ಭರವಸೆಯ ಕಥೆಗಾರ ವಿಕ್ರಂ ಹತ್ವಾರ್ ಅವರ ಕಥಾ ಸಂಕಲನ ’ಜೀರೋ ಮತ್ತು ಒಂದು’ ದಿಂದ ಒಂದು ಕಥೆ ನಿಮಗಾಗಿ.
ವಿಕ್ರಂ ಹತ್ವಾರ್
`ಕೀಂಕೀ ಕೀಂಕೀ… ಕೀಂಕೀ ಕೀಂಕೀ…’
ಕೋದಂಡರಾಮಪುರದ ಮೂರನೇ ಕ್ರಾಸಿನ ಆ ಸಣ್ಣ ಮನೆಯಲ್ಲಿ ರಾತ್ರಿ ಸರಿಯಾಗಿ ಹನ್ನರೆಡು ಗಂಟೆಗೆ ಅಲಾರಾಂ ಸದ್ದಾಯಿತು.
ಕರೆಂಟಿಲ್ಲ. ಮನೆಯ ಒಳಗೂ ಬೆಳಕಿಲ್ಲ, ಹೊರಗೆ ಬೀದಿ ದೀಪದ ಬೆಳಕೂ ಇಲ್ಲ. ಈ ಬೆಂಗಳೂರಿನ ರಾತ್ರಿಗಳಲ್ಲಿ ಲಾಲಿ ಹಾಡಲು ಪುರುಸೊತ್ತಿರುವ ಏಕೈಕ ಯಂತ್ರ ಫ್ಯಾನು ಕೂಡ ಕರೆಂಟಿಲ್ಲದ ಕಾರಣ ಸದ್ದು ಮಾಡದೆ ಸುಮ್ಮನಿದೆ. ಹೊರಗೆ ರಸ್ತೆಯಲ್ಲಿ ಯಾವ ವಾಹನದ ಸದ್ದೂ ಇಲ್ಲ. ಪಕ್ಕದಲ್ಲಿ ಮಲಗಿರುವ ಗಂಡ ಗೊರಕೆಯೂ ಹೊಡೆಯುತ್ತಿಲ್ಲ. ಇಷ್ಟೊತ್ತಿಗೆ ಯಾರ ಅಲಾರಾಮ್ ಹೊಡೆದುಕೊಳ್ಳುತ್ತಿದೆ ಅನ್ನುವುದೂ ಗೊತ್ತಾಗಲಿಲ್ಲ.
ಅದು ಯಾರದ್ದೋ ವಾಚಿನ ಅಲಾರಾಂ…
ಮನೆಯಿಂದಲೇ ಬರುತ್ತಿದೆ…
ಗಾಬರಿಯಾಯಿತು…
ಬಹಳ ದಿನವಾಗಿತ್ತು. ಅಲಾರಾಂ ಆಫ್ ಮಾಡಿ ಇಟ್ಟಿದ್ದರೂ ಯಾವಾಗೆಂದರೆ ಆವಾಗ ಕೀಂಗುಟ್ಟುತ್ತಿದ್ದ ವಾಚದು. ಎಷ್ಟು ಅಂಗಡಿ ಶೋ ರೂಮ್ಗಳಲ್ಲಿ ತೋರಿಸಿದರೂ, `ಎಲ್ಲಾ ಸರಿಯಾಗಿದೆ, ಟೆಸ್ಟ್ ಮಾಡಿದ್ದೀವಿ’ ಅನ್ನುತ್ತಿದ್ದರು. ಎರಡು ದಿನ ಸುಮ್ಮನಿರುತ್ತಿತ್ತು. ಆಮೇಲೆ ಮತ್ತೆ ಶುರು.
ಈಗ ಸುಮಾರು ದಿವಸ ಆಗಿದೆ, ಅದೊಂದು ವಾಚು ಮನೆಯಲ್ಲಿದೆ ಅನ್ನುವುದೇ ಮರೆತು ಹೋಗುವಷ್ಟು ಅದು ಸುಮ್ಮನಾಗಿತ್ತು. ಈಗ ಇದ್ದಕ್ಕಿದ್ದ ಹಾಗೆ ಮತ್ತೆ ಈ ಸರಿ ರಾತ್ರಿಯಲ್ಲಿ ಕರೆಂಟಿಲ್ಲದಾಗ ಎಚ್ಚರಗೊಂಡಿದೆ. ಹನ್ನೆರಡು ಸಲ ಕೀಂಗುಟ್ಟಿದ ಮೇಲೆ ಆ ವಾಚು ಸುಮ್ಮನಾಯಿತು. ಅದು ಬಿಟ್ಟು ಹೋದ ತರಂಗಳಲ್ಲಿ ಮೌನ ಭಯಾನಕವಾಗಿ ಬೆರತು ಹೋಯಿತು. ರಸ್ತೆಯಲ್ಲಿ ಯಾವ ವಾಹನದ ಸದ್ದೂ ಕೇಳಿಸುತ್ತಿಲ್ಲ. ಪಕ್ಕದಲ್ಲಿ ಮಲಗಿದ್ದ ಗಂಡನ ಗೊರಕೆಯ ಸದ್ದೂ ಇಲ್ಲ.
ಐದೇ ನಿಮಿಷ- ಅಲಾರಾಂ ಮತ್ತೆ ಹೊಡೆದುಕೊಳ್ಳಲು ಶುರುವಾಯಿತು. ಈ ಬಾರಿ ವೇಗವಾಗಿ ಕೀಂಕೀಂಕೀಂ ಅಂತ ಹತ್ತಿಪ್ಪತ್ತು ಸಲ ಸತತವಾಗಿ ಬಡಿದು ನಿಂತಿತು. ಇನ್ನಷ್ಟು ದಿಗಿಲಾಯಿತು.
ಯಾವತ್ತೂ….ಹೀಗೆ- ನಿಂತ ಐದು ನಿಮಿಷದಲ್ಲಿ- ಇಂಥ ಲಯದಲ್ಲಿ ಅಲಾರಾಂ ಬಡಿದದ್ದು ಇಲ್ಲ. ಮೊದಲು ಅಲಾರಾಂ ಬಡಿದುಕೊಂಡದ್ದಕ್ಕಿಂತ ಈ ಹೊಸ ರೀತಿಗೆ ಇನ್ನಷ್ಟು ಭಯವಾಯಿತು. ಮೈಯಲ್ಲ ಸಣ್ಣಗೆ ಬೆವರಲು ಶುರುವಾಯಿತು. ಇತ್ತ ಪೂರ್ತಿ ಎಚ್ಚರವೂ ಅಲ್ಲದ, ಅತ್ತ ಪೂರ್ತಿ ನಿದ್ದೆಯೂ ಅಲ್ಲದ ಸ್ಥಿತಿ. ಭಯಾನಕ ಕನಸೊಂದು ಅರ್ಧ ತೋರಿ, ಎಚ್ಚರಿಸದೆ ಮಲಗಿಸದೆ ಉಳಿದುಹೋದ ಭಾವ. ಕನಸು ಪೂರ್ತಿಯಾಗಿದ್ದರೆ ದಿಗಿಲು ಕಮ್ಮಿಯಾಗುತ್ತಿತ್ತು. ಈ ಅಪೂರ್ಣ ಕನಸು ಭಯವನ್ನು ಹೆಚ್ಚಿಸಿದೆ!
ಅರೆತೆರೆದ ಪ್ರಜ್ಞೆ.
ಪಕ್ಕದಲ್ಲಿರುವ ಗಂಡನನ್ನು ಎಚ್ಚರಿಸಬೇಕು….ಅವನನ್ನು ಮುಟ್ಟುವ ತವಕ. ಆದರೆ, ಕೈ ಸರಿಸಲೂ ಸಾಧ್ಯವಾಗುತ್ತಿಲ್ಲ. ಯಾವುದೋ ಶಕ್ತಿ ಬಲವಾಗಿ ಒತ್ತಿ ಹಿಡಿದಂತಿದೆ…..ಕೂಗಿ ಎಬ್ಬಿಸಬೇಕು; ಸ್ವರವೇ ಹೊರಡಲಿಲ್ಲ. ಬಾಯಿ ತೆರೆದರೂ ಮಾತು ಹೊರಡಲಿಲ್ಲ. ಯಾರೋ ಗಂಟಲು ಬಿಗಿಹಿಡಿದ ಹಾಗೆ…..
ಪಕ್ಕದಲ್ಲಿರುವ ಗಂಡ ಗೊರಕೆ ಹೊಡೆಯುತ್ತಿದ್ದಾನಾ? ಕೇಳಿಸುತ್ತಿಲ್ಲವಷ್ಟೇ? ಮಾತಾಡಲು, ಅಲುಗಾಡಲು ಆಗದೆ ಇರುವಂತೆಯೇ ಕಿವಿಯೂ ಯಾವ ಸದ್ದನ್ನೂ ಗ್ರಹಿಸುತ್ತಿಲ್ಲವಾ? ಹಾಗಿದ್ದರೆ, ಈಗಷ್ಟೇ ಕೇಳಿಸಿದ ಅಲಾರಾಂ ಸದ್ದು? ಅದೊಂದು ಭ್ರಮೆಯಾ? ಅದೇ ಅಪೂರ್ಣ ಕನಸಿನ ಒಂದು ಭಾಗವಾ?
ಆದರೆ, ಆ ವಾಚು ಮನೆಯಲ್ಲಿರುವುದು ನಿಜವೇ. ಅದೇ ರೀತಿ ಮನಸ್ಸಿಗೆ ಬಂದಾಗ ಸದ್ದು ಮಾಡುವ ಗಡಿಯಾರವೊಂದರ ಕುರಿತು ಎಲ್ಲೋ ಕೇಳಿದ ಹಾಗಿದೆ. ಹಿಂದಿನ ಕಾಲದ ಪೆಂಡುಲಂ ಇರುವ ಬೀರು ಗಾತ್ರದ ದೊಡ್ಡ ಗಡಿಯಾರ. ಯಾವಾಗೆಂದರೆ ಆವಾಗ ಗಂಟೆ ಬಾರಿಸುತ್ತದೆ. ಅಲ್ಲ ಯಾವಾಗಂದ್ರೆ ಆವಾಗಲ್ಲ, ಯಾರಾದರೂ ಏನಾದರು ಹೇಳಿದಾಗ ಆ ಗಡಿಯಾರ ಬಡಿದರೆ ಅದು ಸತ್ಯವಾಗುತ್ತದೆ ಅಂತ ಕೇಳಿದ ಹಾಗಿದೆ. ಬೇರೆ ಯಾವ ವಿವರಗಳೂ ಜ್ಞಾಪಕಕ್ಕೆ ಬರಲಿಲ್ಲ. ಆ ದೊಡ್ಡ ಗಡಿಯಾರ ಮಾತ್ರ ಕಣ್ಣ ಮುಂದೆ ಬಂದ ಹಾಗಿದೆ….ಮೈಯೆಲ್ಲ ಬೆವರು.
ಈಗ ಮಲಗುವ ಮುನ್ನ ಏನು ಯೋಚನೆ ಬಂದಿತ್ತು? ಏನೂ ಇಲ್ಲವಲ್ಲ. ನಿದ್ದೆ ಹತ್ತಿತು ಅನ್ನೋವಾಗ ವಾಚಿನ ಅಲಾರಾಂ. ಕಣ್ಣು ಬಿಟ್ಟರೆ ಕತ್ತಲು, ಮೌನ, ನಿಶ್ಚೇಷ್ಟತೆ, ದಿಗಿಲು. ಆ ದೊಡ್ಡ ಗಡಿಯಾರಕ್ಕೂ ಮನೆಯಲ್ಲಿರುವ ಈ ವಾಚಿಗೂ ಏನೂ ಸಂಬಂಧವಿಲ್ಲ. ಆದರೂ ಆ ದೊಡ್ಡ ಗಡಿಯಾರದ ಕುರಿತು ಎಲ್ಲಿ ಕೇಳಿದ್ದು ಅನ್ನೋ ಚಡಪಡಿಕೆ ತೀವ್ರವಾಯಿತು.
ಏನಾದರು ಇರಲಿ ನಾಳೆಯೇ ವಾಚು ರಿಪೇರಿಗೆ ಕೊಡಬೇಕು. ಎರಡು ದಿನದ ಮಟ್ಟಿಗಾದರೂ ಸುಮ್ಮನಿರುತ್ತೆ. ಇಲ್ಲದಿದ್ದರೆ ಮಾರಿಬಿಟ್ಟರಾಯಿತು. ರಗಳೆ ಇಲ್ಲ.
ಬೆವರಿನ ಮೇಲೆ ಗಾಳಿ ಸೋಕಿ ಹಿತವೆನಿಸಿತು. ಕರೆಂಟು ಬಂದು ಫ್ಯಾನು ತಿರುಗುತ್ತಿದೆಯಾ? ಆದರೆ, ಈಗಲೂ ಮಾತು ಹೊರಡಲಿಲ್ಲ. ಭಯ ಕಮ್ಮಿಯಾಗಿದೆ. ದೊಡ್ಡ ಗಡಿಯಾರ ಮರೆತುಹೋಯಿತು.
ವಾಚು ರಿಪೇರಿ ಆಗದಿದ್ದರೆ ಅದನ್ನು ಮಾರುವುದೇ ಒಳ್ಳೆಯದು. ಇಲ್ಲ….ಇಷ್ಟಕ್ಕೂ ಅದರಿಂದ ಯಾವ ಕೆಡುಕಾಗಿದೆ? ತನ್ನ ಪಾಡಿಗೆ ತಾನು ಇಷ್ಟ ಬಂದಾಗ ಕೀಂಕೀ ಅನ್ನುತ್ತೆ.
ಕಾಕತಾಲೀಯವಾಗಿಯಾದರೂ ಏನೂ ಘೋರವಾದ ಅನಾಹುತಗಳು ನಡೆದಿಲ್ಲ. ಆದರೆ, ಭಯ ಹುಟ್ಟಿಸುತ್ತೆ. ಆದರೆ, ಇದರಲ್ಲಿ ಅದರ ತಪ್ಪೇನು? ಯಾಕೆ ವಿನಾಕಾರಣ ಗಾಬರಿಯಾಗಬೇಕು?
ಎಲ್ಲವೂ ಭ್ರಮೆ!
ಎಸ್ಸಸ್ಸೆಲ್ಸಿ ಓದುತ್ತಿರುವಾಗ ಅಪ್ಪ ಕೊಡಿಸಿದ ಮೊದಲ ವಾಚದು. ಈ ಹತ್ತು ವರ್ಷದಲ್ಲಿ ಸೆಲ್ ಬದಲಾಯಿಸುತ್ತಿದ್ದದ್ದು ಬಿಟ್ಟರೆ ಬೇರೆ ಯಾವುದೇ ತೊಂದರೆಯಿಲ್ಲ. ಮದುವೆಯಾಗಿ ಎರಡು ವರ್ಷದಿಂದ ಈಚೆಗೆ ಈ ಅಲಾರಾಂ ಕಾಟ. ಏನೇನೋ ಅರ್ಥೈಸುವಿಕೆ. ಯಾವ ಊಹೆಯೂ ನಿಜವಾಗಿಲ್ಲ. ಆದರೂ ಆತಂಕ. ಇಲ್ಲಾ, ಏನಾದರೂ ಇರಲಿ, ಮಾರುವುದೇ ಸರಿ.
`ಕೀಂಕೀ ಕೀಂಕೀ ಕೀಂಕೀ….’………….ಮತ್ತೆ ಅಲಾರಾಂ!!
ಈ ಬಾರಿ ಅದು ಸಮಾಧಾನ ಭಾವದಲ್ಲಿತ್ತು. ಅದರ ಒರಲುವಿಕೆಯಲ್ಲಿ ತನ್ನದೇ ಸ್ವರವಿದೆ ಎನಿಸಿತು. ಏನಿದು?! ಇದೇನು ಕನಸೇ? ಗಂಡನಿಗೆ ಯಾಕೆ ಕೇಳಿಸುತಿಲ್ಲ? ಪಕ್ಕದಲ್ಲಿ ಗಂಡನಿದ್ದಾನಾ?!….ಹೋ!! ಆ ಕಡೆ ಹೊರಳುವುದಕ್ಕೂ ಆಗುತ್ತಿಲ್ಲ! ಕೈ ಸರಿಸಿ ತಡಕುವುದಕ್ಕೂ ಆಗುತ್ತಿಲ್ಲ!! ಗಂಡನ ಅನುಪಸ್ಥಿತಿಯ ಕಲ್ಪನೆ ಮತ್ತೆ ಆತಂಕ ತಂದಿತು. ಕತ್ತನ್ನು ಯಾರೋ ಹಿಸುಕುತ್ತಿದ್ದಾರೆ.
ದೇಹದ ಪ್ರತಿರೋಧ ಕಮ್ಮಿಯಾಗಿತ್ತಿದ್ದಂತೆ ಕತ್ತು ಹಿಸುಕುವ ಕೈಯ ಬಿಗಿಯೂ ಕಮ್ಮಿಯಾಗುತ್ತ ಬಂತು. ಮಾತಾಡುವ, ಹೊರಳುವ, ಕೈ ಸರಿಸುವ ಯಾವುದೇ ಕಾರ್ಯಕ್ಕೆ ಮುಂದಾಗದೆ ಇಡೀ ಮೈ ನಿಶ್ಚೇಷ್ಟವಾಗಿ ಬಿದ್ದುಕೊಂಡಿತು.
ಕಣ್ಣು ತೆರೆಯಿತು…
ಫ್ಯಾನು ತಿರುಗುತ್ತಿದೆ…
ಗಂಡ ಪಕ್ಕದಲ್ಲೇ ಮಲಗಿದ್ದಾನೆ…
ಗೊರಕೆಯೂ ಹೊಡೆಯುತ್ತಿದ್ದಾನೆ!
ವಾಚು ಕೀಂ ಗುಟ್ಟುತ್ತಿದೆ!!
ಮೈಯೆಲ್ಲ ಹಗುರಾಗಿದೆ…
ಇದು ಕನಸಲ್ಲ. ಹಾಗಿದ್ದರೆ ಫ್ಯಾನಿನ ಗಾಳಿ ಎಲ್ಲಿ ಬೀಸುತ್ತಿತ್ತು?
ಕನಸೇ ಇರಬೇಕು. ಅಲಾರಾಂ ಸದ್ದು ಮಾತ್ರ ಆ ಕನಸಿಗೂ ಈ ವಾಸ್ತವಕ್ಕೂ ಸಾಕ್ಷಿಯಾಗಿದೆ. ಗೊರಕೆ ಜೋರಾಗಿ ಕೇಳಿಸುತ್ತಿದೆ. ಹೊರಗಡೆ ರಸ್ತೆಯಲ್ಲಿ ಬೈಕೊಂದು ಸ್ಪೀಡಿನಲ್ಲಿ ಹೋದ ಸದ್ದು. ಇದು ಎಚ್ಚರವೇ.
ಹೊರಳಲೂ ಆಗುತ್ತಿರಲಿಲ್ಲ, ಅಲಾರಾಂ ಸದ್ದಿನ ಹೊರತಾಗಿ ಏನೂ ಕೇಳಿಸುತ್ತಿರಲಿಲ್ಲ, ಕಾಣಿಸುತ್ತಿರಲಿಲ್ಲ, ಕೈ ಚಾಚಿ ಗಂಡನನ್ನು ತಾಕಲೂ ಆಗುತ್ತಿರಲಿಲ್ಲ.
ಗಂಡ ಇಷ್ಟು ಹೊತ್ತು ಎಲ್ಲಿದ್ದ?
ಪಕ್ಕದಲ್ಲೇ ಮಲಗಿದ್ದನಾ?
ಮೇಲೆ?
ಅಥವಾ ಎಲ್ಲೆಲ್ಲೂ ಆವರಿಸಿದ್ದನಾ?
******
ಪುಸ್ತಕ ಈಗ ಆನ್ ಲೈನ್ ನಲ್ಲಿ ಸಹ ಲಭ್ಯವಿದೆ. ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ :







0 Comments