ಡಾ.ವಡ್ಡಗೆರೆ ನಾಗರಾಜಯ್ಯ
ಚಿತ್ರದುರ್ಗದ ಬಿಜೆಪಿ ಸಂಸದ ಎ.ನಾರಾಯಣಸ್ವಾಮಿ ಅವರನ್ನು, ಮಾದಿಗ ಸಮುದಾಯಕ್ಕೆ ಸೇರಿದವರೆಂಬ ಕಾರಣದಿಂದ, ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯ ಕಾಡುಗೊಲ್ಲರು, ತಮ್ಮ ಹಟ್ಟಿಗೆ ಪ್ರವೇಶಿಸಗೊಡದಂತೆ ನಿರ್ಬಂಧಿಸಿದ ಘಟನೆಯು ವ್ಯಾಪಕವಾದ ಪ್ರಚಾರ ಮತ್ತು ಚರ್ಚೆಗೆ ಗ್ರಾಸವಾಗಿದೆ.

ನನಗೆ ದಲಿತ ಬಂಧುಗಳು ಬೆಳಗಿನಿಂದಲೂ ಫೋನ್ ಕಾಲ್ ಮಾಡುತ್ತಾ, ಮಾದಿಗರನ್ನು ತಮ್ಮ ಹಟ್ಟಿಗೆ ಪ್ರವೇಶಿಸದಂತೆ ನಿರ್ಬಂಧಿಸುವ ಮತ್ತು ದಲಿತರ ವಿರುದ್ಧ ಅನಿಷ್ಟ ಜಾತಿ ಪದ್ದತಿಯನ್ನು ಆಚರಿಸುವ ಕಟ್ಟರ್ ಸಂಪ್ರದಾಯನಿಷ್ಠರಾದ ಕಾಡುಗೊಲ್ಲರ ಪರವಾಗಿ ನೀವು ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ಹಾಗೂ ಅವರ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕಾಗಿ ಕೆಲಸ ಮಾಡುವುದು ಸರಿಯಲ್ಲ. ಅಸ್ಪೃಶ್ಯತೆ ಆಚರಿಸುವ ಕಾಡುಗೊಲ್ಲರು ಎಂದಾದರೂ ದಲಿತರ ಪರವಾದ ಹೋರಾಟಗಳಲ್ಲಿ ಪಾಲ್ಗೊಂಡಿರುವರೇ? ನೀವು ಅವರ ಪರವಾಗಿ ಕೆಲಸ ಮಾಡುವುದನ್ನು ನಿಲ್ಲಿಸಿಬಿಡಿ. ಕಟ್ಟಕಡೆಯ ದಲಿತರ ಪರವಾದ ನಿಮ್ಮ ಹೋರಾಟವನ್ನು ಮುಂದುವರೆಸಿರಿ ಎಂದು ಉಚಿತ ಸಲಹೆಗಳನ್ನು ನೀಡುತ್ತಿದ್ದಾರೆ.
ಸಂಸದರನ್ನೇ ಹಟ್ಟಿಯ ಹೊರಗಿಟ್ಟು ಅಸ್ಪೃಶ್ಯತೆ ಆಚರಿಸುತ್ತಾರೆಂದರೆ ಜನಸಾಮಾನ್ಯರ ಪಾಡೇನು? ಇಂಥವರ ವಿರುದ್ಧ ಅಸ್ಪೃಶ್ಯತಾಚರಣೆಯ ಮತ್ತು ಜಾತಿ ನಿಂದನೆಯ ಪೊಲೀಸ್ ಕೇಸು ಜಡಿದು ಜೈಲಿಗೆ ಅಟ್ಟಬೇಕು ಎಂದು ತಮ್ಮ ಸಿಟ್ಟನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇವರಿಗೆ ನಾನು ನೀಡುವ ಉತ್ತರವೇನೆಂದರೆ :
ಅಕ್ಷರ ವಂಚಿತರಾದ ಅಪಾರ ಪ್ರಮಾಣದ ಕಾಡುಗೊಲ್ಲರು ಅಜ್ಞಾನ ಮತ್ತು ಮೂಢನಂಬಿಕೆಗಳಿಂದ ಬಳಲುತ್ತಿದ್ದಾರೆ. ಬದುಕಿನ ಆಧುನಿಕ ರೀತಿ-ರಿವಾಜುಗಳಿಗೆ ಹೊಂದಿಕೊಳ್ಳದೆ ಇಂದಿಗೂ ತಮ್ಮದೇ ಪ್ರತ್ಯೇಕ ಹಟ್ಟಿಗಳಲ್ಲಿ ಕಳ್ಳೆಬೇಲಿ ಹಾಕಿಕೊಂಡು ಗುಡಿಸಲುಗಳಲ್ಲಿ ವಾಸವಿದ್ದಾರೆ. ತಮ್ಮ ಹೆಣ್ಣುಮಕ್ಕಳನ್ನು ಮುಟ್ಟುತಟ್ಟು ಹೆರಿಗೆ, ಬಾಣಂತನ ಸಂದರ್ಭಗಳಲ್ಲಿಯೂ ಕಾಡುಗೊಲ್ಲರು ಹಟ್ಟಿಯಾಚೆಗೆ ಗುಡಿಸಲಿನಲ್ಲಿ ಇರಿಸುವ ಪದ್ದತಿ ಅನುಸರಿಸುತ್ತಿದ್ದಾರೆ. ಅಮ್ಮ, ಮಗಳು, ಸೊಸೆ, ಹೆಂಡತಿ, ನಾದಿನಿ ಎಂಬ ಯಾವುದೇ ಮಮಕಾರ ನೋಡದೆ ಹೆಣ್ಣುಮಕ್ಕಳನ್ನು ಹಟ್ಟಿ ಹೊರಗೆ ಗುಡಿಸಲುಗಳಲ್ಲಿರಿಸುವ ಮೌಢ್ಯಗಳನ್ನು ಪಾಲಿಸುತ್ತಿದ್ದಾರೆ.
ಅಂಥಾದ್ದರಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಸಂಸದ ಎ.ನಾರಾಯಣಸ್ವಾಮಿ ಅವರನ್ನು, ತಮ್ಮ ಸಾಂಪ್ರದಾಯಿಕ ಕುಲಾಚಾರಗಳ ಪ್ರಕಾರ ಹಟ್ಟಿಯಿಂದ ಆಚೆಗಿರಿಸಿರುವ ವರ್ತನೆಯನ್ನು ಅತ್ಯಂತ ಸಹಜವಾಗಿ ತೋರಿಸಿದ್ದಾರೆ. ಇದು ಖಂಡನೀಯವಾದ ಹೇಯ ಕೃತ್ಯವೇ ನಿಜ. ಆದರೆ ಮುಗ್ಧರೂ ಸಾಧು ಸ್ವಭಾವದವರೂ ಆದ ಕೆಲವು ಹಿರಿತಲೆಯ ಕಾಡುಗೊಲ್ಲರಿಗೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಪರಿಚಯವಾಗಲೀ, ಆಧುನಿಕ ಕಾನೂನು ಕಟ್ಟಳೆಗಳ ಬಗ್ಗೆಯಾಗಲೀ, ಸಾರ್ವಜನಿಕರಿಗಿರುವ ನಾಗರಿಕ ಹಕ್ಕುಗಳ ಬಗ್ಗೆಯಾಗಲೀ ಕನಿಷ್ಠ ಪ್ರಮಾಣದ ಅರಿವಿರುವುದಿಲ್ಲ. ಸರಿಯಾದ ಮಾಹಿತಿಯೂ ಇರುವುದಿಲ್ಲ. Ignorance of the law excuses no one ಎಂಬ ಮಾತನ್ನು ಸರಿಯಾಗಿ ಅರ್ಥೈಸಿ ಈ ಜನರಲ್ಲಿ ಅರಿವು ಮೂಡಿಸಬೇಕಾದವರು ಯಾರು?
ರೊಪ್ಪದಕುರಿ ಕುರಿರೊಪ್ಪ ಕುರಿಸೊಪ್ಪು ಕರಿಜಾಡಿ ಸಗಣಿ ಗಂಜಳ ಜನಿಗೆಕುರಿ, ತಿಪ್ಪೆ ತೊಪ್ಪೆ, ಗಣೆ, ಗಣೆಪದ, ಜನಪದ ದೈವಗಳಾಗಿ ರೂಪಾಂತರವಾಗಿರುವ ತಮ್ಮದೇ ಸಾಂಸ್ಕೃತಿಕ ನಾಯಕರು, ಗೊಲ್ಗೋಲು, ಗೊಲ್ಲಗಡಗ, ಕುಲಾಚಾರ ಕಟ್ಟಳೆಗಳು, ಕಟ್ಟೆಮನೆ ಒಳಾಡಳಿತ ವ್ಯವಸ್ಥೆ ಮುಂತಾದ ಸಂಗತಿಗಳು ಮಾತ್ರ ಇವರಿಗೆ ನೀರು ಕುಡಿದಷ್ಟು ಸಲೀಸಾಗಿ ಅರ್ಥವಾಗುತ್ತವೆ. ಸ್ವಾತಂತ್ರ್ಯಾನಂತರದಲ್ಲಿ ಕಾಡುಗೊಲ್ಲರಿಗೆ ಆಧುನಿಕ ಶಿಕ್ಷಣ, ವೈಚಾರಿಕ ತಿಳಿವಳಿಕೆ, ವೈಜ್ಞಾನಿಕ ಮನೋಭಾವ, ಸರ್ಕಾರಿ ನೌಕರಿ, ದುಡಿದು ಬದುಕಲು ಭೂಮಿಕಾಣಿ, ನಾಗರಿಕ ಸೌಲಭ್ಯಗಳು ಮುಂತಾದವುಗಳನ್ನು ಇತರೆ ಕೆಲವು ಜನವರ್ಗಗಳಿಗೆ ನೀಡಿರುವಂತೆ ಒದಗಿಸಿದ್ದಿದ್ದರೆ ಇದುವರೆಗೆ ಮುಖ್ಯವಾಹಿನಿಗೆ ತೆರೆದುಕೊಂಡಿರುತ್ತಿದ್ದರು.

ವೈಫಲ್ಯ ಇರುವುದು ಈಗಾಗಲೇ ಶಿಕ್ಷಣ ನೌಕರಿ, ರಾಜಕೀಯ ಅಧಿಕಾರ, ಉದ್ಯಮ, ಆರ್ಥಿಕ ಉತ್ಪಾದನಾ ರಚನೆಗಳು ಮುಂತಾದ ರಂಗಗಳಲ್ಲಿ ಬದುಕಿನ ನೆಲೆಗಳನ್ನು ಹೊಂದಿ ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಿರವಾಗಿ ನೆಲೆಸಿರುವ ಸುಶಿಕ್ಷಿತ ವರ್ಗದ ಜನರಲ್ಲಿಯೇ ಹೊರತು ಅಶಿಕ್ಷಿತ ಕಾಡುಗೊಲ್ಲರಲ್ಲಲ್ಲ. ಯಾಕೆಂದರೆ ಇಂತಹ ಸುರಕ್ಷಿತ ವಲಯದ ಸುಶಿಕ್ಷಿತ ಜನ, ಕತ್ತಲ ಕೊಂಪೆಗಳಲ್ಲಿ ಪ್ರತ್ಯೇಕವಾಗಿ ಬದುಕುತ್ತಿರುವ ಕಾಡುಗೊಲ್ಲರ ಹಟ್ಟಿಗಳ ಕಡೆಗೆ ತಿರುಗಿಯೂ ನೋಡಲಿಲ್ಲ. ನಾವು ದೂಷಿಸಬೇಕಿರುವುದು ಸಮಾಜದ ಮುಖ್ಯವಾಹಿನಿಯಲ್ಲಿರುವ ಸುಶಿಕ್ಷಿತ ಬಲಾಢ್ಯರನ್ನೇ ಹೊರತು ಅನಕ್ಷರಸ್ತರೂ ಅಜ್ಞಾನಿಗಳೂ ಆಗಿರುವ ಅಶಿಕ್ಷಿತ ಅಮಾಯಕ ಕಾಡುಗೊಲ್ಲರ ಜನರನ್ನಲ್ಲ.
ಕವಿ ಸಾಹಿತಿಗಳೂ ಕೂಡಾ ಈ ನಿಟ್ಟಿನಲ್ಲಿ ತಮ್ಮ ಸಾಮಾಜಿಕ ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನು ಸರಿಯಾಗಿ ನಿರ್ವಹಿಸಿಲ್ಲವೆಂದೇ ಹೇಳಬೇಕಿದೆ. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದ ಕುವೆಂಪು ಅವರು, ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂದು ಕರೆಕೊಡುವ ಮೂಲಕ ಬರಹಗಾರರು ವಿಚಾರವಾದಿಗಳಾಗಬೇಕಾದ ಅಗತ್ಯವನ್ನು ಮನಗಾಣುತ್ತಾರೆ. ವಿಚಾರವಂತ ಸಾಹಿತಿಗಳು ದೊಡ್ಡ ಪ್ರಮಾಣದಲ್ಲಿ ಮೂಡಿಬರಬೇಕೆಂದು ಅವರು ಬಯಸುತ್ತಾರೆ.
ನಮ್ಮ ಈಗಿನ ಬಹುಪಾಲು ಲೇಖಕರು ಮತಿಹೀನ ನಿರಂಕುಶರಾಗುತ್ತಿರುವರೇ ಹೊರತು ಆತ್ಮಶ್ರೀ ಬೆಳಗಿಸಿಕೊಳ್ಳುತ್ತಿಲ್ಲ. ಇನ್ನು ವಿಚಾರ ಕ್ರಾಂತಿಗಾಗಿ ಆಹ್ವಾನ ನೀಡಿದ ಕುವೆಂಪು ಅವರ ಕರೆಯಂತೂ ಅತ್ಯಂತ ಕ್ಷೀಣವಾಗಿ ಕೇಳಿಸುತ್ತಿದೆ. ಸಮಾಜದ ನಿರ್ಮಾಣದ ಕನಸುಹೊತ್ತ ಸಾಮಾಜಿಕ ನ್ಯಾಯದ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್ ಆಶಿಸಿರುವ ಸಮಾನತೆ – ಸೋದರತೆ – ಸಾಮಾಜಿಕ ನ್ಯಾಯ – ಜಾತ್ಯಾತೀತತೆ ಎಂಬ ಪರಿಕಲ್ಪನೆಗಳು ಇಂದಿಗೂ ಸಾಕಾರಗೊಳ್ಳದೆ ಸಂವಿಧಾನದ ಪುಟಗಳಲ್ಲಿಯೇ ಉಳಿದುಬಿಟ್ಟಿವೆ.
ಗೊಲ್ಲರ ಹಟ್ಟಿಗಳಲ್ಲಿ ಇಂದಿಗೂ ರೂಢಿಯಲ್ಲಿರುವ ಅನಿಷ್ಟ ಪದ್ದತಿಗಳಿಂದ ಜನರನ್ನು ವಿಮುಕ್ತಗೊಳಿಸಬೇಕಿರುವ ಹಾಗೂ ಆ ನಿಟ್ಟಿನಲ್ಲಿ ತಿಳಿವಳಿಕೆ ಮೂಡಿಸಬೇಕಿರುವ ರಾಜಕೀಯ ನಾಯಕರು, ಕವಿ, ಸಾಹಿತಿಗಳು ಮತ್ತು ಪ್ರಗತಿಪರ ಸಾಮಾಜಿಕ ಕಾರ್ಯಕರ್ತರು ತಮ್ಮ ಹೊಣೆಗಾರಿಕೆಗಳಿಂದ ವಿಮುಖರಾಗಿ ಬಡಪಾಯಿ ಕಾಡುಗೊಲ್ಲರನ್ನು ದೂರುವುದು ಯಾವ ನ್ಯಾಯ? ಬುಡಕಟ್ಟು ದೈವಾರಾಧನೆಯ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಕಾಡುಗೊಲ್ಲರು ಕಳ್ಳೇಬೇಲಿಯೊಳಗಿರುವ ಹುಲ್ಲುಗುಡಿಸಲು ದೈವಗಳನ್ನು ಮಾತ್ರವಲ್ಲದೆ ಬುಡಕಟ್ಟು ಮೂಲ ಸಂಸ್ಕೃತಿಯ ಅನೇಕ ರಚನೆಗಳನ್ನು ಉಳಿಸಿಕೊಂಡಿದ್ದಾರೆ.
ಇಂತಹ ಬುಡಕಟ್ಟು ರಾಜಕೀಯ ಒಳಾಡಳಿತ ರಚನೆಯಲ್ಲಿ ಮಾದಿಗರನ್ನು ಕಾಡುಗೊಲ್ಲರ ಹಟ್ಟಿಯೊಳಕ್ಕೆ ಬಿಟ್ಟುಕೊಳ್ಳದಿರುವ ಪದ್ದತಿಯೂ ಒಂದು. ಆಧುನಿಕ ನಾಗರಿಕತೆ ಮತ್ತು ಸಂವಿಧಾನಬದ್ಧ ನಾಗರಿಕ ಹಕ್ಕುಗಳಿಗ ಎರವಾಗಿರುವ ಇಂತಹ ಆಚರಣೆಗಳ ವಿರುದ್ಧ ಅರಿವು ಮೂಡಿಸಬೇಕಾಗಿರುವುದು ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಹೊಣೆಯಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿ ಅವರು ಮಾದಿಗ ಸಮುದಾಯದವರೆಂದು ಪ್ರವೇಶಿಸದಂತೆ ಪ್ರತಿಬಂಧಿಸಿರುವ ಹಿನ್ನೆಲೆಯಲ್ಲಿ 19-09-2019 ರ ಗುರುವಾರ ಮಧ್ಯಾಹ್ನ 12:00 ಗೆ ಯುವ ಕರ್ನಾಟಕ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಕಾಡುಗೊಲ್ಲರ ಸಾಮಾಜಿಕ ಪರಿವರ್ತನಾ ಜಾಥಾ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.






your interpretation is right sir.