ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಚ್ಚಿ..

ಒಳ್ಳಕಲ್ಲಿನ ಸಪ್ಪಳದಾಗ ಗಂಗಕ್ಕ ಬಯ್ತಿದ್ದದು ಅಕೀಗಷ್ಟೆ ಕೇಳ್ತಿತ್ತು. ಈಗೀಗ ಸೋಮನಗೌಡ ಊಟತಿಂಡಿ, ಜಳಕಾ, ಪೂಜೆ, ಎತ್ತಿನ ಚಾಕರಿ, ಟ್ರ್ಯಾಕ್ಟರ್ ಜ್ವಾಕಿ ಏನೊಂದರ ಕಡೇನೂ ಚೆಂದಗ ಗಮನ ಕೊಡವಲ್ಲ. ಆಳುಕಾಳಿನ ಕಡಿಗಂತು ಲಕ್ಷ್ಯನ ಇಲ್ಲ..‌ಬರೇ ಇಷ್ಟ ಆಗಿದ್ರ ಗಂಗಕ್ಕಗ ಅಷ್ಟ ತೆಲಿ‌ ಕೆಡತಿದ್ದಿಲ್ಲ. ಎಷ್ಟೊತ್ನ್ಯಾಗಬೇಕ ಅಷ್ಟೊತ್ನ್ಯಾಗ ಫೋನ ಹಿಡಕೊಂಡ ಮೆಟ್ಟಲ ಹತ್ತಿ ಮ್ಯಾಲ ಹೋಗಿ ಅಟ್ಟದ ಮ್ಯಾಲ ಕುಂತ ಬಿಡತಾನ ತಾಸಗಟ್ಲೆ ಬರಂಗಿಲ್ಲ ಕರದಿದ್ದ ಕೇಳಂಗಿಲ್ಲ ಕಾಲಾಂದ ಸಾಮಾನಂತು ಒಂದೂ ಕಾಣಂಗಿಲ್ಲ ತುಂಬಿದ ಚರ್ಗಿ ಸೈತ ಒದಕೊಂತ ಹೊಕ್ಕಾನ ಮೀಸಿ ಬಂದವಗ ದೇಸ ಕಾಣಂಗಿಲ್ಲ ಎದಿಬಂದಕಿಗೆ ನೆಲ ಕಾಣಂಗಿಲ್ಲನ್ನು ಗಾದಿಮಾತ್ನ ಹಿರೇರ ಸುಮ್ಮನ ಮಾಡಿಲ್ಲಬೇ ಶಂಕ್ರವ್ವ, ಅಂತ ಹೆಣ್ಣಾಳು ಶಂಕ್ರವ್ವನ ಮುಂದ ಹತ್ತಸಲ ಅಂದಿದ್ದಳು ಗಂಗವ್ವ. ಶಂಕ್ರವ್ವ ಶಾಣೆ, ಮಜ್ಜಿಗೆ ಪೂರ್ತೆಕ ರಾಮಾಯಣ ಮಾಡಿ ಹೌದ್ರಿ ಗೌಡಶ್ಯಾನಿ ಅಂದು ಸಂಜಿಕ ಜ್ವಾಣ್ಣಿಮಾಡ್ಕೊಂಡು ಚೀಲ ಕಟ್ಟತಿದ್ದಳು. ಆದರ ಸೋಮನಗೌಡಗ ಇದ್ಯಾವ ಉಸಾಬರಿನು ಬ್ಯಾಡಾಗಿತ್ತು ಅವನ ಲೋಕದೊಳಗ ಇಂತಾ ಹುಲುಮಾನವರ ಜಂಜಾಟಗಳಿಗೆ ಜಾಗನ ಇರಲಿಲ್ಲ. ಅವನದೇನಿದ್ರು ಶೃಂಗಾರ ಕಾವ್ಯ ಬರೆಯುವ ವಯಸ್ಸು. ಅದರೊಳಗ ಅವ ಸಾವಿರ ಕನಸು ಹೆಣಕೊಂತ ಅದರ‌ಮ್ಯಾಲ ಹೃದಯದ ಚಿತ್ರ ಬಿಡಿಸ್ಕೊಂತ ಅಟ್ಟದ ಗಾಳಿಯೊಳಗ ತೇಲತಿದ್.

ಗಂಗವ್ವ ಮೆಣಸಿಕಾಯಿ ಹಿಂಡಿ ಅರಿಯುದ್ರೊಳಗ  ಹತ್ತ ಸಲ ಸೋಮನಗೌಡನ ಕರದಳು 

ಗೌಡಪ್ಪ 

ಏ ಗೌಡಾ

ಸೋಮಾss

ಏ ಸೋಮು 

ನನ್ನಪ್ಪಾass

ತಂದೆ

ಏಬಂಗಾರ ಕಿಟ್ಟಾಣಿ ಸೋಮನಗೌಡಾssss

ಏನ ಕರದ್ರು ಸೋಮನಗೌಡ ಗಂಗವ್ವನ್ನ ತಿರಗಿ ನೋಡಲಿಲ್ಲ ನನ್ನ ಮಗಗ ಅಂತಾ ಮಾಣಿಕ್ಯ ಏನ ಸಿಕ್ಕಿದ್ದಿತು ಆ ಫೋನಿನ್ಯಾಗ ಅಂದು ನಿಟ್ಟುಸಿರ ಇಟ್ಟ-

ಗಂಗವ್ವ ಒಳ್ಳಕಲ್ಲ ತೊಳದ ಕೈ ತೊಳಕೊಂಡ ರೊಟ್ಟಿಗೆ ಜಿಗಟಹಾಕಾಕ ಒಲಿಕಡೆ ಹೋದಳ. 

ಗದಿಗೆಪ್ಪಗೌಡಗ ಐದ ಹೆಣ್ಣಿನ ಮ್ಯಾಲೆ ಹುಟ್ಟಿದ ಸೋಮನಗೌಡನ ಮ್ಯಾಲ ಎಲ್ಲಿಲ್ಲದ ಪ್ರೀತಿ ಅವಾ ಗೌಡಕಿ ಆಟ ಮಾಡಲಿ ಹೊಲಮನಿ ನಾ ನೋಡ್ಕೊಂಡ ಹೊಕ್ಕನಿ ಅನ್ನು ಹುಂಬಗೌಡಕಿ. ಗಂಗವ್ವ ಗಂಡನ ಹತ್ರ ಮಗನ ದೂರು ಎಷ್ಟಸಲ ಹೇಳಿದ್ರು ಗದಿಗೆಪ್ಪಗೌಡನದು ಒಂದ ಉತ್ತರ ಅವಾಸಣ್ಣವ ದೊಡ್ಡವಾಗಿಂದ ಗೌಡನಂಗ ಗಂಭೀರ ಆಗ್ತಾನ ನೀ ಆ ಹುಡಗನ್ನ ಕಾಡಾಬ್ಯಾಡ ಮಾರಾಳ ಅಂದು ಮಾತು ಮುಗಿಸಿಬಿಡ್ತಿದ್ದ. 

ಒಂದಿನ ಸೋಮನಗೌಡನು ಕುಂಬಾರ ನೀಲವ್ವನ ಮಗಳು ಲಚ್ಚಿನು ಹೊಟ್ಟಿನ ಬಣವಿ ಸಂದ್ಯಾಗ ನಿಂತು ಗುಸುಗುಸು ಮಾತಾಡುದನ್ನ ಲಚ್ಚಿಕಾಕಾ ನೋಡಿ ಲಚ್ಚಿನ ಅಲ್ಲಿಂದನ ದರದರ ಏಳಕೊಂಡ ಬಂದು ಹಿತ್ತಲದಾಗಿನ ಸುಟ್ಟಗಡಗಿ ಇಡು ಕ್ವಾಣ್ಯಾಗ ಹಾಕಿ ಚಿಲಕ ಜಡದಬಿಟ್ಟ. ಲಚ್ಚಿ ಮನಿ ಅನ್ನೂದು ರಣರಂಗ ಆಗಿಬಿಟ್ತು. ಲಚ್ಚಿ ಅಪ್ಪ ಸತ್ತು ಆಗಲೇ ಮೂರು ವರ್ಷ ಆಗಿತ್ತು ನೀಲವ್ವ ಮೈದನನ ಸಂಸಾರದ ಜೊತೆಗೆ ತನ್ನ ಮಗಳು ಲಚ್ಚಿ ಮತ್ತ ಮಗ ಸತೀಶನ್ನ ಕರ್ಕೊಂಡು ಬದುಕ್ತಿದ್ದಳು. ಲಚ್ಚಿ ಇಂತಾ ಮಾನಗೇಡಿ ಕೆಲಸ ಮಾಡಿದ್ದಕ್ಕ ನೀಲವ್ವಗ ಭೂಮಿನ ಬಾಯ್ಬಿರ್ದಂಗಾಗಿತ್ತು. ಆದ್ರ ಲಚ್ಚಿಕಾಕಾ ವಿಶ್ವನಾಥಗ ಮೂಗು ಕೊಯ್ದಷ್ಟು ನೋವಾಗಿತ್ತು. ರಾತ್ರಿಆದ್ರೂ ಲಚ್ಚಿ ಹೆಂಗದಾಳ ಅನ್ನು ಒಂದ ಮೇಸೆಜು ಸೋಮಗ ಸಿಗಲಿಲ್ಲ ಅವಾ ನೀರಿಂದ ಹೊರಗ ತಗದ ಮೀನಿನಹಂಗ ಒಳಗ ಹೊರಗ ಶತಪಥ ಹಾಕಿ ಹೆಂಗೊ ಬೆಳಗ ಹರಸಿದ. ಬೆಳಿಗ್ಗೆ ಎದ್ದು ನವಲ್ಗುಂದ ಡಿಗ್ರಿ ಕಾಲೇಜಿಗೆ ಹೋಗು ಬಸ್ ಹಿಡಿತಿದ್ದ ಲಚ್ಚಿ ಯಾವಾಗ ಬಸ್ ಹತ್ತಾಕೂ ಬರಲಿಲ್ಲೊ, ಸೋಮನ ಎದಿಬಡಿತ ಇನ್ನೂ ಜೋರಾತು. ಲಚ್ಚಿ ಅಲ್ಲಿ ಬೆಚ್ಚಗಿಲ್ಲ ಅಂತ ತಿಳಿತು.ಏನ ಮಾಡಬೇಕಂತ ತಿಳಿದಂಗಾಗಿ ಶಂಭುಲಿಂಗನ ಗುಡಿ ಪೂಜಾರಿಮಗ  ಶಂಕರನ್ನ ಎಳದ ತಂದು ದೋಸ್ತಾ ಒಂದು ಘಾತಾಗೆತ್ಲೆ ಹೆಂಗರ ಮಾಡಿ ಲಚ್ಚಿನ ಹೊರಗ ತರಬಕಲೇ, ಅವರ ಕಾಕಾ ಎಲ್ಲೆ ಹೊಡದಗಿಡದಾನೇನೊ ಅಂತ ಟೆನ್ಷನ್ ಆಗಾಕತ್ತತ್ತಲೇ. ನಿನ್ನೆ ಸಂಜೆ ಅಕೀ ನನ್ನ ಜೋಡಿ ಇದ್ದಿದ್ದು ನೋಡಿ ಬಿಟ್ಟಾನ್ಲೆ ಅಂತಾ ಗೆಳೆಯನ ಮುಂದ ಅಲವತ್ಗೊಂಡ.

ಶಂಕರ ಸ್ವಲ್ಪ ವಿಚಾರ ಮಾಡಿ, ನೋಡ ದೋಸ್ತ ಮದಲ ವಿಷಯನ ಸ್ವಲ್ಪ ಪಬ್ಲಿಕ್ ಮಾಡು ಅಂದ್ರ ಹೆಣ್ಣ ಹಡದರು ದಾರಿಗೆ ಬರ್ತಾರ ಕಾಲುಮುಗದ ಕನ್ಯಾ ಕೊಡ್ತಾರ ಇಲ್ಲಂದ್ರ ನಿನ್ನ ಪಾರಿವಾಳನ ನಿನಗ ಗೊತ್ತಿಲ್ಲದಂಗ ಹಾರಿಸಿ ಬ್ಯಾರೆ ಕಡೆ ಮದವಿ ಮಾಡಿ ಕೊಡ್ತಾರ. ಅಂದು ಹೆದರಿದ್ದ ಸೋಮನ ಕಾಲಾಗ ಹಗ್ಗಾ ಒಗದು ಹಾವಂದುಬಿಟ್ಟ. 

ಇದನ್ನ ಕೇಳ್ತಿದ್ದಂಗ ಸೋಮನ ಕಣ್ಣಾಗ ದಳದಳ ನೀರು ಸುರಿಯಾಕತ್ವು. ಶಂಕರ ಅವನ ಕಣ್ಣೀರ ಒರಸಿ ದೋಸ್ತ್ ಬಾ ಅಂದು ಆಗಿಂದಾಗ್ಗೆ ಪಂಚರ ಮನಿಗೆ ಕರಕೊಂಡ ಹೋಗಿ ಇದ್ದ ಸುದ್ದಿನ ತುಸು ತುಸು ತಿಳಿಸಿ ಮತ್ ಸೋಮಂದು ಲಚ್ಚಿದು ಮದವಿ ಮಾಡಲಿಕ್ರ ಸೋಮಾ ಉರಲಹಾಕ್ಕೊಂಡ ಸಾಯ್ತಾನ ನೋಡ್ರಿ ಅಂದು ಸೋಮನ್ನ ಎಳಕೊಂಡಬಂದಬಿಟ್ಟ. ಸೋಮಗ ಈಗ ಖರೇನ ಲಚ್ಚಿ ಇಲ್ಕಂದ್ರ ಸತ್ ಹೋದ್ರಾತು ಅನ್ನೂ ಫೀಲಿಂಗ್ ಸುರುವಾತು‌.

ಸುದ್ದಿ ಕೇಳಿ ದಿಗಿಲಬಿದ್ದ ಪಂಚರೊಳಗ ಒಬ್ಬಾಗಿದ್ದ ರಂಗನಗೌಡ ತಾಬುಡತುಬಡ ಸೋಮುನ ತಂದಿ ಗದಿಗೆಪ್ಪಗೌಡನ್ನ ಕರಸಿ ಅಟ್ಟದಮ್ಯಾಲಿನ ಕ್ವಾಣಿಗೆ ಕರಕೊಂಡ ಹೋಗಿ ತನಗ ತಿಳಿದ ಸುದ್ದಿಗೆ ಸ್ವಲ್ಪ ಮಸಾಲಿ ಹಚ್ಚಿ ಹೇಳಿ ಅದರ ಮ್ಯಾಲೆ “ನೋಡ ಗದಿಗೆಪ್ಪಗೌಡಾ ಇದು ಬರೆ ಹುಡುಗುರ ಸುದ್ದೆಲ್ಲ ನಮ್ಮ ಗೌಡಕಿ ಮರ್ಯಾದಿ ಅಂದು ಅದರಾಗ ಗೌಡ್ರಿಗೆ ಆಯಗಾರ ಜೋಡಿ ಎಂತಾ ಸಂಬಂಧ” ಅಂದು ಗೌಡನ ತಲಿ ಕೆಡಿಸಿ  ನರ್ವಸ್ ಮಾಡಾಕ ಪ್ರಯತ್ನಿಸಿದ ಆದ್ರ ಗೌಡನ ಸಮಸ್ಯೆ ಜಾತಿದಾಗಿರಲಿಲ್ಲ ಐದ ಹೆಣ್ಣಿನ ಮ್ಯಾಲ ಹುಟ್ಟಿದ ಏಕೈಕ ಗಂಡಸಂತಾನದ್ದಾಗಿತ್ತು.

ಗೌಡ ಮನಿಗೆ ಹೋಗಿ ತಣ್ಣೀರಲೆ ಮಕಾ ತೊಳಕೊಂಡು ಗಿರಿಗೌಡ(ಸೋಮನ ಅಜ್ಜ) ಕುಂದರ್ತಿದ್ದ ಅರಾಮ ಕುರ್ಚಿಮ್ಯಾಲ ಕುಂತು ಜರಕ್ ಜುರಕ್ ಹಿಂದ ಮುಂದು ಖುರ್ಚೆ ಸಪ್ಪಳದ ಲಯಕ್ಕ ತನ್ನ ವಿಚಾರಗಳ ಲಯ ಹೊಂದಿಸಿಕೊಳ್ಳು ಪ್ರಬಲ ಪ್ರಯತ್ನ ಮಾಡ್ತಿದ್ದ. ಒಳಗಿಂದ ಗಂಗವ್ವ ಬಂದಕೀನ ಸೋಮ ಉಂಡೆ ಇಲ್ರಿ ನಿನ್ನೆ ರಾತ್ರಿಯಿಂದನೂ ಅಂದಳು. ಗೌಡ ಮಗನ್ನ ಹುಡಕ್ಕೊಂಡು ಗರಡಿ ಮನಿಹಂತೇಕ ಹೋದ ಹೊರಗಿದ್ದ ಶಂಕ್ರಗ ಲೇ ಒಳಗ ನಮ್ಮ ಸೋಮ ಅದಾನನ ಕರೀಲೆ ಹೊರಗ,ಅಂದಾ. ಕತ್ತಲ ಮೂಲಿ ಹಿಡಿದ ಕುಂತಿದ್ದ ಸೋಮನ ಕಿವ್ಯಾಗ ಏನೋ ಗುಟ್ಟು ಹೇಳ್ಕೊಂತ ಶಂಕರಾ ಸೋಮನ್ನ ಹೊರಗ ಕರ್ಕೊಂಡ ಬಂದ. ಮಗಗ ಕೊಡಸಿದ್ದ ಏನ್ಫಿಲ್ಡ್ ಗಾಡಿ ಹಿಂದ ಮಗನ್ನ ಕುಂದರಸ್ಕೊಂಡ ಗದಿಗೆಪ್ಪಗೌಡ ಮನಿಕಡೆ ಹೊಂಟಾ.

ಶಂಕರ ಓಹ್ ನಮ್ಮ ಪ್ಲಾನು ವರ್ಕಾಗಂಗ ಕಾಣತೈತಿ.ಈ ವರ್ಷ ಸೋಮನ ಮದ್ವಿಆಕ್ಕತಿ ಅಂದು ಕಾಲರ್ ಏರಿಸ್ಕೊಂತ ಮನಿಕಡೆ ಹೋದ‌.

ಸೋಮ ರಂಗನಗೌಡಗಷ್ಟ ಅಲ್ಲದ ಈ ಸುದ್ದಿನ ಪಂಚರಲ್ಲಿ ಎರಡನೇವರಾದ ನಾರಾಯಣ ಆಚಾರ್ಯರಿಗೂ ಮೂರನೇಯವರಾಗ ಶಿವಯ್ಯ ಹಿರೇಮಠರಿಗೂ ಸುದ್ದಿ ಮುಟ್ಟಿಸಿ ಬಂದಿದ್ರು. ಗೌಡ್ರ ಹುಡುಗನ ಸುದ್ದಿ ಆದ್ದರಿಂದ ಊರ ಕಟ್ಟಿ ಮ್ಯಾಲ ಇದರ ಪಂಚಾಯತಿ ಮಾಡೂದ ಬ್ಯಾಡ ಅನ್ನೂದು ರಂಗನಗೌಡನ ಅಭಿಪ್ರಾಯ ಆಗಿತ್ತು ಆದ್ರ ಉಳಿದವರ ಸಮ್ಮತಿ ಅದಕ್ ಸಿಗಲಿಲ್ಲ ಹಿಂಗಾಗಿ ಊರಾನಮಂದಿಯೆಲ್ಲ ಹೊಲಕ್ಕ ಹ್ವಾರೇಕ್ಕ ಹೋದಮ್ಯಾಲ ಡಂಗ್ರಾ ಹೊಡಸಿದ ಶಾಸ್ತ್ರ ಮಾಡಿ ಪಂಚಾಯತಿ ಕರದ್ರು. ಚೌಡಮ್ಮನ ಗುಡಿ ಕಟ್ಟಿ ಮ್ಯಾಲ ಬೇನಗಿಡದ ನೆಳ್ಳು ಭರಪೂರ ಇತ್ತು ಅದ ನೆಳ್ಳಾಗ ಹಿರೇತನ ಮಾಡು ಮಂದಿ ಕುಂತ್ರು ಆಟ ನೋಡಾಕ ಬಂದ ಉಳದ ಮಂದಿ ನೆಲಕ್ಕ ಕುಂತ್ರು. ಈಗ ಲಚ್ಚಿ ಕಾಕಾ ಲಚ್ಚಿನು ಪಂಚಾಯತಿಗೆ ಕರ್ಕೊಂಡ ಬರಬೇಕಿತ್ತು ಸೋಮಗ ಬೇಕಿದ್ದುದು ಮದಲ‌ ಅಕೀ ಮಾರಿ ನೋಡುದು ಲಚ್ಚಿ ಬಂದಳು. ಒಂದೂವರಿದಿನದಾಗ ಬಾಡಿ ಬಸವಳಿದಿದ್ದಳು. ಅತ್ತು ಅತ್ತು ಕಣ್ಕೆಳಗೆಲ್ಲ ಕಪ್ಪಡರಿತ್ತು. ಸೋಮ ಕಡಿದು ಕೆಂಪೇರಿಸ್ತಿದ್ದ ತುಟಿ ಕಪ್ಪಾಗಿತ್ತು.

ಆದರ ಆ ಕ್ಷಣದಾಗು ಲಚ್ಚಿ ಎದುರಿಗೆ ಬಂದು ನಿಂತಿದ್ದಷ್ಟೆ ಅವನ ಜೀವಕ್ಕೆ ಹಾಯನಿಸಿದ್ದು ಹೌದು. 

ಪಂಚಾಯತಿ ಶುರುವಾಯ್ತು.

ರಂಗನಗೌಡ ಸೋಮನ್ನ ಕರೆದು ಪಂಚರ ಎದುರಿಗೆ ನಿಲ್ಲುವಂತೆ ಸನ್ನೆ ಮಾಡಿದ. ಸೋಮ ಬಂದು ಎದೆ ಸೆಟೆಸಿ ನಿಂತ ಯಾವಾಗ್ಲು ತನ್ನ ಟ್ರ್ಯಾಕ್ಟರಲ್ಲಿ ಹಾಕ್ತಿದ್ದ ಹಾಡೊಂದು ಕವಿಯೊಳಗ ಗುನುಗಿದಂಗಾಯ್ತು. 

ಪ್ರೀತಿ ಮಾಡಬಾರದು

ಮಾಡಿದರೆ ಜಗಕೆ ಹೆದರಬಾರದು!!!

ಹೌದು ಈ ಜಗಕ್ಕೆ ಹೆದರಬಾರ್ದು. ಅಂತ ಗಟ್ಟಿ ಧೈರ್ಯ ಮಾಡಿಕೊಂಡ. ಮುಷ್ಟಿ ಬಿಗಿ ಕಟ್ಟಿದ.

 ರಂಗನಗೌಡ ಕೇಳಿದ “ಹೇಳಪಾ ಸೋಮು ನಿಂದು ಕುಂಬಾರ ಲಕ್ಷ್ಮಿದು ಸುದ್ದಿ ಹೊಂಟತೀ ಊರ ತುಂಬ. ಅದು ಮದ್ವಿ ಆಗೂ ಹುಡಗಿ ಅಕಿ ಹೆಸರು ಕೆಡಬಾರ್ದು ಹೇಳ ಅಕಿನಿನ್ನ ನಡುವೆ ಏನಿತ್ತು ಏನಿಲ್ಲ ಹೇಳಿಬಿಡು‌” ಅಂದು ಎಲ್ಲ ಒಂದ ಉಸಿರಿಗೆ ಕೇಳಿ,

ಮಾತಿಗೆ ವಿರಾಮ ಇಟ್ರು.

ಸೋಮ “ನಾನು ಲಕ್ಷ್ಮಿ ದೀಡ ವರ್ಷಲಿಂದ ಒಬ್ಬರನೊಬ್ರು ಪ್ರೀತಿ ಮಾಡಾಕತ್ತಿವಿ. ಮದುವಿ ಆಗಬೇಕಂತ ನಿರ್ಧಾರನು ಮಾಡಿವಿ” ಅಂದು ಸೀದಾ ಲಕ್ಷ್ಮೀ ಕಣ್ಣಾಗ ಕಣ್ಣಿಟ್ಟು ನೋಡಾಕ ಪ್ರಯತ್ನಿಸಿದ ಆದ್ರ ಲಕ್ಷ್ಮೀ ನೆಲ ಬಿಟ್ಟು ಬೇರೆನು ನೋಡಲಿಲ್ಲ.

ಈಗ ಗೌಡ ಲಕ್ಷ್ಮೀನ ಕರದು ಪಂಚರ ಎದುರಿಗೆ ನಿಲ್ಲಾಕ ಹೇಳಿದ.

ಲಕ್ಷ್ಮೀ ಗೂ ಸೋಮನಿಗೆ ಕೇಳಿದಂಗ ಪ್ರಶ್ನೆ ಕೇಳಿದ. ಏನವಾ ಸೋಮ ಹೇಳಿದ ವಿಚಾರಕ್ಕೂ ನಿನಗೂ ಏನರ ಸಂಬಂಧ ಐತೇನು ನೀ ಏನ‌ಹೇಳ್ತಿ ಹೇಳವಾ ಅಂಜಬ್ಯಾಡ ಪಂಚರಂದ್ರ ಊರಿಗೆ ಹಡದಪ್ಪ ಇದ್ದಂಗ ಅಂದ. 

ಆದರ ಲಚ್ಚಿ ತುಟಿ ಬಿಚ್ಚಲಿಲ್ಲ ಕಣ್ಣೆತ್ತಿ ನೋಡಲಿಲ್ಲ.

ಗೌಡ್ರು ಆಚಾರ್ಯರು ಶಿವಯ್ಯನೋರು ಮೂರ್ಮುರ್ಸಲ ಮಾತಾಡ್ಸಿದ್ರು ಲಚ್ಚಿ ತುಟಿಪಿಟಕ್ ಅನಲಿಲ್ಲ. ದೂರದಾಗ ನೀಲವ್ವ ಸೆರಗ ಕಣ್ಣಗೆ ಒತ್ಗೊಂಡು ಅಳತಿದ್ಲು. 

ಈಗ ಸೋಮ ಲಚ್ಚಿ ಎದರಿಗೆ ಬಂದವ್ನ “ಏ ಲಚ್ಚಿ ಯಾರಿಗೂ ಹೆದರರ್ಬಾಡ ನಾ ಅದೀನಿ ನಿನ್ನ ಗೌಡ ಅದೀನಿ. ನೀ ಹೇಳ ನಾವಿಬ್ರು ಪ್ರೀತಿ ಮಾಡಿವಿ” ಅಂತ.

ಅಂದ. ಲಚ್ಚಿ ಕಾಕಾ ಕಟಕಟ ಹಲ್ಲ ಕಡಿದದ್ದು ಇಡೀ ಪಂಚಾಯತಿಗೆ ಕೇಳಸ್ತಿತ್ತು.

ಈಗ ಲಚ್ಚಿ ಅಳಾಕತ್ತಿದಳು. ಸೋಮ ಗೊಂದಲದಾಗ ಬಿದ್ದ ಈ ಹುಡುಗಿ ನಡನೀರಾಗ  ನನ್ನ ಕುತಗಿ ಕೊಯ್ಯತಾಳೆನೊ ಮಾರಾಯ ಅನಿಸ್ತು. ಮೆಲ್ಲಕ, ಲಚ್ಚಿ ಮಾತಾಡು ಅಂದ. 

ಈಗ ರಂಗನಗೌಡ್ರು ನೋಡು ನಿನಗ ಎಲ್ಲಾರ ಮುಂದ ಹೇಳಾಕಾ ಕಷ್ಟ ಆಗಾಕತ್ತತೇನವಾ ಲಕ್ಷ್ಮವ್ವ ಅದನ್ನರ ಹೇಳು. ಅಂದರು. 

ಆದ್ರ ಲಕ್ಷ್ಮೀಗೆ ಮಾತಾಡಾಕ ಧೈರ್ಯನ ಸಾಲವಲ್ದಾತು.

ಬಾಳ ಹೊತ್ತು ತಡದು, ನಮ್ಮ ಕಾಕಾ ಏನಂತಾನ ಅದ ನನ್ನ ಉತ್ತರರೀ ಅಂದಬಿಟ್ಟಳು. 

ಆದ್ರೀಗ ಅವರ ಕಾಕಾನ‌ಹಂತೇಲಿ ಏನು ಉತ್ತರ ಇರಲಿಲ್ಲ ಅವನಿಗೆ ತಮ್ಮ ಮಗಳು ಈ‌ ಉಢಾಳನ್ನ ಪ್ರೀತಿ ಮಾಡಿಲ್ಲಂತ ಒಂದ ಕ್ಲೀನ್ ಚಿಟ್ ತಗೊಂಡು ಪಂಚಾಯತಿಯಿಂದ ಹೊರಗ ನಡಿಯುದಿತ್ತು.

ಪಂಚಾಯತಿಗೆ ಅದನ್ನ ಬೇಡಿಕೊಂಡ ನಮ್ಮ ಹುಡುಗಿ ಅಂತಕಿ ಅಲ್ರೀ  ಗೌಡ ಅಕೀನ್ನ ಹೆದರಸಿ ಬೆನ್ನಬಿದ್ದು ಅಕಿಹಿಂದ ಅಡ್ಯಾಡಕತ್ತಾನ ನಮ್ಮ ಹುಡುಗಿಗೆ ನಾವು ಗಂಡ ನೋಡಿವಿ ಅಕೀ ಕಾಲೇಜು ಮುಗಿತಿನ್ ಮುಂದಿನ ತಿಂಗಳ ಮದ್ವಿ ಮಾಡ್ತೆವಿ ನೀವು ನ್ಯಾಯವಂತರು ನಾಳೆ ನಮ್ಮ ಹುಡಗಿಗೆ ಒಂದ ಮಾತು ಬರಬಾರ್ದು ಅಂತಾ ನಿರ್ಣಯ ಕೊಡ್ರಿ ಅಂದು ಕೈ ಮುಗದು ಧೈನ್ಯದಿಂದ ನಿಂತ. 

ಈಗ ಸೋಮನಗೌಡನ ಜಂಗಾಬಲನ ಉಡಗದಂಗಾತು ಈ‌ ಕ್ಷಣದ ತನಕ ಲಚ್ಚಿನ ಕಂಡ ಸಂತಸ ಮನಸಿನ ತುಂಬಾ ಇತ್ತಾದ್ರು ಈಗ ಎದುರ ಪಾರ್ಟಿಯ ವಕಾಲತು ಕಂಡು ತಾನು ಸೋತಬಿಟ್ರೆ ಅನ್ನೊ ಟೆನ್ಷನ್ ಶುರುವಾತು. ಏನ ಮಾಡಬೇಕಂತ ತಿಳಿದಂಗಾಯ್ತು ದೂರತ ನಿಂತ ಶಂಕ್ರಗೂ ಇದೇನ ಗಾಲತಿಪ್ಪಲ ಆತಲೇ ಅನಿಸ್ತು. ಒಂದಾಗಬೇಕಿದ್ದ ಜೀವಗಳು ಒಂದಾ ಪಾರ್ಟಿ ಆಗದ ಏನೇನ ಆತೀದು ಹೊಗ್ಗನೀನ ಮಂಜಾಳ ಹೊಗ್ಲಿ ಅಂದಿದ್ದು ಬಾಜು ನಿಂತ ಇತರ ಹರೆದ ಹುಡ್ರಕಿವಿಗೂ ಬಿತ್ತು.

ಈಗ ರಂಗನಗೌಡ ಬಾಯ್ತೆರೆದು, ಆತಪಾ ವಿಶ್ವನಾಥ ಸಮಾಧಾನ ಮಡ್ಕೊ ಅಂದಾ ಆದರ ಈ‌ಕಡೆನಿಂತ ಸೋಮನ ಸಮಾಧಾನ ಹಾರಿತ್ತು. ಸೋಮನ ಅಂಗೈ ಅಂಗಾಲ ಬೆವರಿದ್ವು.ಗಂಟಲ ಆರಿತ್ತು ಅವಾ ಉಗುಳು ನುಂಗೋದು‌ ಎದುರಿಗಿದ್ದ ರಂಗನಗೌಡಗ ಸ್ಪಷ್ಟ ಕಾಣತಿತ್ತು ನಮ್ಮ ಗೌಡಕಿ ಹುಡುಗಗ ಹಿಂಗಾಗಬಾರದಿತ್ತು ಅಂತ ಮನಸ್ಸು ಮರಮರ ಮರಗ್ತಿತ್ತು. ಆದರ ಇವರೆಲ್ಲರಗಿಂತ  ಹೆಚ್ಚ  ಗದಿಗೆಪ್ಪಗೌಡ ಬೆವರಿದ್ದ ಇದ್ದೊಬ್ಬ ಮಗನ ಹರೆವು ಪಂಚಾಯತಿ ಮುಂದತಂದು ನಿಲ್ಲಸಿತ್ತು.

 ಲಕ್ಷ್ಮೀ ಏನೂ ಹೇಳಲಾರದ್ದಕ್ಕ ಪಂಚಾಯತಿ ಒಂದಿಂಚು ಮುಂದ ಹೋಗಲಿಲ್ಲ. ಸೋಮನಗೌಡನ ಒಬ್ಬನ ಮಾತಿನ ಮ್ಯಾಲೆ ಏನೂ ನಿರ್ಧಾರ ತಗೊಳಾಕ ಬರ್ಲಾರ್ದಂಗಾತು ಇತ್ತಾಗ ವಿಶ್ವನಾಥನ ಬೇಡಿಕೆ ಇಡೇರಸಬೇಕೊ ಬ್ಯಾಡೊ ಅನ್ನೊದು ಪಂಚಾಯತಿಗೆ ತಿಳಿದಂಗಾತು. 

ಪಂಚರು ಐದು ಮಂದಿ ಐದ ನಿಮಿಷ ತಮ್ಮತಮ್ಮಲ್ಲೆ ಮಾತಾಡಿ ಲಕ್ಷ್ಮವ್ವ ನೀ ಏನೂ ಹೇಳಲಿಕ್ರ ನಿಮ್ಮ ಕಾಕಾನ ಮಾತಿನಂತನ ನಾವು ನಿನಗೂ ಗೌಡ್ರ ಸೋಮುಗೂ ಯಾತರ ಸಂಬಂಧನೂ ಇಲ್ಲಂತ ತಿಳಕಬಕಾಕ್ಕತಿ ಅಂದ್ರು. ಅವಾಗೂಸೈತ ಲಕ್ಷ್ಮೀ ಬೆಲ್ಲಾಜಜ್ಜಿದ ಕಲ್ಲಿನ ಹಂಗ ಸುಮ್ಮಕ ನಿಂತಳು..

ಮುಂದಿನ ಹತ್ತ ನಿಮಿಷದಾಗ ಪಂಚಾಯತಿ ತನ್ನ ನಿರ್ಣಯ ಹೇಳ್ತು. ವಿಶ್ವನಾಥ ಬಯಸಿದಹಂಗ ಅವರಣ್ಣನ ಮಗಳಿಗೆ ಕ್ಲೀನಚಿಟ್ ಸಿಕ್ಕಿತ್ತು. ಅಕೀ ಅಮಾಯಕಳು ಅಂತ ಪ್ರೂವ್ ಆಗಿತ್ತು. ಆದರ ಅದು ಎಷ್ಟ ದಿನ ಉಳತೇತಿ ಅದರ ವ್ಯಾಲಿಡಿಟಿ ಎಷ್ಟ ಅನ್ನೂದು ಸ್ವತಃ ಲಚ್ಚಿ ಕಾಕಾಗೂ ತಿಳಿಯಾಕ ಸಾಧ್ಯ ಇರಲಿಲ್ಲ.

ಸೋಮನ ಅವ್ವ ಗಂಗವ್ವ ದೇವರ ಮನಿಯಾಗ ತಲಿಗೆ ಕೈಹೊತ್ತು ಕುಂತಿದ್ದಳು. ಶಂಕ್ರವ್ವ ಹೊರಗಿನ ಕೆಲಸ ಎಲ್ಲ ಮುಗ್ಸಿ ಗೌಡಶ್ಯಾನಿ ರೊಟ್ಟಿಗೇರ ಇಡಲೇನು ಅಂತ ಎರಡಸಲ ಕೇಳಿದ್ರು ಗಂಗವ್ವನ ಬಾಯಿಂದ ಉತ್ತರ ಬರಲಿಲ್ಲ ಹಿಂಗಾಗಿ ಗಂಗವ್ವನ ಒಲಿಯಾಗ ಮುಂಜಾಲಿಂದನೂ ಬೆಕ್ಕು ಹಾಯಾಗಿ ಮಲಗಿತ್ತು. 

ಮಧ್ಯಹ್ನದ ಹೊತ್ತಿಗೆ ಸೋಮನ ಅಪ್ಪ ಮನಿಗೆ ಬಂದ ಆದರ ಅವನ ಹಿಂದ ಮಗ ಇರಲಾರದ್ದನ್ನ ಕಂಡು ಗಂಗವ್ವ ನಿಟ್ಟುಸರ ಇಟ್ಟು ಸೋಮಪ್ಪನ್ನ ಎಲ್ಲಿಬಿಟ್ಟಬಂದ್ರೀ ಅಂದಳು “ಅವನ ಗೆಳಿಯಾರಿದ್ರಾಳಲ್ಲೆ ಅವರ ಜೋಡಿ ಮೆಲ್ಲಕ ಬರಾಕತ್ತಿದ್ದ ಬರತಾನೇಳ” ಅಂದು ಗೌಡ ಕಾಲೂ ತೊಳಿದಂಗ ಮಂಚದಮ್ಯಾಲ ಅಡ್ಡಾಗಿ ಹೆಗಲ‌ಮ್ಯಾಲಿನ ಟವೆಲ್ ತಗದು ಚೆಂಡಿನ ಬುಡಕ ಸುಳ್ಳಿಮಾಡಿ ಇಟಗೊಂಡು ಜಂತಿಕಡೆ ನೋಡಕೊಂತ ಮಕ್ಕೊಂಡ.

ಸೋಮ ಸೀದ ಮನಿಗೆ ಹೋಗದನ.. ಗೆಳಿಯಂದರ ಜೋಡಿ ಗರಡಿಮನಿಗೆ ಹೋದ ಒಳಗಿಂದ ಚಿಲಕಾ ಹಾಕ್ಕೊಂಡ. ಗೆಳಯನ್ನ ಹೆಗಲಮ್ಯಾಲ ತಲಿಇಟ್ಟ ಬೋ…ರಂತ ಅತ್ತ ಬಿಟ್ಟ ಅವನ ಹುಚ್ಚಾಟ ನೋಡದ ಅವನ‌ ಗೆಳಿಯಾರು ನಾಕ ಹನಿ ಕಣ್ಣೀರ ಹಾಕಿ ಬಿಡಲೇ ಸೋಮ್ಯಾ ಅಕೀಏನ ದೊಡ್ಡ ಹೀರೋಇನ್ ಏನ್ಲೆ ಅಕೀ ಅಕ್ಕನಂತಕೀನ ತಂದ ನಿನಗ ಮದ್ವಿಮಾಡ್ತವಿ ಬಿಡಲೇ ಅಂದಾ ಒಬ್ಬ.

ಲೇ ಲವ್ವ ಪವ್ವ ಎಲ್ಲಾ ಸುಳ್ಳಲೇ ಅವರಿಗೆ ಸೋಗಲಾಡೆರ್ಗೆ ಮದ್ವಿ ಆಗೂಮಟ ಒಬ್ಬನ ಟೈಮ್ವಪಾಸಿಗೆ ಬೇಕಾಗಿರ್ತತಿ ನಮ್ಮಂತರ್ನ ಬಕರಾ ಮಾಡ್ಯಾರ್ಲೆ ಅಂದ ಮತ್ತೊಬ್ಬ. ಆದ್ರ ತಳವಾರ ಈರಾ ನಡುವೆ ಬಾಯಹಾಕಿ ಅಲ್ಲಲೇ ಅವರ ಮನ್ಯಾಗ ನೀ‌ಏನರ ಪಂಚಾಯತಿಯಾಗ ಮಾತಾಡಿದ್ರ ನಾವೆಲ್ಲಾರ ಇಸಾಕುಡದ ಸಾಯ್ತೆವಿ ನೋಡ ಅಂತ ಹೆದರ್ಸಿದ್ರನ ಬಿಡ್ಲೆ.. ಅಂದಾ 

ಕಣ್ಣೀರ ಒರಸಕೋತ ಶಂಕರ ಹೇಳಿದ “ದೋಸ್ತಾ ನೀ ಹು ಅಂದ್ರ ಅಕೀ ಬಯಲಕಡೆ ಬಂದಾಗ ಕಾದ ಕುಂತ ಹೊತಗೊಂಡ ಬಂದ ನಿನ್ನ ಜೋಡಿ ಮದ್ವಿ ಮಾಡ್ತವಿ ಇಲ್ಲಾ ಕಾರ್ ಮಾಡಿ ಊರಬಿಟ್ ಕಳಸ್ತವಿ ನೀ ಹೇಳ ಅಕೀ ಜೋಡಿ ಬಾಳೆ ಮಾಡ್ತಿ ಏನ” ಅಂದಾ.

ಸೋಮ ಇಷ್ಟಹೊತ್ತ ದುಃಖದುಕ್ಕಸಿ ಅಳತಿದ್ದವ ಈಗ ಒಮ್ಮೆಗೆ ಮಾತಿಗೆ ಶುರುವಿಟ್ಟ ಬ್ಯಾಡಲೇ ಅಕೀ ಕೈಬಿಟ್ಟರ  ನಾ ಸಾಯ್ತನೀ ಅನ್ನೂ ಖಬರಿಲ್ಲದ ದೆವ್ವ ನಿಂತಂಗ ನಿಂತಿದ್ಲಲ್ಲ ಅಂತಾ ಹೆಣ್ ನನಗ ಬ್ಯಾಡಲೇ. ಜೀವನಾ ಪೂರ್ತಿ ಬೇಕಾರ ಹಂಗ ಇರ್ತನಿ ಅಕಿ ಮಾತ್ರ ಬ್ಯಾಡ. ಬಸ್ಯಾ ಹೋಗ ನಾಕ ಕ್ವಾಟ್ರ ತಂಬ ಅವನೌನ ಅಕೀನ ಮರಿಯೂದ ಎಟೋತ್ಲೆ ತಂಬೋಗಲೇ ಅಂದವನ

ಕಿಸೆದಾನ ರೊಕ್ಕ ಎಣಸ್ದಂಗನ ಕೊಟ್ಟು ಕಳಸಿದ.

ನಾಕೈದ ದಿನ ಸೋಮ‌ ಮತ್ತವನ ದೋಸ್ತರು ಗರಡಿಮನ್ಯಾಗ ಮಕ್ಕೊಂಡ್ರು. ಕುಡದಾಗ, ಕೆಲಸದಾಗಿದ್ದಾಗ ಅರಾಮಿರ್ತಿದ್ದ, ನಿಶೆ ಇಳದ ಕೂಡಲೇ ಕಣ್ಣೀರ ಹಾಕ್ತಿದ್ದ. ಎದಿ ಮ್ಯಾಲ ಸಣ್ಣದಗ ದಿಲ್ ಅದರ ಒಳಗ ಎಸ್ ಎಲ್ ಅಂತ ಹಾಕಿಸ್ಕೊಂಡಿದ್ದ ಹಚ್ಚಿ ಮ್ಯಾಲ ಕೈ ಆಡಿಸಿ ಮುಷ್ಟಿಲೇ ಹಣಿ ಹಣಿ ಜಜ್ಜಕೋತಿದ್ದ ದೋಸ್ತರೆಲ್ಲಾರ ಮಕ್ಕೊಂಡಿಂದ ಎದ್ದು ಉಚ್ಚಿಹೊಯ್ಯಾಕ ಹೋಗ್ಯಾನೇನು ಅನ್ನುಹಂಗ ಹೋಗಿ ಅತ್ತು ಬರತಿದ್ದ. ಮುಂಜಾನೆಂದ್ರ ಮಕಾ ಇಷ್ಟದಪ್ಪಾ ಬಾತಿರ್ತಿತ್ತು.

ಪಂಚಾಯತಿ ಮುಗದ ವಾರ ಆಗಾಕ ಬಂದಿತ್ತು. ಲಚ್ಚಿ ಎಲಬು ತೊಗಲ ಮಾತ್ರ ಉಳದ ಗೊಂಬಿ ಆಗಿದ್ದಳು. ಇಷ್ಟೆಲ್ಲ ಆಗಿ ಏಳನೇ ದಿನ ಮುಂಜಾನೆ ಎದ್ದ ಕೂಡಲೇ ಉಬ್ಬಳಕಿ ಬಂದಂಗಾಗಿ ಎದ್ದ ಹಿತ್ತಲಕ ಹೋಗಿ ವೈಕ ವೈಕ ಮಾಡಿ ತಲಿ ಹಿಡಕೊಂಡ ಕುಂತಳು, ಹಿಂದಗೂಟ ಹೋದ ನೀಲವ್ವ ಮಗಳ ರಟ್ಟಿ ಹಿಡದು ಒಳಗ ಕರ್ಕೊಂಡಬಂದಳು.

ಮೈ ತುಸು ಬಿಸಿಯಾಗಿತ್ತು. ವಾರಾತು ಹುಡುಗಿ ಚೆಂದಗ ಉಂಡಿಲ್ಲ ಅಂದು ತಾಯಿ ಜೀವ ಮರಗತಿತ್ತು.  ಕಾಕಾನ ಹೆಂಡತಿ , ಅವರಪ್ಪ ಸಾಯ ಬದ್ಲು ಇದರ ಸಾಯಲಿಲ್ಲ ಅಂತ ಉಸಿರೊಗೊಮ್ಮೆ ಅನ್ನಕಿ. ಲಚ್ಚಿ ಹೊಟ್ಟಿಯೊಳಗ ತೀರದ ಸಂಕಟ. ಕರಳೆಲ್ಲ ಯಾರೊ ಕಿವಿಚಿ ಕಿವಿಚಿ ಕೈಬಿಟ್ಟಂಗ. ಎದೆಯೊಳಗೆಲ್ಲ ಉರಿ. ವಾಂತಿ‌ಮಾಡಿದ್ರ ಎಲ್ಲ ಹಗೂರಾಕ್ಕತಿ ಅನಿಸೋದು ಆದ್ರ ವಾಂತಿ ಆಗವಲ್ಲದು. ಕಿಲಬು ಹೊರಗ ಬರವಲ್ದು. ಲಚ್ಚಿಗೆ ಇದೇನಾತು ಅನ್ನೂದು ತಿಳಿಲಾರದ ಒಗಟಾತು.

ಸಂಜಿ ಆದ್ರೂ ಉಬ್ಬಳಕಿ ನಿಲ್ಲಲಿಲ್ಲ ಮಗಳು ನಿತ್ರಾಣ ಆಗಿದ್ದನ್ನ ಕಂಡು ತಾಯಿ ನೀಲವ್ವ ಲಚ್ಚಿನ ಸಂಜಿಕ ಊರಾಗ ಇದ್ದ ಸಿಸ್ಟರ ಮನಿಗೆ ಕರ್ಕೊಂಡ ಹೋದಳು. ಸಿಸ್ಟರು ಚೆಕ್ ಮಾಡಿ ಡೇಟಾಗಿ ಎಷ್ಟ ದಿನ ಆತು ಅಂತ ಕೇಳಿದ್ರು. ಅದಕ ಲಚ್ಚಿ ಏನೂ ಉತ್ತರ ಕೊಡಲಿಲ್ಲ. ನೀಲವ್ವನ‌ ಎದಿ‌ಜೋರಗ ಹೊಡಕೊಳಾಕ ಸುರುವಾತು.

ಸಿಸ್ಟರು ಮತ್ತ ಕೇಳಿದ್ರು 

ಲಚ್ಚಿ ಹಕಳಿ ಕಿತ್ತ ಸುಣ್ಣದ ಗ್ವಾಡಿ ನೋಡಕೋತ ಸುಮ್ಮನ ಕುಂತಿದ್ಲು.

ದೀಪಾವಳಿ ಅಮಾಸಿಗೆ ಹೊರಗಾಗಿದ್ದಳು  ಛಟ್ಟಿ ಅಮಾಸಿಗೆ ಒಂದ ತಿಂಗಳಾತು ಹ್ವಾದ ವಾರನ ಹೊಸ್ತಲ ಹುಣವಿ ಹೋತು ಅಂದರ ದೀಡ ತಿಂಗಳ‌ಮ್ಯಾಲಾತ್ರಿ ಸಿಸ್ಟರ ಅಂದು ತನ್ನ ಬೆರಳಿಲೇ ಎಣಿಸಿದ ಹುಣವಿ ಅಮವಾಸಿಯೊಳಗ ನೀಲವ್ವ ಉಸಿರಸಿಗಿಸಿಕೊಂಡು ಕುಂತುಬಿಟ್ಟಳು.

ನೀಲವ್ವಗ ಆಕಾಶನ ತಲಿಮ್ಯಾಲ ಬಿದ್ದಂಗಾತು. ತಾವ ಏನ ಮಾಡಾಕ ಹೋದ್ವಿ ಇದೇನಾಗಿ ಕುಂತತ ದೇವ್ರೆ ಅಂತ ಹಣಿಹಣಿ ಜಜ್ಜಕೊಂಡಳು. ಒಂದಕ್ಷಣ ಮಗಳನ್ನ ಕರ್ಕೊಂಡ ಯಾದರ ಹಾಳಬಾವಿಗೇರ ಬೀಳಲೆನಪಾ ಶಿವನೆ ಅನಸ್ತು. ಹಾಳಬಾವಿನು ತಮಗ ದುಬಾರಿನ ಆದ ಕಾಲ ಇದು ಅನಕೊಂಡಳು. ಗಂಡ ಇದ್ದಿದ್ದರ ಈ ಸುದ್ದಿ ತಿಳದ ಎದಿ ಒಡಕೊಂಡ ಸಾಯ್ತಿದ್ದ ಇಂತಾದ ನೋಡಬಾರ್ದಂತನ ಹೊಂಟುಹುಂಟ್ಲೆ ಹೋದಾ ಅಂದು ಈ ಸುದ್ದಿ ಯಾರಿಗೆ ತಿಳದ್ರ ಮುಂದ ಏನ ಅನಾಹುತ ಆಗದೈತೋ ಅಂತ ಮನಸ್ಸು ಮುದುಡಿಹೋತು ಆದ್ರ ಮುಚ್ಚಿಟ್ರು ಮುಚಗೊಳ್ಳಾರದ ಕೆಂಡ ಪಿಂಡಾಗಿ ಹೊಟ್ಟಿ ಸೇರೆತಿ ಇದ ನಮ್ಮನ್ನ ಬಲಿ ತೊಗಳದ ಬಿಡಂಗಿಲ್ಲೊ ಶಿವನೇ ಅಂತ ಬೋರಿಟ್ಟಳು. ತಾಯಿ ಮಗಳು ಕುಂತ ಸುಟ್ಟ ಇಟ್ಟಗಿ ಕ್ವಾಣ್ಯಾಗ ಬಿಸಿ ಉಸಿರಗಳೆರಡು ಆತ್ಮಾಹುತಿಗೆ ನಿಂತ ಅಪರಾಧಿಗಳ ಹಂಗ ಒಂದಿಕ್ಕಿಂತ ಒಂದು ತಾಮುಂದು ನಾ ಮುಂದು ಅಂತ ಬೇಯತಿದ್ವು. 

ಮಗಳು ಕಾಲಜಾರಿದ್ದಳು. ಅಪ್ಪ ಇಲ್ಲದ ಪರದೇಶಿ ಮಗಳು ಮಾಡಬಾರದ್ದನ್ನ ಮಾಡಿದ್ದಳು. ಆಡಕೊಳ್ಳರ ಬಾಯಿಗೆ ಆಹಾರ ಆಗಿದ್ದಳು. 

ಮೈದುನನ ಮುಂದ ಏನ ಹೇಳಬೇಕನ್ನೂದು ತಿಳಿದಂಗಾದ ನೀಲವ್ವ, ತಾನ ಗದಿಗೆಪ್ಪಗೌಡನ ಮನಿಗೆ ಹೊಂಟ ನಿಂತಳು. ದೇವರ ಜಗಲಿ ಮುಂದ ನಿಂತು ಕೈ ಮುಗದ ಶಿವನಾ ಬದಕಸು ಇಲ್ಲಾ ಮುಳಗಸು ಅಂದು ವಿಭೂತಿ ಪಟ್ಟಾ ಹಣಿತುಂಬ ಎಳಕೊಂಡ ಸೀರಿಸೆರಗ ತಲಿಮ್ಯಾಲ ಹಾಕ್ಕೊಂಡ ಗೌಡನ ಮನಿ ದಾರಿ ಹಿಡದಳು.

ಶಂಕ್ರವ್ವ ಕೆಲಸ ಮುಗಿಸಿ ತನ್ನ ಮನಿಗಿ ಒಯ್ಯುವ ಜ್ವಾಣ್ಣಿ ಕಟಗೊಂಡ ಹೊಂಟ ನಿಂತಿದ್ದಳು. ನೀಲವ್ವ ಒಳಗ ಬರದನ್ನ ಯಾವಾಗ ನೋಡಿದಳೊ ಒಳಗ ಇದ್ದ ಗಂಗವ್ವಗೌಡಶ್ಯಾನಿಗೆ ಸುದ್ದಿ ಮುಟ್ಟಸಿದಳು. ಗಂಗವ್ವ ಚಟಕ್ಕನ ಎದ್ದ ಬಂದು ನೀಲವ್ವನ್ನ ಬರಮಾಡ್ಕೊಂಡು ಕುಂದರ್ವಾ ನೀಲವ್ವ ಅಂದಳು. 

ಶಂಕ್ರೆವ್ವ ಮನಿಗೆ ಹೋಗಾಕ‌ ನಿಂತಂತಕಿ ಹೋಗಲಾರದ ಕುಂತಬಿಟ್ಟಳು. ಇಲ್ಲೆನ ವಿಷಯ ಐತಿ ಇಷ್ಟೊತ್ನ್ಯಾಗ ನೀಲವ್ವ ಗೌಡನ ಮನಿ ಹೊಚ್ಚಲಾ ತುಳದಾಳಂದ್ರ ಏನ ಎಡವಟ್ಟಾಗೇತಿ ಏನಂತ ತಿಳಕೊಂಡ್ರಾತು ಅಂತ ಎಷ್ಟೊತ್ತು ಕುಂತ್ರು ನೀಲವ್ವ ಏನೂ ಬಾಯಿಬಿಡಲಿಲ್ಲ. ಬದಲಾಗಿ ಗಂಡ ಸತ್ರೂ ಮೈದನ ಮತ್ತವನ ಹೆಂಡತಿ ತಮ್ಮನ್ನ ಸಲುಹುತಿರದು, ಮಗನ ಸಾಲಿ, ಮಗಳ ಅನಾರೋಗ್ಯ ಇಂತಾ ವಿಷಯದಾಗ ಗಿರಕಿ ಹೊಡೆದನ್ನ ನೋಡಿ ಬ್ಯಾಸರಬಂದು ಶಂಕ್ರವ್ವೆ ತನ್ನ ಗಂಟ ತಲಿಮ್ಯಾಲ ಇಟಗೊಂಡ ಹೊಂಟ ನಿಂತಳು. ನೀಲವ್ವ ಮಗಳ ವಿಷಯದಾಗ ಎಷ್ಟುನೊಂದಿದ್ದಳೊ ಅದರ ನೂರು ಪಟ್ಟು ಗೌಡಶ್ಯಾನಿ ಮಗನ ಪರಿಸ್ಥಿತಿ ದಿನದಿನಕ್ಕ ಹದಗೆಟ್ಟಿರದನ್ನ ಕಂಡು ಒಳೊಳಗ ನಲಗಿ ಹೋಗಿದ್ದಳು. 

ಇಬ್ರು ಒಂದೇ ದೋಣಿಯ ಪಯಣಿಗರು ಸಮಾನ ದುಃಖಿಗಳು ಆಗಿದ್ರಿಂದ ಮಾತು ಸಾಂಗವಾಗಿ ನಡದಿದ್ವು. ಇದೆಲ್ಲ ನಡಿತಿರುವಾಗನ ಗದಿಗೆಪ್ಪಗೌಡನ ಚಪ್ಪಲ ಸಪ್ಪಳ ಆದ್ವು. ಇಬ್ಬರು ತಲಿಮ್ಯಾಲ ಸೆರಗ ಹೊತಗೊಂಡು ಪಡಸಾಲಿ ಕಂಬದ ಮರಿಗೆ ಸರದ್ರು. ಗಂಗವ್ವ ಧೈರ್ಯಾ ಮಾಡಕೊಂಡು “ಏನ್ರೀ, ಕುಂಬಾರ ನೀಲವ್ವಕ್ಕ ಬಂದಾಳ ನಿಮ್ಮ ಜೋಡಿ ಮಾತಾಡಬಕಂತ” ಅಂದಳು. 

 ಗೌಡಗ ಆಶ್ಚರ್ಯ ಆತು ಆದ್ರೂ ತೋರಗೊಡದ ಏನಬೇ ಎಕ್ಕ ಏನಾತು? ಅಂದ ಗೌಡ. 

ನೀಲವ್ವ ಧಾರಾಕಾರ ಕಣ್ಣೀರ ಸುರಸಾಕತ್ಲು. ಗಂಗವ್ವ ಎಷ್ಟ ಸಮಾಧಾನ ಮಾಡಿದ್ರೂನು ಅಕೀ ದುಃಖನ ಮುಗಿಲಿಲ್ಲ ಗೌಡ ಮತ್ತ ಹೇಳಿದ ನೀಲವ್ವ ನೀ ವಿಷಯ ಏನನ್ನೂದ ಮದಲ ಹೇಳ‌ ಹಿಂಗ ಅತ್ತರ ನಾ ಏನಂತ ತಿಳಕೊಳ್ಳಿ ನಿನ್ನ ಮಗಳ ಅರಾಮದಾಳಿಲ್ಲೊ ಜೀವಕ್ಕೇನರ ಮಾಡ್ಕೊಂಡಗಿಂಡ್ಲೊ ಏನೊ ಅಂದ. ನೀಲವ್ವ ಸೆರಗಿಲೆ ಕಣ್ಣ ಒರಸಿಕೊಂಡು ಮಗಳು ಬಸರಾದ ಸುದ್ದಿ ಹೇಳಿದಳು. ಈಗ ದುಃಖಿಸೊ ಸರದಿ ಗೌಡಂದು-ಗೌಡಶ್ಯಾನಿದು ಆಗಿತ್ತು. 

ನಾಲ್ಕಾರು ಕ್ಷಣ ಇಬ್ಬರು ಸ್ತಬ್ಧ ಆಗಿಬಿಟ್ರು. ಆಳಮಗನ್ನ ಕರದು ಗೌಡ ತಾಬುಡತುಬಡ ಸೋಮನ್ನ ಕರಗಕೊಂಡಬಾ ಹೋಗು ಅಂದ. ಆಳು ಸೋಮನ್ನ ಹುಡಿಕ್ಕೊಂಡ ಹೋಗಿ ಕರಕೊಂಡ ಬಂದ.   

ಸೋಮ ಅಪ್ಪನ ಮುಂದ ಕೈಕಟ್ಟಿ ನಿಂತ. ನೀಲವ್ವ ಬಂದಿದ್ದು ಯಾಕಂತ ಸೋಮಗ ಇನ್ನೂ ಅರ್ಥ ಆಗಿರಲಿಲ್ಲ. ಗೌಡ ಸೋಮ್ಯಾ ಮುಂದಿನವಾರನ ನಿನಗು ನೀಲವ್ವನ‌ ಮಗಳು ಲಕ್ಷ್ಮೀಗು ಮದ್ವಿ ಅಂದಾ. 

 ಸೋಮ ಒಂದು ಕ್ಷಣನೂ ಯೋಚಸದಂಗ ನಾ ಯಾಕಪಾ ಅಕೀನ್ನ ಮದವಿ ಆಗಲಿ. ಆಕಿ ಯಾರೊ ನಾ ಯಾರೊ ಅಂದಬಿಟ್ಟ.

ಅನ್ನೂದ ಅಷ್ಟ ಅಲ್ಲ ಹಠಕ್ಕ ಬಿದ್ದಬಿಟ್ಟ ನಾ ಹಂಗನರ ಇರ್ತನೀ ನಾ ಮಾತ್ರ ಲಚ್ಚಿನ ಮದವಿ ಆಗೂದಿಲ್ಲ ಅಕೀಗ ನನ್ನ ಮ್ಯಾಲ ಪ್ರೇಮ ಇದ್ದಿದ್ರ ಅವತ್ ಪಂಚಾಯತಿಯಾಗ ಪ್ರೂವ್ ಮಾಡಬೇಕಿತ್ತು ಅಂತನೂ ಅಂದಬಿಟ್ಟ.

ಕೇಸು ಮತ್ತ ಪಂಚಾಯತಿ‌ ಮೆಟ್ಟಲಕ ಬಂದು ನಿಂತತು. ಈ ಸಲ ಪಂಚಾಯತಿ ಗೌಡನ ಮನೆಯೊಳಗ ಗುಟ್ಟಿನ್ಯಾಗ ನಡಿಯುವ ಪ್ರಸಂಗ ಆತು. ಸೋಮ ವಿಷ ಕುಡದ ನೀಲಕಂಠನ ಹಂಗ ಘರ್ಜಿಸಿದ. ಯಾಕ್ರಿ ಗೌಡ್ರ ನೀವ ಬ್ಯಾಡಂದಾಗ ಬ್ಯಾಡಂತ ಸುಮ್ಮನ ಹೋಗಬಕ‌ ನಾವು. ನೀವು ಮಾಡಕೊರಪಾ ಅಕೀನ್ನ ಲಗ್ಣ ಅಂದಾಗ ಮಾಡಕೋಬೇಕೆನ್ರಿ ಅಂತ ಹೊಳ್ಳಿಬಿದ್ದ. ಎಂಟ ಹತ್ತ ದಿನದಾಗ ಅವನ ಚಟಗಳು ಮಿತಿಮೀರಿದ್ದವು‌. ಲಕ್ಷ್ಮೀಯ ಮಾತು, ರಾಗ,ಸ್ಪರ್ಷ, ಅನೂನಯಕ್ಕಿಂತಲೂ ಚೀಟಿನ ಕಂಪು, ಸಿಗರೇಟಿನ ದಟ್ಟ ಹೊಗಿ,  ಸಾರಾಯಿಯ ಅಮಲಿನೊಳಗ ಹೆಚ್ಚಿನ ಸುಖವೂ ತನ್ನತಾ ಸುಟ್ಟುಕೊಂಡಾಗ ಆಗುವ ವಿರಹದ ಉತ್ತುಂಗ ಸೇರಿ ತಾನು ಲಚ್ಚಿಯಿಂದ ದೂರ ಉಳಿಯೂದ ಜೀವನದ ಪರಮ ಧ್ಯೇಯ ಆಗಿಬಿಟ್ಟಿತ್ತು. 

ಕಡಿಗೆ ಪಂಚಾಯತಿ ಆಕಿ ಹೊಟ್ಯಾಗ ನಿನ್ನ ಕೂಸೈತೆಲೇ ಹುಚ್ಚಾ ಸುಮ್ಮನ ಕಟಗೊಂಡ ನಾಕಮಂದಿ ಹೌದ ಅನ್ನೂಹಂಗ ಬಾಳೆ ಮಾಡು ಅಂದಾಗ. ಸೋಮ ಹೌಹಾರಿ ಹಾವತುಳಿದವನ ಹಂಗ ನಾಕ ಹೆಜ್ಜಿ ಹಿಂದಿಟ್ಟ ಅಕೀ ಕೂಸಿಗೆ ತಾನು ಅಪ್ಪ ಆಗಾಕ ಸಾಧ್ಯನ ಇಲ್ಲ ಯಾವ ಬಣವಿಸಂಧ್ಯಾಗ ಯಾರ ಮಗ್ಗಲದಾಗ ಮಲಗೆದ್ದಾಳೊ ಸರಿಯಾಗಿ ಕೇಳ್ರಿ ಅಕೀನ್ನ ಅಂದುಬಿಟ್ಟ..

ಇಡೀ ಪಂಚಾಯತಿಯಲ್ಲಿ ಒಂದುನಿಮಿಷದ ಸ್ಮಶಾನ ಮೌನ.

ಲಚ್ಚಿ ಅವ್ವನಿಗಂತು ಇವನೆಂತ ನೀಚಜಂತು ಅನಿಸಿಬಿಟ್ಟಿತು. ಇಂತಾ ಇಸಗಾತಕನ ಜೋಡಿ ಮಗಳು ಬಾಳುದಕಿಂತ ಅವಳು ಹಂಗ ಇದ್ದಬಿಡಲೀ ಅಂತ ಮನಸು ರೋಧಸ್ತು ಹಿಂದಗೂಟಲೇ ಮಗಳ ಮೊಕ ನೆನಪಾಗಿ ದುಃಖ ಉಮ್ಮಳಸಿ ಬಂತು ಆದರ ಸೋಮನ ಮೊಕದಾಗ ಒಂದೀಟು ಕರುಣ ಇಲ್ಲದ್ದು ಕಂಡು ಸಿಟ್ಟು ನೆತ್ತಿಗೇರ್ತು. ಈ ಹಲ್ಕಟ್ಟನ ವಂಸಾನಿರ್ವಂಸಾಗಾ ಅಂತ ತಾಯಿ ಮನದೊಳಗ ಶಪಿಸಿ  ಅಲ್ಲಿಂದ ಎದ್ದಬಿಟ್ಲು.

ಇತ್ತಾಗ ಉರಿಯೋ ಒಲೆಗೆ ಕುಳ್ಳು ಸರಿಸ್ಗೊಂತ ಕೂಂತಿದ್ದ ಲಚ್ಚಿಗೆ ಹೊಟ್ಟೆ ಹಿಂಡಿದಂಗಾತು. ಕರಳ ಕತ್ತರಸಿ ಒಗೆದಂಗ ನೋವು, ಅರ್ಧಾಕ್ಷಣದಾಗ ತೊಡೆ ಸಂಧಿಯೆಲ್ಲ ತೇವ ತೇವ. ಮರುಕ್ಷಣನ ಯಮಯಾತನೆಯ ಕೊನೆ, ಯಾರೊ ಕುತಗಿಗೆ ಹಾಕಿಟ್ಟ ನೇಣನ್ನ ತಗದು ಉಸಿರಾಡಕೊ ಹೋಗಲಚ್ಚಿ ಅಂತ ಅನುವು ಮಾಡಿಕೊಟ್ಟಂತ ನಿರಾಳ. ಹೊಟ್ಟೆ ಹಿಡಕೊಂಡೆ ತಲಿಗೆ ನೀರು ಹಾಕ್ಕೊಳ್ಳಾಕ ಎದ್ದು ಬಚ್ಚಲ ಕಡೆ ಹೊಂಟನಿಂತಳು ಲಚ್ಚಿ.

‍ಲೇಖಕರು Admin

24 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading