ಅಜ್ಜಿ ಊನ! 
ಪ್ರಜ್ಞಾ ಮತ್ತೀಹಳ್ಳಿ
ಒಂದು ದಶಕದ ಹಿಂದಿನ ಮಾತು. ಸಣ್ಣ ಸಂಬಳ. ಇದ್ದ ಮನೆ ಬಿದ್ದು ಕಟ್ಟಿಸುವ ಸಲುವಾಗಿ ಬಾಡಿಗೆ ಮನೆ ವಾಸ. ಗ್ರಹಸಾಲದ ಶೂಲ. ಅರ್ಧ ಲಕ್ಷ ಕೊಟ್ಟು ದ್ವಿಚಕ್ರ ವಾಹನ ಕೊಳ್ಳುವ ಶಕ್ತಿ ಇರಲಿಲ್ಲ. ಹಾಗಂತ ವಾಹನವಿಲ್ಲದೇ ಬದುಕುವಷ್ಟು ಸಮಯವೂ ಇರಲಿಲ್ಲ. ದಿನಕ್ಕೆರಡು ಸಲ ಮನೆ ಕಟ್ಟುವ ಜಾಗಕ್ಕೆ , ಸಂಶೋಧನೆಯ ಮಾರ್ಗದರ್ಶಕರ ಭೆಟ್ಟಿಗಾಗಿ ವಿಶ್ವವಿದ್ಯಾಲಯಕ್ಕೆ, ಅವರು ಅಲ್ಲಿ ಸಿಗದಿದ್ದರೆ ಮೂರು ಕಿಲೋಮೀಟರ್ ದೂರದ ಅವರ ಮನಗೆೆ, ಪ್ರಭಂಧ ಟೈಪು ಮಾಡುತ್ತಿದ್ದ ಡಿಟಿಪಿ ಗಾತರ್ಿಯ ಮನಗೆ,ೆ ನನ್ನ ನೌಕರಿ ಬಸ್ಸು ಹಿಡಿಯಲು ಬಸ್ ನಿಲ್ದಾಣಕ್ಕೆ ಸಂಜೆ ಅಲ್ಲಿಂದ ಮನೆಗೆ ಹೀಗೆ ಇಡೀ ದಿನ ತಿರುಗುತ್ತಲೇ ಇರಬೇಕಾಗುತ್ತಿತ್ತು. ಅವನ್ನೆಲ್ಲ ಸಿಟಿ ಬಸ್ಸು ಹಿಡಿದು ಪೂರೈಸುವಷ್ಟು ಸಾರಿಗೆ ವ್ಯವಸ್ಥೆ ಅಭಿವ್ರಧ್ಧಿ ಆಗಿರಲಿಲ್ಲ. ಆಟೋಕ್ಕೆ ಸುರಿಯುವಷ್ಟು ಹಣ ನನ್ನಲ್ಲಿರಲಿಲ್ಲ. ನನ್ನ ತೌರುಮನೆಯಲ್ಲಿ ನಮ್ಮ ತಾಯಿ ಹೊಸ ಕೈನೆಟಿಕ್ ಕೊಂಡ ಕಾರಣದಿಂದ ಅವರು ಮೊದಲು ಉಪಯೋಗಿಸುತ್ತಿದ್ದ ಲೂನಾ ಹಾಗೆ ಖಾಲಿಯಾಗಿ ಕೂತಿತ್ತು. ನಮ್ಮಪ್ಪ ನಿನಗೆ ಅನುಕೂಲವಾಗುವುದಾದರೆ ತೆಗೆದುಕೊಂಡು ಹೋಗು ಅಂತ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ ಅದೇ ನನಗೆ ಆಪದ್ಭಾಂಧವವಾಗಿತ್ತು. ಹೂಂ ಎಂದೆ. ಟ್ರಾನ್ಸಪೊರ್ಟ ಲಾರಿಯಲ್ಲಿ ಕೂತು ಅಲ್ಲಲ್ಲ ನಿಂತುಕೊಂಡು ಲೂನಾ ನಮ್ಮೂರಿಗೆ ಬಂತು. ಸರಿ ಗರಗರ ತಿರುಗುವ ನನ್ನ ಕಾಯಕಗಳ ಸರಪಳಿ ಯಾತ್ರೆ ಶುರುವಾಯಿತು. ನಸುಕಿನ ಆರಕ್ಕೆ ಮನೆ ಕಟ್ಟುವಲ್ಲಿ ಹೊರಟರೆ ರಾತ್ರಿ ಹನ್ನೊಂದಕ್ಕೆ ಡಿಟಿಪಿಗಾತರ್ಿಯ ಮನೆಯಿಂದ ವಾಪಸು ಬರುವ ತನಕ ಕೀಲಿ ಕೊಟ್ಟು ನೆಲಕ್ಕೆ ಬಿಟ್ಟ ಮಕ್ಕಳ ಆಟಿಕೆಯಂತೆ ಡುರುಡುರು ತಿರುಗುತ್ತಲೇ ಇರುವುದು. ನಮ್ಮೂರಿನ ಜನಕ್ಕೆ ಇಲಿಯನೇರಿದ ಗಣಪನ ಫೋಟೊದ ಹಾಗೆ ಲೂನಾದ ಮೇಲೆ ನನ್ನ ನೋಡಿ ನೋಡಿ ನಮ್ಮಿಬ್ಬರನ್ನು ಬೇರ್ಪಡಿಸಿ ನೆನೆಸಿಕೊಳ್ಳಲು ಆಗದಂತೆ ಆಗಿತ್ತು.
ಆದರೆ ಅದು ತುಂಬಾ ಹಳೆಯ ಗಾಡಿ. ತೆಗೆದುಕೊಂಡು ಬಹಳ ವರ್ಷವಾಗಿತ್ತು. ನಮ್ಮಪ್ಪ ಪದೇಪದೇ ರಿಪೇರಿ ಮಾಡಿಸುತ್ತ ಇಟ್ಟುಕೊಂಡಿದ್ದರಿಂದ ಆ ಸಣ್ಣ ಊರಿನಲ್ಲಿ ಅಮ್ಮನ ಸಣ್ಣ ಪುಟ್ಟ ತಿರುಗಾಟಗಳಿಗೆ ತೊಂದರೆಯಿಲ್ಲದಂತೆ ಬದುಕಿತ್ತು. ಇಲ್ಲಿನ ಊರೋ ಶಿವಗಿರಿ, ರಜತಗಿರಿ, ವಿದ್ಯಾಗಿರಿ ಅಂತ ಏರಿಗಳು ತುಂಬಿರುವ ಗುಡ್ಡ ಪ್ರದೇಶ. ಕಿರಾಣಿ, ಗಿರಣಿ, ಮನೆ ಕಟ್ಟುವ ಸರಕುಗಳು, ಸಂಶೋಧನೆಯ ತೂಕದ ಗ್ರಂಥಗಳು ಅಂತ ನಾನು ಲಗೇಜು ಹೇರಿಕೊಂಡೇ ಓಡಾಡುವವಳು. ಹೀಗಾಗಿ ದಿನಹೋದ ಮುದುಕಿಯನ್ನು ಖಾನಾವಳಿ ಕೆಲಸಕ್ಕೆ ಹಚ್ಚಿದಂತಾಗಿತ್ತು. ಸಣ್ಣ ಪುಟ್ಟ ರಿಪೇರಿಗೆ ಹೋಗಲು ನನಗೆ ಸಮಯವಿರುತ್ತಿರಲಿಲ್ಲ. ಮೇಲಾಗಿ ಇಲ್ಲಿನ ಗ್ಯಾರೇಜುಗಳಲ್ಲಿ ಇರುವವರು ಈ ಕಾಲದ ಹುಡುಗರು. ಈಗಿನ ಬೈಕು, ಸ್ಕೂಟಿ ರಿಪೇರಿ ಕಲಿತವರು. ಲೂನಾ ರಿಪೇರಿ ಅಂದರೆ ಅವರಿಗೆ ಮಾಹಿತಿಯೂ ಇಲ್ಲ. ಆಸಕ್ತಿಯೂ ಇಲ್ಲ. ನನ್ನ ಅವಿರತ ಓಡಾಟದ ಗಾಣಕ್ಕೆ ಸಿಲುಕಿ ದಮ್ಮು ಹೆಚ್ಚಾದ ಅಜ್ಜಿಯ ಹಾಗೆ ಲೂನಾ ಗುರುಗುರು ಶುರು ಮಾಡಿತು. ಅದಕ್ಕೆ ಮತ್ತೆಂತ ತೊಂದರೆ ಇರಲಿಲ್ಲ. ಕೇವಲ ಸ್ಟಾರ್ಟಿಂಗ್ ಟ್ರಬಲ್. ಒಮ್ಮೆ ಶುರುವಾದರೆ ನಿಲ್ಲದೇ ಓಡುತ್ತಿತ್ತು. ಆದರೆ ಶುರು ಮಾಡಲೇ ಆಗುತ್ತಿರಲಿಲ್ಲ. ಅದಕ್ಕೆ ನಡು ಮಧ್ಯ ಇರುವ ದೊಡ್ಡ ಸ್ಟ್ಯಾಂಡು ಹಾಕಿಕೊಂಡು ಕ್ಲಚ್ಚು ಹಿಡಿದು ಎರಡೂ ಪೆಡೆಲುಗಳನ್ನು ಜೋರುಜೋರಾಗಿ ಸೈಕಲ್ ಹೊಡೆಯುತ್ತ ಅದೇ ಸಮಯದಲ್ಲಿ ಕ್ಲಚ್ಚು ಬಿಟ್ಟು ಎಕ್ಸಿಲೇಟರ್ ಏರಿಸಿದರೆ ಡುರುಡುರು ಶುರುವಾಗುತ್ತಿತ್ತು. ಹೀಗೆ ಏಕಕಾಲಕ್ಕೆ ನಾಲ್ಕಾರು ಚಟುವಟಿಕೆಗಳ ಷಷ್ಟಾವಧಾನ ಮಾಡಬೇಕಾಗುತ್ತಿತ್ತು. ನನಗೆ ಹೀಗೆ ಪೆಡೆಲು ಹೊಡೆಯಲು ಬರುತ್ತಿರಲಿಲ್ಲ. ಬೆಳಿಗ್ಗೆ ಪತಿದೇವರಿಂದ ಚಾಲು ಮಾಡಿಸಿಕೊಳ್ಳುತ್ತಿದ್ದೆ. ಮನೆ ಕಟ್ಟುವಲ್ಲಿ ಕೆಲಸದ ಹುಡುಗರು ಮಾಡುತ್ತಿದ್ದರು. ಯೂನಿವರ್ಸಿಟಿಯಲ್ಲಿ ಆ ಕಡೆ ಈ ಕಡೆ ನೋಡಿದರೆ ಯಾರಾದರೂ ಹುಡುಗರು ಕಣ್ಣಿಗೆ ಬೀಳುತ್ತಿದ್ದರು. ಬಸ್ಸು ನಿಲ್ದಾಣದ ಪಾರ್ಕಿಂಗ್ ಜಾಗ ಕಾಯುವವನನ್ನೇ ಕರೆಯುತ್ತಿದ್ದೆ. ಅವನು ಗೊಣಗಿದಾಗ ಮತ್ತೆ ನಿಮಗೆ ಚಾರ್ಜು ಕೊಡುವುದು ಎಂತಕ್ಕೆ ಎಂದು ಚೆನ್ನಾಗಿ ಉಗಿದಿದ್ದೆ. ಅದು ಪಾರ್ಕಿಂಗ್ ಚಾರ್ಜು ಸ್ಟಾರ್ಟಿಂಗ್ ಚಾರ್ಜು ಅಲ್ಲ ಎನ್ನುವ ಧೈರ್ಯ ಇಲ್ಲದ ಆ ಬಡಪಾಯಿ ದೂಸರಾ ಮಾತಾಡುತ್ತಿರಲಿಲ್ಲ. ನಡು ರಸ್ತೆಯಲ್ಲಿ ನಿಂತರೆ ಮಾತ್ರ ಪೇಚಿಗೆ ಇಟ್ಟುಕೊಳ್ಳುತ್ತಿತ್ತು. ಅದಕ್ಕಾಗಿ ನಾನು ಮುನ್ನೆಚ್ಚರಿಕೆ ಕ್ರಮವಾಗಿ ದಾರಿಯಲ್ಲಿ ಎಂತೆಂತಹ ಮಾಹಾನುಭಾವರು ಎದುರು ಬಂದರೂ ನಿಲ್ಲಿಸುತ್ತಿರಲಿಲ್ಲ. ಹೋಗುಹೊಗುತ್ತಲೇ ಅವರಿಗೆ ನಮಸ್ಕಾರ ಆರಾಮಾ ಎಂದೆಲ್ಲ ಕೇಳಿ ಮುಗಿಸುತ್ತಿದ್ದೆ. ಅವರು ಈ ನಡುವಳಿಕೆಯನ್ನು ಸೌಜನ್ಯದ ಕೊರತೆ ಸಂಸ್ಕಾರದ ಹೀನತೆ ಎಂದೆಲ್ಲ ಅಂದುಕೊಂಡಿರಬಹುದಾದರೂ ನನಗೆ ಬೇರೆ ಉಪಾಯವಿರಲಿಲ್ಲ. ಇಷ್ಟೆಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೆಲವು ಕೈ ಮೀರಿದ ಪ್ರಸಂಗಗಳು ಘಟಿಸಿಯೇ ಬಿಡುತ್ತಿದ್ದವು.
ನಗರದ ಹ್ರದಯ ಭಾಗದ ಬಸ್ಸುಸ್ಟ್ಯಾಂಡಿನ ಎದುರಿನ ಸರ್ಕಲ್ ದಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್. ಅದಕ್ಕಾಗಿ ಒಬ್ಬ ಪೋಲಿಸ ಇರುತ್ತಾನೆ. ಒಂದು ಕಡೆ ನಿಲ್ಲಿಸಿ ಇನ್ನೊಂದು ಕಡೆ ಬಿಡುತ್ತಾನೆ. ಅವನೊಮ್ಮೆ ನನಗೆ ಕೈ ಮಾಡಿ ನಿಲ್ಲಿಸಿದ. ನಾನು ನಿಧಾನವಾಗಿ ಪಕ್ಕದಿಂದ ಹೋಗಲು ನೋಡಿದೆ. ಪಿರ್ಪಿರ್ ಸೀಟಿ ಜೋರು ಮಾಡುತ್ತ ಎದರಿಗೇ ಅಡ್ಡ ಬಂದು ನಿಲ್ಲಿಸಿದ. ಸರಿ ನಾನು ನಿಲ್ಲಿಸಿದ್ದೇ ಲೂನಾ ಬಂದು ಬಿತ್ತು. ಕಣ್ಣು ಕಾಣಂಗಿಲ್ಲೇನ್ರಿ. ಕೈ ಮಾಡಿದ್ರೂ ಹಂಗೇ ಹೋಂಟಿರಲ್ಲಾ ಎಂದು ದಬಾಯಿಸಿದ. ಯಾಕೆ ಅಂತ ಗೊತ್ತಾಗತೈತಿ ಇಲ್ಲಿ ಬರ್ರಿ ಚಾಲು ಮಾಡಿ ಕೊಡ್ರಿ ಅಂತ ಅವನನ್ನೇ ಕರೆದೆ. ಏನೋ ಯಕಶ್ಚಿತ ಮಹಿಳೆ ಗಾಡಿ ಹೊಡಿತಾಳೆ ಚಾಲು ಮಾಡಲು ಬರುವುದಿಲ್ಲ ಅಂದುಕೊಳ್ಳುತ್ತ ಒಂದು ಉಡಾಫೆ ನಗೆಯೊಂದಿಗೆ ಬಂದು ಕಿಕ್ ಹೊಡೆಯತೊಡಗಿದ ಐದೇ ನಿಮಿಷ. ಬೆವರು ಸುರಿಯಲಾರಂಭವಾಗಿತ್ತು. ನಾನು ಚೆನ್ನಾಗಿ ಕ್ಲಾಸು ತೆಗೆದುಕೊಂಡಿದ್ದೆ. ಇಂಥ ಗಾಡಿ ನಿಲ್ಲಿಸಿದ್ರೆ ಪಬ್ಲಿಕಗೆ ತೊಂದ್ರೆ ಅಂತ ಹೊಂಟಿದ್ದೆ ಇದು ಹೋಗ್ತಾ ಇದ್ರೆ ಏನಾಗೋದಿಲ್ರಿ ನಿಂತ್ರೆ ಟ್ರಾಫಿಕ್ಗೆ ತ್ರಾಸು ಅಂಥ ಕೊರಕೊರ ಕೊರೆದೆ. ಅವನ ಕಾಲು ತಲೆ ಎರಡೂ ಬಸವಳಿದಿದ್ದವು. ಸೀಟಿ ಹೊಡೆಯುವರಿಲ್ಲದೇ ವಾಹನಗಳು ಚಿಲ್ಲಾಪಿಲ್ಲಿ ಹೊರಟಿದ್ದವು. ತಮಗೆಲ್ಲಾ ದಿನಾ ಸಿಕ್ಕಾಪಟ್ಟೆ ಬೈಯುವ ಪೋಲೀಸ ಹೀಗೆ ಒದ್ದಾಡುವುದ ನೋಡಿ ಒಬ್ಬ ಟೆಂಪೊದವ ತಲೆ ಹೊರ ಹಾಕಿ ಯಾಕ್ರೀ ಸರ್ ಎಂದು ಹಲ್ಲು ಕಿಸಿದು ಕೀರಲು ಧ್ವನಿಯಲ್ಲಿ ಕಿರುಚಿದ. ಪೋಲೀಸನಿಗೆ ಅಷ್ಟೇ ಬೇಕಿತ್ತು. ಏ ಇಲ್ಲಿ ಬಾ ಎಂದು ಕರೆದ. ತನ್ನ ತಲೆಯ ಗುಡ್ಡವನ್ನು ಸಿಸಿಲಿಯಸ್ಗೆ ವರ್ಗಾಯಿಸಿದ ಅಪೋಲೊ ನಂತೆ ಶಾಪಮುಕ್ತನಾಗಿ ಹೊರಟ. ಈಗ ಒದೆಯುವ ಸರದಿ ಟೆಂಪೊ ಡ್ರೈವರನದಾಗಿತ್ತು. ಬೆವರು ಕಿತ್ತು ಬಂದ ಕೂಡಲೇ ಅವನು ಇದೆಲ್ಲಿ ಗಾಡಿರಿ ಮೇಡಂ ಒಗದು ಒಂದು ಹೊಸಾದು ತೊಗೊರಿ ಅಂದ. ಅವನು ಅಂತಲ್ಲ ಅದನ್ನು ಒದೆಯಲು ಶುರು ಮಾಡಿದ ಪ್ರತಿಯೊಬ್ಬರೂ ಸರಿಯಾಗಿ ಮೂರನೇ ಒದೆಗೆ ಈ ಮಾತು ಶುರುವಿಡುತ್ತಿದ್ದರು. ನನಗೆ ಆ ಮಾತು ಕೇಳಿದ್ದೇ ತಡೆದುಕೊಂಡಿದ್ದ ನೋವು ಅಪಮಾನ ಅಸಹಾಯಕತೆಗಳ ಒಡ್ಡು ಒಡೆಯುತ್ತಿತ್ತು. ಹೊಸ ಗಾಡಿಯೇನು ಪುಕ್ಕಟೆ ಬರ್ತೇತೇನ್ರಿ. ರೊಕ್ಕ ಏನು ಗಿಡದಿಂದ ಉದುರ್ತಾವ? ಸಾಲ ಸೋಲ ಅಂತ ಸಾಯಾಕ ಹತ್ತೇವಿ. ನೀವೇನು ಬಾಯಾಗ ಹೇಳಿ ಬಿಡ್ತೀರಿ ಅಂತೆಲ್ಲ ಓತಪ್ರೋತವಾಗಿ ನನ್ನ ಆಕ್ರೋಷ ಆಕ್ರಂದನ ಹೊರ ಬರುತ್ತಿತ್ತು. ಅಷ್ಟರಲ್ಲಿ ಅವನ ಒದೆತಕ್ಕೋ ನನ್ನ ರಗಳೆಗೋ ಹೆದರಿ ಲೂನಾ ಡುರುಗುಡುತ್ತಿತ್ತು. ಬದುಕಿದೆಯಾ ಬಡಜೀವಿಯೇ ಎಂದು ಅವ ಓಡಿದ. ಕಡೆಗಣ್ಣಲ್ಲಿ ಇತ್ತ ನೋಡುತ್ತಿದ್ದ ಪೋಲಿಸ ಬೇರೆ ಕಡೆ ತಿರುಗಿ ಸೀಟಿ ಹೊಡೆದ. ಅವತ್ತೇ ಕಡೆ. ಮುಂದೆ ನನ್ನ ಲೂನಾ ಕಂಡಿದ್ದೇ ಅವ ಬೇರೆ ಕಡೆ ತಿರುಗಿಬಿಡುತ್ತಿದ್ದ. ನಾನು ಪಕ್ಕದಿಂದ ನಿಧಾನವಾಗಿ ಹೋಗುತ್ತಿದ್ದೆ. ಅದರ ಹಾರ್ನೂ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಎದುರಿಗೆ ಬಂದವರಿಗೆ ಜೋರಾಗಿ ಕೂಗಿ ಸರಿಯಲು ಹೇಳುತ್ತ ಹೋಗ ಬೇಕಾಗುತ್ತಿತ್ತು. ನಮ್ಮೂರಲ್ಲಿ ಓಡಾಡುವ ಹೆಚ್ಚಿನವರು ಹಳ್ಳಿಯವರಾದ ಕಾರಣ ಏನೂ ಆಭಾಸ ಅಂದುಕೊಳ್ಳುತ್ತಿರಲಿಲ್ಲ. ಏ ಅಜ್ಜಿ ಸರಿರಿ ಅಣ್ಣರ ಹೋಳಾಗ್ರೀ ಎಂದು ಕೂಗುತ್ತ ಹೋಗುವ ನನ್ನ ಜೊತೆ ಬರಲು ಮಗಳು ಬಿಲ್ಕುಲ್ ಒಪ್ಪುತ್ತಿರಲಿಲ್ಲ. ನಾನು ಹುಂಬರ ಹಾಗೆ ಕೂಗುತ್ತ ಹೋಗುವುದು. ಒಮ್ಮೆ ನಿಂತು ಬಿಟ್ಟರೆ ಯಾರ್ಯಾರನ್ನೋ ಕರೆದು ಒದೆಸಿ ಒದೆಸಿ ಸ್ಟಾರ್ಟು ಮಾಡಿಸುವುದು ಇವೆಲ್ಲ ಘೋರ ಅಪಮಾನಗಳಿಗೆ ಹೆದರಿ ಅವಳು ಅಮ್ಮಾ ಅಜ್ಜಿ ಊನಾ ಬೇದಾ ಎಂದು ಅಳುತ್ತಿದ್ದಳು. ಅವಳಿಗೆ ಆಗಿನ್ನು ಲ ಕಾರ ಬರುತ್ತಿರಲಿಲ್ಲ. ಆದರೆ ಆ ಗಾಡಿಗೆ ಅದು ಅನ್ವರ್ಥನಾಮವಾಗಿತ್ತು. ಹಾಗಾಗಿ ನಾವೆಲ್ಲ ಅದಕ್ಕೆ ಊನಾ ಅಂತಲೇ ಕರೆಯುತ್ತಿದ್ದೆವು. ಏನೇ ಕರೆದರೂ ಯಾರೇ ಜರೆದರೂ ನನಗದೇ ಸರ್ವಸ್ವವಾಗಿತ್ತು.
ಎಲ್ಲಕ್ಕಿಂತ ದೊಡ್ಡ ತೊಡಕು ಯೂನಿವರ್ಸಿಟಿ ರೈಲ್ವೇ ಗೇಟಿನದಾಗಿತ್ತು. ಅದು ದೊಡ್ಡ ಏರಿಕೆ ಮೇಲೆ ಇದೆ. ಪ್ರತಿ ಅರ್ಧ ಘಂಟೆಗೊಮ್ಮೆ ಹಾಕುತ್ತಾರೆ. ಮನುಷ್ಯ ಪೋಲಿಸನನ್ನು ಮಾತಲ್ಲಿ ಹೆದರಿಸಬಹುದು. ಆದರೆ ಯಾಂತ್ರಿಕ ರೈಲುಗೇಟಿಗೇನು ಮಾಡಲಾದೀತು? ರೈಲು ಹೋಗಿ ಗೇಟು ತೆರೆದದ್ದೇ ಎಲ್ಲಾ ವಾಹನಗಳು ಭರದಿಂದ ಡುರುಡುರು ಹೊರಟಾಗ ನನ್ನ ಅಸಲಿ ಸಮಸ್ಯೆ ಶುರುವಾಗುತ್ತಿತ್ತು. ನಾನಲ್ಲಿ ಗಾಡಿ ನಿಲ್ಲಿಸಿದರೂ ಅವರಿಗೆ ಅಡ್ಡವಾಗುತ್ತಿತ್ತಾದ್ದರಿಂದ ಪೀಂ ಪೀಂ ಹಾರ್ನು ಹಾಕಿ ಅಸಹನೆ ತೋರಿಸುತ್ತಿದ್ದರು. ಅದಕ್ಕಾಗಿ ನಾನು ನಿಲ್ಲಿಸಿ ಇಟ್ಟಾಗಲೇ ಅತ್ತಿತ್ತ ನೋಡಿ ಬೈಕುದಾರರಲ್ಲಿ ಸ್ವಲ್ಪ ಸಹಾಯ ಮಾಡಬಹುದಾದ ಮುಖದವರನ್ನು ಹುಡುಕಿ ಮಾತಾಡಿಸಿ ನನ್ನ ಲೂನಾ ಚಾಲೂ ಮಾಡುವ ಕಾಂಟ್ರಾಕ್ಟ ಕೊಟ್ಟು ಇಟ್ಟಿರುತ್ತಿದ್ದೆ. ರೈಲಿನ ಭೋಗಿಗಳೆಲ್ಲ ಹೋಗಿ ಬಾವುಟ ತೋರಿಸುತ್ತ ನಿಂತ ಗಾರ್ಡು ಒಳ ಹೋಗಿ ಬಾವುಟ ಇಟ್ಟು ಬಂದು ಯಾವುದೋ ಲಿವರ್ ಎಳೆದು ಲಾಕು ತೆಗೆದು ಆಮೇಲೆ ಇನ್ನೊಂದು ಕಡೆಯ ಲಿವರ್ ತಿರುಗಿಸಿದಾಗ ಗೇಟು ಏಳುತ್ತಿತ್ತು. ಈ ಪ್ರಕ್ರಿಯೆಯ ಅವಧಿಯೊಳಗೆ ನನ್ನ ಲೂನಾ ಚಾಲು ಆದರೆ ಸಾಕಿತ್ತು. ನಾನು ಆ ಹೊತ್ತಿನ ಬಲಿಪಶುವಾದ ಬಡಪಾಯಿಗೆ ಥ್ಯಾಂಕ್ಸ ಹೇಳುತ್ತಲೇ ಏರಿಕೆ ಏರಿ ಪಾರಾಗುತ್ತಿದ್ದೆ. ದಿನಾಲೂ ಬೇರೆ ಬೇರೆಯವರು ಬೇರೆ ಬೇರೆ ಕೆಲಸಕ್ಕೆ ಯೂನಿವರ್ಸಿಟಿಗೆ ಬರುವ ಕಾರಣ ನನಗೆ ಹೊಸ ಹೊಸ ಕರುಣಾಳುಗಳು ಸಿಗುತ್ತಿದ್ದರು. ಹಾಗಾಗಿ ನಾನು ಭೂಮಿಯ ಮೇಲೆ ಮಾನವೀಯತೆಯ ಸ್ಟಾಕು ಸದ್ಯಕ್ಕಂತು ಬೇಕಾದಷ್ಟಿರುವುದಾಗಿಯೂ ಒಂಟಿ ಹೆಣ್ಣುಮಕ್ಕಳು ತಮ್ಮೆಲ್ಲ ತಾಪತ್ರಯಗಳನ್ನು ಇಟ್ಟುಕೊಂಡು ಓಡಾಡಲು ನಮ್ಮೂರು ಹೇಳಿ ಮಾಡಿಸಿದ ಜಾಗವೆಂತಲೂ ನನ್ನ ಸಂಶೋಧನಾ ವಿಷಯಕ್ಕಿಂತ ಹೆಚ್ಚಿನ ಖಚಿತತೆಯಿಂದ ಕಂಡುಕೊಂಡಿದ್ದೆ.
ಇವೆಲ್ಲ ನನ್ನ ಲೂನಾ ತ್ರಾಸು ಕೊಟ್ಟಾದರೂ ಚಾಲು ಆದ ಪ್ರಸಂಗಗಳಾದರೆ ಏನೇ ಹರಸಾಹಸ ಮಾಡಿದರೂ ನಿಂತು ಬಿಟ್ಟಿದ್ದ ಪ್ರಸಂಗಗಳೂ ಅನೇಕವಿದ್ದವು. ಆಗೆಲ್ಲ ನಾನು ಒದೆದು ಒದೆದು ಬಸವಳಿದಿದ್ದ ಕರುಣಾಳುವನ್ನು ಉದಾರ ಹ್ರದಯದಿಂದ ತಡೆದು ನಿಲ್ಲಿಸಿ ಮೆಕ್ಯಾನಿಕರನ್ನು ವಿಚಾರಿಸುತ್ತಿದ್ದೆ. ಅಷ್ಟರಲ್ಲಾಗಲೇ ಬದುಕುಳಿದರೆ ಬೇಡಿಕೊಂಡಾದರೂ ತಿನ್ನಬಹುದೆಂಬ ಸತ್ಯದ ಅರಿವಾಗಿರುತ್ತಿದ್ದ ಅವರು ಬಡಬಡ ಹತ್ತಿರದ ಗ್ಯಾರೇಜುಗಳ ಪ್ರವರ ಒಪ್ಪಿಸಿ ಪಾರಾಗುತ್ತಿದ್ದರು. ನಂತರದ ನನ್ನ ಧಾಳಿ ಆ ಮೆಕ್ಯಾನಿಕ್ ಮೇಲೆ. ಅವರಿಗೆ ಇದ್ದ ಅಂಗಾಂಗಗಳನ್ನು ಕಳಚಿ ಹೊಸದನ್ನು ಜೋಡಿಸಿಕೊಡುವ ಫಿಟ್ಟಿಂಗ್ ಕೆಲಸ ಗೊತ್ತೇ ಹೊರತು ಇದ್ದ ಜೋಡಣೆಯಲ್ಲಿ ತೊಂದರೆ ಕಂಡು ಹಿಡಿದು ಸರಿಪಡಿಸಲು ಗೊತ್ತಿಲ್ಲ. ಹಾಗೂ ಹೀಗೂ ತಾತ್ಕಾಲಿಕ ವ್ಯವಸ್ಥೆ ಮಾಡಿ ಅದನ್ನು ಮಾರುವ ಕಿವಿಮಾತು ಹೇಳಿ ನನ್ನಿಂದ ಉಗಿಸಿಕೊಂಡು ಕಳಿಸುತ್ತಿದ್ದರು. ನಾನು ನನ್ನ ಊನ ಲೂನ ಎರಡು ಊರು ಪ್ರಸಿದ್ಧರಾಗಿದ್ದರಿಂದ ನಮ್ಮನ್ನು ತಡವುವ ಗಂಡುಗಳ್ಯಾರೂ ಇರಲಿಲ್ಲ. ಪರಿಚಿತರು ದೂರದಿಂದ ನೋಡಿದ್ದೇ ಬೇರೆ ಕಡೆ ಮುಖ ತಿರುಗಿಸಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಆ ಊನ ಲೂನಾದ ಮೇಲೆ ತಿರುತಿರುಗಿ ನನ್ನ ಪಿ ಎಚ್ ಡಿ ಮುಗಿಸಿದೆ. ಮನೆ ಕಟ್ಟಿಸಿದ್ದೂ ಆಯಿತು. ಗ್ರಹಪ್ರವೇಶಕ್ಕೆ ಬಂದವರು ಒಕ್ಕೊರಲಿನಿಂದ ಇನ್ನಾದರು ಹೊಸಾ ಗಾಡಿ ತೊಗೊಳ್ರೀ ಎಂದು ಅಂಗಲಾಚಿದರು. ಅವರ ಧ್ವನಿಯಲ್ಲಿ ಊರ ಹಿತ ಕಾಯುವ ಕಳಕಳಿ ತೊಟ್ಟಿಕ್ಕುತ್ತಿತ್ತು. ಆದರೆ ನನ್ನ ಬೊಕ್ಕಸವಂತೂ ಬರಿದಾಗಿತ್ತು. ನನ್ನ ಮಕ್ಕಳು ಅಜ್ಜ ಅಜ್ಜಿಯರ ಮುಂದೆ ಈ ದುರವಸ್ಥೆಗಳನ್ನು ಬಣ್ಣಿಸಿದ್ದರಿಂದ ಅವರು ಲೂನಾವನ್ನು ತಿರುಗಿ ಊರಿನ ಲಾರಿ ಹತ್ತಿಸಿ ಬಿಟ್ಟರು. ಹೊಸ ಮನೆ ಮುಂದೆ ಹೊಸ ಕಾರು ನಿಲ್ಲದಿದ್ರೆ ಜಾಹಿರಾತಿನವರಿಗೆ ಬೇಜಾರಾಗುವುದಿಲ್ವೇ? ಹಾಗಾಗಿ ನನ್ನ ಪತಿರಾಯ ಎರಡನೇ ಕೈ (ಸೆಕೆಂಡ್ ಹ್ಯಾಂಡ) ಕಾರು ಕೊಂಡು ನಿಲ್ಲಿಸಿದ. ನನ್ನ ಕೆಲಸದ ಭರಾಟೆ ಕಡಿಮೆ ಇದ್ದ ಕಾರಣ ಲೂನಾವಿಹೀನಳಾದರೂ ಸಿಟಿ ಬಸ್ ಏರಿಣಿಯಾಗಿ ಬಾಳ್ವೆ ನಡೆಸತೊಡಗಿದೆ. ಬಸ್ಸಿನ ಕಿಡಕಿಯಿಂದ ನೋಡಿದರೆ ರಸ್ತೆ ತುಂಬಾ ಸ್ಕೂಟಿ,ಪ್ಲೆಶರ, ಕೈನೆಟಿಕ್ ಎನೇನೋ ಒಂದೇ ಒಂದು ಲೂನಾ ಕಾಣುತ್ತಿರಲಿಲ್ಲ. ಊರಿಗೊಬ್ಳೇ ಪದ್ಮಾವತಿಯಂತಿದ್ದ ಲೂನಾ ಊರು ಬಿಟ್ಟಾಗಿತ್ತು.




Very nice. Since I too studied in KUD, I could connect with Dharwad. Perhaps that was one reason why I liked it. But, nararating style caught me…Best of luck Prajna. Certain short lines were so brilliant that it reminded me of the approach of A.K. Ramanujan.. Hats off.
ನಿಮ್ಮ ಲೂನಾ ಕತೆ ತುಂಬ ಚೆನ್ನಾಗಿದೆ…ಎರಡನೇ ಪ್ಯಾರಾ ಬಂದಾಗ ನಗೋಕೆ ಶುರುಮಾಡಿದವಳು ಕೊನೇ ತನಕ ನಗ್ತಾನೇ ಇದ್ದೆ :-)ಎಲ್ಲಾ ವಿವರಗಳೂ ಇಷ್ಟವಾದವು…ಜೊತೆಗೆ ನನ್ನ ಸ್ಕೂಟಿ ಸ್ಟಾರ್ಟ್ ಆಗದೇ ಇದ್ದಾಗ ಅನುಭವಿಸಿದ ತೊಂದರೆಗಳೂ ನೆನಪಿಗೆ ಬಂದವು; ಸಿಗ್ನಲ್ ನಲ್ಲಿ ಹಸಿರುದೀಪ ಬರುವವರೆಗೆ ಗಾಡಿ ಆಫ್ ಮಾಡಿಕೊಂಡು ಆರಾಮಾಗಿ ಆಚೀಚೆ ನೋಡುತ್ತಾ ಇರುತ್ತಿದ್ದೆ…ಸಿಗ್ನಲ್ ಬಿಟ್ಟಾಗ ಎಷ್ಟಂದ್ರೂ ಸ್ಟಾರ್ಟ್ ಆಗದಿದ್ದಾಗ ನನ್ನ ಗೋಳು ಕೇಳುವವರಿರುತ್ತಿರಲಿಲ್ಲ…ರಸ್ತೆ ಮಧ್ಯದಿಂದ ಅದನ್ನೂ ತಳ್ಳಿಕೊಂಡು ಸೈಡಿಗೆ ಬರುವುದಕ್ಕೆ ಹರಸಾಹಸ ಮಾಡಬೇಕಿತ್ತು…ನಿಮ್ಮೂರಿನಲ್ಲಿ ನಿಮಗೆ ಸ್ಟಾರ್ಟ್ ಮಾಡಿಕೊಡುವವರು ಸಿಗುತ್ತಾರೆ, ಆದ್ರೆ ಬೆಂಗಳೂರಿನಲ್ಲಿ ನೋಡಿಯೂ ಸಹಾಯ ಮಾಡದೆ ಹೋಗುವವರೇ ಜಾಸ್ತಿ…ನಾನೋ ಸ್ವಾಭಿಮಾನ ಬಿಟ್ಟು ಒಬ್ಬರನ್ನೂ ಕರೆಯುತ್ತಿರಲಿಲ್ಲ…ಅವರಾಗೇ ಬರುತ್ತಿರಲಿಲ್ಲ…ಅವಮಾನದಿಂದ ಕುದಿಯುತ್ತಾ ನಿಂತಿರುತ್ತಿದ್ದೆ…ಹೀಗೆ ಹೇಳುತ್ತಾ ಹೋದರೆ ಮತ್ತೊಂದು ಸ್ಕೂಟಿ ಪುರಾಣವೇ ಆದೀತು 🙂