ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಠ್ಠಲಮೂರ್ತಿ ಹೇಳಿದ ಜೆ ಎಚ್ ಪಟೇಲ್ ಕಥೆ

ಆಪರೇಷನ್ ಸ್ಯಾಂಡಲ್ ಫಾಕ್ಸ್ ಜತೆ
ಪಟೇಲರು ಹೇಳಿದ ಅದ್ಭುತ ಕತೆ

R T Vittal Murthy

ಆರ್ ಟಿ ವಿಠ್ಠಲಮೂರ್ತಿ

ಅವನ್ಯಾವೂರ ಜಗದ್ಗುರು ಕಣ್ರೀ ಪ್ರಕಾಶ್ ? ನನ್ನನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಉಳಿಸಲು ಅವುನ್ಯಾರು? ಅರಿಷಡ್ವರ್ಗಗಳನ್ನು ಮೀರಿದವರು ಜಗದ್ಗುರು. ನನ್ನನ್ನು ಸಿಎಂ ಪಟ್ಟದಲ್ಲಿ ಉಳಿಸುತ್ತೇನೆ. ಬಂದು ನನ್ನನ್ನು ನೋಡಿ ಎನ್ನುತ್ತಾನಲ್ಲ? ಎಂದವರು ರೇಗಿದರು.

ಎದುರುಗಡೆ ಕೂತಿದ್ದ ನಾನು ಕಮಕ್ಕಿಮಕ್ಕೆನ್ನದೆ ಕುಳಿತೆ. ಒಂದೆರಡು ನಿಮಿಷ. ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಎಂ.ಪಿ.ಪ್ರಕಾಶ್ ಬಳಿ ಫೋನಿನಲ್ಲಿ ಈ ರೀತಿ ರೇಗಿದ ಅವರು ನನ್ನ ಕಡೆ ನೋಡಿ ನಕ್ಕರು. ಅವರ ಹೆಸರು ಜೆ.ಹೆಚ್.ಪಟೇಲ್.

ಅವತ್ತು ಅವರು ಕರ್ನಾಟಕದ ಮುಖ್ಯಮಂತ್ರಿ. ಹೀಗೆ ಫೋನಿಟ್ಟು ಅವರು, ನನ್ನ ಕಡೆ ತಿರುಗಿ ನೋಡಿದಾಗ ನಾನು ಉಗುಳು ನುಂಗಿಕೊಳ್ಳುತ್ತಾ ಪೆಚ್ಚು ನಗೆ ನಕ್ಕೆ. ಮನಸ್ಸು ಕದಡಿದಾಗ ಯಾರೇ ಆಗಲಿ. ಮಾತನಾಡುವುದು ಕಷ್ಟ ಅಂತ ನನ್ನ ಮನಸ್ಸು ಹೇಳುತ್ತಿತ್ತು.

saffronಆದರೆ ಪಟೇಲರು ಸ್ವಲ್ಪವೂ ವಿಚಲಿತರಾಗಿರಲಿಲ್ಲ. ಹೀಗಾಗಿಯೇ ಫೋನು ರಿಸೀವರ್ ಮೇಲಿಟ್ಟವರೇ ನನ್ನ ಕಡೆ ನೋಡಿ, ಅವುನ್ಯಾವುನೋ ಸ್ವಾಮಿ ಅಂತೆ. ಆರ್.ಟಿ.ನಗರದಲ್ಲಿರುವ ಅವರ ಮಠಕ್ಕೆ ಹೋದರೆ ನನ್ನ ವಿರುದ್ಧದ ಬಂಡಾಯವನ್ನು ಶಮನಗೊಳಿಸುತ್ತಾನಂತೆ ಎಂದರು.
ಆಗಲೂ ನಾನು ಸುಮ್ಮನೆ ನಕ್ಕೆ. ಅವರು ಮಾತನಾಡುತ್ತಾ ಹೋದರು. ವಿಠ್ಠಲಮೂರ್ತಿ. ತುಂಬ ಜನ ಪೆದ್ದರಿಗೆ ಒಂದು ವಿಷಯ ಗೊತ್ತಿರುವುದಿಲ್ಲ. ನಾನು ಈ ಜಾಗಕ್ಕೆ ಬಂದು ಕೂರಬೇಕು ಎಂಬುದು ಪ್ರಕೃತಿಯ ಇಚ್ಚೆ. ಮುಖ್ಯಮಂತ್ರಿಯಾದೆ. ಇಳಿಯಬೇಕು ಎಂದು ಅದು ಬಯಸಿದಾಗ ನಾನು ಇಳಿಯುತ್ತೇನೆ. ಅಂದ ಹಾಗೆ ಈ ಪ್ರಕೃತಿಯ ರೂಪವೇನು ಗೊತ್ತಾ? ಯೂ ಆರ್ ಅನ್ ಇಮ್ಯಾಜಿನಬಲ್ ಎಂದರು.

ಕೆಲವರು ಇದನ್ನು ದೇವರು ಎನ್ನಬಹುದು. ಕೆಲವರು ಇದಕ್ಕೆ ರೂಪ ಕೊಡಬಹುದು. ಆದರೆ ನಾನು ಇದ್ಯಾವುದನ್ನೂ ನಂಬುವುದಿಲ್ಲ ವಿಠ್ಠಲಮೂರ್ತಿ. ಪ್ರಕೃತಿಗೆ ತನ್ನದೇ ಆದ ಉದ್ದೇಶಗಳಿರುತ್ತವೆ. ನೀವು ಬಯಸಿ. ಬಯಸದೇ ಇರಿ. ತನಗೆ ಬೇಕಾದಂತೆ ಅದು ನಮ್ಮನ್ನು ಎಳೆದುಕೊಂಡು ಹೋಗುತ್ತದೆ ಎಂದರು ಪಟೇಲ್
ನಿಮಗೆ ಗೊತ್ತಾ? ಭೂಮಿಯೂ ಸೇರಿದಂತೆ ಈ ಜಗತ್ತಿನಲ್ಲಿ ನಮ್ಮ ಕಣ್ಣಿಗೆ ಬಿದ್ದಿರುವುದು ಕೇವಲ ಏಳು ಪರ್ಸೆಂಟು ಮಾತ್ರ. ಇನ್ನುಳಿದ ತೊಂಭತ್ಮೂರು ಪರ್ಸೆಂಟನ್ನು ನಾವು ನೋಡಲು ಸಾಧ್ಯವಾಗಿಲ್ಲ. ಅದೆಲ್ಲ ಬ್ಲಾಕ್ ಹೋಲ್ಸ್ ಇರಬಹುದು ಎಂದು ನಾಸಾದ ವಿಜ್ಞಾನಿಗಳು ಹೇಳುತ್ತಾರೆ. ಈ ಬ್ಲಾಕ್ ಹೋಲ್ಸ್ ನ ಕೆಲಸವೆಂದರೆ ಈ ವಿಶ್ವದಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ರೆಕಾರ್ಡ್ ಮಾಡಿಕೊಳ್ಳುವುದು.

ಇವತ್ತು ವಿಮಾನಗಳಲ್ಲೆಲ್ಲ ಬ್ಲಾಕ್ ಬಾಕ್ಸ್ ಅಳವಡಿಸಿರುವುದನ್ನು ನಾವು ಕೇಳಿರುತ್ತೇವಲ್ಲ? ಅದಕ್ಕೆ ಈ ಬ್ಲ್ಯಾಕ್ ಹೋಲ್ ಗಳೇ ಮೂಲ ಪ್ರೇರಣೆ. ವಾಸ್ತವವಾಗಿ ಅವು ಕಪ್ಪಗಿರುವುದಿಲ್ಲ. ಬದಲಿಗೆ ಆರೆಂಜ್ ಕಲರ್ ನವಾಗಿರುತ್ತವೆ. ಆ ಮಾತು ಬೇರೆ. ಆದರೆ ಬ್ಲ್ಯಾಕ್ ಬಾಕ್ಸ್ ನ ಕಲ್ಪನೆ ನಮಗೆ ದಕ್ಕಿದ್ದು ಬ್ಲ್ಯಾಕ್ ಹೋಲ್ ಗಳಿಂದ.
ಮೀನ್ಸ್ ಈ ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿದ್ಯಮಾನಗಳನ್ನು ದಾಖಲಿಸಿಕೊಳ್ಳುವ ಕೆಲಸ ಪ್ರಕೃತಿಯಿಂದ ನಡೆಯುತ್ತಿದೆ. ಇದನ್ನೇ ನಾವು ತುಂಬ ಸಲ ಹೇಳುವುದು. ನ್ಯಾಯ-ಅನ್ಯಾಯವನ್ನು ದೇವರು ನೋಡಿಕೊಳ್ಳುತ್ತಾನೆ ಅಂತ.

ಹಾಗಂತ ದೇವರಿಗೆ ಒಂದು ರೂಪ ಅಂತಿದೆ ಎಂಬುದನ್ನು ನಾನು ನಂಬುವುದಿಲ್ಲ. ಥರ್ಟಿ-ಪಾರ್ಟಿ ಸೈಟಿನಲ್ಲೋ, ಸಿಕ್ಸ್ ಟೀ-ಫಾರ್ಟಿ ಸೈಟಿನಲ್ಲೋ ಅಥವಾ ಎಕರೆಗಟ್ಟಲೆ ಜಾಗದಲ್ಲಿ ನೀವೊಂದು ದೇವಸ್ಥಾನ ಕಟ್ಟಿಸಿ,ದೇವರಿರುವುದು ಇಲ್ಲೇ ಎಂದು ಹೇಳಿದರೆ ಐ ಕಾಂಟ್ ಬಿಲೀವ್. ಬೇಸಿಕಲಿ. ನಾನು ಕಣಾದನ ವಾದವನ್ನು ಒಪ್ಪುತ್ತೇನೆ. ಈ ಜಗತ್ತು ನಡೆಯುತ್ತಿರುವುದೇ ಕಣಗಳಿಂದ.  ಈ ಕಣಗಳೇ ದೇವರು ಎಂದು ಆತ ಹೇಳುತ್ತಾನೆ. ಅಂದರೆ ಇಟ್ಸ್ ಏ ಆಟಮಿಕ್ ಪವರ್ ಅಂತ ನನಗನ್ನಿಸುತ್ತದೆ. ಮತ್ತದನ್ನು ನಾನು ನಂಬುತ್ತೇನೆ. ಹೀಗಿರುವಾಗ ಈ ಪ್ರಕೃತಿ ಬಯಸುವಂತೆ ನಾವು ಬದುಕಬೇಕು ವಿಠ್ಠಲಮೂರ್ತಿ. ಅದರ ಇಚ್ಚೆ ಡಿಫರೆಂಟ್. ಹೀಗಾಗಿ ನಾವು ಎಲ್ಲ ವ್ಯಕ್ತಿಗಳೂ ಡಿಫರೆಂಟ್ ಎಂದರು ಪಟೇಲ್.

pulling the strings 1ನಾನು ಕೂಡಾ ಅವರ ಮಾತಿಗೆ ಪುಷ್ಟಿ ನೀಡುವಂತೆ ,ನೀವು ಹೇಳಿದ್ದು ಸರಿಯಾಗಿದೆ ಅಂತ ನನಗೂ ಅನ್ನಿಸುತ್ತಿದೆ ಸಾರ್ ಎಂದೆ. ಅದಕ್ಕವರು ನಕ್ಕು, ವಿಠ್ಠಲಮೂರ್ತಿ, ಈ ಪ್ರಪಂಚದ ಬಗ್ಗೆ ಅರಿವಿಲ್ಲದವರು, ದುಡ್ಡು ಮಾಡಲೆಂದೇ ಟೊಂಕ ಕಟ್ಟಿ ನಿಂತವರು ನನ್ನನ್ನು ಸಿಎಂ ಪೋಸ್ಟಿನಲ್ಲಿ ಉಳಿಸುತ್ತೇನೆ ಎಂದರೆ ನಾನು ನಗಬೇಕೋ? ಅಳಬೇಕೋ? ಎಂದರು.

ನಾನು ಒಂದು ಪ್ರಶ್ನೆಯನ್ನು ಕೇಳಿದೆ. ಸಾರ್, ಒಂದು ಹಂತಕ್ಕೆ ತಲುಪಿದ ಮೇಲೆ ಮನುಷ್ಯನಿಗೆ ನಿರಾಸಕ್ತಿ ಶುರುವಾಗುತ್ತದೆ. ಆದರೆ ನೀವು ಎಲ್ಲ ವಿಷಯಗಳಲ್ಲೂ ಕ್ರಿಯಾಶೀಲ. ಅನುಭವಿಸುವ ವಿಷಯದಲ್ಲಿ ನೀವು ಬದುಕನ್ನು ನೋಡುವ ರೀತಿಯೇ ವಿಶಿಷ್ಟ ಅನ್ನಿಸುತ್ತದೆ ಎಂದೆ.

ಅದಕ್ಕವರು ಸುಂದರವಾದ ಒಂದು ಕತೆ ಹೇಳಿದರು. ವಿಠ್ಠಲಮೂರ್ತಿ. ಈ ದೇಶ ಕಂಡ ಅಪೂರ್ವ ಲೇಖಕ ರವೀಂದ್ರನಾಥ ಟಾಗೋರ್ ರ ಬದುಕಿನಲ್ಲಿ ನಡೆದ ಒಂದು ಕತೆಯಿದೆ. ಯೌವನದಲ್ಲಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದ ಕತೆ ಅದು ಎಂದರು. ನಾನು ಕುತೂಹಲದಿಂದ ಕಿವಿ ಅಗಲಿಸಿ ಕುಳಿತೆ. ಅವರು ಹೇಳುತ್ತಾ ಹೋದರು. ಒಂದು ಸಲ ರವೀಂದ್ರನಾಥ ಟ್ಯಾಗೋರ್ ರ ಅವರ ಶಾಂತಿ ನಿಕೇತನಕ್ಕೆ ಗಾಂಧೀಜಿ ಹೋಗುತ್ತಾರೆ. ಗಾಂಧಿ ಬಗ್ಗೆ ನಿಮಗೆ ಗೊತ್ತು. ತುಂಬ ದೊಡ್ಡ ಮನುಷ್ಯ. ಅವರಿಗೂ ರವೀಂದ್ರನಾಥ್ ಟ್ಯಾಗೋರ್ ಮಧ್ಯೆ ಅಪ್ರತಿಮ ಆತ್ಮೀಯತೆ ಇರುತ್ತದೆ. ಖುದ್ದು ಗಾಂಧಿಯೇ, ರವೀಂದ್ರನಾಥ್ ಟ್ಯಾಗೋರ್ ಅವರನ್ನು ಗುರುದೇವಾ ಎಂದು ಸಂಭೋಧಿಸುತ್ತಿರುತ್ತಾರೆ.

ಸರಿ, ಗಾಂಧಿ ಈ ರೀತಿ ಶಾಂತಿ ನಿಕೇತನಕ್ಕೆ ಹೋದರು. ಮರುದಿನ ಬೆಳಿಗ್ಗೆ ಇಬ್ಬರೂ ವಾಯುವಿಹಾರಕ್ಕೆ ಹೋಗಬೇಕು. ಗಾಂಧೀಜಿ ಸಟ್ಟಂತ ರೆಡಿಯಾದರು. ಆದರೆ ರವೀಂದ್ರನಾಥ್ ಟ್ಯಾಗೋರರು ಐದು ನಿಮಿಷ್ಟ ತಡವಾಗಿ ಹೊರಬಂದರು. ನೋಡಿದರೆ ಟ್ಯಾಗೋರ್ ಶುಭ್ರ ಶ್ವೇತ ವಸ್ತ್ರಧಾರಿ. ಗಾಂಧಿಗೆ ಅದರ ಅಗತ್ಯವೇ ಇರಲಿಲ್ಲ. ಹಾಕಿಕೊಂಡ ಲಂಗೋಟಿಯಲ್ಲೇ ಅವರು ರೆಡಿಯಾಗಿದ್ದರು. ಆದರೆ ಟ್ಯಾಗೋರರ ವೇಷ ನೋಡಿ ಗಾಂಧೀಜಿಗೆ ಅಚ್ಚರಿ. ಹಾಗಂತಲೇ ಕೇಳಿದರು. ಗುರುದೇವ,ಇದು ಬೆಳ್ಳಂ ಬೆಳಗಿನ ಜಾವ. ಇಷ್ಟು ಹೊತ್ತಿಗೆ ವಾಯುವಿಹಾರ ಮಾಡಲೂ ನೀವು ಇಷ್ಟೊಂದು ಅಚ್ಚುಕಟ್ಟಾಗಿ ಬಟ್ಟೆ ಹಾಕಿಕೊಂಡು ಬರುವ ಅಗತ್ಯವಿದೆಯೇ?

vittal murthy with shivarajಗಾಂಧೀಜಿಯ ಮಾತು ಕೇಳಿ ರವೀಂದ್ರನಾಥ್ ಟ್ಯಾಗೋರರು ತಣ್ಣಗೆ ನಕ್ಕರು. ಇದೆ ಮಹಾತ್ಮ, ನಾನು ಹೀಗೆ ಮೈ ತುಂಬ,ಅಚ್ಚುಕಟ್ಟಾದ ಬಟ್ಟೆಗಳನ್ನು ಹಾಕುವ ಅಗತ್ಯವಿದೆ. ಆದರೆ ಗಮನಿಸಿ ನೋಡಿ. ನಾನು ಹಾಕಿಕೊಂಡ ಬಟ್ಟೆಗಳ್ಯಾವುವೂ ಭಾರೀ ವೆಚ್ಚದ ಬಟ್ಟೆಗಳಲ್ಲ. ಶುಭ್ರ ಬಟ್ಟೆಗಳು ಅಷ್ಟೇ ಎಂದರು.

ಅದೇನೋ ಸರಿ. ಆದರೆ ವಾಯುವಿಹಾರಕ್ಕೂ ನೀವು ಮೈ ತುಂಬ ಶುಭ್ರವಾದ ಬಟ್ಟೆ ಹಾಕಿಕೊಂಡು ಬರಲು ಕಾರಣವೇನು ಗುರುದೇವ? ಅಂತ ಪ್ರಶ್ನಿಸಿದರು ಗಾಂಧಿ. ಆಗ ಟ್ಯಾಗೋರ್ ಹೇಳಿದರು: ಮಹಾತ್ಮಾ, ಮನುಷ್ಯ ಕೂಡಾ ಪ್ರಕೃತಿಯ ಭಾಗ. ನೋಡುವವರಲ್ಲಿ ಪ್ರಕೃತಿ ಉತ್ಸಾಹ ತುಂಬುವಂತಿರಬೇಕು. ನನ್ನನ್ನು ಯಾರಾದರೂ ನೋಡಿದರೆ, ವ್ಹಾ ಎಷ್ಟು ಶುಭ್ರ, ಸುಂದರ ಅನ್ನಿಸಬೇಕು. ಆಗ ಆತನ ಮನಸ್ಸಿಗೆ ನೆಮ್ಮದಿಯಾಗುತ್ತದೆ ಎಂದರು.

ಈ ಕತೆ ವಿವರಿಸಿದ ಪಟೇಲ್ ಕೇಳಿದರು: ಈಗ ನೀವೇ ಹೇಳಿ. ಗಾಂಧೀಜಿಯ ವಸ್ತ್ರ ಸಂಹಿತೆ ಸರಿಯೋ? ಟ್ಯಾಗೋರರ ನಡೆ ಸರಿಯೋ?. ಎರಡೂ ಸರಿ ಎನ್ನಿಸುತ್ತದೆ ಸಾರ್ ಎಂದೆ. ಮತ್ತೆ ಪಟೇಲ್ ನಕ್ಕರು. ನಿಜ, ಗಾಂಧೀಜಿ ಹಾಗೂ ಟ್ಯಾಗೋರರ ದೃಷ್ಟಿಕೋನಗಳೆರಡೂ ಸರಿ. ಉದ್ದೇಶಗಳೂ ಸರಿ. ಸಹಜವಾಗಿ ನನಗೆ ಟ್ಯಾಗೋರರ ಮಾತು ತುಂಬ ಇಂಪ್ರೆಸ್ ಮಾಡಿತು ವಿಠ್ಠಲಮೂರ್ತಿ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರಿಗೆ ಖುಷಿಯಾಗಬೇಕು. ಯಾಕೆಂದರೆ ನಾನೂ ಪ್ರಕೃತಿಯ ಭಾಗ ಎಂದುಕೊಂಡೆ.

ಯಾವಾಗ ಇದು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿತೋ? ಆಗ ಅದೇ ರೀತಿ ಬದುಕುವುದು ಪ್ರಾಕ್ಟೀಸ್ ಆಯಿತು. ಯಾವುದೇ ವಿಷಯದ ಕುರಿತು ಇದ್ದುದನ್ನು ಇದ್ದಂತೆ ಹೇಳುವುದು ರೂಢಿಯಾಯಿತು. ಸುಳ್ಳು ಹೇಳಿದರೆ ನೀವು ನಿದ್ರೆ ಕಳೆದುಕೊಳ್ಳುತ್ತೀರಿ. ಇದುವರೆಗೆ ಈ ಸೀಟು ಉರುಳಿಸಲು ಏನೇ ಪ್ರಯತ್ನ ನಡೆದರೂ ನಾನು ಒಂದು ದಿನವೂ ನಿದ್ದೆಗೆಟ್ಟಿಲ್ಲ. ಡು ಯೂ ಬಿಲೀವ್ ಇಟ್ ಎಂದರು ಪಟೇಲ್. ನಾನು ಹೆಚ್ಚು ಮಾತನಾಡಲಿಲ್ಲ.

samiullaಇದೆಲ್ಲ ಏಕೆ ನೆನಪಿಗೆ ಬಂತೆಂದರೆ, ಪಟೇಲರ ಜತೆ ಹೀಗೆ ನೇರವಾಗಿ ಮಾತನಾಡಿ ರಪ ರಪ ಅಂತ ಸುದ್ದಿಯನ್ನು, ಸ್ಟೋರಿಯನ್ನು ಬಾಚಿಕೊಳ್ಳುತ್ತಿದ್ದವರು ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ. ಮೊನ್ನೆ ನಾನು, ಶಿವರಾಜು, ಎ.ಹೆಚ್.ಆನಂದ್, ಚಂದ್ರಶೇಖರ್ ಎಲ್ಲ ಊಟಕ್ಕೆ ಅಂತ ಬೌರಿಂಗ್ ಇನ್ಸ್ ಟಿಟ್ಯೂಟ್ ನಲ್ಲಿ ಸೇರಿಕೊಂಡಿದ್ದೆವು.

ಅಪರೂಪಕ್ಕೆ ಅಂತ ಸೇರಿದರೂ ನಾವೆಲ್ಲ ತುಂಬ ಮಾತನಾಡಿಕೊಳ್ಳುತ್ತೇವೆ. ಹಳೆಯದನ್ನು ನೆನೆಸಿಕೊಂಡು ತುಂಬು ಹೊಳೆಯಲ್ಲಿ ಮೀಯುವಂತೆ.. ಆ ದಿನಗಳಲ್ಲಿ ಮೀಯುತ್ತೇವೆ. ಅಂದ ಹಾಗೆ ದಶಕಗಳ ಹಿಂದೆ, ಕುಖ್ಯಾತ ನರಹಂತಕ ವೀರಪ್ಪನ್ ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ಎಂಬ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಸ್ಟೋಟಕ ವಿವರವನ್ನು ಹೊರತೆಗೆದವರು ಸಮೀವುಲ್ಲಾ. ಅವತ್ತು ಹಿರಿಯ ವರದಿಗಾರರೊಬ್ಬರು, ವೀರಪ್ಪನ್ ವಿರುದ್ಧ ಯಾವುದೋ ಕಾರ್ಯಾಚರಣೆ ನಡೆಯುತ್ತಿದೆಯಂತೆ ಎಂದು ಹೇಳಿದಾಗ, ಶಿವರಾಜು ಅದನ್ನು ಸಮೀವುಲ್ಲಾ ಅವರಿಗೆ ಹೇಳಿದ್ದ. ಅದಕ್ಕವರು ಹೊಸೂರಿನಲ್ಲಿದ್ದ ತಮ್ಮ ಆತ್ಮೀಯರೊಬ್ಬರ ಜತೆ ಮಾತನಾಡಿ, ತಮಿಳ್ನಾಡಿನ ಖ್ಯಾತ ಪೋಲೀಸ್ ಅಧಿಕಾರಿ ಕಾಳಿಮುತ್ತು ಅವರ ನಂಬರು ಪಡೆದಿದ್ದರು.

ಹೀಗೆ ಫೋನ್ ನಂಬರು ಪಡೆದವರು ಕಾಳಿಮುತ್ತು ಅವರ ಜತೆ ಮಾತನಾಡಿದರು. ಆಗ ತಮಿಳ್ನಾಡು ಸರ್ಕಾರದ ಸೂಚನೆಯ ಅನುಸಾರ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ನಡೆಸುತ್ತಿದ್ದ ಪಡೆಯ ಫ್ರಂಟ್ ಲೈನಿನಲ್ಲಿದ್ದವರು ಕಾಳಿಮುತ್ತು. ಸರಿ,ಸಮೀವುಲ್ಲಾ ಅವರು ಕಾಳಿಮುತ್ತು ಜತೆ ಮಾತನಾಡಿದರು. ಅದಕ್ಕವರು ಯೆಸ್. ನೀವು ಹೇಳಿದ್ದು ನಿಜ. ವೀರಪ್ಪನ್ ಗಂಧಚೋರ. ಹಾಗೆಯೇ ನರಿಯಂತಹ ಗುಣವುಳ್ಳವನು. ಅದಕ್ಕಾಗಿಯೇ ಅವನ ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸರಿ, ನಾವೆಲ್ಲ ಈ ಸ್ಟೋರಿಯನ್ನು ಬರೆದೆವು. ಮರುದಿನ ಅದು ಹಿಟ್ ಸ್ಟೋರಿ. ಆದರೆ ಸ್ಟೋರಿ ಈ ರೀತಿ ಹಿಟ್ ಆಗಿದ್ದನ್ನು ನೋಡಿ ಕೆಲವರಿಗೆ ಸಂಕಟ ಶುರುವಾಯಿತು. ಹಾಗಂತಲೇ ಇಂತಹ ಕಾರ್ಯಾಚರಣೆಯೇ ನಡೆಯುತ್ತಿಲ್ಲ ಎಂದು ಆಗಿನ ಅರಣ್ಯ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರ ಬಳಿ ಬಹಿರಂಗವಾಗಿ ಹೇಳಿಸಲು ಹೊರಟರು.

vittal murthy samiulla shivarajಅರೇ,ನಾವೇನು ಸುಳ್ಳು ಬರೆದಿದ್ದೀವಾ? ಅಥವಾ ಕಾರ್ಯಾಚರಣೆ ಮಾಡುವವರು ಬಹಿರಂಗವಾಗಿ ಹೇಳಿ ಮಾಡುತ್ತಾರಾ? ಬನ್ನಿ, ನಾಗಮಾರಪಲ್ಲಿ ಅವರ ಬಳಿ ನಾವು ಹೋಗಿ ವಿವರಿಸೋಣ ಎಂದರು ಸಮೀವುಲ್ಲಾ. ಸರಿ, ನಾನು, ಶಿವರಾಜು ಹಾಗೂ ಸಮೀವುಲ್ಲಾ ವಿಧಾನಸೌಧದ ಎರಡನೇ ಅಂತಸ್ತಿನಲ್ಲಿದ್ದ ನಾಗಮಾರಪಲ್ಲಿಯವರ ಕಛೇರಿಗೆ ಹೋದೆವು. ವಿಷಯ ವಿವರಿಸಿದೆವು. ಅದಕ್ಕವರು ತಕ್ಷಣವೇ ಫೋನು ಮಾಡಿ ಕನ್ ಫರ್ಮ್ ಮಾಡಿಕೊಂಡರು. ಮರುದಿನ ಸುದ್ದಿಗೋಷ್ಟಿ. ಯಾರೋ ಕೇಳಿದರು. ಸಾರ್ ವೀರಪ್ಪನ್  ವಿರುದ್ಧ ಆಪರೇಷನ್ ಸ್ಯಾಂಡಲ್ ಫಾಕ್ಸ್ ಅಂತ ಕಾರ್ಯಾಚರಣೆ ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಇದಕ್ಕೇನು ಕಾರಣ?ಎಂದು ಪ್ರಶ್ನಿಸಿದರು.

ಆಗ ಗುರುಪಾದಪ್ಪ ನಾಗಮಾರಪಲ್ಲಿ ಇದು ಸುಳ್ಳು ಸುದ್ದಿ ಅಂತ ನಿಮಗೆ ಹೇಳಿದವರು ಯಾರು? ಇಟ್ ಈಸ್ ಫ್ಯಾಕ್ಟ್ ಎಂದುಬಿಟ್ಟರು. ಪ್ರಶ್ನೆ ಕೇಳಿದವರ ಮುಖದಲ್ಲಿ ಮಂಕುಬಾವ. ಇದನ್ನೆಲ್ಲ ಮೊನ್ನೆ ನೆನೆಸಿಕೊಳ್ಳುತ್ತಿದ್ದಾಗ ಸಮೀವುಲ್ಲಾ ಹೇಳಿದರು. ವಿಠ್ಠಲಮೂರ್ತಿ, ಆಪರೇಷನ್ ಸ್ಯಾಂಡಲ್ ಫಾಕ್ಸ್ ಎಂಬ ಕಾರ್ಯಾಚರಣೆ ನಡೆಯುತ್ತಿದ್ದುದು ನಿಜವಾದರೂ ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ಕೆಲವರು ಯಾಕೆ ಮುಂದಾದರು ಅಂತ ಇವತ್ತಿಗೂ ಅರ್ಥವಾಗಿಲ್ಲ ಕಣ್ರೀ ಎಂದರು.
ಬಹುಶ: ಅಸಹಿಷ್ಣುತೆ ಇರಬೇಕು ಅಂತ ನಾನು ಹೇಳಿದೆ. ಆಗ ಸಮೀವುಲ್ಲಾ ಜತೆಗೆ ಉಳಿದವರೂ ಗಹಗಹಿಸಿ ನಕ್ಕರು.ಇದ್ದಕ್ಕಿದ್ದಂತೆ ನನಗೆ ಪಟೇಲರ ಜತೆ ಆಡಿದ ಮಾತುಗಳು ನೆನಪಿಗೆ ಬಂದವು. ಅದಕ್ಕಾಗಿ ನಿಮ್ಮೆದುರು ಇದೆಲ್ಲವನ್ನೂ ಹೇಳಿಕೊಂಡೆ.

‍ಲೇಖಕರು admin

28 November, 2015

3 Comments

  1. r.t.vittal murthy

    Leakhanavannu hanchikondiddakkagi dhanyavaadagalu brother

  2. Rudranna Harthikote

    vittal
    nimma operation sandelfox aaga hit story, mysorenalli kelavaru srigandada karyacharane anta marane dina sudfdi madiddru

  3. ಆದಿವಾಲ ಗಂಗಮ್ಮ

    ನವುರಾದ,ಹಾರ್ದಿಕವಾದ ಮನ ಮುಟ್ಟುವಂತ ವಿಶ್ಲೇಷಣೆಯ ಸುಂದರ ಬರಹ.ಜೆ.ಹೆಚ್.ಪಾಟೀಲರ ಇನ್ನೊಂದು ಮುಖವನ್ನು ಚೆನ್ನಾಗಿ ಅನಾವರಣಗೊಳಿಸಿದ್ದೀರಿ ವಿಠ್ಠಲಮೂರ್ತಿಯವರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading