ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲವ್ ಡಿಮಿನಿಷ್ ಆಗುತ್ತಿದೆಯಾ..??

ಲವ್ ಅಂಡ್ ದ ಲಾ ಆಫ್ ಡಿಮಿನಿಷಿಂಗ್
                     ಅಥವಾ
ಅರ್ಥಶಾಸ್ತ್ರಕ್ಕೂ, ಪ್ರೇಮ ಶಾಸ್ತ್ರಕ್ಕೂ ಇರುವ ಅನುಲೋಮ ಸಂಬಂಧವೇನು ?
ಅರ್ಥಶಾಸ್ತ್ರಕ್ಕೂ, ಪ್ರೇಮಶಾಸ್ತ್ರಕ್ಕೂ ಏನಾದರೂ ನಂಟಿದೆಯಾ?? ಎಂದು ಯೋಚಿಸಿದ್ದರ ಫಲವಾಗಿ ಇಂಥ ವಿತಂಡವಾದವೊಂದನ್ನು ನಿಮ್ಮ ಮುಂದಿಡಬೇಕಾದ ಉದ್ದಟತನ  ಮಾಡಬೇಕಾಯಿತು. ‘ಪ್ರೇಮಿ’ಗಳೆಲ್ಲ ಸೇರಿ ನನ್ನ ಮೇಲೆ ಮುಗಿಬಿದ್ದರೆ ಹುಲುಮಾನವನಾದ ನಾನು ಏನು ತಾನೆ ಮಾಡಲಾದೀತು ?
        *       *       *       *         *         *       *
‘ಪ್ರೀತಿಯೆಂಬುದು ಕಾಲಾನಂತರದಲ್ಲಿ ಇಳಿಮುಖವಾಗುತ್ತಾ ಹೋಗುತ್ತದಾ ?’ ಎಂಬ ಪ್ರಶ್ನೆ ಕೇಳಿದರೆ ಸಾಕು ಹಲವರ ಹುಬ್ಬೇರುತ್ತದೆ. ಕೆಲವರಿಗೆ ಕೋಪವೂ ಬಾರದಿರದು. ಆದರೆ ವಾಸ್ತವದಲ್ಲಿ ಸಂತೋಷ ನೀಡುವ ಯಾವುದೇ ಕಲ್ಪನೆ ‘ಇಳಿಮುಖ ಸೀಮಾಂತ ಉಪಯುಕ್ತತೆ’ ( Law of Diminishing Marginal Utility) ನಿಯಮಕ್ಕೆ ಬದ್ಧವಾಗಿರುತ್ತದೆ.
ಅರ್ಥಶಾಸ್ತ್ರ ವನ್ನು ಅಧ್ಯಯನ ಮಾಡಿರುವ ಪ್ರತಿಯೊಬ್ಬರಿಗೂ ಈ ನಿಯಮದ ಪರಿಚಯವಿದ್ದೇ ಇರುತ್ತದೆ.
ನಾವು ಬಳಸುವ ಪ್ರತಿ ವಸ್ತು ಮತ್ತು ಭಾವನೆಯೂ ನಮಗೆ ನೀಡುವ “ತೃಪ್ತಿ” ಅಥವಾ “ಸಂತೋಷ” ವನ್ನು ಅರ್ಥಶಾಸ್ತ್ರೀಯ ಭಾಷೆಯಲ್ಲಿ ” ಉಪಯುಕ್ತತೆ” (Utility) ಅಥವಾ ” ತುಷ್ಟಿಗುಣ” ಎಂದು ಕರೆಯುತ್ತಾರೆ. ಈ ಸಿದ್ದಾಂತವು ಮನುಷ್ಯನ ‘ಅನುಭೋಗೀಯ’ ಗುಣಕ್ಕೆ ಸಂಬಂದಿಸಿದ್ದು, ನಾವು ಬಳಸುವ ವಿವಿಧ ವಸ್ತುಗಳ ಬೆಲೆ ಮತ್ತು ಅವುಗಳ ಅವಶ್ಯಕತೆಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಡಿಮಿನಿಷಿಂಗ್ ಲಾ ಏನು ಹೇಳುತ್ತದೆ ?
ಒಂದು ಸರಳ ಉದಾಹರಣೆಯ ಮೂಲಕ “ಇಳಿಮುಖ ಸೀಮಾಂತ ತುಷ್ಟಿಗುಣ ನಿಯಮ” ವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ . ಇದು ಮಾವಿನ ಹಣ್ಣುಗಳ ಕಾಲವಲ್ಲವೆ ? ನಿಮ್ಮ ಮುಂದೆ ಹತ್ತು ಮಾವಿನ ಹಣ್ಣುಗಳಿವೆ ಎಂದಿಟ್ಟುಕೊಳ್ಳಿ. ಬಾಯಲ್ಲಿ ನೀರೂರಿಸುವ ಆ ಹಣ್ಣುಗಳಲ್ಲಿ ಒಂದೊಂದೇ ತಿನ್ನಲು ಪ್ರಾರಂಭಿಸುತ್ತೀರಿ. ಮೊದಲ ಮಾವಿನ ಹಣ್ಣು ತಿಂದಾಗ ಆದ ಸಂತೋಷ ಅಥವಾ ಅದರ ರುಚಿ ಎರಡನೆಯ ,ಮೂರನೆಯ ಮತ್ತು ನಾಲ್ಕನೆಯ ಹಣ್ಣುಗಳಲ್ಲಿ ಸಿಗುವುದಿಲ್ಲ.
ಕೊನೆಯ ಹಣ್ಣಿನಿಂದ ಅಂತೂ ಯಾವುದೇ ರುಚಿ ಸಿಗದಿದ್ದರೂ ಆಶ್ಚರ್ಯವಿಲ್ಲ. ಅಂದರೆ, ಪ್ರತಿ ಮಾವಿನ ಹಣ್ಣಿನಿಂದ ಸಿಗುವ ತೃಪ್ತಿಯನ್ನು ಅರ್ಥಶಾಸ್ತ್ರದ ಭಾಷೆಯಲ್ಲಿ “ಸೀಮಾಂತ ಉಪಯುಕ್ತತೆ” ಎನ್ನುತ್ತಾರೆ. ಮತ್ತು ಅದು ಪ್ರತಿ ಹಣ್ಣು ತಿಂದಾಗಲೂ ಇಳಿಮುಖವಾಗುತ್ತದೆ ಎಂಬುದು ಸತ್ಯ‌.
ಪ್ರೀತಿಯೂ ಥೇಟ್  ಹೀಗೇ ಎನ್ನಬಹುದೆ ?
ಹೌದು, ವರ್ಷಗಳು ಉರುಳಿದಂತೆ ಪ್ರೀತಿಯ “ಸೀಮಾಂತ ಖುಷಿ” ಅಥವಾ “Marginal Love” ಇಳಿಮುಖವಾಗುತ್ತಾ ಹೋಗುತ್ತದೆ ಎಂಬುದು ನಾವು ಒಪ್ಪದಿದ್ದರೂ ಸತ್ಯ. Faiz Ahmed Faiz ಎಂಬ ಕವಿ ತನ್ನ ಗಜಲ್ ಒಂದರಲ್ಲಿ ತನ್ನ ಪ್ರಿಯತಮೆಯನ್ನು ಕುರಿತು ಹೀಗೆ ಹೇಳುತ್ತಾನೆ ;
‘Do not ask of me, my love ;
That love I once had for you’
‘ಒಂದು ಕಾಲದಲ್ಲಿ ನಾನು ನಿನಗೆ ನೀಡುತ್ತಿದ್ದಷ್ಟೇ ಪ್ರೀತಿಯನ್ನು ಈಗಲೂ ನನ್ನಿಂದ ಕೇಳಬೇಡ ಗೆಳತಿ’  ಎಂಬರ್ಥ ಬರುವ ಈ ಕವಿಸಾಲುಗಳಲ್ಲಿ ಇರಬಹುದಾದ ಒಳಾರ್ಥವೇನು ? ಆ ಪದ್ಯದಲ್ಲೇ ಕವಿ ಮುಂದೆ ಹೀಗೆ ಹೇಳುತ್ತಾನೆ ;
” You are beautiful still my dear
  But I am helpless too “
ಇಲ್ಲಿ ಕವಿಗಿರುವ ಅಸಹಾಯಕತೆಯಾದರೂ ಏನು? ತನ್ನ ಪ್ರಿಯತಮೆಯಲ್ಲಿ ಸೌಂದರ್ಯ ಕಡಿಮೆಯಾಯಿತೇನೋ ಎಂಬ ಕಾರಣಕ್ಕೆ ಕವಿಯ ಪ್ರೀತಿ ಕಡಿಮೆಯಾಗಿದೆಯಾ ಎಂದು ಯೋಚಿಸಲು ಹೊರಟರೆ ಅದು ತಪ್ಪು. ಯೌವ್ವನದಿಂದ ಜಾರಿದ ಕವಿಯ ಮನಸ್ಸು ಮಾಗಿದೆ. ಸದಾ ಉಲ್ಲಸಿತ, ರೋಮಾಂಚನಗೊಳಿಸುವ, ರಸಿಕತೆಯನ್ನು ಉದ್ದೀಪನಗೊಳಿಸುವ ಅನುಭವಗಳಿಗೆ ಹಾತೊರೆಯುತ್ತ ಪ್ರೀತಿಯ ರಸಘಳಿಗೆಗಳಲ್ಲಿಯೇ ವ್ಯಯವಾಗುತ್ತಿದ್ದ ತನ್ನ ಶಕ್ತಿಯನ್ನು ಸಮಾಜದ ವಿಕೃತಿ ಮತ್ತು ಸಮಸ್ಯೆಗಳನ್ನು ನೋಡಲು ಮತ್ತು ಆ ಕಡೆ ಸ್ಪಂದಿಸಲು ಬಳಸುತ್ತೇನೆ ಎಂದು ಹೇಳಲು ಕವಿ ಈ ಮೇಲಿನ ಸಾಲುಗಳನ್ನು ಹೇಳುತ್ತಾನೆ.
ಒಂದು ಕಾಲದಲ್ಲಿ “Your eyes ! O your eyes were everything to me” ಎಂದು ಹೇಳುತ್ತಿದ್ದ ಪ್ರೇಮಿ ಈಗ “My eyes must turn to humanity suffering too” ಎನ್ನುತ್ತಾನೆ ಎಂಬುದರಲ್ಲಿ ಪ್ರೀತಿ ಹೇಗೆ ಬದಲಾಗಿದೆ ಮತ್ತು ಬದಲಾಗುವ ಗುಣ ಹೊಂದಿದೆ ಎಂಬುದನ್ನು ಅರಿಯಬೇಕಿದೆ.
ಇದೊಂದು ಉದಾಹರಣೆಯಷ್ಟೇ. ಸಮಾಜಮುಖಿಯಾಗಿ ಬದಲಾದ ವ್ಯಕ್ತಿಗೆ ಮೊದಲಿನ ಹಾಗೆಯೇ ಪ್ರೀತಿಯ ತುಡಿತ ಉಳಿದುಕೊಳ್ಳಲು ಸಾಧ್ಯವಾಗದಿರಬಹುದು. ಇದು ಒಂದು ವೈಯಕ್ತಿಕ ಕುಟುಂಬದ ನೆಲೆಯಲ್ಲೂ ನಡೆಯಲು ಸಾಧ್ಯವಿದೆ. ಪ್ರೀತಿಸಿದ ದಿನಗಳಲ್ಲಿ ಇಬ್ಬರೇ ಹಾಯಾಗಿದ್ದವರಿಗೆ ಮಕ್ಕಳು, ಅತ್ತೆ- ಮಾವ, ಸಂಸಾರ ಮುಂತಾದ ಜವಾಬ್ದಾರಿಗಳು ಹೆಚ್ಚಾದಂತೆ ಎಲ್ಲವನ್ನೂ ನಿಭಾಯಿಸುವ ಒತ್ತಡಗಳಲ್ಲಿ ಈ ಮೊದಲಿನಂತೆ ರೋಮ್ಯಾಂಟಿಕ್ ಆಗಿ ಇರಲು ಸಾಧ್ಯವಾಗದಿರಬಹುದು.
ಆ ಅಂಶವನ್ನೇ ಹೇಳಿದ್ದು “ಇಳಿಮುಖ ಸೀಮಾಂತ ತುಷ್ಟಿಗುಣ” ನಿಯಮದಲ್ಲಿ ಹೇಗೆ ಪ್ರತಿ ಹಣ್ಣಿನಿಂದ ಸಿಗುವ ಸೀಮಾಂತ ತೃಪ್ತಿ‌ ಇಳಿಮುಖವಾಗುತ್ತಾ ಹೋಗುತ್ತದೋ ಅದೇ ರೀತಿ ಪ್ರೀತಿಯ ಸೆಳೆತ, ಕೇವಲ ಆಕರ್ಷಣೆ ಗೆ ಸೀಮಿತವಾಗಿದ್ದ ಪ್ರೀತಿ, ಬೇರೆಲ್ಲಾ ಜಂಜಡಗಳ ನಡುವೆ ಎಲ್ಲೋ ಒಂದು ಕಡೆ  ಇಳಿಮುಖವಾಗುತ್ತದೆ ಎಂಬುದು ಸತ್ಯ.
ಅದರರ್ಥ ಪ್ರೀತಿಯ ತೀವ್ರತೆ ಅಥವಾ ಬದ್ಧತೆ ಕುಂಠಿತವಾಗುತ್ತದೆ ಎಂಬುದಲ್ಲ. ಕೇವಲ ತೋರ್ಪಡಿಕೆಯ ಪ್ರೀತಿಯ ಕುರುಹುಗಳ ಅಬ್ಬರ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ. ಸೆಲೆಬ್ರೇಷನ್ ಗಳು, ಪಾರ್ಟಿಗಳು, ಗಿಫ್ಟ್ ಗಳು, ಲವ್ ಲೆಟರ್ ಗಳು, ಸರ್ ಪ್ರೈಸ್ ಗಳು ಹೀಗೆ ಯೌವ್ವನದ ಪ್ರೀತಿಯ ಆಟಾಟೋಪಗಳೆಲ್ಲ ನಿಧಾನಕ್ಕೆ ಇಲ್ಲದಂತಾಗುತ್ತದೆ .
ಥೇಟ್ ತಿನ್ನುವ ಮಾವಿನ ಹಣ್ಣುಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಾಗ ಕಡಿಮೆಯಾಗುವ ಪ್ರತಿ ಹಣ್ಣಿನಿಂದ ಸಿಗುವ ಆನಂದದಂತೆಯೇ, ದಿನಕಳೆದಂತೆ ಪ್ರೀತಿಯ ಸೀಮಾಂತ ಖುಷಿಯೂ ಇಳಿಮುಖವಾಗುತ್ತಾ ಹೋಗುತ್ತದೆ. ಆದರೆ ಇಲ್ಲಿ ನೆನಪಿಡಬೇಕಾದ ಅಂಶ ಒಂದೇ ಬಾರಿಗೆ ಅನೇಕ ಮಾವಿನಹಣ್ಣುಗಳನ್ನು ತಿನ್ನಲು ಹೋದಾಗ ಮಾತ್ರ ಕೊನೆಕೊನೆಗೆ ಮಾವಿನ ಹಣ್ಣುಗಳು ಅಷ್ಟಾಗಿ ರುಚಿಸುವುದಿಲ್ಲ ಅಷ್ಟೇ. ಆದರೆ ಮಾವಿನ ಹಣ್ಣಿನ ಮೇಲೆಯೇ ನಮಗೆ ಆಸೆ ಹೋಗಿರುತ್ತದೆ ಎಂಬುದಲ್ಲ.
ಆ ಮಾವಿನ ಹಣ್ಣನ್ನು ನೀವು ಪ್ರೀತಿ ಎಂದು ತಿಳಿದುಕೊಳ್ಳಬೇಕಷ್ಟೇ !
ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕಾದರೆ ಬೇಂದ್ರೆಯವರ ;
“ನಾನು ಬಡವ ,
 ನೀನು ಬಡವಿ
 ‎ಒಲವೆ ನಮ್ಮ ಬದುಕು
ಬಳಸಿಕೊಂಡವದನೆ ನಾವು ಅದಕು ಇದಕು ಎದಕು “
ಎನ್ನುವಂಥ ಸ್ಥಾಯಿಭಾವದ ಪ್ರೀತಿ ನಮ್ಮಲ್ಲಿ ಬೇರೂರಿದಾಗ ಮಾತ್ರ ಪ್ರೀತಿ ಎಂಬುದು ” ಲಾ ಆಫ್ ಡಿಮಿನಿಷಿಂಗ್ ಯುಟಿಲಿಟಿಯನ್ನು” ಮೀರಿ ನಿಲ್ಲಬಲ್ಲದೇನೋ !

‍ಲೇಖಕರು Avadhi

17 July, 2018

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading