
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
16.4
ಇನ್ನು ಮುಂದಿನದು… ಮುಂದಿನದೆ! ಇನ್ನು ಮುಂದಿನದ್ದು ನಾನು ಸಾವಿನಂಚು ತಲುಪಿದ್ದ ವ್ಯಥೆಯ ಕಥೆ. ಸಾವನ್ನು ಗೆದ್ದು ಬಂದ ಅನುಭವದ ಕಥೆ. ಹ್ಯಾನ್ಲೆ ಬಿಟ್ಟ ಬಳಿಕ ತಲುಪಿದ Tsokarನ ಚಿತ್ರಗಳೆಲ್ಲಿ… ಎಲ್ಲಿ… ಅದರ ನಂತರ Nubra valley ಚಿತ್ರಗಳು ಎಲ್ಲಿ… ಅವೆಲ್ಲಿ… ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಆಗ ಹಾಗೂ ನಂತರದಲ್ಲಿ ಕಂಡುಕೊಂಡವು. ಜೂನ್ 21ರಿಂದ 12 ದಿನ ಲೇಹ್ ಆಸುಪಾಸು, ಹೆಮಿಸ್, ಪ್ಯಾಂಗಾಂಗ್, ಹ್ಯಾನ್ಲೆ ಹಾಗೂ ತ್ಸೋಕರ್ ಮತ್ತೆ ಜುಲೈ 3ರಿಂದ 9ರ ತನಕ Nubra valleyಯ ಹಕ್ಕಿ ಪಯಣದ ಹಾಗೂ ಜುಲೈ 10ರಂದು ಮರಳಿ ಊರಿಗೆ. ಇದು ನನ್ನ ಲಡಾಖಿನ ಪಯಣದ Plan.
ಜೂನ್ 28ರ ತನಕದ bird photography ಮುಗಿಸಿ 29ರ ಜೂನ್ ಬೆಳಿಗ್ಗೆ ಐದಕ್ಕೆ Hanley ಬಿಟ್ಟು ಕಡೆಗೆ Tsokar ಪ್ರಯಾಣ. ಹೊರಟಾಗ ಖಂಡಿತಾ ಗೊತ್ತಿರಲಿಲ್ಲ ಅದೇ ನನ್ನ ಕಟ್ಟಕಡೆಯ ಪ್ರಯಾಣವೂ ಆಗಿ ಬಿಡಬಹುದೆಂದು. ಹೊರಟಾಗಲೇ ಸುಸ್ತು ಬೆಳಿಗ್ಗೆ ಸರಿಯಾಗಿ ತಿಂಡಿ ತಿಂದಿಲ್ಲದ್ದಕ್ಕೆ ಇರಬಹುದು ಎಂದುಕೊಂಡೆ. ದಾರಿಯಲ್ಲಿ ಕಂಡ black necked crane, brahminy duckಗಳಿಗೆ ಕಾರಿಂದಲೇ click ಮಾಡಿದೆ. ಮುಂದೆ ಹೊರಟ ಹಾಗೆ ಮತ್ತೂ ಆಯಾಸದ ಮುತ್ತಿಗೆ… ದಾರಿಯಲ್ಲಿ ಒಂದು ಹಿಡಿ ಮ್ಯಾಗಿ… ನಿರಂತರದ ಪ್ರಯಾಣ… ದಾರಿಯಲ್ಲಿ ಸಿಗದ rest roomಗಳಿಂದಾಗಿ ನೀರಿದ್ದರೂ ಕುಡಿಯಲಿಲ್ಲ. ಬಿಡಲಾರದ ಕಣ್ಣುಬಿಟ್ಟು ಕಾರಿನಿಂದಲೇ ಕ್ಲಿಕ್ಕಿಸುತ್ತಿದ್ದೆ. ಉಳಿದವರು ಹಕ್ಕಿಯ ಹಿಂದೆ ಹೊರಟರು.

ಎಷ್ಟು ಹೊತ್ತು ಕಾರಿನಲ್ಲೇ ಕುಳಿತುಕೊಳ್ಳುವುದು. ಮನಸು ತಡೆಯದೆ ಕಾರಿನ ಪಕ್ಕದಲ್ಲೇ ಸ್ಟೂಲ್ ಹಾಕಿ ಕುಳಿತೆ. ರಾಹುಲ್ ತಂಡ `white throated dipper ಸಿಕ್ಕಿದೆ ಅಮ್ಮಾ ನೀವೂ ಬನ್ನಿ’ ಎಂದು ಹೇಳಿಕಳುಹಿಸಿದರು. ನಾನೇ ಸಾವಿನ ಕೂಪದಲ್ಲಿ ಡಿಪ್ ಆಗುತ್ತಿರುವಂತೆ ಕದಲುವ ಸ್ಥಿತಿಯಲ್ಲೇ ಇರದಿದ್ದ ನಾನು ಹೋಗುವುದಾದರೂ ಹೇಗೆ. ಕುಳಿತಲ್ಲೇ ದೂರದಲ್ಲಿ greater rose finch ಕಂಡಿತು. ಎದ್ದು ಹೋಗಿದ್ದರೆ ಒಂದೆರಡು ಒಳ್ಳೆಯ ಕ್ಲಿಕ್ ಸಿಗುತ್ತಿತ್ತೇನೋ. ಆದರೆ ಏಳುವುದಿರಲಿ ನನಗೆ ಉಸಿರಾಡುವುದೇ ಕಷ್ಟವೆನಿಸಿತು. ಹುಳಿ ಹುಳಿಯಾದ ತೇಗಿನ ವಾಂತಿ ಬಂದಿತು.
ಪದವಿಗೆ ಪಾಠ ಮಾಡಿದ್ದ ಕೆ.ಎಸ್.ಭಗವಾನ್ ಅನುವಾದಿಸಿದ್ದ ಅರ್ನಸ್ಟ್ ಹೆಮಿಂಗ್ವೇಯ ನೋಬಲ್ ಪುರಸ್ಕೃತ ಕೃತಿ old man and seaಯ ವೃದ್ಧ ಸಾಂಟಿಯಾಗೊ ನೆನಪಾದ. ಬದುಕನ್ನೇ ಪಣವಾಗಿಟ್ಟ ನಿರಂತರ 84 ದಿನದ ಹಡಗಿನ ಏಕಾಂಗಿ ಪ್ರಯಾಣ. ಮನುಷ್ಯ ಹುಟ್ಟಿರುವುದು ಸೋಲುವುದಕ್ಕಲ್ಲ, ಮನುಷ್ಯನನ್ನು ಸಂಹಾರ ಮಾಡಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ. ಹಿಡಿದ ದೊಡ್ಡ ಮರ್ಲಿನ್ ಮೀನನ್ನು ತಿಮಿಂಗಿಲಗಳು ತಿಂದರೂ ಹತಾಶನಾಗದ ಅವನ ಅದಮ್ಯ ಚೈತನ್ಯ. ಪಾಠ ಮಾಡುವಾಗ ತರಗತಿಯಲ್ಲಿದ್ದೆ, ಪಾಠ ಮಾಡುತ್ತಿದ್ದೆ ಎನ್ನುವುದೂ ಮರೆತು ಪ್ರತಿಮೆಯಾಗಿ ವೃದ್ಧನ ಹಿಂದೆ ಗಲ್ಫ್ ಸ್ಟ್ರೀಮ್ ಕಡಲಲ್ಲಿ ಪ್ರಯಾಣಿಸುತ್ತಿದ್ದೆ. ಆಗ ಹುಡುಗಿಯರು `ಮಿಸ್, ಮುಂದೆ’ ಎಂದು ಕೋರಸ್ ಕೂಗಿ ವಾಸ್ತವ ಲೋಕಕ್ಕೆ ಕರೆತಂದು ಮುಂದುವರೆಸಿಸುತ್ತಿದ್ದರು.

ಸಾಂಟಿಯಾಗೊಗೆ ಸಾವು ಸಮೀಪಿಸಿದ ಅನುಭವ ಆದಂತೆ ನನಗೂ ಆಗತೊಡಗಿತು. ಕಾಣದ ಊರಿನಲ್ಲಿ ನನ್ನ ಕತೆ ಮುಗಿಯಿತೆಂದುಕೊಂಡೆ. ತಂಡದಲ್ಲಿದ್ದವರು handy oxygen cylinder ಕೊಟ್ಟು ಜೊತೆಗೆ ಡೈಮಾಕ್ಸ್ ಕೊಟ್ಟರು. ಆಗ ನೆನಪಾಯಿತು, ರಾಹುಲ್ ಶರ್ಮ ಹೇಳಿದ್ದ ಡೈಮಾಕ್ಸ್ ಮಾತ್ರೆ ಲೇಹ್, ಪ್ಯಾಂಗಾಂಗಿನಲ್ಲಿ ನುಂಗಿ ಆರಾಮವಾಗಿ ಓಡಾಡಿದ್ದೆ. ಹ್ಯಾನ್ಲೆಗೆ ಬಂದ ಕೂಡಲೇ ಸಂಜೆಯ ವೇಳೆ ಸುಸ್ತೆಂದು ಊಟ ಮಾಡದೆ ಹೊದ್ದು ಮಲಗುತ್ತಿದ್ದೆ, ಇನ್ನು ಬ್ಯಾಗಲ್ಲಿದ್ದ ಮಾತ್ರೆ ನುಂಗುವುದೆಲ್ಲಿ ಬಂತು. Tsokar ಹಾದಿಯಲ್ಲಿ ಉಸಿರಾಟಕ್ಕೆ ಕಡುಕಷ್ಟ ಎನಿಸಿತು. ಸುಸ್ತಾಗಿ ಕಾರಿನಲ್ಲೇ ಒರಗಿದೆ… ಕಾರು ಮುಂದೋಡುತ್ತಿತ್ತು….
ದಾರಿಯಲಿ ಕಣ್ಣು ತೆರೆದಾಗ ಸಣ್ಣಬಂಡೆಯ ಮೇಲೆ little owl ಕುಳಿತದ್ದು ಕಂಡರೂ ಕ್ಯಾಮೆರಾ ಕೈಗೆತ್ತಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ-ನಾಳೆಯಿಂದ ಮೂರು ದಿನ ಇಲ್ಲೇ ಇರುತ್ತೇವಲ್ಲ… ಆಸೆ. ಬೀಡು ಬಿಡಬೇಕಾದ ಜಾಗ ತಲುಪಿದೆ. ಖುಷ್ಬೂ ಹೆಗಲಾಸರೆ ಪಡೆದು ಕೊಠಡಿ ತಲುಪಿದ್ದಷ್ಟೆ ಗೊತ್ತು. ಕಣ್ಣುಬಿಟ್ಟಾಗ ನನ್ನನ್ನು ಒಂದಷ್ಟು ಜನ ಸೇರಿ ಹೊತ್ತು ಕಾರಿಗೆ ಸೇರಿಸಿದ್ದರು. ಏನು ಎಂದೆ. ಇಲ್ಲೇ ಪಕ್ಕದ ಆಸ್ಪತ್ರೆಗೆ ಎಂದರು. ಎಲ್ಲಿಂದಲೋ ಹೇಗೋ oxygen ಸಿಲಿಂಡರ್ ತಂದು ಹಾಕಿದ್ದರು. ಮ್ಯಾಕ್ರೋ ಹಂಬಲದ ಇಪ್ಪತ್ತರ ಪುಟ್ಟಹುಡುಗ ಅಂಕುರ್ ಮೊಯ್ತ್ರಾ `ಏನೂ ಆಗಿಲ್ಲ, ಏನೂ ಆಗಿಲ್ಲ, ಉಸಿರು ಎಳೆದುಕೊಳ್ಳಿ’ ಎಂದು ಧೈರ್ಯ ತುಂಬುತ್ತಿದ್ದ.

ಪಕ್ಕದ ಹಳ್ಳಿಯ ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದರೂ ಕಾರು ಎಲ್ಲಿಯೂ ನಿಲ್ಲದೆ ಅತ್ಯಂತ ವೇಗವಾಗಿ ಓಡುತ್ತಿತ್ತು. ನೋರ್ಬು ಓಡಿಸುತ್ತಿದ್ದ ವೇಗ ಎದೆ ಝಲ್ಲೆನಿಸುವಂತಿತ್ತು. ಆಗಾಗ ಮುಂದೆ ಕುಳಿತಿದ್ದ ಗೈಡ್ ನಾಮ್ಗ್ಯಾಲ್ ತಿರುತಿರುಗಿ ನೋಡಿ ಉಸಿರೆಳೆದುಕೊಳ್ಳಲು ಹೇಳುತ್ತಿದ್ದ. ಅವನಿಗೆ ಭಯ ಈ ಅಮ್ಮಾ ಉಸಿರಾಡುವುದನ್ನೇ ಮರೆತುಬಿಟ್ಟರೆ ಎಂದು. ಲೇಹ್ ಮನಾಲಿ ಮಾರ್ಗದ ಪ್ರಯಾಣವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಿ ಲೇಹ್ ಸೋನಮ್ ನೊರ್ಬು ಸ್ಮಾರಕ ಆಸ್ಪತ್ರೆಗೆ ಸೇರಿ ಸ್ಟ್ರೆಚರ್ ಏರಿ emergency ward ನಲ್ಲಿ ದಾಖಲಾದೆ. ವಿಶುದ್ಧ ಆಸ್ಪತ್ರೆಯ ವ್ಯವಸ್ಥೆ ಮಾಡಿ ನಮಗಾಗಿ ಕಾಯುತ್ತಿದ್ದರು. ಒಳಬಂದ ಕೂಡಲೇ ಸಿಲಿಂಡರ್ ಧಾರಿಯಾದೆ. ವಾಷ್ ರೂಮಿಗೆ ಹೋಗಬೇಕೆನಿಸಿತು. ವ್ಹೀಲ್ಛೇರ್ ತಂದರೆ ಅವತಾರಪುರುಷಿಯಾದ ನಾನು ಪರವಾಗಿಲ್ಲ ಬೇಡವೆಂದು ಸೂಚಿಸಿ ಸಿಲಿಂಡರ್ ಕಳಚಿ ಹೊರಟೆ. ಹೊರಟವಳಿಗೆ ಉಸಿರಾಡಲೂ ಆಗದೆ, ಹೆಜ್ಜೆ ಎತ್ತಿಡಲೂ ಆಗದೆ ಅಲ್ಲೇ ಇದ್ದ ಬೆಂಚಿನ ಮೇಲೆ ಕುಸಿದು ಅಡ್ಡಾದೆ. ತಂದ ವ್ಹೀಲ್ಚೇರೇರಿದೆ. ಒಂದೆರಡು ಕ್ಷಣ ಆಕ್ಸಿಜನ್ ಮಾಸ್ಕ್ ಕಳಚಿದರೂ ಉಸಿರಾಡಲು ಕಷ್ಟ. ದೂರದ Tsokarನಲ್ಲಿ network ಇರಲಿಲ್ಲ. ಖುಷ್ಬೂ ಮಿಲಿಟರಿ ಕ್ಯಾಂಪಿಗೆ ಹೋಗಿ ಕೋರಿಕೆ ಸಲ್ಲಿಸಿ satellite phoneನಿಂದ lehಗೆ ಸಂಪರ್ಕಿಸಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಿ ಬೆಂಗಳೂರಿನ Nimhansನಲ್ಲಿ fellowship ಮಾಡುತ್ತಿದ್ದ ಕಿರಿಯ ಮಗಳು ಡಾ.ರಶ್ಮಿಗೆ ನನ್ನ ಅನಾರೋಗ್ಯದ ವಿಷಯ ತಿಳಿಸಿದ್ದರು. ಕಿರಿಯ ಮಗಳು ಹಿಂದಿನ ಸತ್ತಾಲ್ ಪ್ರಯಾಣದ ಸಂಗಾತಿ ಆಗಿದ್ದರಿಂದ ಖುಷ್ಬೂಗೆ ಪರಿಚಿತಳಾಗಿದ್ದಳು. ಮಗಳಿಗೆ ಅವಳ fellowshipನ ಕೊನೆಯ ದಿನ ಜೂನ್ 30. ಮೂವತ್ತರಂದು charge ವಹಿಸಿಕೊಟ್ಟು, ಅಂದೇ ಕೊಠಡಿಯನ್ನು ಖಾಲಿಮಾಡಿ ಅವಳ ಮುಂದಿನ ಕರ್ತವ್ಯದ ಊರಿಗೆ ತೆರಳಬೇಕಿತ್ತು. ಜೂನ್ ಮೂವತ್ತರ ರಾತ್ರಿ ತನ್ನೆಲ್ಲಾ ವಸ್ತುಗಳನ್ನು ಬೆಂಗಳೂರಿನಲ್ಲಿದ್ದ ನನ್ನ ತಂಗಿಯ ಮನೆಗೆ ಸಾಗಿಸಿದಳು. ಅವಳನ್ನು ತಂಗಿ, ತಂಗಿಯ ಮಗ ರಾತ್ರಿ 10.30ಕ್ಕೆ ವಿಮಾನ ನಿಲ್ದಾಣಕ್ಕೆ ಬಿಟ್ಟರು. ನಟ್ಟನಡುರಾತ್ರಿಯಲ್ಲಿ ದೆಹಲಿಗೆ ಬಂದಿಳಿದ ಮಗಳು ಬೆಳಿಗ್ಗೆ ಲೇಹ್ ವಿಮಾನವೇರಿ 8 ಗಂಟೆಗೆ ಆಸ್ಪತ್ರೆ ಸೇರಿ ನನಗೆ ಆಸರೆಯಾದಳು, ತಾಯಿಯಾದಳು. ನಿಜ ಹೇಳಬೇಕೆಂದರೆ ನನ್ನಿಬ್ಬರು ಮಕ್ಕಳು ನನ್ನ ಹಡೆದ ಮಕ್ಕಳಂತಿರದೆ ನನಗೆ ಜನ್ಮವಿತ್ತ ತಾಯಿಯರೆ ಆಗಿದ್ದಾರೆ.

ಅವಸರದಿಂದ ಕಾರೇರಿಸಿ ಹೊತ್ತುತಂದ ನನಗೆ ಬಟ್ಟೆಬರೆ, ಪರಿಕರಗಳು ಇರಲಿಲ್ಲ. ದುಡ್ಡೂ ಮೊದಲೇ ಇರಲಿಲ್ಲ. ಮೊಬೈಲ್ ಕೂಡಾ ಕೈಯಲ್ಲಿರಲಿಲ್ಲ. ನಾಲ್ಕು ದಿನ ಒಂದೇ ಬಟ್ಟೆಯಲ್ಲಿ, ರೋಗಿಗಳ ಮಧ್ಯ ಎಚ್ಚರವಿದ್ದಾಗ ಕಣ್ಣುಬಿಟ್ಟು ಸುತ್ತಣ ರೋಗಿಗಳ ಆವಸ್ಥೆ ನೋಡುತ್ತಾ ಮಲಗಿದ್ದೆ. ಗುಣ ಆದವರ ಮುಖದ ನಗು, ಸಂಭ್ರಮ, ಆಗ ತಾನೇ ಒಳಗೆ ಬಂದವರ ಆತಂಕ, ಅನುಮಾನ ಎರಡಕ್ಕೂ ಸಾಕ್ಷಿಯಾಗಿದ್ದೆ. ಮಗಳು ಬರುವ ಹಿಂದಿನ ಎರಡೂ ದಿನ ನನ್ನನ್ನು ನೋಡಿಕೊಂಡ ನಾಮ್ಗ್ಯಾಲ್, ಲೋಬ್ಜಾಂಗ್ ವಿಶುದ್ಧ ಇಬ್ಬರೂ ಲಡಾಖಿಗರು. ಇಬ್ಬರೂ ಬೆಂಗಳೂರು, ಮೈಸೂರಿನಲ್ಲಿ ಓದಿದವರು. ಅಲ್ಪ ಸ್ವಲ್ಪ ಕನ್ನಡ ಬಲ್ಲವರು, ಅಂದರೆ ಅರೆ ಕನ್ನಡಿಗರು.
ನಾಮ್ಗ್ಯಾಲ್ ಪದೇಪದೇ ಎಚ್ಚರಿಸಿ, ಹೊತ್ತುಹೊತ್ತಿಗೆ ಊಟತಿಂಡಿ ತಂದುಕೊಡುತ್ತಾ, ಮಾತ್ರೆ ನುಂಗಿಸಿ ನೋಡಿಕೊಂಡ. ಬರಿಗೈಯಲ್ಲಿ ಬಂದಿದ್ದದ್ದರಿಂದ ಪಿಂಗಾಣಿ ಬೌಲ್, ಸ್ಟೀಲ್ ಚಮಚ ತಂದುಕೊಟ್ಟಿದ್ದ. ಅವೆರಡನ್ನೂ ಜತನದಿಂದ ಊರಿಗೂ ತಂದು ನನ್ನ ಟೇಬಲಿನ ಡ್ರಾಯರಿನಲ್ಲಿ ಜತನವಾಗಿರಿಸಿ ನೆನಪುಗಳಲ್ಲಿ ಕನವರಿಸುತ್ತೇನೆ ಎಚ್ಚರದಲ್ಲಿಯೂ. ಅನುಭವಿಸಿದ ಕಷ್ಟಕ್ಕೆ ಒಂದು ಪ್ರತಿನಿಧಿ ಸಾಕ್ಷಿಯಾಗಿ ಇರುವ ಆ ಬೌಲ್ `ಬದುಕನ್ನು ನೀನಿನ್ನೂ ಬದುಕುವುದಕ್ಕೆ ಈ ನೆನಪು’ ಎಂದು ನೆನಪಿಸುತ್ತಲೇ ಇರುತ್ತದೆ.

ಒಂದು ದಿನ emergency ward ಮತ್ತೊಂದು ದಿನ ಟೂರಿಸ್ಟ್ ವಾರ್ಡಿನಲ್ಲಿದ್ದ ನನ್ನ ಸ್ಥಿತಿ ಸಿಲಿಂಡರ್ ತೆಗೆದ ತಕ್ಷಣ ಹಿಂದಿನ ಅವಸ್ಥೆಗೆ ಮರಳುತ್ತಿದ್ದುದಕ್ಕೆ ಐ.ಸಿಯುಗೆ ವರ್ಗಾಯಿಸಿ ಇಡೀ ದಿನ ಯಾಂತ್ರಿಕ ವ್ಯವಸ್ಥೆಯ ಆಮ್ಲಜನಕ ಕೊಟ್ಟರು. ತೆಗೆದ ತಕ್ಷಣ ಮತ್ತೆ ಸುಸ್ತಾಗುತ್ತಿದ್ದ ಕಾರಣ ಮಾತ್ರೆ ಬದಲಾಯಿಸಿ ಚಿಕಿತ್ಸೆ ನೀಡಿ ಟೂರಿಸ್ಟ್ ವಾರ್ಡಿಗೆ ಬಿಟ್ಟರು. ಅಷ್ಟುಹೊತ್ತಿಗೆ ತ್ಸೋಕರ್ ಪ್ರವಾಸ ಮುಗಿಸಿ ನಮ್ಮ ತಂಡ ಲೇಹ್ಗೆ ಮರಳಿತ್ತು. ಲಗೇಜ್ ಬಂದ ಕಾರಣ ನನಗೇ ವಾಸನೆ ಎನಿಸುತ್ತಿದ್ದ ಬಟ್ಟೆ ಬದಲಿಸಿದೆ. ಮರಳುವ ಪ್ರಯಾಣದ ಫ್ಲೈಟ್ ವ್ಯವಸ್ಥೆಗೆ ಹೊಡೆದಾಡುತ್ತಿದ್ದ ಮಗಳು ಕೊನೆಗೂ ಎಲ್ಲವನ್ನೂ ಸುಗಮಗೊಳಿಸಿದಳು.
ವಾಸ್ತವವಾಗಿ ಜುಲೈ ಮೂರರಂದು ನಾನು ನುಬ್ರ ಕಣಿವೆಗೆ ಪ್ರವಾಸ ಹೊರಡಬೇಕಿತ್ತು. ಆದರೆ ಅಂದು ನನ್ನ ಮತ್ತು ಮಗಳ ಊರಿನೆಡೆಗೆ ಮರುಪಯಣ ಆರಂಭ. ರಾಹುಲ್, ಖುಷ್ಬೂ ವಿಶುದ್ಧ ವಿಮಾನ ನಿಲ್ದಾಣಕ್ಕೆ ಬಂದು ಬೀಳ್ಕೊಟ್ಟರು. ಏರ್ಪೋರ್ಟಿಗೆ ಸಿಲಿಂಡರ್ ಸಮೇತ ಹೋಗಿ ಅದನ್ನಲ್ಲೇ ಬಿಟ್ಟು ವಿಮಾನ ಏರಿದೆ. ದೆಹಲಿ ತಲುಪಿ ನಾಲ್ಕೈದು ಗಂಟೆ ಕಾಯ್ದು ಮತ್ತೊಂದು ವಿಮಾನಕ್ಕೆ ವ್ಹೀಲ್ಛೇರಿನಲ್ಲಿ ಸೇರಿ ಬೆಂಗಳೂರು ಸೇರಿ ಸೇಫಾದೆ. ತಂಗಿಯ ಮನೆಯಲ್ಲಿ ಏಳೆಂಟು ದಿನವಿದ್ದು ದೇಹ ಸ್ಥಿತಿಯನ್ನು ಸಮಸ್ಥಿತಿಗೆ ತಂದುಕೊಂಡು ಟೂರ್ ಮುಗಿಸಿ ವಾಸ್ತವವವಾಗಿ ಊರಿಗೆ ಬರಬೇಕಿದ್ದ ದಿನದಂದು ಮಂಡ್ಯ ಸೇರಿದೆ ಗಂಡ ಮತ್ತೊಬ್ಬ ಮಗಳಿಗೆ ವಿಷಯ ತಿಳಿಸದೆ.

ಜೀವ ಉಳಿಸಲು ಕೈಜೋಡಿಸಿದವರಿಗೆ ಈ ಜೀವ ಋಣಿಯಾಗಿದೆ. `ಎನಿತು ಜನ್ಮದಲಿ ಎನಿತು ಜೀವರಿಗೆ, ಎನಿತು ಋಣಿಯೊ, ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೊ ಎಂದ ಡಿ.ವಿ.ಜಿ ಮಾತು ಸತ್ಯ. ಈ ಪ್ರವಾಸಕ್ಕೆ ಬರುವ ಮುನ್ನ ಇನ್ಕ್ರೆಡಿಬಲ್ ಬರ್ಡಿಂಗ್ ನಿಯಮಗಳ ಬಗ್ಗೆ ಮಾತಾಡುತ್ತಾ ಆರೋಗ್ಯದ ವಿಚಾರದಲ್ಲಿ ಸಂಸ್ಥೆ ಜವಾಬ್ದಾರಿಯಲ್ಲ ಎಂದಿದ್ದನ್ನು ಕುರಿತು ಮಾತಾಡುತ್ತಾ ಖುಷ್ಬೂ `ಅಮ್ಮಾ ಹೆಲ್ತ್ ಇಸ್ಯೂಸ್ ಜವಾಬ್ದಾರಿ ಹೊರಲಾಗದು’ ಎಂದಿದ್ದರು. ಆದರೆ ತ್ಸೋಕರ್ ನಲ್ಲಿ ನನ್ನ ಅವಸ್ಥೆ ಕಂಡು ಕೂಡಲೇ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಮಾಡಿಸಿ ಚಿಕಿತ್ಸೆ ಕೊಡಿಸಿದ ಖುಷ್ಬೂಗೆ ನಾನು ಚಿರಋಣಿ. ರಾಹುಲ್, ಅಂಕುರ್ ಮೋಯ್ತ್ರ, ನಾಮ್ಗ್ಯಾಲ್, ಲೋಬ್ಜಾಂಗ್ ವಿಶುದ್ಧ, ಸಾರಥಿ ನೋರ್ಬು, ಲೇಹ್ ಆಸ್ಪತ್ರೆಯಲ್ಲಿ ಪುಟಪುಟ ಓಡಾಡುತ್ತಿದ್ದ, ಮಲಗಿದರೆ ಉಸಿರಾಡದೇ ಹೋದಾಳೆಂದು ಪದೇ ಪದೇ ಎಚ್ಚರಿಸುತ್ತಿದ್ದ ದಾದಿಯರು, ತನ್ನೆಲ್ಲ ಒತ್ತಡದ ನಡುವೆಯೂ ಲೇಹ್ಗೆ ಬಂದು ಜೊತೆಯಾದ ಕಿರಿಯ ಮಗಳು ಡಾ.ರಶ್ಮಿ, ಬೆಂಗಳೂರಿಗೆ ಮರಳಿದ ಬಳಿಕ ಚೇತರಿಸಿಕೊಳ್ಳಲು ಒತ್ತಾಸೆಯಾದ ತಂಗಿ ಪ್ರಭಾವತಿಗೂ ನಾನು ಋಣಿ. Thanks…. Thanks to every one.
ಬಿಗಿನಿಯಮ ಪಾಲಿಸುವ ಮಿಲಿಟರಿ ಕ್ಯಾಂಪ್ ಅಧಿಕಾರಿಗಳು ರಾತ್ರಿ ಎಂಟು ಗಂಟೆ ಬಳಿಕ Satellite Phone ಬಳಸಲು ಅನುಮತಿ ಇಲ್ಲ ಎಂದರೂ ಖುಷ್ಬೂ ಇಡುತ್ತಿದ್ದ ಬೇಡಿಕೆಗೆ ಸ್ಪಂದಿಸಿ ಹತ್ತು ಗಂಟೆಗೂ ಅವಕಾಶವಿತ್ತರು. ಶಿಸ್ತಿನ ಸಿಪಾಯಿತನದ ಎದೆಯೊಳಗೂ ಮಿಡಿದ ಮಾನವೀಯತೆ ಬದುಕನ್ನು ನೋಡುವ ಪರಿಯನ್ನು ವಿಸ್ತರಿಸಿತು. ದಾರಿಯಲ್ಲಿ ಸುಸ್ತಾಗಿದ್ದ ನಾನು ಮಂಪರಿನಲ್ಲಿ ಕತ್ತು ಪಕ್ಕಕ್ಕೆ ವಾಲಿಸಿದ್ದನ್ನು ನೋಡಿ ನಾಮ್ಗ್ಯಾಲ್ ಗಾಬರಿಯಾಗಿ ಅಂಕುರನನ್ನೂ ಕೂಗಿ ಎಬ್ಬಿಸಿ ಅಮ್ಮಾ ಮರ್ಗಯಾ ಎಂದನಂತೆ. ಅಂಕುರ್, ನಾಮ್ಗ್ಯಾಲ್ ಮತ್ತೆಮತ್ತೆ ಅಮ್ಮಾ ಅಮ್ಮಾ ಎಂದು ಕೂಗಿ ಎಚ್ಚರದಲ್ಲರಿಸಿದರು. ಇವರೆಲ್ಲರ ಸಕಾಲಿಕ ಸಹಾಯದಿಂದ, ಕಾಳಜಿಯಿಂದ ನಾನಿನ್ನೂ ತನಕ ಉಸಿರು ಉಳಿಸಿಕೊಂಡಿದ್ದೇನೆ.

ತಿಂಗಳುಗಳ ಬಳಿಕ ಮತ್ತೊಬ್ಬ ಮಗಳಿಗೆ ಮಾತ್ರ ಹೇಳಿದೆ ಅದೂ ಪೂರ್ಣವಾಗಿ ನನಗೇ ಮತ್ತೊಂದು ಪ್ರಯಾಣ ಮಾಡಬಲ್ಲೆನೆಂಬ ಭರವಸೆ ಬಂದ ಬಳಿಕ. ಯಾರಿಗೇ ಆದರೂ ತೀರಾ ಅನಿವಾರ್ಯವಲ್ಲದ ವಿನಾ ತೊಂದರೆ ಕೊಡಲೇಬಾರದೆಂಬುದು ನನ್ನ ಸಂಕಲ್ಪ. ಅದರಲ್ಲೂ ನಾನೇ ತಂದುಕೊಂಡ ಸಂಕಟದ ಪಯಣದಲ್ಲಿ ಈಗಾಗಲೇ ಸಂಗಾತಿಗಳು ಸೇರಿಕೊಂಡಿದ್ದರಿಂದ ಇನ್ನಷ್ಟು ಜನರ ಕರುಣೆ ಬೇಡವೆನಿಸಿತ್ತು. ಆದರೆ ಈ ಮರುಜನ್ಮದ ಪಯಣ ಬದುಕಿಗೆ ಅನೇಕ ಪಾಠಗಳನ್ನು ಕಲಿಸಿದೆ.
8,000 ವಿವಿಧ ಜಾತಿಗಳ ಪಕ್ಷಿಗಳನ್ನು ದಾಖಲಿಸಿದ ಅಮೆರಿಕಾದ ಪಕ್ಷಿಪ್ರೇಮಿ ಫೋಬೆ ಸ್ನೆಟ್ಸಿಂಗರ್ ಐವತ್ತನೆಯ ವಯಸ್ಸಿನಲ್ಲಿ ತನಗೆ ಕ್ಯಾನ್ಸರ್ ಎಂದು ಖಚಿತವಾದ ಮೇಲೆ ನಂತರದ ಹದಿನೆಂಟು ವರ್ಷ ಇನ್ನೂ ದೂರದೂರದ ಸ್ಥಳಗಳಿಗೆ ಹಕ್ಕಿಯಾತ್ರೆಗೆ ತೆರಳಿದುದರ ಮುಂದೆ, ಆಕೆ ಎದುರಿಸಿದ ನಾನಾ ಸಮಸ್ಯೆಗಳ ಮುಂದೆ ನಾನೊಂದು ಬಿಂದು. ನನಗೆ ಸಮಸ್ಯೆ ಎದುರಾಯಿತೆಂದು ಮತ್ತೊಂದು ಪ್ರಯಾಣ ಮಾಡದೆ, ಹಕ್ಕಿ ಹಿಂದೆ ಅಲೆಯದೆ ಇರುವವಳಲ್ಲ ನಾನು. ನಾನು ಮತ್ತೆ ಓಡಾಡಬಲ್ಲೆ, ಚೈತನ್ಯ ತುಂಬಿದೆ ಎಂಬ ಭರವಸೆ ಮೂಡಿದ ಬಳಿಕ ನನ್ನ ಪಯಣಗಳು ಪ್ರಾರಂಭವಾದವು. ರಾಜಾಸ್ಥಾನದ ತಾಲ್ ಛಾಪರ್, ಉತ್ತರಾಖಂಡದ ಸಾತ್ತಾಲ್ ಹಕ್ಕಿಪಯಣ ಮುಗಿಸಿ ಬಂದೆ. ಸೋಲು ಸೋಲಲ್ಲ… ಬಿದ್ದೆನೆಂದು ಬಿದ್ದೇ ಇದ್ದರೆ ಬದುಕಲ್ಲ… ಎದ್ದು ದಿಟ್ಟತನದಿಂದ ಮುನ್ನಡೆದರೆ ಬದುಕು… ನನ್ನ ಜೀವನದುದ್ದಕ್ಕೂ ಅಳವಡಿಸಿಕೊಂಡ ಮಾರ್ಗ ಇದು. ಖುಷ್ಬೂ ನನಗೆ ಹೇಳಿದ್ದು. `ನನ್ನ ಉಳಿವಿಗಾಗಿ oxygen cylinder ಪಡೆದ ಖುಷ್ಬೂ tsokar ಆಸ್ಪತ್ರೆಯ ಗೋಡೆಯ ಮೇಲೆ ಕಂಡದ್ದು ದಲೈಲಾಮರ ದೊಡ್ಡ ಚಿತ್ರ. ಚಿತ್ರದ ಕೆಳಗೆ O2 NEXT TO GOD ಸಂದೇಶ. ಉಸಿರಾಡಲು ಆಮ್ಲಜನಕವಿಲ್ಲದೆ ನರಳಿದ ನನಗೆ ಇದಕ್ಕಿಂತ ಸಂದೇಶ ಬೇಕೆ!

ಲಡಾಖ್ ಪಾಠ ಮುಂದಿನ ಪಯಣಗಳಲ್ಲಿ ನಾನು ವಹಿಸಬೇಕಾದ ಎಚ್ಚರಿಕೆಗಳನ್ನು ಕಲಿಸಿದೆ. ಉಸಿರಿನಿಂದಲೇ ಎಲ್ಲ… ಉಸಿರು ಉಡುಗುವ ತನಕ ಎಲ್ಲ… ಈಗ ಹೆಜ್ಜೆಹೆಜ್ಜೆಗೂ ಎಚ್ಚರ ವಹಿಸುತ್ತಾ ಮುಂದಿನ ಇನ್ನಷ್ಟು ಹಕ್ಕಿಪಯಣಗಳಿಗೆ ಸಜ್ಜಾಗುತ್ತಿರುತ್ತೇನೆ. ಉಸಿರಾಟ ಇದ್ದರೆ ಬದುಕು. ನಿತ್ಯವೂ ಅದರ ಕಡೆಗೇ ಗಮನ ಕೊಡದೆ ಉಸಿರಾಡುವ ನಮಗೆ ಆಮ್ಲಜನಕವಿಲ್ಲದೇ ಇದ್ದಾಗ ಪರಿಸ್ಥಿತಿ ಹೇಗಿರುತ್ತದೆ ಎಂದು ಕಲಿಸಿದ ಪಾಠ. ಇಂತಹ ಪಾಠಗಳಿಂದ ಅಲ್ಲವೆ ಈ ನಾನು ಬೀಳಿಸುವವರ ನಡುವೆಯೂ ಎದ್ದೆದ್ದು ನಡೆದದ್ದು. ಈ ಪ್ರೀತಿಗೆ ನಾ ಋಣಿ. ನಡೆ ಮುಂದೆ ನಡೆ ಮುಂದೆ ಜಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆ ಮುಂದೆ ಎಂದಿದ್ದಾರಲ್ಲವೆ ಅನುಭವಿಗಳು. ನನ್ನ ಹಕ್ಕಿ ಪಯಣದ ಮತ್ತೊಂದು ಮಜಲು ಮುಗಿಯಿತು. ಹಲವು ಕನಸುಗಳು ನನಸಾದವು. ಪಯಣ ಮುಗಿದರೂ ಮುಗಿಯದೆ ಮೊಗೆಮೊಗೆದು ನೆಪ್ಪುಗಳ ನೆಟಿಕೆ ಮುರಿಯುತ್ತಾನೆ ಇರುಳ ಚಂದ್ರಾಮ. ಲಡಾಖಿನ ದೂರದ ಹ್ಯಾನ್ಲೆಯಲ್ಲಿ ಕಂಡ Wolly Naped ಮೊಲವನ್ನು ಒಳಗಿರಿಸಿಕೊಂಡ ಅದೇ ಹ್ಯಾನ್ಲೆಯ ಮುಗಿಲಿಗೆ ಮುತ್ತಿಡುವ ಬೆಟ್ಟ ಸಾಲುಗಳಲ್ಲಿ ಕಂಡ ಚಂದದ ಚಂದ್ರಾಮ ಎಲ್ಲರ ಕಂಗಳಲ್ಲೂ ಹೊಂಗನಸ ಸುಖನಿದ್ರೆ ತರಲಿ ಎಂದು ಹಾರೈಸುವೆ.








0 Comments