ವಿದ್ಯಾಶಂಕರ್ ಹರಪನಹಳ್ಳಿ
ಸೃಷ್ಟಿ ರಹಸ್ಯ
ಮುಂಗಾರು ಮಳೆಯಿಂದ ಉಂಟಾದ ಶೀತದ ಅನವರತ ಸೀನಿನಂತೆ ಅವಳು ಭಟ್ಟನ ಮೈ ಮನ ಆವರಿಸಿಕೊಂಡಳು. ಯುವ ಶಂಭು ಭಟ್ಟನಿಗೆ ಪ್ರೀತಿಯೂ ಕೂಡ ಆರಡಿ ಎತ್ತರದ ಬಲಿಷ್ಠ ಮನುಷ್ಯನನ್ನೂ ಇಷ್ಟು ನಿಸ್ಸಹಾಯಕನಾಗಿಸಬಹುದು ಎಂಬುದು ಮೊದಲಬಾರಿಗೆ ಅನುಭವಕ್ಕೆ ಬಂತು. ಬೆಂಕಿಗೆ ಆಕರ್ಷಿತವಾದ ಪಂತಗದಂತೆ, ಕ್ಷಮಿಸಿ ಇದು ಒಳ್ಳೆಯ ಉಪಮೆಯಲ್ಲ, ಭಟ್ಟ ಕೊನೆಗೆ ಶ್ರಾವ್ಯಳ ಬಳಿ ಪ್ರೇಮ ನಿವೇದಿಸಿಕೊಂಡ. ಅವಳ ಫೋಟೋ ಎದುರಿಗೆ ಇಟ್ಟುಕೊಂಡು ಮೂರುದಿನ ಅಭ್ಯಾಸ ಮಾಡಿದ್ದು ಯಾವುದೇ ಪ್ರಯೋಜನವಾಗಲಿಲ್ಲ ಎಂಬುದು ಅವನ ಧ್ವನಿಯ ನಡುಕ ಹೇಳಿತು. ಶಂಭು ಭಟ್ಟನ ಅಂತಕರಣ ಕಲಕುವ ಪ್ರೇಮ ನಿವೇದನೆಗೆ ಅವಳದು ದಿವ್ಯ ಮೌನ. ಭಟ್ಟ ತನ್ನ ಏಕಾಂತದಲ್ಲಿ ಅವಳ ಮೌನವ ಒಮ್ಮೆ ಹಾಗೆ ಅರ್ಥೈಸಿಕೊಂಡು ನಕ್ಕ, ಒಮ್ಮೆ ಹೀಗೆ ಅರ್ಥೈಸಿಕೊಂಡು ಅತ್ತ ಎಂದರೆ ಓದುಗರು ಅಚ್ಚರಿ ಪಡುವುದಿಲ್ಲವೆಂದುಕೊಳ್ಳುತ್ತೇನೆ.
-೨-
ಅವನ ಮೌನ ಪ್ರಾರ್ಥನೆ ಪರಾಕಾಷ್ಟೆ ಅವಳ ತಾಕಿದಂತೆ, ಕೊನೆಗೊಂದು ದಿನ ಶ್ರಾವ್ಯಳಿಂದ ಭಟ್ಟನ ಮೊಬೈಲಿಗೆ ಒಂದು ಮಿಸ್ಡ್ ಕಾಲ್ ಬಂತು. ಅಷ್ಟೊತ್ತಿಗಾಗಲೇ ಭಟ್ಟ ವೇದಾಂತದ ತುದಿಗೋ ಅಥವಾ ಚಿತ್ತಭ್ರಮೆ ಅಂಚಿಗೋ ತಲುಪಿದ್ದ. ಥಟ್ಟನೇ ಫೋನ್ ಮಾಡಿ ಶಂಭು ಭಟ್ಟ ಏನೇನೋ ಬಡಬಡಿಸಿದ, ಅದೇನೂ ವಿಚಿತ್ರವೋ ಶ್ಯಾವಳಿಗೆ ಮಾತ್ರ ಅದೆಲ್ಲವೂ ಅರ್ಥವಾಯಿತು. ಜಗತ್ತು ಮತ್ತೆ ಸುಂದರವಾಗಿ, ಸಹಜವಾಗಿ ಸುತ್ತುತ್ತಿರುವಂತೆ, ತನ್ನ ಸಂಶಯಗಳ ಸುಳಿಯಿಂದ ಹೊರಬಂದು ಮತ್ತು ತನ್ನ ಪಥಕ್ಕೆ ಮರಳಿದಂತೆ ಭಾಸವಾಯಿತು.
-೩-
ಈಗ ಭಟ್ಟ ತನ್ನ ಎಳೆಯ ಮಗ ಸೀನಿದಾಗಲೆಲ್ಲ “ಅಕ್ಷೀ… ಅಕ್ಷೀ ಶೀತಾಕ್ಷಿ… ಧೀರ್ಘಾಯಿಷಿ… ಶತಾಯಿಷಿ” ಎಂದು ಹೇಳುತ್ತಾ, ಆಡಿಸುತ್ತಾ ಮದುವೆಗೆ ಮುಂಚಿನ ದಿನಗಳ ನೆನೆಯುತ್ತಾನೆ. ತನ್ನನ್ನೂ ಶ್ರಾವ್ಯಳ ಆಕರ್ಷಣೆ ದೂಡಿದ, ಆ ಪರಿ ಸೆಳೆದ, ಸೆಳುವಿಗೆ ನೂಕಿಗೆ ಶಕ್ತಿ ಯಾವುದು ಜಿಜ್ಞಾಸೆಗೆ ಬೀಳುತ್ತಾನೆ. ಉತ್ತರಕ್ಕೆ ಜೀವಶಾಸ್ತ್ರ, ಮನೋಶಾಸ್ತ್ರ, ರಸಯಾನಶಾಸ್ತ್ರ, ವೇದಾಂತ ಪುರಾಣವೆನ್ನೆಲ್ಲಾ ಓದಿ ಆಕಾರ್ಷಣೆಯ ನಿಯಮಗಳ ತಿಳಿಯಲು ಪ್ರಯತ್ನಿಸುತ್ತಿರುತ್ತಾನೆ. ಜಿಜ್ಞಾಸೆ, ಹುಡುಕಾಟ ಹೆಚ್ಚಿದಂತೆ ಉತ್ತರವೇ ಸಿಗಬಾರದು ಎಂದು ಆಳದಲ್ಲಿ ಗುಪ್ತವಾಗಿ ಆಶಿಸುತ್ತಾನೆ. ಇನ್ನೂ ಪಕ್ಕಾ ಉತ್ತರ ಸಿಕ್ಕಿಲ್ಲ, ಹಾಗೆಯೇ ಸಿಕ್ಕ ಉತ್ತರಗಳೆಲ್ಲಾ ಹೆಚ್ಚು ದಿನ, ರಾತ್ರಿ ಬಾಳಿಲ್ಲ ಎಂಬುದಂತು ಸತ್ಯ.
***
ಸ್ಥಳಿಕರಣ : ಇದ್ದಲೇ ಇರಿ ಪ್ಲೀಸ್!
ಈ ನಗರಕ್ಕೆ ಬಂದ ಹೊಸದರಲ್ಲಿ, ನಗರದ ತೊಂಬತ್ತು ಲಕ್ಷ ಜನರಲ್ಲಿ ನಾನು ಒಬ್ಬ ಎಂಬ ಆಲೋಚನೆಯೇ ಅನಂತನಿಗೆ ಗಾಬರಿಪಡಿಸಿ, ಬೆವರಿಳಿಸಿತ್ತು. ಪೀಕ್ ಅವರ್-ಲ್ಲಿ ತುಂಬಿದ ಬಸ್-ನಲ್ಲಿ ಓಡಾಡುವಾಗ ನೂಕುನುಗ್ಗಲಿನಲ್ಲಿ ಉಸಿರುಗಟ್ಟಿ ಇತಿಹಾಸದಲ್ಲಿ ಓದಿದ್ದ ಹಿಟ್ಲರ್-ನ ನಾಜಿ ಕ್ಯಾಂಪ್ ನೆನಪಾಗಿತ್ತು, ಅದರೊಂದಿಗೆ ಊರಿಗೆ ಓಡಿಬಿಡಲೇ ಎಂಬ ಪ್ರಲೋಭನೆಯೂ ಕಾಡಿತ್ತು. ಕೊನೆಗೊಂದು ನೀರವ ರಾತ್ರಿಯಲಿ ಅಗ್ಗದ ರಾಜ ವ್ಹಿಸ್ಕಿ ಕಂಠಪೂರ್ತಿ ಕುಡಿದು, ಬೀದಿದೀಪದ ಕೆಳಗೆ ಬಿಕ್ಕಳಿಸುತ್ತಿದ್ದಾಗ ಬೆಂಗಳೂರು ಕೂಡ ನಿಟ್ಟುಸಿರು ಬಿಡುತ್ತಿದ್ದು ಗಮನಿಸಿದ ಅನಂತ. ಅರೇ! ಈ ಬೆಂಗಳೂರೆಂಬ ಮಾಯಂಗನೆ ಕೂಡ ತನ್ನಂತೆ ಅಬ್ಬೇಪಾರಿ ಎಂದೆನಿಸಿ ಬಹು ಸಮಯದ ವರೆಗೆ ವ್ಹಿಸ್ಕಿ ಮತ್ತಿನಲ್ಲಿ ಗಹಗಹಿಸಿ ನಕ್ಕಿದ್ದ ಅನಂತ.
ನಂತರ ಊರಿನ ಗುಟ್ಟು ಅರ್ಥವಾಗಿತ್ತು, ಆತ್ಮವಿಶ್ವಾಸದಿಂದ ನಟಿಸಬೇಕು ಅಷ್ಟೇ, ಒಳಗೆ ಟೊಳ್ಳಿದ್ದರು ಪರ್ವಾಗಿಲ್ಲ ಮಾರ್ರಾಯ! ಪಳಗಿದೆ, ಪಳಗಿಸಿದೆ ಎಂಬ ಆತ್ಮವಿಶ್ವಾಸ ಮುರಿಯುವುದಕ್ಕೆ ಬೆಂಗಳೂರು ಹೊಸ ಹೊಸ ಸವಾಲು ಹಾಕುತ್ತಿರುತ್ತದೆ, ಆಗಲೂ ಅಷ್ಟೇ ಪೊಳ್ಳು ವಿಶ್ವಾಸ ನಟಿಸಬೇಕು ಅಷ್ಟೇ. ನಂತರ ಯಶಸ್ಸು, ದುಡ್ಡು ತಾನಾಗಿಯೇ ಅನಂತನ ಬಳಿಗೆ ಹರಿದು ಬಂತು.
ಇಷ್ಟೆಲ್ಲಾ ಜ್ಞಾನ, ಅಪಾರ ಧನ ಸಂಪಾದಿಸಿದ ಅನಂತನಿಗೆ ಇತ್ತೀಚೆಗೆ ತನ್ನ ಹಳ್ಳಿಯ, ಕಾಡಿನ, ಗುಡ್ಡಬೆಟ್ಟಗಳ, ಬಯಲಿನ ಕನಸು ಬೀಳಲಾರಂಭಿಸಿತು.
ಮೊದಲಿಗೆ ಹಿತವಾಗಿತ್ತು ಅದರೆ ಬರುಬರುತ್ತ ಕೆಟ್ಟ ಸಂಕಟ, ಹಿಂಸೆ ಎನಿಸಲು ಶುರುವಾಯಿತು. ನಾನಾ ಪಾಶಗಳು, ಸೆಳೆತಗಳು ತನ್ನನು ಬೆಂಗಳೂರಿನಲ್ಲಿ ಬಂಧಿಸಿವೆ ಅನಿಸುತ್ತಿತ್ತು. ಊರಲ್ಲೇ ಬದುಕು ಕಟ್ಟಿಕೊಳ್ಳಾಗದೇ ಬೆಂಗಳೂರಿಗೆ ಬಂದೇ ಎಂದು ಸಮಾಧಾಸಿಕೊಂಡರು, ಮರುಕ್ಷಣ ಅದು ಪೊಳ್ಳು ಎಂದೆನಿಸಿ ಬಿಡುತ್ತಿತ್ತು. ಹುಟ್ಟಿ ಬೆಳದ ಊರಲ್ಲಿ ಬದುಕು ಮತ್ತು ಅದಕ್ಕೊಂದು ಅರ್ಥ ಕಂಡುಕೊಳ್ಳಲಾಗದ ಕಾರಣ ಹೊಳೆಯದೇ ಕೆಲವೊಮ್ಮೆ ಕಂಗಲಾಗ ತೊಡಗಿದ. ಬೆಂಗಳೂರಿನ ಜಗಮಗಿಸುವ ಪ್ರಖರ ಬೆಳಕ್ಕಲ್ಲೂ ಎಷ್ಟೊಂದು ಎಷ್ಟೊಂದು ಕತ್ತಲು ಎಂದು ಚಡಪಡಿಸುತ್ತಿರುತ್ತಾನೆ.
~~~
ಪ್ರಿಯ ಓದುಗ, ಈ ಕತೆಗೆ ಅಂತ್ಯವಿಲ್ಲ. ಅನಂತ ತನ್ನೂರಿಗೆ ಮರಳಿದನೇ? ಇಲ್ಲವೇ? ಗೊತ್ತಿಲ್ಲ. ಆ ಪ್ರಶ್ನೆ ಅಷ್ಟೊಂದು ಮುಖ್ಯವೂ ಅಲ್ಲ. ಅದರೆ ಒಬ್ಬ ಅನಂತ ಹೊರಟರೆ ಈ ಬೆಂಗಳೂರೆಂಬ ಮಾಯಂಗನೆಯನ್ನ ತಬ್ಬಲು ನಿತ್ಯ ಸಾವಿರಾರು ಜನ ಮೋಹಿತರು ಹೊಸದಾಗಿ ಬರುತ್ತಾರೆ, ಬರುತ್ತಿದ್ದಾರೆ. ಈ ನಗರದ ಕದಂಬಬಾಹುಗಳು ಬೆಳೆಯುತ್ತಲೇ ಇವೆ, ನೀವು ಜೋಪಾನ, ಇದ್ದಲ್ಲೇ ಇರಿ!
***
ಬದುಕು ಬಂಗಾರವಾಯಿತು
-೧-
ಕತ್ತಲು ದಟ್ಟವಾಗಿ, ಟ್ರಾಫಿಕ್ ವಿರಳವಾಗುತ್ತಿದ್ದ ಹೊತ್ತು ಜಗಮಗಿಸುವ ಬೆಂಗಳೂರಿನೆದರು ಚುಕ್ಕಿ, ಚಂದ್ರಮರು ಮಂಕಾಗಿದ್ದರು. ಅವರಿಬ್ಬರು ಬೆಂಗಳೂರಿನ ಸಪ್ತ ತಾರಾ ಲೀಲಾ ಪ್ಯಾಲೇಸ್ ಹೋಟೆಲ್-ನಲ್ಲಿ ಡಿನ್ನರ್-ಗೆ ಸೇರಿದ್ದರು. ವೈಯಕ್ತಿಕ ಸಮಸ್ಯೆಗಳು, ಸಂಸಾರದ ತಾಪತ್ರಯಗಳು, ಕೊರಳ ಕತ್ತರಿಸುವಂತಹ ಸ್ಪರ್ಧಾತ್ಮಕ ಆಫೀಸ್ ವಾತಾವರಣವನ್ನು ಮೀರಿ ಅವರಿಬ್ಬರೂ ಸಾಫ್ಟ್ವೇರ್ ಕಂಪನಿಯಲ್ಲಿ ಉನ್ನತ ಮಟ್ಟಕ್ಕೆ ಬೆಳೆದಿದ್ದರು. ಅಂದು ಅವರಿಬ್ಬರ ವಾರ್ಷಿಕ ಅಪ್ಪ್ರೈಸಲ್(appraisal) ನಡೆದು ಫಲಿತಾಂಶ ಹೊರಬಿದ್ದಿತ್ತು. ಅದನ್ನು ಪರಸ್ಪರ ಗೌಪ್ಯವಾಗಿಟ್ಟು ಡಿನ್ನರ್ ಸಮಯದಲ್ಲಿ ಹಂಚಿಕೊಳ್ಳುವುದು ಎಂದು ಪೂರ್ವ ನಿರ್ಧರಿಸಲಾಗಿತ್ತು.
ಯುವ ದಂಪತಿಗಳು ತಮ್ಮ ಭಾವಗಳನ್ನು ಮುಚ್ಚಿಟ್ಟುಕೊಳ್ಳಲು ಕಸರತ್ತು ನಡೆಸಿದ್ದರು. ವಿದೇಶಿ ಶಾಂಪೇನ್, ವಿವಿಧ ಬಗೆಯ ಖಾಧ್ಯಗಳು ಅವರು ಕುಳಿತಿದ್ದ ಈಜುಕೊಳದ ಪಕ್ಕದ ಟೇಬಲ್-ಗೆ ಆಗಮಿಸಿದವು. ಸಂಭ್ರಮಾಚರಣೆಗೆ ಸಿದ್ಧರಾದವರು, ಮೊದಲು ನೀನು ಹೇಳು-ನೀನು ಹೇಳು ಎಂಬಂತೆ ಕಣ್ಣಿನಲ್ಲೇ ಸಂದೇಶ ರವಾನಿಸಿ ಕೊಂಡರು.
ಲೇಡೀಸ್ ಫಸ್ಟ್ ಎಂದು ಕೊಂಚ ಜಗ್ಗಾಡಿದವನು ಕೊನೆಗೆ ಗಂಡನೇ ಜಂಬದಿಂದ ಬಾಯಿಬಿಟ್ಟ “ನನ್ನ ರೇಟಿಂಗ್ ನಂಬರ್ 1… ನನಗೆ ಪ್ರಮೋಶನ್ ಕೊಟ್ಟು ಪೂಣೆಗೆ ಟ್ರಾನ್ಸ್ಫರ್ ಮಾಡಿದ್ದಾರೆ… ೬೫% ಸಂಬಳ ಹೆಚ್ಚಳ”. ಅವಳು ವೈನಾಗಿ ಶಾಂಪೇನ್ ತುಂಬಿದ ಗ್ಲಾಸ್ ಎತ್ತಿ ಬಿಂಕದಿಂದ ನುಡಿದಳು “ನನ್ನ ರೇಟಿಂಗ್ 1+, ನನಗೆ ಈ ಸಲ ಪ್ರಮೋಶನ್ ಇಲ್ಲ, ಆದರೆ ಯು.ಎಸ್ಸ್.ಎ ಕಳುಹಿಸುತ್ತಿದ್ದಾರೆ, ಡಾಲರ್ ಸಂಬಳ… ಮುಂದಿನ ಮೂರೇ ವಾರಕ್ಕೆ ಐ ಯಾಮ್ ಫ್ಲೈಯಿಂಗ್!”. ಇಬ್ಬರೂ ಹೆಮ್ಮೆಯಿಂದ ಪರಸ್ಪರ ನೋಡಿಕೊಳ್ಳುತ್ತಾ ಚಿಯರ್ಸ್ ಎಂದು ನುಡಿದು ಮಧುಪಾತ್ರೆಗೆ ತುಟಿ ಸೋಕಿಸಿದರು.
ಪ್ರಥಮ ಗುಟುಕಿನ ನಂತರ ಇಬ್ಬರಿಗೂ ತಮ್ಮ ಎಂಟು ತಿಂಗಳ ಮಗಳನ್ನು ಕ್ರೆಷ್-ನಿಂದ(crèche) ಕರೆದುಕೊಂಡು ಬರಲು ಮರೆತಿರುವುದು ನೆನಪಾಯಿತು. ಗಾಬರಿಯಾದ ಹೆಂಡತಿಯನ್ನು ಹೆಮ್ಮೆಯಿಂದ ಸಮಧಾನಿಸುತ್ತಾ, 24 X 7 ಫೆಸಿಲಿಟಿಯಿರುವುದನ್ನು ನೆನೆಪಿಸುತ್ತಾ ಕ್ರೆಷ್-ಗೆ ಫೋನ್ ಮಾಡಿ ಮಗಳನ್ನು ನಾಳೆ ಬೆಳೆಗ್ಗೆ ಪಿಕ್-ಅಪ್ ಮಾಡುವುದಾಗಿ ಹೇಳಿದ. ಗಂಡ-ಹೆಂಡತಿ ನಿರಾಳರಾಗಿ ಶಾಂಪೇನ್ ಸವಿಯುತ್ತಾ, ತಮ್ಮ ಭಾಗ್ಯವನ್ನು ಮನಸ್ಸಿನಲ್ಲೇ ಜಮಡುತ್ತ ನಿರಾಳರಾಗಿ ರಾತ್ರಿ ಊಟಕ್ಕೆ ಸಿದ್ಧರಾಗುತ್ತಿದ್ದರು.
-೨-
ನ್ಯೂಯಾರ್ಕ್-ನ ಬಿಸಿನೆಸ್ ಡಿಸ್ಟ್ರಿಕ್ಟ್-ನಲ್ಲಿಯ ವೈಭವಪೂರಿತ ಕಟ್ಟಡದ ತೊಂಬತ್ತೆಂಟನೇ ಮಹಡಿಯಲ್ಲಿನ ಕಾನ್ಫರೆನ್ಸೆ ರೂಮಿನಲ್ಲಿ ಪೀಟರ್ ಕ್ಲಾರ್ಕ್ ತನ್ನ ಹೊಸ ಆಫ್ ಶೋರ್ (Offshore) ಬಿಸಿನೆಸ್ ಮಾಡೆಲ್ ವಿವರಿಸುತ್ತಿರುವಾಗ ಆಂಡರ್ಸನ್ ಟೇಲರ್, ಆಗಲೇ ಐದುವರೆಯಾಯಿತು, ಮನೆಗೆ ಹೋಗುವುದು ತಡವಾಗುತ್ತಿದೆ, ತನ್ನ ಕೌಟುಂಬಿಕ ಜೀವನದ ಮೇಲೆ ಪರಿಣಾಮವಾಗುತ್ತದೆ ಎಂದು ಚಡಪಡಿಸುತ್ತಿದ್ದ.
***
ಮತ್ತೊಂದು ಕತೆ : ಪೇಪರ್ ಹುಡುಗ ಸಾವು
“ಎನೇ ನಿನ್ನೆ, ಮೊನ್ನೆ ಪೇಪರ್ ಯಾಕ್ ಹಾಕ್ಲಿಲ್ಲಂತೆ ಅವನು?” ಬೆಳೆಗ್ಗೆ ಅಸಹನೆಯಿಂದ ಕೇಳಿದ ಗಂಡ, ವರಾಂಡದಲ್ಲಿ ಶತಪಥ ತಿರುಗುತ್ತಾ.
“ಫೋನ್ ಮಾಡಿದ್ದೆ ಪೇಪರ್ ಹಾಕುತಿದ್ದ ಹುಡುಗ ಆಕ್ಸಿಡೆಂಟ್-ನಲ್ಲಿ ತೀರಿ ಹೋದನಂತೆ… ” ಎಂದಳು ಹೆಂಡತಿ ಬೆಳಗ್ಗಿನ ಕಾಫಿ ಬೆರೆಸುತ್ತಾ.
“ಮೊದಲು ಫೋನ್ ಮಾಡಿ ಬೇರೆ ಏಜನ್ಸಿ-ಗೆ ಪೇಪರ್ ಹಾಕಲು ಹೇಳು…” ಎಂದ ಗಂಡ ಬೆಳಗ್ಗಿನ ಕಾಫಿಯ ಘಮಲಿಗೆ ಮೂಗರಳಿಸುತ್ತಾ.
ಹೊರಗೆ ಹೊಸ ಹುಡುಗನಿಗೆ ಪೇಪರ್ ಏಜನ್ಸಿಯವ ಮನೆಗಳ ಪರಿಚಯ ಮಾಡಿಸುತ್ತಾ ನಡೆದಿದ್ದ. ಮಗ ತೀರಿದ ಸಂಕಟ ನಿನ್ನೆಯ ಪೇಪರ್-ನಂತೆ ಹಳತಾಯಿತ್ತು.








wonderfull
Superb…
ಒಂದಕ್ಕಿಂತ ಒಂದು ಚಂದ… ಮುಗಿಯಲಾರದ ಕಥೆಗಳನ್ನ ಮನಸ್ಸಿಗೆ ಇಳಿಸಿದ್ದೀರಿ, ಧನ್ಯವಾದ…
ಸಖತ್ ಆಗಿವೆ ಸರ್ ಕಥೆಗಳು …….. ನಾನಿಲ್ಲೇ ಇದ್ದೀನಿ ಎಂಬುದೇ ನನ್ನ ಸಮಾಧಾನ ……. ನಮ್ಮೂರಿಗೆ ಹತ್ತಿರದಲ್ಲೇ…… (Y)
kathegalu thumba chennagide continue madi
Super sir
🙂
ತುಂಬಾ ಚೆನ್ನಾಗಿವೆ
ಕಥೆಗಳು ತುಂಬಾ ಚೆನ್ನಾಗಿವೆ. ದೊಡ್ಡ ದೊಡ್ಡ ಕತೆಗಳನ್ನು ಓದುವ ಪುರುಸೊತ್ತು ಯಾರಿಗಿದೆ? ಮೊನ್ನೆ ಮೊನ್ನೆ ಬಿಡುಗಡೆಯಾದ ಕಮಲಾದಾಸರ ಕೆ ಕೆ ಗಂಗಾಧರನ್ ಅನುವಾದಿಸಿದ ಇದೆ ತರಹದ ಕತೆಗಳನ್ನು ಓದಿದೆ. ಇಂತಹ ಕಥೆಗಳು ಕನ್ನಡದಲ್ಲೂ ಬರಬೇಕೆಂದು ಬಯಸಿದೆ. ಆಧುನಿಕ ಬದುಕಿನ ಅನುಭವಗಳನ್ನು ವ್ಯಂಗ್ಯ ಹಾಗೂ ವಿಷಾದದಿಂದ ಚಿತ್ರಿಸಲಾಗಿವೆ. ಅಭಿನಂದನೆಗಳು. ಉದಯಕುಮಾರ ಹಬ್ಬು
ಚೆನ್ನಾಗಿವೆ.