ಅಲ್ಲಿ ಆನಿ ನಡದದ್ದಾ ಹಾದಿ ಅನ್ನ ಕಾಲ ಇತ್ತೂ
ರಂಜಾನ್ ಹಬ್ಬಕ್ಕ ಬುಡೇನಜ್ಜ ಭಾರೀ ಬ್ಯಾಟಿ ಮಾಡ್ಸಿದ್ದ. ಇಡೀ ಓಣಿ ಜನಾನೆಲ್ಲಾ ಕರದು ಕರದು ಊಟ ಹಾಕಿದ್ದ. ಭರ್ತಿ ಎಂಟು ಪಂತಿ ನಡೆದಿದ್ವು ಆದ್ರೂ ರಾತ್ರಿಗಿನ್ನೂ ಸಾರು ಉಳಿದಿತ್ತು. ಮಾರನೇ ದಿನ ಉಳುದ ಕುರಿಯ ತೆಲಿಕಾಲು ಸರ್ಪೇಟಾಗಿ ಮಾಡಿದಾಗ ಮೈಲವ್ವನ್ನೂ ರಾಮಣ್ಣನ್ನೂ ಕರ್ಕೊಂಬಂದು ಹೊಟ್ಟಿತುಂಬಾ ಉಂಡು ಹೊಳ್ಳಿ ಬಂದು ಕರಿಯವ್ನ ಗುಡಿತಾವಿರ ಕಟ್ಟಿಗೆ ಬಂದು ಕುಂತ್ರು.
ಕಟ್ಟಿಗೆ ಪಡಿ ಹಚ್ಚತಿದ್ದಂಗನ ನಮ್ ಮೈಲವ್ವ ‘ಮೆತ್ತ ಮೆತ್ತಂದು ಪೀಸ್ ತಿನ್ನಾದಿರಲಿ ಉದುಕ ಏನ್ ರುಚಿ ಇತ್ತೋ ಸಾಬಣ್ಣ. ತೆಲಿ ಕಾಲು ಮಾಡಿದ್ರ ಹಿಂಗ ಮಾಡಬೇಕು ಅನ್ನಂಗಿತ್ತು ಬಿಡು ಅಡಿಗಿ. ಅದಕ್ಕಾ ನಾನು ಕೈ ತೊಕಂಡಿಂದೆ ಒಂದು ಕಪ್ನಾಗ ಉದುಕ ಹಾಕಿಸ್ಕಂಡು ಕುಡುದ್ನಪ್ಪಾ. ನಿನ್ನಿ ಚಾವಂಗಿ ಬಿರಿಯಾನಿ ಊಟಕಿಂತಲೂ ಇವತ್ತಿಂದು ಊಟ ಚೊಲೋ ಇತ್ತು ನೋಡಪಾ. ಅಂದಂಗ ಸಾರು ಯಾರ್ ಮಾಡಿದ್ರು ಸಾಬಣ್ಣ ?’ ಅಂತ ಕೇಳಿದ್ಳು.
ಮೈಲವ್ವನ ಪ್ರಶ್ನಿಗೆ ಉತ್ರ ಕೊಡಕಿನ ಮುಂಚೆ ನಡುಕ ಬಾಯಿ ಹಾಕಿದ ರಾಮಣ್ಣ, ‘ಒಂದು ಯೋಳೆಂಟು ಪಂಕ್ತಿ ನಡದ್ವೇನಾ ಸಾಬಣ್ಣ ?, ಆ ನಿಂಬಜ್ಜರ ಬಸಣ್ಣ, ತಿಪ್ಪಜ್ಜ, ಪಕ್ಕೀರ, ಪಂಪ ಈ ಹುಡ್ರು, ತಿರುಗಾಮರಗ ಹಾಕಿಸ್ಕಂಡು ಹೊಡದ್ರುಬುಡು ನೋಡಿದ್ನ ನಾನು. ಅಂತಿದ್ದಂಗನಾ ‘ವಯಸ್ಸಿನ ಹುಡ್ರು ಹಂಗಾ ಉಣ್ಣಬೇಕೇಳು ಮತ್ತೆ. ನಾವೂ ಏನ್ ಕಮ್ಮಿ ತಿಂತಿದ್ವೇನು ಹರೆದಾಗಿದ್ದಾಗ ?’ ಅಂತ ಬುಡೇನಜ್ಜ ಹುಬ್ಬೇರಿಸಿ ಹೇಳಿದ.
ಬುಡೇನಜ್ಜನ ಉತ್ರ ಕೇಳಿದ ಮೈಲವ್ವ ಅಲ್ಲೋ ಸಾಬಣ್ಣ ಅದ್ಯಾಕ ಈ ಹಬ್ಬಾನೂ ಹೊಳಿ ಆಚಕಿನ ಜನ ಒಂದಿನ ಮುಂಚೇ ಮಾಡಿದ್ರಂತ್ಯ ನಮ್ಮ ಕಡೆ ಮಂದಿ ಒಂದಿನ ಲೇಟ್ ಆಗಿ ಯಾಕ್ ಮಾಡಿದ್ರಂತ್ಯ ? ಅಂತ ಕೇಳದಿದ್ದಂಗನಾ ‘ ಇತ್ತೀಚಿಗೆ ನಮ್ಮ ಅಲ್ಹಾಗೂ ಜನ್ರ ಮ್ಯಾಲ ಖಾಳಜೀನಾ ಇಲ್ಲದಂಗಾಗೈತಿ ಬಿಡಬೇ ಮೈಲವ್ವಾ.’ ಅಂತೇಳಿ ಮೈಲವ್ವನ ಕಡೆ ತಿರುಗಿ ‘ಅಲ್ಲವಾ, ನಾವು ತಿಂಗಳಗಟ್ಲೆ ಉಪಾಸ ಇದ್ದು ಹಬ್ಬಾ ಮಾಡಾದಾ ಈ ಆಕಾಸದಾಗ್ಲ ಚಂದ್ರನ್ನ ನೋಡಿ ಹೌದಿಲ್ಲು, ಅವತ್ತೊಂದಿನನಾರ ಹುಣ್ವಿ ದಿವ್ಸ ಕಂಡಂಗ ಇಷ್ಟಗ್ಲ ಕಾಣ್ಸು ಅಂತ ಚಂದ್ರಗ ನಮ್ ಅಲ್ಹಾ ಒಂದು ಮಾತು ಹೇಳಬಹುದಿತ್ತಿಲ್ಲು ?
ಇವತ್ತಿಗೂ ಯಾರೂ ಪಿಟಿಷನ್ ಕೊಟ್ಟಿಲ್ಲ ನೋಡು ಅದ್ರಾಗ ಈ ಹಬ್ಬ ಬರಾದಾ ಮಳಿಗಾಲದಾಗ. ಮಾಡು ತುಂಬಿಕಂಡಿರತೈತಿ. ಅದ್ರಾಗ ಈ ಚಂದಪ್ಪ ನೋಡಿದ್ರ ತೆಳ್ಳಗ ಅಂಚಿ ಕಡ್ಡಿ ಕಂಡಂಗ ಕಾಣಸ್ತಾನ. ಹುಡುಕ್ಯಾಡಬೇಕು ಮುಗುಲಾಗ ಅದನ್ನ. ಅದನ್ನ ನೋಡಿಲ್ಲ ಅಂದ್ರ ಹಬ್ಬ ಬ್ಯಾರೆ ಮಾಡಂಗಿಲ್ಲ. ಅದ್ಕಾ ಹೊಳಿ ಅಚೆಕಿನ ಮಂದಿಗೆ ಒಂದಿನ ಮುಂಚೆನೇ ಕಂಡೈತಿ ನಮಿಗೆ ಎಲ್ಡನೆ ದಿನ ಕಂಡೈತಿ. ಹಿಂಗಾಗಿ ವ್ಯತ್ಯಾಸ ಆಗೈತಿ ನೋಡಬೇ ಮೈಲವ್ವಾ.’ ಅಂತ ಉತ್ರ ಕೊಟ್ಟು ಒಂದು ಚುಟ್ಟ ತಗಾಣಕ ತನ್ನ ಜುಬ್ಬದ ಜೋಬಿಗೆ ಕೈ ಹಾಕಿದ.
ಬುಡೇನಜ್ಜಗಿಂತ ಮುಂಚೆಲೆ ಬೀಡಿ ಹಚ್ಚಿದ್ದ ರಾಮಣ್ಣ ಬುಡೇನಜ್ಜಗ ಕಡ್ಡಿ ಪೆಟಿಗಿ ಕೊಟಗಾಂತ. ‘ನಮ್ ದೇವ್ರುಗಳಿಗೇನು ಜನ್ರ ಮ್ಯಾಗೇನು ಭರ್ಜರಿ ಖಾಳಜಿ ಐತಂತ ಮಾಡಿಯೇನು ? ನಿಮ್ಮದು ಹಾಸಿಗಣಾದಾದ್ರ ನಮ್ಮದು ಹೊಚ್ಚಿಗಣಾದು. ನಾವು ಅದೇಸು ಅಮಾಸಿ, ಹುಣ್ಮಿನ, ಹಬ್ಬ ಜಾತ್ರಿನ ಎಲ್ಡೆಲ್ಡು ಸರ್ತಿ ಮಾಡಿವೋ ಏನೋ ಲೆಕ್ಕನಾ ಇಲ್ಲದು. ಇವರೌಳು ಈ ಎಲ್ಲಾ ದೇವ್ರುಗಳನ್ನೂ ಸುಪ್ರೀಂ ಕೋರ್ಟ್ ನಾಗ ಸಾಲ್ಕಿಗೆ ನಿಂದ್ರಿಸಿ ಒಬ್ಬ ಜಬರ್ದಸ್ತ್ ಜಜ್ಡ್ ನ್ನ ಕುಂದ್ರಿಸಿ ಸುತಿಗಿ ತಗಂಡು ಕುಟ್ಟಿ ಕುಟ್ಟಿ ಕೇಸ್ ಮ್ಯಾಲ ಕೇಸ್ ಹಾಕಿ ಶಿಕ್ಷೆ ಕೊಡಸಬೇಕು. ಅನ್ನಂಗಾಕೈತಿ ಆದ್ರೇನ್ ಮಾಡ್ತಿ ? ನನ್ ಕಣ್ಣಿಗೆ ಒಂದ್ ದೇವ್ರೂ ಕಾಣಿಸ್ಕವಲ್ರು ಏನ್ ಮಾಡ್ಲಿ ? ಅಂತಂದ ಮಾತಿಗೆ ಮೈಲವ್ವ ಜೋರು ನಗಾಕತ್ತಿದ್ಲು.
ಅದಾ ಟೈಂಗೆ ಸರಿಯಾಗಿ ಅಂಗನವಾಡಿ ಟೀಚರ್ ನಿರ್ಮಲವ್ವ ಅವಸ್ರ ಅವಸ್ರದಾಗ ಸಾಲಿ ಕಡೆ ಹೊಂಟಿದ್ಲು ಅಕಿನ ನೋಡಿದ ಮೈಲವ್ವ ‘ನಿರ್ಮಲವ್ವೋ ಈ ತಿಂಗಳಾಗ ಯಾರಾರ ಹೊಸ್ತಾಗಿ ಸಾಲಿ ಸೇರ್ಯಾರೇನು ?’ ಅಂತ ಕೂಗಿ ಕೇಳಿದ್ಲು. ಮೈಲವ್ವನ ಪ್ರಶ್ನಿ ಕೇಳಿದ ನಿರ್ಮಲವ್ವ, ‘ಇಲ್ಲಮ್ಮೋ, ಯಾರೂ ಸೇರಿಲ್ಲ. ಯಾಕಾ ? ಯಾರನ್ನಾರ ಸೇರಸಬೇಕಿತ್ತೇನು ?’ ಅಂತ ಕೇಳಿದ್ಲು. ‘ಅಯ್ಯಾಯ, ನಮ್ ಸಿಎಂ ಸಾಲಿಗೆ, ಪಿಎಂ ಸಾಲಿಗೆ ಎಸಕಂದು ಮಂದಿ ಸೇರ್ಯಾರ ? ನಿಮ್ಮ ಸಾಲಿಗಿ ಹೊಸ ಹುಡ್ರು ಸೇರಿಲ್ಲೇನು ?, ಆತು ಬುಡವ್ವ, ನಿನಿಗೆ ಹೊತ್ತಾಕೈತಿ ಹೋಗು ಹೋಗು ನಾನು ಸುಮ್ಮನಾ ಕೇಳಿದೆ ಹೋಗವ್ವ’ ಅಂದಿದ್ದನ್ನ ಕೇಳಿ ನಿರ್ಮಲವ್ವ ಸಾಲಿ ಕಡಿ ಹೊಂಟ್ಲು.
ಮೈಲವ್ವನ ಕಡಿಗೆ ತಿರುಗಿ ನೋಡಿದ ಬುಡೇನಜ್ಜ ‘ಅಲ್ಲಬೇ ಮೈಲವ್ವ, ನಮ್ ಸಿಎಂ ಸಾಲಿಗೆ ಓಸು ಹುಡ್ರುನ್ನ ಫೇಲ್ ಮಾಡಿ, ಓಸು ಹೊಸಾ ಹುಡ್ರನ್ನ ಸೇರಿಸ್ಕಂಡಿದ್ಕ ಏನೇನು ನಡದು ಹೋತಲ್ಲಾ ? ಎಲ್ಲಾದ್ರಾಗೂ ಆಟು ಇದ್ದುದ್ದಾ ಬುಡು ಆದ್ರ ನನಗ ಅದ್ರಾಗ ಅಚ್ಚರ್ಯ ಆಗಿದ್ದೇನಂದ್ರ, ಹಂಗ ಸಾಲಿ ಸೇರಿಸ್ಕಣಾಕಿಂತ ಮುಂಚೆ ಈ ಪೇಪರ್ ನವ್ರೂ, ಟಿಬಿಯೋರು, ಅದೇನೇನೋ ಅಳತಿ ಮಾಡಿ ಇಂತಿಂಥೋರು ಇಷ್ಟಿಷ್ಟು ಮಾರ್ಚ್ ಪಡದಾರ ಅಂತ ಹೇಳತಿದ್ರು, ನಾವೂ ನೋಡಿವಿ. ಈ ಚೇಂಜ್ ಆದ ಕೂಡ್ಲೆ, ತಾವು ಕೊಟ್ಟ ಮಾರ್ಚ್ ಕಾರ್ಡ್ ನ್ನ ಓಸ್ ಮಂದಿ ನೋಡ್ಕಂಡು ಸುಮ್ಮನಾಗ್ಯಾರ ಅನ್ನಸ್ತೈತಿ. ಆದ್ರ ಅದ್ರಾಗಾ ಇನ್ನೊಂದ್ ಸ್ವಲ್ಪ ಮಂದಿ ಫೇಲ್ ಆದಾರ್ನ ಹಿಡ್ಕಂಡು ಕಡ್ಡಿ ಆಡ್ಸಾಕ ನೋಡಿದ್ರು ಯಾರ್ ಏನ್ ಮಾಡಿದ್ರೂ ಹಣೆಬರಕ್ಕ ಹೊಣಿಯಾರು ? ಅಂದಂಗ ಏನೇನು ನಡಿಬೇಕೋ ಅದಾ ನಡೀತು ನೋಡು’. ಅಂತಂದ.
ಬುಡೇನಜ್ಜ ಮಾತು ಮುಗಿಸ್ತಿದ್ದಂಗನಾ, ರಾಮಣ್ಣ ‘ಆದ್ರ ನಮ್ ಪಿಎಂ ಸಾಲಿದು ಅಷ್ಟು ಗಡ್ ಬಡ್ ಆಗ್ಲಿಲ್ಲ ಬುಡು. ಆದ್ರ ಮದ್ಲು ನಾನು ಹಿಂಡ್ ಗಟ್ಲಿ ಸಚಿವ್ರನ್ನ ತಗಣಲ್ಲಪ್ಪಾ ಅಂತೇಳಿ ಈಗ ನೋಡಿದ್ರ ಮನ್ಮೋಹನ್ ಸಿಂಗ್ ತಗಂಡಿದ್ಕಿಂತ 10 ಮಂದಿ ಜಾಸ್ತೀನಾ ತಗಂಡಾರ. ಅದಕ್ಕಾ ಪೇಪರ್ ನಾಗ ಒಂದು ಚಿತ್ರ ಬಂದಿತ್ತು 2014ರಾಗ ಕುದ್ರಿ ಮ್ಯಾಗ ಕುಂತ ನಮ್ಮ ಪಿಎಂ 2016ರಾಗ ಆನಿ ಮ್ಯಾಗ ಕುಂತಿದ್ದು ನೋಡಿ ಎಲ್ಲ ನೆಪ್ಪಾತು. ರಾಜ್ಯ ಆಳಾದು ಬ್ಯಾರೆ ದೇಶ ಆಳಾದು ಬ್ಯಾರೆ ಅಂತ ಎಲ್ಲರಿಗೂ ಗೊತೈತಿ ಬುಡು. ಇನ್ನರ ನಮ್ ದೇಸಕ್ಕ ಒಳ್ಳೇದಾದ್ರ ಸಾಕು.’ ಅಂತ ಸುಮ್ಮನಾದ.
ರಾಮಣ್ಣನ ಮಾತು ಕೇಳಿದ ಮೈಲವ್ವ ‘ಲೋ ರಾಮಾ, ನೀನು ಆನಿ ಅಂದಿಂದೆ ನೆಪ್ಪಾತು ನೋಡು. ಉತ್ರ ಪ್ರದೇಸದಾಗೇನೋ ಎಲೆಕ್ಷನ್ ಅದಾವಂತೆಲ್ಲಲೋ, ನಿಂದು ಓಟಿನ ಕಾರ್ಡ್ ಐತೇನು ಅಲ್ಲಿದು ? ಅಂತ ಕೇಳಿದ್ಲು. ಜೋರು ನಕ್ಕ ಬುಡೇನಜ್ಜ ‘ಅಲ್ಲಿ ಆನಿ ನಡದದ್ದಾ ಹಾದಿ ಅನ್ನ ಕಾಲ ಇತ್ತೂ. ಅದೆಲ್ಲಾ ಮುಗುದೋದ ಕತಿ ಅಂತಾನೂ ಪ್ರೂ ಆಗಿತ್ತು. ಇತ್ಲಾಗ ನಮ್ ಇಂದ್ರಮ್ಮನ ಮಮ್ಮಗಳು ಬ್ಯಾರೆ ಕಣಕ್ಕಿಳದಾಳ ನೋಡಾಕು ಏನೇನಾಕೈತೋ ಏನೋ ?’ ಅಂದ.
ಅಷ್ಟತ್ಗೆಲ್ಲಾ ಬುಡೇನಜ್ಜಗ ಸಣ್ಣಕ ತೂಕಡಿಕಿ ಬಂದಿತ್ತು. ತೂಕಡಿಸಾಕತ್ತಿದ್ದ. ಅದನ್ನ ನೋಡಿದ ರಾಮಣ್ಣ ಬುಡೇನಜ್ಜನ ಮೈದಡವಿ, ‘ನಿದ್ದಿ ಬರಾಕತೈತೇನು ?, ಮದ್ಯಾಹ್ನಕ್ಕ ಮತ್ಯಾ ನಿಮ್ಮನಿಗೇ ಉಣ್ಣಾಕ ಹೋಗಾನಂತೆ ಸ್ವಲ್ಪ ಹೊತ್ತು ಎಲ್ಲಾರೂ ಅಡ್ಡಾಗಿಬಿಡಾಣಾ ?’ ಅಂತ ಕೇಳಿದ. ಅದಕ್ಕಿದ್ದು ನಮ್ಮ ಮೈಲವ್ವ ಲೋ ಅಡ್ಬಿಟ್ಟಿ ನೀನು ಆಕಡಿ ಬಂಡಿಮ್ಯಾಲ ಮಕ್ಕ ಗಬ್ಬು ನಾರಾ ಊಸು ಬಿಡ್ತಿ ಅರುವಿಲ್ದಾನಾ’ ಅಂತಂದು ಮೂರೂಜನ ಆ ಬೇನ ಮರದ ಒಂದೊಂದು ಬಂಡಿಗೆ ಅಂಗ ಅಡ್ಡಾದ್ರು.





0 Comments