ಹೇಮಲತಾ
ಲಜ್ಜೆ -ಹೆಣ್ಣನ್ನು ಮತ್ತಷ್ಟು ಹೆಣ್ಣಾಗಿಸೋ ಆಭರಣ
ಲಜ್ಜೆ- ಕುಟುಂಬ ಒಂದರ ಸಾಮಾಜಿಕ ಆಸ್ತಿ
ಲಜ್ಜೆ – ಸಮಾಜದ ಸ್ವಾಸ್ಥ್ಯ ;ದೇಶದ ಅರೋಗ್ಯ
ಎಲ್ಲ ಸರಿ ಇದ್ದರೆ ಎಲ್ಲವು ಚಂದ ಆದರೆ…
ರಂಗವರ್ತುಲ ತಂಡ ಸಾದರಪಡಿಸಿ, ರಂಗಶಂಕರದಲ್ಲಿ ಪ್ರದರ್ಶನವಾಗುತ್ತಿರುವ ಚೇತನತೀರ್ಥಹಳ್ಳಿಯವರು ರಚಿಸಿ ನಿತೀಶ್ ಶ್ರೀಧರ್ ನಿರ್ದೇಶಿಸಿರುವ ನಾಟಕ ಲಜ್ಜೆ ಎಲ್ಲಾ ಸರಿ ಇರದುದರ ಕುರಿತು ಮಾತಾಡುತ್ತದೆ .. ಪಾತ್ರವೊಂದು ಹೇಳುವಂತೆ ಲಜ್ಜೆಮರೆತವರ ಕತೆಯನ್ನು ಲಜ್ಜೆಗೆಟ್ಟವರ ಎದುರು ಲಜ್ಜೆಬಿಟ್ಟು ಹೇಳುವ ಪ್ರಯತ್ನ .
ದೇಶವನ್ನೇ ನಡುಗಿಸಿದ, ಪ್ರಜ್ಞಾವಂತರ ನಿದ್ದೆಗೆಡಿಸಿದ ಅತ್ಯಾಚಾರ ಪ್ರಕರಣಗಳ ನಂತರ ಇತ್ತೀಚೆಗೆ internetನಲ್ಲಿ video ತುಣುಕೊಂದು ಹರಿದಾಡುತ್ತಿತ್ತು.’ಅತ್ಯಾಚಾರಕ್ಕೊಳಗಾದ ಹೆಣ್ಣನ್ನು ಸ್ವೀಕರಿಸಿ ಮನೆ ತುಂಬಿಸಿಕೊಳ್ಳುವಿರ?’ ಎನ್ನುವ ಸಮೀಕ್ಷೆ ಅದು . ನಮ್ಮ ಪೋಷಕರ ಕಾಲದವರು ಸಾರಾಸಗಟಾಗಿ ನಿರ್ಭಿಡೆಯಿಂದ ಇಲ್ಲ, ಸಾಧ್ಯವಿಲ್ಲ ಎಂದು ಬಿಟ್ಟರು. ಕಾರಣ ಕೇಳಿದರೆ ಯಾವುದೇ ಹಿಂಜರಿಕೆ ಇಲ್ಲದೆ ನಮಗಿಷ್ಟ ಇಲ್ಲ ಅದಕ್ಕೆ ಎಂದರು .
ನಮ್ಮ ಪೀಳಿಗೆಯ ಹುಡುಗರಲವರನ್ನು ಕೇಳಿದಾಗ ‘ಪಾಪ ಅವಳದೇನು ತಪ್ಪಿತ್ತು’ ಎನ್ನುವಂತಹ ಸಹಾನುಭೂತಿ ವ್ಯಕ್ತಪಡಿಸಿದರು. ಯಾರೋ ಒಬ್ಬರೋ ಇಬ್ಬರೋ ದಿಟ್ಟವಾಗಿ ಯಾಕಾಗಬಾರದು ಸ್ವೀಕರಿಸುತ್ತೇನೆ ‘ ಎಂದರು . ಅದರಲ್ಲೂ ಒಬ್ಬ ‘ಸ್ವೀಕರಿಸುತ್ತೇನೆ ,ಅವಳ ಮೇಲೆ ಪ್ರೀತಿಯುಂಟಾದರೆ’ ಎನ್ನುವ ದಿಸ್ಕ್ಲೈಮೆರ್ ಹಾಕಿ ಜಾಣತನದ ಉತ್ತರ ಕೊಟ್ಟ .
ಬೇಡ ಎಂದರು ಮೂಡಿದ ಪ್ರಶ್ನೆ- ಮೈಕ್ ಕ್ಯಾಮೆರಾ ಹಿಡಿಯದೆಯಿದ್ದಾಗ ,ಹ್ಞೂ೦ ಎಂದ ಹುಡುಗರ ಸ್ವೀಕೃತಿ , ವಾಸ್ತವವಾಗಿ ಮನೆ ಕುಟುಂಬದ ಹಿನ್ನಲೆಯಲ್ಲಿ ಎಷ್ಟರ ಮಟ್ಟಿಗೆ ನೆರವೇರಬಹುದು.
ರೋಡಿನಲ್ಲಿ ಗಾಡಿ ಚಲಾಯಿಸುವಾಗ ಆದ ಆಕ್ಸಿಡೆಂಟ್ ನಲ್ಲಿ ನಮ್ಮ ತಪ್ಪೇ ಇರಬೇಕೆಂದೇನು ಇಲ್ಲ . ಎದುರು ಬರುತ್ತಿದ್ದ ಚಾಲಕನ ತಪ್ಪಿಗೂ ಅನಾಹುತ ಸಂಭವಿಸಬಹುದು … ಆದರೆ ಅದರಿಂದ ಹಾನಿ ನಮಗಾದರೆ ?
ಪಾಶ್ಚಿಮಾತ್ಯ ಸಂಸ್ಕೃತಿಯ ಓರೆಕೋರೆಗಳನ್ನ ಎತ್ತಾಡುತ್ತ ಗೊರಕೆ ಹೊಡೆದರು ಡೈವೋರ್ಸ್ ಕೊಡ್ತಾರೆ, ಬುದ್ದಿ ಕಲಿಯಲಿ ಅಂತ ಒಂದೇಟು ಹಾಕಿದರೆ complaint ಮಾಡ್ತಾರೆ,ಬಟ್ಟೆ ಬದಲಿಸಿದಂತೆ ಸಂಬಂಧಗಳನ್ನು ಬದಲಾಯಿಸುತ್ತಾರೆ ಅಂತೆಲ್ಲ ವರ್ಣರಂಜಿತವಾಗಿ ವಿಡಂಬಿಸುತ್ತ ಗೇಲಿಮಾಡುವ ನಾವು , ಹೆಣ್ಣನ್ನು ಪೂಜಿಸುತ್ತೇವೆ ಅಂತೆಲ್ಲಾ ನಮ್ಮ ಬೆನ್ನು ನಾವೇ ತಟ್ಟಿಕೊಂಡರು ಬಡಬಡಿಸಿದರು ಅವಳನ್ನು ದೇಹ,ಶೀಲ , ಪರಿಶುದ್ದಿ ಹೊರತು ಪಡಿಸಿ ಮನುಷ್ಯಳಂತೆ , ಒಂದು ಜೀವಿಯಂತೆ ಪರಿಗಣಿಸಿದ್ದೇವ ? ಹೆಣ್ಣು ಪೂಜೆಗೆ ಅರ್ಹಳಾದರು ಫೋಟೋದಲ್ಲಿ ಕೂತು ಪೂಜೆ ಸ್ವೀಕರಿಸಬೇಕು ಅಂತ ಅಪೇಕ್ಷಿಸುವುದಕ್ಕಿಂತ ಪ್ರೀತಿಸಲ್ಪಡಬೇಕು, ಘನತೆಯಲ್ಲಿ ಸ್ವಾತಂತ್ರ್ಯದಲ್ಲಿ ಬದುಕಬೇಕು ಎಂದೇ ಹೆಚ್ಚು ಅಪೇಕ್ಷಿಸುತ್ತಾಳೆ ನಿಜ ಅಲ್ಲವ?. ಕಾಮುಕನಿಂದಾಗುವ ದೈಹಿಕ ಹಲ್ಲೆ ಮಾತ್ರ ಅತ್ಯಾಚಾರವಾಗುತ್ತದ ಅಥವ ಮಾನಸಿಕ, ಸಮಾಜಿಕ, ಆರ್ಥಿಕ ಹಂತದಲ್ಲಿ ನಡೆಯುವ ಶೋಷಣೆಗಳು ಅತ್ಯಾಚಾರವಾಗುವುದಿಲ್ಲವ? ….ಈ ತರದ ಪ್ರಶ್ನೆ ಜಿಜ್ಞಾಸೆಗಳಿರುವಾಗ ಇಂದಿನ ಸಮಕಾಲೀನ ಸಮಸ್ಯೆ ಅತ್ಯಾಚಾರದ ಹಿನ್ನಲೆಯನ್ನಿಟ್ಟುಕೊಂಡು ಲಜ್ಜೆ ನಾಟಕ ಬೆಳೆಯುತ್ತದೆ ..
ಏರು ವಯಸಿನ ನೃತ್ಯ ಶಿಕ್ಷಕಿ(ಸುಂದರ ಶ್ರೀ ) ಐತಿಹಾಸಿಕ ಪಾತ್ರ ಉತ್ಪಲವರ್ಣಳ ಬಗ್ಗೆ ರೂಪಿಸಲ್ಲಿಚ್ಚಿಸುವ ಪ್ರಾಜೆಕ್ಟ್ ಮುಖ್ಯ ಭೂಮಿಕೆಯ ಕತೆ. ತನ್ನ, ಮಗಳ ಮತ್ತು ನೃತ್ಯ ಕಲಿಯಲು ಬರುವ ಹುಡುಗಿಯರ ಕತೆಗಳ ಜೊತೆಗೆ ಪುರಾಣ, ಇತಿಹಾಸದ ಕತೆಗಳು ವರ್ತಮಾನದಲ್ಲಿ ಜೀಕುತ್ತ ಹೆಣ್ಣುಗಳ ಮೇಲಾಗುವ ದೌರ್ಜನ್ಯ, ಕ್ರೌರ್ಯಗಳನ್ನು ಬೆಳಕಿಗೆ ಒಡ್ಡುತ್ತ ನಾಟಕ ಸಾಗುತ್ತದೆಯಾದರು ಇದು ಪಕ್ಕ feminist ನಾಟಕವೇನಲ್ಲ ….
ಅಹಲ್ಯೆಯದು ಆತ್ಮವಂಚನೆ ಎನ್ನುವುದರಿಂದಲೇ ನಾಟಕ ಶುರುವಾಗುತ್ತದೆ. ಸ್ವರ್ಗದ ಸೀಟು ಗಿಟ್ಟಿಸುವ ಮಹತ್ವಾಕಾಂಕ್ಷೆಯ ಕಸರತ್ತಿನಲ್ಲಿ ಗೌತಮ ಮಹರ್ಷಿ ಮಗ್ನನಾಗಿ, ಹೆಂಡತಿಗೆ ಗಂಡನಾಗಿ ಅಲಭ್ಯನಾಗಿದ್ದಾಗ ಅಹಲ್ಯೆ ಮತ್ತು ಇಂದ್ರನ ನಡುವೆ ಸಹಜವಾಗಿ ಮುಂದಿನದೆಲ್ಲ ನಡೆದರೂ ಪುರಾಣ ಮತ್ತು ಲೋಕ ಅದಕ್ಕೆ ಇಂದ್ರ ವೇಷಕಟ್ಟಿ ವಂಚಿಸಿದ ಎನ್ನುವ ಸಮಜಾಯಿಸಿ ಕೊಟ್ಟು, ಇಂದ್ರನಿಗೆ ಮೈ ಎಲ್ಲ ಕಣ್ಣು ಮೂಡಿದ ಶಾಪವಿಟ್ಟು , ಅಹಲ್ಯೆಯನ್ನು ರಾಮನ ಕಾಲ ಕೆಳಗಿನ ಕಲ್ಲಾಗಿಸಿ ಪಾಪ ತೊಳೆದು ಪತಿವ್ರತೆಯರ ಸಾಲಿಗೆ ಸೇರಿಸಿದರು ಎನ್ನುವಂತಹ ಪರಿಕಲ್ಪನೆ ಬಿಂಬಿಸುತ್ತದೆ .
ದೈಹಿಕ ಅತ್ಯಾಚಾರಕ್ಕೆ ದೇಹದ ಮೇಲೆ ಸಾಕ್ಷಿಗಳು ಉಳಿಯುತ್ತವೆ ,ಆದರೆ ಮಾನಸಿಕ ಅತ್ಯಾಚಾರಕ್ಕೆ ? ಸಾಕ್ಷಿಗಳನ್ನು ಎಲ್ಲಿಂದ ತರಲಿ ,ಸಂಸಾರದಲ್ಲಿ ಇದನ್ನು ಅತ್ಯಾಚಾರ ಅಂತ ಯಾರು ಒಪ್ಪುತ್ತಾರೆ, ಒಪ್ಪಿದರು ಪರಿಹಾರವೇನು?
ನೋವನ್ನೆಲ್ಲ ಕುಣಿದು ಕುಣಿದು ಕೊಂದೆ, ನಟರಾಜನ ಎದುರು ..
ಹೆಣ್ಣಿಗೆ ಸೌಂದರ್ಯವೇ ಸಂದೇಹವನ್ನೂ ಸೃಷ್ಟಿಸುವ ಶತ್ರು, ಬುದ್ದಿವಂತಿಕೆಯು ಒಪ್ಪಲಾರದ ವೈರಿ ;
ನನಗೆ ಬೆನ್ನು ಉಜ್ಜಿದ ಅಪ್ಪನ ಸ್ಪರ್ಶ, ಕೈ ಹಿಡಿದು ರಸ್ತೆ ದಾಟಿಸಿದ ಗೆಳೆಯನ ಸ್ಪರ್ಶದಂತ ಹಿತವಾದ ಬೆಚ್ಚನೆಯ ಸ್ಪರ್ಶ ಬೇಕು ಗಂಡಸರಿಂದ …
ಯಾವುದೇ ಕಾರಣಗಳಿಲ್ಲದೆ ಪರಿಪೂರ್ಣ ಪ್ರೀತಿಸುವ ಗಂಡು ಇದುವರೆಗೂ ಸಿಕ್ಕಿಲ್ಲ
ಗಂಡಸನ್ನು ದ್ವೇಷಿಸುವುದಿಲ್ಲ ಆದರೆ ಅವನ ಮೇಲೆ ನಂಬಿಕೆಯೂ ಉಳಿದಿಲ್ಲ…
ಈ ತರಹದ ಸೂಕ್ಷ ಸಂವೇದನೆಯ ಸಂಭಾಷಣೆಗಳು ನಾಟಕದ್ದುದ್ದಕ್ಕು ಸಿಗುತ್ತವೆ .
ಜೋಗುತ್ತಿ ಹಾಗೆ ಅಲಿತೇನೆ ,ವಿಳಾಸ ಕೇಳುವುದಾದರೆ ಮನೆ ಮನೆಯ ಹೆಣ್ಣುಗಳ ಕಣ್ಣಲ್ಲಿ ಹಣಕಿ ಎನ್ನುತದೆ ಸೂತ್ರಧಾರೀ ಹಾಡು .
ತುಂಬುವ ಮೊದಲೆ ಪಾದಗಳಲಿ ಹೆಜ್ಜೆ ಹರಿದು ಚೆಲ್ಲಿತು ಅಪಸ್ವರದಲಿ ಗೆಜ್ಜೆ…,ಇನ್ನಾದರೂ ಹುಡುಕಿಕೊಡಿರೆನ್ನ ದನಿಯ ಗೆಜ್ಜೆ ಇರಲಿಯದರೊಳಗೆ ನೀವು ಕಿತ್ತುಕೊಂಡ “ಲಜ್ಜೆ”
ಎಂದು ಮಾರ್ಧನಿಸುತ್ತದೆ ಹೆಣ್ಣುಗಳ ಕೂಗು . ಚೇತನಾರ ಶಕ್ತಿಯೇ ಅದು , ಇಡಿಯಲ್ಲಿ ಹಿಡಿಯನ್ನು ಕಟ್ಟಿಕೊಡುವ, ಪ್ರತಿಪದವನ್ನು ಕಾವ್ಯವಾಗಿಸುವ ಕಸುವು .
ಇತಿಹಾಸದ ಸೌಂದರ್ಯದ ದುರಂತ ಕತೆ ಆಮ್ರಪಲ್ಲಿ , ಒಪ್ಪಿಗೆ ಇಲ್ಲದ ೨೦ ವರ್ಷಕ್ಕೆ ಚಿಕ್ಕವಳನ್ನು ಬಲವಂತಿಸಿ ಮದುವೆಯಾಗಿ ಸಹಮತವಿಲ್ಲದೆ , ಒಮ್ಮತ್ತವಿಲ್ಲದೆ ,ಸ್ಪಂದನೆಯಿಲ್ಲದೆ ನಡೆದ ಸಂಸಾರದಲ್ಲಿ ಗಂಡನೇ ಅತ್ಯಾಚಾರಿಯಂತೆನಿಸುವ ಶಿಕ್ಷಕಿ ಕತೆ ,ಚಿಕ್ಕ ವಯಸಿಗೆ ನಿರ್ಗತಿಕಳಾಗಿ ಬೀದಿಗೆ ಬಿದ್ದು ಒಬ್ಬ ಗಂಡಸಿನಿಂದ ಬಳಸಲ್ಪಟ್ಟು ನಂತರ ಅನಿವಾರ್ಯವಾಗಿ ಅದನ್ನೇ ದಂಧೆ ಮಾಡಿಕೊಂಡ ದುರಂತದ ದಿಲ್ ,ಹೆಣ್ಣುಭ್ರೂಣ ಹತ್ಯೆಗೆ ತುತ್ತಾದ ಯಶು , ಗಲಭೆಯಲ್ಲಿ ದೈಹಿಕ ಮಾನಸಿಕ ಹಲ್ಲೆಗೊಳಗಾಗುವಾಗಲು ಜೊತೆಗಿದ್ದವರು ಕೈಕಟ್ಟಿ ನಿಂತು ಭಾರತವನ್ನು ಸಾಯಿಸಿದ ಸಾಮಾಜಿಕ ಹೋರಾಟಗಾರ್ತಿಯಾ ಕತೆ ,ಪಾಠ ಕಲಿಸುವ ಹೆಸರಾಂತ ವ್ಯಕ್ತಿಯಿಂದಲೇ ಪ್ರೇಮದ ಹೆಸರಲ್ಲಿ ದೈಹಿಕ ತೃಷೆಗೆ, ವಂಚನೆಗೊಳಗಾದ ಹುಡುಗಿಯ ಕತೆ, ಆಶ್ರಮದಲ್ಲಿ ಗುರುವಿನಿಂದಲೇ ಸಲಿಂಗ ಕಾಮಕ್ಕೆ ಈಡಾದ ಯುವಕ ಹೀಗೆ ಹಲವು ಸ್ಥರಗಳ ಬಲಾತ್ಕಾರ, ದುರಂತಗಳ ಕತೆಯಿದೆ…
ಒಬ್ಬರ ಕತೆಯನ್ನು ಚಿತ್ರಿಸುವಾಗ ಮತ್ತೆಲ್ಲ ಪಾತ್ರಗಳು ಕತೆಯೊಳಗೆ ಒಂದಾಗುತ್ತವೆ , ಮಾತುಗಳು ಕವಿತೆಯಾಗುತ್ತವೆ , ಕವಿತೆ ಹಾಡಾಗುತ್ತದೆ ,ಹಾಡು ಸಂಗೀತವಾಗುತ್ತದೆ , ಸಂಗೀತವೆ ಸಂಭಾಷಣೆಯಾಗುತ್ತದೆ .ಇಡಿ ನಾಟಕ ಕಾವ್ಯವಾಗುತ್ತದೆ. ಸೊಗಸಾದ ಕಾವ್ಯ ರೂಪಕವಾಗುತ್ತದೆ .
ಮುದ್ದು ಮುದ್ದಾದ ಹುಡುಗಿಯರು ,ಮುದ್ದಾಗಿ ಶೃಂಗರಿಸಿಕೊಂಡು ನೃತ್ಯುಸುತ್ತಲೇ ನಗುವಾಗುತ್ತಾರೆ ,ಕಣ್ಣರಳಿಸುತ್ತಾರೆ, ಕುಣಿಯುತ್ತಾರೆ , ನಲಿಯುತ್ತಾರೆ , ಕಣ್ಣೀರಾಗುತ್ತಾರೆ ನರಳುತ್ತಾರೆ ,ಆಕ್ರೋಶದಲ್ಲಿ ಬಡ ಬಡಿಸುತ್ತಾರೆ, ಮತ್ತೆ ಅರಳುತ್ತಾರೆ ;ಅದರಲ್ಲೂ ಉತ್ಪಲವರ್ಣ ಮತ್ತು ಆಮ್ರಪಲ್ಲಿಯಾ ವರ್ಣನೆಯ ಸಂದರ್ಭದಲ್ಲಿ ಸುಂದರವಾದ ನೃತ್ಯ ರೂಪಕ ನೋಡಿದ ಹಿತಾನುಭವವಾಗುತ್ತದೆ. ಭರತನಾಟ್ಯದ ಪ್ರಕಾರವನ್ನು ಕತೆಯ ಭಾಗವಾಗಿ ಸಮರ್ಥವಾಗಿ ಅಳವಡಿಸಿಕೊಳ್ಳಲಾಗಿದೆ. ರಾಜು ಹೊಸಕೋಟೆ ಮತ್ತು ಸಿಂಚನರ ಲೈವ್ ಮ್ಯೂಸಿಕ್ ಕೂಡ ಕತೆಯ ಭಾಗವೇ ಆಗಿ ಹೋಗಿದೆ .
ನೊಂದ ಹೆಣ್ಣುಗಳ ನಡುವೆ ನಿಮ್ಮ ಸಹಾನುಭೂತಿ ಅವಳಿಗೆ ಬೇಕಿಲ್ಲ, ಏನು ಮುಳುಗಿ ಹೋಗಿಲ್ಲ ಎನ್ನುತ್ತಾ ಆತ್ಮಸ್ತೈರ್ಯ ತುಂಬುವ ದಿಲ್ , ಹೆಣ್ಣುಮಕ್ಕಳು ತಳೆಯಬೇಕಾದ ನಿಲುವಿನ ಸೂಚನೆ ಕೊಡುತ್ತಾಳೆ. rape attempt ಗೆ ಒಳಗಾದ ಅವಳನ್ನು ಪ್ರಿಯಕರ ಆ ವಿಷಯ ನನ್ನಿಂದ ಮುಚ್ಚಿಟ್ಟೆ ಎನ್ನುವಂತಹ ಪುರುಷದೋರಣೆ ತೋರಿಸಿದಾಗ, ಹುಚ್ಚು ನಾಯಿ ಕಡಿದಿದ್ದು ನೀನು ನನಗೆ
ಹೇಳಿದ್ದ ,ಸರ್ಟಿಫಿಕೇಟ್ ಬೇಕಾ ಎಂದು ಗಟ್ಟಿಯಾಗಿ ಪ್ರಶ್ನಿಸಿ ಹಿಮ್ಮೆಟ್ಟಿಸುವಲ್ಲಿ ಅತ್ಯಾಚರಕ್ಕು , ಕನ್ಯತ್ವ ಕಳೆದುಕೊಳ್ಳುವ ವಿಷಯಕ್ಕೂ ಎಷ್ಟರ ಮಟ್ಟಿಗಿನ ಮಹತ್ವ ನೀಡಬೇಕು ಎನ್ನುವ ಪ್ರತಿಪಾದನೆ ಇದೆ .
ಅವನು ಪರಿವರ್ತಿತನಾಗಿ ತೂ ಬೋಸುಡಿ ಮಕ್ಕಳ ಸರ್ಟಿಫಿಕೇಟ್ ಬೇಕಾ ಎಂದು ಸಮಾಜವನ್ನು ಪ್ರಶ್ನಿಸುವಲ್ಲಿ ,ಸಭಾಂಗಣದಲ್ಲಿ ಮೊಳಗುವ ಕರಾತಾಡನ ನಾಟಕ ಸೃಷ್ಟಿಸಿದ ಸಕಾರಾತ್ಮಕ ಧೋರಣೆಗೆ ಉದಾಹರಣೆ .
ಮನೆಯಲ್ಲಿ ಮಗಳನ್ನು ಗಂಡನ ಒಬ್ಬನೇ ಸಮ್ಮುಖದಲ್ಲಿ ಬಿಟ್ಟು ಬಂದಿದ್ದೇನೆ ಅದಕ್ಕಾಗೆ ಭಯ ಎಂದು ತಲ್ಲಣಿಸಿ ಹೊರಡುವ ಯಶು ,ಗಂಡಸರು ಸೃಷ್ಟಿಸಿರುವ ಭಯದಲ್ಲಿ ಮನೆಯು ಸುರಕ್ಷಿತವಾಗಿ ಉಳಿಯದಂತ ಅಭದ್ರ ತಾಣವಾಗಿ ಮಾರ್ಪಟ್ಟಿರುವುದ ತೋರಿಸುತ್ತದೆ
ಒಮ್ಮೆ ಉಂಡು ತೇಗಿದ ಗಂಡಸು ಸುಮ್ಮನೆ ಬಿಡುತ್ತಿರಲಿಲ್ಲ, ಬಿಟ್ಟಿಯಾಗಿಬಿಡುವ ಬದಲು ಬಿಕರಿಗಿಟ್ಟೆ ಎಂದೆನ್ನುವ ದಿಲ್ ಸಮಾಜದ ಕೊಳೆತ ಮನಸ್ಥಿತಿ ಮತ್ತು ಹೆಣ್ಣಿನ ಅಸಹಾಯಕತೆಯ ಬಗ್ಗೆ ಹೇಳುತ್ತಾಳೆ .
ಇಂತ ಸೂಕ್ಷ ವಿಷಯಗಳನ್ನು ಒಳಗೊಂಡ ನಾಟಕ ಒಂದು ಹಂತದಲ್ಲಿ ಗಾಢ ವಿಷಾದವನ್ನು , ಕಹಿಯನ್ನು ಹುಟ್ಟಿಸಿಬಿಡುತ್ತದೆ. ಅಲ್ಲಲ್ಲಿ ಹಾಸ್ಯಕ್ಕೆ ಅವಕಾಶವಿದ್ದಿದ್ದರೆ ವಿಪರೀತ ಸೀರಿಯಸ್ ಎನಿಸಿಕೊಳ್ಳುವ ದಿಗಿಲು ಬಗೆಹರಿದ್ದಿತ್ತು .ಕೆಲವರು ಒಂದೆರಡು ಬಾರಿ ಡೈಲಾಗ್ ಮರೆತರು ಮೊದಲ ಪ್ರಯತ್ನವಾದ್ದರಿಂದ ನಿರ್ಲಕ್ಷಿಸಬಹುದು . ಅಹಲ್ಯೆಯ ಮತ್ತು ಆಶ್ರಮದ್ದಲಿನ ಕತೆ ಮುಖ್ಯಕತೆಗೆ ಅಷ್ಟೇನೂ ಪ್ರಸ್ತುತವಿರಲಿಲ್ಲವೇನೋ .
ಯಾಕಿಷ್ಟು ಕಹಿ ಗಂಡಸರ ಮೇಲೆ, ಎಲ್ಲರು ಹಾಗಿರುವುದಿಲ್ಲವಲ್ಲ ಎನ್ನುವುದು ಕೆಲವರ ಕಳಕಳಿ . ಕನ್ಯತ್ವವನ್ನು ಕನ್ಯೆಗೆ ಸಮೀಕರಿಸಿ ನೋಡುವ ಸಂಸ್ಕೃತಿಯ ಪರಿಪಾಟದಲ್ಲಿ ಒಂದಷ್ಟು ಹಿಂದೆ ಹೋಗಿ ಗಮನಿಸಿದರೆ ನಾಯಿ ಮುಟ್ಟಿದ ರೊಟ್ಟಿ ನಾಯಿಗೆ ಮೀಸಲು ಎನ್ನುತ್ತಾ ನಿಂತ ಸಿನಿಮಾದಲ್ಲಿನ ನಾಯಕಿಯರು, ವಿಷ ಸೇವಿಸಿ/ನೇಣು ಹಾಕಿಕೊಂಡು ಪ್ರಾಣ ಬಿಟ್ಟವರು , ಒಂಟಿಯಾಗಿಯೇ ಬದುಕಬೇಕಾದವರು ಕಾಣಸಿಗುತ್ತಾರೆ .
ನಾಟಕವೇ ದ್ವನಿಸುವಂತೆ ಹೊನ್ನು , ಮಣ್ಣಿಗಾಗಿ ನಡೆದ ಯುದ್ಧದಲ್ಲಿ, ಯುದ್ಧ ನಡೆಸಿದವರನ್ನು ದುಷ್ಟರನ್ನಾಗಿಸಿದರೆ ಹೆಣ್ಣಿಗಾಗಿ ನಡೆದ ಹೋರಾಟಗಳಲ್ಲಿ ಹೆಣ್ಣನ್ನೇ ದೂಷಿಸಿದರು.ಹೆಣ್ಣೇ ಹುಷಾರಲ್ಲಿರಬೇಕಿತ್ತು ಎನ್ನುವ ಪಂಚಾಯ್ತಿಗಳು ,ಹೆಣ್ಣನ್ನೇ ಅನುಮಾನಿಸುವ ವಾತಾವರಣ ಈಗಲೂ ಕಂಡು ಬರುತ್ತದೆ .ಕಾಲ ಎಷ್ಟೇ ಬದಲಾದರು ಎಲ್ಲರು ಬದಲಾಗಿಲ್ಲ . ಲಜ್ಜೆ ಪರಿಹಾರವಿಲ್ಲದ ಅನಿವಾರ್ಯತೆ ಅದಾಗ ಚಕ್ರವ್ಯೂಹದಂತೆ ಸಮಸ್ಯೆಗಳು ಒಂದರಿಂದ ಒಂದು ಉಲ್ಬಣವಾಗುತ್ತಲೇ ಹೋಗುತ್ತವೆ.ಬದುಕು ಹಾಳಾಗುತ್ತದೆ ಎನ್ನುವ ಮರ್ಯಾದೆಯ ಅಂಜಿಕೆ ಶೋಷಣೆಗೆ ಮತ್ತಷ್ಟು ಇಂಬು ಸೃಷ್ಟಿಸಿ, ಮೂಲ ಕಾರಣವೂ ಆಗಿದೆ. ಪರಿಹಾರವಿಲ್ಲದ ಸಮಸ್ಯೆಗಳೇ ಮತ್ತಷ್ಟು ಸಮಸ್ಯೆಗಳ ಮೂಲ . ಆ ನಿಟ್ಟಿನಲ್ಲಿ ಕಹಿ ಕಟು ಸತ್ಯವಾಗಿದೆ .
ಎಲ್ಲಾ ಪಾತ್ರಧಾರಿಗಳು ಅಚ್ಚಕಟ್ಟಾಗಿ ನಟಿಸಿದ್ದಾರೆ ಅದರಲ್ಲೂ ದಿಲ್ ಪಾತ್ರವನ್ನು ಗಟ್ಟಿತನದೊಂದಿಗೆ ನಿಭಾಯಿಸಿದ ದಿವ್ಯ ಕಾರಂತ್ ಸಾಮಾಜಿಕ ಹೋರಾಟಗಾರ್ತಿಯ ರೂಪಕದಲ್ಲಿ ಹೆಣ್ಣೊಬ್ಬಳ ನೋವು ,ಆಕ್ರಂದನ ,ಅಸಹಾಯಕತೆಗಳನ್ನು ಮೈ ಮೇಲೆ ಅವಾಹಿಸಿಕೊಂಡಂತೆ ನೀಡಿರುವ ಮನೋಜ್ಞ ಅಭಿನಯ ನೋಡುವವರಲ್ಲಿಯು ಅದೇ ನೋವು ಆವೀರ್ಭವಿಸುವಂತೆ ಮೈ ಚಳುಕು ಹುಟ್ಟಿಸುತ್ತಾರೆ
ಮನೆಮಗಳಂತೆ, ಅಕ್ಕನಂತೆ ಆಪ್ತವಾಗುತ್ತ ಲೀಲಾಜಾಲದಲಿ ನಟಿಸಿದ ಹರಿಣಿ ಭ್ರೂಣಹತ್ಯೆಯ ನರಳಿಕೆಯಲ್ಲಿ ಅದೆಂತ ಮೈನಡುಗಿಸುವ ಅಭಿನಯ ನೀಡಿದ್ದಾರೆಂದರೆ ನೋಡುಗರಲ್ಲಿ ,ದುಃಖ ನೋವು ಮಡುಗಟ್ಟಿ ತಮ್ಮ ಕರುಳೆ ಕೂಯ್ದಂತಾಗುತ್ತದೆ . ಇಡಿ ನಾಟಕದ ಶೋಮ್ಯಾನ್ ಆಗಿ ಬಿಡುತ್ತಾರೆ .
ಸುಂದರಶ್ರೀಯವರ ಪ್ರಭುದ್ಧ ಅಭಿನಯ , ನಿತಿನ್ರ ಸಹಜಾಭಿನಯ, ದೀಪ್ತಿ,ದಿವ್ಯ, ಶ್ರೀಯ ಸುಂದರ ಅಭಿನಯ ಮನಮುಟ್ಟುತ್ತದೆ .
ಮೊದಲ ಪ್ರಕರಣವಾಗಿ ಇತಿಹಾಸದಲ್ಲಿ ದಾಖಲಾಗಿರುವ ಬೌಧ ಬಿಕ್ಕುಣಿ ಉತ್ಪಲವರ್ಣ ಪ್ರಖ್ಯಾತಳಾದ ಈರ್ಷೆಗೆ ದಾಯಾದಿಗಳಿಂದಲೇ ಅಮಾನುಷವಾಗಿ ಅತ್ಯಾಚಾರಕ್ಕೊಳಗಾಗುತ್ತಾಳೆ
ಅವಳದ್ದೇನು ತಪ್ಪಿಲ್ಲ ಎಂದ ಬುದ್ದ , ನಡೆವ ಡಾರಿಯಲ್ಲಿ ತೊಡರಿದ ಕಲ್ಲಿನಂತೆ, ಆಗುಂತಕರು ಮಾಡಿದ ಅವಘಡಕ್ಕೆ ಅವಳು ಹೊಣೆಯಲ್ಲವೆಂದು ಘೋಷಿಸಿ ಸಮಾಜದ ಒಳಹರಿವಿಗೆ ಸೇರಿಸಿ ಒಳಮುಖಿಯಾಗಿಸಿಕೊಂಡ .
೨೦೦೦ ವರ್ಷಗಳ ಹಿಂದೆಯೂ ಶೋಷಣೆಯಿತ್ತು ಈಗಲೂ ಬದಲಾಗದೆ ನಡೆಯುತ್ತಲೇ ಮುಂದುವರೆದಿದೆ .ಇದಕ್ಕೆಲ್ಲ ಪರಿಹಾರವನ್ನು೨೦೦೦ ವರ್ಷಗಳ ಹಿಂದೆಯೇ ಸುಲಭವಾಗಿ ಕೊಟ್ಟ ಬುದ್ದನ ತತ್ವಗಳು ಮತ್ತವನ ಹೆಜ್ಜೆಗಳು ಮಾತ್ರ ಮಧ್ಯದಲ್ಲೇ ಅಳಿಸಿಹೊದವು ಎಂದು ವಿಷಾದಿಸುತ್ತ, ಅವುಗಳನ್ನು ಮತ್ತೆ ಜ್ಞಾಪಿಸಿಕೊಡುವುದರ ಮೂಲಕ ಸಮಾಜ ಮತ್ತು ಜನರು ತಳೆಯಬೇಕಾದ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ ನಾಟಕ… . ಯಾವುದೇ ನಾಟಕ ಯಶಸ್ವೀಯಾಗುವುದು ಅದು ಉಂಟು ಮಾಡುವ ಪರಿಣಾಮ ಮತ್ತು ಸಂದೇಶಗಳಿಂದ . ಹಾಗಾಗಿ ಲಜ್ಜೆ ಕೂಡ ಮಹತ್ತರವಾಗಿದೆ .
ಜೊತೆಗೆ ಹೆಣ್ಣು ಮಕ್ಕಳನ್ನು ಬೆಳೆಸುವಾಗ ಆತ್ಮಸ್ತೈರ್ಯ ತುಂಬಿ ಬೆಳೆಸಿ ಎನ್ನುವ ಕರೆ ನೀಡುತ್ತದೆ .
ನಡೆದ್ದುದ್ದಕ್ಕೆಲ್ಲ ಪುರುಷ ಅಹಂಕಾರವನ್ನೇ ಕಾರಣ ಮಾಡಿ ಕೈತೊಳೆದುಕೊಳ್ಳದೆ , ಹೆಣ್ಣು ಮಕ್ಕಳಿಗೂ ಕಿವಿಹಿಂಡಿ ಬುದ್ದಿ ಹೇಳುತ್ತಾರೆ ಚೇತನ. ಬಹುಷ್ಯ ಅವರು ಇಷ್ಟವಾಗುವುದು ಇಂತ ಪ್ರಾಮಾಣಿಕತೆಯ ಕಾರಣಕ್ಕೆ.. ವಂಚಿಸಿಯಾದರು ಹೊಂದುವಷ್ಟು ಅಪರೂಪದವಳು ನೀನು – ಹೆಮ್ಮೆ ಇರಲಿ , ಜೊತೆಗೆ ಶಕುಂತಲೆಯರಿಗೆ ಶಾಪವಿರುವ ಈ ನೆಲದಲ್ಲಿ ದಾಹ ಎಂದವರಿಗೆ ನೀರನ್ನ ಮಾತ್ರ ಉಣಿಸಿ . ಮೊಲೆಯನ್ನಲ್ಲ.. ಎನ್ನುವಂತ ಸೂಕ್ಷ್ಮ ಬುದ್ದಿಮಾತು ಸಹಿತ ಇದೆ .
ನಾಟಕದ ಮೊದಲಲ್ಲಿ ಫೋಕಸ್ ಆಗುವ ದೀಪಗಳು, ನಟರಾಜನ ಮೂರ್ತಿ ,ಬೆಳಕಿನ ಸದುಪಯೋಗ ನಾಟಕಕ್ಕೆ ಒಳ್ಳೆಯ creative ಮೂಡ ಒದಗಿಸುತ್ತದೆ .ಸಿಂಚನಾರ ಮಧುರ ಗಾಯನ ಇಂಪೆನಿಸುತ್ತದೆ.
ಒಳ್ಳೆಯ ಕಲಾತ್ಮಕ ಅನುಭವಕ್ಕೆ, ಸೂಕ್ಷ ಸಮಸ್ಯೆಯ ಒಳಹರಿವಿಗೆ, ಪರಿಹಾರದ ನಿಟ್ಟಿನಲ್ಲಿನ ಚಿಂತನೆಗೆ ಎಲ್ಲರು ನೋಡಬೇಕಾದ ನಾಟಕ ಲಜ್ಜೆ .







Well written Hema! The issue I think is burning intensity of the play… Its too much to handle… Somewhere it need a bit of counter points/angles… Nevertheless its good and hard hitting play!
Good representation of the play. It really depicts the reality of life. The drama surrounds the present day demonic acts by the present generation which has gone astray and needs reformation. Simple application of law will not solve this social evil. There has been need for total transformation in the minds of the people about women folk. Yatra Naryastu poojante, ramante tatra Deveta should be brought to real practice. It is easy to preach but difficult to practice to give a new life to the sexually assaulted victims. However, the induction of real human culture in the minds of all with all sincerity might bring some change. Arun
ಲಜ್ಜೆ ನೋಡಿದೆ,ತಮ್ಮ ಲೇಖನವನ್ನೂ ಓದಿದೆ 🙂 :)…
ನಾಟಕದಲ್ಲಿ ಅದರ ಒಟ್ಟಾರೆ ಆಶಯ ಇಷ್ಟವಾಯಿತು :).ಆಗಾಗ ಘಮ್ಮೆಂದು ಬರುವ “ತುಂಬುವಾ ಮೊದಲೇ….” ಎನ್ನುವ ಪದ್ಯ,ಹಂತಹಂತವಾಗಿ ತೋರಿಸಿಕೊಳ್ಳುವ ಕ್ರೂರತೆಯ ಮುಖಗಳು ,ದಬ್ಬಾಳಿಕೆಯ ವಿವಿಧ ರೂಪಗಳ ಪರಿಚಯ ಗಮನ ಸೆಳೆಯಿತು.. ಪಾತ್ರಗಳು ರೂಪಕದ ತಾಲೀಮಿನ ಜೊತೆಜೊತೆಗೆ ತಮ್ಮ ಜೀವನದ ಕಥೆಯನ್ನು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ..ನೋಡುಗರನ್ನೂ ಅವರ ಬದುಕಿನೊಳಗೆ ಎಳೆದುಕೊಳ್ಳುತ್ತಾ ಹೋಗುತ್ತವೆ…
ಆದರೆ ವೈಯಕ್ತಿಕವಾಗಿ ನನಗೆ ನಾಟಕದ ಅಂತ್ಯ ಪೂರ್ತಿ ಸಮಾಧಾನ ತರಲಿಲ್ಲ…ಯಾಕೋ ತುರೀಯ ಕ್ಷಣಗಳಲ್ಲಿರಬೇಕಾದ ಭಾವತೀವ್ರತೆಯನ್ನು ಅನುಭವಿಸಲು ಸಾಧ್ಯವಾಗಲಿಲ್ಲ…ಇನ್ನಷ್ಟು ಪರಿಣಾಮಕಾರಿಯಾಗಿ ನೋಡುಗರನ್ನು ಸಜ್ಜುಮಾಡಿಕೊಂಡು ನಾಟಕವನ್ನು ಅಂತ್ಯಗೊಳಿಸಬಹುದಿತ್ತೇನೋ ಗೊತ್ತಿಲ್ಲ,ಆದರೆ ಹೇಳಬೇಕಿರುವುದನ್ನು ಚುಟುಕಾಗಿ ಹೇಳಿಮುಗಿಸಿದ್ದಾರೆ ಅನ್ನಿಸಿತು…
ಒಟ್ಟಿನಲ್ಲಿ ಒಂದೊಳ್ಳೆ ಸಂದೇಶವಿರುವ ಕೃತಿಯನ್ನು ಅನುಭವಿಸಿದ ಖುಷಿ ನನ್ನದು…..
ವಂದನೆಗಳು,
ನಮಸ್ತೆ 🙂
Very well described arun. I appreciate. Thanks vidhyashankar
chinmay,
ತಮ್ಮ ಅನಿಸಿಕೆ ಹಾಗು ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು …
ಅದೊಂದು ಸೂಕ್ಷ್ಮ ಸಮಸ್ಯೆ ..ಸಮಸ್ಯೆ ಖಚಿತವಾದರೂ ಒಪ್ಪಿಕೊಳ್ಳದ ಕೆಲವರ ಆಕ್ಷೇಪಣೆಗಳ ಮಧ್ಯೆ ಸಮಸ್ಯೆಯನ್ನು ಬಿಂಬಿಸುವುದು ಕೂಡ ಸೂಕ್ಷ್ಮ ಕೆಲಸ… ಜನಮಾನಸದ ಸಂಸ್ಕೃತಿಯಲ್ಲಿನ ದೌರ್ಬಲ್ಯ ದೌರ್ಜನ್ಯಗಳಿಗೆ ಪರಿಹಾರ ಘೋಷಿಸುವುದು, ಒಪ್ಪಿಸುವುದು ಕಷ್ಟವೇ .. ಆ ನಿಟ್ಟಿನಲ್ಲಿ ಪ್ರಯೋಗ ಯಶಸ್ವಿಯಾಗಿದೆ .. ಕಡೆಯಲ್ಲಿ ಭಾವತೀವ್ರತೆ ಕೊಂಚ ಕಡಿಮೆ ಎನಿಸುದ್ದು ಕೊಂಚ ಮಟ್ಟಿಗೆ ನಿಜ .. ತಾಲೀಮಿನ ಕಾರಣ ಅದಿರಬಹುದು . ಬಹುತೇಕ ನಾಟಕಗಳು ಮೊದಲ ಹಂತದಲ್ಲಿನ ಭಾವತೀವ್ರತೆಯನ್ನು ಕೊನೆಗೆ ಕಟ್ಟಿಕೊಡುವುದರಲ್ಲಿ ಹಿಂದೆ ಉಳಿಯುತ್ತವೆ … ಡ್ರಾಪ್ ಆಗುವ ಎನರ್ಜಿ ಕೊಡ ಕಾರಣವಿರಬಹುದೇನೋ