ಶಿವು ಮೊರಿಗೇರಿ
ಬೆಂಗಳೂರು ಬಾಷಿದಾಗ ಹೇಳಬೇಕಂದ್ರ, ನಿನ್ನಿದಿನ ವಿಜಾಪುರ ಸಾಹಿತ್ಯ ಸಮ್ಮೇಳನದಾಗ ಚಮ್ಕಾಯ್ಸಿ ಚಿನ್… ದಿ ಉಡಾಯಿಸಿದಿನಿ. ನಮ್ಮ ಉತ್ತರ ಕರ್ನಾಟಕ ಭಾಷ್ಯಗ ಹೇಳಕಂದ್ರ, ದಿಬ್ಬಣದ ಹಬ್ಬದಾಗ ಒಡ್ಡೋಲ್ಗ ನಡಿಸೀನಿ. ನಿನ್ನ ಬೆಳಗಿನಿಂದನೂ ಮುಖ್ಯ ವೇದಿಕಿಮುಂದೆ ಜನಗಳು ಲಕ್ಷಗಟ್ಟಲೆ ಸೇರಿದ್ದು ನೋಡಿದ್ರ, ಬಿಜಾಪುರ ಅಥವಾ ಉತ್ತರ ಕರ್ನಾಟಕ ಅನ್ನೋದು, ಬರದ ನಾಡು ಖರೇನಾ, ಆದ್ರ ಅದು ಸಾಹಿತ್ಯದ ಹಸಿವಿನ ಜ್ವರ ಬಂದಿರೋ ನಾಡದ. ದೊಡ್ಡ ಸಂಸ್ಕೃತಿ ಒಂದಿರೋ, ದೊಡ್ಡ ಮನಸ್ಸಿನ ಮಂದಿ ಇರೋ,ಧೀಮಂತರ ನಾಡಿದು. ಈ ಜನಗಳ ಉತ್ಸಾಹಕ್ಕ ದೇವ್ರಿಗೆ ಒಟ್ಟಿಕಿಚ್ಚು ಬಂದಿರತೈತಿ ನೋಡ್ರಿ.

ಅಕ್ಷರ ಸಹ ನಿನ್ನ ಬರೊಬ್ಬರಿ ಅರ್ಥಗರ್ಭಿತ ಕಾರ್ಯಕ್ರಮಗಳು ನಡದ್ವು. ಸಮಾನ ಮನಸ್ಕರ ವೇದಿಕಿಯೊಳಗ ಡಾ.ಬಂಜಿಗೆರಿ ಜಯಪ್ರಕಾಶ್, ಡಾ.ವಾಸು, ನಟರಾಜ್ ಹುಳಿಯಾರ್, ಡಾ.ಲೀಲಾ ಕೆ, ಇಂಥಾ ಮಹನೀಯರು ‘ವರ್ತಮಾನದ ತಲ್ಲಣಗಳು’ ಇಚಾರದ ಬಗ್ಗೆ ಮಾಡಿದ ಭಾಷಣಕ್ಕ ಜೋರು ಚಪ್ಪಾಳಿ ತಟ್ಟಿ, ಮಂಡಿಸಿದ ವಿಚಾರಕ್ಕ ತಮ್ಮ ಬೆಂಬಲನ ವ್ಯಕ್ತಪಡಿಸಿದ್ರು. ಅದಕ್ಕಿಂತ ಮುಂಚೆ, ಜನಪದ ಹಾಡುಗಳ ಸುಗ್ಗಿ ಬಲು ಜೋರು ನಡೀತು.

ಜಿಲ್ಲಿದಾಗಿನ ಸಾಕಷ್ಟು ಸಾಲಿ ಉಡ್ರು, ತಮ್ಮ ಪ್ರತಿಬಿ ತೋರಿಸಿದ್ವು, ಅದ್ರಾಗಂತೂ, ಈ ಲಚ್ಚಾನ್ ಅನ್ನೋ ಪಟ್ಟಣದ ಮುರಾರ್ಜಿ ದೇಸಾಯಿ ಹೈಸ್ಕೂಲ್ ವಿದ್ಯಾರ್ಥಿನಿಯರು , ಜಕ್ಕಣಕ್ಕ ಜಕ್ಕಣಕ್ಕ ಕೋಲೆನ್ನ ಕೋಲೆ…… ಯಲ್ಲಿ ಕಾಣೆ ಯಲ್ಲಿ ಕಾಣೆ ಯಲ್ಲಮ್ಮ ನಿನ್ನಂತೊಳ ನಾ ಎಲ್ಲಿ ಕಾಣೆ ಎಲ್ಲಿ ಕಾಣೆ.. ಅಂತ ಕೋಲು ಹಿಡಿದು, ಟೇಜಿನ ತುಂಬಾ ಪಾದರಸದಂಗ ಓಡ್ಯಾಡಿ, ನವಿಲು ಕುಣಿದಂಗ ಕುಣಿದಿದ್ಕ ತಕ್ಕಂಗ, ಕತ್ರನ್ಯಾಕ ತಬಲ ಸೌಂಡ್ ಗೆ, ಅಲ್ಲಿ ಸೇರಿದ್ದ ಜನ ಎಲ್ಲ ಹುಚ್ಚೆದ್ದು, ಸಿಳ್ಳಿ ಹೋಡದ್ರು, ಕೇಕಿ ಹಾಕಿದ್ರು, ಅವರ ಈ ಸದ್ದಿಗ್ಯ, ಸಮಾನ ಮನಸ್ಕರ ವೇದಿಕಿ ಅನ್ನೋದು ಒಂದು ನಿಮಿಷ ನಡಿಗಿದಂಗಾತು.ಜನಾ ಈ ಕಾರ್ಯಕ್ರಮನ ವೇದಿಕೆಯ ಕಿಟಕಿಗಳಿಂದ ಬಾಗಲಗಳ ಸಂದಿನಾಗಿದ್ದನ ನೋಡ್ಕಂತ ಹೋ ಅಂತ ಕೂಗತಿದ್ರು ಅಂದ್ರ, ಆ ಉಡ್ರು ಎಷ್ಟರ ಮಟ್ಟಿಗಿ ಪ್ರದರ್ಶನ ಕೊಟ್ಟಿರಬೌದು ಯೋಚಿನಿ ಮಾಡ್ರಿ.

ಆ ಜಾತ್ರಿಯಂತ ಜನದಾಗಿದ್ದ ತಡುಮುರ್ಸಿ ಆದು ಟೇಜಿನಿಂದ ಆಚಿ ಬಂದ್ರ, ಒಂದು ಮರದ ನೆಳ್ಳಾಗ ಹಿಂಡಿ ತಾಲೂಕು ಸಾಲೋವಗಿ ಗ್ರಾಮದ ‘ಶ್ರೀ ಬಸವೇಶ್ವರ ಹಂತಿಯ ಸಂಘ’ ದ ಹಿರಿಯಾರು ಹಂತಿಪದ ಹಾಡುಗಳ ಕಾರ್ಯಕ್ರಮ ಕೊಡಾಕಂತ ಕುಂತಿದ್ರು, ಅದ್ರಾಗ ಒಬ್ಬ ಮುತ್ಯಾಗ 96 ವರ್ಸ ಅದಾವಂತ. ಈಗಲೂ ಹಂತಿ ಪದಗಳನ್ನ ಹಮ್ಮಿಲೆ ಆಡ್ತಾನ. ಕನ್ನಡಕ ಇಲ್ದನ ಪೇಪರ್ ಓದ್ತಾನ ಅಂದ್ರ ಮುತ್ಯಾ, ಆರೋಗ್ಯನ ಎಂಗ ಕಾಪಾಡ್ಕಂಡಾನಲ್ಲಾ ಅಂತ ನನಿಗೂ ಬಾಳ ಆಚ್ಚರ್ಯ ಆತು. ಸಂಜಿ ಮುಂದ ಆರಕ್ಕ ಕಾರ್ಯಕ್ರಮ ಅದ ಬಂದು ನೋಡ್ರಿ, ಅಂತ ಪ್ರೀತಿಲಿಂದ ಹೇಳಿದ್ರು, ನಾನೂ ಬರ್ತೀನೇಳ್ರಿ ಅಂತೇಳಿ ಅಲ್ಲಿಂದ ಮುಂದ ಬಂದ್ರ ಮುಖ್ಯ ವೇದ್ಕಿ ವಳಗ ರಂಗಭೂಮಿ ಕಲಾವಿದರೊಬ್ಬರ ಮಾತುಗಳು ಕೇಳಿ ಬರಾಕತ್ತಿದ್ವು.

‘ನಮ್ಮ ಜನಗಳತ್ರ ಜನಪದ ಕಲೆಗಳು ಯಾಕಾ, ಮಾಯಾಗಕ್ಕತ್ಯಾವು, ಡೊಳ್ಳುಗಳನ್ನ, ಡ್ರಮ್ಸ್ ಗಳು ಆಕ್ರಮಿಸಿಕಂಡಾವು, ನಮ್ಮ ಮ್ಯಾದಾರ ಹುಡ್ಗ ದಿನಪೂರ್ತಿ ಕೊಳಲು ಊದಿದ್ರ ಯಾರೂ ಕೇಳಂಗಿಲ್ಲ ಆದ್ರ ಇವತ್ತಿನ ಟಿಬಿಗಳಾಗ ಸೌಕಾರ ಹುಡುಗ್ರು ಹತ್ತು ನಿಮಿಷ ಕೊಳಲು ಊದಿದ್ರ, ಬರೋಬ್ಬರಿ ಮೆಚ್ಚಿ, ಲಕ್ಷಗಟ್ಟಲೆ ರ್ವಕ್ಕ ಕೊಡ್ತಾರ. ಎಂಥಾ ಕಾಲ ಬಂದೈತಿ ನೋಡ್ರಿ, ಕುಟ್ಟೋ ಪದಗಳು, ಬೀಸೋ ಪದಗಳು, ಕಣದಾಗಳ ಒಕ್ಕಲಿ ಪದಗಳು, ಇವನ್ನ ಇವತ್ತು ಕೇಳಾರ ಇಲ್ದಂಗಾಗೈತಿ. ಗೀಗೀ ಪದಗಳು, ಭಜನಾ ಪದಗಳು, ಹಂತಿ ಪದಗಳನ್ನ ಇವತ್ತಿನ ಯುವಕರು ನೋಡಾ ರೀತೀನಾ ಬ್ಯಾರ್ಯಾ ಆಗೈತಿ. ಹಿಂದ ದೇವಸ್ಥಾನಗಳಲ್ಲಿ ದೇವದಾಸಿಯರು ಮಾಡತಿದ್ದ ಡ್ಯಾನ್ಸ್ ಗಳನ್ನ ಇವತ್ತು ಭರತನಾಟ್ಯ ಹೈಜಾಕ್ ಮಾಡಕತ್ತೈತಿ, ಸಾಹಿತ್ಯದೊಳಗ ನಮ್ಮ ವಿಜಾಪುರ ಜಿಲ್ಲಿ ಯಾವತ್ತೂ ಹಿಂದ ಬಿದ್ದಿಲ್ಲ, ” ಕರ್ನಾಟಕದ ಶೇಕ್ಸ್ ಫೀಯರ್” ಅಂತನಾ ಬಿರುದು ತಗಂಡಿದ್ದ ‘ಕಂದಗಲ್ ಹನುಮಂತರಾಯ’ ವಿರಚಿತ ಪೌರಾಣಿಕ ನಾಟಕ ‘ರಕ್ತ ರಾತ್ರಿ ‘ ನಾಟಕದ ಡೈಲಾಗ್ ಹೆಂಗದಾವ್ರಿ…? ಬೆಂಕಿ ಚೆಂಡು ತುಪಾಕಿ ಗುಂಡು ಇದ್ದಾಂಗ ಅದಾವು. ‘ಮೈಲಾರ ಮಾದೇವನ’ ಸಾಹಿತ್ಯ ಯಾವ ಸಾಹಿತ್ಯಕ್ಕ ಕಡ್ಮಿ ಐತೇಳ್ರಿ ….?ಹಿಂಗ ಭಾರೀ ಮೈ ಝಂ ಅನ್ನೋ ಮಾತುಗಳು ಕೇಳಿ ಬಂದ್ವು, ಆ ಮಾತುಗಳನ್ನ ಕೇಳಿಸ್ಕಂತನ ನನ್ನ ಕಿವಿ ಪುಣ್ಯ ಮಾಡಿದ್ವು. ಅಲ್ಲಿಂದನ ಹಂಗ ಸ್ವಲ್ಪ ಹಿಂದಕ್ಕ ತಿರುಗಿ ನೋಡಿದ್ನ, ಅಲ್ಲಿ ಧಾರವಾಡ ಜಿಲ್ಲಾ, ಹುಂಡಿ ತಾಲೂಕ, ಕೋಳಿವಾಡ ಗ್ರಾಮದ, ಆರ್.ಆರ್.ಎಸ್.ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ‘ಹಗ್ಗದ ಮಲ್ಲಗಂಬ’ದ ಕಸರತ್ತು ತೋರಿಸಿದ್ರು, ಆ ಸಣ್ನ ಹುಡ್ರ ದೋಡ್ಡ ಧೈರ್ಯಕ್ಕ ನನ್ನದೊಂದು ಸಲಾಂ ಹೇಳಿ, ಅಲ್ಲಿಂದ ಆಚಿ ಬಂದು, ಜಾತ್ರಿಗಿಂತ್ಲೂ ಜೋರಾಗಿದ್ದ ವ್ಯಾಪಾರ ನೋಡ್ಕಂಡು, ರಾತ್ರಿಗ್ಯ ಸಮಾನಂತರ ವೇದಿಕೆಯೊಳಗ ದೂರದ ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನ “ಕಲಾ ಸೌರಭ” ಕಲಾ ತಂಡದ ವರಕವಿ ದಾ.ರಾ.ಬೇಂದ್ರೆ ಯವರ “ಗಂಗಾವತರಣ” ನಾಟ್ಕ ನೋಡ್ಕಂಡು ಹಿರಿ ಹಿರಿ ಹಿಗ್ಗಿ, ಬಿ.ಎಂ.ಟಿ.ಸಿ. ಕಲಾ ತಂಡದ ನಾಟ್ಕ ಅನೌನ್ಸ ಮಾಡಿದ್ರು, ನನಿಗ್ಯ ಯಾಕಾ ಕಣ್ಣು ಯಳಿಯಾಕತ್ತಿದ್ವು. ಅದಕ್ಕ ಕಾರ್ಯಕ್ರಮಗಳಿಗ್ಯ ಬೆನ್ನುಮಾಡಿದ್ದ್ಯ.
ಇವತ್ತು ವಿಜಾಪುರ ಸಾಹಿತ್ಯ ಸಮ್ಮೇಳನದ ಅದ್ಧೂರಿ ತೆರೆಬೀಳ ಕೋನೇ ದಿನ ಐತಿ, ಈಗಾಲೆ ಜೋರು ಜಾತ್ರಿ ಮತ್ಯ ಚಾಲೂ ಆಗೈತಿ ನಾನಿಲ್ಲಿ ದ್ರ ಹೆಂಗ ಹೇಳ್ರಿ ? ಇವತ್ತೂ ಪೂರ್ತಿ ಕಾರ್ಯಕ್ರಮಗಳನ್ನ ನೊಡಿಕಂಡು ನಿಮ್ಮ ಜೊತಿಗ್ಯ ಹಂಚಿಕೋತೀನಿ. ವಿಜಾಪುರದ ಉಪ್ಪಿಟ್ಟು ತಿಂದು ಬಿಸಲು ಅನ್ನ ಖಬರ ಮರ್ತು ಕಾರ್ಯಕ್ರಮ ನೋಡಾಕ ವಂಟೀನಿ……….







0 Comments