ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಮಾತಿಗೆ ತೀವ್ರ ಅಸಮಾಧಾನ


“ಕಲ್ಬುರ್ಗಿ ಬದುಕಿದ್ದಾಗ ಅವರನ್ನು ವಿರೋಧಿಸಿದವರು ಈಗ ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿಗಳನ್ನು ವಾಪಸ್ ಮಾಡುತ್ತಿದ್ದಾರೆ.” ಎಂದು ಕಥೆಗಾರ ವಸುಧೇಂದ್ರ ಅಭಿಪ್ರಾಯಪಟ್ಟಿದ್ದಾರೆ . ಪ್ರಜಾವಾಣಿಯಲ್ಲಿ ಅವರ ಜೊತೆಗಿನ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಅದು ಇಲ್ಲಿದೆ.

ಇದಕ್ಕೆ ಕನ್ನಡ ಬರಹ ಲೋಕದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೊಸ ತಲೆಮಾರಿನ ಪ್ರಮುಖರಾದ ರಾಜೇಂದ್ರ ಪ್ರಸಾದ್ ಹಾಗೂ ವೀರಣ್ಣ ಮಡಿವಾಳರ ಅವರ ಅಭಿಪ್ರಾಯ, ಅಸಮಾಧಾನ ಇಲ್ಲಿದೆ

ನಿಮ್ಮ ಅಭಿಪ್ರಾಯ ಏನು?. ಕಾಮೆಂಟ್ ಮಾಡಿ

ರಾಜೇಂದ್ರ ಪ್ರಸಾದ್

ನಿಮ್ಮ ಮಾತು ತುಂಬಾ ಬೇಸರವನ್ನುಂಟುಮಾಡಿತು ಸಾರ್

ವಿರೋಧಿಸಿದ್ದು ಎಲ್ಲೋ ಒಂದು ಕಡೆ ಅವರ ಒಂದೆರಡು ಮಾತನ್ನೊ- ನಡವಳಿಕೆಯನ್ನೋ ಇರಬಹುದು. ಆದರೆ ವ್ಯಕ್ತಿಯನ್ನಲ್ಲ! ವಿರೋಧದ ಮಾತ್ರಕ್ಕೆ ವೈರತ್ವ ಸಾಧಿಸಬೇಕೇ?!

ಒಬ್ಬ ಹಿರಿಯ ಬರಹಗಾರರನ್ನು ಕ್ರೂರವಾಗಿ ಹತ್ಯೆ ಮಾಡಿದಾಗ ಅದರ ವಿರುದ್ದ ಪ್ರತಿಭಟಿಸುವುದು ತಪ್ಪೇ! ಬರಹಗಾರರ ನಡುವೆ ಇರುವುದು ತಾತ್ವಿಕ ವಿರೋಧಗಳೇ ಹೊರತು ವೈರತ್ವವಲ್ಲ.

ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಾಹಿತ್ಯ ಮತ್ತು ಭಾಷೆಯ ಸಂಘ ಸಂಸ್ಥೆಗಳಿಗೆ ಕಲ್ಬುರ್ಗಿಯವರೇ ಅಧ್ಯಕ್ಷರೋ ಪದಾಧಿಕಾರಿಯೊ ಆಗಿರುತ್ತಿದ್ದರು. ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಯಾಕಂದರೆ ವ್ಯಕ್ತಿಯ ದರ್ಶನ ಎಂತಹುದೆಂದು ಬರಹಗಾರರಿಗೆ ಗೊತ್ತಿತ್ತು. ಬೇಂದ್ರೆ ಪ್ರತಿಷ್ಠಾನ, ಕಟ್ಟೀಮನೀ ಪ್ರತಿಷ್ಠಾನ ಇತ್ಯಾದಿಗಳು ಅದಕ್ಕೆ ನಿದರ್ಶನ. ಕನ್ನಡಭಾಷೆಯ ಸಂಶೋಧನೆಗೆ ಅವರ ಕೊಡುಗೆ ಎಷ್ಟಿದೆಯೆಂಬುದನ್ನು ಎಲ್ಲ ಬರಹಗಾರರು ಬಲ್ಲರು.

ಕನ್ನಡ ಒಬ್ಬ ಮಹತ್ವದ ಹಿರಿಯ ಸಂಶೋಧಕನನ್ನು ಹತ್ಯೆ ಮಾಡಿದಾಗ ಕನ್ನಡ ಎಲ್ಲ ಬರಹಗಾರರು ಸೇರಿ ಪ್ರತಿಭಟಿಸಬೇಕಾಗಿತ್ತು. ದುರದೃಷ್ಟವಶಾತ್ ಅಂತದ್ದು ನಮ್ಮಲ್ಲಿ ಸಾಧ್ಯವಾಗಲಿಲ್ಲ.

 

veeranna madivalaraವೀರಣ್ಣ ಮಡಿವಾಳರ

ಪ್ರಶಸ್ತಿ ವಾಪಸಿಗರ ನಡವಳಿಕೆಗಳಲ್ಲಿ ಗುಂಪುಗಾರಿಕೆಯಿದೆ, ಭ್ರಷ್ಟತೆಯಿದೆ ಎಂದು ಗಾಂಧಿ ಬಜಾರ್ ನಲ್ಲಿ ಜರುಗಿದ ಪಟ್ಟಾಂಗದಲ್ಲಿ ವಸುಧೇಂದ್ರ ಹೇಳಿದ್ದಾರೆ. ಕಲಬುರ್ಗಿಯವರನ್ನ ವಿರೋಧಿಸಿದವರು ಅವರ ಫೋಟೊ ಇಟ್ಟುಕೊಂಡು ಪ್ರಶಸ್ತಿ ವಾಪಸ್ ಮಾಡಿದ್ದಾರೆ ಎಂದು ಕೂಡ.

ನಮ್ಮದಲ್ಲದ ಪಾತ್ರ ಎಂಬಂತಹ ಹೃದ್ಯ ಪ್ರಬಂಧ ಬರೆದ ಮನಸ್ಸೇ ಮೇಲಿನ ಹೃದಯಹೀನ ಮಾತುಗಳನ್ನೂ ಆಡಬಹುದಾದರೆ ಇಲ್ಲಿ ಸಂದರ್ಭವೇ ವ್ಯಕ್ತಿಯನ್ನು ನಿರ್ಧರಿಸುವ ಸೋಜಿಗಕ್ಕೆ ಏನು ಹೇಳುವುದು.

 

‍ಲೇಖಕರು Admin

17 January, 2016

12 Comments

  1. ಆನಂದ್ ಋಗ್ವೇದಿ

    ವಸುಧೇಂದ್ರ ಕನ್ನಡದ ಮುಖ್ಯ ಕತೆಗಾರ. ಅವರ ಕೊಡುಗೆಯನ್ನು ಅನುಲಕ್ಷಿಸಿಯೂ ಕಲ್ಬುರ್ಗಿ ಕುರಿತ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಅನ್ನಿಸಿದೆ.

  2. ನಾಗರಾಜ ಎಂ ಹುಡೇದ

    ಅವರವರ ವಿಚಾರಗಳು ವಿಭಿನ್ನವಾಗಿರಬಹುದು. ಅಂದ ಮಾತ್ರಕ್ಕೆ ಕಲ್ಬುರ್ಗಿಯವರು ಮಾಡಿದ ಮಹಾನ್ ಕಾರ್ಯಗಳನ್ನು ನಾವು ನೆನೆಯಲೇಬೇಕು. ಆಗ ಅವರ ಕೆಲ ವಿಚಾರಗಳನ್ನು ವಿರೋಧಿಸಿದರೂ ಇಷ್ಟು ಕ್ರೂರವಾಗಿ ಹತ್ಯೆಗೈದಾಗ ನಾವೆಲ್ಲಾ ಕಲ್ಬುರ್ಗಿಯವರ ಹತ್ಯೆಯನ್ನು ಖಂಡಿಸಲೇಬೇಕಾದ್ದು ನಮ್ಮ ಧರ್ಮವಾಗಿದೆ.

  3. ಸುಧಾ ಚಿದಾನಂದಗೌಡ

    ಇದೇ ಲೇಖನದಲ್ಲಿ ಅವರು ಬಿಚ್ಚುಮನಸಿನಿಂದ ಹೇಳಿಕೊಂಡಿರುವ ಅನೇಕ ವಿಚಾರಗಳಿವೆ. ಪ್ರಬಂಧಮಾದರಿಯನ್ನು ಕನ್ನಡಕ್ಕೆ ಮತ್ತ ಪೂರ್ಣಪ್ರಮಾಣದಲ್ಲಿ ಬಳಸಿದವರು ಅವರು. ಮನೀಷೆಯ ಕಥೆಗಳಂತೂ ಅಪ್ಪಟ ಸ್ತ್ರೀಪರ ಕಾಳಜಿಯ (ಆ ಉದ್ದೇಶವೇ ಇಲ್ಲದೆಯೇ ಸಹಜವಾಗಿ ಬರೆದ) ಕಥೆಗಳು. ಬರಹವನ್ನು “ಸಾಮಾಜಿಕ ಜವಾಬ್ದಾರಿ” ಎಂದೂ ಅವರು ಹೇಳಿದ್ದಾರೆ. ಪ್ರಶಸ್ತಿಗಳನ್ನು ನಿರಾಕರಿಸುವುದೂ ಒಂದು ಸಾಮಾಜಿಕ ಜವಾಬ್ದಾರಿ ಎಂದು ಭಾವಿಸಿರುವುದರಿಮದಲೇ “ಪ್ರಶಸ್ತಿ ವಾಪಸಿ” ಚಳುವಳಿ ನಡೆದಿದೆ. ಮೋಹನಸ್ವಾಮಿಯೂ ಒಂದು ಚಳುವಳಿಯೇ.
    ಇದೆಲ್ಲದರ ಮಧ್ಯೆ ನುಸುಳಿರುವ ಈ ಪ್ರಮಾದದ ಹೇಳಿಕೆಯನ್ನು ಅಲಕ್ಷಿಸುವುದೇ ಸಮಂಜಸ.

  4. ಸಂತೋಷಕುಮಾರ ಪಾಟೀಲ

    ವಸುಧೇಂದ್ರರ ಹೇಳಿಕೆಯ ಬಗ್ಗೆ ಈ ಪ್ರಮಾಣದ ಅಸಹಿಷ್ಣತೆ ಬೇಕಿರಲಿಲ್ಲವೇನೋ.. ಅವರ ಹೇಳಿಕೆಯನ್ನು ವ್ಯಕ್ತಿಸ್ವಾತಂತ್ರ್ಯ ಎಂದು ಯಾಕೆ ಗೌರವಿಸಬಾರದು?
    ಅವರ ಹೇಳಿಕೆ ಸಂಪೂರ್ಣ ಸುಳ್ಳಂತೂ ಅಲ್ಲವಲ್ಲಾ.. ಕಡೇ ಪಕ್ಷ ಮಾಧ್ಯಮಗಳಂತೂ ಅವರು ಬದುಕಿದ್ದಾಗ ತೋರಿದ ಪ್ರತಿಕ್ರಿಯೆಗೂ ಸತ್ತ ಮೇಲೆ ತೋರುತ್ತಿರುವ ಅತ್ಯುತ್ಸಾಹಕ್ಕೂ ಅಜಗಜಾಂತರ ವ್ಯತ್ಯಾಸ ಇದೆ… ಇದೆ ವಾದ ಕೆಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ..

  5. Gopaala Wajapeyi

    ‘ವಸುಧೇಂದ್ರ ಮಾತಿಗೆ ತೀವ್ರ ಅಸಮಧಾನ’ ಸರಿಯೋ ಅಥವಾ ‘ವಸುಧೇಂದ್ರ ಮಾತಿಗೆ ತೀವ್ರ ಅಸಮಾಧಾನ’ ಸರಿಯೋ? ನೀವಿನ್ನೂ ವಾಸಿ. ಕೆಲವು ಟೀವಿ ಚಾನಲ್ಲುಗಳು ಪತ್ರಿಕೆಗಳು ಅದನ್ನು ‘ಅಸಮದಾನ’ ಎಂದು ಬರೆಯುತ್ತವೆ. ‘ಅವಧಿ’ಯಲ್ಲಿ ನಾನು ತಪ್ಪು ಪದ ಬಳಕೆ ಇಷ್ಟಪಡುವುದಿಲ್ಲ. ಯಾಕಂದರೆ ಅದು ‘ನನ್ನ’ ಪತ್ರಿಕೆ.

    • Avadhi

      ವಂದನೆಗಳು ಸರ್
      ತಪ್ಪನೆಲ್ಲ ಕ್ಷಮಿಸವ್ವ ಅಡ್ಡ ಬಿದ್ದೆವು..

  6. sunil ms

    Gumpugarike elladiddare kelavareke mouna iddaru

  7. M A Sriranga

    ಹೊಸ ಕನ್ನಡ ಸಾಹಿತ್ಯದಲ್ಲಿ ಸಹಿಷ್ಣುತೆ ಮತ್ತು ಅಸಹಿಷ್ಣುಗೆ ದೀರ್ಘ ಇತಿಹಾಸವಿದೆ. ವೈಯಕ್ತಿಕವಾಗಿ ತಮಗಾಗದವರ ಬಗ್ಗೆ ಮತ್ತು ಅವರ ಸಾಹಿತ್ಯದ ಬಗ್ಗೆ ಪತ್ರಿಕೆಗಳೂ ಸೇರಿದಂತೆ ಸಾಹಿತಿಗಳು ಮತ್ತು ವಿಮರ್ಶಕರು ಅಸಹಿಷ್ಣುತೆಯಿಂದಲೇ ಅಲ್ಲವೇ ಅವರೆನ್ನೆಲ್ಲಾ ‘ಜನಪ್ರಿಯ’ ಸಾಹಿತಿಗಳು ಎಂದು ಬ್ರಾಂಡ್ ಮಾಡಿ ದೂರವಿಟ್ಟಿದ್ದು, ದೂರಿದ್ದು,ಹಂಗಿಸಿದ್ದು, ಕುಚೋದ್ಯ,ಲೇವಡಿ ಮಾಡಿಕೊಂಡು ತಮ್ಮ ತಮ್ಮ ಪತ್ರಿಕೆಗಳಲ್ಲಿ ಬರೆದಿದ್ದು? ಈಗ ಪ್ರಶಸ್ತಿ ವಾಪಸಾತಿಯ ಮಹಾ ಯಜ್ಞದಲ್ಲಿ ಅಂತಹವರೂ ಇದ್ದಾರೆ. ವಸುಧೆಂದ್ರರು ಅಂತಹವರ ದ್ವಂದ್ವ ಮನೋಭಾವವನ್ನು ಟೀಕಿಸಿದ್ದಾರೆ. ಆದರೆ ಪ್ರಶಸ್ತಿ ವಾಪಸ್ ಮಾಡಿದವರ ಬಗ್ಗೆ ತಮಗೆ ಅಪಾರ ಗೌರವವಿದೆ ಎಂದೂ ಹೇಳಿದ್ದಾರೆ. ವಸುಧೆಂದ್ರರ ಮಾತುಗಳನ್ನು ಟೀಕಿಸುವವರು ಅದನ್ನು ಗಮನಿಸಬೇಕು. ಅದನ್ನು ಗಮನಿಸದೆ ಮಾಡುವ ಟೀಕೆ ಒಂದು ‘ಇಸಂ’ಗೆ ಬದ್ಧವಾದದ್ದು ಎಂಬುದು ಸೂರ್ಯನ ಬೆಳಕಿನಷ್ಟೇ ಸ್ಪಷ್ಟ.

  8. M A Sriranga

    ನಾಗರಾಜ್ ಹರಪನಹಳ್ಳಿ Journalist @ Karwar ಅವರಿಗೆ– ತಾವು ವಸುಧೇಂದ್ರರ ಮಾತುಗಳನ್ನು ಸಾಫ್ಟ್ ಭಾಷೆಯಲ್ಲಿ ಹೇಳಿದ ಮುತಾಲಿಕ್ ಅವರ ಮಾತು ಎಂದು ಟೀಕಿಸಿದ್ದೀರಿ. ತಾವು journalist ಆಗಿರುವುದರಿಂದ ಜನಸಾಮಾನ್ಯರಿಗಿಂತ current affairsನಲ್ಲಿ ದಿನಾ update ಆಗಿರುತ್ತೀರಿ. ದಾದ್ರಿ ಘಟನೆಗೆ ನಮ್ಮ ಸಾಹಿತಿಗಳು,ಬುದ್ಧಿಜೀವಿಗಳು ಮತ್ತು ಬಾಲಿವುಡ್ ನಟರು ಮಾತಾಡಿದ್ದು ಸರಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ ಇದೇ ಜನವರಿಯ ಮೊದಲನೇ ವಾರದಲ್ಲಿ ಪಶ್ಚಿಮ ಬಂಗಾಳದ ಮಾಲ್ಡ ಮತ್ತು ಕಾಳಿಯಾಚಕ್ ನಲ್ಲಿ ನಡೆದ ಘಟನೆಯ ಬಗ್ಗೆ ತಮಗೆ ತಿಳಿದಿದೆ ಎಂದು ಭಾವಿಸಿದ್ದೇನೆ.(ತಾವು ಬೇರೆ ಯಾವುದಾದರೂ ವಿಷಯದಲ್ಲಿ busy ಆಗಿದ್ದು ,ಮಾಲ್ಡಾ ಮತ್ತು ಕಾಳಿಯಾಚಕ್ ನ ಘಟನೆ ಬಗ್ಗೆ ಗಮನಹರಿಸಲು ಇದುವರೆಗೆ ಸಾಧ್ಯವಾಗದಿದ್ದರೆ ಅದನ್ನು You Tube ನಲ್ಲಿ Zee News/TimesNow tv channel ನಲ್ಲಿ ಈಗಲೂ ನೋಡಬಹುದು) ಅದರ ಬಗ್ಗೆ ಮೇಲೆ ಹೇಳಿದ ನಮ್ಮ ರಾಜ್ಯದ /ದೇಶದ ಮಾನ್ಯರು ಒಂದೇ ಒಂದು ಮಾತಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ತಮಗೆ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ.

  9. ವಸುಧೇಂದ್ರ

    ಪ್ರಿಯ ಸ್ನೇಹಿತರೆ,

    ನಮಸ್ಕಾರಗಳು. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ. ಆದರೆ ಮಾತುಗಳು, ಅಭಿಪ್ರಾಯಗಳು ಸ್ಪಷ್ಟವಾಗಿರಲಿ ಎಂಬ ಕಾರಣದಿಂದ ಈ ಕೆಳಗಿನ ಸ್ಪಷ್ಟೀಕರಣ ಕೊಡುತ್ತಿರುವೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ.

    ಕೇವಲ ನೈತಿಕ ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದ ಎಲ್ಲರ ಬಗ್ಗೆಯೂ ನನ್ನ ಗೌರವವಿದೆ. ಸಂಭ್ರಮದಲ್ಲಿ ಭಾಗವಹಿಸಿದ ವೈದೇಹಿಯವರೂ ವೇದಿಕೆಯ ಮೇಲೆ ಅದನ್ನು ವ್ಯಕ್ತ ಪಡಿಸಿದ್ದರು. ಎಲ್ಲ ಭಿನ್ನಾಭಿಪ್ರಾಯಗಳನ್ನೂ ಸ್ವೀಕರಿಸುವ ಮುಕ್ತ ವಾತಾವರಣ ಅಲ್ಲಿತ್ತು. ಆದರೆ ಆ ಸಾಹಿತ್ಯ ಸಮಾರಂಭವೇ ಆಗಕೂಡದೆಂದು ಪ್ರಯತ್ನಗಳು ನಡೆದವು. ಅಲ್ಲಿ ಭಾಗವಹಿಸುವುದೇ ತಪ್ಪೆನ್ನುವ ಪಾಪಪ್ರಜ್ಞೆ ಬಿತ್ತುವ ಕೆಲಸವೂ ನಡೆಯಿತು. ಅದು ನಿಮಗೂ ಗೊತ್ತು. ನನ್ನ ವಿರೋಧವೇನಿದ್ದರೂ ಅಂತಹ ತೀವ್ರಗಾಮಿಗಳ ಬಗ್ಗೆ.

    ವಿಶ್ವಾಸದಿಂದ
    ವಸುಧೇಂದ್ರ

  10. ಟಿ.ಕೆ.ಗಂಗಾಧರ ಪತ್ತಾರ.

    “ನಮ್ಮದಲ್ಲದ ಪಾತ್ರ”, “ಹಂಪಿ ಎಕ್ಸಪ್ರೆಸ್”ಗಳಂತಹ ವಿಶಿಷ್ಟ ಪ್ರಬಂಧ ಬರೆದ ಸೂಕ್ಷ್ಮ ಸಂವೇದನೆಯ ವಸುಧೇಂದ್ರ ಹಾಗೇ ಸುಮ್ಮನೇ ಹೀಗೆ ಹೇಳಿರಲಾರರು. “ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡ”ಎಂಬಂತೆ ವಸುಧೇಂದ್ರರ ಮಾತಿಗೆ ಯಾರಾದರೂ ಏಕೆ ಅಸಮಾಧಾನ ಪಡಬೇಕು. ಬಹುಶಃ ವಸುಧೇಂದ್ರರು ಭಾವಿಸಿರುವಂತೆ ಸ್ವಹಿತಕ್ಕಾಗಿ ಅಲ್ಲಿ-ಇಲ್ಲಿ-ಎಲ್ಲೆಡೆಗೂ ಸಲ್ಲುತ್ತ ತಮ್ಮ ಕಾರ್ಯಸಾಧಿಸಿಕೊಳ್ಳುವ ಮಂದಿಗೇನೂ ಕಡಿಮೆಯಿಲ್ಲ. ಕುವೆಂಪುರವರಿಗೆ ಜ್ಞಾನಪೀಠ ಬಂದಾಗ ಕುವೆಂಪು ಕವಿಯೆನ್ನುವುದಾದರೆ ನಾನು ಕವಿಯೇ ಅಲ್ಲ ಎಂದ ಅಡಿಗರು ಕುವೆಂಪು ಮೈಸೂರು ವಿ.ವಿ.ಕುಲಪತಿಯಾದಾಗ ಒಂದು ಕೆಲಸಕ್ಕೆ ಹೋದಾಗ ಕುವೆಂಪು ಏನೂ ಆಗೇಯಿಲ್ಲವೆಂಬಂತೆ ಪ್ರೀತಿ-ವಿಶ್ವಾಸದಿಂದ ಕೆಲಸ ಮಾಡಿಕೊಟ್ಟರು. ಬೇಂದ್ರೆಯವರು ಬದುಕಿದ್ದಾಗಲೇ ಬೇಂದ್ರೆ ಕವಿಯಾಗಿ ಸತ್ತು ಎಷ್ಟೋ ವರ್ಷಗಳಾದವು ಎಂದು ಕಟುವಾಗಿ ವಿಮರ್ಶಿಸಿದ ಚಂಪಾ, ಕಂಬಾರರಿಗೆ ಜ್ಞಾನಪೀಠ ಬಂದಾಗ ಯೋಗ್ಯತೆಯಿಲ್ಲದವರಿಗೆ ಪ್ರಶಸ್ತಿ ಬರುತ್ತವೆ. ಭೈರಪ್ಪನವರಿಗೆ ಬರಬೇಕಿತ್ತು ಎಂದ ಪಾಟೀಲ ಪುಟ್ಟಪ್ಪ, ಕುಂ.ವೀ.ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಜಾತಿರಾಜಕಾರಣ-ಲಾಬಿ ಮಾಡಿ ಪ್ರಶಸ್ತಿ ಪಡೆದಿದ್ದಾರೆಂದು ಮತ್ಸರಿಸಿದ ಮೊಗಳ್ಳಿ ಒಂದೇ ಎರಡೇ ಹೇಳುತ್ತಾ ಹೋದರೆ ಪುಟ-ಪುಟಗಳಾಗಬಹುದು. ಅಂತಹ ಟೀಕಾಕಾರರನ್ನು ಮತ್ಸರದಿಂದ ತಿರಸ್ಕರಿಸದೇ “ಮನದುದಾರ ಮಹಿಮೆ”ಯ ಕನ್ನಡಿಗರು ಕ್ಷಮಿಸಿದ್ದಾರಲ್ಲವೇ?

  11. umesh desai

    when somebody important speaks truth one must learn to accept it. we all know why Prashasti Vapsi happened..comeon Returnn Any Awards Left in Your Showcase Because of Intolerance in MALDA..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading