ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ವಚನಗಳು ಮತ್ತು ಜಾತಿ…’ – ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ

ವಚನಗಳ ನೆಲೆ ಮತ್ತು ಜಾತಿ ವ್ಯವಸ್ಥೆಯ ಹಿನ್ನಲೆಯಲ್ಲಿ ವಚನಗಳ ಮಹತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದರ ಬಗ್ಗೆ ಡಾ ಕಿರಣ್ ಎಂ ಗಾಜನೂರು ಅವರು ಬರೆದ ಲೇಖನ ಇಲ್ಲಿದೆ.

ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.

ವಚನಗಳು ಮತ್ತು ಜಾತಿ

ಡಾ.ಕಿರಣ್.ಎಂ ಗಾಜನೂರು

“ಕರ್ನಾಟಕದ ಬೌಧ್ಧಿಕ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸೈಂಧಾಂತಿಕ ಹಂತದ ಅಥವಾ ಸಿದ್ಧಾಂತಗಳನ್ನು ಕಟ್ಟುವ ಮತ್ತು ಬೆಳೆಸುವ ಮಟ್ಟದ ಸಂಶೋಧನೆ ನಡೆಯುತ್ತಿಲ್ಲ ಬದಲಾಗಿ ಇಗಾಗಲೇ ಮಂಡಿತವಾಗಿರುವ/ವಾಗುತ್ತಿರುವ ಸಿದ್ಧಾಂತಗಳ ನೆಲೆಯಲ್ಲಿ ನಮ್ಮ ಸಮಾಜಿಕ ಸನ್ನಿವೇಶಗಳನ್ನು ವಿವರಿಸುವ ಮತ್ತು ಅವುಗಳ ಬೆಳಕಿನಲ್ಲಿ ತಮ್ಮ ಅನುಕೂಲಕ್ಕೆ ಪೂರಕ ಐಡಿಯಾಲಜಿಗಳನ್ನು ಸೃಷ್ಟಿಸಿ ಆ ಮೂಲಕ ತಮ್ಮ ಐಡೆಂಟಿಟಿ ಉಳಿಸಿಕೊಳ್ಳುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ ಇದಕ್ಕೆ ಕಾರಣ ಕರ್ನಾಟಕದ ಬಹುಪಾಲು ಸಮಾಜ ಚಿಂತಕರಿಗೆ ಸೈಂಧಾಂತಿಕ ಮಾದರಿಯ ಸಂಶೋಧನೆಯ ತರಬೇತಿಯೇ ಇಲ್ಲದಿರುವುದು.

ಆದ್ದರಿಂದಲೇ ಇಲ್ಲಿ ನಡೆದ ಬಹುಪಾಲು ರಾಜಕೀಯ ಮತ್ತು ಸಮಾಜಿಕ ಚಳುವಳಿಗಳ ಸೈಂದ್ಧಾಂತಿಕ ನೆಲೆ ಪಕ್ಕದ ತಮಿಳುನಾಡು ಮತ್ತು ಆಂಧ್ರ ರಾಜ್ಯಗಳಿಂದ ಆಮದಾಗಿದೆ” (ಉದಾ; ಹಿಂದುಳಿದ ಮತ್ತು ದಲಿತ ಹೋರಾಟ) ಮೇಲಿನ ಹೇಳಿಕೆ ಕರ್ನಾಟಕದ ವಿದ್ವತ್ ವಲಯದ ಕುರಿತು ಒಂದು ಟೀಕೆಯ ಮಾದರಿಯಲ್ಲಿ ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಮತ್ತು ಈಗ ಡಂಕಿನ್ ಮತ್ತು ಬಾಲಗಂಗಾಧರ ಅವರ ವಚನಗಳ ಕುರಿತ ಲೇಖನದ ಚರ್ಚೆಯಲ್ಲಿ ಭಾಗವಹಿಸಿದ ವಿದ್ವಾಂಸರ ಅಭಿಪ್ರಾಯಗಳು ಮೇಲಿನ ಹೇಳಿಕೆಯನ್ನೆ ಗಟ್ಟಿಗೊಳಿಸುತ್ತಿವೆ.

ಹಾಗೆ ನೋಡಿದರೆ ಡಂಕಿನ್ ಮತ್ತು ಬಾಲು ತಮ್ಮ ವಚನ ಮತ್ತು ಇತರೆ ಸಂಶೋಧನೆಗಳ ಮೂಲಕ ತಮ್ಮ ಕನ್ನಡದ ಚಿಂತನಾವಲಯಕ್ಕೆ ಒಂದು ಮಹತ್ವದ ಸೈಂಧಾಂತಿಕ ಪ್ರಶ್ನೆಯನ್ನು ನೀಡಿದ್ದಾರೆ ಮತ್ತು ಅದು ಅವರ ಹಲವು ವರ್ಷಗಳ ಸಂಶೋಧನೆಯ ಫಲಿತವು ಆಗಿದೆ ಎಂಬುದನ್ನು ಅವರೇ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರೀಯಿಸಬೇಕಾದ ನಾವು ಮಾಡಬಹುದಾದ ಕನಿಷ್ಟ ಕೆಲಸವೆಂದರೆ ಅವರು ಕರ್ನಾಟಕವನ್ನು ಕೆಂದ್ರವಾಗಿಟ್ಟುಕೊಂಡು ಎನು ಸಂಶೋಧನೆ ಮಾಡಿದ್ದಾರೆ? ಮತ್ತು ಆದರ ಆಧಾರದ ಮೇಲೆ ಏನೆಲ್ಲ ಬರೆದಿದ್ದಾರೆ ಎಂಬುದನ್ನು ಒದಿಕೊಂಡು ಪ್ರತಿಕ್ರೀಯಿಸುವುದು. ಮತ್ತು ಅದು ಸಂಶೋಧಕನ ಕರ್ತವ್ಯವು ಹೌದು.

ಆದರೆ ಡಂಕಿನ್ ಮತ್ತು ಬಾಲು ಅವರ ಸಂಶೋಧನಾ ಹೇಳಿಕೆಗಳಿಗೆ ನಾವು ಅವರ ಸಂಶೋಧನೆಯ ಯಾವ ಹಂತವನ್ನು ಗಮನಿಸಿದೆ ವಿಷ್ಲೇಶಿಸದೆ ಕೇವಲ ಶಿವಪ್ರಕಾಶ್ ಅವರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ ಒಂದೇರಡು ಅಂಶಗಳ ಆಧಾರದ ಮೇಲೆ (ಮುಖ್ಯವಾಗಿ ವಚನಗಳಲ್ಲಿ ಬಳಕೆಯಾದ ಜಾತಿ ಪದದ ಶೇಕಡಾವಾರು ಪ್ರಮಾಣ) ನಮ್ಮ ನಮ್ಮ ಬೌಧ್ಧಿಕ ಐಡೆಂಟಿಟಿಗಳಿಗೆ ಪೂರಕವಾದ ಐಡಿಯಾಲಜಿಗಳ ನೆರವಿನಿಂದ ಅವರುಗಳ ಇಡೀ ಸಂಶೋಧನೆಯನ್ನೆ ಟೀಕಿಸುತ್ತಿದ್ದೇವೆ ಮತ್ತು ಅದನ್ನು ವಿಮರ್ಶೆ ಎಂದು ನಂಬಿದ್ದೇವೆ.

ಆದರೆ ನಿಜ ಅರ್ಥದಲ್ಲಿ ಅವರ ಸೈದ್ದಾಂತಿಕ ಮಟ್ಟದ ಸಂಶೋಧನೆಯ ಕುರಿತು ಯಾವುದೆ ಆಸಕ್ತಿದಾಯಕ ಮತ್ತು ಅಗತ್ಯ ಪ್ರಶ್ನೆಯನ್ನೆ ಎತ್ತದ ನಮ್ಮ ವಿದ್ವತ್ ವಲಯ ತಾನೇ ತಾನಾಗಿ ಡಂಕಿನ್ ಮತ್ತು ಬಾಲು ಅವರಿಗೆ ವಿಜಯವನ್ನು ಒದಗಿಸಿದೆ. ಆದ್ದರಿಂದ ಮೂದಲು ನಾವು ಅವರು ಎನು ಹೇಳುತ್ತಿದ್ದಾರೆ ಎಂದು ತಿಳಿದುಕೊಳ್ಳಬೇಕಿದೆ ನನ್ನ ಪ್ರಕಾರ ಡಂಕಿನ್ ಮತ್ತು ಬಾಲು ಅವರು ವಚನ ಮತ್ತು ಜಾತಿಗಳ ಕುರಿತು ಹೀಗೆ ಮಾತನಾಡುತ್ತಾರೆ ಅನ್ನಿಸುತ್ತದೆ.

ಭಾರತದ ಸಮಾಜದಲ್ಲಿ ಇಂದು ಪ್ರಚಲಿತದಲ್ಲಿರುವ ಮತ್ತು ನಮ್ಮ ಎಲ್ಲಾ ಅಭಿವೃಧ್ದಿ ಕಾರ್ಯಗಳಿಗೆ ಆಧಾರವಾಗುರುವ ಜಾತಿಯ ಕುರಿತಾದ ಸಮಾಜ ಶಾಸ್ತ್ರೀಯ ವಿವರಣೆ ನಿಜವಾದ ಅರ್ಥದಲ್ಲಿ ಇಲ್ಲಿನ ಜಾತಿಗಳನ್ನು ಮತ್ತು ಅದರ ಸಮಾಜಿಕ ನಡವಳಿಕೆಗಳನ್ನು ಪ್ರತಿನಿಧಿಸುತ್ತಿಲ್ಲ. ಹಾಗಂತ ಭಾರತದಲ್ಲಿ ಜಾತಿಗಳೇ ಇಲ್ಲ, ಜಾತಿ ಆಧಾರದಲ್ಲಿ ಅವಮಾನ, ಅಪಮಾನ ಮತ್ತು ಶೋಷಣೆಗಳು ನಡೆದೆ ಇಲ್ಲ ಅಂತಲ್ಲ! ಅವೆಲ್ಲವೂ ಅಂದು ಇದ್ದವು. ಬದಲಾದ ಇಂದಿನ ಸಮಾಜದಲ್ಲಿಯು ಬೇರೆ ಬೇರೆ ರೂಪದಲ್ಲಿ ಇವೆ.

ಆದೆರೆ ನಮ್ಮ ವಿದ್ವತ್ ವಲಯ, ಚಿಂತಕರು ಬುದ್ಧಿಜೀವಿಗಳು ಮತ್ತು ಮುಖ್ಯವಾಗಿ ನಮ್ಮ ಪ್ರಭುತ್ವ ಸ್ವತಂತ್ರ್ಯ ನಂತರದ ಸುಮಾರು ೬೫ ವರ್ಷಗಳ ಅವಿರತ ಪ್ರಯತ್ನದ ಫಲವಾಗಿಯು ಸೊ ಕಾಲ್ಡ್ ಜಾತಿ ಶೋಷಣೆಗಳನ್ನು ಅರ್ಥಮಾಡಿಕೊಂಡು ಪರಿಹರಿಸುವಲ್ಲಿ ಸೋತಿದೆ ಎಂದಾದರೆ ನಾವು ಯಾವುದನ್ನು ಸಮಸ್ಯೆ ಎಂದು ಭಾವಿಸಿದ್ದೇವೆಯೋ ಅದು ನಿಜವಾದ ಸಮಸ್ಯೆ ಆಗಿರಲಿಕ್ಕಿಲ್ಲ ಅಲ್ಲವೆ! ಹಾಗಾದರೆ ಸಮಸ್ಯೆ ಯಾವುದು? ಎಂಬುದನ್ನು ಮೊದಲು ಗುರುತಿಸಬೇಕಾಗುತ್ತದೆ ಡಂಕಿನ್ ಮತ್ತು ಬಾಲು ಅವರು ತಮ್ಮ ಸಂಶೋಧನೆಯ ಮೂಲಕ ಇಷ್ಟು ವರ್ಷಗಳ ಕಾಲ ನಾವು ಯಾವುದನ್ನು ಭಾರತದ ಭಾರತ ಸಮಾಜದ ಜಾತಿಯ ಕುರಿತಾದ ವೈಜ್ಞಾನಿಕ ಜ್ಞಾನ ಎಂದುಕೊಂಡಿದ್ದೇವೆಯೊ ಅದು ವಸಾಹತು ಕಾಲದಲ್ಲಿ ಯುರೋಪಿಯನ್ನರು ತಮ್ಮ ಅನುಭವ ಮತ್ತು ಸಂಸ್ಕ್ರತಿಯ ಹಿನ್ನಲೆಯಲ್ಲಿ ಇಲ್ಲಿನ ಜಾತಿಗಳ ಕುರಿತು ನಿರೂಪಿಸಿದ ಜ್ಞಾನವಾಗಿತ್ತು ಎಂದು ವಿವರಿಸಿದ್ದಾರೆ. ಮುಂದುವರಿದು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ವಸಾಹತು ಕಾಲದಲ್ಲಿ ಇಲ್ಲಿನ ಜಾತಿಯ ಕುರಿತು ಯುರೋಪ್ ಮೆದುಳು ನಿರ್ಮಿಸಿದ/ಕಟ್ಟಿಕೊಟ್ಟ ಹೇಳಿಕೆಗಳು ಯಾವುದೇ ಪ್ರಮುಖ ಸೈಂಧಾಂತಿಕ ಪ್ರಶ್ನೆಗಳಿಗೆ ಎದುರಿಸದೆ/ಒಳಗಾಗದೆ ಇಲ್ಲಿನ ಬೌಧ್ದಿಕತೆ ಎಂದೇ ನಿರೂಪಣೆಗೊಂಡು ನಮ್ಮ ಸಮಾಜದ ಪ್ರಮುಖ ವಿವರಣೆಯಾಗಿ ಬದಲಾಯಿತು ಮತ್ತು ಭಾರತದ ಪ್ರಮುಖಾತಿ ಪ್ರಮುಖ ಪಠ್ಯಗಳಲ್ಲಿ ಸ್ಥಾನ ಪಡೆಯಿತು ಎಂದು ವಿಶ್ಲೇಷಿಸಿದ್ದಾರೆ. ಮುಂದೆ ನಮ್ಮ ಪ್ರಭುತ್ವದ ಎಲ್ಲಾ ಮಾದರಿಯ ಸಮಾಜಿಕ ಯೋಜನೆಗಳಿಗೆ ಈ ನಮ್ಮದಲ್ಲದ ಜ್ಞಾನವೇ ಅಡಿಪಾಯವಾಯಿತು.

ಅದಕ್ಕಿಂತ ಅಪಾಯದ ಅಂಶ ಎಂದರೆ ೧೮ ಮತ್ತು ೧೯ನೇ ಶತಮಾನದಲ್ಲಿ ಇದೇ ಜ್ಞಾನ ಸಮಾಜಿಕ ಶಾಸ್ತ್ರವಾಗಿ ಬದಲಾಯಿತು. ಜಾತಿಯ ಕುರಿತಾದ ಎಲ್ಲಾ ಚರ್ಚೆಗಳು ಇದೇ ಚೌಕಟ್ಟಿನಲ್ಲಿ ನಡೆಯತೊಡಗಿದವು ಸಂಘಗಳು, ಸಮುದಾಯಗಳು ಹುಟ್ಟಿಕೊಂಡವು ಜಾತಿಯ ಕುರಿತ ನಮ್ಮದಲ್ಲದ ಜ್ಞಾನಕ್ಕೆ ಶಾಸ್ತ್ರೀಯ ಸ್ಥಾನ ದೊರೆತ ನಂತರ ನಮ್ಮ ಸಮಾಜದ ನಿಜವಾದ ಅನುಭಾವಿಗಳಾದ ಬಸವಣ್ಣ, ಕನಕದಾಸ, ಇತ್ಯಾದಿ ಮಹನಿಯರು ಇದೇ ಪರಕೀಯ ವ್ಯವಸ್ಥೆಯ ವಿರುಧ್ದ ೧೨ನೇ ಶತಮಾನದಲ್ಲಿಯೇ ಹೋರಾಡಿದ ಮಹನಿಯರು ಎನ್ನಿಸಿಕೊಂಡು ಬಿಟ್ಟರು! ಆದರೆ ವಾಸ್ತವದ ೧೨ನೇ ಶತಮಾನದಲ್ಲಿ ಈ ಮಾದರಿಯ ವ್ಯವಸ್ಥೇಯ ಅಸ್ತಿತ್ವವೇ ಇರಲಿಲ್ಲ. ಹಾಗೆ ನೋಡುವುದಾದರೆ ಬಸವಣ್ಣ ಮತ್ತು ವಚನಕಾರರು ತಮ್ಮ ಕಾಲಘಟ್ಟದಲ್ಲಿದ್ದ ಜಾತಿ ಅಸಮಾನತೆಗಳನ್ನು ಅವು ಸಮಾಜದಲ್ಲಿ ಇರುವ ಹಾಗೆಯೇ ಗ್ರಹಿಸಿ ಅವುಗಳನ್ನು ವಿರೋಧಿಸಿದರು ಅದ್ದರಿಂದಲೇ ಅವರ ವಚನಗಳು ಸಮಾಜದ ಎಲ್ಲಾ ವರ್ಗಗಳನ್ನು ಸೇಳೆದವು ಮತ್ತು ಅವರ ಬದುಕಿನ ವಿಧಾನ ಅನುಸರಿಸುವಂತೆ ಪ್ರರೇಪಿಸಿದವು ವಚನಗಳು ಮತ್ತು ಜನಪದರ ಬದುಕು ಇಂದಿಗೂ ಆ ಕೆಲಸ ಮಾಡುತ್ತಿವೆ ಇದು ನಮಗಿರುವ ಬಹಳ ದೊಡ್ಡ ನಿದರ್ಶನ.

ಆದರೆ ನಮ್ಮ ಕಾಲದ ದುರಂತ ಎಂದರೆ ಬಸವಣ್ಣ, ಕನಕದಾಸ, ಅಲ್ಲಮ ಇತ್ಯಾದಿ ಮಹನಿಯರ ಅನುಭವದ ಹಿನ್ನಲೆಯಲ್ಲಿ ರಚಿಸಿದ ವಚನಗಳ ಆಧಾರದಲ್ಲಿ ಸಮಾಜವನ್ನು ಜಾತಿಯ ತಾರತಮ್ಯಗಳನ್ನು ಅರ್ಥಮಾಡಿಕೊಳ್ಳದೆ ೧೮ ಮತ್ತು ೧೯ನೇ ಶತಮಾನದಲ್ಲಿ ಯುರೋಪಿಯನ್ನರು ತಮ್ಮ ಅನುಭವದ ಹಿನ್ನಲೆಯಲ್ಲಿ ಈ ನೆಲದ ಯಾವ ಗ್ರಹಿಕೆಗೂ ಸಂಬಂದವಿಲ್ಲದಂತೆ ಸೃಷ್ಟಿಸಿದ ಚೌಕಟ್ಟಿನ ಒಳಗೆ ನಮ್ಮ ಬಸವಣ್ಣ, ಕನಕದಾಸ, ಅಲ್ಲಮನ ವಚನಗಳನ್ನು ಗುರುತಿಸಿ ವಿವರಿಸುತ್ತಿದ್ದೇವೆ. ಇದು ನಿಜವಾಗಿಯು ಆ ಮಹನಿಯರಿಗೆ ಮಾಡುವ ಅವಮಾನ ನಿಜ ಅರ್ಥದಲ್ಲಿ ಇಂದು ನಾವು ವಸಾಹತುಶಾಹಿ ನಿರ್ಮಿಸಿದ ಭಾರತದ ಸಮರ್ಥನೆಗೆ ಬಸವಾದಿ ಮಹನಿಯರ ವಚನಗಳನ್ನು ಬಳಸುತ್ತಿದ್ದೇವೆ ಮತ್ತು ಅದನ್ನೆ ಪ್ರಗತಿ ಎಂದು ತಿಳಿದಿದ್ದೇವೆ.

ಶಿಕ್ಷಣದ ಹೆಸರಿನಲ್ಲಿ ಅದನ್ನೆ ಕಲಿಸುತ್ತಿದ್ದೇವೆ ಇದು ನಿಜವಾದ ಅಘಾತ ನಮ್ಮ ಈ ಪ್ರವೃತ್ತಿಯೇ ಬದುಕಿನ ಕುರಿತು ಸಮಾಜಿಕ ಸಾಮರಸ್ಯದ ಕುರಿತು ತಮ್ಮ ಅನುಭವದ ಮೂಲಕ ಜಗತ್ತಿಗೆ ಮಾದರಿಯಾಗಬಹುದಾದ ವಚನಗಳನ್ನು ರಚಿಸಿದ ವಚನಕಾರರನ್ನು ಜಗತ್ತಿನ ಶ್ರೆಷ್ಟ ವಿದ್ವಾಂಸರ ಪಟ್ಟಿಯಲ್ಲಿ ಕಾಣಲಾಗಿಲ್ಲ ಇದಕ್ಕೆ ಕಾರಣ ನಮ್ಮ ಸಮಾಜದ ಸರ್ವ ಶ್ರೇಷ್ಟ ಅನುಭಾವಿಗಳನ್ನು ಒಂದೂಂದು ಜಾತಿಗೆ ಸಿಮಿತಗೊಳಿಸಿ ವಿವರಿಸಿದ ನಮ್ಮ ಬೌಧ್ಧಿಕ ದಿವಾಳಿತನ ಕಾರಣವೇ ಹೊರತು ವಚನಕಾರರು ಮತ್ತು ಮಹಾಪುರುಷರಲ್ಲ.

ಆದ್ದರಿಂದ ಭಾರತೀಯರಾದ ನಾವು ಇನ್ನಾದರೂ ಒದಿನ ಅಹಮಿಕೆ ಬಿಟ್ಟು ವಚನಾದಿ ಜಾನಪದ ಸಾಹಿತ್ಯದ ಮೂಲಕ ನಮ್ಮ ಸಮಾಜ ಕುರಿತ ಸಿದ್ಧಾಂತಗಳನ್ನು ರಚಿಸಲು ಸಾಧ್ಯವೇ ಎಂದು ನೋಡಬೇಕಿದೆ ಆ ದಾರಿಯಲ್ಲಿ ಡಂಕಿನ್ ಮೂದಲ ಹೆಜ್ಜೆ ಇಟ್ಟಿದ್ದಾರೆ ಸೈಂಧಾಂತಿಕ ಹಂತದಲ್ಲಿ ಅವರ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಿ ಮಾರ್ಗದರ್ಶನ ಮಾಡುವುದು ನಮ್ಮ ಹಿರಿಯರ ಕರ್ತವ್ಯ ಮತ್ತು ಸಮಾಜವು ಅದನ್ನೆ ನೀರಿಕ್ಷಿಸುತ್ತದೆ ಹಾಗಾದಾಗ ಮಾತ್ರ ನಾನು ಈ ಲೇಖನದ ಪ್ರಾರಂಭದಲ್ಲಿ ಹೇಳಿದ ಕರ್ನಾಟಕದ ಸಂಧರ್ಭದಲ್ಲಿ ಇರುವ ಜಡ ಸಿಂಧ್ಧಾಂತಗಳನ್ನು ಪ್ರಶ್ನಿಸುವ/ಮುರಿಯುವ ಮತ್ತು ಹೊಸದನ್ನು ಕಟ್ಟುವ ಮಹತ್ವದ ಸಂಶೋಧನಾ ಕೆಲಸಕ್ಕೆ ಅಡಿಪಾಯ ದೊರೆಯುತ್ತದೆ. ಆಗ ಮಾತ್ರವೆ ಓದು ವಾದಗಳೇಕೆ, ಗಾದಿಯ ಮಾತೇಕೆ ವೇದ ಪುರಾಣ ನಿನಗೇಕೆ? ಲಿಂಗದಾ ಹಾದಿಯರಿದವಗೆ ಸರ್ವಜ್ಞ ಎಂಬ ಮಹನಿಯರ ಮಾತಿಗೆ ಅರ್ಥ ಬಂದಂತಾಗುತ್ತದೆ.

‍ಲೇಖಕರು avadhi

3 April, 2013

10 Comments

  1. ಡಂಕಿನ್ ಝಳಕಿ

    ಶಂಕರ ಮತ್ತು ಮಂಡನಮಿಶ್ರ ೬೦ ದಿನಗಳ ತನಕ ಎಡಬಿಡದೆ ಚರ್ಚೆ ಮಾಡಿದ್ದರಂತೆ. ಕಡೆಗೂ ಯಾರೂ ಸೋಲದೆ/ಗೆಲ್ಲದೆ ಹೋದಾಗ ಮಂಡನಮಿಶ್ರನ ಹೆಂಡತಿ ವಾದಕ್ಕೆ ಇಳಿಯ ಬೇಕಾಯಿತಂತೆ. ಇಂತಹ ಚರ್ಚೆ ಬರಿ ಕಥೆಯಾಗಿ ಉಳಿಯಿತಲ್ಲ ಭಾರದದಲ್ಲಿ ಎಂದು ವಿಷಾದವಾಗುತ್ತದೆ.

  2. Dr. t.n. vasudevamurthy

    ಡಂಕಿನ್ ಝಳಕಿ ಅವರ ಲೇಖನಕ್ಕೆ ಒಂದು ಪ್ರತಿಕ್ರಿಯೆ
    ಅಸಹಾಯಕರೇ ಧನ್ಯರು, ಏಕೆಂದರೆ ಮೇಲಿನ ಲೋಕದಲ್ಲಿ ಸ್ವರ್ಗದ ಬಾಗಿಲುಗಳು ಅಂಥವರಿಗಾಗಿಯೇ ತೆರೆದಿರುತ್ತವೆ ಎಂಬ ಯೇಸುಕ್ರಿಸ್ತನ ಮಾತುಗಳನ್ನು ಫ್ರೆಡರಿಕ್ ನೀಷೆ ಇದು ಗುಲಾಮರುಗಳ ನೈತಿಕತೆ (ಸ್ಲೇವ್ ಮೊರಾಲಿಟಿ) ಎಂದು ಕಟುವಾಗಿ ವ್ಯಾಖ್ಯಾನಿಸಿದ್ದ. ಇಂತಹ ತತ್ವಗಳನ್ನು ನಂಬಿ ಪ್ರಚಾರ ಮಾಡುವವರು ಬಳಿಕ ಇಡೀ ಜಗತ್ತನ್ನೇ ಗುಲಾಮತನದಲ್ಲಿ ಮುಳುಗಿಸಿಬಿಡುವರು ಎಂದು ವಸಾಹತುಶಾಹಿಗಳ ಕುರಿತು (ಅಂದರೆ ಕ್ರಿಶ್ಚಿಯನ್ನರ ಕುರಿತು) ಎಚ್ಚರಿಕೆಯ ಮಾತುಗಳನ್ನು ನುಡಿದಿದ್ದ. ಮುಂದೆ ನೀಷೆಯ ಭವಿಷ್ಯವಾಣಿ ನಿಜವಾುತು.
    ಯೇಸುವಿನ ಬೋಧನೆಗಳನ್ನು ಹೀಗೆಲ್ಲ ವ್ಯಾಖ್ಯಾನಿಸಿದ್ದ ನೀಷೆಯಂತಹ ಪ್ರತಿಭಾವಂತನಿಗೆ ರೂಪಕದ ಭಾಷೆ ಅರ್ಥ ಮಾಡಿಕೊಳ್ಳುವಷ್ಟು ಸಾಮಾನ್ಯ ತಿಳಿವಳಿಕೆ ಇರಲಿಲ್ಲವೇ? ಸಾಹಿತ್ಯದ ಅರ್ಥವ್ಯಕ್ತಿ ಹುದುಗಿರುವುದು ಶಬ್ದಾರ್ಥಗಳಲ್ಲೇ ಅಥವಾ ಆ ಶಬ್ದಾರ್ಥಗಳನ್ನು ಗ್ರಹಿಸುವ ಮನಃಸ್ಥಿತಿಯಲ್ಲೇ ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅರ್ಥವ್ಯಕ್ತಿ ಶಬ್ದಾರ್ಥಗಳಲ್ಲಷ್ಟೇ ಹುದುಗಿದೆ ಎಂದು ನಂಬುವುದಾದರೆ ಮೇಲೆ ಉಲ್ಲೇಖಿಸಲಾದ ಯೇಸುವಿನ ಉಪದೇಶಗಳು ನಿಜಕ್ಕೂ ಕಾವ್ಯಾತ್ಮಕವಾದುದು. ಆದರೆ ಅದನ್ನು ಗ್ರಹಿಸುತ್ತಿದ್ದ ಬಾಹ್ಯಜಗತ್ತಿನಲ್ಲಿ ಆ ಉಪದೇಶಗಳು ಕಾವ್ಯಾತ್ಮಕ ಪರಿಣಾಮವನ್ನೇನೂ ಉಂಟು ಮಾಡಲಿಲ್ಲ. ವಸಾಹತುಶಾಹಿಗಳ ಮನಸ್ಸಿನಲ್ಲಿ ಯೇಸುವಿನ ಶರಣಾಗತಿ, ವಿನಯ, ಸಹಿಷ್ಣುತೆ, ಕ್ಷಮೆ, ವಿರಕ್ತಿ ಮೊದಲಾದ ಮೌಲ್ಯಗಳು ವಿರೂಪಗೊಂಡವು. ಇದನ್ನೆಲ್ಲ ನೀಷೆ ತುಂಬ ವಿವರವಾಗಿಯೇ ತನ್ನ ಕೃತಿಯಲ್ಲಿ (ಆಂಟಿ ಕ್ರೈಸ್ಟ್) ವಿಶ್ಲೇಸುತ್ತಾನೆ.
    ಮಾತಿನ ಒಂದು ಅಪವ್ಯಾಖ್ಯಾನ ಹೀಗೆ ಜಗತ್ತನ್ನೇ ಗುಲಾಮತನಕ್ಕೆ ತಳ್ಳಿಬಿಡಬಲ್ಲದು ಎನ್ನುವುದಾದರೆ ಅದೇ ಅಪವ್ಯಾಖ್ಯಾನ ವಿಮೋಚನೆಯ ಕಡೆಗೂ ಕೊಂಡೊಯ್ಯಬಹುದಲ್ಲವೇ? ಈ ನಂಬಿಕೆುಂದಲೇ ಈವರೆಗಿನ ಬಹುತೇಕ ಕನ್ನಡ ಚಿಂತನೆ ಬಸವ-ಅಲ್ಲಮರನ್ನು ಅಧ್ಯುಸುತ್ತ ಬಂದಿರುವುದು. ವಿಪರೀತ ವ್ಯಾಖ್ಯಾನ ವಿಮಶರ್ೆಯ ಒಂದು ಗುಣವೇ ಆಗಿದೆ ಎಂದು ಎಕೋನಂತಹ ಆಧುನಿಕೋತ್ತರವಾದಿಗಳು ಚಿಂತಿಸುತ್ತಾರೆ ಎಂಬುದು ಬೇರೆಯದೇ ಚಚರ್ೆಯ ವಿಷಯವಾಗುತ್ತದೆ.
    ಸಾಹಿತ್ಯವನ್ನು ಕ್ರಮಬದ್ಧವಾಗಿ ಪರಿಶೀಲಿಸುವ ಅಕಾಡೆಮಿಕ್ ಗುಣವೊಂದಿದೆ, ನಿಜ. ಆದರೆ ಕ್ರಮವನ್ನು ವಿಕ್ರಮದಿಂದ ತಾಳ್ದುವ (ಈ ಮಾತು ಪಂಪನದು) ಇನ್ನೊಂದು ಗುಣವೂ ಕನ್ನಡ ಸಂವೇದನೆಗುಂಟು. ಇದುವೆ ಕನ್ನಡ ಕಾವ್ಯ ಪರಂಪರೆಯ ಅಂತಃಸತ್ವವಾಗಿದೆ. ನಮಗೆ ತೋಚಿದಂತೆಲ್ಲ ಭಾವಿಸಲು ಬರುವುದಿಲ್ಲ, ಅದಕ್ಕೆಲ್ಲ ವಚನ ಸಾಹಿತ್ಯ ವಸ್ತುವಿನಲ್ಲಿ ಪ್ರಮಾಣಗಳೇ ಸಿಗುವುದಿಲ್ಲ ಎಂದು ಪಂಡಿತರು ಆಕ್ಷೇಪಿಸಬಹುದು. ವಚನಕಾರರು ಇಪ್ಪತ್ತನೆಯ ಶತಮಾನದ ಪಿಡುಗುಗಳನ್ನೆಲ್ಲ ಕಂಡರಿಸಿದ್ದರು ಎಂಬ ಭ್ರಮೆ ಖಂಡಿತವಾಗಿ ಯಾರಿಗೂ ಇಲ್ಲ. ಅಲ್ಲದೆ ಮುಳುಗುವವನಿಗೆ ತಾನು ಹಿಡಿದಿರುವುದು ಹುಲ್ಲುಕಡ್ಡಿಯೋ ಅಥವಾ ಇನ್ನೊಂದೋ ಎಂಬುದು ಅಮುಖ್ಯವಾಗುತ್ತದೆ. ಶತಮಾನಗಳ ಕಾಲ ವಿವೇಕಹೀನವಾಗಿ ನಿದ್ರೆ ಮಾಡುತ್ತಿದ್ದ ಒಂದು ಜನಾಂಗ ಯಾವುದೋ ಗಳಿಗೆಯಲ್ಲಿ ಎಚ್ಚರಗೊಂಡು ವಚನಗಳ ಮರುವ್ಯಾಖ್ಯಾನದ ನೆವದಲ್ಲಿ ಪರಿವರ್ತನೆಗೆ ಸಂಕಲ್ಪಿಸಿದಾಗ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಇದೆಲ್ಲ ವಸಾಹತುಶಾಹಿಯ ಒತ್ತಡದಿಂದ ಹುಟ್ಟಿಕೊಂಡ ಸಂಕಲ್ಪ ಎಂದು ವ್ಯಾಖ್ಯಾನಿಸುವುದು ತಪ್ಪಾಗುತ್ತದೆ. ಮನುಷ್ಯ ಸಮಾಜದ ಚಲನಶೀಲತೆಯಲ್ಲಿ ನಂಬಿಕೆ ಕಳೆದುಕೊಂಡಾಗ ಹುಟ್ಟಿಕೊಳ್ಳುವ ಮಾತಾಗುತ್ತದೆ.
    ಕಪಿಗಳು ರಾಮನ ಹೆಸರು ಹೇಳುತ್ತ ದೊಡ್ಡ ದೊಡ್ಡ ಬಂಡೆಗಳನ್ನು ಸಮುದ್ರಕ್ಕೆ ಎಸೆಯುತ್ತಿದ್ದವು. ನೀರಿನಲ್ಲಿ ಮುಳುಗದೇ ತೇಲುತ್ತಿದ್ದ ಬಂಡೆಗಳನ್ನು ಚಕಿತನಾಗಿ ನೋಡುತ್ತಿದ್ದ ರಾಮನು ಕುತೂಹಲಕ್ಕೆ ತಾನೂ ಒಂದು ನೊರಜು ಕಲ್ಲನ್ನು ನೀರಿಗೆಸೆದಾಗ ಅದು ತೇಲದೇ ಮುಳುಗಿ ಹೋುತಂತೆ. ಇದನ್ನೆಲ್ಲ ಮರೆುಂದ ಗಮನಿಸುತ್ತಿದ್ದ ಹನುಮಂತನು ಗಟ್ಟಿಯಾಗಿ ನಕ್ಕು ನಿನ್ನ ಹೆಸರಿಗಿರುವ ಬಲ ನಿನಗೂ ಉಂಟೆಂದು ಭಾವಿಸಿರುವೆಯಾ ರಾಮಾ? ಎಂದು ಕೇಳಿದನಂತೆ. ವಚನಯುಗವನ್ನು ಅಪವ್ಯಾಖ್ಯಾನಿಸುತ್ತ ಬಂದಿರುವ ಈವರೆಗಿನ ಎಲ್ಲ ಚಿಂತಕರನ್ನೂ ಹನುಮಂತನ ಅರಿವು ಸಂಕೇತಿಸುತ್ತದೆ. ಹನುಮಂತನ ಟೀಕೆ ಬಸವಣ್ಣನಿಗೂ ಅಥವಾ ಸಕಲ ಪುರಾತನರಿಗೂ ಅನ್ವಯವಾಗುತ್ತದೆ. ಹಳೆಯ ಮಾತನ್ನು ಹೊಸಕಾಲದ ಅಗತ್ಯದಂತೆ ವ್ಯಾಖ್ಯಾನಿಸುವುದು ಒಂದು ದೋಷವಲ್ಲ, ಅದು ಸಾಹಿತ್ಯ ವಿಮಶರ್ೆಯ ಒಂದು ವಿಶಿಷ್ಟ ಗುಣವೇ ಆಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹಳೆಯದನ್ನೆ ಮತ್ತೆ ಮತ್ತೆ ಹೊಸುಸಿ ನೀ ಹೇಳುವೆ (ಬೇಂದ್ರೆ).
    ಡಾ. ಟಿ.ಎನ್. ವಾಸುದೇವಮೂತರ್ಿ

  3. vasanth

    After reading Dankin Jalakis response in Prajavani I was surprised the kind of a analysis he foot-forth. On the basis of the percentage you can’t judge literary work. Dankin Jalaki and his team wants this society to remain as it is. They are rejecting the dynamics of the society. They wanted caste system to be remained as it is. If we have learned the culture of thinking by western thinkers so it be. They have showed the way for us to question the atrocities on downtrodden.

  4. Dr.kiran.m gajanur

    ವಚನಗಳ ಬಗ್ಗೆ ಹಾಗೂ ಲಿಂಗಾಯಿತ, ವೀರಶ್ಯೆವ ಜಾತಿ/ಸಮುದಾಯಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಲೇ ನಡೆದಿವೆ. ಅಂತಹ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದರ ಆದಾರದ ಮೇಲೆ ಢಂಕಿನ್ ತಮ್ಮದೇ ಆದ ಊಹಾಸಿದ್ಧಾಂತವನ್ನು ಮಂಡಿಸಿದ್ದಾರೆ. ಭಾರತದ ಜಾತಿ ವ್ಯವಸ್ಥೆ ಹಾಗೂ ರಿಲಿಜನ್ ಕುರಿತು ಬಾಲಗಂಗಾಧರ ಅವರ ಸಂಶೋಧನೆ ಅವರ ಊಹಾ ಸಿದ್ಧಾಂತಕ್ಕೆ ಮೂಲ ಪ್ರೇರಣೆಯಾಗಿದೆ. ಹಾಗಿದ್ದಲ್ಲಿ ಇಲ್ಲಿ ಚರ್ಚೆಗೊಳಪಡಬೇಕಾಗಿರುವ ಅಂಶಗಳೆಂದರೆ ಢಂಕಿನ್ ಹಾಗೂ ಬಾಲುರವರ ವಾದ ಪ್ರಚಲಿತ ವಿಧ್ಯಮಾನವಾದ ಜಾತಿಗಳ ಸ್ವರೂಪದ ಬಗ್ಗೆ ಇದೂವರೆಗಿನ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಮತ್ತು ಅವುಗಳಿಗಿಂತಲೂ ಹೆಚ್ಚು ಸಮರ್ಥವಾದ ವಿವರಣೆಯನ್ನು ನಮ್ಮ ಮುಂದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆಯೇ ಎನ್ನುವುದು. ಢಂಕಿನ್‍ರವರ ಈ ಸಂಶೋಧನೆಯ ಬಗ್ಗೆ ಎತ್ತಬಹುದಾದ ಇಂತಹ ಪ್ರಶ್ನೆಗಳಿಗೂ ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದೆ ಇದ್ದಿಬಹುದಾದ ಉದ್ದೇಶಗಳಿಗೂ ಏನಾದರೂ ಸಂಬಂಧವಿದೆಯೇ?
    ಢಂಕಿನ್ ಅವರ ವಾದಕ್ಕೆ ಬಂದ ಪ್ರತಿಕ್ರಿಯೆಯನ್ನು ನೋಡಿದಾಗ ಸಂಶೋದನೆಯ ಸ್ವರೂಪದ ಬಗ್ಗೆ ಏಳುವ ಕೆಲವು ಪ್ರಶ್ನೆಗಳೆಂದರೆ: ಸದುದ್ದೇಶಗಳನ್ನು ಹೊಂದಿರುವ ಸಾಮಾಜಿಕ/ಸಾಂಸ್ಕøತಿಕ ಚಳುವಳಿಯ ಸ್ಯೆದ್ಧಾಂತಿಕ ನೆಲೆಯನ್ನು ಸಮಸ್ಯೀಕರಿಸುವ ಕೆಲಸವನ್ನು ಸಂಶೋಧನೆ ಕ್ಯೆಗೆತ್ತಿಕೊಳ್ಳಬೇಕೆ ಬೇಡವೆ? ಬ್ರಾಹ್ಮಣೇತರ, ದಲಿತ, ಬಂಡಾಯ ಇತ್ಯಾದಿ ಪ್ರಗತಿಪರ ಚಳುವಳಿಗಳ ಸಿದ್ಧಾಂತಗಳಲ್ಲಿರುವ ವ್ಯೆರುಧ್ಯಗಳನ್ನು ತೋರಿಸಿದರೆ ಅವುಗಳ ಮೂಲ ಆಶಯವನ್ನು ವಿರೋದಿಸಿದಂತಾಗುತ್ತದೆಯೆ? ವಚನಗಳು ಜಾತಿ ವ್ಯವಸ್ಥೆಯ ವಿರುದ್ಧವಾಗಿಲ್ಲ ಎಂದು ಹೇಳಿದರೆ ಅದು ವಚನಗಳ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆಯೇ? ಪ್ರಚಲಿತ ನಂಬಿಕೆ, ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸುವುದು ಅವುಗಳನ್ನು ಹತ್ತಿಕ್ಕುವ ಹುನ್ನಾರವಾಗುತ್ತದೆ ಎಂದಾದರೆ ಅಂತಹ ಚಳುವಳಿಗಳನ್ನು ಕುರಿತು ಮೂಲಭೂತ ಜಿಜ್ಞಾಸೆಯೇ ಸಾಧ್ಯವಿಲ್ಲ ಎಂದು ಹೇಳಿದಂತಾಗುವುದಿಲ್ಲವೆ? ಯಾವುದೇ ಒಂದು ಸಿದ್ಧಾಂತ ಜೀವಂತವಾಗಿ ಉಳಿಯಬೇಕಾದರೆ ಅದು ನಿರಂತರ ವಿಮರ್ಶೆಗೋಳಪಡುತ್ತಿರಬೇಕು ಮತ್ತು ಅಂತಹ ಪ್ರಕ್ರಿಯೆಯಲ್ಲಿ ಅದರ ಮೂಲ ಸ್ವರೂಪ ಬದಲಾಗುತ್ತಾ ಹೋಗುತ್ತದೆ. ಇಲ್ಲವಾದಲ್ಲಿ ಅದೊಂದು ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ. ಮಾಕ್ರ್ಸವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ. ಅದು ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ ‘ಮಾಕ್ರ್ಸ ಇಂದು ಜೀವಂತವಾಗಿದ್ದರೆ ಅವನು ಮಾಕ್ರ್ಸವಾದಿಯಾಗಿರುತ್ತಿಲಿಲ್ಲ’ ಎಂದು ಹೇಳುವಷ್ಟರ ಮಟ್ಟಿಗೆ. ಚರ್ಚೆಯಲ್ಲಿ ಭಾಗವಹಿಸುತ್ತಿರುವವರು ಇದನ್ನೆಲ್ಲಾ ಹೇಳುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಢಂಕಿನ್ ಅವರ ವಾದದಲ್ಲಿರಬಹುದಾದ ವ್ಯೆರುಧ್ಯಗಳು, ಪೂರ್ವಾಗ್ರಹಗಳು ಮತ್ತು ಅವರ ಸಂಶೋಧನಾ ವಿಧಾನದಲ್ಲಿರಬಹುದಾದ ಧೋಷಗಳನ್ನು ಅವರು ಮಂಡಿಸುವ ವಾದದ ಚೌಕಟ್ಟಿನಲ್ಲಿ ಚರ್ಚಿಸದೆ ಅವರ ಸಂಶೋಧನೆಯನ್ನು ಸಂಶೋಧನೆಗೆ ಅತೀತವಾದ ಅಂದರೆ ಇಂತಹ ಒಂದು ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದಿರುವ ಒಳಸಂಚು ಇತ್ಯಾದಿಗಳ ನೆಲೆಯೆಂದ ಚರ್ಚಿಸತೊಡಗಿದರೆ ಮೇಲಿನ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಕೊನೆಯಲ್ಲಿ ಒಂದು ಮಾತು ಒಂದು ಅರ್ಥಪೂರ್ಣ ಹಾಗೂ ಅರೋಗ್ಯ ಪೂರ್ಣ ಚರ್ಚೆಯಲ್ಲಿ ವಾದಿ ಪ್ರತಿವಾದಿಗಳಿಬ್ಬರಿಗೂ ಸಮಾನ ಅವಕಾಶವಿರಬೇಕಲ್ಲವೆ?
    (courtesy: ಜೆ.ಎಸ್.ಸದಾನಂದ )

  5. ಉದಯಕುಮಾರ್ ಹಬ್ಬು

    ಮೊನ್ನೆ 3ನೇ ತಾರೀಕಿನ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಡಂಕಿನ್ ಝಳಕಿ ಯವರ ಲೇಖನದ ಕುರಿತು ನನ್ನ ಅಭಿಪ್ರಾಯ ಹೀಗಿದೆ. ಅವರ ಮೊದಲ ವಾದ :” ವಚನಗಳು ಜಾತಿಯ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವುದು ವಚನಕಾರರ ಮೂಲಭೂತ ಗುರಿಯಾಗಿತ್ತು ಎನ್ನುವುದು ಒಂದು ಅಸಂಬದ್ಧವಾದ ವಾದ.” ವಚನಗಳನ್ನಾಗಲಿ ಇನ್ನಿತರ ಯಾವುದೇ ಸಾಹಿತ್ಯ ಪ್ರಕರವನ್ನಾಗಲಿ ಮರುಓದಿಗೆ ಒಳಪಡಿಸುವುದು ಅತ್ಯಂತ ಆರೋಗ್ಯಕರವಾದ ಸಂಗತಿಯಾಗಿದೆ. ನಾನು ಝಳಕಿಯವರನ್ನು ಹಾಗಾಗಿ ಅಭಿನಂದಿಸುತ್ತೇನೆ. ಆದರೆ ಆ ಮರುಓದು ಆಯಾ ಗ್ರಂಥಗಳಿಗೆ ನ್ಯಾಯವನ್ನೊದಗಿಸಬೇಕಲ್ಲವೇ?
    ವಚನಗಳ ಅನೇಕ ಉದ್ದೇಶಗಳಲ್ಲಿ ಜಾತಿವ್ಯವಸ್ಥೆಯ ವಿರೋಧವೂ ಒಂದು.ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಅಲ್ಲವೇ? ಸಾಕಷ್ಟು ವಚನಗಳು ಅದರ ಪುರಾವೆಯಾಗಿ ಇವೆ. ಅದಷ್ಟಲ್ಲದೆ ಅಂತರಂಗ ಬಹಿರಂಗ ಶುದ್ಧಿ, ಆಡಂಬರದ ಭಕ್ತಿಯ ವಿಡಂಬನೆ, ಸ್ವಾತಂತ್ರ್ಯ, ಸಮಾನತೆ, ಬಂಧುಬಾಂಧತ್ವದ ಅಧಾರದ ಮೇಲೆ ನಿಂತ ಹೊಸ ಸಮಾಜ ನಿರ್ಮಾಣ ಲಿಂಗಧಾರಣೆಯ ಮಹತ್ವವನ್ನು ಎತ್ತಿ ಹಿಡಿಯುವುದು ಏಕದೇವೋಪಾಸನೆ, ಸಮಾಜದ ನೈತಿಕತೆಯನ್ನು ಕಾಪಾಡಿಕೊಳ್ಳುವುದರ ಕುರಿತಾದ ಅನೇಕ ಸಲಹೆಗಳನ್ನೊಳಗೊಂಡ ನಿಯಮಗಳುಸ್ತ್ರೀ ಸ್ವಾತಂತ್ರ್ಯ ಸಮಾನತೆ ಇತ್ಯಾದಿ ಅವುಗಳ ಉದ್ದೇಶಗಳಾಗಿದ್ದವು. ವಚನಗಳು ಜಾತಿವಿರೋಧವನ್ನು ಮಾಡುವುದಿಲ್ಲ ಎನ್ನುವುದೇ ನಾವು ಅವುಗಳಿಗೆ ಮಾಡುವ ಅಪ್ಚಾರ ಎಂದು ನನಗೆ ಅನಿಸುತ್ತದೆ. ವೀರಶೈವ ಧರ್ಮ ಒಮ್ಮಿಂದೊಮ್ಮೆಲೆ ಆವಿರ್ಭೂತವಾದ ಧರ್ಮವಲ್ಲ. ಭಾರತೀಯ ಅಧ್ಯಾತ್ಮಿಕ ಪರಂಪರೆಯ ವಿಕಾಸದಲ್ಲಿ ಇದೊಂದು ಮೈಲುಗಲ್ಲು. ಶಂಕರ ಮೊಕಾಶಿ ಪುನೇಕಾರ ಇವರು ತಮ್ಮ “ಮಧ್ಯ ಯುಗೀನ ಅಂತ್ಯಜರ ತತ್ವ ಚಿಂತನೆ” ಪುಸ್ತಕದಲ್ಲಿ ನಮೂಡಿಸಿದ ಹಾಗೆ ವೀರಶೈವ ಧರ್ಮವು ಕಾಶ್ಮೀರಿನ ಶೈವ ಮತ ಮತ್ತು ತಮಿಳುನಾಡಿನ ಭಕ್ತಿಪಂಥದ ಸಮ್ಮಿಲನದಿಂದ ಉದ್ಭವಿಸಿದ ಮತವಾಗಿದೆ. ಇವೆರಡೂ ಅಧ್ಯಾತ್ಮಿಕ ಮಾರ್ಗಗಳು ಜಾತ್ಯಾತೀತವಾಗಿದ್ದವು. ಅಂತೆಯೇ ನಾಥ ಪಂಥದಿಂದಲೂವೀರಶೈವವು ಪ್ರಭಾವಿತಗೊಂಡಿದೆ. ನಾಥ ಪಂಥವು ‘ಅಹಂ ಬ್ರಹ್ಮಾಸ್ಮಿ’ ಎಂಬ ಅದ್ವಿತ ಧೋರಣೆ, ತನ್ನನ್ನು ತನರಿವ ಪ್ರವೃತ್ತಿ ಭಾರತದ ಎಲ್ಲ ಅವಧೂತದ ಪಂಥಗಳ ನಿಲುವು. ಇದು ಜಾತಿಪದ್ಧತಿ,ವೇದವಿರೋಧಿ, ಮತ್ತು ಪುರೋಹಿತಶಾಹಿ ನಿಲುವುಗಳನ್ನು ತಿರಸ್ಕರಿಸಿ ಮುನ್ನಡೆದು ನಿಲ್ಲಬಲ್ಲ ತತ್ವ, ನಾಥ,ಸೂಫಿ, ದತ್ತ ಮುಂತಾದ ಎಲ್ಲ್ಕ ಅವಧೂತ ಪಂಥಗಳ ಮುಖ್ಯ ನಿಲುವಿದು. ನಾಥ ಪಂಥದ ‘ಹಠ ಪ್ರದೀಪಿಕೆ’ ಯಲ್ಲಿ ಅಲ್ಲಮನ ಹೆಸರಿರುವುದನ್ನು ನಾವೆಲ್ಲ ಬಲ್ಲೆವು. ಇದರಲ್ಲಿ ವಚನ ಚಳುವಳಿಯಲ್ಲಿ ಮಹತ್ತರ ಪಾತ್ರವಹಿಸಿದ್ದ ಬಸವಣ್ಣನ ಹೆಸರಿಲ್ಲ. ಅಲ್ಲಮ ಪ್ರಭುವಿನೊಂದಿಗೆ ರೇವಣಸಿದ್ಧ, ಮರುಳಸಿದ್ಧ, ಸಿದ್ಧರಾಮ ಮೊದಲಾದವರು ಈ ಪರಂಪರೆಗೆ ಸೇರಿದವರೆಂದು ಭಾವಿಸಬಹುದು. ಸಾಧನೆಯ ಮಾರ್ಗದಲ್ಲಿ ಈ ಶೈವ ಪರಂಪರೆಯ ನಾಥರು ಅನುಭವಿಸಿದ ಸೋಲು ವೀರಶೈವದ ಉಗಮಕ್ಕೆ ಕಾರಣವಾಗಿರಬಹುದು..
    ಇನ್ನೂ ಅವರ ಇನ್ನೊಂದು ಹೇಳಿಕೆ ಹೀಗಿದೆ:”ಭಾರತದಲ್ಲಿ ಒಂದು ಜಾತಿವ್ಯವಸ್ಥೆ ಇದೆ. ಅದು ಅನೈತಿಕವಾದುದು ಮತ್ತು ಅದರ ವಿರುದ್ಧ ಹೊರಾಡುವುದು ಪ್ರಗತಿಪರವಾದುದು ಎಂಬ ವಿಚಾರವನ್ನು ನಮಗೆ ಕಲಿಸಿಕೊಟ್ಟವರು ಯುರೋಪಿನ ಚಿಂತಕರು” ಇದನ್ನು ಹೀಗೆಂದು ನಾವು ತಿಳಿದುಕೊಳ್ಳಬಹುದು. ವಸಾತುಶಾಹಿ ಆಡಳಿತ ಬರುವವರೆಗೆ ಭಾರತೀಯರಿಗೆ ಜಾತಿ ವ್ಯವಸ್ಥೆ ಇದೆ ಎಂದು ಗೊತ್ತಿರಲಿಲ್ಲ ಎಂಬುದಾಗುತ್ತದೆ. ಆದ್ರೆ ಈ ಹೇಳಿಕೆಯನ್ನು ಒಪ್ಪಲು ಸಾಧ್ಯವೇ? ‘ಕಾಳಿದಾಸನು ‘ರಘುವಂಶ’ದಲ್ಲಿ ಹೀಗೆ ಹೇಳಿದ್ದಾನೆ:”ಗ್ರಹಗಳ ಭುಕ್ತಿ ಮತ್ತು ಚಲನೆಯು ಹೇಗೆ ಭಗವಂತನ ನಿಯಂತ್ರಣದಲ್ಲಿದೆಯೋ, ಅದೇ ಪ್ರಕಾರವಾಗಿ ರಘುವಂಶದ ವಿರಪುತ್ರರ ಅನುಸರಣೆಯನ್ನು ಅವರ ಅನುಯಾಯಿಗಳು ಮನುವಿನ ಅಪ್ಪಣೆಗೆ ಅನುಸಾರವಾಗಿ ಮಾಡುತ್ತಾರೆ. ಏಕೆಂದರೆ ರಘುವಂಶದ ರಾಜರು ಮಾತ್ರ ಮನು ತೋರಿದ ಮಾರ್ಗಕ್ಕೆ ದಾರಿ ದೀಪವಾಗಬಲ್ಲರು. ರಘುವಂಶದ ಕೊನೆಯ ಅರಸನು ಯಾವಾಗ ಮನುವಿನಿಂದ ಹೇಳಲ್ಪಟ್ಟ ಮಾರ್ಗದಿಂದ ಬೇರೆಯಾದನೋ ಆಗ ಅವನು ಅಕಾಲ ಮ್ಱತ್ಯುನೈದಿದನು. ಮತ್ತು ಅಂದಿಗೆ ರಘುವಂಶದ ಕೊನೆಯು ಒದಗಿ ಬಂದಿತು.”
    ಈ ವಿಚಾರಧಾರೆಯು ಕೇವಲ ಕಾಳಿದಾಸನದು ಮಾತ್ರ ಆಗಿರಲಿಲ್ಲ. ಅಂದಿನ ಸಂಪೂರ್ಣ ಸಮಾಜದ್ದಾಗಿತ್ತು. ಮತ್ತು ಅಂದಿನ ಈ ಧ್ಯೇಯಗಳನ್ನು ಒಳಗೊಂಡ , ಮನುವು ರಚಿಸಿದ್ದ “ಕ್ಷಾತ್ರಧರ್ಮ” ಮತ್ತು ಅದರ ಕಠಿಣ ನಿಯಮಗಳನ್ನು ಪೂರ್ಣವಾಗಿ ನಂಬಿತ್ತು. ಒಂದೇ ಬಗೆಯ ಅಪರಾಧಕ್ಕೆ ಬೇರೆ, ಬೇರೆ ಜಾತಿಯ ಜನರಿಗೆ ಬೇರೆ , ಬೇರೆ ಶಿಕ್ಷೆಯನ್ನು ವಿಧಿಸುವ ವ್ಯವಸ್ಥೆಯುಳ್ಳ ಮನುಸ್ಮೃತಿಯ ನಿಯಮಗಳನ್ನು ಮಾನ್ಯ ಮಾಡಲಾರೆವು. ಅದಕ್ಕೆ ನಾವು ಮನುಸ್ಮೃತಿಯನ್ನು ದೂಷಿಸುವಂತಿಲ್ಲ. ನಿಜವಾದ ವಿಷಯವೆಂದರೆ ಅಂದಿನ ಸಮಾಜವು ಈ ರೀತಿಯಲ್ಲಿಯೇ ವಿಚಾರ ಮಾಡುತ್ತಿತ್ತು. ಇಂದಿನ ಆಧುನಿಕ ಸಮಾಜವು ಕ್ಷಾತ್ರಧರ್ಮದ ಧ್ಯೇಯಗಳನ್ನು ಅಥವಾ ಮನ್ನಣೆ ಮಾವುವ ಸ್ತಿಯಲ್ಲಿಲ್ಲ.” (ಈವಿಷ್ಟನ್ನೂ ಬಾಬು ಜಗಜೀವನ ರಾಮ್ ಅವರ ಗ್ರಂಥ ‘ಭಾರತದ ಜಾತಿಪದ್ಧತಿಯ ಸವಾಲುಗಳು” ಇದರಿಂದ ಆಯ್ಕೆ ಮಾಡಿದ್ದಾಗಿದೆ.) ಉದಯಕುಮಾರ ಹಬ್ಬು ಕಿನ್ನಿಗೋಳಿ

    • veena.

      ಉದಯಕುಮಾರ ಹಬ್ಬು ಕಿನ್ನಿಗೋಳಿಯವರೆ,
      ಡಂಕಿನ್ ಝಳಕಿಯವರ ವಾದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ಗಮನಿಸಿದರೆ, “ವಚನಗಳನ್ನಾಗಲಿ ಇನ್ನಿತರ ಯಾವುದೇ ಸಾಹಿತ್ಯ ಪ್ರಕರವನ್ನಾಗಲಿ ಮರುಓದಿಗೆ
      ಒಳಪಡಿಸುವುದು ಅತ್ಯಂತ ಆರೋಗ್ಯಕರವಾದ ಸಂಗತಿಯಾಗಿದೆ. ನಾನು ಝಳಕಿಯವರನ್ನು ಹಾಗಾಗಿ ಅಭಿನಂದಿಸುತ್ತೇನೆ. ಆದರೆ ಆ ಮರುಓದು ಆಯಾ
      ಗ್ರಂಥಗಳಿಗೆ ನ್ಯಾಯವನ್ನೊದಗಿಸಬೇಕಲ್ಲವೇ?” ಇದರರ್ಥ ವಚನಗಳು ಜಾತಿವ್ಯವಸ್ಥೆಯ ವಿರೋಧಿಸುತ್ತಿದ್ದವು ಎಂದು ಹೇಳಿದರೆ ಮಾತ್ರವೇ ಆ ಗ್ರಂಥಗಳಿಗೆ
      ನ್ಯಾಯವನ್ನೊದಗಿಸಿದಂತಾಗುತ್ತದೆ ಎಂದು ಹೇಳುವಂತಿದೆ. ಒಂದೊಮ್ಮೆ ಹಾಗೇ ಆಗಿದ್ದರೇ, ವಚನಗಳನ್ನು ಮರು ಓದಿಗೆ ಒಳಪಡಿಸುವ ಅಗತ್ಯವೇ ಇಲ್ಲವಲ್ಲ.
      ಕಾರಣ ಸ್ಪಷ್ಟವಾಗಿಯೇ ಇದೆ,ಆಧುನಿಕ ವಿದ್ವಾಂಸರು ವಚನಗಳನ್ನು ಹಾಗೆಯೆ ಗುರಿತಿಸಿದ್ದಾರೆ.
      ವಚನಗಳು ಜಾತಿವ್ಯವಸ್ಥೆಯನ್ನು ವಿರೋಧಿಸತ್ತಿದ್ದವು ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ ಆದ್ದರಿಂದ ಅವು ಜಾತಿವಿರೋಧಿಗಳೆಂಬುದನ್ನು ಅಲ್ಲಗಳೆಯಲು
      ಸಾಧ್ಯವಿಲ್ಲ ಎನ್ನುತ್ತೀರಿ. ಡಂಕಿನ್ ರವರು ಈಗಾಗಲೇ ಅವರ ವಾದವನ್ನು ಪುರಾವೆ ಸಹಿತ ಪ್ರಸ್ತುತ ಪಡಿಸಿರುತ್ತಾರೆ. ಆದ್ರಿಂದ ದಯವಿಟ್ಟು ತಾವೂ ಸಹ ವಚನಗಳು
      ಜಾತಿವಿರೋಧಿ ಎನ್ಪುನುವುದಕ್ಕೆ ಸಾಕಷ್ಟು ವಚನಗಳು ಜಾತಿವಿರೋಧವಾಗಿ ಮಾತನಾಡುತ್ತವೆ ಎನ್ನುವುದರ ಬದಲಾಗಿ ಅವು ಯಾವುವು, ಜಾತಿವ್ಯವಸ್ಥೆಯ ಕುರಿತು
      ಎನು ಹೇಳುತ್ತವೆ,ಏಂಬುದಕ್ಕೆ ಪುರಾವೆಯನ್ನು ತೋರಿಸಿಕೊಟ್ಟರೇ ನಮ್ಮಂತ ಸಾಮಾನ್ಯ ಓದುಗರಿಗೆ ವಚನಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು
      ಸಹಾಯವಾಗತ್ತದೆ.
      ಇನ್ನೂ ನಿಮ್ಮ ಪ್ರತಿಕ್ರಿಯೆಯ ಎರಡನೇ ಅಂಶ ಡಂಕಿನ್ ಅವರು ತಿಳಿಸುವಂತೆ ಭಾರತದಲ್ಲಿ ಜಾತಿವ್ಯವಸ್ಥೆಯ ಚಿತ್ರಣ ವಸಹಾತುಶಾಹಿಯ ಬಳುವಳಿ ಎಂಬುದನ್ನು
      ಒಪ್ಪುವುದು ಆಸಾದ್ಯ. ಕಾರಣ ಭಾರತದಲ್ಲಿ ವಸಹಾತು ಪೂರ್ವದಲ್ಲೇ ಜಾತಿವ್ಯವಸ್ಥೆಯಿತ್ತು, ಅದಕ್ಕೆ ಸಾಕ್ಷಿ ಮನುಧರ್ಮಶಾಸ್ತ್ರದ ಅಥವಾ ಮನುಸ್ಮ್ರತಿಯ ಪ್ರಕಾರ
      ಅಂದಿನ ಸಮಾಜ ನೆಡೆಯುತ್ತತ್ತು ಎಂಬುದಾಗಿ ಕಾಳಿದಾಸನ ರಘುವಂಶವನ್ನು ಆಧಾರವಾಗಿ ಕೊಡುತ್ತೀರಿ, ಹಾಗೆಯೇ ‘ಆಧುನಿಕ ಸಮಾಜವು ಮನುವಿನ
      ಧ್ಯೇಯಗಳನ್ನು ಮನ್ನಣೆ ಮಾಡುತ್ತಿಲ್ಲ ಎಂಬ ಬಾಬು ಜಗಜೇವನ ರಾಮ್ ಅವರ ಅಭಿಪ್ರಾಯವನ್ನು ಒಪ್ಪುತ್ತೀರಿ. ಆದರೆ ಆಧುನಿಕ ಸಮಾಜದಲ್ಲಿಯೂ
      ಜಾತಿವ್ಯವಸ್ಥೆಯಿದೆಯೆಂದು,ಅದನ್ನು ನಾಶ ಮಾಡಬೇಕೆಂಬ ಚಳುವಳಿಗಳು ನೆಡೆಯುತ್ತಲೇ ಇವೆ. ಆದರೆ ಜಾತವ್ಯವಸ್ಥೆ ಭಾರತದಲ್ಲಿ ಮೊದಲಿನಿಂದಲೂ ಇತ್ತು ಎಂದು
      ವಿವರಿಸಲು ಬಳಸುತ್ತಿರುವ ಮನುಧರ್ಮಶಾಸ್ತ್ರದ ಬಗ್ಗೆ ಮಾತ್ರ ಈ ಸಮಾಜದಲ್ಲಿ ಬದುಕುತ್ತಿರುವ ಸಾಮಾನ್ಯರಿಗೆ ಗತ್ತಿಲ್ಲ ಅದರ ಪ್ರಕಾರ ಬದುಕುತ್ತಿಲ್ಲ. ಇದರಲ್ಲೇನೋ
      ಸಮಸ್ಯೆಯಿದೆಯೆಂದು ಅನಿಸುತ್ತದೆ…

  6. Arvind

    ನನಗೆ ಆಶ್ಚರ್ಯವಾಗುವ ವಿಚಾರವೆನೆಂದರೆ, ಡಂಕಿನ್ ಬರೆದ ಮೂಲ ಲೇಖನ ಓದದೆ ಇಷ್ಟೆಲ್ಲಾ ಪ್ರತಿಕ್ರಿಯೆ ಕೊಡುವುದು ಸಮಂಜಸವೇ. ಅವರು ಪ್ರಜಾವಾಣಿಯಲ್ಲಿ ಬರೆದದ್ದು HSSರಿಗೆ ಒಂದು ಪ್ರತಿಕ್ರಿಯೆ. ಅದೊಂದು ಸ್ವತಂತ್ರ ಲೇಖನವೇನೋ ಎಂಬಂತೆ ಅದರ ಕುರಿತು ಟೀಕೆ ಮಾಡುವುದು ತಪ್ಪಲ್ಲವೇ? ಸಮಾಜವಿಜ್ಞಾನದ ಚರ್ಚೆಗಳು ಹೀಗಿರುವುದರಿಂದಲೇ ಅದು ಬೇರೆ ವಿಜ್ಞಾನದಂತೆ ಬೆಳೆದಿಲ್ಲ ಎಂದು ಕಾಣುತ್ತದೆ.

  7. ಉದಯಕುಮಾರ್ ಹಬ್ಬು

    ನಾನು ಝಳಕಿಯವರ ಲೇಖನವನ್ನು ಚಿಂತನಬಯಲು’ ಪತ್ರಿಕೆಯಲ್ಲಿ ಪೂರ್ಣ ಪ್ರಮಾಣದ ಲೇಖನವನ್ನು ಓದಿದ್ದೇನೆ. ‘ಪ್ರಜಾವಾಣಿ’ ಯಲ್ಲಿ ಹೇಳಿದ್ದರಿಗಿಂತ ಅದು ಭಿನ್ನವಾಗಿಲ್ಲ. ವೀಣಾ ಅವರುಕೇಳಿದ ವಚನಗಳ ಪುರಾವೆ ಕೊಡುತ್ತಿದ್ದೇನೆ. ಮೊದಲ ವಚನ ‘ಬಸವಣ್ಣನವರ ವಚನ ‘ ಎಂತಹನಾದರೇನು ಲಿಂಗ ಮುಟ್ಟದವನೇ ಕೀಳು ಜಾತಿ. 2ನೇ ವಚನ ‘ ವ್ಯಾಸ ಬೋಯಿತಿಯ ಮಗ ….ಕುಲವನರಸದಿರಿಂ ಭೋ ಶ್ವಪಚ್ಚೋಪಾದಿಯಾದರೇನು ! ಶಿವಭಕ್ತನೇ ಕುಲಜನು..’3ನೇ ವಚನ ‘ ಕಾಶಿ ಕಮ್ಮರನಾದ …ಇತ್ಯಾದಿ. 4ನೇ ವಚನನ ‘ಜಾತಿವಿಡಿದು ಸೂತಕವನರಸುವೆ ಜ್ಯೋತಿವಿಡಿದು ಕತ್ತಲೆಯನರಸುವೆ ಇದೇಕೋ ಮರುಳ ಮಾನವಾ? ಜಾತಿಯಲಿ ಅಧಿಕನೆಂಬೆ ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನು? ಭಕ್ತ ಶಿಖಾಮಣಿ ಎಂದುದು ವಚನ…ಇತ್ಯಾದಿ 5ನೇ ವಚನ ‘ ಜಾತಿ ವಿಜಾತಿಯಾದರೇನು? ಅಜಾತ ಶರಣೆನ್ನದವನು ಆತನೇ ಹೊಲೆಯಾ 6ನೇ ವಚನ ‘ಚತುರ್ವೇದಿಯಾದರೇನು? ಲಿಂಗವಿಲ್ಲದವನೇ ಹೊಳೆಯ. ಅವ ಕುಲವಾದರೇನು ಶಿವಲಿಂಗವಿದ್ದವನೇ ಕುಲಜನು…ಕುಲವಾನರಸುವರೆ ಶರಣರಲ್ಲಿ ವರ್ಣ ಸಂಕರನಾದ ಬಳಿಕ? 7ನೇ ವಚನ ದೇವ ದೇವಾ ಬಿನ್ನವಧಾರು ವಿಪ್ರ ಮೊದಲು ಅಂತ್ಯಜ ಕ್ಡೆಯಾಗಿ ಶಿವಭಕ್ತರಾದವರನ್ನೆಲ್ಲನೊಂದೆ ಎಂಬೆ. ಉಯಿನ್ನು ಸಿದ್ಧರಾಮರ ವಚನಗಳು’ ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ ಕುಲವೆ ದೋಹರಣ, ಕುಲವೆ ಮಾದಾರಣ, ಕುಲವೇ ದೂರ್ವಾಸನ, ಕುಲವೆ ವ್ಯಾಸನ, ಕುಲವೇ ವಾಲ್ಮೀಕನ, ಕುಲವೇ ಕೌಂಡಿನ್ಯನನ ಕುಲವನೋಳ್ಪರೆ ಹುರುಳಿಲ್ಲ. ಅವರ ನಡೆ ನೋಳ್ಪರೆ ನಡೆಯುವವರು ತ್ರಿಲೋಕದಲ್ಲಿಲ್ಲ ನೋಡಾ ಅಂಬಿಗರ ಚೌಡಯ್ಯ ‘ ಕುಲಹೀನ ಶಿಷ್ಯಂಗೆ ಅನುಗ್ರಹವ ಮಾಡಿ ತಿರುಗಿ ಅವನ ಮನೆಯಲ್ಲಿ ಉಣ್ಣಬಾರದೆಂದು ಅಕ್ಕಿ ಕಣವ ಕೊಂಡುಹೋಗುವ ಗುರುವಿನ ಕಂಡರೆ ಕೆಡವಿಹಾಕಿ ಮೂಗನೇ ಕೊಯ್ದು….ಇತ್ಯಾದಿ. ‘ನನ್ನ ಕುಲ ಹೆಚ್ಚು ನಿನ್ನ ಕುಲ ಕಡಿಮೆ ಎಂಬುವರನು ಮೆಚ್ಚ ನಮ್ಮ ಅಂಬಿಗರ ಚೌಡಯ್ಯ. ಸೋದ್ದಳಾ ಬಾಚರಸನ ವಚನ ‘ ಬ್ರಾಹ್ಮಣನೇ ಅಧಿಕವೆಂದೆಂಬಿರಿಭೋ, ಅದು ಮಿಥ್ಯ ‘ವರ್ಣಾನಾಮ್ ಬ್ರಾಹ್ಮಣೋ ದೈವ’ ‘ವರ್ಣಾನಂ ಬ್ರಾಹ್ಮಣೋ ಗುರುಃ’ ಎಂಬ ಶ್ರುತಿಯನರಿಡು ದ್ವಿಜರು ತಾವು ಗುರುವೆಂಬ ಪರಿಯ ನೋಡಾ …ಎಂತು ಕುಲದೊಳಗೆ ಇದ್ದು ಏ ಕುಲದ ಮಾತಾಡುವ ದ್ವಿಜ ಭ್ರಮಿತರರೇನೆಂಬೆ ಸೋದ್ದಳಾ.’ ಈವಿಷ್ಟಲ್ಲದೆ ಇನ್ನೂ ಅನೇಕ ವಚನಗಳಿರಬಹುದು. ನಾನೇನು ಸರ್ವಜ್ನನಲ್ಲ.ಆದರೂ ನಾನು ವಚನಗಳ ಕುರಿತು ಅವುಗಳು ಕೇವಲ ಜಾತಿ ವಿರೋಧವನ್ನು ಮಾತ್ರ ಹೇಳಿಲ್ಲ ಇನ್ನಿತರ ವಿಷಯಗಳ ಕುರಿತಾಗಿಯೂ ಹೇಳಿವೆ ಎಂದು ನನ್ನ ಪತ್ರದಲ್ಲಿ ಹೇಳಿದ್ದೇನೆ. ವಚನಗಳು ಸುಂದರ ಕಾವ್ಯವನ್ನಾಗಿಯೇ ನಾವು ಸ್ವೀಕರಿಸಿ ಅವುಗಳ ಸಾಹಿತ್ಯಿಕ ಮೌಲ್ಯಗಳ ಕುರಿತು ಚರ್ಚಿಸಿದರೆ ಅವುಗಳು ಕೊಡುವ ಅನುಭಾವಗಳನ್ನು ಮನಾಗತ ಮಾಡಿಕೊಂಡರೆ ಈ ಜಾತಿ ವಿಷಯ ಬಿಟ್ಟು ಬಿಟ್ಟರೆ ನಮಗೆ ಸ್ಂಶೋಧನೆ ಮಾಡಲು ಸಾಕಷ್ಟು ವಿಷಯಗಳಿವೆ. ಅಲ್ಲವೇ?
    ಉಯಾದಯಕುಮಾರ ಹಬ್ಬು ಕಿನ್ನಿಗೋಳಿ

  8. veena.

    ಉದಯಕುಮಾರ್ ಹಬ್ಬು ಅವರೆ,
    ವಚನಗಳ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಗಮನಿಸಿದರೆ, ನಿಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ವಚನಗಳು ಜಾತಿವಿರೋಧಿಯೆಂದು ಭಾವಿಸಿದರೇ ಮಾತ್ರ ಅವುಗಳಿಗೆ
    ನ್ಯಾಯವದಗಿಸಿದಂತೆ ಎಂಬಂತೆ ತಿಳಿಸುತ್ತೀರಿ. ಹಾಗೆಯೇ ನಂತರದ ಪ್ರತಿಕ್ರಿಯೆಯಲ್ಲಿ ವಚನಗಳು ಸುಂದರ ಕಾವ್ಯವನ್ನಾಗಿಯೇ ನಾವು ಸ್ವೀಕರಿಸಿ ಅವುಗಳ ಸಾಹಿತ್ಯಿಕ
    ಮೌಲ್ಯಗಳ ಕುರಿತು ಚರ್ಚಿಸಿದರೆ ಅವುಗಳು ಕೊಡುವ ಅನುಭಾವಗಳನ್ನು ಮನಾಗತ ಮಾಡಿಕೊಂಡರೆ ಈ ಜಾತಿ ವಿಷಯ ಬಿಟ್ಟು ಬಿಟ್ಟರೆ ನಮಗೆ ಸ್ಂಶೋಧನೆ
    ಮಾಡಲು ಸಾಕಷ್ಟು ವಿಷಯಗಳಿವೆ. ಅಲ್ಲವೇ? ಎಂದು ವಿವರಿಸುತ್ತೀರಿ. ನಿಮ್ಮ ಅಭಿಪ್ರಾಯದಲ್ಲೇ ತದ್ವಿರುದ್ಧ ನಿಲುವುಗಳನ್ನು ಗಮನಿಸಬಹುದು. ಆದರೂ ಡಂಕಿನ್
    ಝಳಕಿಯವರು ತಮ್ಮ ವಾದದ ಮೂಲಕ ವಚನಗಳ ಬಗ್ಗೆ ತಿಳಿಸುತ್ತಿರುವುದು ನಿಮ್ಮ ಎರಡನೇಯ ಪ್ರತಿಕ್ರಿಯೆಯನ್ನೇ ಅನಿಸುತ್ತದೆ ಅಲ್ಲವೇ?

  9. Dr.kiran.m gajanur

    ವಚನಗಳು ಜಾತಿ ತಾರತಮ್ಯವನ್ನು ವಿರೋಧಿಸಲಿಲ್ಲ ಅಂದಿನ ಸಮಾಜದ ಶೋಷಣೆಯನ್ನು ಟೀಕಿಸಲಿಲ್ಲ ಎಂದೂ ಯಾರೂ ವಾದ ಮಾಡುತ್ತಿಲ್ಲ ವಚನಕಾರರು ತಮ್ಮ ಅನುಭವದ ನೆಲೆಯಲ್ಲಿ ಆ ಕಾಲಘಟ್ಟದ ಜಾತಿ ತಾರತಮ್ಯಗಳನ್ನು ವಿರೋಧಿಸಿದ್ದಾರೆ ಅದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಆದರೆ ನಮ್ಮ ಪ್ರಶ್ನೆ ೧೮ ಮತ್ತು ೧೯ನೇ ಶತಮಾನದಲ್ಲಿ ನಮ್ಮ ಸಮಾಜದ ಜಾತಿಯ ಕುರಿತಾಗಿ ಒಂದು ಸಮಾಜಶಾಸ್ತ್ರಿಯ ವಿವರಣೆ ಸಿದ್ಧವಾಯಿತಲ್ಲ (ಜಾತಿ ವ್ಯವಸ್ಙೆ) ಆದರ ವಿರುದ್ಧ ೧೨ನೇ ಶತಮಾನದಲ್ಲೆ ಬಸವಾದಿ ಶರಣರು ಹೋರಾಡಿದ್ದರು ಎಂಬ ವಾದ ಸರಿಯಲ್ಲ ಎಂಬುದು. . . . ಮತ್ತು ವಚನಗಳಲ್ಲಿ ಅ ವಾದಕ್ಕೆ ಆಧಾರಗಳು ಸಿರುವುದಿಲ್ಲ ಎಂಬದು ಮತ್ತು ಆ ವಾದ ೨೦ನೇ ಶತಮಾನದ ಕಟ್ಟು ಕಥೆ ಎಂಬುದು ನಮ್ಮ ವಾದ. . . .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading