ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ -1

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

9

ಬಾ ಬಾ ಎಂದಿದೆ ಗಣೇಶಗುಡಿ

ಅನಾಮಿಕಳಾಗಿ ಹಕ್ಕಿ ಫೀಲ್ಡಿಗಿಳಿದಿದ್ದ ನನಗೆ ಹಕ್ಕಿ ಗೆಳೆಯ ಗೆಳತಿಯರು ಪರಿಚಯವಿಲ್ಲದ ಕಾರಣ ದೂರದೂರಕ್ಕೆ ಹೋಗಲು ಕಷ್ಟವಾಗಿತ್ತು. ಕರ್ನಾಟಕದಲ್ಲಿನ ಎಷ್ಟೋ ಸ್ಥಳಗಳಿಗೆ ನಾನಿನ್ನೂ ಹೋಗಿರಲಿಲ್ಲ. ಹಕ್ಕಿಗಳ ಹಿಂದೆ ಬಿದ್ದವರು ದಾಂಡೇಲಿಯ ಬಳಿಯ ಗಣೇಶಗುಡಿಯ ಯಾತ್ರೆ ಮಾಡಿ, ಪಕ್ಷಿಕಾಳಿ-(ಪಕ್ಷಿಕಾಶಿ)ಯಲ್ಲಿ ಮಿಂದೆದ್ದು ಪುನೀತರಾದಂತೆ. (ಕಾಳಿ ನದಿಯ ದಂಡೆಯಾದ್ದರಿಂದ) ಬಹಳ ದಿನಗಳ ಕನಸು.

ಹಕ್ಕಿಸ್ವರ್ಗವೇ ಆಗಿದ್ದ ಗಣೇಶಗುಡಿ ಕೈಬೀಸಿ ಬೀಸಿ ಕರೆಕರೆಯುತ್ತಲೇ ಇತ್ತು. ಹಲವರು ಅದರ ಬಗ್ಗೆ ವರ್ಣರಂಜಿತ ಚಿತ್ರ ಕಟ್ಟಿಕೊಟ್ಟಿದ್ದರು. ಇಷ್ಟು ಕೇಳಿದ ಬಳಿಕ ಸುಮ್ಮನಿರಲು ಹೇಗೆ ಸಾಧ್ಯ? ಪಶ್ಚಿಮಘಟ್ಟದ ಸಾಲುಗಳ ಬಹುತೇಕ ಹಕ್ಕಿಗಳು ಬರುವ ತಾಣವದು. ಆಗಿನ್ನೂ ನನ್ನ ಏಕಾಂಗಿ ಓಡಾಟ ಅಭ್ಯಾಸವಾಗಿರಲಿಲ್ಲ. ಒಬ್ಬಳೆ ಹೋಗಿಯೇ ಬಿಡೋಣ ನಮ್ಮ ಗಾಡಿಯಲ್ಲಿ ಅಂದುಕೊಂಡೆ. ಆದರೆ ನಮ್ಮ ಮನೆಯಲ್ಲಿ ನಾಲ್ಕು ಚಕ್ರದ ಗಾಡಿಗಳು ನಾಲ್ಕಿದ್ದರೂ ರೆಗ್ಯುಲರ್ ಸಾರಥಿ ಇರಲಿಲ್ಲ, ಈಗಲೂ ಇಲ್ಲ. ಹಾಗಾಗಿ ಗಣೇಶಗುಡಿ ಕೈಗೆಟುಕಿರಲಿಲ್ಲ.
ಹಕ್ಕಿಸ್ವರ್ಗದ ಕನಸುಗಳು ಈಡೇರದ ಬೇಗುದಿಗಳಲ್ಲಿ ಬೆಂದು ಕಾಯುತ್ತಿದ್ದಾಗ ತಂಗಿಗೆ ಗಣೇಶಗುಡಿಗೆ ಹೋಗೋಣವೆ ಎಂದೆ. ರೈಟ್ ಎಂದು ನನ್ನ ಜೊತೆಗೆ ಬಂದಳು.

ಗಣೇಶಗುಡಿ ನಮ್ಮ ಗುರಿಯಾದರೂ ಹೊರಟ ದಾರಿ ಕೊಂಕಣ ಸುತ್ತಿ ಮೈಲಾರಕ್ಕೆ ಆಗಿತ್ತು. ನನ್ನ ನೆಪಮಾತ್ರದ ಆರೋಗ್ಯಯಾತ್ರೆಯು ಸಾಥ್ ನೀಡಿತು. ಮಣಿಪಾಲದ ಪರೀಕಾದಲ್ಲಿ ಮಸಾಜಿಗೆ ಮೈಕೈ ಒಡ್ಡಿ ಹತ್ತು ದಿನ ತಳ್ಳಿದೆವು. ಪ್ರತಿದಿನವೂ ಕೌಂಟ್ ಮಾಡಿಕೊಳ್ಳುತ್ತಾ ಇನ್ನು ಇಷ್ಟೆ ದಿನ ಎಂದು ಕಾಲವನ್ನು ಹಿಂದಕ್ಕೆ ತಳ್ಳುತ್ತಿದ್ದೆವು. ಹಕ್ಕಿ ಜೈತ್ರಯಾತ್ರೆಗೆ ಹೊರಡುವ ಅಪರಿಮಿತ ಉತ್ಸಾಹದೊಡನೆ ದಶ ದಿನಗಳ ಪರೀಕಾ ವನವಾಸ ಮುಗಿಸಿದ ದಿನವೆ ಪಯಣ ಹೊರಟೆವು. ಹೋಗಬೇಕಾಗಿದ್ದುದು ಗಣೇಶಗುಡಿಗಾದರೂ ಪಯಣಿಸಿದ್ದು ಮಾತ್ರ ಅಂಕೋಲಾದತ್ತ.

35 ವರ್ಷಗಳ ಸುದೀರ್ಘ ವೃತ್ತಿಯಲ್ಲಿ ನನ್ನ ಮಾನಸಿಕ ಪುತ್ರಿಯರ ದೊಡ್ಡ ಪಟ್ಟಿಯಿದೆ. ವೃತ್ತಿಯಲ್ಲಲ್ಲದೆಯೂ ಇನ್ನೂ ಹಲವರು ಪ್ರೀತಿಯಿಂದ ಮಗಳ ಸ್ಥಾನ ಪಡೆದಿದ್ದಾರೆ. ಅವರಲ್ಲೊಬ್ಬರು ವೈದ್ಯೆ ಡಾ.ಸೌಮ್ಯ. ನಮ್ಮೂರ ಸೌಮ್ಯ ಉತ್ತರ ಕನ್ನಡದ ಸೊಸೆಯಾಗಿ ಅಂಕೋಲಾದ ಕಮಲ ಮೆಡಿಕಲ್ ಸೆಂಟರ್ ಉದ್ಯೋಗಿ ಪತಿ ಪ್ರವೀಣಚಂದ್ರ ಜೊತೆ ಕೆ.ಎಲ್.ಇ. ಆಸ್ಪತ್ರೆಯ ಆವರಣದಲ್ಲಿದ್ದರು. “ಅಂಕೋಲಾಕ್ಕೆ ಬನ್ನಿ,” ಎಂದು ಕರೆದಾಗ ಗಣೇಶಗುಡಿಯ ಬಗ್ಗೆ ಹೇಳಿ, ಕೇಳಿ ಅಲರ್ಜಿ ಹುಟ್ಟಿಸಿ, “ಅಲ್ಲಿಗೆ ಕರೆದುಕೊಂಡು ಹೋದರೆ ಬರ್ತೀನಿ,” ಅಂತಾ ಕರಾರು ಹಾಕುತ್ತಿದ್ದೆ. ಅದು ಕರೆಕ್ಟಾಗಿ ಎಲ್ಲಿದೆ ಎಂದರಿಯದ ಅವಳು, “ಬನ್ನಿ, ನೀವು ಬರೋದು ಹೆಚ್ಚೋ, ನಾವು ಕರೆದುಕೊಂಡು ಹೋಗೋದು ಹೆಚ್ಚೋ, ನಾನು ವ್ಯವಸ್ಥೆ ಮಾಡಿಕೊಡುತ್ತೇನೆ,” ಎಂದು ಆಶ್ವಾಸಿಸಿ ಆಹ್ವಾನಿಸಿದ್ದಳು. ನಮ್ಮಿಬ್ಬರ ಗಣೇಶಗುಡಿಯ ಪ್ರಯಾಣ, ವಸತಿ ಇತ್ಯಾದಿಗಳ ಪೂರ್ಣ ಜವಾಬ್ದಾರಿಯನ್ನು ಹಕ್ಕಿಗಳ ಬಗೆಗೆ ಅಆಇಈ ಅರಿಯದ ಅವರ ಹೆಗಲಿಗೆ ಹೊರೆಸಿ ನಾವಿಬ್ಬರೂ ಅಂಕೋಲಾಕ್ಕೆ ಹೊರಟೆವು, ಅವಳೇ ಕಳಿಸಿದ ಕಾರಿನಲ್ಲಿ.

ಅಂಕೋಲಾಕ್ಕೆ ಹೋಗುವ ಹಾದಿಯಲ್ಲಿ ಎಲ್ಲೂ ನಿಲ್ಲಿಸುವ ಇರಾದೆ ಇರಲಿಲ್ಲ. ಸಮುದ್ರರಾಯ ಇಣುಕಿಣುಕಿ ಅಲೆಗೈ ಬೀಸಿ ಕರೆಯುತ್ತಿದ್ದುದರಿಂದ ಆಗಾಗ ಕಡಲ ಬದಿಯಲ್ಲಿ ಕಂಡ ಹಕ್ಕಿಗಳನ್ನು ಕಂಡಾಗ ಕೆಲಕ್ಷಣ ಕಾರಿಗೆ-ಕಾಲಿಗೆ ಬ್ರೇಕ್ ಬೀಳುತ್ತಿತ್ತು. ಮರವಂತೆಯ ಸಮುದ್ರದ ಕಿನಾರೆಯಲ್ಲಿ ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಮರಳ ಮೇಲೆ ಕಾಲಿಡಲೂ ಭಯ. ಕಾರಿನಿಂದಲೇ ಒಂದೆರಡು ಕ್ಲಿಕ್ ಅಷ್ಟೆ. ಅಲ್ಲಿಂದ ಮುಂದೆ ದಾರಿಯುದ್ದಕ್ಕೂ ಮೀನು ತುಂಬಿದ ಲಾರಿಗಳು ಕುಡಿಸುತ್ತಿದ್ದ ಉಚಿತ ಗಮಲು. ನಿರ್ಮಾಣವಾಗುತ್ತಿದ್ದ ಹೆದ್ದಾರಿಯ ಧೂಳ್… ಮಗಾ… ಧೂಳ್.

ಮುರುಡೇಶ್ವರಕ್ಕೆ ಬಂದಾಗ ಸೂರ್ಯ ಸಮುದ್ರದ ಮಡಿಲಿಗೆ ಇಳಿಯಲು ಹವಣಿಸುತ್ತಿದ್ದ. ಅವನನ್ನು ನೋಡದೆ ಸಾಗುವ ಮನಸ್ಸಾಗಲಿಲ್ಲ. Entry ಕೊಟ್ಟ ತಕ್ಷಣ ಕಣ್ಣಿಗೆ ಬಿದ್ದದ್ದು ಮೀನಿನ ರಾಶಿ. ಅದರ ಕಾಯಕದಲ್ಲಿ ಮುಳುಗಿದವರು ಒಂದೆಡೆಯಾದರೆ, ಅದಕ್ಕೆ ಹೊಂಚು ಹಾಕುತ್ತಿದ್ದ ಆಕಾಶಗಾಮಿ ಹದ್ದು ಕಾಗೆಗಳು, ಭೂಗಾಮಿ ನಾಯಿಗಳು ಇನ್ನೊಂದೆಡೆ. ಮೀನುಗಳ ಸಾಮ್ರಾಜ್ಯದಿಂದ ಸಾಯುಜ್ಯ ಮುಕ್ತಿದಾತ ಶಿವನ ಸನಿಹಕ್ಕೆ ಅವಸರದ ಭೇಟಿ ಕೊಡಲು ಬಿರುಸಾದ ಹೆಜ್ಜೆ ಹಾಕಿದೆವು, ಸೂರ್ಯನ ಅಸ್ತಮಾನದ ವೈಭವ ನೋಡಲು ಆತುರ ಇದ್ದ ಕಾರಣ. ಗಿಡದಲ್ಲಿ ಬಿಟ್ಟ ಹೂ ಆಹ್ವಾನಿಸುತ್ತಿದ್ದರೂ ಒಳಗಿದ್ದ ಶಿವನಿಗೆ ಹೂವನ್ನು ನಾ ನೋಡಿದ ನೋಟವೇ ಶಿವನಿಗೆ ಹೂ ಸಮರ್ಪಣೆ ಎಂದು ಕೈಬೀಸಿ ನಡೆದೆವು. ಮೆಟ್ಟಿಲು ಏರುತ್ತಿದ್ದಂತೆ ಅಳಿಲೊಂದು ನೇರವಾಗಿ ಸ್ವರ್ಗಕ್ಕೆ ಏರಲು ಹವಣಿಸುತ್ತಿತ್ತು. ಕತ್ತೆತ್ತಿ ನೋಡಿದರೆ ರಾಜಗೋಪುರ. ಸಾಧ್ಯವಾದರೆ ಅಲ್ಲಿಗೆ ನೀ ಹೋಗು ಇಣಕಿ ನೋಡುತ್ತಿರುವ ಇಣಚಿಯೇ ಎಂದು ಗುಡಿಯೊಳಗೆ ಹೋದ speedನಲ್ಲಿ ಗುಡಿಯಿಂದಾಚೆ ನಾವು ಬಂದೆವು. ತಟಕ್ಕನೆ ಕುವೆಂಪು ನೆನಪಾದರು…

ಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನಾ ದೇಗುಲದಿ ಕೂಡಿದನು ವೈದಿಕನು ಅವನ ಕರುಣಾಳು ಶಿವನವನು ಕಲ್ಲಾದನೇಕೆ ಮನದಲ್ಲಿ ಇರುವವರಿಗೆ ಮನೆ ಬೇರೆ ಬೇಕೆ....' ಅವರ ಕವಿತೆಯೂ ನೆನಪಾಯಿತು. ಗುಡಿಯಲ್ಲಿದ್ದ ಶಿವನಿಗೆ ನಮ್ಮನ್ನು ಕಾಣಿಸಿಸಿ ಹೊರಗೆ ಬಂದರೆ ವಿಶಾಲಕಾಯದ ಶಿವ ಮನೆಯಿಲ್ಲದೆ ಬಯಲಲ್ಲಿದ್ದ. ಒಳಗಿದ್ದ ಶಿವಕಲ್ಲಿನಲಿ ಕೆತ್ತಿದನು ಶಿಲ್ಪಿಯವ ಶಿವನಾ’ ಆಗಿದ್ದರೆ, ಹೊರಗಿದ್ದ ಶಿವ ಗಾರೆಯಲಿ ಮೆತ್ತಿದನು ಗಾರೆಯವ ಶಿವನಾ' ಆಗಿದ್ದ. ಮಾಧ್ಯಮಗಳು ನೂರು ನೂರಾರು. ಭಕ್ತಿಯಂತೆ ಭಾವ, ಭಾವದಂತೆ ಭಕ್ತಿ ತಾನೆ! ಕಡಲ ಕಿನಾರೆ ಕೈಬೀಸಿ ಕರೆಯುತ್ತಿತ್ತು, ಅತ್ತ ಹೆಜ್ಜೆ ಹಾಕಿದೆವು.

ಕಡಲು ಮೊರೆಯುತ್ತಿತ್ತು. ಅಲೆಗಳಿಂದ ಹಾಗೂ ತುಂಬಿದ ಜನಗಳಿಂದ. ಸಂಜೆರವಿ ಕಡಲಿನಲ್ಲಿ ಮುಖ ಮರೆಸಿಕೊಳ್ಳಲು ಹವಣಿಸುತ್ತಿದ್ದ. ದಿನಾ ನೋಡುವ ಸೂರ್ಯನಿಗಿಂತ ಅಪರೂಪಕ್ಕೆ ನೋಡುವ ಸಮುದ್ರದ ಅಲೆಗಳಲ್ಲಿ ಮುಳುಗುತ್ತಾ ಏಳುತ್ತಾ ಆನಂದದ ಲಹರಿಯಲ್ಲಿ ತೇಲುತ್ತಿದ್ದ ಜನರಿದ್ದರು. ಅದರಲ್ಲಿ ಹೆಣ್ಣು-ಗಂಡು, ಎಳೆಯರು, ಹರೆಯದವರು, ಹರಯ ದಾಟಿದವರು ಎಂಬ ಭೇದ ಇರಲಿಲ್ಲ. ಹೆದರಿಕೆ ಇಲ್ಲದವರು ಮಾತ್ರವಲ್ಲ ಹೆದರುತ್ತಿದ್ದ ಕೆಲವರು ಸಮುದ್ರದ ಅಲೆಗಳ ನಡುವೆ ಇದ್ದರು. ಹೆದರಿದ್ದ ಇನ್ನೂ ಕೆಲವರು ದಡದಲ್ಲೇ ಠಳಾಯಿಸುತ್ತಿದ್ದರು.

ನಮ್ಮ-ಅವರ ನಡುವೆ ಅನೇಕಾನೇಕ ಕಾರಣಗಳಿಗೆ ಸದಾ ಜಟಾಪಟಿ ನಡೆಯುತ್ತಿದ್ದರೂ ನಮ್ಮವರು ಅಲ್ಲಿಗೆ, ಅವರು ಇಲ್ಲಿಗೆ ಧಾರ್ಮಿಕ ಹಾಗೂ ಇತರೆ ಕಾರಣಗಳಿಗಾಗಿ ಹೋಗುವುದು ಇದ್ದೇ ಇದೆ. ತಮಿಳುನಾಡಿನಿಂದ ಬಂದ ಭಕ್ತರು, ಪ್ರವಾಸಿಗಳು ಕಾಣಸಿಕ್ಕರು. ಪಕ್ಕಾ ತಮಿಳು ಮಹಿಳೆಯರಿಬ್ಬರಿಗೆ ಒಂದು ಪಟ ಹಿಡಿಯಲಾ ಎಂದು ಹೇಗೋ ಅರ್ಥ ಮಾಡಿಸಿದೆ. ಅವರೂ ನಗು ಚೆಲ್ಲುತ್ತಾ ಪೋಸ್ ನೀಡಿದರು. ಇನ್ನೊಂದೆಡೆ ಅಯ್ಯಪ್ಪನ ಭಕ್ತರು ಚಿಂತಿಸುತ್ತಾ ನಿಂತಿದ್ದರು. ದೇವರಿಗೆ ಸಲ್ಲುತ್ತದೆಂದು ನಂಬಿ ಮುಡಿ ಒಪ್ಪಿಸಿದ ಭಕ್ತನನ್ನೂ ಕ್ಯಾಮೆರಾ ಸೆರೆ ಹಿಡಿಯಿತು. ಸೂರ್ಯ ನವೀನ್ ಬೀಚ್ ರೆಸ್ಟೋರೆಂಟ್ ಹಿಂಭಾಗದಲ್ಲಿ ಕೆಳಗಿಳಿಯತೊಡಗಿದ. ನಾವಿದ್ದ ದಡದಲ್ಲೇ ಇದ್ದರೆ ಸೂರ್ಯನ ಪಯಣವನ್ನು ನೆಮ್ಮದಿಯಾಗಿ ಆನಂದಿಸಲಾರೆವು ಅನಿಸಿತು. ತಂಗಿಗೆ ಹಿಂದೊಮ್ಮೆ ಬಂದಿದ್ದಾಗ ಈ ಹೊಟೇಲ್ ಹಿಂಭಾಗದಲ್ಲಿ ಸೂರ್ಯಾಸ್ತಮಾನದ ಸೊಗಸನ್ನು ಕಂಡ ನೆನಪಿದ್ದರಿಂದ ಅತ್ತ ಹೆಜ್ಜೆ ಹಾಕಿದೆವು. ಅಜಾನುಬಾಹು ಶಿವನ ಹಿಂದೆ ಬಂದು ನಿಂತರೆ ಸರಿಯಾಗಿ ಬೀಳ್ಕೊಡಬಹುದೆಂದು ಬಂದೆವು.

ಅವನಿಗೆ Good bye ಹೇಳಲು ಬಂದವರು ನಾವು ಮಾತ್ರವೆ. ಅಲ್ಲಲ್ಲ ಸೂರ್ಯಪುತ್ರನಾದ ಶನಿದೇವನ ವಾಹನಗಳಾದ ನಾಲ್ಕಾರು ಕಾಗೆಗಳು ಸೂರ್ಯನ ಪ್ರತಿಕೃತಿಯ ಮೇಲೆಯೆ ಕೂತು ಕಾಯುತ್ತಿದ್ದವು, ಅವನ ತಾಪಕ್ಕೆ ಉರಿಗಣ್ಣಿಗೂ ಬೆಚ್ಚದೆ ಬೆದರದೆ. ಗೀತೋಪದೇಶದ ರಥದ ಮೇಲೆ ಕಣ್ಣು ಹಾಯಿಸಿದರೆ ಆ ರಥದ ಮೇಲೂ ನಾಲ್ಕಾರು ಕಾಕರಾಜಗಳು ಕುಳಿತು ಪಾರ್ಥನಿಗೆ ಸಾರಥಿಯ ಗೀತೋಪದೇಶ ಕೇಳದಂತೆ ಕಾಕೋಪದೇಶ ಮಾಡುತ್ತಿದ್ದವು. ಇತ್ತ ಪಶ್ಚಿಮದಂಗನೆ ಸೂರ್ಯನನ್ನು ಕೈಬೀಸಿ ಕರೆಯುತ್ತಾ ಅಪ್ಪಿಕೊಳ್ಳಲು ನೀರಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಳು. ಮೇಲೊಂದು ಹಕ್ಕಿ, ಕೆಳಗೊಂದು ಚುಕ್ಕಿಯಂತೆ ದೋಣಿ, ಕಣ್ಣು ತುಂಬಿದ ನೋಟ. ಕುವೆಂಪು ಮತ್ತೆ ನೆನಪಾದರು ಈ ಹಾಡಿನೊಡನೆ.... ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ’ ಇದೆಲ್ಲಾ ಓ.ಕೆ. ಆದರೆ ಮುಂದಕ್ಕೆ ಬಂದ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ' ಈ ಸಾಲುಗಳನ್ನು ಮಾತ್ರ ಹೀಗೆ ಬದಲಿಸಿಕೊಳ್ಳಬಹುದೇನೋ ಅನ್ನಿಸಿತು.

ನೋಡಿ ಪಡುವಣದಾ ದಿಗಂತದಿ ಮುಳುಗುವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಶುಭರಾತ್ರಿಯ ಕೋರಿರಿ.' ಕುವೆಂಪು ಕ್ಷಮಿಸಿ, ಈ ಹುಡುಗಾಟಕ್ಕೆ ಎನ್ನುತ್ತಲೇ ರವಿರಾಯನನ್ನು ಬೀಳ್ಕೊಟ್ಟು ಅಂಕೋಲಾದತ್ತ ಹೊರಟೆವು.
ಅಂಕೋಲಾ ಆಸ್ಪತ್ರೆಯ ಆವರಣ ತಲುಪಿದಾಗ ರಾತ್ರಿಯಾಗಿತ್ತು. ಹೊರಗೆ ಗಿಡಮರಗಳಿವೆ ಎನ್ನೋದನ್ನು ದೀಪದ ಬೆಳಕಿನಲ್ಲಿ ಕಂಡು ಖುಷಿ ಹುಟ್ಟಿಸಿತು. ಬೆಳಕು ಮೂಡಿದಾಗ ಎಲ್ಲರು ಇನ್ನೂ ನಿದ್ರೆಯಲ್ಲಿದ್ದರು. ನಾನು ಡಿಸೆಂಬರ್ ಚಳಿಗೆ ಸ್ವೆಟರ್ ತೊಟ್ಟು, ಶಾಲನ್ನೂ ಹೊದ್ದು ಕ್ಯಾಮೆರಾ ಹಿಡಿದು ಹೊರಟಾಗ ಒಣ ಎಲೆಗಳ ಬೆಚ್ಚನೆ ಹೊದಿಕೆಯಡಿಯಲ್ಲಿದ್ದ ನಾಯಿ ಇದ್ಯಾರು ಈ ಯಮ್ಮ ಇಷ್ಟು ಬೇಗ ಎದ್ದು ಎಲ್ಲಿಗೆ ಹೊರಟಿದ್ದಾಳೆ’ ಎನ್ನುವಂತೆ ನೋಡಿತು.ಇರಪ್ಪಾ ಎಂದು’ ಹೇಳಿ ಮುಂದೆ ದಾಟಿದೆ. ಕೆ.ಎಲ್.ಇ ಆವರಣದಲ್ಲಿ ಬಿದಿರಮೆಳೆಗಳು ಇದ್ದುದ್ದರಿಂದ ಅಲ್ಲೆಲ್ಲಾದರೂ ಹಕ್ಕಿ ಕಂಡೀತೆ ಎಂದು ಕಣ್ಣಾಡಿಸಿದೆ. ಆವರಣದಲ್ಲೇ ಇದ್ದ ಶಿವಾಲಯವನ್ನು ಸರಿಸಿ ಆಲದ ಮರದೆಡೆಗೆ ಹೊರಟೆ. ಅದರ ಬೇರು ಬಿಳಲಿನ ವೈಭವ ಕೆಲಕ್ಷಣ ಹಕ್ಕಿ ಹುಡುಕಾಟವನ್ನೂ ಮರೆಸಿತು.


ಆದರೆ ಹಕ್ಕಿ ಮರೆಯನಲ್ಲೆನೆ? ಅತ್ತಿತ್ತ ಕಣ್ಣಾಡಿಸಿದಾಗ ಬಿಳಿಗಲ್ಲದ ನೆಲಸಿಳ್ಳಾರ ಕಸದ ನಡುವೆ ಹುಡುಕಾಟದಲ್ಲಿತ್ತು. ಮೊದಲ ಬಾರಿಗೆ ಕಂಡ ಹಕ್ಕಿ, ಮಬ್ಬು ಬೆಳಕಿದ್ದರೂ ಖುಷಿ ಮಬ್ಬಾಗಿರಲಿಲ್ಲ. ಆಲದ ಮರದ ಬಿಳಿಲಿನ ನೆರಳಿನಲ್ಲಿ ನವರಂಗ (Indian Pitta) ಕಣ್ಣಿಗೆ ಬಿದ್ದಿತು. ನೆರಳ ಕಾರಣದಿಂದ ಸ್ವಲ್ಪ ಬಣ್ಣ ಡಿಮ್ ಎನಿಸಿದರೂ ಮೊದಲ ಬಾರಿಗೆ ಪಿಟ್ಟಾ ಕಂಡದ್ದು ಲೈಫರ್ ಸಿಕ್ಕಿದ ಸಡಗರ. ಅಂಕೋಲಾದ ಆಸ್ಪತ್ರೆಯ ಆವರಣದಲ್ಲಿ ಕಾಜಾಣ, ಕೋಗಿಲೆ, ಮಠ ಪಕ್ಷಿ, ಮಧುರಕಂಠ ಇತ್ಯಾದಿ ಇದ್ದವು, ಇದ್ದವು. ಆದರೆ ಇನ್ನೂ ಹೆಚ್ಚಿನದನ್ನು ನೋಡುವ ಕನಸಿನಿಂದ ಗಣೇಶಗುಡಿ ಕೈಬೀಸಿ ಕರೆಯುತ್ತಿತ್ತು.

ಸಾರಥಿ ಸತೀಶ ಬಂದೊಡನೆ ಗಣೇಶಗುಡಿಗೆ ದಿಗ್ವಿಜಯ ಯಾತ್ರೆಯತ್ತ ಹೆಜ್ಜೆ ಹಾಕಿದೆವು ಅಲ್ಲಲ್ಲ ಕಾರು ಸವಾರಿ ಹೊರಟಿತು, ಗುರಿ ಇದ್ದರೂ ದಾರಿಯರಿದೆಯೆ. ಕೆ.ಎಲ್.ಇ ಆಸ್ಪತ್ರೆಯ ಸಾರಥಿಯಾದ್ದರಿಂದ ಬೆಳಗಾವಿಯ ದಾರಿ ನೀರಹೊಳೆ ದಾರಿ. ನಮಗೆ ಗಣೇಶಗುಡಿಯ ಹೆಸರಷ್ಟೇ ಕೇಳಿ ಗೊತ್ತಿತ್ತು, ವಿಳಾಸದ ಅರಿವಿರಲಿಲ್ಲ. ಹತ್ತಿರದ ದಾರಿ ಬಿಟ್ಟು ಬಳಸು ದಾರಿಯಲ್ಲಿ ಹೊರಟ ನಮ್ಮ ಸಾರಥಿ ಒಮ್ಮೆಯೂ ಗಣೇಶಗುಡಿಗೆ ಹೋಗಿರಲಿಲ್ಲ. ಟ್ರ್ಯಾಕ್ ಹಾಕುವ ಅಂದರೆ ಸಿಗ್ನಲ್ ಕೂಡಾ ಕೆಲವೆಡೆ ಸಿಗುತ್ತಿರಲಿಲ್ಲ. ಗಾಡಿಯನ್ನು ಮಧ್ಯೆ ಬೇರೆ ತಿರುವಿನತ್ತ ಹೊರಳಿಸಿದ. ಪಥ ತಪ್ಪಿದ ಅರಿವಾಗಿ ಸರಿಯಾದ ಪಥಕ್ಕೆ ತಿರುಗಿಸಿದ.

ದಾರಿಯಲ್ಲಿ ಹಕ್ಕಿಗಳಿಗಾಗಿ ಗಾಡಿ ನಿಲಲಿಲ್ಲ, ನಿಲ್ಲಿಸಲಿಲ್ಲ. ಕಾಡು ನಡುಗುವ ಹಾಗೆ ಕೂಗು ಹಾಕುವ ಮಲಬಾರ್ ಅಳಿಲು ಹೋಗ್ತೀರಾ ಹೋಗಿ ಹೋಗಿ ಹೇಗೋ ಹೋಗ್ರಪ್ಪಾ ಹೋಗಿ ಎನ್ನುವ ಹಾಗೆ ತನ್ನ ಪಾಡಿಗೆ ತಿನ್ನುವ ಸುಖದಲ್ಲಿ ಮುಳಗಿತ್ತು. ಮುಖ ಮರೆಸಿದ್ದ ಎಲೆವಕ್ಕಿ ಮುಂದೆ ಹೋಗಿ ಎಂದು ಮುಖ ತೋರಿಸದೆಯೇ ಸೂಚಿಸಿತ್ತು. ಕಾಡ ನಡುವಿನ ಕೆಂಪಿನ ಕಂಪು ಕೈಬೀಸಿ ಕರೆದಿತ್ತು. ಇಕ್ಕೆಲದಲ್ಲೂ ಹಸಿರು ಹಸಿರೇ ಆಗಿದ್ದ ಕಾಳಿ ಗಾಂಭೀರ್ಯದಿಂದ ಸಾಗುತ್ತಿದ್ದಳು.


ಗಣೇಶಗುಡಿಯ ನೆಲೆ ಕೇಳಿಕೊಂಡು ಧೂಳು-ಧೂಮದ ನಡುವೆ ಬರುವಾಗಲೇ ಸೌಮ್ಯಳಿಗೆ ಆರೋಗ್ಯಕೇಂದ್ರದಿಂದ ಮತ್ತೆ ಮತ್ತೆ ಕರೆಯ ಕಿರಿಕಿರಿ ಇತ್ತು. ನಾಳೆ ಮೀಟಿಂಗ್ ಇದೆ ಎಂದು ಟಿಂಗ್ ಟಿಂಗ್ ಮಾಡ್ತಾ ಕಿವಿದೆರೆಗೆ ಅಪ್ಪಳಿಸುತ್ತಿದ್ದುದಕ್ಕೆ ಇರುಸು ಮುರುಸಾದ ನಮ್ಮವಳು ಏನೇನೋ ಸರ್ಕಸ್ ಮಾಡುತ್ತಲೇ ಇದ್ದಳು. ಮೂರು ತಿಂಗಳ ಮುಂಚಿನ ಯೋಜನೆಯ ನಡುವೆ ಅಡರಗಾಲು-ತೊಡರು ಕಾಲ್ ಬರುತ್ತಿತ್ತು. ಮುನ್ನೀರ್ ಬೆನ್ನೀರೆನೆ ಬೆರೆಸಿಕೊಳಲಣ್ಣ ತಣ್ಣೀರ್ ಒಳವೆ!’ ಅರಿಯದ ಹಾದಿಯಲ್ಲಿ ಹೊರಟವರು ನಾವಿಬ್ಬರು. ಅಂತಹದ್ದರಲ್ಲಿ ಇದ್ದ ಒಬ್ಬಳು ಅರೆ ಅರಿವಿನ ಗೈಡೂ ನಮ್ಮನ್ನು ಕೈಬಿಟ್ಟು ಹೋಗುವ ಸ್ಥಿತಿ.ದಾರಿ ಯಾವುದಯ್ಯಾ ಗಣೇಶಗುಡಿಗೆ’ ಎಂದು ಲೀಲಾಪದ ಹಾಡಿಕೊಳ್ಳುತ್ತಿದ್ದೆ, ಮನಸ್ಸಿನಲ್ಲಿ. ನಮ್ಮ ಗಾಡಿ ಅಂತೂ ಇಂತೂ ಮೂರೂವರೆ ತಾಸಿನ ಪ್ರಯಾಣಕ್ಕೆ ಆರೂ ತಾಸಿನ ತ್ರಾಸ ಸಹಿಸಿದ ಬಳಿಕ ಗಣೇಶಗುಡಿ ತಲುಪಿತು. ನಾವೂ ಮುದ್ದು ಪೆದ್ದುಗಳ ತರಹ ಪಿಳಿಪಿಳಿ ಕಣ್ಣನರಳಿಸಿ ಉತ್ತರ ಕನ್ನಡದ ಕಾನನದ ನೋಟದಲ್ಲಿ ಖೈದಾಗಿದ್ದೆವು.

ಹಕ್ಕಿಗಳ ಚುರುಕಿಗೆ ಇನ್ನೂ ಅಭ್ಯಾಸ ಆಗದಿರುವ, ಕ್ಯಾಮೆರಾ ಜೊತೆ ಪಕ್ಕಾ ಪರಿಣಿತಿ ಇನ್ನೂ ಪಡೆಯದಿರುವ ಹೊತ್ತಿನಲ್ಲೇ ಗಣೇಶಗುಡಿಗೆ ತೊದಲು ಹೆಜ್ಜೆ ಇಟ್ಟೆ. ತೊದಲು ಹೆಜ್ಜೆಯೂ ಒಂದು ಚಂದ ಅಲ್ಲವೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಹೋಗುವ ಮುನ್ನ, ತೊದಲು ಪಯಣದ ದಾರಿಯ ಅಭ್ಯಾಸವೂ ಆಗಬೇಕಿತ್ತು. ಕೆಲವು ಹೆಜ್ಜೆ ಮೊದಲ ಸಲ ಇಟ್ಟರೆ ನಂತರ ಪಯಣ ಮುಂದುವರೆಯುತ್ತದೆ. ನಾವು ತಲುಪಿದ್ದು ಪ್ರವೀಣಚಂದ್ರನಿಗೆ ಗೊತ್ತಿದ್ದ ವೈಟ್‌ಲಿಲಿ ರಿಸಾರ್ಟಿಗೆ. ಸೂಪಾ ಡ್ಯಾಂ ಮೂಲಕ ಕಾಳಿಯನ್ನು ನಿಯಂತ್ರಿಸುವ ಕಾರ್ಯ ನಡೆದು ನದಿಗೆ ಬಿಟ್ಟ ನೀರು ಪ್ರವಹಿಸುತ್ತಿತ್ತು, ಇಕ್ಕೆಲದ ಹಸಿರನ್ನು ಬಿಂಬಿಸುತ್ತಾ.

ನಾವು ಉಳಿದುಕೊಂಡಿದ್ದ ರಿಸಾರ್ಟಿನ ಪಾದದ ಬಳಿ ಬಡಿದು ಕಾಳಿ ಸಾಗುತ್ತಿದ್ದಳು. ನದಿಯ ದಂಡೆಯಲ್ಲೇ ಇದ್ದು ನೀರಾಟಗಳಿಗೆ ಮಜವಾಗಿತ್ತು. ತರತರವಾದ ನೀರಾಟ ಆಡುವವರ ತಂಡಗಳು ಸಾಹಸ-ಖುಷಿಯಲ್ಲಿ ತಲ್ಲೀನರಾಗಿದ್ದರು.


ನಾನಂತೂ ನೀರಿಗೆ ಇಳಿಯುವವಳೂ ಅಲ್ಲ, ನೀರಾಟ ಆಡುವವಳೂ ಅಲ್ಲ. ಬರಿದೆ ಬಾಯಲ್ಲಿಯೋ ಮನದಲ್ಲಿಯೋ ತಿಳಿನೀರಾಟಗಳು, ಕಲಕಲ ಪಾಠಗಳು’ ಎಂದೋಜಲಲ ಜಲಲ ಜಲಧಾರೆ ಓ..ಹೊ…ಹೊ…ಹೊಯ್’ ಎಂದು ಗುನುಗಿಕೊಳ್ಳುವುದಕ್ಕೆ ಸೀಮಿತೆ. ಜಲಲ ಜಲಲ ಜಲಧಾರೆ ಎಷ್ಟು ಇಷ್ಟವೆಂದರೆ ಮಹಾರಾಣಿ ಕಾಲೇಜಿನಲ್ಲಿದ್ದಾಗ ಹಾಡಿಸಿ, ಡ್ಯಾನ್ಸ್ ಮಾಡಿಸಿ ಖುಷಿ ಪಟ್ಟುಕೊಂಡಿದ್ದೆ. ಆದರೆ ತಂಗಿಗೆ ನೀರಿಗಿಳಿಯುವ ಆಸೆ. ನೀರಿಗೆ ಕಾಲಿಟ್ಟಳು, ನೀರು ಹಾವೊಂದು ತೇಲಿ ಕಾಲಿನ ಬಳಿಯೆ ಬರುವುದೆ. ತಿಳಿನೀರಾಟ ಆಡಲು ಹೋಗಿ ಆತಂಕದಿಂದ ಕಾಲು ತೆಗೆಯಲೇಬೇಕಾಯ್ತು. ಬೆಳಿಗ್ಗೆಯೇ ಅಂಕೋಲಾದಿಂದ ಹೊರಟ ನಮಗೆ ಉದರದೊಳಗಿದ್ದ ಮಹಾಬೆಂಕಿ ಶಮನ ಆಗಲು ಇನ್ನಷ್ಟು ಸಮಯ ಹಿಡಿಯಿತು. ಏರುವ ಇಳಿಜಾರಿನ ರೆಸಾರ್ಟಿನ ದಾರಿ ನನ್ನ ಕಾಲಿಗೆ ಪ್ರಾಣಭಯ ಹುಟ್ಟಿಸುತ್ತಿತ್ತು. ಊಟ ಇಲ್ಲದಿದ್ದರೂ ಪರವಾಗಿಲ್ಲ, ನಾನಿಲ್ಲಿ ಇಳಿದು ಹತ್ತಲಾರೆ ಎನ್ನುವ ಸ್ಥಿತಿ. ಇನ್ನೂ ಮೂರು ದಿನ ಈ ಅವಸ್ಥೆ ಹೇಗಪ್ಪಾ ಎಂಬ ಚಿಂತೆ ಆವರಿಸಿತು. ದೂರದಲ್ಲೆಲ್ಲೋ ಒಂದೆರಡು ಹಕ್ಕಿಗಳ ಕೂಗು. ಉಳಿದಂತೆ ಕಾಳಿಯ ಕೇಕೆ.

ಸೌಮ್ಯ ಮೀಟಿಂಗಿನ ಕಾರಣದಿಂದ ಹೊರಟೇಬಿಟ್ಟಳು, ಮತ್ತೆ ಮರುದಿನ ಬಂದೇ ಬರುತ್ತೇನೆಂಬ ಆಶ್ವಾಸನೆಯಿತ್ತು. ಹಕ್ಕಿಗಳಿಗಾಗಿ ಯಾವ ತಾಣಕ್ಕೆ ಹೋಗಬೇಕೆಂಬುದೇ ಗೊತ್ತಿಲ್ಲ. ಹೋಗಲಿ ನಡೆಯುತ್ತಾ ಹೋಗೋಣವೆ ಎಂದರೆ ಎಲ್ಲಿಯವರೆಗೆ ನಡೆಯುತ್ತಾ ಹೋದರೆ ಹಕ್ಕಿ ಎಲ್ಲೆಲ್ಲಿ ಸಿಕ್ಕುತ್ತದೆಂದೆನ್ನುವ ಅರಿವೂ ಇರಲಿಲ್ಲ. ಗಣೇಶಗುಡಿಯಿಂದಲೇ ಪ್ರವೀಣನಿಗೆ `ಏನ್ ಮಾರಾಯ ನೀರಾಟವಾಡುವ ರಿಸಾರ್ಟ್ಗೆ ಕರೆತಂದು ಬಿಟ್ಟಿದೀರಲ್ಲ’ ಎಂದು ದೂರಿದೆವು. ಅವನಿಗೂ ನಮ್ಮ ಕಷ್ಟ ಅರಿವಾಯಿತು. ಸರಿ, ಯಾರಲ್ಲೋ ಮಾತಾಡಿ ಮರುದಿನ ಬೆಳಿಗ್ಗಗೆ ಹಕ್ಕಿ ತೋರಿಸುವವರನ್ನು ಗೊತ್ತು ಪಡಿಸಿಕೊಟ್ಟ.
ನಾವಿಬ್ಬರೆ, ಗಣೇಶಗುಡಿಯಲ್ಲಿ. ಇಬ್ಬರೂ ಕಾಲೇಜುಗಳ ಪ್ರಿನ್ಸಿಪಾಲರುಗಳಾಗಿ ನಿಭಾಯಿಸಿದ್ದ ಘಟಾನುಘಟಿಗಳು, ನಿಜ.

ಕಾಲೇಜಿನಲ್ಲಿ ಆಡಳಿತ ನಡೆಸಿಕೊಂಡು ಹೋಗುವುದಕ್ಕೂ, ನಮ್ಮದಲ್ಲದ ಜಾಗದಲ್ಲಿ ಇರುವುದಕ್ಕೂ ವ್ಯತ್ಯಾಸ ಇಲ್ವೆ. ಹೊಂದಿಕೊಂಡು ಬಳಿಕ ನಾವಿದ್ದ ತಾವೆ ನಮ್ಮೂರು, ನಮ್ಮೋರು ಇರೋ ನೆಲೆ. ಅಲ್ಲಿಯವರೆಗೂ ಸ್ವಲ್ಪ ಸುಧಾರಿಸಿಕೊಳ್ಳಬೇಕಿತ್ತು. ಇಡೀ ರಾತ್ರಿ ಕಿಟಕಿ ಬಾಗಿಲು ಮುಚ್ಚಿದರೂ ಕೊರೆಯುವ ಚಳಿ. ಚಳಿಗೋ, ಭಯಕ್ಕೋ ನಿದ್ದೆ ಸುಳಿಯದೆ ಕೈಜಾರುತ್ತಿತ್ತು. ಸರ್ಪದಂತೆ ಬುಸುಗುಟ್ಟುತ್ತಾ ಮೊರೆಯುವ ಕಾಳಿ. ಮೂವತ್ತೈದು ವರ್ಷ ಕನ್ನಡ ಪಾಠ ಮಾಡಿ ಜುಳುಜುಳು ಎನ್ನುವುದು ನೀರು ಹರಿಯುವುದನ್ನು ಸೂಚಿಸುವ ಅನುಕರಣ ಸೂಚಕ ಎಂದೇ ಹೇಳಿ ಹೇಳಿ ಮಕ್ಕಳಿಗೂ ಕೂರಿಸಿ ನನ್ನೊಳಗೂ ಕೂರಿಸಿಕೊಂಡುಬಿಟ್ಟಿದ್ದೆ. ಆದರೆ ಆ ಇರುಳು ಅಪರಿಚಿತ ಪ್ರದೇಶದಲ್ಲಿ ನಾವಿಬ್ಬರೇ ಇದ್ದ ಭಯದಿಂದಾಗಿ ಮೊರೆಮೊರೆಯುತ್ತಿದ್ದ ಕಾಳಿಯ ಭೋರ್ಗರೆತ ಕರ್ಣಕಠೋರವಾಗಿತ್ತು. ಇಂದಿನ ಈ ಇರುಳು ಕಳೆದರೆ ಸಾಕೆಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯ್ದದ್ದಾಯಿತು, ಎಣ್ಣೆ ಅಲ್ಲಿಲ್ಲದಿದ್ದರೂ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

11 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading