ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.
ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.
ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್ ಅಂಡ್ ಎರರ್ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.
ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
9.3
ಗುಂಪಿನೊಡನೆ ಗಣೇಶಗುಡಿಗೆ
ಗಣೇಶಗುಡಿಯ ಮೊದಲ ಪ್ರಯಾಣ ಮುಗಿಸಿದ ಬಳಿಕ ಮುಂದಿನ ಪ್ರಯಾಣ ಯಾವಾಗ ಎಂಬುದರ ಭವಿಷ್ಯದ ಅರಿವು ನನಗೆ ಇರಲಿಲ್ಲ. ಗಣೇಶಗುಡಿ ಕರೆಯುತ್ತಲೇ ಇತ್ತು. ನಮ್ಮ ಬಂಡೀಪುರ, ಕಬಿನಿ ಯಾತ್ರೆಯ ಪ್ರವಾಸ ಆಯೋಜಕರಿಗೆ ಹಕ್ಕಿಪಯಣ ಮಾಡಿಸಿರೆಂದು ಹಲವು ಸಲ ವಿನಂತಿಸಿದ್ದರೂ ಹುಲಿಯಲ್ಲಿ ಮುಳುಮುಳುಗಿದ ಅವರು ಕಿವಿಗೆ ಹಾಕಿಕೊಂಡೇ ಇರಲಿಲ್ಲ. ಆದರೆ ಈ ಪಾರ್ಟಿ ಇದ್ದಕ್ಕಿದ್ದಂತೆ 2017ರ ಮಾರ್ಚ್ ಮೊದಲ ವಾರದಲ್ಲಿ ಅಪರೂಪಕ್ಕೆ ಹಕ್ಕಿಗಳಿಗಾಗಿ ಗಣೇಶಗುಡಿಯತ್ತ ಹೊರಡುವ ಪ್ಲ್ಯಾನ್ ಮಾಡಿಯೇ ಬಿಟ್ಟರು.
ಮತ್ತೊಮ್ಮೆ ಕನಸುಗಳಿಗೀಗ ರೆಕ್ಕೆ ಮೂಡಿದವು. ಅಷ್ಟು ಹೊತ್ತಿಗೆ ಟ್ರೈಪಾಡ್ ಬಳಿಗೆ ಬಂದಿತ್ತು. ನಾನೀಗ ಎಲ್ಲಾ ರೀತಿಯಲ್ಲೂ ಪಕ್ಕಾ ಪರ್ಫೆಕ್ಟ್, ಹಳೆಯ ತಪ್ಪುಗಳು ಆಗುವುದೇ ಇಲ್ಲ ಎಂಬ ಮಹಾ ಹುಂಬ ನಂಬಿಕೆಯೊಡನೆ ಸಜ್ಜಾದೆ. ಬೆಂಗಳೂರಿಗೆ ತಲುಪಿದೆ, ಗೊರಗುಂಟೆಪಾಳ್ಯದಲ್ಲಿ ಕಾಯ್ದು, ಅಲ್ಲಿಂದ ಹೊರಟಿದ್ದ ಹಕ್ಕಿಮಿತ್ರರ ಜೊತೆಗೂಡಿ ಟೆಂಪೋ ಏರಿದೆ. ಧಾರವಾಡದಲ್ಲಿ ಬೆಳಗಿನ ಜಾವ ನಿಲ್ಲಿಸಿದರು. ಪುಣೆಯಿಂದ ಬರಬೇಕಿದ್ದ ಮಮತಾ ರಾವ್, ಸಾಧನಾ ದೇಶಮುಖ್ ಎಂಬ ಹಕ್ಕಿ ಚಿತ್ರಗ್ರಾಹಕಿಯರು ಟೆಂಪೋ ಏರಿದರು.
ಮಮತಾ ಮೂಲತಃ ಮಂಗಳೂರಿನವರಾಗಿದ್ದು ಪತಿಯೊಡನೆ ಪುಣೆಯಲ್ಲಿ ನೆಲೆಸಿದ್ದ ಚಾರಣೋತ್ಸಾಹಿ ಹಾಗೂ ಹಕ್ಕಿಪ್ರಿಯೆ. ನನಗೋ ದೊಡ್ಡ ಖುಷಿ ಒಬ್ಬರು ಕನ್ನಡ ಮಾತಾಡುವ ಹಕ್ಕಿ ಗೆಳತಿ ಸಿಕ್ಕರಲ್ಲ ಎಂದು. ಈ ಹೊತ್ತಿಗೂ ಮತ್ತೊಂದು ಹಕ್ಕಿಯಾತ್ರೆಗೆ ಇಬ್ಬರೂ ಸೇರಿಕೊಳ್ಳದಿದ್ದರೂ, ಮತ್ತೆ ಮೀಟ್ ಮಾಡದಿದ್ದರೂ ಒಬ್ಬರಿಗೊಬ್ಬರು ಗೊತ್ತು ಎನ್ನುವುದೆ ಖುಷಿ.

ಧಾರವಾಡ ದಾಟುವ ಮುನ್ನ ಧಾರವಾಡದ ಕೆರೆ ಕಂಡ ಕೂಡಲೇ ಟೆಂಪೋ ಯಾತ್ರಿಕರಿಗೆ ಕೆಳಗಿಳಿಯುವ, ಹಕ್ಕಿ ಅರಸುವ ಮನಸಾಯಿತು. ಅವರೇನೋ ಇಳಿದರು, ಆದರೆ ಅವರಂತೆ ಕೆರೆಯ ಜಾರುಮಣ್ಣಿನೊಳಗೆ ನಡೆಯಲಾರದೆ ದಡದಲ್ಲೇ ಕ್ಯಾಮೆರಾ ಹಿಡಿದು ಅಡ್ಡಾಡಿದೆ. ಅಲ್ಲೇ ಕಿರುಮಿಂಚುಳ್ಳಿ ಕುಳಿತಿತ್ತು. ದೂರದಿಂದಲೇ ಕ್ಯಾಮೆರಾ ತೋರಿಸಿದೆ. ಇನ್ನೊಂದೆರಡು ಹಕ್ಕಿಗಳು ಕಾಣಸಿಕ್ಕವು. ಅಷ್ಟರಲ್ಲಿ ಮಸುಕಾಗಿದ್ದ ನಸುಕು ಸರಿದು ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕೆರೆಯ ಏರಿ ಮೇಲೆ ವಾಕಿಂಗ್ ಹೊರಟವರು ಕೆಲವರು ನಡೆಯುತ್ತಿದ್ದರು, ಕೆಲವರು ಅಲ್ಲಲ್ಲೇ ಕುಳಿತು ಮಾತುಕತೆಯಲ್ಲಿ ಮುಳಗಿದ್ದರು. ಕೆಲವರು ಅಲ್ಲಲ್ಲೇ ಶಿವಧ್ಯಾನದಲ್ಲಿದ್ದರು. ಅವರಿಗೂ ಬಿಂಬಗ್ರಾಹಕ ಕಾಣಿಸಿದೆ. ಅದಾದ ಬಳಿಕ ರೈಟ್ ರೈಟ್ ಹೇಳಿ ಟೆಂಪೋ ಹತ್ತಿ ಸವಾರಿ ಮುಂದುವರೆಯಿತು.
ಒಣಗಿ ನಿಡುಸುಯ್ಯುತ್ತಿದ್ದ ಕಾಡುಗಳ ನಡುವೆ ಗಾಡಿ ಹೋಗುತ್ತಿದ್ದಾಗ ಕಾಡು ಮನದಲ್ಲೂ ಕಾಡುತ್ತಿತ್ತು. ನೋವಿನ ದಾರಿಯನ್ನು ಹಿಂತಳ್ಳಿ ಗಣೇಶಗುಡಿಗೆ ತಲುಪಿದೆವು. ಇಳಿದ ಕೂಡಲೇ ನಮಗೆ ವಸತಿ ಏರ್ಪಡಿಸಿದ್ದ ಡಾರ್ಮಿಟರಿಯಲ್ಲಿ ಲಗೇಜ್ ಇರಿಸುವ ಮುನ್ನವೇ ನನಗೆ ಸೂಕ್ತ ಎನಿಸಿದ ತಾಣದಲ್ಲಿ ಟ್ರೈಪಾಡಿರಿಸಿ ಮೊದಲು ನನ್ನ ಜಾಗ ಕನ್ಫರ್ಮ್ ಮಾಡಿಕೊಂಡೆ, ಹಿಂದಿನ ಅನುಭವಗಳ ಆಧಾರದ ಮೇಲೆ. ಆಗಲೆ ಹಕ್ಕಿ ಬಂದೇ ಬಿಡುತ್ತವೆಂಬ ನಿರೀಕ್ಷೆಯ ನೋಟ ಬೀರುವ ಸರದಿ ನನ್ನದಾಗಿತ್ತು.
ಸಾಮಾನ್ಯವಾಗಿ ಗಣೇಶಗುಡಿಯಲ್ಲಿ ನಿಶ್ಚಿತ ನೀರ್ದಾಣಕ್ಕೆ ಹಕ್ಕಿಗಳು ಬರುವುದು ಮಧ್ಯಾಹ್ನ ಎರಡು ಎರಡೂವರೆಯ ಬಳಿಕ. ಹಕ್ಕಿಗಳಿಗೂ ಬರುವ ಮೂಡು ಇರಬೇಕು, ನಮಗೆ ಲಕ್ಕೂ ಇರಬೇಕು. ಇಲ್ಲದಿದ್ದರೆ ನಾಲ್ಕು ಗಂಟೆಯಾದರೂ ಹಕ್ಕಿಗಳ ಸುಳಿವಿಲ್ಲ. ಒಂದೋ ಎರಡೋ ಆಗಾಗ ಬರುತ್ತವೆ, ನೀರ್ಕುಡಿದು, ನೀರಾಟವಾಡಿ ಹೋಗುತ್ತಿದ್ದವು. ಹಕ್ಕಿ ಬರುತ್ತಿದೆ ಎನ್ನುವ ಸುಳಿವು ಸಿಕ್ಕ ತಕ್ಷಣ ತಟಸ್ಥರಾದವರ ಮೈಯಲ್ಲಿ ಜೀವಸಂಚಾರವಾಗುತ್ತಿತ್ತು. ಹಕ್ಕಿ ಸಿಗದೆ ವಿಮನಸ್ಕರಾಗಿ ಬೇಸರಿಸಿದ್ದವರು ಝಗ್ಗೆಂದು ಸಿದ್ಧರಾಗುತ್ತಿದ್ದರು. ಮೌನವೊಂದೆ ತಾಂಡವವಾಡಬೇಕಿದ್ದ ಜಾಗದಲ್ಲಿ ಒಮ್ಮೊಮ್ಮೆ ನಿರಾಶೆಯಿಂದ ಮಾತೂ ಜೊತೆಗೂಡುತ್ತಿದ್ದವು ಕೆಲವು ಹಿಂದಿನ ಅನುಭವಗಳ ಸಮೃದ್ಧ ನೆನಪುಗಳು, ಮತ್ತೆ ಹಲವು ಹತಾಶೆಯ ನಿಟ್ಟುಸಿರುಗಳು. ಬಿಸಿಲಿನ ಏರಿಳಿತಗಳೂ ಹಕ್ಕಿ ಸಂಖ್ಯೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿತ್ತು.

2016ರ ಡಿಸೆಂಬರಿನಲ್ಲಿ ಬಂದಾಗ ಬಂದ ಹಕ್ಕಿಗಳ ಹೆಸರೂ ತಿಳಿಯದೆ ಮನೆಗೆ ಹೋದ ಬಳಿಕ ಪತ್ತೆ ಹಚ್ಚಿದ್ದೆ, ಆದರೀಗ ಸ್ವಲ್ಪ ಪಳಗಿದ್ದೆ, ಹಾಗಾಗಿ ಬಂದ ಕೆಲವಾದರೂ ಹಕ್ಕಿಗಳ ಹೆಸರು ಪರಿಚಿತವಿತ್ತು. ಇಂತಹ ಹಕ್ಕಿ ಬಂದಿತೆಂದು ಹೇಳಿಕೊಂಡು ಹಕ್ಕಿ ಚಿತ್ರ ಹಿಡಿಯುತ್ತಿದ್ದೆ. ಹಿಂದಿನ ಸಲಕ್ಕಿಂತ ಕ್ಯಾಮೆರಾ ಸೆಟ್ಟಿಂಗ್ ಜ್ಞಾನ ಮೂರು ಕಾಸಿನಷ್ಟಾದರೂ ಮುಂದುವರೆದಿತ್ತು. ಆಗಾಗ್ಗೆ ತೆಗೆದ ಚಿತ್ರಗಳನ್ನು ಚೆಕ್ ಮಾಡಿಕೊಂಡು ಸೆಟ್ಟಿಂಗ್ ಹೊಂದಿಸಿಕೊಳ್ಳುವ ಮಟ್ಟಿಗೆ ಬದಲಾಗಿದ್ದೆ. ನಿಜ ಹೇಳಬೇಕೆಂದರೆ 2016ರ ಡಿಸೆಂಬರಿನಿಂದ 2017ರ ಫೆಬ್ರವರಿಯ ತನಕ ಮಂಡ್ಯದ ಅಕ್ಕಪಕ್ಕದ ಹಳ್ಳಿಗಳನ್ನು ಬಿಟ್ಟರೆ ಬೇರೆಲ್ಲಿಗೂ ಹೋಗಿರಲಿಲ್ಲ. ಬಹಳ ವರ್ಷಗಳ ಬಳಿಕ ನನ್ನ ಸೋದರಮಾವ ಅಮೆರಿಕಾದಿಂದ ನನ್ನ ಮನೆಗೆ ಬಂದು ಉಳಿದಿದ್ದರು. ಹಾಗಾಗಿ ಮಧ್ಯೆ ಮಧ್ಯೆ ಮಂಡ್ಯದಲ್ಲಿ ಮಾತ್ರ ಹಕ್ಕಿಗೆ ಹೋಗುತ್ತಿದ್ದೆ, ಆಸೆ ಹತ್ತಿಕ್ಕಲಾರದೆ. ಇತ್ತ ಅವರನ್ನೂ ಕೇರ್ ಮಾಡಿ, ಅತ್ತ ಹಕ್ಕಿಗಳನ್ನೂ ಭೇಟಿ ಮಾಡಿ ಮ್ಯಾನೇಜ್ ಮಾಡುತ್ತಿದ್ದೆ.
2016ರ ಡಿಸೆಂಬರಿನಲ್ಲಿ ತೆಗೆದಿದ್ದ ಚಿತ್ರಗಳು ಗೈಡಿಂಗ್ ಗುರುಗಳಾಗಿದ್ದವು. ನಮ್ಮ ತಪ್ಪುಗಳೇ ನಮ್ಮ ಒಪ್ಪು ದಾರಿಗೆ ಮಾರ್ಗದರ್ಶಿ ಅಲ್ಲವೆ. ಅಂಬೆಗಾಲಿನ ಕೂಸು, ಗೋಡೆ ಹಿಡಿದು ನಿಲ್ಲುವ ಮಟ್ಟಿಗೆ ಬಂದಿದ್ದೇನೆಂದು ನಾನೇ ಶಭಾಷ್‌ಗಿರಿ ಕೊಟ್ಟು ಬೆನ್ನು ತಟ್ಟಿಕೊಂಡೆ. ಕ್ಯಾಮೆರಾದ ನಿಜವಾದ ಅರಿವು ಪುಸ್ತಕಗಳಿಂದ, ಕೋರ್ಸ್, ಕ್ಯಾಂಪ್‌ಗಳಿಂದ ಒಂದು ಹಂತಕ್ಕೆ ಬರಬಹುದೇ ವಿನಾ ಪೂರ್ಣವಾಗಿ ಅಲ್ಲ. ಏಕೆಂದರೆ ಏನೆಲ್ಲಾ ಜ್ಞಾನ ಸಂಪನ್ನರಾದರೂ ಫೀಲ್ಡಿಗೆ ಇಳಿದಾಗಿನ ಅನುಭವಗಳು ಮಾತ್ರವೆ ನಮ್ಮ ನಿಜವಾದ ಗುರುಗಳಾಗುತ್ತವೆ. ತಪ್ಪುಗಳಿಂದ ಮತ್ತೆ ತಪ್ಪು ಮಾಡದಂತೆ ಕಲಿಯುತ್ತಾ ಹೋಗುತ್ತೇವೆ. ಮತ್ತೆ ತಪ್ಪು ಮಾಡುವುದಿಲ್ಲ ಎಂದಲ್ಲ. ಆದರವು ಹಳೆಯ ತಪ್ಪುಗಳಾಗಿರದೆ ಹೊಸ ತಪ್ಪುಗಳಾಗಿರುತ್ತವೆ. Which of my photograph is my favourite ಅಂದರೆ ನಾನು ನಾಳೆ ತೆಗೆಯಲಿರುವ ಫೋಟೋ ಎನ್ನುವಷ್ಟರ ಮಟ್ಟಿಗೆ ಪ್ರತಿ ದಿನವೂ ಹೊಸದನ್ನು ಕಲಿಯುತ್ತಾ ಕಲಿಯುತ್ತಾ ಬೆಳೆಯುವ ಪ್ರಕ್ರಿಯೆ. ನಿಲುಗಡೆ ಇಲ್ಲದ ನಿರಂತರ ಕಲಿಕೆಯ ಪಯಣ.

ಚಿತ್ತಾಕರ್ಷಕ ಗಣೇಶಗುಡಿಯಲ್ಲೊಂದು ಏಕತಾನತೆಯಿದೆ. ಅದೇ ಪರ್ಚ್, ಅದೇ ತರಹದ ಮಾಸ್, ಅದೇ ತರಹದ ನೀರಪಾತ್ರೆಗಳು, ಅದದೇ ಬ್ಯಾಕ್‌ಗ್ರೌಂಡು. ಯಾರಾದರೂ ಫೋಟೊ ಹಾಕಿದರೆ ಇದು ಗಣೇಶಗುಡಿಯಲ್ಲಿ ತೆಗೆದ ಚಿತ್ರವೆಂದು ಹೇಳುವಷ್ಟು ಏಕತಾನತೆ. ಹಕ್ಕಿಗಳ Natural Habitatನಲ್ಲಿ ತೆಗೆಯೋದು ಯಾವತ್ತೂ ಹಕ್ಕಿ ಛಾಯಾಗ್ರಾಹಕರ ಗುರಿ. ಅನಿವಾರ್ಯ ಎನಿಸಿದ ಕೆಲವೇ ಕೆಲವು ಸ್ಥಳಗಳನ್ನು ಬಿಟ್ಟರೆ ಉಳಿದಂತೆ ಸಹಜ ವಾತಾವರಣದಲ್ಲೇ ತೆಗೆಯುವ ಪ್ರಯತ್ನ ಮಾಡಿದ್ದೇನೆ, ಮಾಡುತ್ತಿದ್ದೇನೆ. ಗಣೇಶಗುಡಿಯಲ್ಲಿ ಕೇವಲ ನೀರಿನ ವ್ಯವಸ್ಥೆ ಇದೆ, ಹಕ್ಕಿಗಳು ನೀರು ಕುಡಿಯಲು ಅಥವಾ Bird Bathಗಾಗಿ ಬರುತ್ತದೆ. ಕೆಲವು ಕಡೆ ಆಹಾರವನ್ನೂ ಇರಿಸಿ ಹಕ್ಕಿಗಳು ಬರುವಂತೆ ಮಾಡಿರುತ್ತಾರೆ. ಇದರಲ್ಲಿ ನಮ್ಮ ಹೆಚ್ಚಿನ ಶ್ರಮವೇನೂ ಇರದು, ತೆಗೆದ ತೃಪ್ತಿಯೂ ಶೇಕಡಾ ನೂರರಷ್ಟೂ ಇರುವುದಿಲ್ಲ. ಆದರೂ ಎಲ್ಲರೂ ದೈಹಿಕವಾಗಿ ಕ್ಷಮತೆ ಹೊಂದಿರುವುದಿಲ್ಲ, ಆದರೆ ಹಕ್ಕಿ ಚಿತ್ರ ತೆಗೆಯುವ ಆಸೆಗಳಿರುತ್ತವೆ.
ಆರಂಭಿಕ ಹಂತದ ಕಲಿಕೆಯ ಭಾಗವಾಗಿ ಇಂತಲ್ಲಿ ತೆಗೆಯುವವರೂ ಇದ್ದಾರೆ, ಇದ್ದೇವೆ. ಹಕ್ಕಿ ಹುಡುಕಿ ಅಲೆಯುವುದೊಂದು ತರಹ ಆದರೆ, ನಾವು ಇರುವ ತಾಣಕ್ಕೆ ಹಕ್ಕಿ ಬರುವ ಹಾಗೆ ಮಾಡಿಕೊಳ್ಳುವುದು ಒಂದು ತರಹ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ’ ಎನ್ನುವ ಹಾಗೆ. ಹಾಗೆಂದು ಯುದ್ಧವನ್ನು ಸಮರ್ಥಿಸುತ್ತೇನೆ ಎಂದಲ್ಲ. ಆದರೆ ಹಕ್ಕಿ ಪ್ರೀತಿ. ಏನ್ ಮಾಡೋದು. ನಾನು ಗಣೇಶಗುಡಿಗೆ ಹೋಗಲಿ ಎಲ್ಲಿಗೆ ಹೋಗಲಿ ಹೋದ ಜಾಗದಲ್ಲಿ ಎಲ್ಲಾ ಸಮಯವೂ ಹಕ್ಕಿಗೆ ಮೀಸಲು. ಹಾಗಾಗಿ ಮಾತುಕತೆ, ಆಚೀಚೆ ಅಡ್ಡಾಟ ಯಾವುದೂ ಇರಲ್ಲ.

ಒಂದು ಹಕ್ಕಿ ಬರುತ್ತದೆಂದರೆ ಊಟ ತಿಂಡಿಯೂ ಇಲ್ಲದೆ ಕೂತಲ್ಲೇ ಕೂತೇನು. ಗಣೇಶಗುಡಿಯಲ್ಲಿ ಊಟ ತಿಂಡಿಗೆ ಮಹಡಿಗೆ ಹೋಗಬೇಕು. ಸುರುಳಿಯಾಕಾರದ ಮೆಟ್ಟಿಲು ಹತ್ತೋದು ಒಂದು ಸಮಸ್ಯೆಯಾದರೆ ಹಾಗೆ ಹೋದಾಗ ಹಕ್ಕಿಗಳು ತಪ್ಪಿಹೋದರೆನ್ನುವುದೇ ನಿಜವಾದ ಆತಂಕ. ಬೇಡಿ ಕಾಡಿ ಕೆಳಗೆ ತರಿಸಿಕೊಂಡು ತುರುಕಿಕೊಂಡು ಮತ್ತೆ ಹಕ್ಕಿಗೆ ಕಾಯುತ್ತಿದ್ದೆ. ನಾವು ಹೋಗಿದ್ದುದು ಮಾರ್ಚ್ ಮೊದಲ ವಾರದಲ್ಲಿ. ಚಳಿ ಕಳೆದು ಬಿಸಿಲು ದಾಂಗುಡಿಯಿಡುತ್ತಿತ್ತು.
ಬೆಳಿಗ್ಗೆ ಸ್ವಲ್ಪ ಚಳಿ ಇದ್ದರೂ ನಂತರದಲ್ಲಿ ಸೂರಪ್ಪನ ಕಾಟ. ನಮಗೇನೋ ತಡೆದುಬಿಡ್ತೀವಿ. ಆದರೆ ಹಕ್ಕಿಗಳು ಅವು ತಡೆಯದೆ ಮತ್ತೆ ಮತ್ತೆ ನೀರಿಗೆ ಬರ್ತಿದ್ದವು. ಸಮಸ್ಯೆ ಏನೂಂದರೆ ಈ ಸುಡುಬಿಸಿಲಿನಲ್ಲಿ ಹಕ್ಕಿಗಳ ಬೀಳುತ್ತಿದ್ದ ಬೆಳಕು ತೀವ್ರವಾಗಿ ಬಹುತೇಕ ಚಿತ್ರಗಳ ಹಕ್ಕಿಗಳು ಚಂದ ಇದ್ದರೂ ಹಕ್ಕಿಗಳು ಚಂದ ಕಾಣದ ಹಾಗೆ ಲೈಟಿಂಗ್ ಆಗಿತ್ತು, ಏನಿರಲಿ ಎಂತಿರಲಿ ಎಂದು ಹೊಡೆಯುವುದನ್ನಂತೂ ಬಿಟ್ಟಿರಲಿಲ್ಲ. ವರ್ಡೈಟರ್, ಶಮಾ, ಇಂಡಿಯನ್ ಸ್ಕಿಮಿಟರ್ ಬ್ಯಾಬ್ಲರ್, ನೀಲಿ ರಾಬಿನ್, ರಾಕ್‌ಥ್ರಶ್‌ಗಳಂತಹ ಲೈಫರ್‌ಗಳು ಸಿಕ್ಕವು. ಪಿಟ್ಟ ಹಿಂದಿನ ಸಲ ಗಣೇಶಗುಡಿಗೆ ಬರುವ ಮುನ್ನ ಅಂಕೋಲಾದಲ್ಲಿ ಸಿಕ್ಕಿತ್ತು.

ಬೆಳಕು ಸರಿಯಿಲ್ಲದ ಕಾರಣದಿಂದ ಒಳ್ಳೆಯ ಕ್ಲಿಕ್ ಆಗಿರಲಿಲ್ಲ, ಈ ಸಲವೂ ಸುಮಾರಾಗಿ ದಕ್ಕಿತ್ತು. ಇದರ ಜೊತೆಗೆ ಉಳಿದವು ಹಿಂದೆ ಸಿಕ್ಕ ಹಕ್ಕಿಗಳೇ ಆಗಿದ್ದವು. ಕೊನೆಯ ದಿನ ಹೊರಡುವ ಮೊದಲು ದಾಂಡೇಲಿಗೂ ಭೇಟಿ ಕೊಟ್ಟು ಬರೋಣ ಎಂದು ಮಬ್ಬಿನ ಮುಂಜಾವದಲ್ಲೇ ಅತ್ತ ಹೊರಟೆವು. ದಾಂಡೇಲಿಯ ಟಿಂಬರ್‌ಯಾರ್ಡಿನಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಆಗ ತಾನೆ ವಾಕಿಂಗಿನಲ್ಲಿ ಮಗ್ನರಾದವರು ಎದುರಾದರೆ ವಿನಾ ಹಕ್ಕಿಗಳು ಕಾಣುವಂತೆ ಇರಲಿಲ್ಲ. ಅಷ್ಟರಲ್ಲಿ ಜನರ ತಂಡವೊಂದು ಅಡ್ಡಗಾಲು ಹಾಕಿತು.
ದಾಂಡೇಲಿಯನ್ನು ತಾಲ್ಲೂಕಾಗಿ ಪರಿಗಣಿಸಬೇಕೆಂದು ಒತ್ತಾಯಪಡಿಸಿ ದಾಂಡೇಲಿ ಬಂದ್ ಮಾಡಿದ್ದೇವೆ’ ಎಂದು ನಮ್ಮ ವಾಹನವನ್ನು ಮುಂದೆ ಹೋಗದಂತೆ ತಡೆದರು. ಒಂದು ಗಂಟೆ ಗಾಡಿಯಲ್ಲಿಯೇ ಉಳಿದಿದ್ದೆವು. ನಾವು ಇದರ ಬಗ್ಗೆ ಮಾಹಿತಿ ಇಲ್ಲದೆ ಗಣೇಶಗುಡಿಯಿಂದ ಬಂದೆವು ಎಂದು ಹರಸಾಹಸ ಪಟ್ಟು ಮನದಟ್ಟು ಮಾಡಿ ಗಣೇಶಗುಡಿಗೆ ಹಿಂದಿರುಗಿದೆವು.
ಕೊನೆಯ ದಿನ ಕೊನೆಯ ಕ್ಷಣದಲ್ಲಿ ಹೊರಡುವ ಮುನ್ನ ಎಷ್ಟು ಆಗುತ್ತೋ ಅಷ್ಟು ಹೊಡೆದುಬಿಡೋಣ ಎಂದು ಕಾಯುತ್ತಿದ್ದೆ. ಬಂದವನ್ನು ಬರಮಾಡಿಕೊಳ್ಳುತ್ತಿದ್ದೆ. ಕೆಲವರು ಕ್ಯಾಮೆರಾ ಸಮೇತ ಓಡಿದರು. ಏನು ಏನು ಎಂದು ಕೇಳುವಷ್ಟರಲ್ಲಿ ಕಾಕರಣೆ ಕಾಣ್ತಾ ಇದೆ ಎಂದರು. ಚಿತ್ರ ನೋಡಿಯೆ ಮರುಳಾಗಿದ್ದ ನಾನು ಸುಮ್ಮನಿರಲು ಸಾಧ್ಯವೆ. ನಾನೂ ದಾಪುಗಾಲು ಹಾಕಿದೆ.

ಗಂಡು ಹೆಣ್ಣು ಮಲಬಾರ್ ಟ್ರೋಜನ್‌ಗಳ ಮಿಂಚು ದರ್ಶನವೂ ಆಯಿತು. ಎರಡೂ ಕಾಯುತ್ತಿದ್ದೆಯಲ್ಲ ಲೀಲಾ, ಬಂದೆಯಾ ಎನ್ನುವಂತೆ ನಾಲ್ಕು ನಾಲ್ಕು ಫೋಟೊಗಳಾಗಿ ಸಿಕ್ಕವು.
ಹನ್ನೊಂದು ಗಂಟೆಗೆ ನಾವು ಗಣೇಶಗುಡಿಯಿಂದ ಹೊರಡಲೇಬೇಕಿತ್ತು. ಆ ರಾತ್ರಿ ಮಂಡ್ಯ ತಲುಪಿ ಮರುದಿನ ಮದ್ದೂರಿನ ಶಾಲೆಯೊಂದರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಲೇಬೇಕಿತ್ತು. ಈಗ ನಾನು ಯಾವುದೇ ಕಾರ್ಯಕ್ರಮ ಹಕ್ಕಿಗಾಗಿ ಒಪ್ಪಿಕೊಳ್ಳುವುದೇ ಇಲ್ಲ. ಇಷ್ಟು ವರ್ಷ ಕಳೆದ ಬಳಿಕ ನನ್ನದೇ ಆದ ಲೋಕ ಹಕ್ಕಿಲೋಕಕ್ಕೆ ಸಮಯ ಕೊಡಬೇಕೆಂಬ ಹಂಬಲ.
ಬೆಂಗಳೂರಿನ ಗಾಂಧಿ ಸ್ಮಾರಕನಿಧಿಯ ಜೊತೆ ಗಾಂಧಿಯಿಂದಾಗಿ ಒಡನಾಟವಿತ್ತು, ಈಗ ವಿಮುಖ ಆಗಿರುವ ಕಾರಣ ಅವರು ರೇಗಿಸಿದ್ದು ಲೀಲಾ ಮೇಡಂ ಹಕ್ಕಿ ಹಿಂದೆ ಹೋಗಿ ಗಾಂಧಿ, ಕುವೆಂಪುರನ್ನು ಮರೆತುಬಿಟ್ಟಿದ್ದಾರೆ’ ಎಂದು. ಅದು ಪೂರ್ಣ ಸತ್ಯವಲ್ಲ. ಬಹುಶಃ ಗಾಂಧಿ ಜೊತೆ ಹೋದ ಕಾರಣಕ್ಕೆ ಮಾಡಬೇಕೆನಿಸಿದ ಕೆಲಸವನ್ನು ಗಟ್ಟಿತನದಿಂದ ಮಾಡಲು, ಕುವೆಂಪು ಜೊತೆ ಹೋದ ಕಾರಣಕ್ಕೆ ಪ್ರಕೃತಿಯನ್ನು ಪ್ರೀತಿಸಲೂ, ಆಲೋಚನೆಯ ಹರಿವನ್ನು ವಿಸ್ತರಿಸಿಕೊಳ್ಳಲೂ ಸಾಧ್ಯವಾಯಿತು ಎನ್ನುವುದು ಮಾತ್ರ ಖಂಡಿತಾ ಸತ್ಯ. ದಾರಿಯಲ್ಲಿ ಬರುತ್ತಾ ಊಟಕ್ಕೆ ನಿಲ್ಲಿಸಿದಾಗ ಸುಂಟರಗಾಳಿ ಎದ್ದಿತ್ತು. ಸಿಕ್ಕಿದ್ದನ್ನೆಲ್ಲಾ ಸೇರಿಸಿಕೊಂಡು ಸುರುಳಿಯಂತೆ ಸುತ್ತುತ್ತಿದ್ದ ಅದನ್ನು ನೋಡಿದ ನನಗೆನಾನೂ ಹೀಗೆ ಅಲ್ಲವೆ ಎನಿಸಿತು. ಹಕ್ಕಿ ಹುಚ್ಚಿನಲ್ಲಿ ನಾನೂ ಸಿಕ್ಕಿಕೊಂಡಿದ್ದೇನೆ, ಸುತ್ತುತ್ತಿದ್ದೇನೆ’ ಎನಿಸಿತು. ಗಣೇಶಗುಡಿಗೆ ಮತ್ತೊಮ್ಮೆ ಬರುವ ಬಯಕೆಯಿಂದ ಮನೆ ಸೇರಿದೆ.









0 Comments