
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
16.3
17ನೇ ಶತಮಾನದ ಬೌದ್ಧವಿಹಾರವಿರುವ Line of actual controlಗೆ ಸನಿಹದಲ್ಲಿರುವ ಪುಟ್ಟ ಹಳ್ಳಿಯಾದ ಹ್ಯಾನ್ಲೆ ಬಹುದೂರವೆ ಎಂದರೆ ಹಾಗೇನಿಲ್ಲ. ಆದರೆ ದಾರಿ ಯಾವುದಯ್ಯಾ ಎಂದು ಕೇಳುವ ಮಟ್ಟಿಗೆ ಕೆಲವೆಡೆ ಇದ್ದ ದಾರಿಗಳಲ್ಲಿ, ಕೆಲವಡೆ ಮರಳ ದಾರಿಯಲ್ಲಿ ಪಯಣ ಸಾಗಿತು. ಹಕ್ಕಿಗೆ ಮರುಳಾದ ನಾವು ಈ ಮರಳ ಧೂಳ ದಾರಿಯಲ್ಲಿ ಮರಳಮಾರುತ ಎದುರಿಸುತ್ತಾ ಮಾನ್, ಮೇರಕ್, ಚುಶಾಲ್ ಮೂಲಕ ಹೊರಟೆವು. ಇಲ್ಲೊಂದು ಊರು ಬಂತು ಎನ್ನುವಷ್ಟರಲ್ಲಿ ಊರನ್ನು ದಾಟಿರುತ್ತಿದ್ದೆವು. ಅಷ್ಟು ಪುಟ್ಟ ಕಡಿಮೆ ಜನವಸತಿಯ ಊರುಗಳವು. ಊರುಗಳೆ ಹೀಗಿದ್ದ ಕಡೆ ನಮ್ಮ ಪ್ರಕೃತಿಯ ಕರೆಯನ್ನು ಪೂರೈಸಲೂ ಸರಿಯಾದ ತಾಣವೂ ಇರಲಿಲ್ಲ. ಅದರಲ್ಲೂ ಗುಂಪಿನಲ್ಲಿದ್ದ ಮೂವರು ಹೆಂಗಸರಿಗೆ ಇದು ಇಕ್ಕಟ್ಟಿನ ವಿಚಾರವೂ ಆಗಿತ್ತು. ಪ್ಯಾಕ್ ಮಾಡಿ ತಂದಿದ್ದ ಆಹಾರ ಇದ್ದುದ್ದರಿಂದ ನಮ್ಮ ಮಧ್ಯಪ್ರದೇಶದ ಸಮಸ್ಯೆ ಬಗೆಹರಿದಿತ್ತು.
ರಸ್ತೆ ಬದಿಯಲ್ಲಿ ಎಲ್ಲಿ ನೋಡಿದರೂ ಬ್ರೋ ಬೋರ್ಡ್ಗಳು. ಇದೇನು ಹುಡುಗರು ಬ್ರೊ ಬ್ರೊ ಎನ್ನುತ್ತಾರಲ್ಲ ಅದನ್ನು ಇಲ್ಯಾಕೆ ಹಾಕಿದ್ದಾರೆ ಎಂದರೆ ಹಾಗಲ್ಲ. ಇದು Border Road Organization. BRO ಆಶಯವೇ We will either find a way or make one. ಆದ್ದರಿಂದ ಆರ್ಮಿಗಾಗಿ ರಸ್ತೆ, ಸೇತುವೆಗಳ ಕಾಮಗಾರಿಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದವರು ಕಾಣಿಸುತ್ತಿದ್ದರು. ಹ್ಯಾನ್ಲೆಯ ದಾರಿ ಹೇಗಾದರೂ ಇರಲಿ ಬಾನಲ್ಲಿ ಮೋಡದ ನೆರಳ ಚಿನ್ನಾಟದ ಚಂದ ಮಾತ್ರ ಅಂದವಾಗಿತ್ತು. ಬಹುತೇಕ ಬೆಟ್ಟಗಳ ನಡುವಿನ ಕಡಿದಾದ ಕಣಿವೆಯಲ್ಲಿ ಸಾಗುವ ರಸ್ತೆಯ ಪಕ್ಕದಲ್ಲೇ ಹರಿಯುವ ಸಿಂಧೂ ನದಿ. ನಂತರದಲ್ಲಿ ಅಗಲವಾಗುವ ಕಣಿವೆ, ದೂರದ ಬೆಟ್ಟಗಳ ಹಿಂದೆ ಹಿಮಶಿಖರಗಳು. ಬೆಟ್ಟಗಳ ಬಣ್ಣಗಳೋ ಒಂದೊಂದು ಒಂದೊಂದು ತರಹ, ಒಂದೊಂದರಲ್ಲೂ ಅನೇಕ ತರಹ. ಬೂದು, ಕಂದು, ಕೆಂಪು, ಕಡುಕೆಂಪು. ಬಣ್ಣ ಬೆಟ್ಟದ ಬಣ್ಣ, ಬಣ್ಣಬಣ್ಣದ ಬೆಟ್ಟ. ಮುಂದೆ ಹೋಗುತ್ತಿದ್ದಂತೆ ಪಕ್ಕದ ಬೆಟ್ಟಗಳಲ್ಲಿ ಕಲ್ಲುಗಳ ಬದಲು ಮರಳು. ಮತ್ತೊಂದು ಮಗ್ಗುಲಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳು ತುಂಬಿದ ಬಟಾಬಯಲು. ತಣ್ಣನೆಯ ಮರುಭೂಮಿ, ಆದರೆ ರಾಜಾಸ್ಥಾನದ ಸುಡುಸುಡು ಮರುಭೂಮಿಯಂತಲ್ಲ.

ಹ್ಯಾನ್ಲೆಗೆ ಸುಮಾರು 50 ಕಿ.ಮೀ. ಇದ್ದಂತೆ ಬಟಾಬಯಲಿನ ಬದಲು ವಿಶಾಲ ಹುಲ್ಲುಗಾವಲು. ಅಲ್ಲಲ್ಲಿ ಮೇಯುವ, ಕತ್ತೆಯನ್ನು ಹೋಲುವ ಕಿಯಾಂಗ್‌ಗಳು. ಬೇರೆಯೇ ಸ್ವರೂಪದ ನೆಲೆ. ಈ ಕಿಯಾಂಗ್ ಗಳ ಪಟ ಹಿಡಿದದ್ದೇ ಹಿಡಿದದ್ದು. ನಮ್ಮಲ್ಲಿ ಕೆಲವರು ಕಿಂಯಾಂಗ್ ಸ್ಕೇಪ್ ಕೂಡಾ ಮಾಡುತ್ತಿದ್ದರೋ ಏನೋ, ಆದರವು ಸ್ವಲ್ಪ ದೂರದಲ್ಲಿ ಮೇಯುವುದರಲ್ಲಿ ಮಗ್ನವಾಗಿದ್ದವು. ಕಿಯಾಂಗ್ ಪಟ ಹಿಡಿದ ಮೇಲೆ ಕಾಗೆ ಪಟ ಹಿಡಿಯೋದು ಬೇಡವೆ. ಕಾಗೆ ಕಂಡರೆ ಕ್ಯಾಮೆರಾ ಕ್ಲಿಕ್ಕೆನ್ನಲು ಉದಾಸೀನಿಸಿದರೂ ಕಾಗೆನೂ ಕೆಲವು ಸಲ ಕ್ಲಿಕ್ ಆಗಿವೆ ಊರಕಾಗೆಗಿಂತ ಬೇರೆ ಆದ jack dew, red billed chough, common ravenಗಳನ್ನು ಸೆರೆ ಹಿಡಿದೆ. ಒಂದೆಡೆ ರೆಡ್ ಸ್ಟಾರ್ಟ್ ಕಂಡು ಗಾಡಿಯನ್ನು ನಿಲ್ಲಿಸಲು ಕೇಳಿದೆ. ಖುಷ್ಬೂ `ರೆಡ್ ಸ್ಟಾರ್ಟ್ ಕ್ಲಿಕ್ ಮಾಡಿದ್ದೀರಿ ಅಮ್ಮಾ, ನಿಲ್ಲಿಸಬೇಕಾ’ ಎಂದು ಕೇಳಿದರು. ಕ್ಷಣಕಾಲ ನಿಲ್ಲಿಸಿ ಕ್ಲಿಕ್ ಮಾಡಿದರೆ ಅದು ಬೇರೆಯೇ guldenstadt’s redstart (white winged white caped redstart) ರೆಡ್ ಸ್ಟಾರ್ಟ್ ಆಗಿತ್ತು. ಮುದೆ ಬ್ರೀಡಿಂಗ್ ಪ್ಲುಮೇಜ್ ಇದ್ದ lesser sand plover ಸಿಕ್ಕಿ ಲೈಫರಾಯಿತು.
ಒಂದೆಡೆ innerline permit ಪತ್ರ ತೋರಿಸಲು ನಿಲ್ಲಿಸಿದ್ದಾಗ ಸೋಲಾರ್ ಪ್ಯಾನಲ್ ಮೇಲೆ ಕುಳಿತಿದ್ದ ಗಂಡು greater rosefinch ಚಿತ್ರ ಕ್ಲಿಕ್ಕಿಸುತ್ತಿದ್ದಂತೆ ರಾಹುಲ್ ತೆಗೆಯುವಂತಿಲ್ಲ ಎಂದು ತಡೆಯುವಷ್ಟರಲ್ಲಿ ಮೂರ್ನಾಲ್ಕು ಚಿತ್ರ ತೆಗೆದಿದ್ದೆ. ಭಾರತ-ಚೀನಾ ಗಡಿ ಹತ್ತಿರದಲ್ಲಿ ಇದ್ದ ಕಾರಣ ಎಲ್ಲಿ ನೋಡಿದರೂ ಸೇನೆ, ಸೈನಿಕರು, ಸೇನಾ ಶಿಬಿರಗಳು, ಸಾಲುಸಾಲಾಗಿ ಸಾಗುವ ಸೇನಾ ವಾಹನಗಳು. ಸ್ಥಳೀಯರಿಗಿಂತ ಸೇನಾ ನೆಲೆಗಳೇ ಹೆಚ್ಚು. ಇಂತಹ ಗಡಿ ಕಾವಲಿನವರ ಕಣ್ಣಳತೆಯಲ್ಲಿದ್ದವು black necked crane. ಒಮ್ಮೆ ಕಾವಲಿನವರೆಡೆ ಮತ್ತೊಮ್ಮೆ ಕ್ರೇನ್ ಕಡೆ ಕಣ್ಣಿಡುತ್ತಾ ಕ್ಲಿಕ್ಕಿಸುತ್ತಿದ್ದೆವು. ಇವರು ಶೂಟ್ ಮಾಡುತ್ತಿದ್ದರೂ ಗನ್ನಿನಿಂದಲ್ಲ ಕ್ಯಾಮೆರಾದಿಂದ ಅದೂ ಹಕ್ಕಿಗಳನ್ನು ಎಂದವರೂ ಬಂದು ಪ್ರಶ್ನಿಸಲಿಲ್ಲ. ನಂತರ ಹ್ಯಾನ್ಲೆಯಲ್ಲಿ ಕಪ್ಪುಗೊರಳಿನ ಕ್ರೇನ್ ಸಿಕ್ಕಿ ಚಂದದ ಪಟಗಳಾದವು. ಮಾನವರ ದುರಾಸೆಯಿಂದ ಅಳಿವಿನಂಚಿನಲ್ಲಿರುವ ಕ್ರೇನ್ ಸಂಖ್ಯೆ ಇಂದು ಬೆರಳೆಣಿಕೆಯಷ್ಟಿವೆ.

ಸಮುದ್ರಮಟ್ಟದಿಂದ ಸುಮಾರು 14500 ಅಡಿ ಎತ್ತರದಲ್ಲಿರುವ ಹ್ಯಾನ್ಲೆ ಒಂದು ಪುಟ್ಟಹಳ್ಳಿ. ಹೊಟೇಲು ಇತ್ಯಾದಿ ವ್ಯವಸ್ಥೆಗಳಲ್ಲದ ಹ್ಯಾನ್ಲೆಯಲ್ಲಿ ಒಂದೆರಡು ಹೋಂಸ್ಟೇಗಳು ಮಾತ್ರ ಇವೆ. ನಾವು ಉಳಿದದ್ದು ಪದ್ಮ ಹೋಂಸ್ಟೇಯಲ್ಲಿ. ನಾವು ನಾಲ್ಕು ಕೊಠಡಿಗಳಲ್ಲಿ ಎಂಟು ಜನರೂ ಉಳಿದುಕೊಂಡಿದ್ದೆವು. ಊಟ-ತಿಂಡಿಗೆ ಮಾಲಕಿಯ ಮನೆಗೆ ಹೋಗಬೇಕಿತ್ತು. ಈ ಹಿಂದೆ ಖುಷ್ಬೂ ರಾಹುಲ್ ಹ್ಯಾನ್ಲೆಗೆ ಬಂದಿದ್ದರಿಂದ ಪದ್ಮ ಅವರಿಗೆ ಪರಿಚಿತರಾಗಿದ್ದರು. ಊಟ-ತಿಂಡಿಗಳ ರುಚಿ ಸೂಪರ್ ಎನ್ನುವಂತೆ ಇಲ್ಲದಿದ್ದರೂ ದೂರದ ಗಡಿಯ ಬಳಿಯ ಪುಟ್ಟ ಹಳ್ಳಿಯಲ್ಲಿ ಅಷ್ಟಾದರೂ ಸಿಕ್ಕಿದ್ದಕ್ಕೆ ಸಂತೋಷ ಪಡಬೇಕಿತ್ತು. ನಾನೋ ಬಹಳ ವರ್ಷಗಳಿಂದ ಅನ್ನ ತಿನ್ನುತ್ತಿರಲಿಲ್ಲ, ಶುಗರ್ ಇಲ್ಲದಿದ್ದರೂ. ತೂಕ ಇಳಿದು ಸಣ್ಣ ಆಗುವಂತಹದಂತೂ ಈ ದೇಹದ ಜಾಯಮಾನದಲ್ಲಿ ಇರಲೇ ಇಲ್ಲ. ಸುಮಾರು ವರ್ಷಗಳಿಂದ ಸ್ವೀಟ್ ಬಿಟ್ಟಿದ್ದೆ. ಆದರೆ ಎಲ್ಲಾದರೂ ಸುಸ್ತಾದರೆ ಚಾಕಲೇಟಿಗೆ, ಕೆಮ್ಮು ಹೆಚ್ಚಾದರೆಂದು ಕಾಫ್ ಡ್ರಾಪ್ಸ್ಗೆ ವಿನಾಯಿತಿ ಕೊಟ್ಟಿದ್ದೆ. ಹದಿನೇಳು ದಿನದ ಲಗೇಜಾದ್ದರಿಂದ ತೂಕ ಹೆಚ್ಚೆಂದು ಲಡಾಖ್ ಟ್ರಿಪ್ಪಿಗೆ ಚಾಕಲೇಟ್ ತಂದಿರಲಿಲ್ಲ. ತಂದಿದ್ದರೆ ಚೆನ್ನಾಗಿತ್ತೇನೋ. ಹ್ಯಾನ್ಲೆಯಲ್ಲಿ ರೋಟಿ, ಪರೋಟ ಸಬ್ಜಿ ತಿಂದು ಉದರೋದ್ಧಾರ ಮಾಡುತ್ತಿದ್ದೆ.
ಪದ್ಮಾ ಹೋಂಸ್ಟೇಯ ಹಜಾರದಂತಹ ದೊಡ್ಡ ರೂಮುಗಳಲ್ಲಿ ಹತ್ತಾರು ಸಾಹಸಪ್ರಿಯ ಬೈಕ್ ರೈಡರ್ ಇರುಳು ಬಂದು ತಂಗಿ ಬೆಳಿಗ್ಗೆ ಹೊರಡುತ್ತಿದ್ದರು. ಬೆಳಿಗ್ಗೆಯೆಲ್ಲ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಗಾಳಿಯ ವೇಗ ಹೆಚ್ಚಾಗಿ ಚಳಿ ಕೊರೆಯುತ್ತಿತ್ತು. ಬೆಳ್ಳಂಬೆಳಗ್ಗೆ ಹಕ್ಕಿಗೆದ್ದು ಹೊರಟರೆ ಮರಳಿ ಬಂದು ತಿಂಡಿ ಮಧ್ಯಾಹ್ನದ ಊಟ ಮುಗಿಸಿ ಮತ್ತೆ ಹಕ್ಕಿಗೆ ಹೋಗುತ್ತಿದ್ದೆವು. ಮರಳಿ ಬಂದ ಮೇಲೆ ಸುಸ್ತು ಎನಿಸುತ್ತಿತ್ತು. ರಾತ್ರಿ ಊಟ ಮಾಡಲು ಆಯಾಸ ಎನಿಸಿ ಮೊಸರು ಕುಡಿದು ಚಳಿಗೆ ಹೊದ್ದು ಮಲಗಿಬಿಡುತ್ತಿದ್ದೆ. ಬೆಳಿಗ್ಗೆ ಬೇಗ ಏಳುವಷ್ಟರಲ್ಲಿ ಸರಿಯಾಗಿರಲಿ, ಪಕ್ಷಿಪ್ರಯಾಣಕ್ಕೆ ಅಡತಡೆ ಬಾರದಿರಲಿ ಎಂದು ಮನಸ್ಸಿನಲ್ಲೇ ಮಣಮಣ ಮಂತ್ರ ಹೇಳಿಕೊಳ್ಳುತ್ತಿದ್ದೆ. ದೇವನಿಗೂ ಈ ಬೇಡಿಕೆ ಸಲ್ಲಿಸೋಣ ಎಂದು ಕರೆ ಮಾಡೋಣ ಎಂದರೆ ಬಿ.ಎಸ್.ಎನ್ಎಲ್ ಅದೂ ಪೋಸ್ಟ್ ಪೇಡ್ ಒಂದನ್ನು ಉಳಿದಂತೆ ಬೇರೆ ನೆಟ್ವರ್ಕ್ ಇಲ್ಲದ್ದರಿಂದ ಫೋನ್ ಸಂಪರ್ಕಗಳೂ ಸಿಗುತ್ತಿರಲಿಲ್ಲ, ಬಿ.ಎಸ್.ಎನ್.ಎಲ್ ಇದ್ದವರ ಬಳಿ ಕೇಳಿ ಮನೆಗೆ ಕರೆ ಮಾಡಿ ಮಾತಾಡಿ ಕ್ಷೇಮ ಸಮಾಚಾರ ಮುಟ್ಟಿಸುತ್ತಿದ್ದೆವು.

ನೆಟ್ವರ್ಕ್ ನೆಟ್ಟಗಿಲ್ಲದಿದ್ದರೂ ಹ್ಯಾನ್ಲೆಯ ಎತ್ತರ ಪ್ರದೇಶದಲ್ಲಿ ವಿಶ್ವದಲ್ಲೇ ಅತಿ ಎತ್ತರದ ಖಗೋಳ ವೀಕ್ಷಣಾಲಯಗಳಲ್ಲಿ ಒಂದೆಂಬ ಹೆಗ್ಗಳಿಕೆ ಪಡೆದ ಭಾರತೀಯ ಖಗೋಳ ವೀಕ್ಷಣಾಲಯವಿದೆ. ಇದನ್ನು ಉಪಗ್ರಹ ಸಂಪರ್ಕದ ಮೂಲಕ ನಿರ್ವಹಿಸುವ ಬೆಂಗಳೂರಿನ ಬಳಿಯ ಹೊಸಕೋಟೆಯಲ್ಲಿರುವ ಭಾರತೀಯ ಖಭೌತಶಾಸ್ತ್ರ ಸಂಸ್ಥೆಗೆ ಸೇರಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾ ಹಾಗೂ ಶಿಕ್ಷಣ ಕೇಂದ್ರದಿಂದ ಹ್ಯಾನ್ಲೆಯಿಂದ 3200 ಕಿ.ಮೀ. ದೂರದಲ್ಲಿದೆ. ಹ್ಯಾನ್ಲೆಯಲ್ಲಿ ಇತರೆ ಬೆಳಕಿನ ಅಡಚಣೆ ಕಡಿಮೆ ಇದ್ದು, ಶುಭ್ರಾಕಾಶವಿರುವದರಿಂದ ಖಗೋಳ ವೀಕ್ಷಣೆಗೆ ಸೂಕ್ತ ಜಾಗವೆಂದು ಖಗೋಳ ವೀಕ್ಷಣಾಲಯ ಸ್ಥಾಪಿಸಿದ್ದಾರೆ.
ಗೃಧ್ರಗಳ ಕಡೆಗೆ ನನ್ನ ಮೋಹ ಕಡಿಮೆ. ಹುಡುಕಿ ಹೋಗದಿದ್ದರೂ ಕಂಡಾಗ ಸುಮ್ಮನೆ ಇರುವವಳಲ್ಲ. ಹ್ಯಾನ್ಲೆಗೆ ಬರುವಾಗಲೇ upland buzzard electric pole ಮೇಲೆ ಕುಳಿತಿತ್ತು. ಸ್ವಲ್ಪ ಸಮಯ ಕಳೆದರೆ ಹಾರುವ shot ಸಿಕ್ಕೀತೆಂದು ಕ್ಲಿಕ್ಕಿಸಿದೆ. ಹ್ಯಾನ್ಲೆಯಲ್ಲೇ ನೆಲದ ಮೇಲಿದ್ದ upland buzzard ನಾಲ್ಕಾರು ಚಿತ್ರ ಕ್ಲಿಕ್ಕಿಸುತ್ತಿದ್ದಂತೆ frame ದಾಟಿ ಹಾರಿಹೋಗೋದೆ. ಅಷ್ಟಾದರೂ ಸಿಕ್ಕಿದ್ದೆ ಅದೃಷ್ಟ ಅಲ್ವಾ.

ಕೆಂಪುನರಿ (red fox) ಹ್ಯಾನ್ಲೆಯಲ್ಲಿ ದರ್ಶನ ಕೊಟ್ಟಿತು. red foxಗೆ ಸ್ಥಳೀಯ ಭಾಷೆಯಲ್ಲಿ watse ಎಂದರೂ ನಮಗದು ನರಿಯೇ ಆಗಿತ್ತು.. ಒಂದು ಗುಡ್ಡದ ಬಳಿ eurasian eagle owlಗಾಗಿ ಕಾಯುತ್ತಿದ್ದೆವು. ಹಿಂದಿನ ದಿನ ಅಲ್ಲೇ ಗೂಬೆ ಸಿಕ್ಕಿತ್ತು. ಗುಡ್ಡದ ತುದಿಯಲ್ಲಿ ಎರಡು ಕೆನ್ನರಿಯ ಮರಿಗಳು ಅಮ್ಮನಿಗೆ ಕಾಯುತ್ತಿದ್ದವು. ದೂರದಿಂದ ಇಲಿ ಕಚ್ಚಿಕೊಂಡು ಓಡಿ ಬರುತ್ತಿದ್ದ ಅವ್ವನ ಗಮನ ಮರಿಗಳತ್ತ. ಮೈಲಿದೂರ ಹೋಗಿ ಹುಡುಕಿ ತಂದು ತಿನ್ನಿಸುವ ವಾತ್ಸಲ್ಯ. ಮರಿಗಳಿಗೂ ತನ್ನಪ್ಪ, ಅಮ್ಮ ತಮಗೆ ತಿನ್ನಲು ತರುತ್ತವೆಂಬ ತುಂಬು ಭರವಸೆ. ಸ್ವಲ್ಪಹೊತ್ತು ಕುಳಿತಿದ್ದ ನರಿಮರಿ ನಮಗೆ ಬೆನ್ನು ಮಾಡಿ ಕುಳಿತರೂ ಅಮ್ಮ ಬರಲಿಲ್ಲ, ತರಲಿಲ್ಲ. ಅಮ್ಮ ಬರುವ ದಾರಿ ನೋಡಲು ಮೇಲೆ ಹತ್ತಿ ಮೈ ಮುರಿದು ಆಕಳಿಸಿತು. ಇನ್ನೇನು ಗುಹೆಯೊಳಗೆ ಹೋಗುತ್ತದೆ ಎಂದುಕೊಳ್ಳುವಷ್ಟರಲ್ಲಿ ಬಂದ ನರಿ ಮರಿಗಳನ್ನು ಹುಡುಕಲಾರಂಭಿಸಿತು. `ಬೆಳಗಾಗ ನಾನೆದ್ದು ಯಾರ ಮುಖವಾ’ ನೋಡಿದೆ ಅಂದರೆ ನರಿಮುಖ ನೋಡಿದೆ ಎಂದು ಹಾಡಿಕೊಳ್ಳಬಹುದು. ಒಮ್ಮೆ ಸಂಧಿಯಲ್ಲಿ ಇಣುಕಿ ಕದ್ದು ನೋಡುತ್ತಿದ್ದ ಕೆನ್ನರಿಯ ನೋಟ ಸಿಕ್ಕಿತು. ಅದು ಪೂರ್ತಿಯಾಗಿ ಕಾಣಿಸಿದ್ದರೆ ಮಜಾ ಇರುತ್ತಿರಲಿಲ್ಲ. ಕದ್ದುಕದ್ದು ನೋಡೋ ಈ ತುಂಟು ನರಿ ಯಾರೋ ಎಂದು ಹಾಡಬಹುದು. ಪಲ್ಲಾಸ್ ಬೆಕ್ಕು ಸಿಗುತ್ತದೆಂದು ಒಂದೆರಡು ದಿನ ಹುಡುಕಾಡಿ ಒಂದು ದಿನ ಅದೋ ಅಲ್ಲಿ ಅಲ್ಲಿ ಎಂದು ಗೈಡ್ ನಾಮ್ಗ್ಯಾಲ್ ತೋರಿಸುವಷ್ಟರಲ್ಲಿ ಅದು ಆ ಜಾಗದಿಂದ ಪರಾರಿಯಾಗಿತ್ತು. ಕೆಲವು ಸಲವಂತೂ ನಾಮ್ಗ್ಯಾಲ್ ತನ್ನ ಸ್ಪಾಟಿಂಗ್ ಸ್ಕೋಪ್ನಲ್ಲಿ ನೋಡಿ ಹೇಳುವಷ್ಟರಲ್ಲಿ ಅವು ಜಾಗ ಖಾಲಿ ಮಾಡಿರುತ್ತಿದ್ದವು. ಆದರೂ ಆತ ಅದರಿಂದ ನೋಡಿಯೇ ಗುರುತಿಸಿ ಹೇಳುತ್ತಿದ್ದ.
ಈ ಹುಡುಕಾಟದಲ್ಲಿ ಅತ್ತ ಮಂಗೋಲಿಯನ್ ಫಿಂಚ್, ಇತ್ತ tibetain snow finch, common red shank ಕ್ಲಿಕ್ಕಾದವು. ಮಂಗೋಲಿಯನ್ ಫಿಂಚ್ ಮರಿಯಂತೂ ಆಗ ತಾನೇ ಹಾರುವುದನ್ನು ಕಲಿಯಲು ರೆಕ್ಕೆಗಳನ್ನು ಬಡಿಯಲು ಪ್ರಯತ್ನಿಸುತ್ತಿತ್ತು. ಅಕ್ಕರೆಯಿಂದ ಅಮ್ಮ–ಅಪ್ಪ desert wheatear ತರುವ ಗುಟುಕಿಗೆ ಕಾಯುವ ಬಕಾಸುರರಂತೆ ಕಬಳಿಸುವ ಮರಿಹಕ್ಕಿಗಳ ಕಾಯಕಕ್ಕೆ ಅಡ್ಡಿಯಾಗದಂತೆ ಅಂತರ ಕಾಯ್ದು ಚಿತ್ರವಾಗಿಸಿದ್ದೆ. ತುತ್ತು ಇತ್ತುದನ್ನು ನುಂಗಿದ ಮರಿಹಕ್ಕಿ ಕಾಲಬುಡದಲ್ಲಿ ಇಣುಕಿಣುಕಿ ನೋಡುತ್ತಿದ್ದ ಚಿತ್ರ ಅದಕ್ಕಾಗಿ ಹುಳುಹುಪ್ಪಟೆ ತರಲು ಹಾರಿಹೋದ ಬಳಿಕ ಮೆಲ್ಲನೆ ಕಲ್ಲ ಮೇಲೇರಿ ಬಂದು ಕಾಯುತ್ತಿರುವ ಮರಿ ಹಕ್ಕಿ. ಏನೆಂತಾ ನೋಟ!!!

ಗೂಬೆಮುಖ ನೋಡಿದರೆ ಒಳ್ಳೆಯದಾಗುತ್ತದೆಂದು ಹೇಳಿದರೂ ನನಗ್ಯಾಕೋ ಗೂಬೆ ಕಡೆಗೆ ಹೆಚ್ಚಿನ ಪ್ರೀತಿ ಬೆಳೆದಿಲ್ಲ. ಅಥವಾ ರಾತ್ರಿ ಹೊತ್ತಿನಲ್ಲಿ ಒಬ್ಬೊಬ್ಬಳೆ ಹೋಗಿ ಗೂಬೆ ಹುಡುಕ್ಕಾಗಲ್ಲ ಎಂದು ಗೂಬೆ ಬಗ್ಗೆ ಪ್ರೀತಿ ಇಲ್ಲ ಅನ್ಕೊಂಡಿರಬಹುದು. ಗೂಬೆ ನೋಡಿದಾಗಲಂತೂ ಅದನ್ನು ಕಂಡರೆ ಇಷ್ಟ ಇಲ್ಲ ಅನ್ನೋದೆ ಮರೆತು ಮೋಹಕ್ಕೆ ಒಳಗಾಗುತ್ತೇನೆ. ಹಾಗಿದ್ದ ಮೇಲೆ ಗೂಬೆಪ್ರಿಯೆ ಖುಷ್ಬೂ ಭಾರತದ ಬಹುತೇಕ ಗೂಬೆಗಳ ಪಟ ತೆಗೆದಿರುವ ಅಪರಾತ್ರಿಯಲ್ಲೂ ಗೂಬೆ ಹುಡುಕೋದಿಕ್ಕೆ ರೈಟ್ ಹೇಳುವ ಬಹಳ ಚುರುಕಾಗಿ ಗೂಬೆ ನೆಲೆ ಹುಡುಕುವವರಿಗೆ ಇನ್ನೆಷ್ಟು ವ್ಯಾಮೋಹ ಇದ್ದೀತು. ಹ್ಯಾನ್ಲೆಯಲ್ಲಿ ಅವರ ಗುರಿ eurasian eagle owl… ಕಡೆಗಿತ್ತು. ಹ್ಯಾನ್ಲೆಗೆ ಬರುತ್ತಿದ್ದಂತೆ ಅದು ಸಿಕ್ಕಿ ಖುಷ್ಬೂ ಸಂಭ್ರಮಕ್ಕೆಣೆ ಇರಲಿಲ್ಲ. ಲಕ್ಷ್ಮಿಗೆ ಪ್ರಿಯವಾದ ಗೂಬೆ ಅತ್ತ… ಇತ್ತ…. ಸುತ್ತ ಮುತ್ತ ವಾರೆಗಣ್ಣು ಕಿರುಗಣ್ಣುಗಳ ನೋಟ ಬೀರಿ ನೋಡುತ್ತಿದ್ದಂತೆಯೇ ಹಾರಿ ಹೊರಗೆ ಬಂದು ಕುಳಿತಿತು. ಪಟವೂ ದಕ್ಕಿತು. ಅಲ್ಲಿಂದ ಹಾರಿ ಇನ್ನೊಂದೆಡೆ ಕುಳಿತು ತೂಕಡಿಸುತ್ತಿದ್ದ ಗೂಬೆಗೆ ನಾವು ವಿದಾಯ ಹೇಳಿದೆವು. ನಂತರದ ದಿನಗಳಲ್ಲೂ ಮತ್ತೆ ಗೂಬೆ ಕಂಡೀತೆ ಎಂದು ಹೋಗಿ ಕಾಯುತ್ತಿದ್ದೆವು. ಆ ಗೂಬೆಯೋ ಮೊದಲ ದಿನವೇ ಸಿಕ್ಕಿರಲಿಲ್ಲವೆ ಮತ್ತೆ ಮತ್ತೆ ಬಂದು ತೊಂದರೆ ಕೊಡಬೇಡಿ ಎನ್ನುವಂತೆ ಮರೆಯಲ್ಲಿಯೇ ಇದ್ದುಬಿಟ್ಟಿತ್ತು.
ಹ್ಯಾನ್ಲೆಯಲ್ಲಿ ಡಾ.ರಾಜಕುಮಾರರ ಕವಿರತ್ನ ಕಾಳಿದಾಸದ `ನಾನು ನೀನು ಕೂಡಿಕೊಂಡು, ಕುರಿಗಳ್ನಲ್ಲಿ ಮೇಯಿಸ್ಕೊಂಡು, ಬಿಸಿಲಾಗಲ್ದು ಹಿಟ್ಟು ಉಂಡು..’ ಹಾಡು ನೆಪ್ಪಾಗುತ್ತಿತ್ತು. ಸಾಮಾನ್ಯರು ಕೊಳ್ಳಲಾಗದ ದುಬಾರಿ ಪಾಶ್ಮಿನಾ ವಸ್ತ್ರಗಳಿಗೆ ಉಣ್ಣೆ ನೀಡುವ ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಹಿ ಕಂಡಾಗ ಈ ಹಾಡು ಗುನುಗಿದ್ದೆ. ಕುರಿಗಾಹಿ ಕೈಯಲ್ಲಿ ಮಣಿಮಾಲೆ ಹಿಡಿದು ಮುಂದೆ ಹೋಗುತ್ತಿದ್ದರೆ ಕಿನ್ನರ ಜೋಗಿಯ ಹಿಂದೆ ಹೋಗುವಂತೆ ಕುರಿಗಳು ತೆರಳುತ್ತಿದ್ದ ಚಿತ್ರ ಚಂದಿತ್ತು. ಅವನಿಗರಿವಿಲ್ಲದೆ ಅವನನ್ನು, ಕುರಿಗಳನ್ನು ಕ್ಲಿಕ್ ಮಾಡಿಕೊಳ್ಳುತ್ತಿದ್ದ ಹಾಗೆ ಆತನೂ ಹಿಂದಕ್ಕೆ ತಿರುಗಿ ಕ್ಯಾಮೆರಾಕ್ಕೆ ಒಂದು ಪೋಸ್ ಕೊಟ್ಟು ಮುಂದೆ ಹೋದ. ನಾನೂ ಮನದಲ್ಲೇ ಥ್ಯಾಂಕ್ಸ್ ಹೇಳಿದೆ.

ಹ್ಯಾನ್ಲೆಯಲ್ಲಿ ಮಗು, ಅದರಮ್ಮನ ಬೆನ್ನು ಕಂಡೆ. ಮಗುವಿನ ಬೆಚ್ಚನೆ ಉಡುಪು, ಉಣ್ಣೆಟೋಪಿ, ಆಕರ್ಷಕ ಮಿಕಿಮೌಸ್ ಚಿತ್ರದ ಬ್ಯಾಗು. ಆಕರ್ಷಣೆ ಒಡ್ಡಿದರೆ ಮಾತ್ರ ಶಾಲೆಯ ಮೆಟ್ಟಿಲು ಹತ್ತುವ ಮೊದಲ ದಿನಗಳು. ಮಗು ಅಳದಿರಲೆಂದು ಕೈಗೆ ಬಿಸ್ಕತ್ತಿನ ಪ್ಯಾಕೆಟಿತ್ತು ಮುನ್ನಡೆಸಲು ಜೊತೆಗಿದ್ದ ತಾಯಿ. ನಡೆಯುವ ಹಾದಿಯಲ್ಲಿ ಮರಳಿ ಬರುವಾಗ ನೀರು ತರಲು ತಾಯಿ ಬೆನ್ನಿಗೇರಿದ ಕ್ಯಾನ್. ಮಗುವಿಗೆ ಬ್ಯಾಗ್, ತಾಯಿಗೆ ಕ್ಯಾನ್. ಇದು Micky ಹಾಗೂ Bicky ಚಿತ್ರಾವಳಿ ಆಗುತ್ತದೆಂದು ಕ್ಲಿಕ್ಕಿಸಿಕೊಂಡೆ. ವಯಸ್ಸಾಗಿ ನಡು ಬಾಗಿದರೂ ಹೊಲದ ಕೆಲಸಕ್ಕೆ ಹೊರಟ ವೃದ್ಧನೂ ಚಿತ್ರವಾದ.
ಹ್ಯಾನ್ಲೆಯ ನಿಸರ್ಗದ ನೋಟ ರಮಣೀಯ. ಕಂಡೂ ಕಾಣದಂತೆ ಒಂದಿಷ್ಟು ಹಸಿರು. ಉಸಿರಿಗೂ ಕಡುಕಷ್ಟ ನಿಸುವ ಎತ್ತರೆತ್ತರ. ಬೆಳಗೆ ಐದಕ್ಕೆ ಸೂರ್ಯ ಮೇಲೆದ್ದು ಬಂದು ಹಿಮಾವೃತ ಶಿಖರಗಳಿಗೆ ಬಂಗಾರದ ಬಣ್ಣ ಲೇಪಿಸುತ್ತಿದ್ದ. ಆ ಕಣ್ತಣಿಯುವ ಸೊಬಗು ಕಂಡು ಖುಷಿಯಿಂದ ಉದ್ಘಾರ ಮಾಡುವುದೋ ಮೌನದಿಂದ ಆನಂದಿಸುವುದೋ ಅರಿಯದ ಅವಸ್ಥೆಯಲ್ಲಿದ್ದೆ. ಹೆಚ್ಚು ಗಾಳಿಯಿರದ ಮರುಭೂಮಿ ಆಗಿರಬಹುದು. ನೀರೂ ಹೆಚ್ಚಾಗಿ ಇರದಿರಬಹುದು, ಆದರೆ ಅದು ಸ್ವರ್ಗವಲ್ಲ ಎಂದು ಹೇಗೆ ದೂರುವುದು, ದೂರವಿರುವುದು ಹೇಗೆ?

ಎಲ್ಲಿ ಎಲ್ಲೆಲ್ಲಿ ನೋಡಿದರೂ ಅಂಡಲೆವ ಮೋಡ, ಮೋಡ. ಬೆಟ್ಟದ ಮೇಲೆ ಮೋಡ, ಬಯಲಿನ ಮೇಲೆ ಮೋಡ, ಹರಿಯುವ ನದಿಯ ಮೇಲೂ ಮೋಡ, ಕ್ಲಿಕ್ಕಿಸಲು ಕೆರೆಯ ದಡದಲಿ ಕೂತವರ ತಲೆ ಮೇಲೂ ಮೋಡ. ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂದರೂ ಮಳೆಯೇ ಅಷ್ಟಾಗಿ ಬಾರದ ಮರುಭೂಮಿ ಲಡಾಖಿನ ನೀಲಾಗಸದ ಬಿಳಿ ಮೋಡ ಕಂಡಾಗ ಬೆಳ್ಳಿ ಮೋಡವೇ ಎಲ್ಲಿ ಓಡುವೆ ನನ್ನ ಬಳಿಗೆ ಬಾ ಎಂದು ಕ್ಯಾಮೆರಾ ಕರೆಯಿತು. ನಾನೂ ಬೆಳ್ಳಿಮೋಡ ಚಿತ್ರದ ಇಂದಿರಾ ಚಿತ್ರದ ಕೊನೆಯಲ್ಲಿ ಹೇಳಿದ ಬೆಳ್ಳಿ ಕರಗಿತು ಮೋಡ ಉಳಿಯಿತೆಂಬ ಮಾತನ್ನೇ ‘ಬೆಳ್ಳಿಮೋಡ ಲಡಾಖಿನಲ್ಲೆ ಮೋಡದ ಚಿತ್ರ ಲೀಲಾಳಲ್ಲಿ’ ಎನ್ನಬಹುದು. ನಾಲ್ಕು ದಿನ ಹ್ಯಾನ್ಲೆಯಲ್ಲುಳಿದು ಹಕ್ಕಿ ಹುಡುಕಿ ನಂತರದ ನೆಲೆ 145 ಕಿ.ಮೀ ದೂರದ Tsokarನತ್ತ ಮಂದಗತಿಯಲ್ಲಿ ಸಾಗಿದೆವು. ತ್ಸೋಕರ್ ಹಾದಿಯಲ್ಲಿ ನಿರೀಕ್ಷೆಗಿಂತ ಹೆಚ್ಚು ಹಕ್ಕಿಗಳನ್ನು ಕಂಡೆ. ಆದರೆ ನಾ ತೆಗೆದದ್ದು ಕೆಲವನ್ನು ಮಾತ್ರ… ಉಳಿದದ್ದು ತೆಗೆಯಲಿಲ್ಲ ಯಾಕೆ, ಏನು ಎನ್ನಲು ಸವಿಸ್ತಾರವಾಗಿ ವಿವರಿಸುವೆ. ಲಡಾಖಿನ ನನ್ನ ಹಕ್ಕಿಗುರಿಯ ಕೊನೆಯ ದಿನ ಕಂಡ ಮೊದಲ ಹಕ್ಕಿ white tailed ruby throat. ನಂತರ mrs.white tailed ruby throat. ಮೂರನೆಯ ಹಕ್ಕಿ ಚಿತ್ರ tickells leaf warbler ಎಷ್ಟು ಹೊತ್ತು ಕಾಯ್ದರೂ ಕಂಬಿಬಿಟ್ಟು ಬೇರೆಕಡೆ ಕೂರಲಿಲ್ಲ. ನಾಲ್ಕನೆಯದು robin accentor, ಅದೂ ಉತ್ತಮವಾಗಿ ಬರಲಿಲ್ಲ. ಕೊನೆಯ ಚಿತ್ರ black red start. ಇನ್ನು ಉಳಿದ ಚಿತ್ರಗಳೆಲ್ಲಿ!!









0 Comments