
ಜಿ ಎನ್ ನಾಗರಾಜ್
ಚಿಂತನ, ಉತ್ತರ ಕನ್ನಡ ಸ್ಥಾಪನೆ-
ಡಿ.6 1992, ಭಾರತವನ್ನು ಅಲ್ಲೋಲ ಕಲ್ಲೋಲ ಮಾಡಿದ ಆ ದಿನ ನಾವು – ನಾನು ಮತ್ತು ಪಿ.ಜಗನ್ನಾಥ್ (ರೋರಿಚ್ ಒಡೆತನದ ತಾತಗುಣಿ ಎಸ್ಟೇಟ್ ವಿರುದ್ದದ ಅಪ್ರತಿಮ ಹೋರಾಟಗಾರ) ಎಲ್ಲಮ್ಮನ ಸವದತ್ತಿಯಲ್ಲಿ ಸಿಕ್ಕಿ ಬಿದ್ದಿದ್ದೆವು. ಇಡೀ ದಿನ ಗಾಬರಿ, ಆತಂಕಗಳು. ವಾರಗಟ್ಟಲೆ ದೇಶದಲ್ಲೆಲ್ಲ ಗಲಭೆಗಳು. ಸಾವಿರಾರು ಸಾವುಗಳು. ಎಲ್ಲ ಬಸ್ ಬಂದಾಗಿ ನಮಗೆ ಅಲ್ಲಿಂದ ಹೊರಬರಲು ದಾರಿಯೇ ಇರಲಿಲ್ಲ. ಅಂದು ರಾತ್ರಿ ಕಷ್ಟಪಟ್ಟು ಬೆಂಗಳೂರಿನ ನಮ್ಮ ಕಛೇರಿಗೆ ಸಂಪರ್ಕ ಸಾಧಿಸಿ ಫೋನ್ ಮಾಡಿದರೆ ಕಛೇರಿ ಸಿಬ್ಬಂದಿ ಹೇಳಿದ ಮೊದಲ ಸುದ್ದಿ ವಿಠ್ಠಲ್ ಫೋನ್ ಮಾಡಿ ನಿಮ್ಮ ಜೊತೆ ಅರ್ಜೆಂಟ್ ಮಾತನಾಡಬಯಸಿದರು ಎಂದು.
ವಾರದ ನಂತರ ಬೆಂಗಳೂರು ತಲುಪಿ ಫೋನ್ ಮಾಡಿದರೆ ಎಷ್ಟು ಬೇಗ ಉ.ಕ.ಕ್ಕೆ ಬರಲು ಸಾಧ್ಯ, ದಿನಾಂಕ ಕೊಡಿ ಎಂದು ವಿಠ್ಠಲ ಮತ್ತು ಶ್ಯಾನುಭೋಗ್ ಎಂಬ ಮತ್ತೊಬ್ಬ ಸಾಂಸ್ಕೃತಿಕ ಕ್ರಿಯಾಶೀಲನ ಒತ್ತಾಯ. ವಿಠ್ಠಲನ ಈ ಕಾತರ ಪ್ರಗತಿಪರ ವಿಚಾರಧಾರೆಗೆ ಅವನ ಬದ್ಧತೆಯ ಸೂಚಕ. ಆಗಿನ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಕೈ ತುಂಬಾ ಕೆಲಸ. ‘ಚಿಂತನ’ ಎಂಬ ವೇದಿಕೆ ರಚಿಸಿ ಮಸೀದಿ ನಾಶದ ಬಗ್ಗೆ, ಅದರಿಂದ ಪ್ರಜಾಪ್ರಭುತ್ವಕ್ಕಾದ ಆಘಾತದ ಬಗ್ಗೆ ಐದು ಲಕ್ಷ ಕರಪತ್ರ ಮುದ್ರಿಸಿ ಹಂಚುವ ಮತ್ತು ಇಂತಹ ಮತ್ತಷ್ಟು ಸಾಹಿತ್ಯ ರಚಿಸುವ ಹೊಣೆ ಬಿತ್ತು. ಅವುಗಳನ್ನು ಮುಗಿಸಿದ ಮೇಲೆ ಒಂದು ದಿನಾಂಕ ನಿಗದಿಪಡಿಸಿಕೊಂಡೆವು.
ಶಿರಸಿಯ ಒಂದು ಸಭಾಭವನದಲ್ಲಿ ಉಪನ್ಯಾಸ. ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಸಾಹಿತಿಗಳು, ನಡೆದ ಹತ್ಯಾಕಾಂಡದ ಬಗ್ಗೆ ಚಿಂತಾಕುಲರು ಬಂದಿದ್ದರು. ಅಂದು ಭಾರತದ ಪ್ರಜಾಪ್ರಭುತ್ವದ ಅಂದಿನ ಸ್ಥಿತಿ. ಅದರಲ್ಲಿ ಮಿಳಿತವಾದ ಸಾಮಾಜಿಕ, ಆರ್ಥಿಕ ರಾಜಕೀಯ ಕಾರಣಗಳು, ಜಾಗತೀಕರಣ, ಖಾಸಗೀಕರಣದ ನೀತಿಗಳು ಮತ್ತು ಕೋಮುವಾದದ ಬೆಳವಣಿಗೆಯ ಅಂತರ್ಸಂಬಂಧ ಇವುಗಳ ಬಗ್ಗೆ ಮಾತನಾಡಿದೆ. ಅಂದು ನಾನು ಹೇಳಿದ ಮಾತು ಇಂದಿಗೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.

1947 ರಿಂದ ಭಾರತದ ಸುತ್ತ ಕಟ್ಟಿಕೊಂಡಿದ್ದ ಸ್ವಾವಲಂಬನೆ, ವಿದೇಶಿ ಆಮದುಗಳ ವಿರುದ್ಧದ ಭದ್ರ ಕೋಟೆಯನ್ನು 1986ರಿಂದ ಸಡಿಲ ಮಾಡುತ್ತಾ ಮಾಡುತ್ತಾ 1991ರಲ್ಲಿ ಒಡೆಯಲಾಯಿತು. ಆಗಿನಿಂದಲೇ ರಾಮ ಜನ್ಮ ಭೂಮಿ ಚಳುವಳಿ ಆರಂಭವಾಗಿ ಗರಿಗೆದರಿಕೊಂಡದ್ದು ಈಗ 92 ರ ಅಂತ್ಯದಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದು ಎರಡೂ ಒಂದೇ ಕಾಲಘಟ್ಟದಲ್ಲಿ ನಡೆದದ್ದು ಕೇವಲ ಕಾಕತಾಳಿಯವಲ್ಲ. ಇವೆರಡನ್ನೂ ಮಾಡಿರುವ ಶಕ್ತಿಗಳು ಬೇರೆ ಬೇರೆ. ಆದರೆ ಇವೆರಡರ ಗುರಿಯೂ ಒಂದೇ ಎಂದು.
ಭಾರತದ ಸಂವಿಧಾನ ನವೆಂಬರ್ 1949 ರಲ್ಲಿ ಅಂಗೀಕಾರವಾದ ಕೂಡಲೇ ಬಾಬರಿ ಮಸೀದಿಯನ್ನು ಉಪಯೋಗಿಸಿ ಸಂವಿಧಾನ ನಾಶ ಮಾಡುವ ಪ್ರಯತ್ನ ಅದೇ ಡಿ.22-23 ರ ನಡುವಣ ರಾತ್ರಿ ನಡೆಯಿತು. ಆದರೆ ಭಾರತದ ಜನ ಈ ಕುತಂತ್ರವನ್ನು ನಿರಾಕರಿಸಿ ಕೆಲವೇ ವಾರಗಳ ನಂತರ ಜ.26 ರಲ್ಲಿ ಸಂವಿಧಾನವನ್ನು ಜಾರಿಗೊಳಿಸಿದರು. ಆದರೆ ಈಗೇಕೆ ಭಾರತದ ಜನತೆ ಸಂವಿಧಾನ, ಪ್ರಜಾಪ್ರಭುತ್ವ ನಾಶಕ ಶಕ್ತಿಗಳ ದುಷ್ಟ ಯತ್ನಕ್ಕೆ ಬಲಿಯಾಗುತ್ತಿದೆ ಯೋಚಿಸಬೇಕು. ಇದಕ್ಕಾಗಿ ಸಂವಿಧಾನದ ಕರ್ತೃ ಡಾ.ಅಂಬೇಡ್ಕರ್ರವರ ನೆನಪಿನ ದಿನವನ್ನೇ ಏಕೆ ಆರಿಸಿಕೊಂಡಿದ್ದಾರೇಕೆ? ಭಾರತದ ಸ್ವಾವಲಂಬನೆ ಮತ್ತು ಸಂವಿಧಾನ ನಾಶಕ ಶಕ್ತಿಗಳು ಇಂದು ಬಹಳ ಬಲಿಷ್ಠವಾಗಿವೆ.
ಹಲವು ವಿಧಾನಗಳಿಂದ ಜನಮನದ ಮೇಲೆ ಹಿಡಿತ ಸಾಧಿಸುತ್ತಿವೆ. ಆದ್ದರಿಂದ ಮಸೀದಿ ನಾಶ, ಕೋಮು ದಂಗೆಗಳ ಬಗ್ಗೆ ಆತಂಕಕ್ಕೊಳಗಾಗಿರುವವರು ಒಂದೆರಡು ಸಭೆ, ವಿಚಾರ ಸಂಕಿರಣಗಳು ನಡೆಸಿ ತೃಪ್ತಿ ಪಟ್ಟುಕೊಂಡರೆ ಸಾಲದು ಒಂದು ಕ್ರಿಯಾಶೀಲ ವೇದಿಕೆಯ ಮೂಲಕ ಪ್ರಗತಿಪರರು ಮಾತ್ರವೇ ಅಲ್ಲದೇ ಎಲ್ಲ ಪ್ರಜಾಪ್ರಭುತ್ವವಾದಿಗಳೂ ಸೇರಿ ಒಗ್ಗೂಡಿ ಶ್ರಮಿಸುವಂತಹ ವಿಶಾಲ ವೇದಿಕೆ ರೂಪಿಸಿಕೊಂಡು ಅನವರತ ಕೆಲಸ ಮಾಡಬೇಕು ಎಂದು ವಿನಂತಿಸಿದೆ. ಮೊದಲೇ ವಿಠ್ಠಲ, ಶ್ಯಾನುಭೋಗರು ಮತ್ತು ನಾನು ಚರ್ಚಿಸಿಕೊಂಡಂತೆ ಅಂದು ಮಧ್ಯಾಹ್ನವೇ ಸಭೆ ಸೇರಿ ಅಂತಹ ವೇದಿಕೆ ರೂಪಿಸಿಕೊಳ್ಳಲು ತೀರ್ಮಾನಿಸಿದರು. ಅದರ ಹೆಸರಿನ ಪ್ರಶ್ನೆ ಬಂದಾಗ ಆಗಲೇ ಕೆಲ ಸಾಹಿತ್ಯ ಪ್ರಕಟಿಸಿದ್ದ, ಯಾವುದೇ ನಿರ್ದಿಷ್ಟ ಎಡಪಂಥೀಯ ಸಿದ್ಧಾಂತವನ್ನು ಸೂಚಿಸದ ವಿಶಾಲ ವೇದಿಕೆಯಾಗಿ ‘ಚಿಂತನ’ದ ಹೆಸರನ್ನು ಸೂಚಿಸಿದೆ.

ಎಲ್ಲರಿಗೂ ಒಪ್ಪಿಗೆಯಾಯಿತು. ಇಂತಹ ವೇದಿಕೆಗಳು ರಾಜ್ಯದಾದ್ಯಂತ ಸ್ಥಾಪನೆಯಾಗಬೇಕು ಎಂಬ ಆಶಯದಿಂದ ಚಿಂತನ ಉತ್ತರ ಕನ್ನಡ ಎಂದು ಹೆಸರು ಅಂತಿಮಗೊಂಡಿತು. ಈ ವೇದಿಕೆಯಲ್ಲಿದ್ದ ರಂಗಾಸಕ್ತರು ಚಿಂತನ ರಂಗ ಅಧ್ಯಯನ ಕೇಂದ್ರವನ್ನು ರೂಪಿಸಿಕೊಂಡರು. ವೈಚಾರಿಕ ಪುಸ್ತಕಗಳ ಓದನ್ನು ಬೆಳೆಸಬೇಕೆನ್ನುವ ಶ್ಯಾನುಭೋಗರು ಚಿಂತನ ಪುಸ್ತಕ ಮಳಿಗೆ ರೂಪಿಸಿದರು. ವಿಠ್ಠಲ ಎರಡೂ ರಂಗದಲ್ಲಿಯೂ ಕ್ರಿಯಾಶೀಲನಾಗಿ ಜಿಲ್ಲೆಯಾದ್ಯಂತ ರಂಗ ಚಟುವಟಿಕೆ ಮತ್ತು ಪುಸ್ತಕ ಪ್ರಸಾರ ಎರಡರಲ್ಲಿಯೂ ತೊಡಗಿಕೊಂಡ. ಆಗಾಗ್ಗೆ ವಿಚಾರ ಸಂಕಿರಣಗಳು, ಉಪನ್ಯಾಸಗಳಂತೂ ಸರಿಯೇ ಸರಿ.
ಈ ವೇದಿಕೆ ವಿಠ್ಠಲನಿಗೆ ಸಾಂಸ್ಕೃತಿಕ ರಂಗದ ವಿವಿಧ ಆಯಾಮಗಳಲ್ಲಿ, ಕೋಮುವಾದದ ವಿರುದ್ಧದ ಸೆಣೆಸಾಟದಲ್ಲಿ ವಿವಿಧ ಹತಾರುಗಳ ಉಪಯೋಗದಲ್ಲಿ ಅನುಭವ ನೀಡಿತು. ಸಹಯಾನ, ಬಂಡಾಯ ಪ್ರಕಾಶನ ಮೊದಲಾದ ಮುಂದಿನ ಹಲವು ಸಾಂಸ್ಕೃತಿಕ ವೇದಿಕೆಗಳನ್ನು ಆರಂಭಿಸಿ ಮುನ್ನಡೆಸುವುದಕ್ಕೆ ಅಡಿಪಾಯವಾಯಿತು. ಬೇರೆ ಬೇರೆ ಜಿಲ್ಲೆಗಳಲ್ಲಿ ಚಿಂತನದ ಘಟಕ ಅಥವಾ ಅದೇ ರೀತಿಯ ವೇದಿಕೆಗಳು ಆರಂಭವಾಗಲು ಸ್ಫೂರ್ತಿ ನೀಡಿತು. ಆದರೆ ಅವುಗಳಿಗಿಂತ ಚಿಂತನ ಯಶಸ್ವಿಯಾಗಿ, ನಿರಂತರವಾಗಿ ಕಾರ್ಯ ನಿರ್ವಹಿಸಿದುದಕ್ಕೆ ವಿಠ್ಠಲನಂತಹ ಉತ್ಸಾಹಿ ಮತ್ತು ಬದ್ಧತೆಯ ಕ್ರಿಯಾಶೀಲನೇ ಕಾರಣ.






0 Comments