ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ನೆಲೆಯರಸಿ ನೀರ್ದಾಣಗಳಿಗೆ…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

8

ಮಂಡ್ಯದಲ್ಲಿಯೇ ಬದುಕಿನ ಬಹುಭಾಗವನ್ನು ಜೀವಿಸಿದ, ಜೀವಿಸುತ್ತಿರುವ ನನಗೆ ಹತ್ತಾರು ಬೀದಿ, ಮತ್ತೆ ನನ್ನ ಕಾಲೇಜು ಬಿಟ್ಟರೆ ಬೇರೊಂದು ಗೊತ್ತಿರಲಿಲ್ಲ. ಅದರ ಅನಿವಾರ್ಯತೆಯೂ ಒದಗಿ ಬಂದಿರಲಿಲ್ಲ. ನಿಜ ಹೇಳ್ತೀನಿ ಊರಾದ ಊರಿಗೆಲ್ಲ ಮಂಡ್ಯ ಎಂದರೆ ಕಬ್ಬು, ಸಕ್ಕರೆ ಫ್ಯಾಕ್ಟರಿ ಎಂದೇ ಪರಿಚಿತ. ಆದರೆ ನನ್ನ ಮನೆಯಿಂದ, ಕಾಲೇಜಿನಿಂದ ಕೂಗಳತೆ ದೂರದಲ್ಲಿರುವ ಸಕ್ಕರೆ ಕಾರ್ಖಾನೆ ಒಳಗೆ ಹೊಕ್ಕೇ ಇಲ್ಲ ನಾನು. ನನ್ ತಾತಾನೂ ಅಲ್ಲೇ ಕೆಲಸ ಮಾಡಿದ್ದರೂ, ಅದೇ ಫ್ಯಾಕ್ಟರಿಗೆ ಕಬ್ಬು ಕೊಡುತ್ತಿದ್ದರೂ ನನಗೆ ನೋಡಲಾಗಲಿಲ್ಲ. 2015ರಲ್ಲಿ ಮಂಡ್ಯ ಜಿಲ್ಲೆಗೆ 75 ವರ್ಷ ತುಂಬಿದಾಗ ನಾನು ಸಂಪಾದಿಸಿದ ಅಮೃತ ಮಂಡ್ಯ ಸ್ಮರಣಸಂಪುಟದಲ್ಲಿ ಫ್ಯಾಕ್ಟರಿ ನೆನಪುಗಳ ಬಗ್ಗೆ ಲೇಖನ ಕೇಳಿ ಬರೆಸಿದ್ದೆನಾದರೂ ಅದು ನನಗೆ ಅಪರಿಚಿತವಾಗಿ ಉಳಿದಿದೆ. ಮಾತೆತ್ತಿದರೆ ನಾನು ಮಂಡ್ಯದವಳು ಎಂದು ಅಭಿಮಾನಿಸುವ ನನ್ನ ಪಾಲಿಗೆ ಇದು ವಿಚಿತ್ರವಾದರೂ ಸತ್ಯ. ಕೆಲವು ವಿಷಯಗಳಿಗೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಬದುಕಿದ ರೀತಿ ಪರಿಣಾಮವಿದು.

ನನ್ನದೇ ವೃತ್ತದಲ್ಲಿ ಬದುಕಿದ, ಬದುಕಿರುವ ನಾನು ಹಕ್ಕಿ ಅಲೆತ ಶುರು ಮಾಡಿದ ಮೇಲೆ ಮಂಡ್ಯದ ಸುತ್ತಮುತ್ತಣ ಐದಾರು ಕಿ.ಮೀ ದೂರದ ನೆಲೆಗಳಿಗೆ ಹೋಗುವ ಅಭ್ಯಾಸ ಬೆಳೆಸಿಕೊಂಡೆ. ನನ್ನ ಈ ಪಯಣಗಳೆಲ್ಲ ಬಹುತೇಕ ಏಕಾಂಗಿ ಪಯಣಗಳು. ಹಕ್ಕಿಗೆ ಹೋಗುವಾಗ ಮನೆಯವರನ್ನು ಕರೆದುಕೊಂಡು ಹೋದರೆ ಅಲ್ಲಿ ಹೋಗಬೇಡ, ಇಲ್ಲಿ ನಿಲ್ಲಬೇಡ ಎಂಬ ಎಚ್ಚರದ ಚುಚ್ಚು ನೋಟಗಳು, ಇಷ್ಟು ಹೊತ್ತಾದರೂ ಇವಳ ಕಥೆ ಮುಗಿಯಲಿಲ್ಲವೆ ಎಂದು ಹಣೆಯ ಮೇಲೆ ನಾಲ್ಕಾರು ಗೆರೆಗಳನ್ನು ಮೂಡಿಸಿಕೊಂಡ ಮುಖಭಾವ. ಆದ್ದರಿಂದ ಮೊದಲ ಒಂದೆರಡು ಸಲ ಕರೆದುಕೊಂಡು ಹೋದರೂ ಅವರದ್ದೇ ಜಗತ್ತಿನಲ್ಲಿ ಮುಳುಗಿಹೋದ ಅವರನ್ನು ಎಳೆದುಕೊಂಡು ಹೋಗುವ ಕೆಲಸ ಕೈಬಿಟ್ಟೆ. ಒಂಟಿಯಾಗಿ ಬಂದವಳು ಒಂಟಿಯಾಗಿಯೇ ಹೋಗಲಾರಂಭಿಸಿದೆ. ಹುಚ್ಚುಗಳ ಬೆನ್ನು ಹತ್ತಿದ ಬಳಿಕ ಇದು ಅನಿವಾರ್ಯವೂ ಹೌದು. 

ಊರಿಗೆ ಹೋದ ಮೇಲೆ ನೀರಿಗೂ ಹೋಗಬೇಕಲ್ಲವೆ. ಅಂದರೆ ನೀರಹಕ್ಕಿಗಳನ್ನು ಹುಡುಕಿಕೊಂಡು ನೀರನೆಲೆಗಳಿಗೂ ಹೋಗಬೇಕಾಯಿತು. ಆದ್ದರಿಂದ ಹತ್ತಿರದ ಕೆರೆಗಳಿಗೆ ನನ್ನ ಸವಾರಿ ಹೊರಟಿತು. ಕ್ಯಾತುಂಗೆರೆ ಕೆರೆ, ಇಂಡುವಾಳು ಕೆರೆ, ಕೋಣನಹಳ್ಳಿಯ ಕೆರೆ, ಮಂಗಳದ ಕೆರೆಗಳಿಗೆ ಪರಿಚಿತಳಾದೆ. ಮಂಡ್ಯಕ್ಕೆ ಅಂಟಿಕೊಂಡ ಗುತ್ತಲು ಕೆರೆಯನ್ನು ಒಮ್ಮೆ ನೋಡಿದ ಬಳಿಕ ಅದರ ಪರಿಮಳ ಮೂಗಿಗೆ ಅಡರಿ ಹೋಗುವ ಆಸೆ ಕೈಬಿಟ್ಟೆ. ಗುತ್ತಲಿನಿಂದಲೇ ಬರುವ ನಮ್ಮ ಸಹಾಯಕಿ `ಅಕ್ಕಾ ಆ ಕೆರೆಯತ್ರ ಯಾಕಕ್ಕ ಹೋಗಿದ್ದೆ, ಊರಾದ ಊರವರೆಲ್ಲ ಹಟ್ಟಿ ಇದ್ದರೂ ಅಲ್ಲಿಗೆ ಬರ್ತಾರೆ’ ಎಂದು ಕೆರೆಯ ಅವಸ್ಥೆಗೆ ಕನ್ನಡಿ ಹಿಡಿದಿದ್ದಳು. 

ಮಂಡ್ಯಕ್ಕೆ ಸ್ವಲ್ಪ ದೂರದ ಬನ್ನೂರು ಕೆರೆಗೂ ಮೂರ್ನಾಲ್ಕು ಸಲ ಹೋಗಿದ್ದೆ. ಬನ್ನೂರು ಕೆರೆಗೆ ಫ್ಲೆಮಿಂಗೊ ಬಂದಿದೆ ಎಂದು ಹಕ್ಕಿ ಗೆಳೆಯರು ನೀಡಿದ ಮಾಹಿತಿ ಹಿಡಿದು ನನ್ನ ಗಂಡನನ್ನು ಒಪ್ಪಿಸಿ ಕರೆದುಕೊಂಡು ಪುರ್ರೆಂದು ಹಾರಿದ್ದೆ. ನಾನು ಬರುವ ಸುದ್ದಿಯನ್ನು ಯಾವುದೋ ಮೂಲದಿಂದ ತಿಳಿದ ಫ್ಲೆಮಿಂಗೊ ನನಗಿಂತ ಮೊದಲೇ ಅಲ್ಲಿಂದ ಪುರ್ರೆಂದು ಹಾರಿಹೋಗಿತ್ತು. ಆದರೂ ಅದಾದ ಮೂರ್ನಾಲ್ಕು ದಿನಗಳಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಗಾಂಧಿ ಚಿತ್ರಪ್ರದರ್ಶನ ಮಾಡಿಕೊಡಿ, ಉಪನ್ಯಾಸ ಮಾಡಿ ಎಂದರು,  ಒಪ್ಪಿಕೊಂಡೆ, ನನ್ನ ಪ್ರೀತಿಯ ಮಹಾರಾಣಿ ಕರೆದ ಮೇಲೆ ಎಲ್ಲಿಯಾದರೂ ಹೋಗದ ಇರಲು ಸಾಧ್ಯವೆ? ನನ್ನೊಳಗಿನ ನನ್ನನ್ನು ಕಂಡುಕೊಳ್ಳಲು ಅವಕಾಶ ಕೊಟ್ಟ ಕಾಲೇಜು. ಇಂದಿಗೂ ನನ್ನ ವಿಭಾಗದಲ್ಲಿ ಕೆಲಸ ಮಾಡಿದವರು ಆಪ್ತ ವಲಯದಲ್ಲಿದ್ದಾರೆ. ಎಲ್ಲಿಯಾದರೂ ಹಕ್ಕಿ ಹಿಡಿಯಲು ಹೋಗಬಹುದೆಂದು. ಚಿತ್ರ ಪ್ರದರ್ಶನ ಸಿದ್ಧಪಡಿಸಿ, ಭಾಷಣ ಮಾಡಿ ಬೇಗ ಬನ್ನೂರಿನ ಕಡೆ ರೈಟ್ ಹೇಳಿದೆ. ನೋಡ್ತೀನಿ ಕೆರೆಯಲ್ಲಿ ಪಟ್ಟೆತಲೆ ಬಾತುಗಳ ಹಿಂಡೋ ಹಿಂಡು. ತೀರಾ ಹತ್ತಿರ ಹೋಗಲು ಆಗದಂತೆ ಜಾರು ಜೌಗು ನೆಲ. ಆಗಿನ್ನೂ 100-400 ಲೆನ್ಸ್ ಇದ್ದದ್ದು. ಅದರಲ್ಲೇ ಸಾಕಷ್ಟು ಹೊತ್ತು ದೂರದ ಮಂಗೋಲಿಯಾದಿಂದ ಬಂದಿದ್ದ ಬಾತುಗಳನ್ನು ಹಿಡಿದಿದ್ದೆ. ಇನ್ನೊಮ್ಮೆ ನಗುವನಹಳ್ಳಿಗೆ ಹೋಗಿ ಸಂಜೆ ಗೋಲ್ಡನ್ ಲೈಟಿನಲ್ಲಿ ಕಳ್ಳಿಪೀರ ಹಿಡಿಯಬೇಕೆಂದು ಅಲ್ಲಿಯ ತನಕ ಕಾಲ ಕಳೆಯಲು ಬನ್ನೂರು ಕೆರೆಗೆ ಹೊರಟೆ. ಒಮ್ಮೆ ಮಳವಳ್ಳಿಯಲ್ಲಿ ಅಂಬೇಡ್ಕರ್ ಬಗ್ಗೆ ಭಾಷಣ ಮಾಡಲು ಕರೆದಿದ್ದರು. ಜೈ ಎಂದು ಬನ್ನೂರಿಗೆ ತಿರುಗಿಸಿ ಹೋಗಿ ನೋಡ್ತೀನಿ, ಇಡೀ ಕೆರೆಯಂಗಳ ಒಣಗಿದ ಹುಲ್ಲುಗಾವಲಾಗಿದ್ದನ್ನು ನೋಡಿ ನೊಂದೆ. ದನ ಕುರಿಗಳು ಆರಾಮಾಗಿ ಮೇಯ್ತಾ ಇದ್ದವು. ಅಲ್ಲಿಂದ ಹೊರಟು ಬ್ಲಫಿಗೆ ಹೋಗಿ ನಂತರ ಮಳವಳ್ಳಿಯ ಕೆಲಸ ಮಗಿಸಿದ್ದೆ. ಇನ್ನೊಮ್ಮೆ ಬಿ.ಆರ್ ಬೆಟ್ಟದಲ್ಲಿ ಹಕ್ಕಿ ಸಿಗಲಿಲ್ಲ ಎಂದುಬ ಬೇಸರಕ್ಕೆ ಬನ್ನೂರು ಬಳಿಗೆ ಹೋದರೆ ಏರಿ ಬಿರಿಯುವ ಹಾಗೆ ನೀರು ತುಂಬಿಕೊಂಡಿತ್ತು. ಹಕ್ಕಿಗಳು ಮಂಗಮಾಯವಾಗಿದ್ದವು. ನಾನೂ ಇಂಗು ತಿಂದ ಮಂಗನಂತೆ ಮುಸುಡಿ ಮಾಡಿಕೊಂಡು ಮರಳಿದೆ. ಆದರೆ ನನ್ನ ಡೌಟು ಏನಪ್ಪಾ ಅಂದರೆ ಮಂಗಕ್ಕೆ ಇಂಗು ಸಿಕ್ಕಿದ್ದು ಹೇಗೆ? ಅದನ್ನು ತಿಂದಿತೆ? ತಿಂದ ಮೇಲೆ ಅದು ಮುಸುಡಿ ಹೇಗೆ ಮಾಡಿಕೊಂಡಿತು ಎಂದು ನೋಡಿದವರು ಯಾರು? ಬಹುಶಃ ಇಂಗನ್ನು ಇಷ್ಟ ಪಡದವರು ಯಾರೋ ಹೀಗೆ ಹೇಳಿರಬಹುದೆ? ಇನ್ನೊಂದು ಸಂಶೋಧನೆ ನಡೆಸಬಹುದೆ? ಸಂಶೋಧನೆಗೆ ವಿಷಯಗಳು ಹೇಗೆಲ್ಲಾ ಸಿಗಬಹುದು ಶಿವನೆ?

ಮದ್ದೂರಿನ ಬಳಿಯ ದೇಶಹಳ್ಳಿ ಕೆರೆ, ಶಿಂಷಾ ನದಿ, ಬೆಳಕೆರೆಯ ಕೆರೆ, ಕೆಂಗಲ್ ಕೆರೆ, ಕುಣಿಗಲ್, ನಾಗಮಂಗಲ, ಪಾಂಡವಪುರ, ಮೇಲುಕೋಟೆ ಮುಂತಾದ ಊರುಗಳ ಕೆರೆಗಳು, ಮೈಸೂರಿನ ಕುಕ್ಕರಹಳ್ಳಿ, ಲಿಂಗಾಂಬುಧಿ, ಕಾರಂಜಿ ಕೆರೆಗಳು ಬೆಂಗಳೂರಿನ ಜಕ್ಕೂರು, ಹೆಬ್ಬಾಳ, ಸ್ಯಾಂಕಿಟ್ಯಾಂಕು, ಕೈಕೊಂಡನಹಳ್ಳಿ, ಕೆಂಗೇರಿ ಮುಂತಾದ ಕೆಲವು ಕೆರೆಗಳಿಗೆಲ್ಲ ಆಗಾಗ್ಗೆ ಭೇಟಿ ಕೊಡುತ್ತಿದ್ದೆ. ಕೆಲವು ಹಕ್ಕಿಗಳನ್ನು ಕಾಣುತ್ತಿದ್ದೆ, ಕೆಲವನ್ನು ಸೆರೆ ಹಿಡಿಯುತ್ತಿದ್ದೆ. ಆಮೇಲಾಮೇಲೆ ಬೆಂಗಳೂರಿನ ಕೆರೆ, ಮೈಸೂರಿನ ಕೆರೆಗಳನ್ನು ಕೈಬಿಟ್ಟೆ. ಬಹುತೇಕ ಕೆರೆಗಳಿಗೆ ವಾಕಿಂಗ್ ಪಥ ಇರುವುದರಿಂದ ವಾಕಿಂಗ್ ಮಾಡುವವರ ನಡುವೆ ನಿರಾಳವಾಗಿ ಫೋಟೋಗ್ರಫಿ ಮಾಡುವುದು ಕಷ್ಟ. ಅಷ್ಟು ದೂರ ಹೋಗಿಯೂ ಸರಿಯಾಗಿ ಹಕ್ಕಿ ಸಿಗದಿದ್ದರೆ ಆತಂಕ. ಕೈಕೊಡುವ ಕಾಲಿನಿಂದ ಎಲ್ಲೋ ಜಾರಿ ಕುಸಿದರೆಂಬ ಸ್ವಭಯ ಹೇರಿಕೊಂಡ ಭಯೋತ್ಪಾದಕಿ ನಾನು. ಮಂಗಲದ ಕೆರೆಗೆ ಹೋದರೆ ಏರಿ ಮೇಲಿನಿಂದಲೇ ತೆಗೆಯಬೇಕಿತ್ತು. ಹಾಗಾಗಿ ಅದರ ಸಹವಾಸ ಬೇಡವೇ ಬೇಡ ಎಂದು ನಿಲ್ಲಿಸಿದೆ. ನಮ್ಮೂರ ಹತ್ತಿರದ ವಿಶಾಲವಾದ ನಮ್ಮೂರ ಸಮೀಪದ ಇಂಡುವಾಳು ಕೆರೆ, ಕೋಣನಹಳ್ಳಿ ಕೆರೆಗಳಿಗೆ ಮಾತ್ರ ಹೆಚ್ಚು ಹೋಗುತ್ತಿದ್ದೆ, ಹೆಚ್ಚಿನದೇನೂ ಸಿಗದಿದ್ದರೂ ಒಳ್ಳೆಯ ಚಿತ್ರ ಆಗಬಹುದೆಂಬ ಆಸೆಯಿಂದ. 

ಒಂದು ಹಳ್ಳಿಯ ಪಕ್ಕದಲ್ಲೇ ಇರುವ ಕೆರೆಗೆ ಹೋಗುವ ಕಷ್ಟ ಎಷ್ಟೆಂದು ವಿವರಿಸೋದು ಹೇಗೆ. ಅದರಲ್ಲೂ ನಾವು ಹೆಂಗಸರು ಬೆಳ್ ಬೆಳಿಗ್ಗೆ ಕೆರೆದಂಡೆಗೆ ಹೋಗೋದು ಏನ್ ಚಂದ ಹೇಳಿ. ಇಂಡುವಾಳು ಕೆರೆ ಎಂದರೂ ನಾನು ಹೋಗುತ್ತಿದ್ದುದು ಕಿರಗಂದೂರು ಮೂಲಕವೆ. ಕಿರಗಂದೂರಿನವರು ಕಿರಗಂದೂರು ಕೆರೆ ಎಂದರೆ, ಇಂಡುವಾಳಿನವರು ಇಂಡುವಾಳು ಕೆರೆ ಎನ್ನುವರು. ಈ ಕೆರೆಗೆ ಇಪ್ಪತ್ತು ಸಲವಾದರೂ ಹೋಗಿದ್ದೇನೆ. ಬಹುತೇಕ ಸಲ ಬೆಳಿಗ್ಗೆ ಹೋದರೆ ಐದಾರು ಗಂಟೆ ಇದ್ದೇ ಬರುತ್ತಿದ್ದೆ, ಹಕ್ಕಿಗಳು ಸಿಕ್ಕಿದಂತೆ. ಕುಳಿತೋ, ನಿಂತೋ ಫೋಟೋಗ್ರಫಿ ಮಾಡಲು ಸರಿಯಾದ ಜಾಗ ಬೇಕಲ್ಲವೆ. ಕೆರೆಯ ಕೆಲವು ಏರಿ ಹತ್ತಿ ಇಳಿದು ಸರ್ಕಸ್ ಮಾಡಿದೆ ಕ್ಯಾಮೆರಾ ಸಮೇತ. ಕೊನೆಗೆ ಒಂದು ಜಾಗ ಹುಡುಕಿಕೊಂಡೆ. ಹಕ್ಕಿ ಬಂದರೆ ತೆಗೆಯೋದು, ಇಲ್ಲದಿದ್ದರೆ ಮಣಮಣ ಮಂತ್ರ ಹೇಳ್ತಾ ಕೂತಿರೋದಕ್ಕೆ ಆಗುವಂತಹ ಕಿರಗಂದೂರು ಕಡೆಯಲ್ಲಿರುವ ನೆಲೆ ಹುಡುಕಿಕೊಂಡೆ. ಅದೊಂದು ಹೆಣ ಸುಡುವ ಜಾಗ. ಒಮ್ಮೆ ಶವಸಂಸ್ಕಾರ ಮಾಡಿದ ಗುರುತುಗಳು ಉಳಿದಿದ್ದರೆ, ಇನ್ನೊಮ್ಮೆ ತಿಥಿ ಮಾಡಿದ್ದ ಕುರುಹುಗಳು ಇಡೀ ಆವರಣದಲ್ಲಿ ಇರುತ್ತಿದ್ದವು. ತಿಥಿಯ ಮರುದಿನ ಉಳಿಕೆ ತಿನ್ನಲು ಕಾಗೆ, ಮೈನಾ ಹಿಂಡು. ಅಲ್ಲೇ ಒಂದೆರಡು ಫೈಬರ್ ದೋಣಿಗಳು ಮೀನು ಹಿಡಿಯಲು. ಊರವರು ಮೇಯಿಸಲು ಹಿಡಿದು ತಂದು ತಿರುಗಾಡಿಸುತ್ತಿದ್ದ ಎಮ್ಮೆ, ದನ, ಕುರಿಗಳು. ಪಕ್ಕದ ಗದ್ದೆ ಹೊಲಗಳಿಗೆ ಓಡಾಡುತ್ತಿದ್ದ ರೈತರು, ತಮ್ಮ ಎಮ್ಮೆದನ ತೊಳೆಯಲು, ನೀರು ಕುಡಿಸಲು ಬಂದವರು. ಐಕಮಕ್ಕಳು ರಜಾ ಬಂದಾಗ ಕೆರೆಗೆ ಬಂದೇ ಬರುವವರು. ಬಟ್ಟೆಬರೆ ಒಗೆಯಲು ಮಾತ್ರ  ಕೆರೆಗೆ ಬರುತ್ತಿರಲಿಲ್ಲ. ಏಕೆಂದರೆ ಕೆರೆಯ ಪಕ್ಕ ಕಾಲುವೆ ಇತ್ತು. ಒಗೆಯುವವರು ಕಾಣದಿದ್ದರೂ ಒಗೆಯುವ ಶಬ್ದ, ಅಸ್-ಉಸ್ ಗಳು ದೂರಕ್ಕೂ ಕೇಳುತ್ತಿದ್ದವು.

 ಹೀಗೆ ಸಕಲೆಂಟು ಕಾರ್ಯಗಳಿಗೆ ನೆಲೆಯಾದ ಅಲ್ಲಿ ನಾನು ಮಾತ್ರ ಕೆರೆಯತ್ತ ನೋಟ ಹರಿಸಿ ಸ್ಥಿತಪ್ರಜ್ಞಳಂತೆ ಕೂರುತ್ತಿದ್ದೆ, ಕೂತವಳಂತೆ ನಟಿಸುತ್ತಿದ್ದೆ. ಇಲ್ಲಾಂದರೆ ಯಾರೊಂದಿಗಾದರೂ ಮಾತು ಶುರು ಮಾಡಿದರೆ, ಹಕ್ಕಿಗಳು ಬರೋದಿರಲಿ ಇದ್ದ ಸಿಂಗಲ್ ತಲೆಯೇ ಕಿತ್ತುಕೊಂಡು ಬರ್ತಿತ್ತು, ಅವರ ಕ್ವೈರಿ-ಎನ್‌ಕ್ವೈರಿಗಳಿಗೆ ಉತ್ತರಿಸಲಾಗದೆ. ಅವರೂ ನೋಡಿ ಸಾಕಾಗಿ `ಇವಮ್ಮನಿಗೆ ಕೇಮೆ ಇಲ್ಲದೆ ಇಲ್ಬಂದು ಕೂತವಳೆ’ ಎನ್ನುವಂತೆ ತಾತ್ಸಾರದ ನೋಟ ಬೀರಿ ಅಲ್ಲಿಂದ ಕಾಲ್ತೆಗೆಯುತ್ತಿದ್ದರು. ಮೌನವಿಲ್ಲದೆಡೆ ಹಕ್ಕಿ ಬರುವುದು ಹೇಗೆ ಹೇಳಿ. ಬೆಳಿಗ್ಗೆ ಎದ್ದು ಹತ್ಯಾರ ಹೊತ್ಕೊಂಡು ಹತ್ತಾರು ಮೈಲಿ ಪಯಣಿಸಿ ಏಳು ಗಂಟೆಯೊಳಗೆ ಆ ಜಾಗಕ್ಕೆ ಬಂದ ಮೇಲೆ ದಿನಕ್ಕೆ ಒಂದಾದರೂ ಒಳ್ಳೆಯ ಚಿತ್ರ ತೆಗೆಯದಿದ್ದರೆ ಹೇಗೆ? ನನ್ನ ಮಾರ್ನಿಂಗ್ ಮೆಡಿಟೇಷನ್ ಇದೇ ಆಗಿರುತ್ತಿತ್ತು. ಧ್ಯಾನದಿಂದ ಮುಕ್ತಿ ಸಿಗಬಹುದು ಎಂದು ಹೇಳಿದ್ದನ್ನು ಕೇಳಿದ್ದೇನೆ. ಆದರೆ ನನ್ನ ಈ ಧ್ಯಾನದಿಂದ ನನ್ನೊಳಗೆ ಬಿಡುಗಡೆ, ಕ್ಯಾಮರಾದಲ್ಲಿ ಹಕ್ಕಿಗಳಿಗೆ ಚಿತ್ರಮುಕ್ತಿ

ಆದರೆ ಈ Morning ಹೊತ್ತಲ್ಲಿ, Morning ಏನು ಇನ್ನು ಇತರ ಸಮಯದಲ್ಲಿ ಸುತ್ತಣ ರಸ್ತೆ, ಗದ್ದೆ ಹೊಲಗಳಿಗೆ Pure, Fresh ಗೊಬ್ಬರ ಉಚಿತವಾಗಿ ಕೊಡುವ ಪೈಪೋಟಿಯ ಜನ ಇದ್ದರು. ಇದರಲ್ಲಿ ಲಿಂಗಭೇದ, ವಯೋಭೇದ ಏನೇನೂ ಇರಲಿಲ್ಲ. ಉಚಿತ ಗೊಬ್ಬರ ಸರಬರಾಜಿನ ಬಳಿಕ ಮಾರ್ಜನ ಕ್ರಿಯೆಗಳಿಗೆ ಕೆರೆಯೇ ಆಸರೆ. ಇಂಡುವಾಳು ಕೆರೆಗೆ ಏರಿ ವಿಸ್ತರಿಸಿ ಸೈಕಲ್, ಸ್ಕೂಟರ್ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟ ಬಳಿಕ ಓಹೋ ಏರಿಯೇರಿ ಸುತ್ತಾ ಹಕ್ಕಿ ಪಟ ಹಿಡಿಯಬಹುದೆಂಬ ಕನಸುಗಳು ಹುಟ್ಟಿಕೊಂಡವು. ಆದರೆ ಕನಸುಗಳಿಗೆ ಕಲ್ಲು ಬಿದ್ದಿತು, ಜನ ಇಡೀ ಏರಿಯನ್ನೇ ಸಂಡಾಸವನ್ನಾಗಿಸಿಕೊಂಡಾಗ. ನನ್ನ ಪರಿಸ್ಥಿತಿ ಹೇಗಿರಬಹುದು! ಹಕ್ಕಿಯಾಸೆಗೆ ಬಿದ್ದು ಬೇಡದ ದರ್ಶನವೂ ಇರುತ್ತಿತ್ತು. ನನ್ನ ಲಿಂಗಿಯವರನೇಕರು ಭಿನ್ನ ಲಿಂಗದವರನ್ನು `ಮಾನ ಮರ್ವಾದೆ ಇಲ್ವೆ, ನಿಮ್ಮಟ್ಟಿಲೇನು ಕಕ್ಸ ಕಟ್ಸಿಕೊಂಡಿಲ್ವೆ, ಮಾನಗೆಟ್ಟವ’ ಎಂದು ಬಾಯಿಗೆ ಬಂದಂತೆ ಬೈಯುತ್ತಿದ್ದರು. ಮರ್ವಾದೆ ಎನ್ನುವುದನ್ನು ಶಬ್ದಕೋಶಕ್ಕೆ ಸೀಮಿತವಾಗಿಸಿ ಕಾಲ್ನಡಿಗೆ, ಸೈಕಲ್, ಬೈಕು, ಸ್ಕೂಟರ್‌ಗಳಲ್ಲಿ ಬಂದು ತಮ್ಮ ಕಾರ್ಯ ಪೂರೈಸಲು ಈ ಬೈಗುಳಗಳೇನೂ ತಡೆಗೋಡೆ ಆಗುತ್ತಿರಲಿಲ್ಲ. ಮಂಡ್ಯ ಜಿಲ್ಲೆ ಸ್ವಚ್ಛತಾ ಆಂದೋಲನದಲ್ಲಿ ಮುಂದೆ ಎಂದು ಪತ್ರಿಕೆಗಳಲ್ಲಿ ಓದಿದ್ದೆ. ಈ ಯಶಸ್ಸಿಗಾಗಿ ಜಿಲ್ಲಾ ಪಂಚಾಯತ್ ದೆಹಲಿಯಲ್ಲಿ ಅವಾರ್ಡ್ ಪಡೆದರೆಂದು ಕೇಳಿದ್ದೆ. ಆದರೆ ಕಾಣುವ ಸತ್ಯವೇ ಬೇರೆ, ಕೇಳುವ ಸತ್ಯವೇ ಬೇರೆ ಬೇರೆ ತಾನೆ. ಇದೆಲ್ಲಾ ಬಹುತೇಕ ಪೇಪರ್ ಮೇಲಿನ ದಾಖಲೆ ಮಾತ್ರ ಎನ್ನುವ ಸಾಕ್ಷಿಗಳನ್ನು ಕಣ್ಣಾರೆ ನಿತ್ಯವೂ ಕಾಣುತ್ತಿದ್ದೆ. ಕಟ್ಟಿದ ದಾಖಲೆಗಳು ಕಟ್ಟುಕಥೆಗಳ ನೆಲೆಗಳೂ ಆಗಿರುತ್ತವೆಯಲ್ಲ. ನನಗೂ ಗೊತ್ತು ಇದು ಎಲ್ಲಾ ಊರಿನ ಕಥೆಯೂ ಕಥೆ ಹೇಳುವೆ ನನ್ನ ಕಥೆ ಹೇಳುವೆ ಎನ್ನುವಂತೆಯೆ ಆಗಿದೆ ಎಂದು. 

ಊರಿಗೆ ಬಂದ ಹೊಸಬಳನ್ನು ಪ್ರಶ್ನೆಯ ನೋಟಗಳ ಇಕ್ಕಟ್ಟಿನಲ್ಲಿ ಸಿಕ್ಕಿಸುವವರಿಗೆ ನನಗೆ ಕಿರಂಗೂರಿನ ಗಾಂಧಿವಾದಿ ಲಿಂಗಣ್ಣ ಬಂಧುಕಾರ್ ಗೊತ್ತು ಎಂದು ಹೆಸರು ಹೇಳಿ ಬಚಾವಾಗುತ್ತಿದ್ದೆ. ಲಿಂಗಣ್ಣ ಅವರೋ ನನಗೆ ಗಾಂಧಿ ಬಂಧದಿಂದ ಅಣ್ಣನಂತೆ ಆಪ್ತರು. ಕೆರೆಯ ಬಳಿ ದಿನಾ ನನ್ನನ್ನು ಕಂಡವರಿಗೆ ಈ ಯಮ್ಮ ಬರೋದು ಮಾಮೂಲಿ ಬುಡ್ರೊ ಅನ್ಕಂಡು ಅವರ ಪಾಡಿಗೆ ಇರೋವ್ರು. ನಾನು ಪಡೋ ಪಡಿಪಾಟಲು ನೋಡಿ ಮೀನು ಹಿಡಿಯುವವರು `ಬನ್ನಿ ಮೇಡಂ ಈ ಬೋಟಿನಲ್ಲಿ ಕರ್ಕೊಂಡು ಹೋಗ್ತೀವಿ ಎಂದು ಹೇಳಿದರೂ ಆ ಫೈಬರ್ ಬೋಟಿಗೆ ಕಾಲಿಡುವ ಧೈರ್ಯ ಮಾಡಲೇ ಇಲ್ಲ. ಆದರೆ ಅದೇ ದೋಣಿಯಂಚನ್ನು ಏರಿದ ಮಿಂಚುಳ್ಳಿಯನ್ನು ಕ್ಲಿಕ್ಕಿಸಿಕೊಂಡಿದ್ದೇನೆ. ಈ ಕೆರೆಯಲ್ಲಿ ನನ್ನಿಂದ ಆರು ಮಾರು ದೂರದಲ್ಲಿ ನೀರಳತೆ ಕಲ್ಲಿತ್ತು. ಅದು ಕೆಲವು ಹಕ್ಕಿಗಳಿಗೆ ರೆಸ್ಟಿಂಗ್ ತಾಣ ಇಲ್ಲವೆ ಹಿಡಿದದ್ದನ್ನು ಕುಕ್ಕಿ ತಿನ್ನಲು ನೆಲೆಯಾಗುತ್ತಿತ್ತು. ನೀರು ಕಾಗೆ ರೆಕ್ಕೆ ಬಿರಿದು ಒಣಹಾಕಿಕೊಂಡು ಕುಳಿತರೆ, ಹದ್ದುಗಳು ಮೀನು ಹಿಡಿದು ತಿನ್ನಲು ಕೂರುತ್ತಿದ್ದವು. 

ಈ ಇಂಡುವಾಳು ಕೆರೆ, ಕೆರೆಯ ಬಳಿಯಲ್ಲಿ ಹಲವು ಹಕ್ಕಿಗಳ ಚಿತ್ರ ತೆಗೆದಿದ್ದೇನೆ. ಖುಷಿ ಕೊಟ್ಟ ಚಿತ್ರಗಳೂ ಸಿಕ್ಕಿವೆ, ಕೆರೆಯೊಳಗೆ ಹೇಗೋ ಹಾಗೆ ದಡದಲ್ಲಿ ಗಿಡಮರಗಳಲ್ಲಿ ಸಿಕ್ಕ ಹಕ್ಕಿಗಳು ನನ್ನ ಖುಷಿ ಹೆಚ್ಚಿಸಿವೆ. ಒಮ್ಮೆ Asian Paradise Flycatcher ಗಂಡು ಹಕ್ಕಿ ತನ್ನ ಮುದ್ದಾದ ಗರಿಗರಿಯ ಬಿಳಿ ಬಾಲ ಹಾರಿಸುತ್ತಾ ಆ ಗಿಡ, ಈ ಮರ ಎಂದು ಹಾರುತ್ತಿದ್ದಾಗ ಚಿತ್ರ ತೆಗೆದದ್ದೂ ಕಣ್ಣಿನಲ್ಲಿ ಕಂಡದ್ದೂ ಸದಾ ಅಚ್ಚಳಿಯದ ನೆನಪು. ಗಾಳಿಯಲ್ಲಿ ದೇವತೆಯೊಬ್ಬಳ ಶ್ವೇತವಸನ ತೇಲಿದಂತೆ ಈ ಹಕ್ಕಿ ಹಾರುತ್ತಿದ್ದರೆ ಈ ದೇವತೆಯ ಹಿಂದೆ ನಾವೂ ಆನಂದದ ಹೊಳೆಯಲ್ಲಿ ಮೀಯದಿರಲು ಸಾಧ್ಯವೆ! ಜೀವನದಲ್ಲಿ ಒಮ್ಮೆಯಾದರೂ ಅದರ ಮೈದಡವಿ ಅದರ ಬಾಲ ಸವರಿ ಮುದ್ದಾಡುವ ಆಸೆ. ಕನಸಿನಲ್ಲಿ ಈ ಆಸೆಯನ್ನು ಹಲವು ಹತ್ತು ಸಲ ಶಮನಗೊಳಿಸಿದರೂ ನನಸಿಗಾಗಿ ಹಂಬಲಿಸುತ್ತದೆ ಜೀವ. ಹಕ್ಕಿಯೊಡನೆ ಹಕ್ಕಿಯಂತೆ ಆಗದೆ ಇದ್ದರೇನು ಅರ್ಥ ಬದುಕಿಗೆ. ಹಗುರಾಗುವ, ಬದುಕು ಮುನ್ನಡೆಸುವ ಸಲುವಾಗಿ ಹಕ್ಕಿಯಂತೆ ಹಗುರಾಗುವ. ಅದಕ್ಕೆ ಅಲ್ಲವೆ ಪುತಿನ `ಲಘುವಾಗೆಲೆ ಮನ’ ಎಂದು ಕರೆಯಿತ್ತದ್ದು. ಎಷ್ಟು ಮಾತ್ರಕ್ಕೂ ಬೇಡದ ಭಾರಗಳನ್ನು ಹೊತ್ತು, ಬಿಂಕ ಬಿಗುಮಾನಗಳಿಂದ ಬೀಗಿ ಬೀಗಿ ನಾವೇನು ಏನೇನು ಸಾಧಿಸಿದ್ದೇವೆ? ಇರುವ ನೆಮ್ಮದಿಯನ್ನೂ ಕಳೆದುಕೊಂಡಿರುವುದನ್ನು ಬಿಟ್ಟು.

ಕೆರೆಯಲ್ಲಿ ನೀರು ಕಡಿಮೆ ಇದ್ದಾಗ ಬರುವ ಹಕ್ಕಿಗಳ ಸಂಖ್ಯೆ ಹೆಚ್ಚು, ನಾನು ಮೊದಲ ಸಲ ಅಲ್ಲಿಗೆ ಕಾಲಿಟ್ಟಾಗ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ದಿನದಿನವೂ ಕಡಿಮೆಯಾಗುತ್ತಿದ್ದ ನೀರಿನ ಈ ಅಂಗಳಕ್ಕೆ, ಬಗೆಬಗೆಯ ಕೊಕ್ಕರೆ, ಮೀಸೆ ರೀವ, ಹೆಜ್ಜಾರ್ಲೆ, ನೀರುಕೋಳಿ, ಬಕ, ಸಿಪಿಲೆ, ಟಿಟ್ಟಿಭ ಮತ್ತೂ ಮುಂತಾದವು ತುಂಬಾ ಹತ್ತಿರದಲ್ಲೇ ಸಿಗುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಕೆರೆ ಯಾವಾಗಲೂ ತುಂಬಿರುತ್ತದೆ. ಆದ್ದರಿಂದ ವೈವಿಧ್ಯಮಯ ಹಕ್ಕಿಗಳು ಬರೋದು ಕಡಿಮೆ. ಆದರೂ ಕಣ್ಣಂಚಿನವರೆಗೂ ಕಾಣುವ ನೀರು, ಬೀಸಿ ಬರುವ ಗಾಳಿಯ ಮುದ್ದಿಸುವಾಟದಿಂದ ಎದ್ದ ಸಣ್ಣ ತರಂಗಗಳು, ಹಾರುವ ಹಾಡುವ ಹಕ್ಕಿಗಳು ಈ ಎಲ್ಲವೂ ಅನನ್ಯ ಅದ್ಭುತ ಲೋಕವನ್ನು ತೆರೆದು ಕೈಬೀಸಿ ಕರೆದಾಗ ಇಲ್ಲವೆನ್ನದೆ ಲೀನವಾಗಿದ್ದಾಳೆ ಈ ಲೀಲಾ. 

ಸಣ್ಣ ಸಿಳ್ಳಿನ ದನಿಯಲ್ಲಿ ಬರುವ ಕಿರುಮಿಂಚುಳ್ಳಿ ನನ್ನ ಮುಂದಿದ್ದ ಅಳತೆಗಲ್ಲಿನ ಮೇಲೆ ಕೂತು ಪುಳಕ್ಕನೆ ಹಾರಿ ಮೀನು ಹಿಡಿದು ತಂದು ಬಡಿಬಡಿದು ತಿನ್ನುವ ನೋಟವಂತೂ ಅಪೂರ್ವ. ಅದು ನೂರು ಸಲ ಬಂದು ಹೋಗುವ ಕೆಲಸ ಮಾಡಿದರೂ ಮತ್ತೆ ಮಗುವಾಗುತ್ತಿದ್ದೆ. ಒಮ್ಮೆಯಂತೂ ತೀರಾ ಐದಡಿ ದೂರದ ನೀರ್ಗಡ್ಡಿಯ ಮೇಲೆ ಕಿರುಮಿಂಚುಳ್ಳಿ ಕೂತಾಗ ಕೈಯನ್ನೇ ಚಾಚಿಬಿಡಲೆ, ಹಿಡಿದು ಮುದ್ದಿಸಲೇ ಎಂಬ ಬಯಕೆ ಬಾಯ ತುದಿಯವರೆಗೂ ಬಂದಿತ್ತು. ಲಾಲಲಲ ಲಲಲಲಾ ಎಂದು ಕುಣಿವ ಮಿಂಚುಳ್ಳಿಯಾಗಿತ್ತು ಮನ. ಇಂತಹ ರಸಮಯ ಸನ್ನಿವೇಶಗಳಿಗೆ ಕ್ಯಾಮರಾ ತಿರುಗಿಸುವುದೇ ಸಹಜವಾಗಿ ಎಷ್ಟೋ ಸಲ ನನಗೆ ಮರೆತೇ ಹೋಗುತ್ತಿತ್ತು. ಕೆಲವೊಮ್ಮೆ ನಾನೇ ಮೌನದಿಂದ ನೋಡುತ್ತಿದ್ದೆ, ಕ್ಲಿಕ್ ಶಬ್ದವೂ ಅದನ್ನು ಆತಂಕದಿಂದ ಹಾರಿಹೋಗುವಂತೆ ಮಾಡಿ ರಸಾಭಾಸಗೊಳಿಸದಿರಲಿ ಎಂದು. ಮೌನ ಮನವನ್ನು ತಬ್ಬಿ ಲೀನವಾಗುತ್ತಿತ್ತು 

ನಾನು ಮತ್ತು ಹಕ್ಕಿ ಇರಲು,
ಮಧ್ಯೆ ಏಕೆ ಇತರ ಉರುಲು

ಎಂದು ಕ್ಯಾಮೆರಾ ಮರೆತು ಮನದ ಒಳಗೆ ತುಂಬಿಸಿಕೊಳ್ಳುತ್ತಿದ್ದೆ. ಅದ್ಭುತ ಕಣ್ಣ ಮುಂದೆ ಕುಣಿಯುವಾಗ ಕಣ್ಣಸುಖಕಿಂತ ಬೇರೆ ಬೇಕು ಹೆಚ್ಚಿಗೇನು?! ಪಾಠಗಳು ನಾಲ್ಕು ಗೋಡೆಗಳ ಬಂಧನದಲ್ಲಿ ಮಾತ್ರ ಜರುಗಲು ಸಾಧ್ಯ ಎಂಬ ಅಕಾಡೆಮಿಕ್ ಶಿಸ್ತಿನ ಚೌಕಟ್ಟನ್ನೇ ಆ ಸುಳಿಯಲ್ಲಿದ್ದಾಗಲೇ ನಂಬದಿದ್ದ ನನಗೆ ಈಗ ತೆರೆದ ಬಯಲೂ ಗುರುವಾಗಿತ್ತು ಮತ್ತೊಂದು ಬಯಲನ್ನು ಅಪ್ಪಿಕೊಳ್ಳಲು. ಕಲಿಯುವ ಮನಸ್ಸಿಗೆ ಮುಂದಿದ್ದ ಯಃಕಶ್ಚಿತ್ ಹುಲ್ಲುಕಡ್ಡಿಯೂ ಮಹಾನ್ ಗುರುವೇ ತಾನೆ ಬದುಕಿನ ಗಹನತೆಯನ್ನು ಗ್ರಹಿಸಲು. ಹಕ್ಕಿಗಳು ನನಗೆ ಕಲಿಸಿದ ಕಲಿಸುತ್ತಿರುವ ಅರಿವನ್ನು ಅದರ ಹಿಂದಿನ ಅರವತ್ತು ವರ್ಷದ ಜೀವನದಲ್ಲಿ ಶಾಲೆ ಕಾಲೇಜುಗಳೂ ಸೇರಿದಂತೆ ಯಾರಿಂದಲೂ ಕಲಿಸಲಾಗಲಿಲ್ಲ, ನಾನೂ ಕಲಿಯಲಿಲ್ಲ.

ಇದೇ ಕೆರೆಯಲ್ಲಿ ಮೀನನ್ನು ಹಿಡಿದು ಹಾರಿದ ಹದ್ದನ್ನು ಮತ್ತೊಂದು ಹದ್ದು ಹಿಂಬಾಲಿಸಿ ಅಂತರಿಕ್ಷದಲ್ಲಿ ಎರಡೂ ಕಾದಾಡಿ ಹದ್ದಿನ ಬಾಯಿಯ ಮೀನು ಅರೆಜೀವವಾಗಿ ನೀರೊಳಗೆ ಶವವಾಗಿ ಸೇರಿದ ಚಿತ್ರಗಳು ಕ್ಲಿಕ್ಕಾಗಿವೆ. ಕೆರೆಯ ಸುತ್ತಲೂ ಹಾರಾಡಿ ದಣಿದು ನೀರಿಗಿಳಿಯುತ್ತಿದ್ದ ದೈತ್ಯ ಹೆಜ್ಜಾರ್ಲೆಗಳು ಸಿಕ್ಕಿವೆ. ಗುಂಪಾಗಿ ಬಂದು ಗುಂಪಾಗಿ ತೇಲುತ್ತಿದ್ದ ನೀರ್ಕಾಗೆಗಳನ್ನು ಕಂಡಿರುವೆ. ನೀರ್ಕಾಗೆಗಳಿದ್ದ ತಾಣದಲ್ಲಿ ಅವುಗಳ ತಲೆಯ ಮೇಲೆ ಹಾರಿ ಸುತ್ತು ಹೊಡೆದು ಗಸ್ತು ತಿರುಗುತ್ತಾ ಆಹಾರ ಅರಸುವ ಮೀಸೆ ರೀವ (Whiskered tern)ಗಳು ಈ ಕಪ್ಪು ನೀರ್ಕಾಗೆಗಳಿಗೆ ಹಿಡಿದ ಬೆಳ್ಗೊಡೆಗಳಂತೆ ಸುರಮ್ಯವಾಗಿರುತ್ತಿದ್ದವು. ಬಕಗಳ ಧ್ಯಾನ, ಸದ್ದಿಲ್ಲದ ಹೆಜ್ಜೆಯಿರಿಸಿ ಮೀನು ಕಚ್ಚಿ ಜಿಗಿವ ಪರಿ, ಅವೆಲ್ಲವೂ ಕೆರೆಯ ನೀರಿನೆದೆಯಲ್ಲಿ ಪ್ರತಿಫಲಿಸುತ್ತಿದ್ದ ಚಂದಕ್ಕಿಂತ ಛಂದಸ್ಸು ಇನ್ನೊಂದು ಇರಲಿಲ್ಲ. ಆಗಾಗ್ಗೆ ನೀರಿನಿಂದ ಮೇಲೆದ್ದು ನಸುವೇ ದರ್ಶನ ನೀಡುತ್ತಿದ್ದ ನೀರನಾಯಿಗಳು ಒಂದೆಡೆಯಾದರೆ ನೀರಿನಲ್ಲಿ ಪೂರಾ ಮುಳುಗಿ ಮೇಲೆಳುತ್ತಿದ್ದ ಗುಳುಮುಳುಕಗಳು, ನೀರಕೋಳಿ, ಜೌಗುಕೋಳಿಗಳು… ಹೀಗೆ ಹಕ್ಕಿ ಚಿತ್ರಶಾಲೆಯನ್ನೇ ಕೆರೆ ತೆರೆದಿಡುತ್ತಿತ್ತು. ಕೆರೆಯ ವಿರುದ್ಧ ದಿಕ್ಕಿಗೆ ಹೊರಳಿದರೆ ಮುನಿಯಗಳು, ಗೀಜಗಗಳು, ಮೆಲ್ಲಗಿಳಿದು ಮೇಯುತ್ತಿದ್ದ red naped ibis, ಹರಟೆಮಲ್ಲಗಳು, ಉಲಿಯಕ್ಕಿಗಳು, ಹಲವು ಬಗೆಯ ಮರಕುಟುಕಗಳು, ಕಳ್ಳಿಪೀರಗಳು, ಟುವ್ವಿಗಳು. ಮೊದಲ ಸಲಕ್ಕೆ red breasted flycatcher ಸಿಕ್ಕು ಕಣ್ತುಂಬಿದಾಗ ಅರೆ ಇದೇನು ಕೊರಳ ಬಳಿಯ ಬಣ್ಣ, ಇದ್ಯಾವ ಹಕ್ಕಿ ಎಂದು ಬೆರಗಾಗಿಸಿದರೂ ಕ್ಲಿಕ್ ಮಾಡಲು ಮರೆತಿರಲಿಲ್ಲ. ನಂತರ ಹುಡುಕಿ ಅದರ ಹೆಸರು ಕಂಡುಕೊಂಡೆ. ಅಲ್ಲಿಗೆ ಮೇಯಲು ಬಂದ ಕುರಿ-ಕುರಿಮರಿಗಳೂ ನನ್ನನ್ನು ಮರೆಯಬೇಡ ಎಂದು ಸೆಳೆದುಕೊಳ್ಳುತ್ತಿದ್ದವು. ಅವುಗಳ ಪಟ ಹಿಡಿದುಕೊಂಡಿದ್ದೇನೆ. ಕೆರೆಯೆಂದರೆ ಕೆರೆಯಲ್ಲ, ಅದು ನೀರು ಬರೆದ ಕವಿತೆ, ಕಾವ್ಯ ಮಹಾಕಾವ್ಯ, ಎಷ್ಟು ಜೀವಗಳಿಗೆ ನೆಲೆ ಈ ನೀರ್ನೆಲೆ, ಜೀವಸೆಲೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

4 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading