಟರ್, ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ರೆಸಾರ್ಟ್, ಇತ್ಯಾದಿ ಹೆಸರಿನಲ್ಲಿ ಬೆಟ್ಟವನ್ನೇ ನುಂಗಲಿಕ್ಕೆ ಹೊರಟಿದ್ದರಲ್ಲ. ಹೇಳ ಹೆಸರಿಲ್ಲದೆ ನಾಶವಾಗುತ್ತಿತ್ತೇನೋ. ಕಾಡು, ಪಕ್ಷಿ, ಪ್ರಾಣಿ ಪ್ರಪಂಚ ನಾಶ. ರಕ್ಷಿತಾರಣ್ಯಗಳಲ್ಲಿ ರಸ್ತೆ ಮಾಡಿದರೆ ಏನಾಗುತ್ತೆ ಎಂಬುದನ್ನೂ ಮನದಟ್ಟು ಮಾಡಿದ್ದಾರೆ. ಬುದ್ಧನೇ ಬುದ್ಧಿ ಕೊಡಬೇಕು!

ಒಂದೊಂದು ಅಧ್ಯಾಯವೂ ಒಂದೊಂದು ರೀತಿಯಲ್ಲಿ ರೋಮಾಂಚನ ಮಾಡುತ್ತೆ. ‘ಬ್ರಹ್ಮಗಿರಿ ಎಂಬ ಮಾಯಾಂಗನೆ’ ಅಂತೆ. ಇವಳು ನನಗೆ ಮಾಟ ಮಾಡಿಬಿಟ್ಟಿರುವಳು. ಪ್ರತ್ಯಕ್ಷವಾಗಿ ಅಲ್ಲಿ ಓಡಾಡಬೇಕಂತಾಗಿದೆ ನನಗೆ; ನೀಲಗಿರಿ ಅಂತಾಸ್ ಎಂಬ ಕುರಿಂಜೆ ಹೂ ನೋಡಬೇಕಾಗಿದೆ. ನರಿಮಲೈ ಹೇಗಿದೆಯೋ! ಸದ್ಯ, ಅಲ್ಲೊಂದು ಶಬರಿಮಲೈ ಹುಟ್ಟಿಕೊಳ್ಳಲಿಲ್ಲ. ಸಮಾಧಾನವಾಯ್ತು.

‘ಈ ಕಾಡೆಂಬುದೇ ಒಂದು ಮಾಯೆ’ ವಿನಯ್ ಹೇಳ್ತಾರೆ. ‘ಪ್ರತಿಯೊಂದು ಸಣ್ಣಪುಟ್ಟ ಪ್ರಾಣಿಗಳು ತಮ್ಮದೊಂದು ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿರುತ್ತವೆ. ಆ ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗೂ ಅವಿನಾಭಾವ ಸಂಬಂಧಗಳಿರುತ್ತವೆ. ಅಂತದ್ರಲ್ಲಿ ನಾವು ಪರಿಸರ ಬದಲಿಸುತ್ತಿದ್ದಂತೆ ಅಲ್ಲಿದ್ದ ಜೀವರಾಶಿಗಳು ನಿಧಾನವಾಗಿ ಹಿಂದೆ ಸರಿಯಲು ಪ್ರಾರಂಭಿಸುತ್ತವೆ. ಆ ಜಾಗದಲ್ಲಿದ್ದ ಪ್ರಾಣಿಗಳ ಜೊತೆ ಉಳಿವಿಗಾಗಿ ಹೋರಾಟ ನಡೆದು, ಪ್ರಾಣಿ, ಪಕ್ಷಿ, ಕೀಟ ಪ್ರಭೇದಗಳು ಸರ್ವನಾಶವಾಗಿ ಹೋಗ್ತವೆ.’ ನಾವೆಲ್ಲ ನೋಡುತ್ತಿರುವುದು ಇದನ್ನೇ.

ಕಾಡು ತಿರುಗುವ ಹುಚ್ಚು ಖಯಾಲಿಗೆ ಒಳಗಾಗಿದ್ದರ ಪರಿಣಾಮವೆನ್ನಬಹುದೇನೋ, ಕಾಡಿನಲ್ಲೇ ಕಳೆದು ಹೋಗಿದ್ದರು. ನಂತರ ಸಿಗುವುದೆಲ್ಲಿ ಗೊತ್ತೆ. ಪ್ರಾಣಿಗಳ ಜಾಡು ಹಿಡಿದು, ಅಲ್ಲಿ ಆನೆ ಭೇಟಿಯಾಗುವಲ್ಲಿ. ಎಲ್ಲರಿಗೂ ಆನೆ ಅಂದರೆ ಖುಷಿ. ಆದರೆ ಅದಕ್ಕೆ ಕುತ್ತು ಬರುವಂತಿದೆ. ಆನೆಗಳ ಬಗ್ಗೆ ಮಾಹಿತಿಯ ರಸದೌತಣ ನೀಡುತ್ತ, ಆನೆ ಒಂದು ಅದ್ಭುತ ಅನ್ನುವರು.

ಇವರು ಬರೆಯುತ್ತ ಹೋದಂತೆಲ್ಲ ನಮ್ಮ ವನ್ಯಜೀವಿಗಳ ಬದುಕು, ಸುರಕ್ಷತೆ, ಅವುಗಳ ಅತ್ಯಗತ್ಯತೆ, ಸಂರಕ್ಷಣೆ ಏಕೆ ಬಹು ಮುಖ್ಯ ವಿವರಣೆಯೊಂದಿಗೆ ಹೇಳುತ್ತಾ, ನಮಗೆ ಅದರ ಅರಿವಾಗುವಂತೆ ಮಾಡುವರು. ರಕ್ಷಿತಾರಣ್ಯಗಳಲ್ಲಿ ರಸ್ತೆ ಮಾಡಿದರೆ ಏನಾಗುತ್ತೆ ಎಂಬುದನ್ನು ಮನದಟ್ಟು ಮಾಡುತ್ತ, ಇವತ್ತಿನ ಹೊಸ ಪೀಳಿಗೆಯ ಹುಲಿಗಳು ಕ್ಯಾಮೆರಾಕ್ಕೆ ಪೋಸ್ ಕೊಡುವುದನ್ನು ತೋರಿಸುತ್ತಾರೆ. ಟಿವಿ ಮುಂದೆ ಚರ್ಚೆ, ಎಷ್ಟು ಹುಲಿಗಳಿದ್ದಾವೆ, ಸಂಖ್ಯೆ ಲೆಕ್ಕ, ಇದೇ ಈವತ್ತಿನ ಕೆಲಸವಾಗಿದೆ.

ಹಾಗೆಯೇ ವನ್ಯಜೀವಿ ಸಂರಕ್ಷಣೆಗಾಗಿ ದುಡಿಯುತ್ತಿರುವವರು ಬರುತ್ತಾರೆ. ಅವರ ಬಗ್ಗೆಯೂ ಅಲ್ಪಸ್ವಲ್ಪ ಮಾಹಿತಿ ಲಭ್ಯವಾಗುತ್ತೆ. ಮುಂಚೂಣಿಯಲ್ಲಿರುವ ಚಿಣ್ಣಪ್ಪನವರು, ಶಾಲ್ಹಾರ, ಉಲ್ಲಾಸ್ ಕಾರಂತರು ಇನ್ನೂ ಅನೇಕರು ಬರುವರು. ಎಲ್ಲರೂ ಒಕ್ಕೊರಲಿನಿಂದ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಸಂರಕ್ಷಣೆ ಏತಕ್ಕೆ? ಎಂದು ತಿಳಿಸಿಕೊಡುವುದನ್ನು ವರದಿಯಲ್ಲಿ ಒಂದು ಸೀಳು ನೋಟ ನೀಡಿದ್ದಾರೆ.

ಪತ್ರಿಕೆಯ ವರದಿಯಲ್ಲಿ ಮಾತ್ರವಲ್ಲದೆ, ದೆಹಲಿಯಲ್ಲಿರುವ ‘ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್’ ಸಂಸ್ಥೆಯ ಫೆಲೋಶಿಪ್ ಅಡಿಯಲ್ಲಿ ಮಾಡಿರುವ ಅಧ್ಯಯನ ಆಧಾರಿತ ಪ್ರಬಂಧವಂತೂ ಮೆಚ್ಚುವಂತದ್ದು. ಸ್ವಾರಸ್ಯವಾಗಿ ಅಚ್ಚರಿ ಉಂಟುಮಾಡುವ ಮಾಹಿತಿ ಲಭ್ಯ ಉಂಟು ಎಂಬುದಕ್ಕಾಗಿ ಅಲ್ಲ. ಆದರೆ, ಅವರಲ್ಲಿನ ವೈಜ್ಞಾನಿಕ ವಿಶ್ಲೇಷಣೆ ಮುಖ್ಯವಾಗಿ ಗಮನಿಸಬೇಕಾಗಿದೆ. ಅಲ್ಲಿ ಅದ್ಭುತ ಎಚ್ಚರಿಕೆ ಮಾನವ ಕುಲಕ್ಕೆ ಇದೆ.

ನಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ತೇಜಸ್ವಿ ಪಕ್ಷಿಗಳು ಗೂಡು ಕಟ್ಟುವುದನ್ನು ತೋರಿಸುತ್ತಿದ್ದರು. ಅವರು ಆಸಕ್ತಿ ಕುತೂಹಲಿಗಳಾಗಲೆಂದು. ದುಂಬಿ ಜೀರ್ ಜೀರ್ ಸದ್ದು ನಿರಂತರ ಹೊಮ್ಮಿಸುತ್ತಲ್ಲ, ಅದು ಹೇಗೆ? ಅದರ ಧ್ವನಿ ಪೆಟ್ಟಿಗೆಯಿಂದ ಅಂತ ತಿಳಿದಿದ್ದೀರಾ? ಇಲ್ಲ. ಅದರ ರೆಕ್ಕೆ ಬಡಿತದಿಂದ ಸದ್ದು ಹೊಮ್ಮಿಸುತ್ತಿದೆ ಎಂಬುದನ್ನು ತೋರಿಸಿಕೊಟ್ಟರು.

ಈಗ ‘ಒಂದು ಕಾಲ ಘಟ್ಟದ ಗದ್ದೆ ಚಿತ್ರ’ ಮತ್ತು ‘ಭತ್ತದ ಗದ್ದೆ ಎಂಬ ಒಂದು ಹುಲ್ಲುಗಾವಲಿನ ಕಥೆ’ ಇಲ್ಲಿ ನಾವು ನೋಡುತ್ತಿರುವುದು ನಮ್ಮ ಕಥೆಯನ್ನೇ. ‘ಮಲೆನಾಡ ಭತ್ತ ಮತ್ತು ಅಗ್ರಿ ಎಕಾನಮಿ,’ ‘ಶುಂಠಿ ಅನ್ನೋ ಮಾಯೆ’ ಇವನ್ನು ಓದಿದಾಗ, ಹೇಗೆ ಆರ್ಥಿಕ ಲಾಭಗಳಿಸಲು ರೈತ ಹೋರಾಡುತ್ತಿರುವನು ಎಂದು ತಿಳಿಯುವುದರ ಜೊತೆಗೆ, ವೈಜ್ಞಾನಿಕವಾಗಿಯೇ ಗದ್ದೆ ಸರ್ವನಾಶವಾಗುವುದು ನೋಡುತ್ತೇವೆ. ಬರಡು ಭೂಮಿಯಾಗಿ ಬದಲಾಯಿಸುತ್ತಿರುವೆವು, ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆ, ಇತ್ಯಾದಿಗಳ ದೆಸೆಯಿಂದ.

ಗದ್ದೆ ಜೀವ ವೈವಿಧ್ಯದ ಸಂಗಮ. ಇವೆಲ್ಲದರ ಬಗ್ಗೆ ಕುತೂಹಲವಿರಬೇಕು ಒಂದೇ ಅಲ್ಲ, ಇವನ್ನು ತಿಳಿಸಲೂ ಬೇಕು. ಜೀವನದ ಉಗಮದಿಂದ ಶುರುವಾಗುವಂತದ್ದು. ಮಲೆನಾಡಿನ ಗದ್ದೆ ಬಗೆಗಿನ ಮಾತಾಯ್ತು. ಬಯಲು ಸೀಮೆಯ, ಬಯಲು ಹುಲ್ಲು ಪ್ರಕೃತಿಯ ಸಮತೋಲನ ಕಾಪಾಡುವ ಪ್ರಾಮುಖ್ಯತೆಯನ್ನೂ ಮಾತಾಡುತ್ತಾರೆ.

ಭತ್ತದ ಗದ್ದೆ ಬಗೆಗಿನ ಅಧ್ಯಾಯಗಳಲ್ಲಿ ಬರುವ ಮಾಹಿತಿಗಳು, ಮಣ್ಣು ಮತ್ತು ಮಾನವನಿಗಿರುವ ಸಂಬಂಧಗಳು, ಮಕ್ಕಳಿಗೆ ಚಿಕ್ಕಂದಿನಲ್ಲಿ ತೋರಿಸಿಕೊಟ್ಟರೆ ಎಂದೂ ಮರೆಯಲಾಗೋಲ್ಲ ಎನ್ನುವುದಕ್ಕಿಂತಲೂ, ಕುತೂಹಲ, ಆಸಕ್ತಿ ಕೆರಳಿಸಿ, ಅಗಾಧ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಅನ್ನ, ಮಣ್ಣು, ನೀರಿಗಿರುವ ಸಂಬಂಧಗಳನ್ನು ಮಕ್ಕಳ ಶಿಕ್ಷಣದಲ್ಲಿ ಅಳವಡಿಸುವುದು ಒಳ್ಳೆಯದಲ್ಲವೆ? ಖಂಡಿತಾ, ವೈಜ್ಞಾನಿಕ ವಿಶ್ಲೇಷಣೆ ಮಾಡುತ್ತಾ, ಅನ್ನ ಮತ್ತು ಮಣ್ಣಿಗಿರುವ ಸಂಬಂಧತೆರೆದು ತೋರಿಸುತ್ತಾರೆ ಯುವ ವಯಸ್ಸಿಗರಿಗೆ. ಹಾಗೆಯೇ ಹೆಚ್ಚಿನ ಲಾಭ ಗಳಿಸಲು ಶುಂಠಿ ಬೆಳೆಗೆ ಮೊರೆ ಹೋದಾಗ ಏನಾಗುತ್ತೆಂಬುದೂ ಸ್ಪಷ್ಟವಾಗಿ ಅರಿವಾಗುತ್ತೆ.

ಪರಿಸರದ ಬಗ್ಗೆ, ಜೀವನದ ಬಗ್ಗೆ ಲವಲವಿಕೆಯನ್ನೂ, ಉತ್ಸಾಹವನ್ನೂ ಉಂಟು ಮಾಡುವಂತೆ, ಭತ್ತದ ಗದ್ದೆ ಬಗ್ಗೆ ಹೇಳ್ತಾ, ನಾವು ಕಷ್ಟಪಟ್ಟು ಉಳಿಸಿದರೆ ಮಾತ್ರ ಉಳಿತಾವೆ ಎಂದೂ ಎಚ್ಚರಿಸುವರು.

ರೈತನ ಬದುಕು, ಬದಲಾದ ಸ್ಥಿತಿಯನ್ನೂ ಹೇಳುವರು ವಿನಯ್. ಹಿಂದಿನ ಕಾಲದಲ್ಲಿ ಮಲೆನಾಡಿನಲ್ಲಿನ ಮನೆಗಳಲ್ಲಿ ದನ ಕರುಗಳಿಲ್ಲದೇ ಹೋದರೆ ಹೆಣ್ಣು ಕೊಡುವವರು ಹಿಂದೆ ಮುಂದೆ ನೋಡುವ ಕಾಲವಿತ್ತಂತೆ. ಈಗ ಅವು ಇದ್ರೆ ಹೆಣ್ಣು ಕೊಡೋಲ್ಲ ಅಂತಿದಾರೇನೋ. ಮೊನ್ನೆ ತುರುವೇಕೆರೆಯಿಂದ ಕೆಲವು ರೈತರು ಬಂದಿದ್ರು. ಧರ್ಮಸ್ಥಳಕ್ಕೆ ಹೋಗುವವರು ಇರಬಹುದು.

ನಮ್ಮ ಈವತ್ತಿನ ಪರಿಸ್ಥಿತಿ ಹೀಗಿದೆ ನೋಡಿ, ನಮ್ಮೂರಲ್ಲಿ ೨೬ ಜನ ಮದುವೆಗೆ ಬಂದ ವಯಸ್ಸಿನ ಹುಡುಗರಿರುವರು. ರೈತನ ಮನೆಗೆ ಹೆಣ್ಣು ಕೊಡಲ್ಲ ಅಂತಾರೆ. ಗದ್ದೆ, ಕೃಷಿ ಬದಲಾದ ಕಾಲಮಾನ. ರೈತನ್ನ ಮದುವೆಯಾಗಿ ನಾವು ಸುಖ ಕಂಡಿದ್ದು ಗೊತ್ತಿಲ್ವ, ಎನ್ನುವರಂತೆ ತಾಯಿಯರು.
ಈ ಹಿಂದೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರವರು ಜೀವನ ಪತ್ರಿಕೆಯ ಸಂಪಾದಕೀಯವನ್ನು, ವೈಎನ್‌ಕೆ ಮತ್ತು ವೈಕುಂಠರಾಜುರವರು ಪ್ರಜಾವಾಣಿಯಲ್ಲಿ ತಾವು ಬರೆದ ಸಂಪಾದಕೀಯಗಳನ್ನು ಪುಸ್ತಕವಾಗಿ ಪ್ರಕಟಣೆ ಮಾಡಿರುವರು.

ವಿನಯ್‌ರವರ ಬರಹ ಓದುವ ಮುಂಚೆ ಪತ್ರಿಕಾ ವರದಿಯು ಸಾಹಿತ್ಯವಾಗುವುದೇ? ಎಂದೂ ನಾನು ಯೋಚಿಸಿದ್ದೆ. ಅದರಲ್ಲೂ ಪರಿಸರ, ಕಾಡು, ವನ್ಯಜೀವಿಗಳ ಸಂರಕ್ಷಣೆ ಬಗೆಗಿನ ಪತ್ರಿಕಾ ವರದಿಯು ಪುಸ್ತಕವಾಗಿ ಪ್ರಕಟಣೆಗೊಂಡರೆ ವರದಿ ಅನ್ನಿಸಿಕೊಳ್ಳುವುದಿಲ್ಲವೇ?
ಇಲ್ಲಿ ವರದಿಯ ಅಂತಃಸತ್ವ ತೆರೆಮರೆಯಲ್ಲಿನ ವರದಿಯಾಗಿದೆ. ಕೆಲವು ಸಲ ಯಾರ ಒತ್ತಡಕ್ಕೋ ಸಿಕ್ಕಿ, ನಿಖರ ಅಥವಾ ಪರ್ತಿ ನಿಜವಲ್ಲದ ವರದಿ ಕೊಟ್ಟು, ಬೈಸಿಕೊಂಡದ್ದೂ ಉಂಟು. ಇರಲಿ. ಆದರೆ ಇಲ್ಲಿ ಬೇರೆಯದೇ ವಸ್ತುಸ್ಥಿತಿ ಕಾಣುತ್ತೇವೆ.

ಈ ಲೇಖನಗಳು ನಮ್ಮ ಬದುಕಿಗೆ ಪರಿಸರದ ಪ್ರಾಮುಖ್ಯತೆ ಹಾಗೂ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತೆ. ವನ್ಯಜೀವಿ ಸಂರಕ್ಷಣೆ, ಕಾಡು, ಕಾಡಿನಲ್ಲಿನ ಜೀವ ಸಂಕುಲಕ್ಕೂ, ಮಾನವನ ಸಂಬಂಧ ಹೇಗೆಂದರೆ, ನಾವು ಪ್ರಕೃತಿಯ ಒಂದು ಭಾಗ, ನಮ್ಮ ಒಂದು ಭಾಗ ಪ್ರಕೃತಿಯಲ್ಲ. ಹೀಗಿರುವಾಗ ಪ್ರಕೃತಿ, ಪರಿಸರವನ್ನು ನಾಶಮಾಡಿಕೊಂಡು ಬದುಕಿರಲು ಸಾಧ್ಯವಾ? ಇವೆಲ್ಲ ಹಾಳಾದರೂ ಪರವಾಗಿಲ್ಲ, ಆರ್ಥಿಕತನವೇ ಹೆಚ್ಚು ಮುಖ್ಯವೆಂದುಕೊಂಡು ತಲೆ ಕೆಡಿಸಿಕೊಳ್ಳಬೇಕೇ? ಎಷ್ಟು ವರ್ಷ ಅದು ಸಾಧ್ಯ? ವನ್ಯಜೀವಿಗಳು ಮನುಷ್ಯನನ್ನು ದ್ವೇಷಿಸೋಲ್ಲ. ಆದರೆ ಮನುಷ್ಯ ತನಗೆ ತೊಂದರೆಯಾಗುತ್ತಿದೆ ಎಂದು ಕಾಡಿನ ಜೀವಿಗಳ ಬದುಕನ್ನು ಕಿತ್ತುಕೊಳ್ಳಲು ನೋಡುವನು.

ನಮ್ಮ ಸರ್ಕಾರಗಳ ಅನುಚಿತ ಅಭಿವೃದ್ಧಿ ಪಥ ಹಿಡಿದು ಹಿಂದಕ್ಕೆ ಹೋಗಲಾರದಂತಹ ದುರಂತವನ್ನು ನಾವೇ ಸೃಷ್ಟಿಸಿಕೊಳ್ಳುತ್ತಿರುವೆವು. ಪ್ರಕೃತಿಯನ್ನು ನಿರ್ನಾಮ ಮಾಡಿ ಬದುಕಲು ಸಾಧ್ಯವೇ? ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕೆನ್ನುವ ಯೋಜನೆಗಳಿಂದ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಕಾಡೂ ಕಾಣೆಯಾಗುತ್ತಿದೆ. ‘ಸಂರಕ್ಷಣೆ ಜನಮಾನಸ ಬದುಕಿನಲ್ಲಿ ಹಾಸು ಹೊಕ್ಕಾಗಬೇಕು. ನಾವು ಬದುಕಬೇಕಾದರೆ ವನ್ಯ ಜೀವಿಗಳನ್ನು ಬದುಕಲು ಬಿಡಬೇಕು.’ ಇಲ್ಲಿ ಅನೇಕ ಕಡೆ ಉದ್ದೇಶಪರ್ವಕವಾಗಿಯೇ ವಿನಯ್‌ರವರ ಮಾತುಗಳನ್ನೇ ಬಳಸಿಕೊಂಡಿರುವೆನು.

ಈ ಪುಸ್ತಕ ಸಾಹಿತ್ಯಿಕ ದಾಖಲೆಯಾಗಿದೆ. ಸಾಂಸ್ಕೃತಿಕ ದಾಖಲೆಯೂ ಹೌದು. ಇಂತಹ ಪುಸ್ತಕಗಳು ಹೆಚ್ಚೆಚ್ಚು ಬರಬೇಕು. ಮನುಷ್ಯ ಎಲ್ಲಿ, ಏನು ತಪ್ಪು ಮಾಡುತ್ತಿರುವನೆಂದೂ ಮತ್ತು ಅರಣ್ಯ ಜೀವಿಗಳ ಬದುಕಿಗೆ ಹೇಗೆ ಗೌರವ ನೀಡಬೇಕೆಂಬ ಅರಿವೂ ಬರುತ್ತದೆ. ಬರೀ ಪರಿಸರ ಉಳಿಸಲು ಮಾಡಿದ ಹೋರಾಟದ ವರದಿ ಅಲ್ಲ. ಯಾವ ಕಾಲಕ್ಕೂ ನಿಲ್ಲುವ ವರದಿ ಮತ್ತು ಮುಂದಿನ ಪೀಳಿಗೆಯವರೂ ಓದಿಕೊಳ್ಳಬೇಕಾದ್ದು. ಹಾಗೂ ಯುವ ಜನತೆಯ ಮೆದುಳಿಗೆ, ಮನಸ್ಸಿಗೆ ಒಂದು ಥೆರಪಿ ಕೊಡುವಂತದ್ದಾಗಿದೆ. ಇಂತಹ ಮೋಡಿಯ ಪುಸ್ತಕ ಕೊಟ್ಟಿದ್ದಕ್ಕೆ ವಿನಯ್ ಮಾಧವರವರಿಗೆ ಧನ್ಯವಾದಗಳು.

‍ಲೇಖಕರು Avadhi

9 February, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading