
ಬೊಳುವಾರು ಮಹಮದ್ ಕುಂಞ್
‘ಬೊಳುವಾರು’ಗೆ ಕಾರಣವಾಗಿದ್ದ ‘ಆರೂರು’ ಇನ್ನಿಲ್ಲ! ನಂಬಲಾಗುತ್ತಿಲ್ಲ.
ನಲುವತ್ತೆರಡು ವರ್ಷಗಳ ಹಿಂದಿನ [1973] ಒಂದು ಶನಿವಾರದ ಸಂಜೆ,
ಗುಲಬರ್ಗಾದ ಸ್ಟೇಶನ್ ಬಜಾರ್’ನಲ್ಲಿದ್ದ ‘ಸಿಂಡಿಕೇಟ್ ಬ್ಯಾಂಕಿ’ನೊಳಗೆ ನಾವು ಕೆಲವು ಉದ್ಯೋಗಿಗಳು ‘ಕೇರಮ್’ ಆಡುತ್ತಿದ್ದಾಗ,
ಅಂಚೆಯವನು ‘ಸುಧಾ’ ವಾರಪತ್ರಿಕೆಯ ಪ್ರತಿಯೊಂದನ್ನು,
ನನ್ನ ವಿರುದ್ಧ ಪಾರ್ಟಿಯಲ್ಲಿ ಆಡುತ್ತಿದ್ದ ಆರೂರು ಲಕ್ಷಣ ಶೇಟರಿಗೆ ಕೊಟ್ಟ.
ಅದರಲ್ಲಿ ಅವರದೊಂದು ಕತೆ ಪ್ರಕಟವಾಗಿತ್ತು.
ತಿಂಗಳಿಗೊಮ್ಮೆ ತೀರ್ಥರೂಪರಿಗೆ ಸಲಾಮ್ ಎನ್ನುವ ಎರಡು ಸಾಲುಗಳ ಪತ್ರ
ಬರೆಯುವಾಗಲೇ ಸುಸ್ತಾಗುತ್ತಿದ್ದ ನಾನು,
‘ಅದು ಹೇಗೆ ಕತೆ ಬರೆಯುತ್ತೀರಿ ಶೇಟ್? ’ ಎಂದು ಹೊಟ್ಟೆಯುರಿಯಿಂದಲೇ ಪ್ರಶ್ನಿಸಿದ್ದೆ.
‘ಅದೆಲ್ಲ ನಿಮ್ಮಿಂದ ಆಗುವ ಕೆಲಸವಲ್ಲ. ಈಗ ನೀವು ನಿಮ್ಮ‘ಕಾಯಿನ್’ ಹೊಡೆಯಿರಿ.’
ಮುಖಕ್ಕೆ ಹೊಡೆದಂತೆ ಹೇಳಿದ್ದರು ಶೇಟ್. ನನಗಾಗ 22. ತೂಕ 44. ಸಿಟ್ಟು 98.
‘CAROM BOARD’ ಎತ್ತಿ ಅವರ ಎದೆಯತ್ತ ತಳ್ಳಿದವನೇ,
‘ನಿಮ್ಮಂತೆ ನಾನೊಂದು ಕತೆ ಬರೆದು ಪೇಪರಿಗೆ ಕಳಿಸುವವರೆಗೆ ಬ್ಯಾಂಕಿನ ಮೆಟ್ಟಲು ತುಳಿಯುವುದಿಲ್ಲ’ ಎಂದರಚಿ ಹೊರಬಿದ್ದವನು, ಅಂಗಡಿಯೊಂದರಿಂದ
ಒಂದು ಬಾಟಲ್ Lacto Calamine ಖರೀದಿಸಿಯೇ ರೂಮು ಸೇರಿದ್ದು.
ಕತೆ ಬರೆಯುವುದು ಗೊತ್ತಿರಲಿಲ್ಲ;
ಆದರೆ, ಶೇಟ್ ಮುಖಕ್ಕೆ Lacto Calamine ಬಳಿದುಕೊಳ್ಳುತ್ತಿರುವುದು ಗೊತ್ತಿತ್ತು.
ಮುಖತುಂಬಾ Lacto Calamine ಹಚ್ಚಿಕೊಂಡು
‘ನಿರೀಕ್ಷೆ’ ಎಂಬ ಕತೆ ಬರೆಯಲು ಕುಳಿತುಬಿಟ್ಟೆ.
[ಈ ಕತೆಯ ಹಿನ್ನೆಲೆಯಲ್ಲಿ ಬೇರೆಯೇ ಒಂದು ಕತೆ ಇದೆ- ಅದು ಶೇಟರಿಗೂ ಗೊತ್ತಿತ್ತು.]
ನಾಲ್ಕು ದಿನಗಳಲ್ಲಿ ಕತೆ ಮುಗಿಸಿ, ಮಂಗಳೂರಿನ ‘ನವಭಾರತ’ ದಿನಪತ್ರಿಕೆಗೆ ಕಳುಹಿಸುವಾಗ, ಊರವರಿಗೆ ನಾನೆಂದು ಗೊತ್ತಾಗಬೇಕೆಂಬ ಆಸೆಯಿಂದ
[ ‘ಆರೂರು’ ಸೇರಿಸಿಕೊಂಡ ಹಾಗೆ] ನನ್ನ ಹೆಸರಿನ ಮೂತಿಗೆ ‘ಬೊಳುವಾರು’ ಅಂಟಿಸಿ
ಅಂಚೆಗೆ ಹಾಕಿದ ಬಳಿಕವೇ ನಾನು ಕಚೇರಿಗೆ ಹೋದದ್ದು.
[‘ನಿಮ್ಮ ಕತೆ ಸ್ವೀಕೃತವಾಗಿದೆ. ಇನ್ನೂ ಬರೆದು ಕಳುಹಿಸಿ’
ಇದು, ನವಭಾರತದ ‘ಕುಡ್ವಾ’ ಮಾಮಾ ಅಂಚೆಯಲ್ಲಿ ಅಂದು ರವಾನಿಸಿದ್ದ ಜ್ಞಾನಪೀಠ ಪತ್ರ.]
***

ಅದೇ ವರ್ಷ ಆರೂರು ಅವರೇ ನಿರ್ದೇಶಿಸಿದ ‘ಸಮಯಕ್ಕೊಂದು ಸುಳ್ಳು’ ನಾಟಕದಲ್ಲಿ,
ನನ್ನ ಎಳೆಮೀಸೆ ಬೋಳಿಸಿ, ನನ್ನ ‘ಕೇರಮ್ ಅಟ್ಯಾಕ್’ ವಿರುದ್ಧ
ಸೇಡುತೀರಿಸಿಕೊಂಡಿದ್ದ ಶೇಟರು ತೀರಿಕೊಂಡರೆಂಬುದನ್ನು ನಂಬಲಾಗುತ್ತಿಲ್ಲ.
ಅವರೊಂದಿಗೆ ಜಗಳವಾಗದಿರುತ್ತಿದ್ದರೆ ನಾನು ಕತೆಗಾರ ಅನ್ನಿಸಿಕೊಳ್ಳುತ್ತಿರಲಿಲ್ಲ.
ಈಗ ಅವರಿಲ್ಲ. ಅವರದೇ ಕಥಾಸಂಕಲನವೊಂದರ ಹೆಸರು,
‘ಒದ್ದೆ ಕಂಗಳ ಪ್ರೀತಿ.
ನನ್ನದೂ,
‘ಒದ್ದೆ ಕಂಗಳ ಪ್ರೀತಿ.
[ಕೋಟುಧಾರಿ ಶ್ರೀ ಆರೂರು ಲಕ್ಷ್ಮಣ ಶೇಟ್. ನನಗೆ ಗಂಡನಾಗಿದ್ದವರು ರವೀಂದ್ರ ಉಲ್ಲಾಳ್.]





ಕನ್ನಡದ ಎಲ್ಲಾ ಮ್ಯಾಗಜೀನ್‍ಗಳ ಪಾಲಿಗೂ ಆರೂರು ಲಕ್ಷ್ಮಣ ಶೇಟರು ಕಾಮಧೇನುವಿನಂತಿದ್ದರು. ತಮ್ಮ ಸುಂದರವಾದ ಅಕ್ಷರಗಳಲ್ಲಿ ಬಯಸಿದ ಬರಹವನ್ನು ಶರವೇಗದಲ್ಲಿ ಕಳುಹಿಸುತ್ತಿದ್ದರು. ಅವರು ಕೇವಲ ಹಾಸ್ಯ ಬರಹಗಾರರು ಮಾತ್ರವಾಗಿರಲಿಲ್ಲ. ಹಾಸ್ಯ ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು. ಹುಬ್ಬಳ್ಳಿಗೆ ಭೇಟಿ ನೀಡಿದಾಗಲೆಲ್ಲಾ ಅವರ ಮನೆಗೆ ಹಾಜರಾತಿ ಹಾಕಿ ಈ ಲವಲವಿಕೆಯ ಅನುಭವವನ್ನು ಪಡೆದಿದ್ದೇನೆ… ಅವರಿಲ್ಲ ಎನ್ನುವುದು ಏನೋ ಮಹತ್ವದ್ದನ್ನು ಕಳೆದುಕೊಂಡಂತಹ ಕೊರತೆಯ ಭಾವವನ್ನೂ ನೀಡುತ್ತಿದೆ.