-1-
ಯಾವಾಗಲೂ ಮಗಳನ್ನು ಸ್ಕೂಲ್ ವ್ಯಾನ್ ಹತ್ತಿಸಿ ಬಂದ ತಕ್ಷಣ ಸ್ನಾನಕ್ಕೆ ಹೊರಡುವ ಇವಳು ಇನ್ನೂ ಪೇಪರ್ ಓದುತ್ತಲೇ ಇದ್ದಾಳೆ. ಅವಳು ತಡ ಮಾಡುತ್ತಿರೋದು ನೋಡಿ ಅವನಿಗೆ ಯಾಕೋ ತಹತಹ. `ಹೇ, ಗಂಟೆ ನೋಡು ಎಂಟೂವರೆ. ಸ್ನಾನಕ್ಕೆ ಹೋಗ್ತೇನೆ ಅಂದಿ, ಪೇಪರ್ ಓದ್ತಾ ಕೂತಿದ್ಯಲ್ಲಾ? ಲೇಟ್ ಆಗಲ್ವಾ ಆಫೀಸ್ಗೆ?’
`ಹೂಂ, ಹೊರಟೆ ಹೊರಟೆ’ ಅಂದವಳಿಗೆ ಹೋಗಲು ಮನಸ್ಸು ಬರುತ್ತಿಲ್ಲ. ಐದು ನಿಮಿಷದ ಹಿಂದೆ ಅವನಿಗೊಂದು ಕಾಲ್ ಬಂದಾಗ `ಹತ್ತು ನಿಮಿಷದಲ್ಲಿ ಹೇಳ್ತೇನೆ’ ಅಂದ ಹಾಗಿತ್ತು, ಅವಳದೇ ಕಾಲ್ ಇರಬೇಕು. ಅವಳಿಗೆ ಹತ್ತು ನಿಮಿಷದಲ್ಲಿ ಹೇಳೋ ಉತ್ತರಕ್ಕೂ ನಾನು ಸ್ನಾನಕ್ಕೆ ಹೋಗೋದಕ್ಕೂ ಏನೋ ಸಂಬಂಧವಿದೆ. ನಾನಿಲ್ಲದಿರುವಾಗ ಅವನೇನು ಮಾಡಬೇಕಿದೆ? ಪೇಪರ್ ಹಿಡಿದುಕೊಂಡು ತಲೆ ಕೆಡಿಸಿಕೊಂಡಿದ್ದಳು ಅವಳು. ಅವನು ಮತ್ತೆ ಮತ್ತೆ ಸಮಯವನ್ನು ಎಚ್ಚರಿಸತೊಡಗಿದ… ಹೇಳಿಸಿಕೊಂಡು ಸಾಕಾಗಿ ಇವಳು ಕೊನೆಗೂ ಬಾತ್ರೂಮ್ ಪ್ರವೇಶಿಸಿದಳು.
ಬಾತ್ರೂಮ್ ಒಳ ಹೊಕ್ಕು ಬಕೆಟ್ಗೆ ನೀರೆತ್ತಿ ಹಾಕಿ ಸ್ನಾನಕ್ಕೆ ಶುರುವಿಟ್ಟ ಸದ್ದು ಮಾಡಿದಳು. ಅಷ್ಟರಲ್ಲಿ, ಅವನು ಮತ್ತೆ ಯಾರ ಜತೆಯೋ ಮಾತಾಡಿದಂತೆ ಭಾಸ. ಫೋನಲ್ಲಾ ಅಥವಾ ನನಗೇ ಏನೋ ಹೇಳಿದನಾ… ಅವಳಿಗೇ ಮತ್ತೆ ಫೋನ್ ಮಾಡುತ್ತಿರಬೇಕು. ಏನದು ಸೀಕ್ರೆಟ್, ಆಲಿಸಿದಳು. ಊಹೂಂ, ಏನೂ ಕೇಳಲಿಲ್ಲ. ಆಫೀಸಿಗೆ ಲೇಟಾಗುತ್ತೆ ಅಂತ ನೆನಪಾಯ್ತು, ನೀರು ಸುರುವಿಕೊಂಡಳು. ಟ್ಯಾಪ್ ಬಿಟ್ಟಳು. ಕಣ್ಣೂ ಹನಿಯಿತು.

-2-
`ಏನದು ಹೇಳು, ಅದ್ರ ಮುಂದಿನ ಲೈನ್ ಹೇಳು…’ ಮೊಬೈಲ್ ಕೈಲಿ ಹಿಡಿದು ಮೆಸೇಜು ಟೈಪಿಸುತ್ತಿದ್ದ ಅವನು ಇವಳ ಬಳಿ ಆ ಹಾಡಿನ ಲೈನ್ ಹೇಳಿಸುತ್ತಿದ್ದ.
`ಸ್ವಾತಿಯ ಹಾಗಿದೆ ಕಣ್ಣೀರು, ನಾಳೆ ಮುತ್ತಾಗಿ ಬರುತವೆ ಸುಮ್ಮನಿರು’ ಇವಳೂ ಗುನುಗುನಿಸುತ್ತಾ ಹೇಳುತ್ತ ಹೋದಳು. ಅವನು ಟೈಪಿಸಿ ಮೆಸೇಜು ಕಳಿಸುತ್ತಾ ಹೋದ. ಹಾಡು ಹೇಳುತ್ತಿದ್ದ ಇವಳೊಳಗೆ ಸಂದೇಹ, ಇವನು ಈ ಹಾಡನ್ನು ಮೆಸೇಜಿಸಿ ಸಂತೈಸುತ್ತಿರೋದು ಯಾರನ್ನು?
ಇವಳ ಹೊಟ್ಟೆಯೊಳಗೆ ಸಂಕಟ ಭುಗಿಲೆದ್ದಿತು. ಫೇಸ್ಬುಕ್ ಆನ್ ಮಾಡಿಕೊಂಡು ತನ್ನ ಪಾಡಿಗಿದ್ದ ಯಾವನನ್ನೋ ಚಾಟ್ಗೆಳೆದು ಕೂತಳು.
ಈಗ ಇವನೊಳಗೆ ಶಂಕೆ. `ಈ ಮಧ್ಯರಾತ್ರಿ ಯಾರವರು ಇವಳ ಜತೆ ಚಾಟ್ಗೆ ಸಿಕ್ಕೋರು?’ ಚಿಂತೆ ಹತ್ತಿತು. ಮೊಬೈಲ್ ಪಕ್ಕಕ್ಕಿಟ್ಟು, `ಬಾರೇ, ಮಲ್ಕೊಳ್ಳೋಣ’ ಅಂದ. ಅವಳೂ ಎಲ್ಲ ಆಫ್ ಮಾಡಿ ಬಂದಳು.
ಅಂತೂ ಒಂದಿರುಳು ಮರುಳಾಗಿ ಮಲಗಿತು.






Very nice mam…
abbha……………
soooper vidyarashmi
very interesting, beautiful and short and sweet meaning full story
super
ಸ್ವಾತಿಯ ಹಾಗಿರುವ ಕಣ್ಣೀರ ಕಥೆ ಅದ್ಬುತವಾಗಿಧೆ
Very true…happening story
short but intense….. narration….Rashmi…
Gd story!
Thanks all
very interesting, beautiful and short and sweet meaning full story continue your writting
Madame,
iduvarage namminda kathe baresuttidda nimage, nimma magu kathe baresuttiruvudu chennagiye aaytu.